ಸುರಂಗ ಕೊರೆದು ಕಳ್ಳತನ: ಗ್ಯಾಂಗ್ ಸೆರೆ !

Kannada News

11-09-2017

ಬೆಂಗಳೂರು: ಕೆ.ಆರ್.ಪುರಂ ನಲ್ಲಿ ಚಿನ್ನಾಭರಣ ಅಂಗಡಿಯೊಂದಕ್ಕೆ ಒಳಚರಂಡಿ ಮೂಲಕ ಸುರಂಗ ಕೊರೆದು ಕೆಳಗಿನಿಂದ ನುಗ್ಗಿ, 20 ಕೆಜಿ ಬೆಳ್ಳಿ, 500 ಗ್ರಾಂ ಚಿನ್ನ ಲೂಟಿ ಮಾಡಿದ್ದ ನಾಲ್ವರ ಗ್ಯಾಂಗನ್ನು ನೆಲಮಂಗಲ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೆ.ಆರ್.ಪುರಂನ ಜಗನ್ನಾಥ ಲೇಔಟ್‍ನ ಸುಶಾಂತ್ (23), ಏಕ್ತಾ ನಗರದ ಜಗದೀಶ್ ಕುಮಾರ್ ಅಲಿಯಾಸ್ ಜಗದೀಶ (23), ಜಿಗಣಿಯ ಕೋಳಿಫಾರಂ ಲೇಔಟ್‍ನ ಸಿದ್ದರಾಜು (26), ಹುಲ್ಲಹಳ್ಳಿಯ ಸುನಿಲ್ ಕುಮಾರ್ (23) ಅವರಿದ್ದ ದುಷ್ಕರ್ಮಿಗಳ ಗ್ಯಾಂಗ್‍ ಅನ್ನು ಬಂಧಿಸಿ, ಜೈಲಿಗೆ ಕಳುಹಿಸಲಾಗಿದೆ ಎಂದು ಗ್ರಾಮಾಂತರ ಎಸ್.ಪಿ ಅಮಿತ್ ಸಿಂಗ್ ತಿಳಿಸಿದ್ದಾರೆ. ಬಂಧಿತರಿಂದ ಚಿನ್ನಾಭರಣ ಅಂಗಡಿಯಲ್ಲಿ ಲೂಟಿ ಮಾಡಿದ್ದ 29 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ, ಅಲ್ಲದೇ ನಗರ ಹಾಗೂ ಹೊರವಲಯದಲ್ಲಿ ಕಳವು ಮಾಡಿದ್ದ 10 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ವಿಚಾರಣೆಯಲ್ಲಿ ಕಳವು ಮಾಡಿದ್ದ ಕೆ.ಆರ್.ಪುರಂನ 1, ನೆಲಮಂಗಲದ 4, ಬನ್ನೇರುಘಟ್ಟ, ಆನೇಕಲ್, ಅತ್ತಿಬೆಲೆ ತಲಾ 1 ಸೇರಿ 11 ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ

ಕಳೆದ ಮೇ ತಿಂಗಳಲ್ಲಿ ಆರೋಪಿಗಳು ಗ್ಯಾಂಗ್ ಕಟ್ಟಿಕೊಂಡು ಕೆ.ಆರ್.ಪುರಂನ ಬಾಲಾಜಿ ಜ್ಯುವೆಲ್ಲರ್ಸ್ ಮತ್ತು ಬ್ಯಾಂಕರ್ಸ್ ಅಂಗಡಿಗೆ ಹಲವು ದಿನಗಳ ಕಾಲ ಹೊಂಚು ಹಾಕಿ ಒಳಚರಂಡಿ ಮೂಲಕ ಸುರಂಗ ಕೊರೆದು ಕಳ್ಳತನ ಮಾಡಿ ಪರಾರಿಯಾಗಿದ್ದರು. ಈ ಪ್ರಕರಣ ನಗರ ಪೊಲೀಸರಿಗೆ ಸವಾಲಾಗಿ ಪರಿಣಮಿಸಿತ್ತು. ಕಳವು ಮಾಡಿದ ಆಭರಣಗಳನ್ನು ಗಿರವಿ ಇಟ್ಟು, ಐಷಾರಾಮಿ ಜೀವನ ನಡೆಸುತ್ತಿದ್ದ ಆರೋಪಿಗಳು, ಬೈಕ್ ಕಳ್ಳತನಕ್ಕೆ ಇಳಿದಿದ್ದು, ನೆಲಮಂಗಲದಲ್ಲಿ ಕಳವು ಮಾಡಿದ್ದ ಬೈಕೊಂದರ ಸುಳಿವು ಆಧರಿಸಿ ಆರೋಪಿಗಳನ್ನು ಬಂಧಿಸಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ