ಗೌರಿ ಹತ್ಯೆ: ಕಾರು ಚಾಲಕನ ವಿಚಾರಣೆ !

Kannada News

06-09-2017

ಬೆಂಗಳೂರು: ವಿಚಾರವಾದಿ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಸಂಬಂಧ ನಕ್ಸಲರು ಹಾಗೂ ಮೂಲಭೂತವಾದಿಗಳ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದು,ದುಷ್ಕರ್ಮಿಗಳ ಪತ್ತೆಗಾಗಿ ವಿಶೇಷ ತನಿಖಾ ತಂಡ(ಎಸ್‍ಐಟಿ)ರಚಿಸಲಾಗಿದೆ.

ತಮ್ಮ ಪ್ರಖರ ವಿಚಾರಗಳಿಂದ ಮೂಲಭೂತವಾದಿಗಳ ವಿರೋಧ ಹಾಗೂ ಮುಖ್ಯವಾಹಿನಿ ಕರೆತರಲು ನಡೆಸುತ್ತಿದ್ದ ಪ್ರಯತ್ನಗಳಿಂದ ಕೆಲ ನಕ್ಸಲರ ವಿರೋಧ ಕಟ್ಟಿಕೊಂಡಿದ್ದ ಅವರಿಂದಲೇ ಗೌರಿ ಹತ್ಯೆಯಾಗಿರುವ ಬಲವಾದ ಶಂಕೆಯಿದೆ. ಚಿಂತಕರಾದ ಪನ್ಸಾರೆ,ದಾಬೋಲ್ಕರ್ ಹಾಗೂ ಕಲ್ಬುರ್ಗಿ ಕೊಲೆಗೂ ಗೌರಿ ಅವರ ಕೊಲೆಗೂ ಸಾಮ್ಯತೆಯಿದ್ದು ಇದು ಕೂಡ ಸೈದಾಂತಿಕ ಹಿನ್ನೆಲೆಯಲ್ಲಿ ನಡೆದಿರುವ ಕೊಲೆ ಎನ್ನುವುದನ್ನು ಖಚಿತಪಡಿಸಿಕೊಂಡಿರುವ ಪೊಲೀಸರು ದುಷ್ಕರ್ಮಿಗಳಾಗಿ ಶೋಧ ನಡೆಸಿದ್ದಾರೆ.

ಈ ನಡುವೆ ಗೌರಿ ಹತ್ಯೆಯ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಂತಕರ ಪತ್ತೆ ಮಾಡಲು ಪೊಲೀಸ್ ಮಹಾನಿರೀಕ್ಷಕರ(ಐಜಿಪಿ) ನೇತೃತ್ವದ ವಿಶೇಷ ತನಿಖಾ ತಂಡ(ಎಸ್‍ಐಟಿ)ರಚಿಸಲಾಗುವುದು ಎಂದು ತಿಳಿಸಿದ್ದಾರೆ. ರಾಜ್ಯದ ಎಲ್ಲಾ ಪ್ರಗತಿಪರ ಚಿಂತಕರು ವಿಚಾರವಾಧಿಗಳಿಗೆ ಭದ್ರತೆ ನೀಡಲಾಗುವುದು, ಮೊದಲು ಎಸ್‍ಐಟಿ ತನಿಖೆ ನಡೆಸಲಾಗುವುದು ಮುಂದೆ ಸಿಬಿಐ ತನಿಖೆಗೆ ಒಳಪಡಿಸಲು ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ.

ರೇಖಾ ಚಿತ್ರ ರಚನೆ: ಗೌರಿ ಅವರ ಕೊಲೆಯ ಪತ್ತೆಗಾಗಿ ರಚಿಸಲಾಗಿರುವ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸತೀಶ್‍ಕುಮಾರ್ ಅವರನ್ನೊಳಗೊಂಡ ಮೂರು ವಿಶೇಷ ತಂಡಗಳು ರಾತ್ರಿಯಿಂದಲೇ ಕಾರ್ಯಾಚರಣೆ ತೀವ್ರಗೊಳಿಸಿದ್ದು ಚಿಕ್ಕಮಗಳೂರಿನಲ್ಲಿ ಶಂಕಿತನೋರ್ವನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ ಅಲ್ಲದೇ ಗುಂಡಿನ ದಾಳಿ ನಡೆಸಿದ ಹಂತಕನನ್ನು ನೋಡಿದ ಗೌರಿ ಅವರ ಮನೆಯ ಸಮೀಪದಲ್ಲಿ ವಾಸಿಸುತ್ತಿರುವ ಮಾಹಿಳೆಯೊಬ್ಬರಿಂದ ಮಾಹಿತಿ ಪಡೆದು ಆತನ ರೇಖಾ ಚಿತ್ರವನ್ನು ರಚಿಸಲು ಮುಂದಾಗಿದ್ದಾರೆ.

ಈಗಾಗಲೇ ಗೌರಿ ಅವರ ಮನೆಯ ಬಳಿ ಅಳವಡಿಸಿದ್ದ ಸಿಸಿ ಟಿವಿ ಕ್ಯಾಮಾರಾಗಳು ಕೃತ್ಯ ನಡೆದ ರಾಜರಾಜೇಶ್ವರಿನಗರದ ಗೌರಿ ಅವರ ಸುಭಾಷ್ ಪಾರ್ಕ್ ನಿವಾಸದ ಸುತ್ತ ಮುತ್ತಲ ರಸ್ತೆಗಳು ಮನೆಗಳ ಬಳಿ ಅಳವಡಿಸಿರುವ ಸಿಸಿಟಿವಿಗಳನ್ನು ವಶಕ್ಕೆ ತೆಗೆದುಕೊಂಡು ಅದರಲ್ಲಿ ಕಳೆದ ಕೆಲ ದಿನಗಳಿಂದ ಹಿಡಿದು ಮಂಗಳವಾರ ರಾತ್ರಿಯವರೆಗೆ ದಾಖಲಾದ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದಾರೆ.

ಇದಲ್ಲದೇ ಗೌರಿ ಅವರ ಮನೆಯ ಅಕ್ಕಪಕ್ಕ ವಾಸಿಸುತ್ತಿರುವ ನಿವಾಸಿಗಳು, ಸ್ಥಳೀಯರು ನೀಡಿದ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ ಗೌರಿ ದೇಹಕ್ಕೆ ಹೊಕ್ಕ ಗುಂಡುಗಳು ಸ್ಥಳದಲ್ಲಿ ಸಿಕ್ಕ ಕಾಟ್ರೇಜ್‍ಗಳು ಬಳಸಿದ ನಾಡ ಪಿಸ್ತೂಲ್ ಎಂಎಂ ಕಲ್ಬುರ್ಗಿ ಅವರ ಹತ್ಯೆಗೂ ಬಳಸಿರುವುದು ಕಂಡುಬಂದಿದೆ. ಹಾಗಾಗಿ ಕಲ್ಬುರ್ಗಿ ಕೊಲೆಗೈದ ದುಷ್ಕರ್ಮಿಗಳ ಪತ್ತೆಗಾಗಿ ಇಲ್ಲಿಯವರೆಗಿನ ತನಿಖೆಯ ಮಾಹಿತಿಯನ್ನು ಪಡೆದು ಹಂತಕರ ಪತ್ತೆ ಕಾರ್ಯ ಚುರುಕುಗೊಳಿಸಲಾಗಿದೆ.

ವಿಚಾರದಾರೆ ತಂದ ಮುಳುವು: ವಿಶೇಷ ತಂಡಗಳು ಪ್ರತ್ಯೇಕ ಕೋನಗಳಲ್ಲಿ ಕಾರ್ಯಾಚರಣೆ ನಡೆಸಿವೆ. ಹಿಂದೆ ಗೌರಿ ಅವರು ರಾಜ್ಯ ನಕ್ಸಲರ ಶರಣಾಗತಿ ಸಮಿತಿಯ ಸದಸ್ಯೆಯಾಗಿದ್ದರು. ನಕ್ಸಲರನ್ನು ಮುಖ್ಯ ವಾಹಿನಿಗೆ ತರಲು ಪ್ರಯತ್ನ ಮಾಡುತ್ತಿರುವುದು ಕೆಲ ನಕ್ಸಲೀಯರ ವಿರೋಧಕ್ಕೆ ಕಾರಣವಾಗಿತ್ತು ಜೊತೆಗೆ ಪ್ರಖರ ಭಾಷಣಗಳು ವಿಚಾರಧಾರೆಗಳು ಹಿಂದುತ್ವ ವಿರೋಧಿ ನಿಲುವುಗಳು ವಿರೋಧಿಗಳನ್ನು ಹುಟ್ಟು ಹಾಕುವಂತೆ ಮಾಡಿದ್ದವು ಅವುಗಳ ಹಿನ್ನಲೆಯಲ್ಲಿಯೇ ಗೌರಿ ಕೊಲೆಯಾಗಿರುವುದು ಖಚಿತವಾಗಿರುವುದರಿಂದ ಆ ಸುಳಿವಿನ ಹಿನ್ನಲೆಯಲ್ಲಿಯೇ ತನಿಖೆ ನಡೆಸಲಾಗಿದೆ.

ಕಳೆದ 2 ವರ್ಷಗಳಿಂದ ನಕ್ಸಲರು ಗೌರಿ ಅವರ ಮೇಲೆ ಹಗೆ ಸಾಧಿಸುತ್ತಿದ್ದರು. ಪನ್ಸಾರೆ,ದಾಬೋಲ್ಕರ್ ಹಾಗೂ ಕಲ್ಬುರ್ಗಿ ಸೇರಿ ಮೂರು ಕೊಲೆಗಳನ್ನು ವೃತ್ತಿಪರ ಕೊಲೆಗಾರರು ನಡೆಸಿದ್ದು, ಗೌರಿ ಅವರನ್ನು ಗುಂಡುಹಾರಿಸಿ ಹತ್ಯೆ ಮಾಡಿರುವುದು ವೃತ್ತಿಪರ ಕೊಲೆಗಾರನೇ ಎನ್ನುವುದು ಕೂಡ ಧೃಡಪಟ್ಟಿದೆ. ಇನ್ನೂ ಗೌರಿ ಅವರ ಮೊಬೈಲ್ ಕರೆಗಳ ಬಗ್ಗೆ ಪೊಲೀಸರು ತಪಾಸಣೆ ಮಾಡುತ್ತಿದ್ದಾರೆ. ಮೂರು ದಿನಗಳಿಂದ ಗೌರಿ ಅವರಿಗೆ ಎರಡು ನಂಬರ್ ಗಳಿಂದ ನಿರಂತರ ಮಿಸ್ ಕಾಲ್ ಬರುತ್ತಿತ್ತು ಹಾಗೂ ಕೆಲವೊಂದು ಬ್ಲಾಂಕ್ ಮೆಸೇಜ್ ಬರುತ್ತಿದ್ದ ಮಾಹಿತಿ ದೊರೆತಿದೆ.

ಬೈಕ್‍ನಲ್ಲಿ ಬಂದಿದ್ದ ಹಂತಕರು: ಪ್ರತಿನಿತ್ಯ ಗೌರಿ ಲಂಕೇಶ್ ಅವರು ಕಾರಿಗೆ ಪೆಟ್ರೋಲ್ ಹಾಕಿಸುತ್ತಿದ್ದ ಬಂಕ್ ಬಳಿ ಈ ಮೊಬೈಲ್ ನಂಬರ್ ಟ್ರೇಸ್ ಔಟ್ ಆಗಿದ್ದು, ಪ್ರಕರಣಕ್ಕೆ ಮಹತ್ವದ ಸುಳಿವು ಸಿಕ್ಕಂತಾಗಿದೆ. ಕೃತ್ಯ ನಡೆಸಿದ ಅರೋಪಿಗಳು ಬಳಕೆ ಮಾಡಿದ್ದ ಬೈಕ್ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ರಾತ್ರಿ ನಗರದ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ನಾಕಾಬಂದಿ ಹಾಕಿ ಪರಿಶೀಲನೆ ಮಾಡಿದ್ದಾರೆ. ನಗರದಿಂದ ಹೊರ ಹೋಗುವ ರಸ್ತೆಗಳಲ್ಲಿ ಬೈಕ್‍ ಗಳ ತಪಾಸಣೆ ಮಾಡಿದ್ದು, ಪ್ರಮುಖವಾಗಿ ಮೈಸೂರು ರಸ್ತೆ, ಹಾಗೂ ನೈಸ್ ರಸ್ತೆಯಲ್ಲಿ ರಾತ್ರಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು ಹಂತಕನ ಸ್ಪಷ್ಟ ಸುಳಿವು ಇನ್ನೂ ಪತ್ತೆಯಾಗಿಲ್ಲ.

ಚಾಲಕನ ವಿಚಾರಣೆ: ಗೌರಿ ಅವರ ಕಾರು ಚಾಲಕ ಮಂಗಳವಾರ ರಜೆ ಮೇಲೆ ಹೋಗಿದ್ದು ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ ರಜೆ ಹೋಗಲು ಕಾರಣ ಹಾಗೂ ಆತನ ಹಿನ್ನಲೆಯನ್ನು ಪರಾಮರ್ಶೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ