ಪ್ರತಿ ಜಿಲ್ಲೆಯಲ್ಲೂ ಪ್ರಕೃತಿ ಚಿಕಿತ್ಸಾ ಕೇಂದ್ರ !

Kannada News

11-09-2017

ಬೆಂಗಳೂರು: ದೇಶದ ಪ್ರತಿಯೊಂದು ಜಿಲ್ಲೆಯಲ್ಲೂ ಪ್ರಕೃತಿ ಚಿಕಿತ್ಸಾ ಕೇಂದ್ರ ತೆರೆಯುವ ಜೊತೆಗೆ ಅಂತಾರಾಷ್ಟ್ರೀಯ ಮಟ್ಟದ ಹೋಮಿಯೋಪತಿ ಸಂಶೋಧನ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ಕೇಂದ್ರ ಆಯುಷ್ ರಾಜ್ಯ ಖಾತೆ ಸಚಿವ ಶ್ರೀಪಾದ್ ಯಸ್ಸೂ ನಾಯಕ್ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆಯುಷ್ ಇಲಾಖೆಗೆ ಸಂಪುಟ ದರ್ಜೆ ಸ್ಥಾನಮಾನ ನೀಡಿದ ಮೊದಲ ಸರ್ಕಾರವಾಗಿದೆ. ಆ ಮೂಲಕ ಪ್ರಕೃತಿ ಚಿಕಿತ್ಸೆಗೆ ಅಧಿಕ ಪ್ರೋತ್ಸಾಹ ದೊರೆಯುತ್ತಿದೆ ಎಂದರು. ಹರಿಯಾಣ ರಾಜ್ಯದಲ್ಲಿ ಈಗಾಗಲೇ ನೂರು ಹಾಸಿಗೆಯ ಯೋಗ ಪ್ರಕೃತಿ ಚಿಕಿತ್ಸೆ ಶಿಕ್ಷಣ ಮತ್ತು ಸಂಶೋಧನಾ ಸ್ನಾತಕೋತ್ತರ ಕೇಂದ್ರ ತೆರೆಯಲಾಗಿದೆ. ಅದು ಅಲ್ಲದೆ, ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಕರ್ನಾಟಕದ ನಾಗಮಂಗಲ ತಾಲ್ಲೂಕಿನಲ್ಲಿ 2000 ಹಾಸಿಗೆಯುಳ್ಳ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಇನ್ನೂ ಗೋವಾ ರಾಜ್ಯದಲ್ಲೂ 300 ಹಾಸಿಗೆಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ವಿಶ್ವದ ಇತರೆ ರಾಷ್ಟ್ರಗಳಿಗಿಂತ ಭಾರತವು ವೇಗವಾಗಿ ಪ್ರಗತಿಯತ್ತ ಸಾಗುತ್ತಿದೆ. ಆಧುನಿಕತೆಯು ಉತ್ತುಂಗಕ್ಕೇರಿದೆ ಎಂದ ಅವರು, ಜನರ ಜೀವನ ಶೈಲಿ ಬದಲಾಗಿದ್ದು, ಆಹಾರ ಪದ್ಧತಿಯಲ್ಲೂ ಸಾಕಷ್ಟು ಬದಲಾವಣೆ ಕಂಡಿದ್ದೇವೆ. ಹೀಗಾಗಿ, ಯಾವುದೇ ಚಿಕಿತ್ಸೆ ಪಡೆಯುವ ಬದಲಾಗಿ, ಹೋಮಿಯೋಪತಿ ಚಿಕಿತ್ಸೆ ಹೆಚ್ಚು ಸಹಕಾರಿ ಎಂದು ನುಡಿದರು.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಸಹ ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದರು ಎಂದ ಅವರು, ದೇಶದಲ್ಲಿ ಹೋಮಿಯೋಪತಿ ಕ್ಷೇತ್ರ ವಿಸ್ತರಿಸಲು ಅಂತಾರಾಷ್ಟ್ರೀಯ ಮಟ್ಟದ ಸಂಶೋಧಾನ ಕೇಂದ್ರ ಸ್ಥಾಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಹೋಮಿಯೋಪತಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ