ಕುಡಿಯುವ ನೀರು ಯೋಜನೆಗೆ 2250 ಕೋಟಿ !

Kannada News

07-09-2017 487

ಬೆಂಗಳೂರು: ಪಾವಗಡ, ಚಳ್ಳಕೆರೆ, ಮೊಳಕಾಲ್ಮೂರು, ಕೂಡ್ಲಿಗಿ, ಹೊಸಪೇಟೆ ತಾಲ್ಲೂಕಿನ ಕೆಲ ಹಳ್ಳಿಗಳು ಮತ್ತು ಚಿತ್ರದುರ್ಗ ತಾಲ್ಲೂಕಿನ ತುರವನೂರು ಹೋಬಳಿಗೆ ನೀರು ಪೂರೈಸುವ 2250 ಕೋಟಿ ರೂ. ವೆಚ್ಚದ ಯೋಜನೆಯ ಕಾಮಗಾರಿಗೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಯೋಜನೆ ಸಂಬಂಧ ಗೃಹ ಕಚೇರಿ ಕೃಷ್ಣಾದಲ್ಲಿ ತುಮಕೂರು ಜಿಲ್ಲೆಯ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮುಖ್ಯಮಂತ್ರಿಯವರು ಈ ವಿಷಯ ತಿಳಿಸಿದರು.

ಪಾವಗಡ, ಚಳ್ಳಕೆರೆ, ಮೊಳಕಾಲ್ಮೂರು, ಕೂಡ್ಲಿಗಿ, ಹೊಸಪೇಟೆ ತಾಲ್ಲೂಕಿನ ಕೆಲ ಹಳ್ಳಿಗಳು ಮತ್ತು ಚಿತ್ರದುರ್ಗ ತಾಲ್ಲೂಕಿನ ತುರವನೂರು ಹೋಬಳಿಗೆ ಕುಡಿಯುವ ನೀರು ಪೂರೈಸುವ ಯೋಜನೆಯನ್ನು ಬಜೆಟ್‍ನಲ್ಲಿ ಘೋಷಿಷಲಾಗಿತ್ತು. ಈ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಕುಸಿದಿರುವುದರಿಂದ ನೀರಿನಲ್ಲಿ ಫ್ಲೋರೈಡ್ ಅಂಶ ಕಾಣಿಸಿಕೊಂಡಿದೆ. ಇದರಿಂದ ಜನ ತೊಂದರೆಗೆ ಸಿಲುಕಿದ್ದಾರೆ. ಹೀಗಾಗಿ ಯೋಜನೆಯನ್ನು ತ್ವರಿತವಾಗಿ ಜಾರಿಗೆ ತರಲು ಸರ್ಕಾರ ಮುಂದಾಗಿದೆ ಎಂದು ಹೇಳಿದರು. ಈ ಸಂಬಂಧ ಗ್ರಾಮೀಣ ಅಭಿವೃದ್ಧಿ ಇಲಾಖೆ ಸಂಪೂರ್ಣವಾದ ಯೋಜನಾ ವರದಿ ತಯಾರು ಮಾಡಿದೆ. ಸಚಿವ ಸಂಪುಟದ ಮುಂದಿನ ಸಭೆಯಲ್ಲಿ ಪ್ರಸ್ತಾವನೆ ಮಂಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಒಪ್ಪಿಗೆ ಸಿಕ್ಕ ಕೂಡಲೇ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ ಎಂದರು.

ಕುಡಿಯುವ ನೀರು ಪೂರೈಕೆಯಾಗುವ ಐದು ತಾಲೂಕುಗಳ ಜನಸಂಖ್ಯೆ ಸುಮಾರು ಹತ್ತು ಲಕ್ಷದಷ್ಟಿದೆ. ಯೋಜನಾ ವರದಿಯನ್ನು 2050ರ ವರೆಗೆ ಅನ್ವಯ ಆಗುವಂತೆ ತಯಾರಿಸಿದ್ದು, ವೆಚ್ಚ 2250 ಕೋಟಿ ರೂ. ಎಂದು ಅಂದಾಜು ಮಾಡಲಾಗಿದೆ ಎಂದರು.

ಹತ್ತು ಲಕ್ಷ ಜನಸಂಖ್ಯೆ ಪೈಕಿ ಶೇ. 50ಕ್ಕೂ ಅಧಿಕ ಮಂದಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಕ್ಕೆ ಸೇರಿದವರಾಗಿದ್ದಾರೆ. ಹೀಗಾಗಿ ಎಸ್‍ಸಿಪಿ, ಟಿಎಸ್‍ಪಿ ಕಾರ್ಯಕ್ರಮದಲ್ಲಿ ಅನುದಾನ ಒದಗಿಸಲು ನಿರ್ಧರಿಸಿದೆ. 704 ಕೋಟಿ ರೂ. ಬಿಡುಗಡೆ ಮಾಡಲು ಈಗಾಗಲೇ ಒಪ್ಪಿಗೆ ಸಿಕ್ಕಿದೆ. ಉಳಿದ ಹಣವನ್ನು ಬೇರೆ ಮೂಲದಿಂದ ಒದಗಿಸಲಾಗುವುದು ಎಂದು ಮುಖ್ಯಮಂತ್ರಿಯವರು ವಿವರಿಸಿದರು.

ತುಂಗಭದ್ರಾ ಹಿನ್ನೀರಿನಲ್ಲಿ 2 ಟಿಎಂಸಿಯನ್ನು ಯೋಜನೆಗೆ ಬಳಸಿಕೊಳ್ಳಲಾಗುವುದು. ಹೊಸಪೇಟೆ ಬಳಿ ನೀರು ಪಂಪ್ ಮಾಡಿ, ಶುದ್ಧೀಕರಣದ ಬಳಿಕ ಕೊಳವೆಗಳ ಮೂಲಕ ಪೂರೈಕೆ ಮಾಡಲಾಗುವುದು. ನೀರು ಹರಿಯುವ ಕೊಳವೆ ಮಾರ್ಗ ಹೊಸಪೇಟೆಯಿಂದ ಪಾವಗಡದ ವರೆಗೆ 230 ಕಿ.ಮೀ ಹಾದು ಹೋಗಲಿದೆ. ಕುಡಿಯುವ ನೀರಿನ ಯೋಜನೆ 230 ಕಿ.ಮೀ ವರೆಗೆ ಹೋದ ನಿದರ್ಶನ ಇಲ್ಲ ಎಂದು ತಿಳಿಸಿದರು.

ಎರಡು ಪಟ್ಟಣಗಳ ಜೊತೆಗೆ 1170 ಹಳ್ಳಿಗಳಿಗೆ ಇದರಿಂದ ಪ್ರಯೋಜನವಾಗಲಿದೆ. ಜನರ ಜೊತೆಗೆ ಜಾನುವಾರುಗಳಿಗೂ ನೀರು ಒದಗಿಸಲಾಗುವುದು. ಇದರಿಂದ ಅಂತರ್ಜಲ ಮಟ್ಟವೂ ವೃದ್ಧಿಯಾಗುತ್ತದೆ. ಸುಮಾರು ಎರಡು ವರ್ಷದಲ್ಲಿ ಯೋಜನೆ ಪೂರ್ಣವಾಗಲಿದೆ ಎಂದು ಹೇಳಿದರು. ಇಂತಹ ಯೋಜನೆ ಬಗ್ಗೆ ಯಾರೂ ಆಲೋಚನೆ ಮಾಡಿರಲಿಲ್ಲ. ಆದರೆ, ನಾವು ಜಾರಿಗೆ ತರುತ್ತಿದ್ದೇವೆ ಎಂದು ಹೇಳಿದರು.

ನಿಮ್ಮ ಅವಧಿಯಲ್ಲೇ ಯೋಜನೆ ಪೂರ್ಣಗೊಳಿಸಬಹುದಿತ್ತಲ್ಲವೇ ? ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ, ಇದು ಬೃಹತ್ ಯೋಜನೆಯಾಗಿದ್ದು, ಪೂರ್ಣಗೊಳ್ಳಲು ಎರಡು ವರ್ಷ ಬೇಕೇ ಬೇಕು. ಇಷ್ಟಕ್ಕೂ ನಮ್ಮ ಅವಧಿ ಇನ್ನೂ 8 ತಿಂಗಳಿದೆ. ಮುಂದೆಯೂ ನಾವೇ ಅಧಿಕಾರಕ್ಕೆ ಬರುತ್ತೇವೆ. ಹೀಗಾಗಿ 8 ತಿಂಗಳ ಜೊತೆಗೆ ಇನ್ನೂ ಐದು ವರ್ಷ ಸಿಗಲಿದೆ ಎಂದು ತಿಳಿಸಿದರು.

ಬಿಜೆಪಿ, ಜೆಡಿಎಸ್ ಎಷ್ಟೇ ತಮಟೆ ಹೊಡೆದುಕೊಂಡರೂ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಇದರಲ್ಲಿ ಎರಡನೇ ಮಾತೇ ಇಲ್ಲ. ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಮುಖ್ಯಮಂತ್ರಿ ಯಾರು ಎಂಬುದನ್ನು ಶಾಸಕರು ಮತ್ತು ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಪ್ರತಿಕ್ರಿಯಿಸಿದರು.

ಚಳವಳಿ ಕೈ ಬಿಡಲು ದೂರವಾಣಿ ಮೂಲಕ ಮನವಿ: ಕುಡಿಯುವ ನೀರಿನ ಯೋಜನೆಗೆ ಆಗ್ರಹಿಸಿ ಪಾವಗಡದಲ್ಲಿ ಚಳವಳಿ ನಡೆಯುತ್ತಿದೆ. ಚಳವಳಿಯ ನೇತೃತ್ವ ವಹಿಸಿರುವ ಮುಖಂಡರಿಗೆ ಪತ್ರಿಕಾಗೋಷ್ಠಿಯಲ್ಲೇ ಮೊಬೈಲ್ ಫೋನ್ ಮೂಲಕ ಕರೆ ಮಾಡಿದ ಮುಖ್ಯಮಂತ್ರಿಯವರು, ಚಳವಳಿ ವಾಪಸ್ ಪಡೆಯುವಂತೆ ಮನವಿ ಮಾಡಿದರು.

ಯೋಜನೆ ಕುರಿತು ಇಂದಿನ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದಿದೆ. ಟೆಂಡರ್ ಕರೆಯಲು ಸಿದ್ಧತೆಯಾಗಿದೆ. ಹೀಗಾಗಿ ಚಳವಳಿ ವಾಪಸ್ ಪಡೆದುಕೊಳ್ಳಿ ಎಂದು ಕೋರಿದರು. ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ, ಲೋಕೋಪಯೋಗಿ ಸಚಿವ ಡಾ. ಎಚ್.ಸಿ. ಮಹಾದೇವಪ್ಪ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಎಚ್.ಕೆ. ಪಾಟೀಲ, ಶಾಸಕರಾದ ತಿಮ್ಮರಾಯಪ್ಪ, ವಿ.ಎಸ್. ಉಗ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ