ಶ್ರೀಗಳ ಮಾತು ತಿರುಚಿದ್ದರೆ: ನನಗೆ ಪಾಪ ಹತ್ತಲಿ !

Kannada News

12-09-2017

ವಿಜಯಪುರ: ಲಿಂಗಾಯತ ಸ್ವತಂತ್ರ ಧರ್ಮ ಕುರಿತು ಸಿದ್ದಗಂಗಾ ಶ್ರೀಗಳ ಹೇಳಿಕೆ ವಿಚಾರಕ್ಕೆ ಸಂಬಂದಿಸಿದಂತೆ, ಶ್ರೀಗಳ ಹೇಳಿಕೆ ಬಗ್ಗೆ ಸ್ಪಷ್ಟಣೆ ನೀಡಿದ ಜಲ ಸಂಪನ್ಮೂಲ ಸಚಿವ ಎಂ.ಬಿ ಪಾಟೀಲ ಅವರು, ನಾನು ಸಿದ್ದಗಂಗಾ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಉದ್ಘಾಟನೆ ಕಾರ್ಯಕ್ರಮಕ್ಕೆ ತೆರಳಿದ್ದೆ. ನಂತರ ಕಿರಿಯ ಶ್ರೀಗಳು ಪ್ರಸಾದಕ್ಕಾಗಿ ಆಹ್ವಾನಿಸಿದರು. ಇದೇ ವೇಳೆ ಸಿದ್ದಗಂಗಾ ಮಠದ ಹಿರಿಯ, ಶ್ರೀ ಶಿವಕುಮಾರ ಸ್ವಾಮಿಜಿ ಪೂಜೆ ಮಾಡುತ್ತಿದ್ದರು. ನಂತರ ಅವರ ಬಳಿ ಕುಳಿತು ವಚನ ಪಿತಾಮಹ ಫ.ಗು. ಹಳಕಟ್ಟಿ ಅವರ ಬಗ್ಗೆ ಮಾಹಿತಿ ನೀಡಿದೆ. ಬಳಿಕ ಶ್ರೀಗಳ ಬಳಿ ಲಿಂಗಾಯತ ಹಾಗೂ ವೀರಶೈವ ಪ್ರತ್ಯೇಕತೆ ಹೋರಾಟದ ಬಗ್ಗೆ ಹೇಳಿದೆ, ಆಗ ಶ್ರೀಗಳು ಲಿಂಗಾಯತ ಸ್ವತಂತ್ರ ಧರ್ಮ ಆಗಬೇಕೆಂದು ಸ್ಪಷ್ಟವಾಗಿ ಹೇಳಿದರು. ಬರೀ ಲಿಂಗಾಯತ ಸ್ವತಂತ್ರ ಧರ್ಮ, ವೀರಶೈವ ಇತ್ತಿಚೆಗೆ ಸೇರಿದೆ ಎಂದು ಹಿರಿಯ ಶ್ರಿಗಳು ಹೇಳಿದರು. ಶ್ರಿಗಳು ಸ್ಪಷ್ಟವಾಗಿ ಹೇಳಿದ್ದಾರೆ, ನಾನೂ ಸ್ಪಷ್ಟವಾಗಿ ಕೇಳಿಸಿಕೊಂಡಿದ್ದೇನೆ, ಜೊತೆಗೆ ಲಿಂಗಾಯತ ಸ್ವತಂತ್ರ ಧರ್ಮ ಪ್ರತ್ಯೇಕತೆ ಹೋರಾಟ ಮುನ್ನಡೆಸುವೆ ಎಂದು ಶ್ರೀಗಳ ಆಶಿರ್ವಾದ ಪಡೆದು ಬಂದೆ ಎಂದರು.

ನಂತರ ಬೆಂಗಳೂರಿನಲ್ಲಿ ಇದೇ ವಿಚಾರವಾಗಿ ಪತ್ರಿಕಾಗೋಷ್ಟಿ ನಡೆಸಿದೆ ಎಂದು ತಿಳಿಸಿದರು. ನಂತರ ನಿನ್ನೆ ಇದೇ ವಿಷಯವಾಗಿ ಚರ್ಚೆ ನಡೆದಿದೆ. ಇಲ್ಲಿ ಲಿಂಗಾಯತ ಸ್ವತಂತ್ರ ಧರ್ಮ‌ ಹೋರಾಟದ ಹಾದಿ ತಪ್ಪಿಸಲು ಕೆಲವರು ಸಿದ್ದಗಂಗಾ ಶ್ರೀಗಳ ಹೆಸರು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಯಡಿಯೂರಪ್ಪ, ಸೋಮಣ್ಣ ಸೇರಿ ಕೆಲವರು ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು. ಸಿದ್ದಗಂಗಾ ಶ್ರೀಗಳು ಹೇಳಿದ್ದನ್ನು ನಾನು ತಿರುಚಿಲ್ಲಾ. ಸತ್ಯವನ್ನು ಹೇಳಿದ್ದೇನೆ. ನಾನು ಸುಳ್ಳು ಹೇಳಿದ್ದೇನೆ ಎಂದಾದರೆ ನಾನು ಪ್ರಮಾಣ ಮಾಡಲು ಸಿದ್ದ. ನನ್ನ ತಾಯಿ, ಪತ್ನಿ, ಮಕ್ಕಳ ಜೊತೆಗೆ ಸಿದ್ದಗಂಗಾ ಮಠಕ್ಕೆ ತೆರಳಿ ಪ್ರಮಾಣ ಮಾಡುತ್ತೇನೆ, ಶ್ರೀಗಳ ಹೇಳಿಕೆ ತಿರುಚಿದ್ದರೆ ಅದರ ಎಲ್ಲ ಪಾಪ ನನಗೆ, ನನ್ನ ಕುಟುಂಬಕ್ಕೆ ಹತ್ತಲಿ. ನನ್ನ ಕುಟುಂಬ ಸರ್ವನಾಶವಾಗಲಿ ಎಂದು ಭಾವಾವೇಶದಿಂದ ನುಡಿದರು.  ಅಖಿಲ ಭಾರತ ವೀರಶೈವ ಮಹಾಸಭೆ ಮೇಲೆ ಶಾಮನೂರು ಶಿವಶಂಕರಪ್ಪ, ಈಶ್ವರ ಖಂಡ್ರೆ ಸೇರಿ ಇನ್ನಿತರರಿಗಿಂತ ನನಗೆ ಹೆಚ್ಚು ಅಧಿಕಾರವಿದೆ. ನನ್ನ ಅಜ್ಜ  ಶಿರಸಂಗಿ ಲಿಂಗರಾಜರ ಹಣದಲ್ಲಿಯೇ ವೀರಶೈವ ಮಹಾಸಭಾ ಸ್ಥಾಪನೆ ಮಾಡಲಾಗಿದೆ ಎಂದು ಇದೇ ವೇಳೆ ತಿಳಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ