ಪ್ರಿಯಕರನ ಜೊತೆ ಸೇರಿ ಗಂಡನ ಕೊಲೆ !

Kannada News

08-09-2017

ಬೆಂಗಳೂರು: ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಕೊಲೆ ಮಾಡಿಸಿದ್ದ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಗಂಗಮ್ಮಗುಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗಂಗಮ್ಮಗುಡಿಯ ಕಮ್ಮಗೊಂಡನಹಳ್ಳಿಯ ವರಲಕ್ಷ್ಮಿ(28)ಮತ್ತು ದಾಸರಹಳ್ಳಿಯ ರವೀಂದ್ರನಗರದ ರಾಕೇಶ್ (23) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರನ್ನು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ. ಜಾಲಹಳ್ಳಿಯ ಕಂಪನಿಯ ಕಚೇರಿಯೊಂದರಲ್ಲಿ ಕಸ ಗುಡಿಸುವ(ಹೌಸ್ ಕೀಪಿಂಗ್)ಕೆಲಸಕ್ಕೆ ಹೋಗುತ್ತಿದ್ದ ವರಲಕ್ಷ್ಮಿಗೆ 11 ವರ್ಷಗಳ ಹಿಂದೆ ವಿವಾಹವಾಗಿದ್ದು, ಇಬ್ಬರು ಗಂಡು ಮಕ್ಕಳಿದ್ದಾರೆ. ಕೆಲಸ ಮಾಡುತ್ತಿದ್ದ ಕಂಪನಿಯ ಕಚೇರಿಯ ಕಾವಲಿಗಿದ್ದ ಸೆಕ್ಯೂರಿಟಿ ಗಾರ್ಡ್ ಹಳೆ ಹುಬ್ಬಳ್ಳಿ ಮೂಲದ ರಾಕೇಶ್ ಜೊತೆ ವರಲಕ್ಷ್ಮಿಗೆ ಪರಿಚಯವಾಗಿ ಇಬ್ಬರ ನಡುವೆ ಅನೈತಿಕ ಸಂಬಂಧ ಬೆಳೆದಿತ್ತು.

ಆರು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದ ವರಲಕ್ಷ್ಮಿ ಆಗಾಗ ರಾಕೇಶ್‍ ನ ರವೀಂದ್ರನಗರದ ಮನೆಗೆ ಹೋಗಿ, ಮನೆ ಕೆಲಸ ಮಾಡಿಕೊಂಡು ಆತನ ಜೊತೆಗಿರುತ್ತಿದ್ದಳು. ಇದು ಗೊತ್ತಾಗಿ ಪೀಣ್ಯ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪತಿ ಎಂ.ಬಾಬು ಆಕ್ರೋಶಗೊಂಡು ವರಲಕ್ಷ್ಮಿಗೆ ಹೊಡೆದು ಬುದ್ದಿ ಹೇಳಿದ್ದನಾದರೂ ಆಕೆ ಸರಿಹೋಗಿರಲಿಲ್ಲ.

ಕುಡಿತದ ಚಟ ಅಂಟಿಸಿಕೊಂಡಿದ್ದ ಬಾಬು, ಪತ್ನಿಯ ನಡತೆ ಸರಿಹೋಗದಿದ್ದರಿಂದ ಮತ್ತಷ್ಟು ಕುಡಿತ ಹೆಚ್ಚು ಮಾಡಿ ವರಲಕ್ಷ್ಮಿಗೆ ಕಿರುಕುಳ ನೀಡುತ್ತಿದ್ದು, ಇದನ್ನು ರಾಕೇಶ್ ಬಳಿ ಆಳುತ್ತಾ ಹೇಳಿ ತೋಡಿಕೊಂಡಿದ್ದಳು. ನಮ್ಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಬಾಬುನನ್ನು ಮುಗಿಸಲು ರಾಕೇಶ್ ಕಾಯುತ್ತಿದ್ದ. ಅದರಂತೆ ಕಳೆದ ಸೆ.3ರಂದು ರಾತ್ರಿ ಬಾಬು ಕಂಠಪೂರ್ತಿ ಕುಡಿದು ಬಂದು ಜಗಳ ಮಾಡಿ ಮಲಗಿದ್ದು, ಆತ ಗಾಢ ನಿದ್ರೆಗೆ ಹೋದ ನಂತರ 10 ಹಾಗೂ 8ವರ್ಷದ ಇಬ್ಬರು ಗಂಡು ಮಕ್ಕಳನ್ನು ಕರೆದುಕೊಂಡು ಬಾಗಿಲು ಹಾಕದೇ ಅಣ್ಣನ ಮನೆಗೆ ವರಲಕ್ಷ್ಮಿ ಹೋಗಿದ್ದಳು.

ಅದನ್ನು ರಾಕೇಶ್‍ ಗೂ ತಿಳಿಸಿ ಬಾಬುನನ್ನು ಮುಗಿಸಲು ಇದು ಸೂಕ್ತ ಸಮಯ ಎಂದು ಮೊಬೈಲ್‍ ನಲ್ಲಿ ತಿಳಿಸಿ ಸಂದೇಶ ಕಳುಹಿಸಿದ್ದಳು, ಮಧ್ಯರಾತ್ರಿ ಹೊರಟ ರಾಕೇಶ್ ಮಲಗಿದ್ದ ಬಾಬುನ ಕುತ್ತಿಗೆಯನ್ನು ಟವಲ್‍ನಿಂದ ಬಿಗಿದು ಕೊಲೆ ಮಾಡಿ ಲೈಟ್ ಆಫ್ ಮಾಡಿಕೊಂಡು ಪರಾರಿಯಾಗಿದ್ದ. ಬೆಳಿಗ್ಗೆ ಬಂದ ವರಲಕ್ಷಿ ಪತಿಯು ಅನುಮಾನಸ್ಪಾದವಾಗಿ ಸಾವನ್ನಪ್ಪಿದ್ದಾನೆ ಎಂದು ದೂರು ನೀಡಿದ್ದಳು.

ಪ್ರಕರಣ ದಾಖಲಿಸಿ ಅನುಮಾನದ ಮೇಲೆ ವರಲಕ್ಷ್ಮಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಕೃತ್ಯವನ್ನು ಬಾಯ್ಬಿಟ್ಟಿದ್ದು ಕಾರ್ಯಾಚರಣೆ ನಡೆಸಿದ ಗಂಗಮ್ಮಗುಡಿ ಪೊಲೀಸ್ ಇನ್ಸ್ ಪೆಕ್ಟರ್ ಮೇರಿ ಜೋಸೆಫ್ ಮತ್ತವರ ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದೆ ಎಂದು ಡಿಸಿಪಿ ಚೇತನ್‍ ಸಿಂಗ್ ರಾತೋರ್ ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ