ಖಂಡನೆಗೆ: ಹರಿದು ಬಂದ ಜನಸಾಗರ !

Kannada News

12-09-2017

ಬೆಂಗಳೂರು: ಹಿರಿಯ ಪತ್ರಕರ್ತೆ ವಿಚಾರವಾದಿ ಗೌರಿ ಲಂಕೇಶ್ ಹತ್ಯೆಯನ್ನು ಖಂಡಿಸಿ ಸಾಹಿತಿಗಳು,ಎಡಪಂಥೀಯ ಬರಹಗಾರರು,ಚಿಂತಕರು, ಕಲಾವಿದರು ಸೇರಿಹಲವು ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಹೋರಾಟಗಾರರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಹಂತಕರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದರು.

ಹಿರಿಯ ಪತ್ರಕರ್ತೆ ಗೌರಿಲಂಕೇಶ್ ಹತ್ಯೆ ಖಂಡಿಸಿ ಸಾಹಿತಿಗಳು, ಕಲಾವಿದರು, ವಿವಿಧ ಪ್ರಗತಿಪರ ಸಂಘಟನೆಗಳ ಹೋರಾಟಗಾರರು, ಸ್ವಾಮೀಜಿಗಳು ಸೇರಿದಂತೆ ಸಾವಿರಾರು ಮಂದಿ ಪ್ರತಿಭಟನೆಯಲ್ಲಿ ಸೇರಿ ಬೀದಿಗಿಳಿಯುವ ಮೂಲಕ ಸಾಂಸ್ಕೃತಿಕ ಪ್ರತಿರೋಧ ವ್ಯಕ್ತಪಡಿಸಿ ಗೌರಿ ಹತ್ಯೆಯನ್ನು ಕಟು ಶಬ್ದಗಳಿಂದ ಖಂಡಿಸಿದರು.

ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಸಾವಿರಾರು ಮಂದಿ ನಗರದ ರೈಲ್ವೆ ನಿಲ್ದಾಣದಲ್ಲಿ ಸೇರಿ ಅಲ್ಲಿಂದ ಸೆಂಟ್ರಲ್ ಕಾಲೇಜು ಮೈದಾನದವರೆಗೂ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ನಾನು ಗೌರಿ, ನಾನು ಗೌರಿ ಎನ್ನುವ ಫಲಕಗಳು ಬ್ಯಾನರ್‍ ಗಳು ಹಿಡಿದು ಹಣೆಪಟ್ಟಿ ಕಟ್ಟಿಕೊಂಡು ಹತ್ಯೆ ಖಂಡಿಸುವ ಘೋಷಣೆಗಳನ್ನು ಕೂಗುತ್ತಾ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ನಡೆದ ಪ್ರತಿಭಟನಾ  ರಾಷ್ಟ್ರೀಯ ಖಂಡನಾ ಸಮಾವೇಶದಲ್ಲಿ ಪಾಲ್ಗೊಂಡರು.

ಸಮಾವೇಶದಲ್ಲಿ ನಾನು ಗೌರಿ, ನಾವೆಲ್ಲಾ ಗೌರಿ ಎನ್ನುವ ಮಹಿಳೆಯನ್ನು ಹತ್ಯೆ ಮಾಡಬಹುದು. ವಿಚಾರವನ್ನಲ್ಲ ಎನ್ನುವ ಘೋಷಣೆಗಳು ಮುಗಿಲು ಮುಟ್ಟಿದ್ದವು. ವಿವಿಧ ಹೋರಾಟಗಾರರ ಜೊತೆಗೆ ಕಾಲೇಜು ವಿದ್ಯಾರ್ಥಿಗಳು ಸೇರಿದ್ದರಿಂದ ಜನಸಾಗರದ ಪ್ರವಾಹವೇ ಹರಿದು ಬಂದಿತ್ತು.

ಖಂಡನಾ ಸಮಾವೇಶದಲ್ಲಿ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು, ಸ್ವಾಮಿ ಅಗ್ನಿವೇಶ್, ಜಯಮೃಂತ್ಯುಜಯ ಸ್ವಾಮೀಜಿ, ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಹೋರಾಟಗಾರ್ತಿ ತೀಸ್ಥಸೆಟಲ್ವಾರ್ಡ್, ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಹೆಚ್ಚುವರಿ, ದೇವನೂರು ಮಹದೇವ, ಮೇಧಾಪಾಟ್ಕರ್, ಪ್ರೋ. ಚಂಪಾ, ಇರ್ಫಾನ್ ಆಲಿ ಎಂಜಿನಿಯರ್, ದಿಗ್ನೇಶ್ ಮೆವಾನಿ, ಹಿರಿಯ ಪತ್ರಕರ್ತರಾದ ಟಿ.ಸಾಯಿನಾಥ್, ಸಾಗರಿಕಘೋಷ್, ಸಾಹಿತಿಗಳಾದ ಬರಗೂರು ರಾಮಚಂದ್ರಪ್ಪ, ಕುಂ.ವೀರಭದ್ರಪ್ಪ, ಚಂದ್ರಶೇಖರ್ ಪಾಟೀಲ್, ಗಿರೀಶ್ ಕಾರ್ನಾಡ್ ಸೇರಿದಂತೆ ಹಲವರು ಗೌರಿ ಹತ್ಯೆಯನ್ನು ಖಂಡಿಸಿದರು.

ಗೌರಿ ಹತ್ಯೆ ವ್ಯಕ್ತಿಯ ಹತ್ಯೆಯಲ್ಲ, ಅದು ವಿಚಾರದ ಹತ್ಯೆ. ಇಂತಹ ಹೇಯ ಕೃತ್ಯಗಳಿಂದ ವಿಚಾರಗಳನ್ನು ಪ್ರತಿಪಾದಿಸುವವರನ್ನು ತಡೆಯಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಜನಪರವಾದ ವಿಚಾರಗಳನ್ನು ಎದುರಿಸಲಾಗದ ಮಂದಿ ಬಂದೂಕಿನ ನಳಿಗೆಗಳಿಂದ ಹೆದರಿಸಬಹುದು ಎಂದು ನಂಬಿದ್ದರೆ ಅದು ಹೇಡಿತನ ಮತ್ತು ಸೋಲಿನ ಪರಮಾವಧಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗೌರಿ ಹತ್ಯೆ ವೈಚಾರಿಕತೆಯ ಮೇಲೆ ನಡೆದ ಹತ್ಯೆ. ಇದು ಸಾಹಿತಿ ಮತ್ತು ಚಳವಳಿಗಾರರನ್ನು ಎತ್ತಿ ಬೆಳೆಸಿದೆ. ಇಂತಹ ಹತ್ಯೆಗಳಿಂದ ಹೋರಾಟಗಾರರನ್ನು, ವಿಚಾರವಾದಿಗಳನ್ನು ಬೆದರಿಸಿ ಸುಮ್ಮನಿರಿಸಲು ಸಾಧ್ಯವಿಲ್ಲ. ಒಬ್ಬ ಗೌರಿ ಹತ್ಯೆಯಾದರೆ, ಗೌರಿಯಂತಹ ಕೋಟ್ಯಂತರ ಗೌರಿಯರು ಹುಟ್ಟಿಕೊಳ್ಳುತ್ತಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಹಂತಕರ ಬಂಧನಕ್ಕೆ ಆಗ್ರಹ: ಸಾಹಿತಿ ಎಂ.ಎಂ. ಕಲಬುರ್ಗಿ ವಿಚಾರವಾದಿಗಳಾದ ಗೌರಿಲಂಕೇಶ್, ನರೇಂದ್ರ ದಾಬೋಲ್ಕರ್, ಗೋವಿಂದ ಪನ್ಸಾರೆ ಅವರನ್ನು ಹತ್ಯೆ ಮಾಡಿದ ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಸಮಾವೇಶದಲ್ಲಿ ನೆರೆದಿದ್ದ ಅಸಂಖ್ಯಾತ ಮಂದಿ ಒಕ್ಕೊರಲಿನಿಂದ ಆಗ್ರಹಿಸಿದರು.

ರೈಲು ನಿಲ್ದಾಣದ ಬಳಿ ಜಾಥಾಕ್ಕೆ ಚಾಲನೆ ನೀಡಿದ ಮುರುಘಾಮಠದ ಮುರುಘರಾಜೇಂದ್ರ ಶರಣರು, ಒಬ್ಬ ಗೌರಿಯನ್ನು ಹತ್ಯೆ ಮಾಡುವುದರಿಂದ ಪ್ರತಿಪಾದಿಸಿಕೊಂಡು ಬರುತ್ತಿರುವ ವಿಚಾರಗಳನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಒಬ್ಬ ಗೌರಿ ಹತ್ಯೆಯಿಂದ ಸಾವಿರಾರು ಗೌರಿಗಳು ಹುಟ್ಟಿಕೊಳ್ಳುತ್ತಾರೆ. ಗೌರಿ ಹತ್ಯೆ ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಹೇಳಿದರು.

ಪ್ರತಿರೋಧದ ಗೋಪುರ: ಸೆಂಟ್ರಲ್ ಕಾಲೇಜು ಆವರಣದಲ್ಲಿ ಬೃಹತ್ ಪ್ರತಿರೋಧದ ಗೋಪುರ ನಿರ್ಮಾಣ ಮಾಡುವ ಮೂಲಕ ಸಾಹಿತಿಗಳು, ಕಲಾವಿದರು, ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು. ಸಾವಿರಾರು ಸಂಖ್ಯೆಯಲ್ಲಿ ಜನ ರಸ್ತೆ ಗಿಳಿಯುವ ಮೂಲಕ ಗೌರಿ ಹತ್ಯೆ ಮಾಡಿದ ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಒತ್ತಾಯಿಸಿದರು.

ಲಿಂಗಾಯತ ಧರ್ಮದ ಕೂಗು : ಪತ್ರಕರ್ತೆ ಹಾಗೂ ವಿಚಾರವಾದಿ ಗೌರಿಲಂಕೇಶ್ ಹತ್ಯೆಯನ್ನು ಖಂಡಿಸಿ ನಗರದಲ್ಲಿಂದು ನಡೆದ ಗೌರಿ ಹತ್ಯೆ ಪ್ರತಿರೋಧದ ನಡುವೆಯೂ ಸಮಾವೇಶದಲ್ಲಿ ಲಿಂಗಾಯತ ಧರ್ಮದ ಕೂಗು ಕೇಳಿ ಬಂತು. ರ್ಯಾಲಿಯಲ್ಲಿ ಭಾಗವಹಿಸಿದ್ದ ಕೂಡಲಸಂಗಮದ ಜಯಮೃತ್ಯುಂಜಯ ಸ್ವಾಮೀಜಿ, ಬಸವಣ್ಣ ಪ್ರತಿಪಾದಿಸುತ್ತಿದ್ದ ವಿಚಾರಗಳನ್ನು ಗೌರಿ ಪ್ರತಿಪಾದಿಸುತ್ತಿದ್ದರು. ಎರಡು ವಿಚಾರಗಳು ಒಂದೇ ಆಗಿದೆ. ಹೀಗಾಗಿ ಲಿಂಗಾಯತ ಧರ್ಮಕ್ಕೆ ಸಂವಿಧಾನದ ಮಾನ್ಯತೆ ಬೇಕು ಎನ್ನುವ ಕೂಗು ಆಗ್ರಹಿಸಿದರು.

ವಿಶ್ವಸಂಸ್ಥೆಗೆ ದೂರು: ಹಂತಕರಿಂದ ಹತ್ಯೆಯಾದ ಗೋವಿಂದ್ ಪನ್ಸಾರೆ, ನರೇಂದ್ರ ದಾಬೂಲ್ಕರ್, ಎಂ.ಎಂ. ಕಲಬುರ್ಗಿ, ಗೌರಿ ಲಂಕೇಶ್ ಕುಟುಂಬದ ಸದಸ್ಯರು ಸಮಾವೇಶದಲ್ಲಿ ಭಾಗವಹಿಸಿ ಹಂತಕರ ಪತ್ತೆ ವಿಳಂಬ ಹಾಗೂ ವಿಚಾರವಾದಿಗಳ ಕೊಲೆಗಳ ಬಗ್ಗೆ ವಿಶ್ವಸಂಸ್ಥೆಗೆ ದೂರು ನೀಡಲು ನಿರ್ಧರಿಸಿರುವುದಾಗಿ ತಿಳಿಸಿದರು. 

ಬಿಗಿ ಭದ್ರತೆ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ನಗರದಲ್ಲಿ ಇಂದು ನಡೆದ ಪ್ರತಿಭಟನಾ ಸಮಾವೇಶಕ್ಕೆ ಕೇಂದ್ರವಲಯ ಡಿಸಿಪಿ ಚಂದ್ರಗುಪ್ತ ಉತ್ತರವಲಯ ಡಿಸಿಪಿ ಚೇತನ್‍ ಸಿಂಗ್ ಹಾಗೂ ದಕ್ಷಿಣ ವಲಯ ಡಿಸಿಪಿ ಶರಣಪ್ಪ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

ಸಮಾವೇಶದ ಭದ್ರತೆಗಾಗಿ 10 ಕೆ.ಎಸ್.ಆರ್.ಪಿ  ತುಕಡಿ, 8 ಎಸಿಪಿ, 12 ಕ್ಕೂ ಹೆಚ್ಚು ಇನ್ಸ್‍ ಪೆಕ್ಟರ್‍ ಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಸಮಾವೇಶ ನಡೆದ ಮೈದಾನ ಹಾಗೂ ಸುತ್ತ ಮುತ್ತಲ ಪ್ರದೇಶದಲ್ಲಿ ಸಂಚಾರ ದಟ್ಟಣೆ ಉಂಟಾಗದಂತೆ ಡಿಸಿಪಿ ಶಿವಕುಮಾರ್ ನೇತೃತ್ವದಲ್ಲಿ ಸಂಚಾರಿ ಪೊಲೀಸರ ನಿಯೋಜನೆ ಮಾಡಲಾಗಿತ್ತು ರೈಲು ನಿಲ್ದಾಣದಿಂದ ಸೆಂಟ್ರಲ್ ಕಾಲೇಜು ಮೈದಾನದವರೆಗೆ ಹೆಚ್ಚಿನ ಸಂಚಾರ ಪೊಲೀಸರನ್ನು ನಿಯೋಜಿಸಲಾಗಿತ್ತು.

 



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ