ಕಡ್ಡಾಯ ಭಾಷಣ ವೀಕ್ಷಣೆ: ಸಿಎಂ ಆಕ್ಷೇಪ !

Kannada News

11-09-2017

ಬೆಂಗಳೂರು: ಸ್ವಾಮಿ ವಿವೇಕಾನಂದ ಅವರು, ಶಿಕಾಗೊ ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗಿಯಾಗಿದ್ದ 125 ವರ್ಷಾಚರಣೆ ಹಿನ್ನೆಲೆ, ಪ್ರಧಾನಿ ನರೇಂದ್ರ ಮೋದಿ ಭಾಷಣ ಕಡ್ಡಾಯ ವೀಕ್ಷಣೆಗೆ ಯುಜಿಸಿ ನೀಡಿರುವ, ಆದೇಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ದೀನ್ ದಯಾಳ್ ಉಪಾಧ್ಯಾಯರ ಬಗ್ಗೆಯಾದರೆ ಅದು ಹಿಂದುತ್ವದ ಭಾಷಣ ಆಗಿರುತ್ತದೆ, ಹಿಂದುತ್ವದ ಭಾಷಣವಾದರೆ ಅದನ್ನು ಕೇಳುವ ಅಗತ್ಯವಿಲ್ಲ ಎಂದಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಮೂಲಕ ನನಗೆ ತಿಳಿದಿದೆ, ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ, ಈ ಕುರಿತು ವಿ.ವಿ ಯವರ ಜೊತೆ ಮಾತನಾಡುತ್ತೇನೆ ಎಂದು, ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಹೇಳಿದ್ದಾರೆ.

ಇನ್ನು ಮುಂಬರುವ ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಮೇಯರ್ ಸ್ಥಾನ ಜೆಡಿಎಸ್ ಗೆ ಬಿಟ್ಟುಕೊಡುವಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಬೇಡಿಕೆ ಇಟ್ಟಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಿಎಂ, ನಾನು ಯಾರ ಜೊತೆಯೂ ಮಾತನಾಡಿಲ್ಲ, ಈ ಬಗ್ಗೆ ಯಾರೂ ಕೂಡ ನಮ್ಮೊಂದಿಗೆ ಮಾತುಕತೆಗೆ ಮುಂದಾಗಿಲ್ಲ ಎಂದರು.

ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆಯಾಗುತ್ತಿದೆ, ರೈತರಿಗೆ ಬಿತ್ತನೆ ಬೀಜ, ರಸ ಗೊಬ್ಬರದ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದ ಅವರು, ಈ ಬಗ್ಗೆ ಪ್ರತಿಪಕ್ಷ ಬಿಜೆಪಿ ಮಾಡುತ್ತಿರುವ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ರೈತರು ರಸಗೊಬ್ಬರ ಕೇಳಲು ಹೋದಾಗ ಹಾವೇರಿಯಲ್ಲಿ ಗೋಲಿಬಾರ್ ಮಾಡಿದ್ದರು, ಆದರೆ ರಾಜ್ಯದಲ್ಲಿ ಈಗ ಅಂತಹ ಪರಿಸ್ಥಿತಿಯಿಲ್ಲ ಎಂದು ಬಿಜೆಪಿಯನ್ನು ಟೀಕಿಸಿದ್ದಾರೆ.

ನಮ್ಮ ಸರ್ಕಾರ ರೈತರ ಅಗತ್ಯತೆಗಳನ್ನು ಪೂರೈಸಲು ಬದ್ದವಾಗಿದೆ ಎಂದು ಭರವಸೆ ನೀಡಿದ ಸಿದ್ದರಾಮಯ್ಯ, ಉತ್ತಮ ಮಳೆಯಾಗುತ್ತಿರುವುದರಿಂದ ನಾಲೆಗಳಿಗೆ ನೀರು ಹರಿಸಬೇಕೆಂಬ ಒತ್ತಾಯಗಳು ಕೇಳಿ ಬರುತ್ತಿರುವ ಹಿನ್ನೆಲೆ, ಪ್ರತಿ ತಿಂಗಳು 15 ದಿನಗಳ ಕಾಲ ಕಟ್ಟು ಪದ್ಧತಿಯಲ್ಲಿ ನಾಲೆಗಳಿಗೆ ನೀರು ಹರಿಸುವಂತೆ ಸೂಚನೆ ನೀಡಿದ್ದೇವೆ ಎಂದು ತಿಳಿಸಿದರು. ಆ ನೀರಿನಲ್ಲಿ ರೈತರು ಯಾವ ಬೆಳೆ ಬೆಳೆಯಲು ಸಾಧ್ಯವೋ ಅದನ್ನು ಬೆಳೆದುಕೊಳ್ಳಬಹುದು. ಉತ್ತಮವಾಗಿ ಮಳೆಯಾಗುತ್ತಿರುವ ಪರಿಣಾಮ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಏರಿಕೆಯಾಗಿದೆ ಎಂದಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ