ಮೈಸೂರಲ್ಲಿ ಮತ್ತೊಂದು ಅಮಾನವೀಯ ಘಟನೆ !

Kannada News

07-09-2017

ಮೈಸೂರು: ರಾಜ್ಯದ ಸಾಂಸ್ಕೃತಿಕ ನಗರಿ ಮೈಸೂರಿಗೆ ಈ ಬಾರಿ ಸ್ವಚ್ಛ ನಗರಿಯ ಗರಿ ಕೈ ತಪ್ಪಿದೆ. ಈ ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ಇನ್ನಷ್ಟು ಮುತುವರ್ಜಿ ವಹಿಸಿ ನಗರ ಸ್ವಚ್ಛತೆ, ಪೌರಕಾರ್ಮಿಕರ ರಕ್ಷಣೆಯಲ್ಲಿ ತೊಡಗಿಸಿಕೊಳ್ಳುತ್ತದೆ ಎಂದು ತಿಳಿದುಕೊಂಡರೆ ಅದಕ್ಕಿಂತ ಮೂರ್ಖತನ ಮತ್ತೊಂದಿಲ್ಲ. ಪೌರ ಕಾರ್ಮಿಕರ ಆರೋಗ್ಯದ ಹಿತದೃಷ್ಟಿಯಿಂದ ಯಾವುದೇ ಭದ್ರತೆಯ ವ್ಯವಸ್ಥೆ ಕಲ್ಪಿಸದೆ ಒಳಚರಂಡಿಯನ್ನು ಬರಿಗೈನಿಂದಲೇ ಸ್ವಚ್ಛಗೊಳಿಸುವ ಕಾರ್ಯ ನಡೆಯುತ್ತಲೇ ಇದೆ ಎಂಬುದಕ್ಕೆ ಪುಷ್ಠಿ ನೀಡುವಂತೆ ಪೌರಕಾರ್ಮಿಕರೋರ್ವರು ಬರಿಗೈಯಲ್ಲಿ ಮ್ಯಾನ್ ಹೋಲ್ ಸ್ಛಚ್ಚಗೊಳಿಸಿರುವ ಸಂಗತಿ ಮರುಕಳಿಸಿದೆ. ಇದು  ಅಮಾನವೀಯತೆಯ ಜ್ವಲಂತ ನಿದರ್ಶನವಾಗಿದ್ದು, ಸಾಂಸ್ಕೃತಿಕ ನಗರಿಯ ಜನತೆಯನ್ನು ತಲೆ ತಗ್ಗಿಸುವಂತೆ ಮಾಡಿದೆ.

ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ಜೆ.ಪಿ.ನಗರದ ಅಕ್ಕಮಹಾದೇವಿ ರಸ್ತೆಯಲ್ಲಿ ಕಳೆದ ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಒಳಚರಂಡಿಗಳು ಕಟ್ಟಿಕೊಂಡಿದ್ದವು, ಹೀಗಾಗಿ ಪೌರಕಾರ್ಮಿಕ ಶ್ರೀನಿವಾಸ್ ಅವರನ್ನು ಸ್ವಚ್ಛಗೊಳಿಸುವಂತೆ ಕಳುಹಿಸಲಾಗಿದೆ. ಆದರೆ ಅವರು ಕೈಗೆ ಗ್ಲೌಸ್ ಏನನ್ನೂ ಬಳಸದೇ ಬರಿಗೈನಿಂದಲೇ ಒಳಚರಂಡಿಯನ್ನು ಸ್ವಚ್ಛಗೊಳಿಸುತ್ತಿರುವುದು ಕಂಡು ಬಂದಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮೈಸೂರು ಮಹಾನಗರ ಪಾಲಿಕೆ ಇನ್ಸ್ ಪೆಕ್ಟರ್ ಶಿವಕುಮಾರ್ ಎಂಬವರು ಒಳಚರಂಡಿ ಸ್ವಚ್ಛಗೊಳಿಸಲು ಹೇಳಿದ್ದಾರೆ. ಆದರೆ ಶ್ರೀನಿವಾಸ್ ಅವರಿಗೆ ಪಾಲಿಕೆಯ ವತಿಯಿಂದ ಆರೋಗ್ಯದ ಹಿತದೃಷ್ಟಿಯಿಂದ ಯಾವುದೇ ಕಾಳಜಿ ವಹಿಸುವಂತಹ ಪರಿಕರಗಳನ್ನು ನೀಡಿಲ್ಲ. ಅವರೂ ಎಲ್ಲರಂತೆ ಮನುಷ್ಯರು. ಮಾನವೀಯ ನೆಲೆಯಲ್ಲಾದರೂ ಅವರಿಗೆ ಕೈಗೆ ಧರಿಸಲು ಗ್ಲೌಸ್ ಗಳನ್ನು ನೀಡಬಹುದಾಗಿತ್ತು ಎಂಬ ಮಾತುಗಳು ಇದೀಗ ಕೇಳಿ ಬಂದಿವೆ.

ಈ ಹಿಂದೆ ಚಾಮುಂಡಿ ಬೆಟ್ಟದ ಗ್ರಾಮಪಂಚಾಯತ್ ವ್ಯಾಪ್ತಿಗೆ ಸೇರಿದ ಮ್ಯಾನ್ ಹೋಲ್ ನಲ್ಲಿ ಪೌರಕಾರ್ಮಿಕರೋರ್ವರನ್ನು ಇಳಿಸಿ ಸ್ವಚ್ಛಗೊಳಿಸಲಾಗಿತ್ತು. ಪರಿಣಾಮ ಚಾಮುಂಡಿಬೆಟ್ಟದ ಗ್ರಾಮಪಂಚಾಯ್ತಿ ಅಧ್ಯಕ್ಷೆಯವರನ್ನು ವಜಾಗೊಳಿಸಲಾಗಿತ್ತು. ಆ ಘಟನೆ ಮಾಸುವ ಮುನ್ನವೇ ಮೈಸೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿಯೇ ಇಂತಹದೊಂದು ಅಮಾನವೀಯ ಘಟನೆ ನಡೆದಿರುವುದು ವಿಪರ್ಯಾಸವೆನಿಸಿದೆ. ಪಾಲಿಕೆಯಲ್ಲಿ ಒಳಚರಂಡಿ ಸ್ವಚ್ಛಗೊಳಿಸಲು ಮೆಶಿನ್ ಗಳಿದ್ದರೂ ಅವುಗಳನ್ನು ಬಳಸದೇ ಈ ರೀತಿ ಬರಿಗೈನಲ್ಲಿ ಸ್ವಚ್ಛಗೊಳಿಸುವುದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ