ಹೊಸ ಪೀಳಿಗೆಯ ಓಟ, ನೋಟ, ಕಾಟ…

Kannada News

06-09-2017 818

ಇತ್ತೀಚಿನ ವರ್ಷಗಳಲ್ಲಿ ಅಪ್ಪ ಅಮ್ಮಂದಿರು, ಹಿರಿಯರು, ಶಿಕ್ಷಕರು ಮತ್ತು ಬಹುತೇಕ ಕಚೇರಿ ಹಾಗೂ ಕಂಪನಿಗಳ ಮುಖ್ಯಸ್ಥರು, ಪದೇ ಪದೇ ಒಂದು ಆರೋಪ ಮಾಡುತ್ತಿರುತ್ತಾರೆ. ‘ನಾವೆಲ್ಲಾ ಹೀಗಿರಲಿಲ್ಲಪ್ಪ, ಇತ್ತೀಚಿನ ಪೀಳಿಗೆ ಹುಡುಗರನ್ನು ನಿಭಾಯಿಸೋದು, ಅವರತ್ರ ಕೆಲಸ ಮಾಡ್ಸೋದು ಭಾರಿ ಕಷ್ಟ’ ಅನ್ನುತ್ತಿರುತ್ತಾರೆ. ಈ ರೀತಿಯ ಮಾತುಗಳು, ಸಮಾಜದ ಇನ್ನೂ ಹಲವು ವಲಯಗಳಲ್ಲಿ ಮತ್ತೆ ಮತ್ತೆ ಕೇಳಿ ಬರುತ್ತಲೇ ಇರುತ್ತದೆ.  

ಹೌದು, ಈ ಹೊಸ ಪೀಳಿಗೆಯ ಜನರು, ಸಮಾಜಕ್ಕೆ ಹೊಸ ಸಮಸ್ಯೆಯಾಗಿ ಕಂಡುಬರುತ್ತಿದ್ದಾರೆ. ಯಾವುದು ಈ ಹೊಸ ಪೀಳಿಗೆ? ಅಥವ ಜನರೇಷನ್ ಎಂದು ಕೇಳಿದರೆ, ಇದು ಮಿಲೇನಿಯಲ್ಸ್ (Millennials) ಅಥವ ಸಹಸ್ರಮಾನಿಗಳು ಎಂದು ಕರೆಯಲ್ಪಡುವವರ ಜನರೇಷನ್.

ಸರ್ವೇಸಾಮಾನ್ಯವಾಗಿ, 1982ರಿಂದ ಈಚೆಗೆ ಜನಿಸಿದವರೆಲ್ಲರನ್ನೂ Y ಜನರೇಷನ್ನಿನವರು ಅಥವ ಮಿಲೇನಿಯಲ್ಸ್ ಎಂದು ಕರೆಯಲಾಗುತ್ತದೆ. ಇವರು Y ಆದರೆ, X  ಮತ್ತು z ಯಾರು ಅಂತ ಕೇಳ್ತೀರೇನು? ಹೌದು ಸ್ವಾಮಿ ಅವರೂ ಇದ್ದಾರೆ.  20ನೇ ಶತಮಾನದ ಆರಂಭದಲ್ಲಿ ಹುಟ್ಟಿದ ಜನರಿಂದ ಹಿಡಿದು, ಇವತ್ತಿನ ಅಂದರೆ, 21ನೇ ಶತಮಾನದವರೆಗೂ ಹುಟ್ಟಿರುವ ಜನರನ್ನು, ವಿವಿಧ ಪೀಳಿಗೆಯ ಜನರೆಂದು ವಿಂಗಡಿಸಲಾಗಿದೆ.  

1901ರಿಂದ 1924ರ ವರೆಗೆ ಹುಟ್ಟಿದವರನ್ನು Greatest Generation ಅಂದರೆ, ಮಹಾಪೀಳಿಗೆಯ ಜನರು ಎಂದು ಕರೆಯಲಾಗುತ್ತದೆ. ಇವರೆಲ್ಲಾ ಎರಡನೇ ಮಹಾಯುದ್ಧದ ಕಾಲದಲ್ಲಿ ಹರೆಯದಲ್ಲಿದ್ದವರು, ಹೋರಾಡಿದವರು. ಆನಂತರದ ವರ್ಷಗಳಲ್ಲಿ ಅಂದರೆ, 1925ರಿಂದ 1945ರ ವರೆಗೂ ಹುಟ್ಟಿದವರನ್ನು Silent Generation ಎಂದು ಕರೆಯುತ್ತಾರೆ. ಇದು, ತಮ್ಮಪಾಡಿಗೆ ತಾವು ತೆಪ್ಪಗಿದ್ದು, ಕಷ್ಟಪಟ್ಟು ದುಡಿದವರ ಪೀಳಿಗೆ, ಹೀಗಾಗಿ ಸೈಲೆಂಟ್ ಜನರೇಷನ್ ಎಂದು ಕರೆಯಲಾಗಿದೆ. ಇದಾದ ಮೇಲೆ, 1946ರಿಂದ 1964ರ ವರೆಗೂ ಹುಟ್ಟಿದ ಜನರನ್ನು Baby Boomers ಅಂದರೆ, ಹೆಚ್ಚು ಮಕ್ಕಳನ್ನು ಪಡೆದವರು ಎಂದು ಕರೆಯಲಾಗುತ್ತದೆ. ಆನಂತರ, 1965ರಿಂದ 1982ರವರೆಗೆ ಹುಟ್ಟಿದವರನ್ನು x ಜನರೇಷನ್ನಿನವರು ಎಂದು ಕರೆಯಲಾಗುತ್ತದೆ. ಇನ್ನೂ ಮುಂದುವರಿದಂತೆ 1982ರಿಂದ-1995ರ ವರೆಗೂ ಹುಟ್ಟಿದವರನ್ನು ಮಿಲೆನಿಯಲ್ಸ್ (Millennials) ಅಥವ Y ಜನರೇಷನ್ನಿನವರು ಎಂದು ಕರೆಯಲಾಗುತ್ತದೆ. 1995ರ ನಂತರ ಹುಟ್ಟಿದವರನ್ನು z ಜನರೇಷನ್ನಿನವರು ಎಂದು ಕರೆಯುತ್ತಾರೆ.

1991ರಲ್ಲಿ ಕೆನಡಾದ ಬರಹಗಾರ 'douglas coupland'  ಅವರು 'generation X: Tales for an Accelerated culture' ಎಂಬ  ಪುಸ್ತಕ ಬಿಡುಗಡೆ ಮಾಡಿದ ನಂತರ, ಈ x ಜನರೇಷನ್ ಅನ್ನುವುದು,  ಆಧುನಿಕವಾದ ವ್ಯಾಖ್ಯಾನ ಪಡೆಯಿತು. ಈ Y ಜನರೇಷನ್ನಿನವರು ಅಥವ ಮಿಲೇನಿಯಲ್‌ಗಳನ್ನು ‘Echo Boomers’ ಎಂದೂ ಕರೆಯುತ್ತಾರೆ. ಏಕೆಂದರೆ, ಇವರು ಹಿಂದೆ 1946ರಿಂದ 1964ರ ವರೆಗೂ ಹುಟ್ಟಿದ Baby Boomers ಎಂದು ಕರೆಯಲ್ಪಡುವ ಜನರ ಪ್ರತಿಫಲನ ಅಂದರೆ, ಮಕ್ಕಳು.

ಈ Y ಜನರೇಷನ್ನಿನವರ ಬಗ್ಗೆ, ಅವರ ನಡವಳಿಕೆಗಳ ಬಗ್ಗೆ, ರೀತಿ ನೀತಿಗಳ ಬಗ್ಗೆ, ಇವರಿಗಿಂತ ಹಿರಿಯರಾದ X ಜನರೇಷನ್‌ ನವರು ಹಲವು ರೀತಿಯ ಆರೋಪಗಳನ್ನು ಮಾಡುತ್ತಾರೆ. ಆದರೆ, ಅಂತಹ ಬಹುತೇಕ ಆರೋಪಗಳೆಲ್ಲವೂ ಸತ್ಯ ಅನ್ನುವುದು ತಜ್ಞರ ವಿಶ್ಲೇಷಣೆಯೂ ಹೌದು.

ಈ Y ಜನರೇಷನ್ ಅಥವ ಮಿಲೇನಿಯಲ್ಸ್‌ ಅಥವ ಸಹಸ್ರಮಾನಿಗಳು, ಹಿರಿಯರು ಹೇಳುವ ಮಾತುಗಳನ್ನೇ ಪೂರ್ಣವಾಗಿ ಕೇಳಿಸಿಕೊಳ್ಳುವಷ್ಟು ತಾಳ್ಮೆ ಇಲ್ಲದಂಥವರು. ಈ ಪೀಳಿಗೆಯ ಹುಡುಗ ಹುಡುಗಿಯರು, ಸಾಮಾನ್ಯ ಪಟ್ಟಿಗಂತೂ, ಹಿರಿಯರ ಮಾತನ್ನು ಪಾಲಿಸುವುದು ದೂರದ ಮಾತು.

ದೊಡ್ಡವರು ಅಥವ ಮೇಲಧಿಕಾರಿಗಳು ತಮ್ಮ ಮಾತಿನ ಮೊದಲ ವಾಕ್ಯವನ್ನು ಪೂರೈಸುವ ಮೊದಲೇ, ಇವರು ಮಧ್ಯದಲ್ಲಿ ಬಾಯಿ ಹಾಕುತ್ತಾರೆ, ಅವರು ಹೇಳುತ್ತಿರುವುದನ್ನು ಸರಿಯಾಗಿ ಗಮನಕ್ಕೇ ತೆಗೆದುಕೊಳ್ಳದೆ ಅನ್ನುತ್ತಾರೆ, ಮತ್ತೇನನ್ನೋ ಹೇಳುತ್ತಿರುತ್ತಾರೆ. ಅರ್ದಂಬಂರ್ಧ ಕೇಳಿಸಿಕೊಂಡು , ok ok , ಆಯ್ತು ಆಯ್ತು ಅನ್ನುತ್ತಿರುತ್ತಾರೆ. ಸ್ವಲ್ಪ ಹೊತ್ತಿನಲ್ಲೇ ಮತ್ತೆ ಬಂದು, ಅದೇ ವಿಚಾರವನ್ನು ಕೇಳಿ ತಲೆತಿನ್ನುತ್ತಾರೆ.

ಹಿರಿಯರು, ಮೇಲಧಿಕಾರಿಗಳು ಇವರನ್ನು ಉದ್ದೇಶಿಸಿ ಮಾತನಾಡುತ್ತಿದ್ದರೆ, ಇವರು ಮಾತ್ರ, ತಮ್ಮ ಮೊಬೈಲ್ ಫೋನ್ ನಲ್ಲಿ ಯಾರಿಗೋ ಟೆಕ್ಸ್ಟ್ ಮೆಸೇಜ್ ಕಳಿಸುತ್ತಿರುತ್ತಾರೆ, ಫೇಸ್ ಬುಕ್‌ ನಲ್ಲಿ ಮೈ ಮರೆತಿರುತ್ತಾರೆ. ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯನ್ನು ಆಧರಿಸಿ, ಈ ಮಿಲೇನಿಯಲ್ ಗಳ ವ್ಯಕ್ತಿತ್ವ, ಒಂದು  ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವ್ಯತ್ಯಾಸವಾಗುತ್ತಾ ಹೋಗುತ್ತದೆ.

ಒಂದು ರೀತಿಯಲ್ಲಿ, ಸಕಲ ಕಲಾ ವಲ್ಲಭರಾಗಿರುವ ಈ ಮಿಲೇನಿಯಲ್‌ಗಳು, ಅವರಿಂದ ಏನನ್ನು ನಿರೀಕ್ಷೆ ಮಾಡಲಾಗುತ್ತದೋ ಅದನ್ನುಬಿಟ್ಟು, ಬೇರೆ ಎಲ್ಲವನ್ನೂ ಮಾಡುತ್ತಾರೆ. ಸೋಷಿಯಲ್ ಜನರೇಷನ್ ಎಂದು ಕರೆಯುವ ಪೀಳಿಗೆಯ ಮೊದಲ ತಲೆಮಾರಿನ ಸದಸ್ಯರಾದ ಇವರು, ಸಾಮಾಜಿಕ ಜಾಲ ತಾಣಗಳ ಆರಂಭಿಕ ಅನುಭವಿಗಳು. ಇವರು, ಯಾವಾಗಲೂ ಆನ್‌ ಲೈನ್ ಅಥವ ತಮ್ಮ ಸ್ಮಾರ್ಟ್ ಫೋನ್ ಮೂಲಕ, ಫೇಸ್ ಬುಕ್, ಇನ್ಸ್‌ಟಾಗ್ರಾಮ್, ಟ್ವಿಟ್ಟರ್ ಇತ್ಯಾದಿ  ಸಾಮಾಜಿಕ ಜಾಲ ತಾಣಗಳಲ್ಲಿ ಸಕ್ರಿಯರಾಗಿರುವವರು. ನಗರ ಪ್ರದೇಶಗಳಲ್ಲಿ ಮಾತ್ರ ಜೀವನ ನಡೆಸಲು ಬಯಸುವ ಈ ಮಿಲೇನಿಯಲ್‌ಗಳು ಅಥವ Y  ಜನರೇಷನ್ನಿನ ಸದಸ್ಯರು, ಏನೇ ಹೇಳಿದರೂ ಕೂಡ, ಅದೆಲ್ಲದಕ್ಕೂ ವೈ ಎಂದು ಪ್ರಶ್ನಿಸುವವರು. ಇವರು, ತಮ್ಮ ಮನೆಯಲ್ಲಿರುವವರ ಜೊತೆ, ನೆರೆಹೊರೆಯವರ ಜೊತೆ ವ್ಯವಹರಿಸುವುದರ ಬದಲಿಗೆ, ದೂರದ ಜಗತ್ತಿನಲ್ಲಿರುವವರ ಜೊತೆಯೇ ಹೆಚ್ಚು ಸ್ನೇಹ, ಸಂಪರ್ಕ ಇಟ್ಟುಕೊಳ್ಳುವಂಥವರು.

ಎಂಬತ್ತರ ದಶಕದಲ್ಲಿ ಹುಟ್ಟಿದ ಈ ಮಿಲೇನಿಯಲ್‌ ಗಳು, ಅಥವ ಸಹಸ್ರಮಾನಿಗಳು ತಮಗೆ  ಬೇಕು ಅನ್ನಿಸಿದ್ದೆಲ್ಲವೂ ತಕ್ಷಣವೇ ಸಿಗುವಂಥ ವ್ಯವಸ್ಥೆಯಲ್ಲಿ ಬೆಳೆದವರು. ಬಟ್ಟೆ ಬೇಕೇ, ಶೂ ಬೇಕೇ, ಫೋನ್ ಬೇಕೇ ಅಂಗಡಿಗೆ ಹೋಗುವ ಅವಶ್ಯಕತೆಯೇ ಇಲ್ಲ, ಯಾವುದು ಬೇಕೋ ಅದನ್ನು ಯಾವಾಗ ಬೇಕೋ ಆವಾಗೆಲ್ಲಾ ಅಮೆಜಾನ್, ಫ್ಲಿಪ್ ಕಾರ್ಟ್‌ ಇತ್ಯಾದಿಗಳಲ್ಲಿ ಪಡೆದುಕೊಳ್ಳುವ ಅವಕಾಶ ಇವರಿಗೇ ತುಂಬಾ ಬೇಗ ಸಿಕ್ಕಿದ್ದು.

ಸಿನಿಮಾ ನೋಡಬೇಕು ಅನ್ನಿಸಿದರೂ ಕೂಡ, ಯಾವ ಸಿನಿಮಾ, ಯಾವ ಥಿಯೇಟರ್, ಯಾವ ಶೋ ಎಂದು ತಲೆಕೆಡಿಸಿಕೊಳ್ಳುವ ಅಗತ್ಯವೇ ಈ ಮಿಲೇನಿಯಲ್‌ಗಳಿಗೆ ಇರಲಿಲ್ಲ. ತಮಗೆ ಬೇಕು ಅನ್ನಿಸಿದಾಗಲೆಲ್ಲಾ ಇಂಟರ್ ನೆಟ್ ನಲ್ಲಿ ಸಿನಿಮಾ ನೋಡುತ್ತಾ ಬೆಳೆದವರು ಇವರು.  ಹಿಂದಿನವರ ಹಾಗೆ, ತಮ್ಮ ನೆಚ್ಚಿನ ಧಾರಾವಾಹಿ ನೋಡಲು ಟಿವಿ ಮುಂದೆ ಕಾಯ್ದು ಕುಳಿತುಕೊಳ್ಳಬೇಕಾದ ಅನಿವಾರ್ಯತೆಯೂ ಈ ಮಿಲೇನಿಯಲ್‌ ಗಳಿಗೆ ಇರಲಿಲ್ಲ. ಆ್ಯಪ್  ಗಳ ಸಹಾಯದಿಂದ, ಯಾವುದೇ ಟೈಮ್‌ನಲ್ಲಿ ಯಾವುದೇ ಧಾರಾವಾಹಿ ನೋಡುವ ಸೌಭಾಗ್ಯ ಈ ಮಿಲೇನಿಯಲ್‌ ಗಳಿಗೆ ಸಿಕ್ಕಿತ್ತು. ಇಡೀ ವಾರದ ಎಲ್ಲಾ ಸಂಚಿಕೆಗಳನ್ನೂ ಒಂದೇ ಬಾರಿ ನೋಡಿ ಮಜಾಹೊಡೆಯುವಂಥ ಅನುಕೂಲವೂ ಈ ಮಿಲೇನಿಯಲ್ ಗಳಿಗೇ ಮೊದಲು ದಕ್ಕಿದ್ದು.

ಇಂಥಹ ಮಿಲೇನಿಯಲ್‌ಗಳು ಅಥವ ಸಹಸ್ರಮಾನಿಗಳ ಜೊತೆ ಬದುಕುವುದು, ಕೆಲಸ ಮಾಡುವುದು, ಇವರೊಂದಿಗೆ ವ್ಯವಹರಿಸುವುದು ಇವರನ್ನು ನಿಯಂತ್ರಿಸುವುದು ಅತ್ಯಂತ ಕಷ್ಟದಾಯಕವಾದ ವಿಚಾರ ಅನ್ನುವುದನ್ನು ಬಹುತೇಕರು ಒಪ್ಪುತ್ತಾರೆ.

ಈ ಮಿಲೇನಿಯಲ್‌ಗಳು ತಮಗೆ ಆರಾಮವಾಗಿ ಕೂರಲು ಬೀನ್ ಬ್ಯಾಗ್ ನಂಥ ಆಸನಗಳು ಬೇಕು, ಸಾಧ್ಯವಾದರೆ ಉಚಿತ ಊಟವೂ ಸಿಗಬೇಕು ಎಂದು ಬಯಸುತ್ತಾರೆ. ಇಷ್ಟಾದರೂ ಇವರಲ್ಲಿ, ಸಂತೋಷ ಮತ್ತು ಸಮಾಧಾನದ ಅಂಶಗಳು ತುಂಬಾ ಕಡಿಮೆ ಅನ್ನುವುದು ವಿಶ್ಲೇಷಕರ ಅಭಿಪ್ರಾಯ.

ಮಿಲೇನಿಯಲ್ಸ್ ಎಂದು ಕರೆಸಿಕೊಳ್ಳುವ ಈ ಪೀಳಿಗೆಯಲ್ಲಿ ಹುಟ್ಟಿದವರೆಲ್ಲಾ,  ತಮ್ಮ ತಂದೆ ತಾಯಿಗಳಿಂದ ‘ನೀನು ತುಂಬಾ ಸ್ಪೆಷಲ್’ ಎಂದು ಹೇಳಿಸಿಕೊಂಡು ಬೆಳೆದವರು. ಇವರು, ಯಾವುದೇ ಕೊರತೆಯಿಲ್ಲದೆ, ತಮಗೆ ಏನೆಲ್ಲಾ ಬೇಕೋ ಅದನ್ನೆಲ್ಲಾ ಪಡೆದುಕೊಂಡೇ ಬೆಳೆದವರು. ಕಷ್ಟಪಟ್ಟು ತಯಾರಿ ಮಾಡದ ಕಾರಣ, ಸ್ಪರ್ಧೆಯಲ್ಲಿ ಕೊನೇ ಸ್ಥಾನ ಪಡೆದರೂ ಕೂಡ, ಪಾರ್ಟಿಸಿಪೇಷನ್ ಮೆಡಲ್ ಹೆಸರಿನಲ್ಲಿ, ಕೊರಳಿಗೆ ಪದಕ ಹಾಕಿಸಿಕೊಂಡು ಖುಷಿಪಟ್ಟವರು.

ಹೀಗಾಗಿ, ಕೆಲವು ವಿಶ್ಲೇಷಕರು ಈ ಮಿಲೇನಿಯಲ್‌ಗಳನ್ನು ‘Failed Parenting Strategy’ಯಲ್ಲಿ ಬೆಳೆದವರು ಅನ್ನುತ್ತಾರೆ. ಹಾಗಂದರೆ, ಇವರನ್ನು ಸರಿಯಾಗಿ ಬೆಳೆಸುವಲ್ಲಿ, ತಂದೆ ತಾಯಿಗಳ ಯೋಜನೆ ಯೋಚನೆಗಳು, ವಿಫಲವಾದ ಸಂದರ್ಭದಲ್ಲಿ ಬೆಳೆದು ಬಂದವರು ಎಂದು ಅರ್ಥ.

ಇವರಲ್ಲಿ ಬಹುತೇಕರು ಯಾವುದೇ ಸ್ಪಷ್ಟ ಗುರಿಯಿಲ್ಲದವರು ಮತ್ತು ಸ್ವಪ್ರೇಮ, ಸ್ವಾನುಕಂಪವನ್ನು ಬೆಳೆಸಿಕೊಂಡಿರುವವರು. ಮುಂದಕ್ಕೆ ಇಂಥವರ ಜೊತೆ ನಾವು ವ್ಯವಹರಿಸಬೇಕಾಗಿದೆಯಲ್ಲಾ ಎಂಬ ಕಾರಣಕ್ಕಾಗಿ, ದೇಶಗಳ ನಾಯಕರು, ರಾಜಕಾರಣಿಗಳು ನೀವು ಏನುಮಾಡಲು ಬಯಸುತ್ತೀರಿ ಎಂದು ಇವರನ್ನು ಕೇಳಿದಾಗ, ‘ನಾವು ಇಂಪ್ಯಾಕ್ಟ್ ಅಂದರೆ, ಮಹತ್ತರವಾದ ಪರಿಣಾಮ ಉಂಟುಮಾಡಲು ಇಷ್ಟಪಡುತ್ತೇವೆ’ ಎಂದು ಇವರು ಹೇಳುತ್ತಾರೆ. ಆದರೆ, ಇವರಿಗೆ ಯಾವ ಇಂಪ್ಯಾಕ್ಟ್, ಎಂಥ ಇಂಪ್ಯಾಕ್ಟ್, ಎಲ್ಲಿ ಇಂಪ್ಯಾಕ್ಟ್  ಎಂಬುದೇ ಗೊತ್ತಿರುವುದಿಲ್ಲ.

ಈ ಮಿಲೇನಿಯಲ್‌ಗಳು ಒಂದು ಡಿಪ್ಲೋಮ ಅಥವ ಡಿಗ್ರಿ ಸರ್ಟಿಫಿಕೇಟ್ ಹಿಡಿದುಕೊಂಡು, ಯಾವುದೋ ಒಂದು ಸಂಸ್ಥೆಗೆ ಸೇರಿಬಿಡುತ್ತಾರೆ. ಅಲ್ಲಿ ಸೇರಿದ ಕೆಲವೇ ದಿನಗಳಲ್ಲಿ, ಇವರಿಗೆ ಬದುಕಿನ ವಾಸ್ತವ ಅರ್ಥವಾಗುತ್ತದೆ. ಇಲ್ಲಿ ತಮ್ಮನ್ನು ಸಹಿಸಲು, ಓಲೈಸಲು, ಸಮಾಧಾನ ಮಾಡಲು ಅಪ್ಪ ಅಮ್ಮ ಜೊತೆಯಲ್ಲಿಲ್ಲ ಅನ್ನುವುದು ಅರಿವಾಗುತ್ತದೆ. ಅದರ ಜೊತೆಗೆ, ನಮ್ಮ ಅಪ್ಪ ಅಮ್ಮ ಹೇಳುತ್ತಿದ್ದ ಹಾಗೆ, ನಾವೇನೂ ಅಂಥ ಸ್ಪೆಷಲ್ ಅಲ್ಲ, ಅನ್ನುವ ಸತ್ಯವೂ ನಿಚ್ಚಳವಾಗುತ್ತದೆ. ಇಂಥವರಲ್ಲಿ ಬಹುತೇಕರ ಸಾಧನೆಯೂ ಕಳಪೆ ಆಗಿದ್ದು, ಆ ಬಗ್ಗೆ ಸಂಸ್ಥೆಯಲ್ಲಿ ಮಾತುಗಳನ್ನೂ ಕೇಳಿರುತ್ತಾರೆ. ಅದರಿಂದ, ಇವರ ಆತ್ಮಗೌರವಕ್ಕೂ ಧಕ್ಕೆಯಾಗುತ್ತದೆ.  ಹೀಗಾಗಿ, ಕೆಲಸಕ್ಕೆ ಸೇರಿದ ಒಂದೆರಡು ತಿಂಗಳಿನಲ್ಲೇ ಕೆಲಸ ಬಿಡಲು ಮುಂದಾಗುತ್ತಾರೆ.

ಫೇಸ್‌ ಬುಕ್, ಇನ್ಸ್ಟಾಗ್ರಾಮ್, ವಾಟ್ಸಾಪ್, ಟ್ವಿಟ್ಟರ್ ಗಳ ಕಾಲದಲ್ಲಿ ಬೆಳೆದುಬಂದ ಇವರು, ಒಂದು ರೀತಿಯ ಸುಳ್ಳುಬುರುಕರು. ತಾವು ಖಿನ್ನತೆಯಿಂದ ಒದ್ದಾಡುತ್ತಿದ್ದರೂ, ಹೇಗಿದೆ ಜೀವನ? ಎಂದು ಯಾರಾದರೂ ಕೇಳಿದರೆ,  ಓಹ್ ಅಮೇಜಿಂಗ್, ಅದ್ಭುತವಾಗಿದೆ,  ಸೂಪರ್ ಆಗಿದೆ, ಜಿಂಗಾಲಾಲಾ ಆಗಿದೆ ಎಂದೆಲ್ಲಾ  ಬುರುಡೆ ಬಿಡುತ್ತಾ ತಿರುಗಾಡುತ್ತಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಸುಳ್ಳು ಬದುಕನ್ನು ಬದುಕುತ್ತಾ ಹೋಗುತ್ತಾರೆ. ಫೇಸ್ ಬುಕ್, ವಾಟ್ಸ್‌ಅಪ್‌ ಇತ್ಯಾದಿಗಳ ಮೂಲಕ ಹತ್ತಾರು ಸ್ನೇಹಿತರಿಗೆ ಹಾಯ್ ಹೇಳುತ್ತಾರೆ. ಯಾರಾದರೂ ಪ್ರತಿಕ್ರಿಯೆ ನೀಡಿದ್ದಾರಾ ಎಂದು ಮತ್ತೆ ಮತ್ತೆ ಪರೀಕ್ಷೆ ಮಾಡುತ್ತಾರೆ. ಯಾರಾದರೂ ಇವರಿಗೆ ಸ್ಪಂದಿಸಿದರೆ, ಇವರ ದೇಹದಲ್ಲಿ Dopamine ಎಂಬ ರಾಸಾಯನಿಕ ಬಿಡುಗಡೆಯಾಗುತ್ತದೆ, ಅದು, ಏನೋಒಂದುರೀತಿಯ ಉಲ್ಲಾಸಕ್ಕೆ ಕಾರಣವಾಗುತ್ತದೆ.  ಸಿಗರೇಟ್ ಸೇದಿದಾಗ, ಮದ್ಯಪಾನ ಮಾಡಿದಾಗಲೂ ಇಂಥದ್ದೇ ಸಂತೋಷವನ್ನು ಅನುಭವಿಸುತ್ತಾರೆ. ಆದರೆ, ಅವೆಲ್ಲವೂ ವ್ಯಸನಗಳು ಅನ್ನುವುದನ್ನು ಇವರು ಸರಿಯಾಗಿ ಅರ್ಥಮಾಡಿಕೊಂಡಿಲ್ಲ.

ಈ ಮಿಲೇನಿಯಲ್‌ ಗಳು ಚಿಕ್ಕವರಿದ್ದಾಗ, ಇವರು ಮಾಡಿದ್ದಕ್ಕೆಲ್ಲಾ, ಅವರ ತಂದೆ ತಾಯಿಗಳು, ಹೌದಪ್ಪಾ ಅದು ಸರಿ, ಕರೆಕ್ಟ್, ಗುಡ್, ಓಕೆ ಇತ್ಯಾದಿಗಳನ್ನು ಹೇಳುತ್ತಿದ್ದರು. ಆದರೆ, ಬೆಳೆದು ನಿಂತ ಇವರಿಗೆ ತಂದೆ ತಾಯಿಗಳ ಶಹಬ್ಬಾಸ್ ಗಿರಿಯಿಂದ ಸಮಾಧಾನವಾಗುವುದಿಲ್ಲ. ಬದಲಿಗೆ ತಮ್ಮ ಓರಗೆಯವರು, ಜೊತೆಯವರು, ತಾನು ಮಾಡಿದ್ದನ್ನು ಸರಿ ಅನ್ನಬೇಕು, ಚೆನ್ನಾಗಿದೆ ಎಂದು ಹೊಗಳಬೇಕು ಎಂದು ನಿರೀಕ್ಷಿಸುತ್ತಾರೆ. ಆ ರೀತಿಯ ಪ್ರತಿಕ್ರಿಯೆಗಳು ಬರದೇ ಇದ್ದಾಗ ಇವರು ಖಿನ್ನರಾಗುತ್ತಾರೆ. ಅದರಿಂದ ಪರಿಹಾರ ಪಡೆಯಲು ಮತ್ತೆ ಫೇಸ್‌ ಬುಕ್‌ ನಂಥವುಗಳಲ್ಲಿ ಮುಳುಗಿ ವಾಸ್ತವವನ್ನು ಮರೆಯುತ್ತಾರೆ.

ಸಾಮಾಜಿಕ ಒತ್ತಡ, ವೃತ್ತಿಯಲ್ಲಿನ ಒತ್ತಡಗಳನ್ನು ಮರೆಯಲು ಮತ್ತೆ ಮತ್ತೆ ಧೂಮಪಾನ, ಮದ್ಯಪಾನ ಇತ್ಯಾದಿಗಳ ಮೊರೆ ಹೋಗುತ್ತಾರೆ.  ಏಕೆಂದರೆ, ಅವೆಲ್ಲವೂ ಇವರಿಗೆ ಅತ್ಯಂತ ಸುಲಭವಾಗಿ ಸಿಗುತ್ತವೆ.

ಮಿಲೇನಿಯಲ್‌ ಗಳು ಎಂದು ಕರೆಸಿಕೊಳ್ಳುವ ಇವರು, ಬೆಳಗ್ಗೆ ಎದ್ದು, ಬೇರೆ ಎಲ್ಲದಕ್ಕಿಂತ ಮೊದಲು, ತಮ್ಮ ಜೊತೆಯಲ್ಲಿರುವವರಿಗೆ ಗುಡ್‌ ಮಾರ್ನಿಂಗ್ ಕೂಡ ಹೇಳದೆಯೇ, ತಮ್ಮ ಫೋನ್ ಕೈಗೆತ್ತಿಕೊಳ್ಳುತ್ತಾರೆ. ಇವರಲ್ಲಿ ಬಹುತೇಕರು ಕುಟುಂಬದೊಂದಿಗೆ, ಸ್ನೇಹಿತರೊಂದಿಗೆ ಊಟಕ್ಕೆ ಕುಳಿತಾಗಲೂ, ಯಾರು ಯಾರಿಗೋ ಎಡಗೈಯಲ್ಲೇ ಮೆಸೇಜ್ ಟೈಪ್ ಮಾಡಿ ಕಳಿಸಲು ಮುಂದಾಗುತ್ತಾರೆ. ಏಕಾಗ್ರತೆಯಿಂದ ಕೇಳಿಸಿಕೊಳ್ಳಲೇಬೇಕಾದ ಮೀಟಿಂಗ್‌ ನಲ್ಲಿದ್ದಾಗಲೂ ಕಣ್ಣು, ಕೈಗಳು ಫೋನ್ ಜೊತೆಗೇ ಆಟವಾಡುತ್ತಿರುತ್ತವೆ. ಇಂತಹ ವರ್ತನೆಗಳು, ಅವರ ಮೇಲಧಿಕಾರಿಗಳಿಗೆ ತಪ್ಪು ಸಂದೇಶ ಕಳಿಸುತ್ತವೆ.

ಈ ಎಲ್ಲಾ ರೀತಿಯ ವರ್ತನೆಗಳೂ ಕೂಡ, ಇವರು ಸಾಮಾಜಿಕ ಜಾಲ ತಾಣಗಳಿಗೆ ಅಡಿಕ್ಟ್ ಆಗಿದ್ದಾರೆ, ದುರ್ವ್ಯಸನವಾಗಿ ಮಾಡಿಕೊಂಡಿದ್ದಾರೆ ಅನ್ನುವುದಕ್ಕೆ ಸಿಗುವ ಉದಾಹರಣೆಗಳು. ಇಂಥ ವ್ಯಸನಗಳು, ಸಂಬಂಧಗಳನ್ನು ಹಾಳು ಮಾಡುತ್ತವೆ, ಸಮಯ ಮತ್ತು ಹಣವನ್ನೂ ಹಾಳು ಮಾಡುತ್ತವೆ, ಮತ್ತು ಕಡೆಗೆ ಜೀವನವನ್ನೇ ಹಾಳು ಮಾಡುತ್ತವೆ.

ಈ ಮಿಲೇನಿಯಲ್‌ ಗಳು ಅಥವ Y ಜನರೇಷನ್ನಿನ ಬಹುತೇಕರು ಹಲವರೊಂದಿಗೆ ಸ್ನೇಹ, ಪ್ರೀತಿ ಎಂದೆಲ್ಲಾ ಓಡಾಡಿಕೊಂಡಿದ್ದರೂ ಕೂಡ,  ದೀರ್ಘಕಾಲ ಬಾಳಿಕೆ ಬರುವಂಥ, ಅರ್ಥಪೂರ್ಣ ಸಂಬಂಧ ಬೆಳೆಸಿಕೊಳ್ಳುವಲ್ಲಿ ವಿಫಲರಾಗುತ್ತಾರೆ. ಫೇಸ್ ಬುಕ್‌ ನಲ್ಲಿ ನೂರಾರು ಜನ ಸ್ನೇಹಿತರಿದ್ದರೂ ಕೂಡ, ನೆಚ್ಚಿಕೊಳ್ಳಬಹುದಾದ ಒಬ್ಬ ಸ್ನೇಹಿತರೂ ಇವರಿಗಿರುವುದಿಲ್ಲ. ಪ್ರೇಮ ವೈಫಲ್ಯ, ದೂರಾಗುವಿಕೆ ಇತ್ಯಾದಿ ಆದಾಗಲೆಲ್ಲಾ, ಮತ್ತೆ ಮತ್ತೆ ಚಟಗಳಿಗೆ ಶರಣಾಗುತ್ತಾರೆ, ತಾತ್ಕಾಲಿಕ ಉಪಶಮನ ಪಡೆಯುತ್ತಾರೆ.

ಮೊಬೈಲ್ ಫೋನ್ ಆಗಲಿ, ಫೇಸ್ ಬುಕ್ ಆಗಲಿ ಕೆಟ್ಟದ್ದೇನೂ ಅಲ್ಲ, ಆದರೆ ಸಮತೋಲನ ಇರಬೇಕು ಅಷ್ಟೇ. ಫೇಸ್ ಬುಕ್ ನಲ್ಲೇ ಹೆಚ್ಚುಕಾಲ ಕಳೆಯುವರು, ಹೆಚ್ಚು ಖಿನ್ನತೆ ಅನುಭವಿಸುತ್ತಾರೆ ಅನ್ನುವುದು ವೈಜ್ಞಾನಿಕವಾಗಿಯೂ ದೃ಼ಡಪಟ್ಟಿದೆ. ಇದರ ಜೊತೆಗೆ, ನಮ್ಮಲ್ಲಿ, ಇಷ್ಟು ವಯಸ್ಸಿನ ಒಳಗಿರುವವರು ಧೂಮಪಾನ, ಮಧ್ಯಪಾನ ಮಾಡಬಾರದು ಎಂದು ಕಾನೂನಿನ ನಿರ್ಬಂಧಗಳಿವೆ. ಆದರೆ, ಸಾಮಾಜಿಕ ಜಾಲ ತಾಣಗಳಲ್ಲಿ ವಿಹರಿಸಲು ಯಾವುದೇ ನಿರ್ಬಂಧವೂ ಇಲ್ಲ.

ಹೀಗಾಗಿ, 1982ರ ನಂತರ ಜನಿಸಿ, ಈಗ ವಯಸ್ಕರಾಗಿ ಎಲ್ಲಾ ಕಡೆ ಕಾಣಸಿಗುವ ಈ ಮಿಲೇನಿಯಲ್‌ ಗಳ ಬಗ್ಗೆ ಸಮಾಜದ ಹಿರಿಯರಲ್ಲಿ ಒಂದಿಷ್ಟು ಅಸಮಾಧಾನವಿದೆ, ಆಕ್ರೋಶವೂ ಇದೆ.

ಇಂಥ ಸನ್ನಿವೇಶದಲ್ಲಿ, ಈ ಮಿಲೇನಿಯಲ್‌ ಗಳು ಒಂದು ಕ್ಷಣ ನಿಂತು, ತಮ್ಮನ್ನು ತಾವು ಅವಲೋಕಿಸಿಕೊಳ್ಳಬೇಕು, ಪರಿಶೀಲಿಸಿಕೊಳ್ಳಬೇಕು. ಒಂದಿಷ್ಟು ಸೈರಣೆ, ತಾಳ್ಮೆ ಬೆಳೆಸಿಕೊಳ್ಳಬೇಕು, ಜೀವನ ಕೌಶಲ್ಯಗಳನ್ನು  ಬೆಳೆಸಿಕೊಳ್ಳಬೇಕು. ಒತ್ತಡ ಸಹಿಸಲು ಕಲಿಯಬೇಕು, ವ್ಯಸನಗಳಿಗೆ ಬಲಿಯಾಗಲು ನಿರಾಕರಿಸುವಂಥ ಮನಸ್ಥಿತಿ ಬೆಳೆಸಿಕೊಳ್ಳಬೇಕು. ದೀರ್ಘ ಕಾಲ ಬಾಳಿಕೆ ಬರುವಂಥ ಸ್ನೇಹ ಸಂಬಂಧಗಳನ್ನು ಕುದುರಿಸಿಕೊಳ್ಳಬೇಕು, ಹಿರಿಯರನ್ನು ಗೌರವಿಸಬೇಕು, ಅಗತ್ಯಬಿದ್ದಾಗ ಅವರ ಮಾರ್ಗದರ್ಶನ ಪಡೆಯಬೇಕು. ತಮಗೆ ಎಲ್ಲವೂ ಗೊತ್ತು, ಬೇರೆ ಯಾರೂ ಏನನ್ನೂ ಹೇಳುವ ಅಗತ್ಯವಿಲ್ಲ ಅನ್ನುವ ಮೂರ್ಖತನ  ಬಿಡಬೇಕು. ಹೀಗೆಲ್ಲಾ ಮಾಡಿದಾಗ ಮಾತ್ರ, ಈ ಮಿಲೇನಿಯಲ್‌ ಗಳ ಬಗ್ಗೆ ಹಿರಿಯರಿಗೆ ಮತ್ತು ಒಟ್ಟಾರೆಯಾಗಿ ಸಮಾಜಕ್ಕೆ ಇರುವ ನೆಗೆಟಿವ್ ಧೋರಣೆ ಬದಲಾಗಬಹುದು. Y ಜನರೇಷನ್ನಿನ ಮಿಲೇನಿಯಲ್‌ಗಳು ಬದಲಾಗದಿದ್ದರೆ ಮತ್ತು ಇದೇ ರೀತಿಯ ಅಸಹನೆಯ ಧೋರಣೆ ಅನುಸರಿಸುತ್ತಾ ಹೋದರೆ, ಮುಂದಕ್ಕೆ, ಇವರಿಂತ ಎಳೆಯರಾದ Z ಜನರೇಷನ್ನಿನವರು, ಇವರಿಗೆ ಸರಿಯಾದ ಪಾಠ ಕಲಿಸುವುದು ಖಚಿತ.ಸಂಬಂಧಿತ ಟ್ಯಾಗ್ಗಳು

ಹೊಸ ಪೀಳಿಗೆಯ ಓಟ, ನೋಟ ಕಾಟ…


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ