ಅಪಘಾತವಾದಾಗ 108ಗೆ ಕರೆ ಮಾಡುವ ಕಾರ್ !

Kannada News

07-09-2017

ಬೆಂಗಳೂರು: ಎಷ್ಟೇ ಐಶಾರಾಮಿ ಕಾರುಗಳಾದರೂ ಅಪಘಾತವಾದಾಗ ನೋಡಿದವರು ಇಲ್ಲವೇ ಕಾರಿನಲ್ಲಿದ್ದವರು ಆಂಬ್ಯುಲೆನ್ಸ್‍ಗೆ ಕರೆ ಮಾಡಬೇಕು. ಆದರೆ, ಈ ಕಾರ್ ಅಪಘಾತವಾದರೆ ಕಾರೇ ಸ್ವಯಂಚಾಲಿತವಾಗಿ ಕರೆ ಮಾಡುತ್ತದೆ, ಸಂಬಂಧಪಟ್ಟವರಿಗೆ ಲೊಕೇಷನ್ ಲಿಂಕ್ ಕಳುಹಿಸಲಿದೆ.

ದೇಶಿಯ ಕಾರು ಮಾರುಕಟ್ಟೆಯಲ್ಲಿ ಮೊಟ್ಟ ಮೊದಲ ಬಾರಿಗೆ ಹೊಸ ಆವಿಷ್ಕಾರದ ತಂತ್ರಜ್ಞಾನವನ್ನು ಮಹೀಂದ್ರಾ ಎಕ್ಸ್ ಯುವಿ 500 ಕಾರಿಗೆ, ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿ ಅಳವಡಿಸಿದೆ. ಸಂಪೂರ್ಣ ಮುಂದುವರೆದ ವೈಶಿಷ್ಟ್ಯಗಳನ್ನು ಹೊಂದಿದ ಮೊಟ್ಟ ಮೊದಲ ಭಾರತೀಯ ಕಾರು ಇದಾಗಿದೆ.

ಮಹೀಂದ್ರಾ ಎಕ್ಸ್ ಯುವಿ 500 ಕಾರು ಇಕೋಸೆನ್ಸ್, ಆಂಡ್ರಾಯ್ಡ್ ಆಟೋ ಎಕ್ಸ್ ಪೀರಿಯನ್ಸ್, ಗೂಗಲ್ ಮ್ಯಾಪ್, ಗೂಗಲ್ ಪ್ಲೇ, ಕಾಲ್ ಡಯಲರ್, ತುರ್ತು ಕರೆ ಸಹಾಯ, ಕನೆಕ್ಟೆಡ್ ಮೊಬೈಲ್ ಆ್ಯಪ್ ಸೌಲಭ್ಯಗಳನ್ನು ಹೊಂದಿದ್ದು, ಎಲ್ಲವೂ ಧ್ವನಿ ಮೂಲಕವೇ ಸಂವಹನ ನಡೆಸುವುದು ಈ ಕಾರಿನ ವಿಶೇಷ. ಈ ಸೌಲಭ್ಯ ವ್ಯವಸ್ಥೆ ಕಲ್ಪಿಸುತ್ತಿರುವ ಕುರಿತು ಮಾಹಿತಿ ನೀಡಿದ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯ ಹಿರಿಯ ಉಪಾಧ್ಯಕ್ಷ ಶ್ರೀನಿವಾಸ ಅರವಪಲ್ಲಿ, ಈ ಕಾರಿನಲ್ಲಿ ಪ್ರಯಾಣಿಸುವವರ ಸುರಕ್ಷತೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಕಾರು ಅಪಘಾತಕ್ಕೀಡಾದರೆ ಏರ್ ಬ್ಯಾಗ್ ತೆರೆದು ರಕ್ಷಣೆ ನೀಡುವುದು ಈಗಿನ ಎಲ್ಲಾ ಐಶಾರಾಮಿ ಕಾರುಗಳಲ್ಲಿ ಸಾಮಾನ್ಯ. ಆದರೆ, ಈ ಕಾರಿನಲ್ಲಿ ಏರ್ ಬ್ಯಾಗ್ ಜೊತೆಗೆ 108 ಸಂಖ್ಯೆಗೆ ಸ್ವಯಂಚಾಲಿತವಾಗಿ ಕರೆ ಹೋಗಲಿದೆ. ನೋಂದಾಯಿತ 2 ಸಂಖ್ಯೆಗಳು ಹಾಗು ಮಹೀಂದ್ರಾ ಸಹಾಯವಾಣಿಗೂ ಅಪಘಾತದ ಮಾಹಿತಿ ರವಾನೆಯಾಗಲಿದೆ. ಜೊತೆಗೆ ಅಪಘಾತವಾಗಿರುವ ಸ್ಥಳದ ಲಿಂಕ್ ಕೂಡ ಕಳುಹಿಸಲಿದೆ ಎಂದರು.

ಸಣ್ಣಪುಟ್ಟ ಅಪಘಾತಕ್ಕೆ ಈ ಕರೆ ಹೋಗುವುದಿಲ್ಲ. ಕಾರಿನ ಸೆನ್ಸಾರ್ ಗಂಭೀರ ಅಪಘಾತ ಎಂದು ಪರಿಗಣಿಸಿದರೆ ಮಾತ್ರ ಕರೆ ಹೋಗಲಿದೆ. ಒಂದು ವೇಳೆ ಕಾರಿನಲ್ಲಿದ್ದವರಿಗೆ ಏನೂ ಆಗದೇ ಇದ್ದರೂ ಸ್ವಯಂ ಚಾಲಿತ ಕರೆ ಹೋಗಿದ್ದರೆ ಅದನ್ನು ರದ್ದುಗೊಳಿಸುವ ವ್ಯವಸ್ಥೆಯೂ ಲಭ್ಯವಿದೆ. ಲೊಕೇಷನ್ ಲಿಂಕ್ ಅನ್ನೂ ಕಳುಹಿಸಲಿದೆ. ಆದರೆ, ಇದು ಗೂಗಲ್ ಸಹಾಯದಿಂದ ಕಾರ್ಯನಿರ್ವಹಿಸಲಿರುವ ಕಾರಣ ಮೊಬೈಲ್ ನೆಟ್‍ ವರ್ಕ್ ಇರುವುದು ಕಡ್ಡಾಯವಾಗಿದೆ ಎಂದರು.

ಮತ್ತಷ್ಟು ಫೀಚರ್ಸ್: ಇನ್ನು ಇಕೋ ಸೆನ್ಸ್ ವ್ಯವಸ್ಥೆಯಲ್ಲಿ ಫೇಸ್‍ಬುಕ್, ಟ್ವಿಟ್ಟರ್, ವಾಟ್ಸಾಪ್ ಕನೆಕ್ಟ್ ಮಾಡಲಾಗಿದ್ದು, ಕೇವಲ ಒಂದು ಬಟನ್ ಒತ್ತಿದರೆ ಸಾಮಾಜಿಕ ಜಾಲತಾಣಕ್ಕೆ ಕಾರು ಸಂಪರ್ಕ ಪಡೆದುಕೊಳ್ಳಲಿದೆ. ಜೊತೆಗೆ ಎಷ್ಟು ವೇಗದಲ್ಲಿ ಕಾರು ಚಲಿಸಿದರೆ ಇಕೋ ಸ್ಕೋರ್ ಬರಲಿದೆ ಎನ್ನುವುದನ್ನು ತೋರಿಸಲಿದ್ದು, ಇರುವ ಇಂಧನ ಹಾಗು ತಲುಪಲಿರುವ ದೂರಕ್ಕೆ ಅಗತ್ಯವಾದ ವೇಗವನ್ನು ನಿಗದಿಪಡಿಸಲು ಮಾಹಿತಿ ನೀಡಲಿದ್ದು, ಇದನ್ನು ಧ್ವನಿ ಮೂಲಕವೂ ಕೂಡ ತಿಳಿಸಲಿದೆ.

ಗೂಗಲ್ ಮ್ಯಾಪ್ ಕೂಡ ಧ್ವನಿ ಮೂಲಕ ಪ್ರತಿಕ್ರಿಯೆ ನೀಡಲಿದ್ದು, ಸ್ವಯಂ ಚಾಲಿತವಾಗಿ ಕಾರ್ಯನಿರ್ವಹಿಸಲಿದೆ. ವಾಹನ ದಟ್ಟಣೆ, ಟ್ರಾಫಿಕ್ ಜಾಮ್ ಇದ್ದರೆ ಧ್ವನಿ ಮೂಲಕ ಎಚ್ಚರಿಕೆ ನೀಡಿ ಪರ್ಯಾಯ ಮಾರ್ಗಕ್ಕೆ ಅನುಮತಿ ಕೇಳುತ್ತದೆ. ಯಸ್ ಅಥವಾ ನೋ ಎಂದು ಹೇಳಿದರೆ ಸಾಕು ಧ್ವನಿಯನ್ನು ಸ್ವೀಕರಿಸಿ ಸಲಹೆ ನೀಡಲಿದೆ. ಮೊಬೈಲ್‍ ಅನ್ನು ಕಾರಿನ ಡಿವೈಸ್‍ ಗೆ ಕನೆಕ್ಟ್ ಮಾಡಿದರೆ ಇಡೀ ಮೊಬೈಲ್ ಡಿವೈಸ್‍ಗ ಗೆ ಶಿಫ್ಟ್ ಆಗಲಿದೆ. ಜೊತೆಗೆ ಧ್ವನಿ ಮೂಲಕವೇ ಚಾಲಕರೊಂದಿಗೆ ಸಂವಹನ ಮಾಡಲಿದೆ.

ಹಾಡು ಪ್ಲೇ: ಯಾರಿಗಾದರೂ ಕರೆ ಮಾಡಬೇಕಾದರೆ ಡಯಲ್ ಲಿಸ್ಟ್ ಒಟನ್ ಒತ್ತಿ ಹೆಸರೇಳಿದರೆ ಅವರ ಹೆಸರಿನ ನಂಬರ್‍ ಗೆ ಕರೆ ಹೋಗಲಿದೆ. ಮ್ಯೂಸಿಕ್ ಪ್ಲೇ ಆಪ್ ಕೂಡ ಧ್ವನಿ ಮೂಲಕ ಪ್ರತಿಕ್ರಿಯೆ ನೀಡಲಿದೆ. ಹಾಡಿನ ಹೆಸರೇಳಿದರೆ ಅದರಲ್ಲಿ ಇರುವ ಹಾಡು ಪ್ಲೇ ಆಗುತ್ತದೆ. ಎಲ್ಲಾ ಆ್ಯಪ್‍ಗಳೂ ಕೂಡ ಧ್ವನಿ ಮೂಲಕವೂ ಕಾರ್ಯನಿರ್ವಹಿಸುವುದು ಇದರ ವಿಶೇಷತೆಯಾಗಿದೆ.

ಈ ಡಿವೈಸ್‍ ನಲ್ಲಿ ಅಳವಡಿಸಿರುವ ತಂತ್ರಜ್ಞಾನ ಸಂಪೂರ್ಣ ಮಹೀಂದ್ರಾ ಕಂಪನಿಯದ್ದೇ ಆಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಮಹೀಂದ್ರಾ ಟೆಕ್‍ ನ ಸಲಹೆಗಳನ್ನು ಪಡೆದುಕೊಂಡು ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದೆ. ಮುಂಚೂಣಿ ಬ್ರ್ಯಾಂಡ್‍ ನ ಮೊಬೈಲ್‍ಗಳನ್ನು ಕಾರಿನ ಡಿವೈಸ್‍ಗೆ ಕನೆಕ್ಟ್ ಮಾಡಿ ಈ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ