ಗೌರಿ ಪ್ರಕರಣ: ಸಿಬಿಐಗೆ ನೀಡಲು ಸರ್ಕಾರ ಸಿದ್ಧ..?

Kannada News

07-09-2017

ಬೆಂಗಳೂರು: ಕುಟುಂಬದವರು ಒತ್ತಾಯ ಮಾಡಿದರೆ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಲು ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವ ವಿಚಾರದಲ್ಲಿ ಸರ್ಕಾರ ಮುಕ್ತವಾಗಿದೆ ಎಂದರು.

ಸಿಬಿಐ ತನಿಖೆಗೆ ವಹಿಸುವುದೇ ಇಲ್ಲ ಎಂದು ನಾವು ಹೇಳಿಲ್ಲ. ಕುಟುಂಬದವರು ಒತ್ತಾಯ ಮಾಡಿದರೆ ವಹಿಸುವುದಾಗಿ ಹೇಳಿದ್ದೇನೆ. ಕುಟುಂಬದವರ ಜೊತೆ ನಿನ್ನೆ ಈ ಬಗ್ಗೆ ಮಾತನಾಡಿದ್ದೇನೆ‌ ಎಂದರು. ತಮ್ಮ ಪತ್ರಿಕೆಯಲ್ಲಿ ಗೌರಿ ಅವರು ಸಂಘ ಪರಿವಾರದ ಅವಹೇಳನ ಮಾಡದೇ ಹೋಗಿದ್ದರೆ ಹತ್ಯೆ ಆಗುತ್ತಿರಲಿಲ್ಲ ಎಂಬ ಶಾಸಕ ಜೀವರಾಜ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಶಾಸಕರ ಈ ಹೇಳಿಕೆಯ ಅರ್ಥವೇನು ? ಹತ್ಯೆ ಹಿಂದೆ ಯಾರಿದ್ದಾರೆ ಎಂಬುದು ಇದರಿಂದ ಅರ್ಥ ಆಗುವುದಿಲ್ಲವೇ ? ಎಂದರು.

ಇನ್ನು ಮಂಗಳೂರಿನಲ್ಲಿ ಬಿಜೆಪಿಯವರು ಸಮಾವೇಶ ನಡೆಸಿದರೆ ತಕರಾರು ಇಲ್ಲ. ಆದರೆ ಬೈಕ್ ರ‍್ಯಾಲಿಗೆ ಅವಕಾಶ ನೀಡುವುದಿಲ್ಲ, ಬೈಕ್ ರ‍್ಯಾಲಿ ಮೂಲಕ, ಬಿಜೆಪಿ ಸಮಾಜದ ಶಾಂತಿ ಮತ್ತು ಸಾಮರಸ್ಯ ಹಾಳು ಮಾಡಲು ಹೊರಟಿದೆ. ನಾವು ಶಾಂತಿ, ಸಾಮರಸ್ಯ ಕಾಪಾಡುವವರು ಎಂದು ಹೇಳಿದರು.

ಮಂಗಳೂರು ನಗರದಲ್ಲಿ ಜಾಥಾ ನಡೆಸುವುದಾಗಿ ಬಿಜೆಪಿಯವರು ಮೊದಲೇ ಹೇಳಿದ್ದರೆ ಒಪ್ಪಿಗೆ ನೀಡುತ್ತಿದ್ದೆವು. ಬಿಜೆಪಿಯವರು ಅನುಮತಿ ಪಡೆದು ಜಾಥಾ, ಪಾದಯಾತ್ರೆ ಮಾಡಲಿ. ಆದರೆ, ಬೈಕ್ ರ‍್ಯಾಲಿ ಬೇಡ ಎಂದರು.  ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಗಳಿಸಲಿದೆ ಎಂದು ‘ಸಿ ಫೋರ್’ ಸಂಸ್ಥೆ ಸಮೀಕ್ಷೆ ಈಗಾಗಲೇ ಹೇಳಿದೆ. ಜನರನ್ನು ದಾರಿ ತಪ್ಪಿಸಲು ಈಗ ಕಾಪ್ಸ್ ಸಂಸ್ಥೆ ಹೆಸರಲ್ಲಿ ಸಮೀಕ್ಷಾ ವರದಿ ಬಿಡುಗಡೆ ಮಾಡಿಸಲಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ