ಸಂತನೆಂಬ ಸೋಗಿನಲ್ಲಿದ್ದ ಸೈತಾನ್..

Kannada News

06-09-2017 275

ಈ ವ್ಯಕ್ತಿ, ತನ್ನನ್ನು ತಾನು ಸಂತ, ಡಾ. ಗುರ್ಮೀತ್ ಸಿಂಗ್ ರಾಮ್ ರಹೀಮ್ ಬಾಬಾ ಇನ್ಸಾನ್ ಎಂದು ಕರೆದುಕೊಳ್ಳುತ್ತಾನೆ. ಅತ್ಯಾಚಾರಿಯಾಗಿರುವ ಇವನಿಗೆ, 20 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ. ಕೊಲೆ ಆರೋಪಗಳನ್ನೂ ಹೊತ್ತಿರುವ ಈ ಅತ್ಯಾಚಾರಿ, ಯಾವ ಲೆಕ್ಕದಲ್ಲೂ ಸಂತನಲ್ಲ, ಇವನನ್ನು ಸಂತನೆಂದು ಕರೆಯುವುದಂತೂ, ಭಾರತ ಮತ್ತು ಜಗತ್ತಿನಲ್ಲಿ ಆಗಿ ಹೋದ ಎಲ್ಲಾ ಸಂತರಿಗೆ ಮಾಡುವ ಅಪಮಾನ. ಎಸ್‌ಎಸ್ಎಲ್‌ಸಿಯನ್ನೂ ಪಾಸು ಮಾಡದ ಇವನು, ಡಾಕ್ಟರ್‌ ಎಂಬುದನ್ನೂ ಗಿಟ್ಟಿಸಿಕೊಂಡಿದ್ದಾನೆ.

ಗುರ್ಮೀತ್ ಸಿಂಗ್ ಎಂಬ ಇವನ ಹೆಸರಿಗೆ, ರಾಮ ಮತ್ತು ರಹೀಮ್ ಇಬ್ಬರನ್ನೂ ಸೇರಿಸಿಕೊಂಡಿರುವುದು, ಇವನ ವಂಚಕತನವನ್ನು ಮರೆಮಾಚುವ ಪ್ರಯತ್ನವಷ್ಟೇ ಹೊರತು ಬೇರೇನೂ ಅಲ್ಲ. ತನ್ನ ಹೆಸರಿನ ಕೊನೆಗೆ ಇನ್ಸಾನ್ ಎಂದರೆ, ಮನುಷ್ಯ ಎಂದು ಸೇರಿಸಿಕೊಂಡಿರುವ ಇವನು, ತನ್ನನ್ನು ದೇವರು ಎಂದೇ ಭಾವಿಸುತ್ತಿದ್ದ  ಭಕ್ತೆಯರ ಮೇಲೆ ಅತ್ಯಾಚಾರ ಎಸಗುತ್ತಿದ್ದ. ಇವನು ಇನ್ಸಾನ್ ಅಲ್ಲ, ದೇವ ಮಾನವನಂತೂ ಅಂತೂ ಅಲ್ಲವೇ ಅಲ್ಲ, ಬದಲಿಗೆ ಇವನೊಬ್ಬ ಸೈತಾನ್‌. ಈ ದೆವ್ವಕ್ಕೆ ಇದೀಗ ಜೈಲು ಶಿಕ್ಷೆ ಆಗಿದೆ. ಇವನೀಗ ಹರಿಯಾಣದ ರೋಹ್ತಕ್ ಜೈಲಿನ ಖೈದಿ ನಂಬರ್ 1997. ಆದರೆ, ಇವನು ಮಾಡಿರುವ ಅನಾಚಾರ, ಅತ್ಯಾಚಾರಗಳಿಗೆ ಇಷ್ಟು ಶಿಕ್ಷೆ ಏನೇನೂ ಸಾಲದು. ಮುಂದೇನಾಗುವುದೋ ಕಾದು ನೋಡಬೇಕು.

ಆದರೆ, ಇಡೀ ದೇಶದಲ್ಲಿ ಇವನ ಬಗ್ಗೆಯೇ ಚರ್ಚೆ ನಡೆಯುತ್ತಿರುವ ಈ ಸಂದರ್ಭದಲ್ಲಿ, ಇವನು ಮುಖ್ಯಸ್ಥನಾಗಿರುವ ಈ ಡೇರಾ ಸಚ್ಚಾ ಸೌಧ ಅಂದರೆ ಏನು? ಅದನ್ನು ಸ್ಥಾಪಿಸಿದವರು ಯಾರು? ಅವರ ಮೂಲ ಉದ್ದೇಶಗಳು ಏನಿದ್ದವು? ಗುರ್ಮೀತ್ ಎಂಬ ಈ ಪಿಶಾಚಿ ಅಲ್ಲಿಗೆ ವಕ್ಕರಿಸಿಕೊಂಡಿದ್ದು ಹೇಗೆ? ಜನರು ಏತಕ್ಕಾಗಿ ಇವನ ಜಾಲಕ್ಕೆ ಬಿದ್ದರು? ರಾಜಕಾರಣಿಗಳು, ಪಕ್ಷಗಳು ಇವನಿಗೆ ಹೇಗೆಲ್ಲಾ ನೆರವಾಗಿವೆ? ಇತ್ಯಾದಿ ಎಲ್ಲಾ ವಿಚಾರಗಳ ಬಗ್ಗೆ ನಿಮಗಾಗಿ ಒಂದು ಸ್ಪೆಷಲ್ ರಿಪೋರ್ಟ್.

ಡೇರಾ ಸಚ್ಚಾ ಸೌಧ ಅನ್ನುವುದನ್ನು 1948ನೇ ಇಸವಿಯಲ್ಲಿ ಮಸ್ತಾನಾ ಜಿ ಮಹಾರಾಜ್ ಅನ್ನುವವರು, ಬಲೂಚಿಸ್ತಾನದಲ್ಲಿ ಆರಂಭಿಸಿದರು. ಬಲೂಚಿಸ್ತಾನ, ಇವತ್ತು ಪಾಕಿಸ್ತಾನದ ಹಿಡಿತದಲ್ಲಿದೆ. ಮನುಷ್ಯರಲ್ಲಿ ಜಾತಿ ಬೇಧ ನಿವಾರಿಸುವುದು, ಸೋದರ ಭಾವ, ಆಧ್ಯಾತ್ಮಿಕ ಅರಿವು ಮೂಡಿಸಿ, ಎಲ್ಲರಲ್ಲೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಮೂಲಕ ಉತ್ತಮ ಸಮಾಜ ನಿರ್ಮಿಸುವುದು ಮಸ್ತಾನಾ ಅವರ ಉದ್ದೇಶವಾಗಿತ್ತು. ನಂತರದ ದಿನಗಳಲ್ಲಿ, ಹರಿಯಾಣದ ಸಿರ್ಸಾ ಪ್ರದೇಶಕ್ಕೆ ಬಂದ ಮಸ್ತಾನಾ, ಅಲ್ಲೇ ಆಶ್ರಮ ಸ್ಥಾಪಿಸಿಕೊಂಡು ನೆಲೆನಿಂತರು. ಬಂಜರು ಭೂಮಿಯಾಗಿದ್ದ ಸಿರ್ಸಾ ಪ್ರದೇಶವನ್ನು ಒಂದು ಆಧ್ಯಾತ್ಮಿಕ ಉದ್ಯಾನವನವಾಗಿ ಪರಿವರ್ತಿಸಿದರು. ಮಸ್ತಾನಾ ಅವರು 1960ರಲ್ಲಿ ದೈವಾಧೀನರಾಗುವ ಮೊದಲೇ, ಡೇರಾದ ಉಸ್ತುವಾರಿಯನ್ನು ಶಾ ಸತ್ನಾಮ್ ಸಿಂಗ್  ಅವರಿಗೆ ವಹಿಸಿಕೊಟ್ಟಿದ್ದರು. ಅಲ್ಲಿಂದ 1990ರ ವರೆಗೂ ಮೂವತ್ತು ವರ್ಷಗಳ ಕಾಲ, ಡೇರಾ ಸಚ್ಚಾ ಸೌಧದ ಮಾರ್ಗದರ್ಶಕರಾಗಿದ್ದ ಶಾ ಸತ್ನಾಮ್ ಸಿಂಗ್ ಅವರು, ಹಲವಾರು ರೀತಿಯಲ್ಲಿ ಸಮಾಜ ಸೇವೆ ಮಾಡಿದರು. ಪುಸ್ತಕಗಳನ್ನು ಬರೆದರು, ಜನರಲ್ಲಿ ಅರಿವು ಮೂಡಿಸಿದರು. ಈ ಗುರ್ಮೀತ್ ಸಿಂಗ್ ನ ತಂದೆ ಡೇರಾ ಮುಖ್ಯಸ್ಥ ಸತ್ನಾಂ ಸಿಂಗ್ ಅವರ ಅನುಯಾಯಿಯಾಗಿದ್ದರು. ಹೀಗಾಗಿ, ಗುರ್ಮೀತ್ ಸಿಂಗ್, ಸತ್ನಾಮ್ ಸಿಂಗ್ ಅವರ ಕಣ್ಣಿಗೆ ಬಿದ್ದಿದ್ದ. ಅದು ಯಾವ ಕಾರಣಕ್ಕೋ ಏನೋ ಈ ಗುರ್ಮೀತ್ ಸಿಂಗ್ ನನ್ನು ತಮ್ಮ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿದ ಸತ್ನಾ ಸಿಂಗ್, 1990ರಲ್ಲಿ ದೈವಾಧೀನರಾದರು.

1967ರಲ್ಲಿ ರಾಜಸ್ತಾನದ ಶ್ರೀಗಂಗಾನಗರ ಜಿಲ್ಲೆಯ ಗುರುಸರ್ ಮೋದಿಯ ಗ್ರಾಮದಲ್ಲಿ ಹುಟ್ಟಿದ ಈ ಗುರ್ಮೀತ್ ಸಿಂಗ್, ರೈತ ದಂಪತಿಯ ಒಬ್ಬನೇ ಮಗ. ಇವನ ಅಪ್ಪ ಮಘರ್ ಸಿಂಗ್, ತಾಯಿ ನಸೀಬ್ ಕೌರ್. ಇವರದು ಜಾಟ್‌ ಸಿಖ್ಖರ ಕುಟುಂಬ.

ವಿದ್ಯೆ ತಲೆಗೆ ಹತ್ತದ ಗುರ್ಮೀತ್ ಸಿಂಗ್, ತನ್ನ ಹೊಲದಲ್ಲಿ ಟ್ರ್ಯಾಕ್ಟರ್‌ ಚಲಾಯಿಸುತ್ತಾ ಅಪ್ಪನಿಗೆ ನೆರವಾಗುತ್ತಿದ್ದನಂತೆ. ಹರ್ಜೀತ್‌ ಕೌರ್ ಎಂಬಾಕೆಯನ್ನು ಮದುವೆಯಾಗಿದ್ದ ಗುರ್ಮೀತ್  ಸಿಂಗ್, ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಮಗನಿಗೆ ತಂದೆಯಾಗಿದ್ದಾನೆ. 1990ರ ಸೆಪ್ಟೆಂಬರ್ ನಲ್ಲಿ ಡೇರಾ ಸಚ್ಚಾ ಸೌಧದ ಮುಖ್ಯಸ್ಥನಾದಾಗ ಗುರ್ಮೀತ್‌ಸಿಂಗ್‌ಗೆ, ಇನ್ನೂ 23 ವರ್ಷ ವಯಸ್ಸು.

ಗುರ್ಮೀತ್ ಸಿಂಗ್, ಡೇರಾದ ಮುಖ್ಯಸ್ಥನಾದ ನಂತರ, ಡೇರಾ ಸಚ್ಚಾ ಸೌಧದ ಅನುಯಾಯಿಗಳು ಮತ್ತು ಶಾಖೆಗಳ ಸಂಖ್ಯೆ, ಭಾರಿ ಮಟ್ಟದಲ್ಲಿ ಹೆಚ್ಚಾಯಿತು. ಇವತ್ತು, ಜಗತ್ತಿನ 250ಕ್ಕೂ ಹೆಚ್ಚು ಕಡೆ ಡೇರಾ ಸಚ್ಛಾ ಸೌಧದ ಶಾಖೆಗಳಿವೆ. ಹರಿಯಾಣದ ಸಿರ್ಸಾದಲ್ಲಿರುವ ಡೇರಾದಲ್ಲಿ ಯಾವಾಗಲೂ ಹತ್ತಾರು ಸಾವಿರ ಅನುಯಾಯಿಗಳು ಇರುತ್ತಿದ್ದರು. ಗುರ್ಮೀತ್ ಸಿಂಗ್, ತನ್ನ ಅನುಯಾಯಿಗಳಿಗೆ ‘ನಾಮ್ ಚಾತ್ರಾ’ ಮತ್ತು ‘ರು–ಬೆ–ರಾ ನೈಟ್ಸ್’ ಹೆಸರಿನ ಕಾರ್ಯಕ್ರಮಗಳ ಮೂಲಕ ಪ್ರವಚನ ನೀಡುತ್ತಿದ್ದ. ಗುರ್ಮೀತ್ ಸಿಂಗ್‌ನ ಅನುಯಾಯಿಗಳನ್ನು ‘ಪ್ರೇಮಿಗಳು’ ಎಂದು ಕರೆಯಲಾಗುತ್ತದೆ. ಡೇರಾ ಸಚ್ಛಾ ಸೌಧದ ಅನುಯಾಯಿಗಳಲ್ಲಿ ಸಿಖ್ ದಲಿತರು ಮತ್ತು ಇತರೆ ಹಿಂದುಳಿದ ಪಂಗಡಗಳಿಗೆ ಸೇರಿದ ಜನರ ಸಂಖ್ಯೆಯೇ ಹೆಚ್ಚು.

ಹರಿಯಾಣ, ಪಂಜಾಬ್ ಮತ್ತು ರಾಜಸ್ಥಾನಗಳಲ್ಲಿ ಅತ್ಯಂತ ಪ್ರಭಾವಶಾಲಿಯಾಗಿ ಬೆಳೆದ ಗುರ್ಮೀತ್  ಸಿಂಗ್, ಕಳೆದ ಇಪ್ಪತ್ತು ವರ್ಷಗಳಲ್ಲಿ ಅಪಾರ ಸಂಖ್ಯೆಯ ಹಿಂಬಾಲಕರನ್ನು ಗಳಿಸಿಕೊಂಡಿದ್ದಾನೆ.

ಗುರ್ಮೀತ್ ಸಿಂಗ್ ಮತ್ತು ಅವನ ಡೇರಾ ಸಚ್ಚಾ ಸೌಧ ಇಷ್ಟರ ಮಟ್ಟಿಗೆ ಜನಪ್ರಿಯವಾಗಲು ಹಲವಾರು ಕಾರಣಗಳಿವೆ. ತುಂಬಾ  ಹಿಂದಿನಿಂದಲೂ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ, ಜಾಟ್ ಸಮುದಾಯದವರದ್ದೇ ಪ್ರಾಬಲ್ಯ. ವಂಶಪಾರಂಪರ್ಯವಾಗಿ ದೊಡ್ಡ ಜಮೀನುದಾರರಾಗಿದ್ದ ಜಾಟ್‌ ಸಮುದಾಯದವರು, ದೇಶದಲ್ಲಿ ನಡೆದ ಹಸಿರು ಕ್ರಾಂತಿಯ ಲಾಭ ಪಡೆದು ಮತ್ತಷ್ಟು ಬಲಿಷ್ಠರಾದರು, ಆರ್ಥಿಕವಾಗಿ ಸಬಲರಾದರು. ಆದರೆ, ಪಂಜಾಬ್ ಮತ್ತು ಹರಿಯಾಣದ  ಜನಸಂಖ್ಯೆಯ ಶೇಕಡ 30ರಷ್ಟಿದ್ದ ದಲಿತರು, ಹಿಂದುಳಿದ ವರ್ಗದವರು ಮತ್ತು ಇತರೆ ಜಾತಿಯ ಬಡಜನರಿಗೆ, ಈ ಹಸಿರು ಕ್ರಾಂತಿಯಿಂದ ಏನೇನೂ ಪ್ರಯೋಜನ ಆಗಲಿಲ್ಲ. ಏಕೆಂದರೆ ಅವರೆಲ್ಲಾ ಭೂರಹಿತರಾಗಿದ್ದರು, ಅವರ ಬಳಿ ಜಮೀನೇ ಇರಲಿಲ್ಲ.  ಹೀಗಾಗಿ, ಇಂಥವರೆಲ್ಲರ ಬದುಕು ಸಂಕಷ್ಟಕ್ಕೆ ಸಿಲುಕಿತ್ತು. ಇವರ ಬದುಕಿಗೆ ಯಾರದ್ದಾದರೂ ಬೆಂಬಲ ಬೇಕಿತ್ತು. ತಾವೂ ಕೂಡ, ಯಾವುದಾದರೂ ಒಂದು ದೊಡ್ಡ ಸಮುದಾಯದ ಸದಸ್ಯರಾಗಿ ಗುರುತಿಸಿಕೊಳ್ಳಬೇಕು, ಅಸ್ತಿತ್ವ ಕಂಡುಕೊಳ್ಳಬೇಕು ಎಂಬುದು ಈ ದಲಿತರ ಮತ್ತು ಹಿಂದುಳಿದವರ ಆಸೆಯಾಗಿತ್ತು. ಆದರೆ, ಹರಿಯಾಣ ಮತ್ತು ಪಂಜಾಬ್‌ಗಳಲ್ಲಿ ಇವರನ್ನು ಒಳಗೊಳ್ಳುವಂಥ ಒಂದು ವ್ಯವಸ್ಥೆಯೇ ಇರಲಿಲ್ಲ. ಈ ರೀತಿ ಅಸಹಾಯಕರಾಗಿದ್ದ ಜನರಿಗೆ, ತಮ್ಮ ಅಸ್ತಿತ್ವ ಗುರುತಿಸಿಕೊಳ್ಳಲು ಅವಕಾಶ ಸಿಕ್ಕಿದ್ದೇ ಡೇರಾ ಸಚ್ಚಾ ಸೌಧದಂಥ ಒಂದು ವ್ಯವಸ್ಥೆಯಿಂದ. ಡೇರಾದವರು, ತಮ್ಮ ಜೊತೆ ಸೇರಿದ ಬಡವರಿಗೆ, ತಾವು ಸುರಕ್ಷಿತರು ಅನ್ನುವಂಥ ಭಾವನೆ ಬರುವಂತೆ ಮಾಡಿದರು, ತಮಗೂ ಒಂದು ಗೌರವ ಘನತೆ ಇದೆ ಅನ್ನುವಂಥ ನಂಬಿಕೆ ಹುಟ್ಟುವಂತೆ ಮಾಡಿದರು. ಇದೆಲ್ಲದಕ್ಕಿಂತ ಹೆಚ್ಚಿನದಾಗಿ, ಡೇರಾ ಒಂದು ಜಾತ್ಯತೀತ ಕೂಟವಾಗಿತ್ತು. ಅಲ್ಲಿ ಹಿಂದೂಗಳು, ಸಿಖ್ಖರು, ಇತರರು ಎಲ್ಲರೂ ಒಂದೇ ಆಗಿದ್ದರು. ಅಲ್ಲಿ, ಜಾತಿ, ಧರ್ಮಗಳು ಪರಿಗಣನೆಗೆ ಬರುತ್ತಿರಲಿಲ್ಲ. ಡೇರಾದಲ್ಲಿ ಎಲ್ಲ ಜಾತಿ, ಧರ್ಮ ಮತ್ತು ಪಂಗಡಗಳವರಿಗೂ ಒಬ್ಬನೇ ಗುರು ಅಥವ ಬಾಬಾ ಇದ್ದ. ಡೇರಾದವರು ಪಂಜಾಬ್ ಮತ್ತು ಹರಿಯಾಣವನ್ನು ಹಲವು ವಲಯಗಳಾಗಿ ವಿಭಜಿಸಿಕೊಂಡಿದ್ದರು. ಪ್ರತಿ ವಲಯಕ್ಕೂ ಭಂಗಿ ದಾಸ ಎಂದು ಕರೆಯಲ್ಪಡುವ ವ್ಯಕ್ತಿಯನ್ನು ಮುಖ್ಯಸ್ಥನಾಗಿ ನೇಮಿಸಿದ್ದರು. ಡೇರಾದವರು, ತಮ್ಮ ಸಂಪರ್ಕಕ್ಕೆ ಬರುವ ಬಡವರಿಗೆ ಕಡಿಮೆ ದರದಲ್ಲಿ ಆಹಾರ ಧಾನ್ಯಗಳನ್ನು ಕೊಡುತ್ತಿದ್ದರು. ಸಿರ್ಸಾ ಮತ್ತು ಸುತ್ತ ಮುತ್ತಲ ಜಿಲ್ಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇರಲಿಲ್ಲ. ಇದರಿಂದ, ಜನರು ಹಲವು ರೀತಿಯ ಕಾಯಿಲೆಗಳಿಗೆ ತುತ್ತಾಗುತ್ತಿದ್ದರು. ಡೇರಾದವರು, ಇಂಥವರಿಗೆಲ್ಲಾ ಚಿಕಿತ್ಸೆ ವ್ಯವಸ್ಥೆ ಮಾಡಿದರು, ಸಿರ್ಸಾ ಮತ್ತು ಇತರ ಕಡೆ ಶಾಲೆ, ಕಾಲೇಜುಗಳು, ಆಸ್ಪತ್ರೆಗಳನ್ನು ಆರಂಭಿಸಿದರು. ಇದರ ಜೊತೆಗೆ, ಮದ್ಯಪಾನ ಇತ್ಯಾದಿ ಚಟಗಳಿಗೆ ತುತ್ತಾದವರಿಗೆ ಪುನರ್‌ ವಸತಿ ಕೇಂದ್ರ ಸ್ಥಾಪಿಸಿದರು, ನೇತ್ರದಾನ ಶಿಬಿರ, ರಕ್ತದಾನ ಶಿಬಿರಗಳನ್ನು ಏರ್ಪಡಿಸಿದರು. ವೇಶ್ಯೆಯರಾಗಿದ್ದವರಿಗೆ ಪುನರ್‌ ವಸತಿ ಕಲ್ಪಿಸಿದರು. ಪ್ರವಾಹ, ಭೂಕಂಪ ಇತ್ಯಾದಿ ನೈಸರ್ಗಿಕ ವಿಕೋಪಗಳ ಸಮಯದಲ್ಲಿ ಪರಿಹಾರ ಕಾರ್ಯವನ್ನೂ ಆಯೋಜಿಸಿದರು.

ಈ ಎಲ್ಲಾ ಕಾರ್ಯಗಳು, ಹಿಂದುಳಿದ ವರ್ಗದವರು, ಬಡಜನರ ಜೊತೆಗೆ, ಶ್ರೀಮಂತರು ಮತ್ತು ಪ್ರಭಾವಿಗಳೂ ಕೂಡ ಡೇರಾ ಸಚ್ಚಾ ಸೌಧ ಮತ್ತು ಗುರ್ಮೀತ್ ರಾಮ್ ರಹೀಮ್ ಜೊತೆ ಗುರುತಿಸಿಕೊಳ್ಳುವಂತೆ ಮಾಡಿತು. ಡೇರಾದ ಅನುಯಾಯಿಗಳಿಗೆ ಭಾವನಾತ್ಮಕ ಬೆಂಬಲವೂ ದೊರೆಯುತ್ತಿತ್ತು. ಇವೆಲ್ಲಾ ಕಾರಣಗಳಿಂದ, ಗುರುದ್ವಾರಕ್ಕೆ ಭೇಟಿ ನೀಡುವವರಿಗಿಂತ ಡೇರಾಕ್ಕೆ ಭೇಟಿ ನೀಡಿ ಬಾಬಾ ಗುರ್ಮೀತ್ ಸಿಂಗ್‌ ನಿಂದ ಆಶೀರ್ವಾದ ಪಡೆಯುವ ಜನರೇ ಹೆಚ್ಚಾದರು. ಸಿಖ್ಖರು ನಡೆಸುವ ದಾಸೋಹ ನಿಲಯಗಳಾದ ಲಂಗರ್‌ ಗಳಿಗೆ, ಧಾನ್ಯ, ತರಕಾರಿ ಮತ್ತಿತರ ವಸ್ತುಗಳನ್ನು ತಂದುಕೊಡುವವರ ಸಂಖ್ಯೆಗಿಂತ, ಡೇರಾದವರಿಗೆ ಕಾಣಿಕೆ ತಂದೊಪ್ಪಿಸುವವರ ಸಂಖ್ಯೆ ಹೆಚ್ಚಾಯಿತು.

ಜಾಟ್ ಸಮುದಾಯದ ಪ್ರಾಬಲ್ಯವಿದ್ದ ಪ್ರದೇಶದಲ್ಲಿ, ಹಿಂದುಳಿದ ವರ್ಗದವರೂ ಕೂಡ, ತಮ್ಮನ್ನು ತಾವು ಗುರುತಿಸಿಕೊಂಡು ಜಾಟರಿಗೆ ಸರಿಸಮನಾಗಿ ನಿಲ್ಲತೊಡಗಿದರು. ಈ ಬದಲಾವಣೆ ಮತ್ತು ಇವರ ಮತಗಳ ಶಕ್ತಿ, ಅಲ್ಲಿನ ರಾಜಕಾರಣಿಗಳಿಗೆ ಅರ್ಥವಾಯಿತು. ಹೀಗಾಗಿ, ಕಳೆದ ಹತ್ತು ಹದಿನೈದು ವರ್ಷಗಳ ಹಿಂದಿನಿಂದಲೂ,  ಓಂಪ್ರಕಾಶ್ ಚೌತಾಲ, ಪ್ರಕಾಶ್ ಸಿಂಗ್ ಬಾದಲ್, ಕ್ಯಾಪ್ಟನ್ ಅಮರೀಂದರ್ ಸಿಂಗ್ ಇತ್ಯಾದಿ ಎಲ್ಲಾ ಪ್ರಮುಖ ಪಕ್ಷಗಳ ರಾಜಕಾರಣಿಗಳು, ಡೇರಾ ಸಚ್ಚಾ ಸೌಧದ ಗುರ್ಮೀತ್ ಸಿಂಗ್‌ ನನ್ನು ಭೇಟಿಯಾದರು, ಬೆಂಬಲ ಕೋರಿದರು. ಬಿಜೆಪಿಯೂ ಕೂಡ ಇದೇ ಮಾದರಿ ಅನುಸರಿಸಿ, ಬಾಬಾ ಗುರ್ಮೀತ್ ಸಿಂಗ್ ಬೆಂಬಲದಿಂದಲೇ ಹರಿಯಾಣದಲ್ಲಿ ಅಧಿಕಾರಕ್ಕೆ ಬಂತು.

ಹಲವು ಪಕ್ಷಗಳ ರಾಜಕಾರಣಿಗಳು ಓಲೈಸಲು ಶುರುಮಾಡಿದ ಮೇಲೆ ಗುರ್ಮೀತ್ ಸಿಂಗ್ ಪ್ರಭಾವ ಮತ್ತು ಆತನ ಹಿಂಬಾಲಕರ ಸಂಖ್ಯೆಯೂ ಹೆಚ್ಚಾಯಿತು. ಇವತ್ತು, ಡೇರಾ ಸಚ್ಚಾ ಸೌಧ ಮತ್ತು ಗುರ್ಮೀತ್ ಸಿಂಗ್‌ನಿಗೆ ಸುಮಾರು 6 ಕೋಟಿ ಜನ  ಅನುಯಾಯಿಗಳಿದ್ದಾರಂತೆ.

ಸಮಾಜ ಸೇವೆಯಲ್ಲಿ ತೊಡಗಿರುವ ಡೇರಾ ಸಚ್ಚಾ ಸೌಧಕ್ಕೆ ತೆರಿಗೆ ವಿನಾಯಿತಿಯೂ ದೊರೆಯಿತು, ವಿವಿಧ ರೀತಿಯ ವ್ಯವಹಾರಗಳು, ಸಂಸ್ಥೆಗಳು ಮತ್ತು ದಾನಿಗಳ ಕೊಡುಗೆಯಿಂದ ಡೇರಾ ಸಚ್ಛಾ ಸೌಧದ ಆದಾಯವೂ ನೂರಾರು ಕೋಟಿಗಳ ಮಟ್ಟಕ್ಕೆ ಹೆಚ್ಚಾಯಿತು. ಹರಿಯಾಣದ ಸಿರ್ಸಾದಲ್ಲಿರುವ ಗುರ್ಮೀತ್ ಸಿಂಗ್ ಆಶ್ರಮ ಸುಮಾರು 1000 ಎಕರೆಗಿಂತ ಹೆಚ್ಚು ವಿಸ್ತಾರವಾಗಿ ಬೆಳೆಯಿತು. ಬಾಬಾ ಗುರ್ಮೀತ್ ಸಿಂಗ್ ಮತ್ತು ಡೇರಾ ಸಚ್ಚಾಸೌಧದ ಖ್ಯಾತಿ ಹೆಚ್ಚಾಯಿತು, ಕಿಂಗ್ ಮೇಕರ್ ರೀತಿಯಲ್ಲಿ ಬದಲಾದ ಬಾಬಾ ಗುರ್ಮೀತ್ ಸಿಂಗ್‌ಗೆ ರಾಜಕಾರಣಿಗಳ ಸಂಪರ್ಕದಿಂದ ಅಧಿಕಾರದ ಬಲವೂ ದೊರೆತಂತಾಯಿತು. ನೀವೆಲ್ಲರೂ ಸರಳ ಜೀವನ ನಡೆಸಿ, ಮದ್ಯಪಾನ ಹಾಗೂ ಮಾಂಸಾಹಾರಗಳನ್ನು ತ್ಯಜಿಸಿ ಎಂದು ಬೋಧಿಸುತ್ತಿದ್ದ ಗುರ್ಮೀತ್ ಸಿಂಗ್‌ನನ್ನು, ಆತನ ಅನುಯಾಯಿಗಳು, ಪಿತಾಜಿ  ಎಂದೇ ಕರೆಯಲು ಶುರು ಮಾಡಿದರು. ಇವನ ಮಾತು ಕೇಳಲು, ಇವನ ಕಾಲಿಗೆ ಬೀಳಲು  ಜನ ಮುಗಿಬೀಳುತ್ತಿದ್ದರು.

ಇವೆಲ್ಲ ಬದಲಾವಣೆಗಳು ಮತ್ತು ಬೆಳವಣಿಗೆಗಳು ನಡೆಯುತ್ತಿದ್ದಾಗಲೇ ಬಾಬಾ ಅನ್ನಿಸಿಕೊಂಡಿದ್ದ ಗುರ್ಮೀತ್‌, ತನ್ನನ್ನು ತಾನು ಮಹಾನ್ ಎಂದುಕೊಂಡ, ತಾನು ಈ ಜಗತ್ತಿನ ಒಂದು ಅದ್ಭುತ ಎಂದುಕೊಂಡುಬಿಟ್ಟ. ಹೊರಗೆ ದೊಡ್ಡ ವ್ಯಕ್ತಿಯಂತೆ ಬಿಂಬಿಸಿಕೊಳ್ಳುತ್ತಿದ್ದ ಗುರ್ಮೀತ್‌ ನೊಳಗಿನ ಸ್ವಾರ್ಥ, ಕಾಮುಕತೆ, ಲಂಪಟತನ, ಚಪಲ ಮತ್ತು ತೆವಲುಗಳು ಮಿತಿ ಮೀರಿ ಹೆಚ್ಚಾದವು.  

ಆಧುನಿಕ ಕಾಲದ ಸಂತನಂತೆ ಪೋಸುಕೊಡಲು ಆರಂಭಿಸಿದ ಗುರ್ಮೀತ್ ಸಿಂಗ್, ಹತ್ತಾರು ಐಶಾರಾಮೀ ಕಾರುಗಳಲ್ಲಿ, ಖಾಸಗಿ ವಿಮಾನಗಳಲ್ಲಿ ಸುತ್ತಲು ಆರಂಭಿಸಿದ. ಗುರ್ಮೀತ್ ಸಿಂಗ್ ತನ್ನನ್ನು ತಾನು ಆಧ್ಯಾತ್ಮಿಕ ಗುರು, ಸಮಾಜ ಸೇವಕ, ನಟ, ನಿರ್ದೇಶಕ, ಬರಹಗಾರ, ಗಾಯಕ, ಸಂಗೀತ ನಿರ್ದೇಶಕ, ವಸ್ತ್ರ ವಿನ್ಯಾಸಕ, ಎಲ್ಲ ಆಟಗಳನ್ನೂ ಬಲ ಕ್ರೀಡಾಪಟು,  ಮತ್ತು ಮೆಸೆಂಜರ್ ಆಫ್ ಗಾಡ್ ಅಂದರೆ ದೇವದೂತ ಎಂದೇ ಕರೆದುಕೊಳ್ಳುತ್ತಿದ್ದ.  ತಾನೇ ನಿರ್ಮಿಸಿದ ಸಿನಿಮಾಗಳಲ್ಲಿ ನಟಿಸಿದ ಬಾಬಾ ಗುರ್ಮೀತ್ ಸಿಂಗ್‌, ರೀಲ್ ಲೈಫ್ ಮತ್ತು ರಿಯಲ್ ಲೈಫ್ ಗಳ ಒಂದು ವಿಚಿತ್ರ ಮಿಶ್ರಣದಂತೆ ಕಂಡುಬರುತ್ತಿದ್ದ.

ದೇಶವೊಂದರ ಸರ್ವಾಧಿಕಾರಿಯ ಹಾಗೆ ಬೆಳೆದ ಬಾಬಾ ಗುರ್ಮೀತ್ ಸಿಂಗ್, ದಿನದಿಂದ ದಿನಕ್ಕೆ ಹಲವು ರೀತಿಯ ವಿಕೃತಿಗಳನ್ನು ಮೆರೆಯತೊಡಗಿದ.

ತಾನಿರುವುದೇ ಸುಖ ಪಡುವುದಕ್ಕಾಗಿ, ನನ್ನ ಶಿಷ್ಯರು ಮತ್ತು ಭಕ್ತರು ನನ್ನ ಆಸ್ತಿ, ಅವರನ್ನು ನಾನು ಹೇಗೆ ಬೇಕಾದರೂ ಬಳಸಿಕೊಳ್ಳಬಹುದು ಎಂದು ಅಂದುಕೊಂಡ. ‘ಪಿತಾಜಿ ಕಿ ಮಾಫ್’ ಎಂಬ ಹೆಸರಿನಲ್ಲಿ ಅಮಾಯಕ ಹೆಣ್ಣುಮಕ್ಕಳ ಮೇಲೆ ನಿರಂತರ ಅತ್ಯಾಚಾರಗಳನ್ನು ಎಸಗುವ ಮೃಗವಾಗಿ ಬದಲಾಗಿದ್ದ. ತನ್ನನ್ನು ದೇವರ ಅವತಾರ, ಪವಾಡ ಪುರುಷ ಎಂದು ಪೂಜಿಸುತ್ತಿದ್ದ ಹದಿಹರೆಯದ ಹೆಣ್ಣುಮಕ್ಕಳನ್ನು, ಹುರಿದು ಮುಕ್ಕುವುದನ್ನೇ ಅಭ್ಯಾಸವಾಗಿ ಮಾಡಿಕೊಂಡ.

ತನ್ನ ವಿಕೃತಿಗಳನ್ನು ಇನ್ನೂ ಒಂದು ಹಂತಕ್ಕೆ ಮುಂದುವರಿಸಿದ ಗುರ್ಮೀತ್, ತನ್ನ ಆಶ್ರಮದಲ್ಲಿದ್ದ ಸುಮಾರು 400 ಜನ ಪುರುಷ ಅನುಯಾಯಿಗಳಿಗೆ, ನೀವು ದೇವರಿಗೆ ಹತ್ತಿರದವರಾಗಲು, ನಿಮ್ಮ ಪುರುಷತ್ವ ಕಳೆದುಕೊಳ್ಳಬೇಕು ಎಂದು ತಲೆಕೆಡಿಸಿದ, ಅವರೆಲ್ಲರಿಗೂ ಬಲವಂತವಾಗಿ ಶಸ್ತ್ರಕ್ರಿಯೆ ಮಾಡಿಸಿ, ಅವರನ್ನು ನಂಪುಸಕರನ್ನಾಗಿಸಿದ.  

2007ರಲ್ಲಿ ಭಟಿಂಡಾದ ಸಲಬತ್‌ ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಿಖ್ಖರ ಹತ್ತನೇ ಗುರು ಗೋವಿಂದ್ ಸಿಂಗ್ ರಂತೆ ಉಡುಪು ಧರಿಸಿ, ಶೋ ಕೊಟ್ಟಿದ್ದ. ಇದು, ತಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದಿದೆ ಎಂದು ಆರೋಪಿಸಿ ಸಿಖ್ಖರು ಇವನ ವಿರುದ್ಧ ಸಿಡಿದೆದ್ದಿದ್ದರು. 

ಈ ಜಗತ್ತಿನಲ್ಲಿ ಯಾರೂ ಕೂಡ ತನ್ನನ್ನು ಏನೂ ಮಾಡಲು ಸಾಧ್ಯವಿಲ್ಲ, ನಾನು ಯಾರಿಗೂ ನಿಲುಕದವನು ಎಂಬ ಅಹಂಕಾರದಿಂದ, ತನಗೆ ಅಡ್ಡ ಬಂದವರನ್ನು, ತನ್ನ ವಿಕೃತಿಗಳನ್ನು ಬಹಿರಂಗಪಡಿಸಲು ಪ್ರಯತ್ನ ಪಟ್ಟವರನ್ನು ಮುಗಿಸಲು ಆರಂಭಿಸಿದ, ಪತ್ರಕರ್ತರನ್ನು ಬೆದರಿಸಿದ, ಕೊಲೆ ಮಾಡಿಸಿದ.

ಆದರೆ, 2002ರಲ್ಲಿ ಅಂದಿನ ಪ್ರಧಾನಿ ವಾಜಪೇಯಿ ಕಚೇರಿಗೆ ಬಂದಿದ್ದ ಅನಾಮಧೇಯ ಪತ್ರವೊಂದರಲ್ಲಿ ಇವನು ನಡೆಸುತ್ತಿರುವ ಅತ್ಯಾಚಾರಗಳ ಬಗ್ಗೆ ಉಲ್ಲೇಖಿಸಲಾಗಿತ್ತು.  ಆನಂತರ, ತನಿಖೆಗಳು ಆರಂಭವಾದವು. ತನಿಖೆಗಳ ದಿಕ್ಕುತಪ್ಪಿಸಲು, ತನಿಖೆಯನ್ನೇ ಮುಂದುವರಿಯದಂತೆ ಮಾಡಲು ಹಲವು ರೀತಿಯ ಪ್ರಯತ್ನಗಳನ್ನೂ ಬಾಬಾ ಗುರ್ಮೀತ್ ಸಿಂಗ್ ನಡೆಸಿದ್ದ. ಹೀಗಾಗಿ, ಇವನ ಲೀಲೆಗಳು ಬಯಲಾಗುವುದು ಸಾಕಷ್ಟು ನಿಧಾನವಾದರೂ, ಭಾರತದ ನ್ಯಾಯಾಂಗ ವ್ಯವಸ್ಥೆ ಇವನ ಜುಟ್ಟು ಹಿಡಿದಿದೆ. ಬಾಬಾ ಎಂದು ಕರೆಸಿಕೊಳ್ಳುತ್ತಿದ್ದ ಈ ಅತ್ಯಾಚಾರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಸಂತನೆಂಬ ಸೋಗಿನಲ್ಲಿ ಇವನು ಭಾರತದ ಸಂಸ್ಕೃತಿಗೆ ಧಕ್ಕೆ ಉಂಟುಮಾಡಿದ್ದಾನೆ ಎಂದು ಇವನಿಗೆ ಶಿಕ್ಷೆ ವಿಧಿಸಿದ ನ್ಯಾಯಾಧೀಶ ಜಗದೀಪ್ ಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ. ಸಿಬಿಐ ಕೋರ್ಟಿನಲ್ಲಿ, ಗುರ್ಮೀತ್ ಪರ ಹಾಜರಾಗಿದ್ದ ವಕೀಲ, ಇವರು ಸಮಾಜ ಸೇವೆ ಮಾಡಿದ್ದಾರೆ, ಆದ್ದರಿಂದ ಕ್ಷಮೆ ನೀಡಬೇಕು ಎಂಬ ವಾದ ಮಂಡಿಸಿದನಂತೆ. ಆದರೆ, ಸಮಾಜ ಸೇವೆ ಮಾಡುವುದು ಅತ್ಯಾಚಾರ, ಕೊಲೆ ಮಾಡಲು ಸಿಗುವ ಪರ್ಮಿಟ್ ಅಲ್ಲ ಅನ್ನುವುದನ್ನು ಆ ವಕೀಲ ಮತ್ತು ಈ ರೀತಿ ಹೀನ ಕೃತ್ಯಗಳನ್ನು ಎಸಗುವ ಅಯೋಗ್ಯರೆಲ್ಲರೂ ಅರ್ಥಮಾಡಿಕೊಳ್ಳಬೇಕು.

ಈ ಬೆಳವಣಿಗೆಯ ನಂತರ, ಇವನ ಇನ್ನೂ ಹತ್ತಾರು ನೀಚ ಕೃತ್ಯಗಳು ಒಂದೊಂದಾಗಿ ಬಹಿರಂಗವಾಗುತ್ತಿವೆ.

ಕಳೆದ ಶುಕ್ರವಾರ, ಇವನು ದೋಷಿ ಎಂದು ಸಿಬಿಐ ಕೋರ್ಟ್ ತೀರ್ಪು ನೀಡಿದ ನಂತರ, ಇವನ ಅನುಯಾಯಿಗಳು ಅನುನಾಯಿಗಳಂತೆ ವರ್ತಿಸಿದ್ದರು. ಮಾಧ್ಯಮದ ವಾಹನಗಳು, ಬಸ್ಸುಗಳು, ಕಾರುಗಳು, ದ್ವಿಚಕ್ರವಾಹನಗಳು, ಸರ್ಕಾರಿ ಕಚೇರಿಗಳು ಮತ್ತು ರೈಲ್ವೆ ನಿಲ್ದಾಣಗಳಿಗೆ ಬೆಂಕಿಯಿಟ್ಟಿದ್ದರು. ಈ ರೀತಿಯ ದಾಂಧಲೆಗಳು ನ಼ಡೆಯುವ ಸಾಧ್ಯತೆಗಳಿವೆ ಎಂದು ಗೊತ್ತಿದ್ದರೂ ಮುನ್ನೆಚ್ಚರಿಕೆ ವಹಿಸದ ಮತ್ತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದ ಹರಿಯಾಣ ಸರ್ಕಾರ ಮತ್ತು ಅದರ ಮುಖ್ಯಮಂತ್ರಿ ಮನೋಹರ್‌ ಲಾಲ್ ಖಟ್ಟರ್‌ಗೆ ಕೋರ್ಟ್‌ನಿಂದ ಮಂಗಳಾರತಿಯೂ ಆಗಿದೆ. ಆದರೆ, ಆನಂತರ ಇದೇ 28ರದು ಸೋಮವಾರ, ಗುರ್ಮೀತ್ ಸಿಂಗ್ ಗೆ ಇಪ್ಪತ್ತು ವರ್ಷಗಳ ಶಿಕ್ಷೆ ವಿಧಿಸಿದ ದಿನ, ಯಾವುದೇ ರೀತಿಯ ದಾಂಧಲೆ, ಹಿಂಸಾಚಾರ ನಡೆಯದಂತೆ ಕ್ರಮ ಕೈಗೊಳ್ಳಲಾಗಿತ್ತು. ಒಂದೇ ವಾರದ ಅವಧಿಯಲ್ಲಿ ಉದ್ಭವಿಸಿದ ಈ ಎರಡೂ ಸನ್ನಿವೇಶಗಳು, ಒಂದು ವಿಚಾರವನ್ನಂತೂ ಸ್ಪಷ್ಟಗೊಳಿಸುತ್ತವೆ.

ನಮ್ಮ ಸರ್ಕಾರ ಮತ್ತು ಪೊಲೀಸರು ಮನಸ್ಸು ಮಾಡಿದರೆ, ಎಂಥ ಪರಿಸ್ಥಿತಿಯನ್ನೂ ನಿಯಂತ್ರಿಸಬಹುದು, ಶಾಂತಿ ಕಾಪಾಡಬಹುದು, ಆದರೆ, ಅಧಿಕಾರದಲ್ಲಿರುವವರಿಗೆ ಅಂಥ ಇಚ್ಛಾಶಕ್ತಿ ಇರಬೇಕು  ಅಷ್ಟೇ. ಭಾರತ ದೇಶದ ಇತಿಹಾಸದಲ್ಲಾಗಲಿ, ಪುರಾಣಗಳಲ್ಲಾಗಲಿ  ಎಲ್ಲೂ ಕೂಡ ಇಂತಹ ಕೆಳಮಟ್ಟದ ಒಬ್ಬ ಅಯೋಗ್ಯ ಕಂಡುಬಂದಿಲ್ಲ. ಸೀತೆಯನ್ನು ಅಪಹರಿಸಿದ ರಾವಣನೂ ಕೂಡ, ಆಕೆಯನ್ನು ಗೌರವದಿಂದಲೇ ನಡೆಸಿಕೊಂಡಿದ್ದ. ಆದರೆ, ಗುರ್ಮೀತ್ ಸಿಂಗ್, ಮನುಷ್ಯ ಕುಲಕ್ಕೆ ಕಳಂಕ ತರುವ ಮಟ್ಟಿಗಿನ ಅಧಮ. ಬಾಬಾ ಸೋಗಿನಲ್ಲಿ ಮೆರೆಯುತ್ತಿದ್ದ ಇವನ ಪಾಪದ ಕೊಡ ತುಂಬಿದ್ದರಿಂದ ಇದೀಗ ಜೈಲು ಸೇರಿ ಕಂಬಿ ಎಣಿಸುತ್ತಿದ್ದಾನೆ.  ಹಿಂದೆ, ಇವನ ಡೇರಾದಲ್ಲಿ ವ್ಯವಸ್ಥಾಪಕನಾಗಿದ್ದ ರಂಜಿತ್ ಸಿಂಗ್ ಮತ್ತು ಸಿರ್ಸಾದ ಪತ್ರಕರ್ತ ರಾಮ್ ಚಂದರ್ ಛತ್ರಪತಿ ಕೊಲೆ ಪ್ರಕರಣಗಳ ಬಗ್ಗೆಯೂ ಸಿಬಿಐ ವಿಚಾರಣೆ ಅಂತಿಮ ಹಂತದಲ್ಲಿದ್ದು, ಆ ಪ್ರಕರಣಗಳಲ್ಲೂ ಇವನಿಗೆ ಶಿಕ್ಷೆಯಾಗುವ ಸಾಧ್ಯತೆಗಳಿವೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ