ಸುಪಾರಿ ಹಂತಕರಿಂದ ಗೌರಿ ಹತ್ಯೆ ಶಂಕೆ..?

Kannada News

08-09-2017

ಬೆಂಗಳೂರು: ಹಿರಿಯ ಪತ್ರಕರ್ತೆ ವಿಚಾರವಾದಿ ಗೌರಿ ಲಂಕೇಶ್ ಹತ್ಯೆ ಹಿಂದೆ ಮಹಾರಾಷ್ಟ್ರದ ಮೂಲಭೂತವಾದಿಗಳ ಗ್ಯಾಂಗ್‍ ನ ಕೈವಾಡ ಇರುವ ಬಲವಾದ ಶಂಕೆಯ ಜಾಡು ಹಿಡಿದಿರುವ ವಿಶೇಷ ತನಿಖಾ ತಂಡ(ಎಸ್‍ಐಟಿ)ದ ಅಧಿಕಾರಿಗಳು ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ. ಮಹಾರಾಷ್ಟ್ರದ ಮೂಲಭೂತವಾದಿಗಳ ಗ್ಯಾಂಗ್‍ ನ ಸೂಚನೆ ಮೇರೆಗೆ ಮುಂಬೈನಿಂದ ನಗರಕ್ಕೆ ಬಂದಿದ್ದ ಸುಪಾರಿ ಕಿಲ್ಲರ್ಸ್ ಸಂಚು ರೂಪಿಸಿ ಗೌರಿಯನ್ನು ಗುಂಡು ಹಾರಿಸಿ ಕೊಲೆಗೈದು ಪರಾರಿಯಾಗಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದ್ದು, ಕೊಲೆ ನಡೆದ ಸ್ಥಳದಲ್ಲಿ ಸಿಕ್ಕ ಸುಳಿವು ಪರಿಶೀಲಿಸಿದ ಅಧಿಕಾರಿಗಳಿಗೆ ಹಿಂದೆ ನಡೆದಿರುವ ಪನ್ಸಾರೆ, ದಾಬೋಲ್ಕರ್ ಹಾಗೂ ಕಲ್ಬುರ್ಗಿ ಅವರ ಹತ್ಯೆ ನಡೆದಿರುವ ರೀತಿಯಲ್ಲೇ ಗೌರಿ ಅವರ ಕೊಲೆ ನಡೆದಿದ್ದು ಅಲ್ಲಿ ಮಹಾರಾಷ್ಟ್ರ ಗ್ಯಾಂಗ್‍ ನ ಕೈವಾಡವಿರುವುದು ಪತ್ತೆಯಾಗಿತ್ತಾದರೂ ದುಷ್ಕರ್ಮಿಗಳು ಪತ್ತೆ ಸಾಧ್ಯವಾಗಿರಲಿಲ್ಲ ಇದು ಕೂಡ ಅದರಂತೆ ನಡೆದಿರುವುದು ಕಂಡುಬಂದಿದೆ ಎಂದು ಎಸ್‍ಐಟಿ ಮೂಲಗಳು ತಿಳಿಸಿವೆ.

ಬ್ಲಾಕ್ ಹೆಲ್ಮೆಟ್: ಮುಂಬೈನಿಂದ ಬಂದಿದ್ದ ಸುಫಾರಿ ಕಿಲ್ಲರ್ಸ್ ಕಳೆದೊಂದು ತಿಂಗಳಿಂದ ಮೊಬೈಲ್ ಬಳಸಿರಲಿಲ್ಲ ಅಲ್ಲದೇ ನಗರದಲ್ಲಿ ಯಾವ ಭಾಗದಲ್ಲೂ ವಾಸ್ತವ್ಯ ಹೂಡಿಲ್ಲ. ಕ್ಯಾಮಾರಾ ಅಳವಡಿಸಿರುವ ರಸ್ತೆಗಳು ಹೊಟೇಲ್‍ ಗಳ ಬಳಿ ಹೆಚ್ಚಾಗಿ ಕಾಣಿಸಿಕೊಂಡಿಲ್ಲ ಬಹುತೇಕ ಕಪ್ಪು ಬಣ್ಣದ ಬಟ್ಟೆ, ಕಪ್ಪು ಬಣ್ಣದ ಹೆಲ್ಮೆಟ್ ಬಳಸುತ್ತಾ ಯಾವುದೇ ಕಾರಣಕ್ಕೂ ಮುಖ ಚಹರೆ ಸರಿಯಾಗಿ ಕಾಣದಂತೆ ನೋಡಿಕೊಂಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.

ಕಳೆದ ಮಂಗಳವಾರ ರಾತ್ರಿ ಮಳೆ ಬರುತ್ತಿರುವುದು ಹಾಗೂ ಗೌರಿ ಅವರು ವಾಸಿಸುತ್ತಿದ್ದ ಮನೆಯ ಸುತ್ತ ಮುತ್ತ ವಿದ್ಯುತ್ ಕಡಿತಗೊಂಡಿರುವುದರ ಲಾಭ ಪಡೆದು ಕೆಲವೇ ನಿಮಿಷಗಳಲ್ಲಿ ಕೃತ್ಯ ಮುಗಿಸಿ ಪರಾರಿಯಾಗಿದ್ದಾರೆ. ದುಷ್ಕರ್ಮಿಗಳು ತಂದಿದ್ದ ಸ್ಕೂಟರ್‍ ನ ಸಂಖ್ಯೆಯಾಗಲಿ ಬಣ್ಣವಾಗಲಿ ಸರಿಯಾಗಿ ಸಿಸಿಟಿವಿ ಕ್ಯಾಮಾರದಲ್ಲಿ ಸೆರೆಯಾಗದಂತೆ ಹಾಗೂ ತಮ್ಮ ಚಹರೆ ನಿಖರವಾಗಿ ಗೊತ್ತಾಗದಂತೆ ಎಚ್ಚರ ವಹಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಮೂಲಗಳು ಹೇಳಿವೆ.

ಸಿನೆಮಾ ಶೈಲಿಯಲ್ಲಿ ಕೃತ್ಯ: ಇನ್ನು ಗುಂಡು ಹಾರಿಸಿದ ಹಂತಕ ಥೇಟ್ ಸಿನೆಮಾ ಶೈಲಿಯಲ್ಲೇ ವರ್ತಿಸಿದ್ದಾನೆ. ಕಳೆದ ಎರಡು ಮೂರು ದಿನಗಳಿಂದ ಅದೇ ಐಡಿಯಲ್ ಹೋಮ್ಸ್ ಪ್ರದೇಶದಲ್ಲಿ ಓಡಾಟ ಮಾಡಿರೋ ಹಂತಕರು, ಕಾದು ಕೂತು ಗುಂಡು ಹಾರಿಸಿದ್ದಾರೆ. ಘಟನೆ ನಡೆಯೋದಕ್ಕೂ ಮುನ್ನ ಇಬ್ಬರು ಗೌರಿ ಅವರ ಮನೆಯ ಮುಂದೆ ಕಾದು ಕೂತಿದ್ದರು ಎಂದು ತಿಳಿದುಬಂದಿದೆ. ಗೌರಿ ಅವರು ಮನೆ ತಲುಪಿದ ಕೂಡಲೇ ಕಾದು ಕೂತಿದ್ದ ಸಂಚುಕೋರರು, ಗುಂಡು ಹಾರಿಸುವವನಿಗೆ ಮಾಹಿತಿ ಮುಟ್ಟಿಸಿದ್ದಾರೆ. ಆ ಬಳಿಕ ಬಂದ ಆ ಆಗಂತುಕ ಗುಂಡು ಹಾರಿಸಿ,ಸಾವು ಖಚಿತ ಪಡಿಸಿಕೊಂಡೇ ಮುಂದೆ ಹೋಗಿದ್ದಾನೆ. ಇದು ಮುಂಬೈ ಮೂಲದ ಸುಪಾರಿ ಕಿಲ್ಲರ್ಸ್ ಮೋಡ್ಸ್ ಎನ್ನುವುದು ಎಸ್‍ಐಟಿ ತಂಡದ ಬಲವಾದ ಅನುಮಾನವಾಗಿದೆ.

ಇದನ್ನು ಆಧರಿಸಿ ಎಸ್‍ಐಟಿ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿ ಸಿಸಿ ಟಿವಿಯ ದೃಶ್ಯದಲ್ಲಿ ಸೆರೆಯಾಗಿರುವ ಹಂತಕನ ಚಹರೆ ಹಾಗೂ ಸ್ಥಳೀಯ ಮಹಿಳೆಯೊಬ್ಬರು ನೀಡಿದ ಮಾಹಿತಿ ಆಧರಿಸಿ ಚಿತ್ರಕಲಾ ಪರಿಷತ್ತಿನಲ್ಲಿ ಚಿತ್ರ ಕಲಾವಿದರಿಂದ ರೇಖಾ ಚಿತ್ರವನ್ನು ರಚಿಸಲು ಮುಂದಾಗಿದ್ದಾರೆ. ಅಲ್ಲದೇ ಹತ್ಯೆಯ ಪತ್ತೆಗೆ ಸಾರ್ವಜನಿಕರು ತಮ್ಮಲ್ಲಿನ ಮಾಹಿತಿ ಹಂಚಿಕೊಳ್ಳಲು ವಿನಂತಿಸಲಾಗಿದೆ.

ಇಷ್ಟರ ನಡುವೆ ಗಾಂಧೀ ಬಜಾರ್‍ ನಿಂದ ಬಂದ ಗೌರಿ ಲಂಕೇಶ್ ಅವರು ಮನೆಯ ಮುಂಭಾಗ ಕಾರು ನಿಲ್ಲಿಸಿಕೊಂಡು ಒಂದೆರಡು ನಿಮಿಷ ಕೂತು ಮೊಬೈಲ್ ನೋಡಿದ್ದಾರೆ. ಅದ್ಯಾರಿಗೋ ಮೆಸೇಜ್ ಕೂಡ ಕಳುಹಿಸಿರುವುದು ಕಂಡುಬಂದಿದೆ.

ಮಹತ್ವದ ಸುಳಿವು ಪತ್ತೆ: ಗೌರಿ ಲಂಕೇಶ್ ಹತ್ಯೆ ಪ್ರಕರಣದ ಸಂಬಂಧಿಸಿದಂತೆ ಮಹತ್ವದ ಸುಳಿವು ಪತ್ತೆಯಾಗಿದ್ದು, ರಾಜರಾಜೇಶ್ವರಿ ನಗರದ ಗೌರಿ ಲಂಕೇಶ್ ಅವರ ನಿವಾಸದ ಸನಿಹವಿರುವ ಗ್ಲೋಬಲ್ ಕಾಲೇಜು ಬಳಿ ಅನುಮಾನಾಸ್ಪದವಾಗಿ ಸ್ಕೂಟರ್ ಒಂದು ತೆರಳಿರುವ ದೃಶ್ಯ ಕಂಡುಬಂದಿದೆ. ಗೌರಿ ಹತ್ಯೆಯಾದ 15 ನಿಮಿಷದ ಬಳಿಕ ಈ ಸ್ಕೂಟರ್ ತೆರಳಿದೆ. ಆದರೆ, ಸ್ಕೂಟರ್ ನಲ್ಲಿದ್ದಾತ ಯಾವುದೇ ಹೆಲ್ಮೆಟ್ ಮತ್ತು ಜ್ಯಾಕೆಟ್ ಧರಿಸಿರಲಿಲ್ಲ ಎನ್ನುವುದು ಕುತೂಹಲದ ಸಂಗತಿಯಾಗಿದೆ. ಏಕೆಂದರೆ, ಗೌರಿ ಹತ್ಯೆಗೂ ಹಂತಕನು ಅನುಮಾನ ಬರಬಾರದೆನ್ನುವ ಕಾರಣಕ್ಕೆ ಹೆಲ್ಮೆಟ್ ಮತ್ತು ಜ್ಯಾಕೆಟ್ ಧರಿಸದಿದ್ದಿರುವ ಸಾಧ್ಯತೆ ಇದೆ. ಹತ್ಯೆ ಬಳಿಕ, ಆತ ಹೆಲ್ಮೆಟ್ ಮತ್ತು ಜಾಕೆಟ್ ತೆಗೆದುಹಾಕಿದ್ದಿರುವ ಶಂಕೆ ಇದೆ ಎಂದು ಎಸ್‍ಐಟಿ ಮೂಲಗಳು ತಿಳಿಸಿವೆ.

ಇದೇ ವೇಳೆ, ಗೌರಿ ಲಂಕೇಶ್ ಹತ್ಯೆಯಾದ ಕೆಲ ಹೊತ್ತಿನಲ್ಲಿ ಆರ್.ಆರ್.ನಗರದಲ್ಲೇ ಮೊಬೈಲ್'ವೊಂದು ಸ್ವಿಚ್ ಆನ್ ಆಗಿದೆ. ಕೆಲವೇ ನಿಮಿಷಗಳಲ್ಲಿ ಸ್ವಿಚ್ ಆಫ್ ಆಗಿದೆ. ಇದೂ ಕೂಡ ಪೊಲೀಸರಿಗೆ ಅನುಮಾನ ಮೂಡಿಸಿದೆ. ಘಟನೆ ನಡೆದ ಸ್ಥಳ ಹಾಗೂ ಸಮಯದಲ್ಲಿ ಏನಾದರೂ ಸುಳಿವು ಸಿಗಬಹುದೆಂದು ಪೊಲೀಸರು ಅವಿರತವಾಗಿ ಶೋಧದಲ್ಲಿದ್ದಾರೆ. ಸದ್ಯ ಈ ಎರಡು ಸುಳಿವುಗಳು ಪೊಲೀಸರಿಗೆ ಸಿಕ್ಕಿದೆ. ಸ್ಕೂಟರ್ ಮತ್ತು ಆ ಮೊಬೈಲ್ ನಂಬರ್'ನ ಮಾಹಿತಿಯನ್ನು ತನಿಖಾ ತಂಡವು ಕಲೆಹಾಕುತ್ತಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ