ಬದುಕನ್ನು ತಿಂದುಹಾಕುತ್ತಿರುವ ತಂಬಾಕು...

Kannada News

06-09-2017 816

ಇದರ ಹೊಗೆ ಸೇವನೆಯಿಂದ ನಿಮ್ಮ ಕಣ್ಣುಗಳಿಗೆ ಉರಿ, ಮೂಗಿಗೆ ಕಿರಿಕಿರಿ, ಆಗುತ್ತದೆ. ನಿಮ್ಮ ಶ್ವಾಸಕೋಶ, ಬಾಯಿ, ಗಂಟಲು, ಅನ್ನನಾಳಕ್ಕೆ ಕ್ಯಾನ್ಸರ್ ಬರುತ್ತದೆ. ಹೃದಯದ ಕಾಯಿಲೆಗಳು ನಿಮ್ಮನ್ನು ಆವರಿಸಿಕೊಳ್ಳುವಂತೆ ಮಾಡುತ್ತದೆ. ನಿಮಗೆ ಕ್ಷಯರೋಗ, ಮಧುಮೇಹ ತಗುಲಿಕೊಳ್ಳುವಲ್ಲಿಯೂ ಇದು ತನ್ನ ಪ್ರಭಾವ ಬೀರುತ್ತದೆ, ನಿಮ್ಮ ನರವ್ಯೂಹವನ್ನು ಹಾಳುಮಾಡಿ ಲಕ್ವ ಹೊಡೆಸುತ್ತದೆ. ನಿಮ್ಮ ಮೆದುಳಿನ ಜೀವಕೋಶಗಳನ್ನು ಸಾಯಿಸಿ, ನೀವು ದಡ್ಡರಾಗುವಂತೆ ಮಾಡುತ್ತದೆ. ಇಷ್ಟೇ ಅಲ್ಲ, ಇನ್ನೂ ಹಲವಾರು ರೀತಿಗಳಲ್ಲಿ ನಿಮ್ಮನ್ನು, ನಿಮ್ಮ ಕುಟುಂಬವನ್ನು ಮತ್ತು ನಿಮ್ಮ ಸುತ್ತಲೂ ಇರುವವರ ಆರೋಗ್ಯವನ್ನು ಮತ್ತು ಒಟ್ಟಾರೆಯಾಗಿ ಇಡೀ ಸಮಾಜವನ್ನೇ ಹಾಳು ಮಾಡುತ್ತದೆ. ಇದೇನು ಅನ್ನುವುದು, ಈಗಾಗಲೇ ನಿಮಗೆ ಗೊತ್ತಾಗಿದೆ, ಏಕೆಂದರೆ, ಇದರ ಸೇವನೆಯಿಂದ ಆಗುವ ಸಮಸ್ಯೆಗಳು, ಅವಾಂತರಗಳ ಬಗ್ಗೆ ಹತ್ತಾರುವರ್ಷಗಳಿಂದಲೂ ಹೇಳುತ್ತಲೇ ಬರಲಾಗಿದೆ. ಹೀಗಿದ್ದರೂ ಕೂಡ, ಈ ಇದರ ಸೇವನೆ ದಿನೇ ದಿನೇ ಹೆಚ್ಚಾಗುತ್ತಿದೆ. ಹೌದು, ಸಂದೇಹವೇ ಇಲ್ಲ, ನಾವು ಹೇಳುತ್ತಿರುವುದು ತಂಬಾಕು ಮತ್ತು ವಿವಿಧ ರೂಪಗಳಲ್ಲಿ ಅದರ ಸೇವನೆಯಿಂದ ಆಗುತ್ತಿರುವ ಅನಾಹುತಗಳ ಬಗ್ಗೆಯೇ…

ಇವತ್ತು ನಮ್ಮ ಜಗತ್ತಿನಲ್ಲಿ ಸಂಭವಿಸುತ್ತಿರುವ ಹತ್ತು ಸಾವುಗಳಲ್ಲಿ ಒಂದಕ್ಕಿಂತ ಹೆಚ್ಚು ಸಾವಿನ ಕಾರಣ, ಧೂಮಪಾನಕ್ಕೆ ಸಂಬಂಧಿಸಿದ್ದೇ ಆಗಿದೆ. ಅಂತಾರಾಷ್ಟ್ರೀಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆ IARC ಪ್ರಕಾರ, ನಾವು ಯಾವುದೇ ರೂಪದಲ್ಲಿ ತಂಬಾಕು ಬಳಸಿದರೂ ಕೂಡ, ಅದು ಅಪಾಯಕಾರಿಯೇ ಅನ್ನುವುದು ವೈಜ್ಞಾನಿಕವಾಗಿ ದೃಢಪಟ್ಟಿದೆ.  ಪ್ರತಿ ವರ್ಷ ಜಗತ್ತಿನ ಸುಮಾರು 65 ಲಕ್ಷ ಜನರ ಸಾವಿಗೆ ಧೂಮಪಾನವೇ ಕಾರಣವಾಗುತ್ತಿದೆ.

ಸಮೀಕ್ಷೆಯೊಂದರ ಪ್ರಕಾರ, ಈ ರೀತಿ ಸಾಯುವವರಲ್ಲಿ ಶೇಕಡ 50 ರಷ್ಟು ಜನ ಚೀನಾ, ಭಾರತ, ಅಮೆರಿಕ, ರಷ್ಯಾದವರಾಗಿದ್ದಾರೆ. ಭಾರತ, ವಿಶ್ವದ ಮೊದಲ ಹತ್ತು ಧೂಮಪಾನಿಗಳ ದೇಶಗಳ ಪಟ್ಟಿಯಲ್ಲಿದೆ. ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ, ಸುಮಾರು ಐವತ್ತು ವರ್ಷಗಳಿಗೂ ಹೆಚ್ಚು ಸಮಯದ ಸಂಶೋಧನೆಗಳ ನಿಸ್ಸಂದೇಹ ಸಾಕ್ಷಿಗಳು ನಮ್ಮೆದುರಿನಲ್ಲಿವೆ. ಇಷ್ಟಾದರೂ ಕೂಡ, ಜಗತ್ತಿನ ನಾಲ್ವರು ಪುರುಷರಲ್ಲಿ ಒಬ್ಬ ಧೂಮಪಾನಿಯಾಗಿರುತ್ತಾನೆ. ಇಡೀ ಜಗತ್ತಿನಲ್ಲಿ, ಧೂಮಪಾನ ಮಾಡುವವರ ಒಟ್ಟು ಸಂಖ್ಯೆಯಲ್ಲಿ ಭಾರತೀಯರ ಪಾಲು ಶೇ 11.2 ರಷ್ಟಿದೆ. ಚೀನಾ, ಭಾರತ, ಇಂಡೋನೇಶಿಯ, ಅಮೆರಿಕ, ರಷ್ಯಾ, ಬಾಂಗ್ಲಾ ದೇಶ, ಜಪಾನ್, ಬ್ರೆಜಿಲ್, ಜರ್ಮನಿ ಮತ್ತು ಫಿಲಿಪೈನ್ಸ್ ದೇಶಗಳು ಅತ್ಯಂತ ಹೆಚ್ಚಿನ ಸಂಖ್ಯೆಯ ಧೂಮಪಾನಿಗಳಿರುವ ಮೊದಲ ಹತ್ತು ದೇಶಗಳಾಗಿವೆ. ಧೂಮಪಾನ ಅಭ್ಯಾಸದ ಬಗ್ಗೆ 1990ರಿಂದ 2015ರ ನಡುವೆ 195 ದೇಶಗಳಲ್ಲಿ ನಡೆದ ಅಧ್ಯಯನದಿಂದ ತಿಳಿದು ಬರುವ ಹಾಗೆ, ಧೂಮಪಾನವೇ ಅಕಾಲಿಕ ಸಾವು ಮತ್ತು ಅಂಗವಿಕಲತೆಯ ಪ್ರಮುಖ ಕಾರಣವಾಗಿದೆ.

ಒಂದು ವರದಿಯ ಪ್ರಕಾರ, ಜಗತ್ತಿನಲ್ಲಿ ಪ್ರತಿದಿನ ಸುಮಾರು ಎಂಬತ್ತರಿಂದ ತೊಂಬತ್ತೊಂಬತ್ತು ಸಾವಿರ ಹದಿಹರೆಯದವರು, ಹೊಸದಾಗಿ ಧೂಮಪಾನ ಆರಂಭಿಸುತ್ತಿದ್ದಾರೆ. ಅದೇ ರೀತಿ, ನಮ್ಮ ದೇಶದಲ್ಲಿ ಪ್ರತಿದಿನ ಸುಮಾರು ಐದೂವರೆ ಸಾವಿರ ಯುವಜನರು, ಹೊಸದಾಗಿ ತಂಬಾಕು ಉತ್ಪನ್ನಗಳ ಸೇವನೆ ಆರಂಭಿಸುತ್ತಿದ್ದಾರೆ. ನಮ್ಮ ದೇಶದ ಜನಸಂಖ್ಯೆಯ ಶೇಕಡ 35ರಷ್ಟು ವಯಸ್ಕರು, ಒಂದಲ್ಲಾ ಒಂದು ರೀತಿಯಲ್ಲಿ ತಂಬಾಕು ಸೇವನೆ ಮಾಡುತ್ತಾರೆ. ‘ಸಿಗರೇಟಿನ ಮೊದಲ ಸೇದುವಿಕೆಯೇ ಒಬ್ಬ ಯುವ ವ್ಯಕ್ತಿ, ಅದರ ಚಟಕ್ಕೆ ಸಿಲುಕುವಂತೆ ಮಾಡಲು ಸಾಕು’ ಎಂದು ತಜ್ಞರು ಹೇಳುತ್ತಾರೆ.

ಭಾರತದಲ್ಲಿ ತಂಬಾಕು ಮತ್ತು ಬಡತನ ಒಂದು ವಿಷಮ ಚಕ್ರದಂತಿವೆ. ಆದರೆ, ತಂಬಾಕು ಉತ್ಪಾದನೆ ಮತ್ತು ಬಳಕೆಯಲ್ಲಿ, ಭಾರತ ಜಗತ್ತಿನ ಮೂರನೇ ಅತಿ ದೊಡ್ಡ ದೇಶವೆಂಬ ಕುಖ್ಯಾತಿ ಪಡೆದಿದೆ. ಭಾರತದಲ್ಲಿ ತಂಬಾಕು ಬಳಕೆಗೆ ಸುದೀರ್ಘ ಇತಿಹಾಸವಿದೆ. ತಂಬಾಕಿನಿಂದ ಆಗುವ ದುಷ್ಪರಿಣಾಮಗಳನ್ನು ನೂರಾರು ವರ್ಷಗಳಿಂದಲೂ ಅರಿತುಕೊಳ್ಳಲಾಗಿದೆ, ಅದಕ್ಕಾಗಿಯೇ ಧೂಮಪಾನ, ಮದ್ಯಪಾನ ಇತ್ಯಾದಿಗಳನ್ನು ದುಷ್ಚಟಗಳೆಂದು ಕರೆದು, ಅವುಗಳಿಂದ ದೂರವಿರಬೇಕೆಂದು ಹೇಳುತ್ತಾರೆ. ಹಲವು ಮಂದಿ ಧರ್ಮಗುರುಗಳು, ಬೋಧಕರು, ಧೂಮಪಾನ ಮತ್ತು ಮಧ್ಯಪಾನ ಧರ್ಮವಿರೋಧಿ ಎಂದೇ ಹೇಳಿ ಅದನ್ನು ನಿರ್ಬಂಧಿಸಿದ್ದಾರೆ. ಇಷ್ಟಾದರೂಕೂಡ ಭಾರತದಲ್ಲಿ, ಧೂಮಪಾನ ಅನ್ನುವುದು, ಸಮಯ ಕಳೆಯುವ ಸಾಧನವಾಗಿ ಜನಪ್ರಿಯವಾಗುತ್ತಾ ಬಂದಿದೆ.  ಇತ್ತೀಚಿನ ನಾಲ್ಕು ದಶಕಗಳಲ್ಲಿ, ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಸಂಶೋಧನೆಗಳು ನಡೆದಿದ್ದು, ಮುಂದುವರಿದ ದೇಶಗಳಲ್ಲಿ ತಂಬಾಕು ಸೇವನೆ ಕಡಿಮೆಯಾಗಿದ್ದರೂ, ಅಭಿವೃದ್ಧಿಶೀಲ ದೇಶಗಳಲ್ಲಿ ಹೆಚ್ಚಾಗುತ್ತಿದೆ.

ಹತ್ತರಿಂದ ಹದಿನಾಲ್ಕು ವಯಸ್ಸಿನವರು, ಮೊದಲ ಸಿಗರೇಟ್ ಸೇವನೆ ಆರಂಭಿಸಿದ ಒಂದೆರಡು ವರ್ಷಗಳ ಒಳಗೇ, ಪ್ರತಿದಿನವೂ ಸಿಗರೇಟ್ ಸೇದುವವರಾಗಿ ಬದಲಾಗುತ್ತಾರಂತೆ. ಭಾರತದಲ್ಲಿ ಶಾಲೆ ಮತ್ತು ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಲ್ಲಿ ಶೇ 22ರಷ್ಟು ಹುಡುಗರು ಧೂಮಪಾನದ ಚಟ ಬೆಳೆಸಿಕೊಂಡಿದ್ದಾರೆ.

ತಂಬಾಕು ಸೇವನೆ ಮಾಡುವ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟ ಕುಸಿಯುವ ಸಾಧ್ಯತೆ ಇದೆ, ಎಂದು ಇತ್ತೀಚಿನ ಒಂದು ಅಧ್ಯಯನದಲ್ಲಿ ತಿಳಿದುಬಂದಿದೆ. ಕೇರಳದ ಎರ್ನಾಕುಲಂ ಜಿಲ್ಲೆಯ ಪ್ರೌಢ ಮತ್ತು ಪದವಿ ಪೂರ್ವ ಕಾಲೇಜುಗಳ ಸುಮಾರು 8 ಸಾವಿರ ವಿದ್ಯಾರ್ಥಿಗಳನ್ನು ಸಮೀಕ್ಷೆಗೆ ಒಳಪಡಿಸಿ, ಈ ವರದಿ ಸಿದ್ಧಪಡಿಸಲಾಗಿದೆ. ಇದರ ಜೊತೆಗೆ, ಧೂಮಪಾನದ ಚಟ, ಇತರೆ ಮಾದಕ ವಸ್ತುಗಳ ಸೇವನೆಯ ಚಟಕ್ಕೆ ಅಂಟಿಸಿಕೊಳ್ಳಲೂ ಕೂಡ ದಾರಿ ಮಾಡಿಕೊಡುತ್ತದೆ ಎಂದು ತಿಳಿದುಬಂದಿದೆ.

ಹತ್ತುಹದಿನೈದು ವರ್ಷಗಳ ಹಿಂದೆ, ಸಾರ್ವಜನಿಕವಾಗಿ ಧೂಮಪಾನ ಮಾಡುವ ಹೆಂಗಸು ಅಥವ ಹುಡುಗಿಯರನ್ನು ಕಾಣುವುದೇ ಅಪರೂಪವಾಗಿತ್ತು. ಆದರೆ, ಇತ್ತೀಚೆಗೆ ಭಾರತದಲ್ಲಿ ಧೂಮಪಾನ ಮಾಡುವ ಮಹಿಳೆಯರ ಸಂಖ್ಯೆಯೂ ಗಾಬರಿಹುಟ್ಟಿಸುವಂತೆ ಏರುತ್ತಿದ್ದು, ದೇಶದಲ್ಲಿ ಶೇ.3ಕ್ಕಿಂತ ಹೆಚ್ಚು ಮಹಿಳೆಯರು ಧೂಮಪಾನ ಮಾಡುತ್ತಿದ್ದಾರೆ ಎಂದು ವರದಿಗಳು ಹೇಳುತ್ತವೆ.  ಹದಿಹರೆಯದವರಲ್ಲಿ ಧೂಮಪಾನ ಅಥವ ವಿವಿಧ ರೀತಿಯಲ್ಲಿ ತಂಬಾಕು ಸೇವನೆ ಚಟ ಆರಂಭವಾಗುವುದಕ್ಕೆ ಹಲವಾರು ಕಾರಣಗಳು ಕಂಡುಬರುತ್ತವೆ.

ತಾತ, ಅಪ್ಪ, ಚಿಕ್ಕಪ್ಪ, ಅಣ್ಣ ಅಥವ ಗೆಳೆಯರಲ್ಲಿ ಯಾರಾದರೂ ಧೂಮಪಾನ ಮಾಡುವವರಿದ್ದರೆ, ಅಂತಹ ಕುಟುಂಬದ ಹುಡುಗರು, ಧೂಮಪಾನ ಆರಂಭಿಸಿಸುವ ಸಾಧ್ಯತೆ ಹೆಚ್ಚು. ಶಾಲೆ, ಕಾಲೇಜಿನಲ್ಲಿ ಉತ್ತಮ ಸಾಧನೆ ಮಾಡಲು ವಿಫಲರಾದವರು, ಭವಿಷ್ಯದ ಬಗ್ಗೆ ಕನಸೇ ಇಲ್ಲದವರು, ಅರ್ಧಕ್ಕೆ ಶಾಲೆ, ಕಾಲೇಜು ಬಿಟ್ಟವರು, ಆತಂಕ, ಖಿನ್ನತೆ ಕಾಡುತ್ತಿರುವವರು ಮತ್ತು ಆತ್ಮವಿಶ್ವಾಸ ಇಲ್ಲದವರು, ಧೂಮಪಾನ ಮತ್ತು ಇತರೆ ಮಾದಕ ವಸ್ತುಗಳನ್ನು ಸೇವನೆ ಮಾಡುವ ಸಾಧ್ಯತೆ ಹೆಚ್ಚು.

ಇವೆಲ್ಲ ಕಾರಣಗಳ ಜೊತೆಗೆ, ಟಿವಿ, ನ್ಯೂಸ್ ಪೇಪರ್ ಮತ್ತು ರಸ್ತೆ ಬದಿ ನಿಲ್ಲಿಸುವ ದೊಡ್ಡ ದೊಡ್ಡ ಫಲಕಗಳಲ್ಲಿ, ಧೂಮಪಾನದ ಬಗ್ಗೆ ಎದ್ದು ಕಾಣುವಂಥ ಜಾಹೀರಾತುಗಳೂ ಕೂಡ, ಹದಿಹರೆಯದವರ ಮೇಲೆ ದೊಡ್ಡ ಪ್ರಭಾವ ಉಂಟು ಮಾಡುತ್ತವೆ. ಸಿನಿಮಾ ಮತ್ತು ಟಿವಿ ಧಾರಾವಾಹಿಗಳಲ್ಲಿ, ಸಿಗರೇಟು ಸೇದುವುದು ಒಂದು ಸಾಮಾನ್ಯ ಮತ್ತು ಸಹಜ ವಿಚಾರವೇನೋ ಎಂಬಂತೆ ತೋರಿಸುವುದೂ ಕೂಡ, ತಾವೂ ಹಾಗೇ ಮಾಡಬೇಕು, ಅದೇ ಸರಿ, ಎಂಬ ರೀತಿಯಲ್ಲಿ ಪ್ರಚೋದನೆ ನೀಡುತ್ತದೆ. ಸಿಗರೇಟು ಸೇವನೆಯೇ ಒಂದು  ಧೀರತನ, ದಿಟ್ಟತನ, ಆತ್ಮವಿಶ್ವಾಸ, ಸಾಧನೆ, ಸ್ವಾತಂತ್ರ್ಯ ಎಂದೆಲ್ಲಾ ಭ್ರಮೆಗಳನ್ನು ಹುಟ್ಟಿಸುತ್ತದೆ. ಸಿಗರೇಟು ತಯಾರಿಕಾ ಕಂಪನಿಗಳು ಕ್ರೀಡಾಕೂಟ, ಇತ್ಯಾದಿಗಳನ್ನು ಪ್ರಾಯೋಜಿಸುತ್ತವೆ. ಇದೂಕೂಡ, ತಂಬಾಕು ಮತ್ತು ಸಿಗರೇಟು ಸೇವನೆ ಬಗ್ಗೆ ಜನರಲ್ಲಿ, ಒಂದು ರೀತಿಯ ಸದ್ಭಾವನೆ ಬರುವಂತೆ ಪ್ರೇರೇಪಿಸುತ್ತದೆ.  ಇತ್ತೀಚೆಗೆ ಮುಂದುವರೆದ ದೇಶಗಳಲ್ಲಿ, ತಂಬಾಕು  ಪದಾರ್ಥಗಳ ಜಾಹೀರಾತು ಮತ್ತು ಮಾರಾಟ ಎರಡೂ ಕಡಿಮೆಯಾಗುತ್ತಿದ್ದರೆ, ಭಾರತದಲ್ಲಿ ಇವೆರಡೂ ಹೆಚ್ಚಾಗುತ್ತಾ ಹೋಗುತ್ತಿವೆ. ತಂಬಾಕು ಮತ್ತು ಅದರ ಹೊಗೆಯಲ್ಲಿ 4 ಸಾವಿರಕ್ಕೂ ಹೆಚ್ಚು ರೀತಿಯ ರಾಸಾಯನಿಕಗಳು ಕಂಡು ಬರುತ್ತವೆ. ಇವುಗಳಲ್ಲಿ 60ಕ್ಕೂ ಹೆಚ್ಚು ರಾಸಾಯನಿಕಗಳು ಕ್ಯಾನ್ಸರ್ ಕಾರಕಗಳಾಗಿವೆ. ತಂಬಾಕಿನಲ್ಲಿರುವ ನಿಕೋಟಿನ್ ಎಂಬ ಮಾದಕವಸ್ತು, ಹೆರಾಯಿನ್ ಮತ್ತು ಕೋಕೇನ್ ಮಾದಕ ಪದಾರ್ಥಗಳಷ್ಟೇ ವ್ಯಸನಕಾರಕ.

ಭಾರತದಲ್ಲಿ ಸಿಗರೇಟಿಗಿಂತ ಹೆಚ್ಚಾಗಿ ಬೀಡಿ ಸೇವನೆ ಚಟ ಕಂಡುಬರುತ್ತದೆ. ಕೆಲವರು ಬೀಡಿ ಸೇದುವುದು ಸಿಗರೇಟು ಸೇವನೆಯಷ್ಟು ಕೆಟ್ಟದ್ದಲ್ಲ ಎಂದು ಭಾವಿಸುತ್ತಾರೆ. ಇನ್ನೂಕೆಲವರು ಹೊಟ್ಟೆಯಲ್ಲಿ ತುಂಬಿರುವ ಗ್ಯಾಸ್ ಹೋಗಲಾಡಿಸಿಕೊಳ್ಳಲು ಮತ್ತು ಮಲಬದ್ಧತೆ ನಿವಾರಿಸಿಕೊಳ್ಳಲು ಬೀಡಿ ಸೇವನೆ ಲಾಭದಾಯಕ ಎಂಬ ತಪ್ಪು ಸಲಹೆ ನೀಡುತ್ತಾರೆ. ಬೀಡಿಯೂ ಕೂಡ ಸಿಗರೇಟಿನಷ್ಟೇ ಹಾನಿಕಾರಕ. ಬೀಡಿ ಕಟ್ಟುವುದು, ಭಾರತದಲ್ಲಿ ಲಕ್ಷಾಂತರ ಜನರ ಜೀವನೋಪಾಯ. ಇದರಲ್ಲಿ ಹೆಂಗಸರು, ಮಕ್ಕಳೂ ಸೇರಿರುತ್ತಾರೆ. ಇವರೆಲ್ಲರೂ ಕೂಡ, ಒಂದೇ ಸಮನೆ ತಂಬಾಕಿನ ಸಹವಾಸದಲ್ಲಿರುವುದು, ತಂಬಾಕು ಬಳಕೆ ಮಾಡಿದಷ್ಟೇ ಅಪಾಯಕರ. ಹೀಗಾಗಿ, ಇಂಥವರೂ ಕೂಡ ಶ್ವಾಸಕೋಶದ ಕಾಯಿಲೆಗಳು ಮತ್ತು ಅನ್ನನಾಳದ ಕ್ಯಾನ್ಸರ್‌ ಗೆ ತುತ್ತಾಗುವ ಸಾಧ್ಯತೆ ಹೆಚ್ಚು. ಸಿಗರೇಟು ಅನ್ನುವುದು, ಸುತ್ತಿದ ಪೇಪರ್ ನಲ್ಲಿರುವ ತಂಬಾಕು. ಇತ್ತೀಚಿನ ದಿನಗಳಲ್ಲಿ ಜನರನ್ನು ಸೆಳೆಯಲು, ವಿವಿಧ ಫಿಲ್ಟರ್‌ ಮತ್ತು ಫ್ಲೇವರ್ ಗಳನ್ನು ಹೊಂದಿರುವ ಸಿಗರೇಟುಗಳನ್ನೂ ತಯಾರಿಸುತ್ತಾರೆ ಮತ್ತು  ಇಂಥವನ್ನು ಬಳಸುವುದರಿಂದ ಹೆಚ್ಚು ಅಪಾಯವಿಲ್ಲ ಎಂದು ಸುಳ್ಳು ಹೇಳುತ್ತಾರೆ. ಧೂಮಪಾನ ಅನ್ನುವುದು ಬೀಡಿ, ಸಿಗರೇಟಿನ ಸೇವನೆಗೆ ಮಾತ್ರ ಸೀಮಿತವಾಗಿಲ್ಲ. ಸುತ್ತಿದ ತಂಬಾಕಿನ ಎಲೆಯೊಳಗೆ ತಂಬಾಕಿನ ಪುಡಿ ಹೊಂದಿರುವ ಸಿಗಾರ್, ಜೇಡಿ ಮಣ್ಣಿನ ಕೊಳವೆಯಲ್ಲಿ ತಂಬಾಕು ಹಾಕಿ ಸೇವಿಸುವ ಚಿಲ್ಲಮ್ ಕೂಡ ಬಳಕೆಯಲ್ಲಿದೆ. ಒಂದೇ ಚಿಲ್ಲಮ್ ಅನ್ನು ಹಲವರು ಸೇದುತ್ತಾರೆ. ಇದರಿಂದ ಕ್ಯಾನ್ಸರ್ ಜೊತೆಗೆ ಶೀತ, ಜ್ವರ ಮತ್ತು ಇತರೆ ಶ್ವಾಸಕೋಶದ ಕಾಯಿಲೆಗಳೂ ಹಬ್ಬುವ ಸಾಧ್ಯತೆಗಳಿವೆ. ಇದೇ ಚಿಲ್ಲಮ್ ಅನ್ನು, ಅಫೀಮಿನಂಥ ಮಾದಕ ವಸ್ತುಗಳನ್ನು ಸೇದಲೂ ಕೂಡ ಬಳಸಲಾಗುತ್ತದೆ. ಇತ್ತೀಚೆಗೆ ಹುಕ್ಕಾ ಸೇದುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಐಶಾರಾಮಿ ಕಾಫಿ ಬಾರ್‌ ಗಳಲ್ಲಿ ಹುಕ್ಕಾ ಸೇದುವುದು ಯುವಜನರ ಪ್ರತಿಷ್ಠೆಯ ಸಂಕೇತದಂತೆ ತೋರಿಸಲಾಗುತ್ತಿದೆ. ಹುಕ್ಕಾ ಸೇವನೆ, ಸುರಕ್ಷಿತ ಮತ್ತು ಒಂದುರೀತಿಯಲ್ಲಿ ಕಡ್ಲೆಕಾಯಿ ತಿಂದು, ಟೈಮ್ ಪಾಸ್ ಮಾಡುವಂಥ ಚಟುವಟಿಕೆ ಎಂಬ ಸೋಗಿನಲ್ಲಿ ತೋರಿಸಲಾಗುತ್ತಿದೆ. ಕಾಲೇಜಿಗೆ ಹೋಗುವ ಹುಡುಗ ಹುಡುಗಿಯರು ಹುಕ್ಕಾ ದಾಸರಾಗಿ ಹಾಳಾಗುತ್ತಿದ್ದಾರೆ.  ಚುಟ್ಟಾಗಳು ಒಂದು ರೀತಿಯ ಸಾದಾ ಸಿಗಾರ್‌ ಗಳು, ಇವನ್ನು ಭಾರತದ ಕರಾವಳಿಯ ಹಲವು ಪ್ರದೇಶಗಳಲ್ಲಿ ಸೇದುತ್ತಾರೆ. ಉಲ್ಟಾ ಚುಟ್ಟಾ ಸೇವನೆ ಅಂದರೆ, ಉರಿಯುವ ತುದಿಯನ್ನು ಬಾಯೊಳಗೆ ಇರಿಸಿಕೊಂಡು ಹೊಗೆ ಕುಡಿಯುವುದು, ಬಾಯಿ ಕ್ಯಾನ್ಸರ್ ಸಾಧ್ಯತೆಯನ್ನು ಹೆಚ್ಚು ಮಾಡುತ್ತದೆ. ಖೈನಿ ಅನ್ನುವುದು ಬಾಯಲ್ಲಿ ಹಾಕಿಕೊಂಡು ಜಗಿಯುವಂಥದ್ದು, ಇದರಲ್ಲಿ, ಒಣಗಿದ ತಂಬಾಕು ಎಲೆಗಳನ್ನು ಪುಡಿಮಾಡಿ ಅದರ ಜೊತೆಗೆ ಸುಣ್ಣ ಬೆರೆಸಲಾಗಿರುತ್ತದೆ. ಈ ಖೈನಿಯನ್ನು ದವಡೆಯಲ್ಲಿ ಒತ್ತಿರಿಸಿಕೊಂಡು ರಸ ಕುಡಿಯುವವರ ಸಂಖ್ಯೆಯೇ ಹೆಚ್ಚು. ಇದು ಒಸಡಿನ ಕ್ಯಾನ್ಸರ್‌ ಗೆ ದಾರಿಯಾಗುತ್ತದೆ. ಕೇವಲ ಒಂದು ರೂಪಾಯಿಗೆ ಸಣ್ಣ ಸಣ್ಣ ಪೊಟ್ಟಣಗಳಲ್ಲಿ ದೊರೆಯುವ ಗುಟ್ಕಾ ತುಂಬಾ ಜನಪ್ರಿಯ. ಇದನ್ನು ಹದಿಹರೆಯದವರು ಮತ್ತು ಮಕ್ಕಳೂ ಬಳಸುತ್ತಾರೆ. ಇದರಲ್ಲಿ ಅಡಿಕೆ ಪುಡಿ, ತಂಬಾಕಿನ ಪುಡಿ, ಸುವಾಸನೆ ಮತ್ತು ವ್ಯಸನಕಾರಕವಾದ ವಸ್ತುಗಳನ್ನೂ ಸೇರಿಸಿರುತ್ತಾರೆ. ಗುಟ್ಕಾ ಬಳಕೆಯಿಂದ ಹಲ್ಲುಗಳ ಬಣ್ಣ ಹಾಳಾಗುವುದರ ಜೊತೆಗೆ, ಬಾಯಿ ಕ್ಯಾನ್ಸರ್ ಬರುತ್ತದೆ. ಇನ್ನು, ತಂಬಾಕಿನ ಪ್ರಮಾಣವನ್ನು ಆಧರಿಸಿ, ವಿವಿಧ ದರ್ಜೆಯ ಪಾನ್‌ ಗಳು ಸಿಗುತ್ತವೆ. ಭಾರತದಲ್ಲಿ ವಯಸ್ಸಾದವರು ಹೆಚ್ಚಾಗಿ ಬಳಸುವ ನಶ್ಯ ಅನ್ನುವುದು, ತಂಬಾಕಿನ ಪುಡಿ ಮತ್ತು ಇತರೆ ರಾಸಾಯನಿಕಗಳ ಒಂದು ಮಿಶ್ರಣ. ಇದು, ಮೂಗು ಮತ್ತು ದವಡೆಯ ಕ್ಯಾನ್ಸರ್‌ಗೆ ಕಾರಣವಾಗಬಹುದು.  ಒಟ್ಟಿನಲ್ಲಿ, ಧೂಮಪಾನಿಗಳು ಬಾಯಿ ಕ್ಯಾನ್ಸರ್, ಗಂಟಲು ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್ ಮತ್ತಿತರ ಗಂಭೀರ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇದೆ.  ಇದರ ಜೊತೆಗೆ, ಧೂಮಪಾನಿಗಳಿಗೆ ಹೃದಯದ ಸಮಸ್ಯೆ, ಲಕ್ವ ಅಥವ ಪಾರ್ಶ್ವವಾಯು ಮತ್ತು ಅಸ್ತಮಾದಂಥ ಶ್ವಾಸಕೋಶದ ಕಾಯಿಲೆಗಳಿಗೂ ಕಾರಣವಾಗಬಹುದು.

ಯಾವುದೇ ರೀತಿಯಲ್ಲಿ ತಂಬಾಕು ಸೇವನೆ ಮಾಡಿದರೂ ಕೂಡ, ಅದರಿಂದ ರಕ್ತದ ಒತ್ತಡ ಹೆಚ್ಚಾಗುತ್ತದೆ. ಇದು ಹೃದಯದ ಕಾಯಿಲೆಗೆ ಕಾರಣವಾಗಬಹುದು. ಧೂಮಪಾನ ಮತ್ತು ತಂಬಾಕು ಉತ್ಪನ್ನಗಳ  ಸೇವನೆಯಿಂದ ಮಧುಮೇಹ ಅಥವ ಡಯಾಬಿಟಿಸ್ ಕೂಡ ಬರಬಹುದು.

ಗರ್ಭಿಣಿಯರು ಸಿಗರೇಟ್ ಸೇದುವುದು ಅಥವ ತಂಬಾಕು ಹೊಂದಿರುವ ಇತರೆ ಪದಾರ್ಥಗಳನ್ನು ಸೇವನೆ ಮಾಡುವುದರಿಂದ, ಅವಧಿಪೂರ್ವ ಶಿಶು ಜನನ ಸೇರಿದಂತೆ ಹಲವು ರೀತಿಯ ಸಮಸ್ಯೆಗಳು ಉಂಟಾಗಬಹುದು.  ಸಿಗರೇಟ್ ಇತ್ಯಾದಿ ತಂಬಾಕು ಉತ್ಪನ್ನಗಳ ಬಳಕೆಯಿಂದ, ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಬಹುದು.

ಇದೆಲ್ಲವೂ ಸಿಗರೇಟು ಸೇದುವವರ ಮತ್ತು ಇತರೆ ರೀತಿಗಳಲ್ಲಿ ನೇರವಾಗಿ ತಂಬಾಕಿನ ಉತ್ಪನ್ನಗಳನ್ನು ಬಳಸುವವರಿಗೆ ಆಗಬಹುದಾದ ಸಮಸ್ಯೆಗಳು. ಆದರೆ, ನಿಮ್ಮ ಪಕ್ಕದಲ್ಲಿ ಕುಳಿತಿರುವ ವ್ಯಕ್ತಿ ಧೂಮಪಾನ ಮಾಡುತ್ತಿದ್ದರೆ ನನಗೇನಾಗಬೇಕು ಎಂದು ನೀವು ಸುಮ್ಮನೆ ಕೂರುವಂತಿಲ್ಲ. ಏಕೆಂದರೆ, ಅದರಿಂದ ನಿಮ್ಮ ಆರೋಗ್ಯಕ್ಕೂ ಸಮಸ್ಯೆ ಆಗುತ್ತದೆ.  ಪರೋಕ್ಷ ಧೂಮಪಾನ ಅಥವ ಸೆಕೆಂಡ್ ಹ್ಯಾಂಡ್ ಸ್ಮೋಕಿಂಗ್‌ ನಿಂದ, ಜಗತ್ತಿನಲ್ಲಿ ಪ್ರತಿ ವರ್ಷ ಸುಮಾರು 6 ಲಕ್ಷ ಜನ ಸಾಯುತ್ತಾರೆ. ಈ ಸೆಕೆಂಡ್ ಹ್ಯಾಂಡ್ ಸ್ಮೋಕಿಂಗ್‌ ತುಂಬಾ ಅಪಾಯಕಾರಿ. ಧೂಮಪಾನಿಗಳಿಗೆ ಆಗಬಹುದಾದ ಎಲ್ಲಾ ರೀತಿಯ ಹಾನಿ, ಸೆಕೆಂಡ್ ಹ್ಯಾಂಡ್ ಹೊಗೆ ಕುಡಿದವರಿಗೂ ಆಗಬಹುದು. ಎಳೆಯ ಮಕ್ಕಳ ಸಮೀಪ ಧೂಮಪಾನ ಮಾಡುವುದರಿಂದ ಆ ಮಕ್ಕಳಲ್ಲಿ ಕಿವಿ ಸೋಂಕು ಉಂಟಾಗಬಹುದು ಮತ್ತು ಆ ಮಕ್ಕಳು ಇದ್ದಕ್ಕಿದ್ದಂತೆ ಸಾವನ್ನಪ್ಪುವ ಸಾಧ್ಯತೆಗಳೂ ಇವೆ.

ಇತ್ತೀಚಿನ ವರ್ಷಗಳಲ್ಲಿ ಹದಿಹರೆಯದವರಲ್ಲಿ ತಂಬಾಕು ಬಳಕೆ ಸರ್ವವ್ಯಾಪಿ  ಪಿಡುಗಾಗಿ ಬೆಳೆಯುತ್ತಿದೆ. ಹೀಗಾಗಿ, ಶಾಲಾ ಕಾಲೇಜು ಮಟ್ಟದಿಂದ ಹಿಡಿದು ಸಮುದಾಯಗಳನ್ನು ತಲುಪುವ ಮಟ್ಟಕ್ಕೆ, ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ.

ಇತ್ತೀಚಿನ ವರ್ಷಗಳಲ್ಲಿ, ಭಾರತ ಸರ್ಕಾರ ತಂಬಾಕಿನ ಉತ್ಪನ್ನಗಳ ಬಳಕೆ ಮತ್ತು ಮಾರಾಟದ ಮೇಲೆ ಸಾಕಷ್ಟು ನಿರ್ಬಂಧ ಹೇರಿದೆ. ಸಾರ್ವಜನಿಕ ಸ್ಥಳಗಳಲ್ಲಿ, ರೈಲ್ವೇ ನಿಲ್ದಾಣ, ಸರ್ಕಾರಿ ಕಚೇರಿ, ಆಸ್ಪತ್ರೆಗಳಲ್ಲಿ ತಂಬಾಕು ಉತ್ಪನ್ನಗಳ ಬಳಕೆ ನಿರ್ಬಂಧಿಸಲಾಗಿದೆ. ಶಾಲಾ ಕಾಲೇಜುಗಳ ಬಳಿಯೂ ತಂಬಾಕಿನ ಉತ್ಪನ್ನ ಮಾರಾಟ ಮಾಡುವಂತಿಲ್ಲ. ಆದರೆ, ಇದೆಲ್ಲವೂ ಕೇವಲ ತೋರಿಕೆಯ ನಿರ್ಬಂಧ ನಿಷೇಧಗಳಾಗಿವೆ. ಕೈಯಲ್ಲಿ ಕಾಸಿದ್ದರೆ, ಯಾವುದೇ ವಯಸ್ಸಿನವರಿಗೂ ಸಿಗರೇಟು, ಇತ್ಯಾದಿಗಳು ಸಿಗುವುದು ಕಷ್ಟವೇನೂ ಅಲ್ಲ. ಹೀಗಾಗಿ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು, ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರುವ ಮೂಲಕ, ಧೂಮಪಾನ ಮತ್ತು ಇತರೆ ರೀತಿಯಲ್ಲಿ ತಂಬಾಕು ಸೇವನೆ ಮೇಲೆ ನಿರ್ಬಂಧ ಹೇರಬೇಕು. ಶಾಲೆ, ಕಾಲೇಜುಗಳು, ಮಾಧ್ಯಮಗಳು ಮತ್ತು ಸರ್ಕಾರೇತರ ಸಂಘ ಸಂಸ್ಥೆಗಳನ್ನು ಬಳಸಿಕೊಂಡು ಎಲ್ಲರಲ್ಲೂ ಅರಿವು ಮೂಡಿಸಬೇಕು. ಇಲ್ಲವಾದಲ್ಲಿ ತಂಬಾಕು ಅನ್ನುವುದು ಮಾನವನ ಬದುಕನ್ನು ನುಂಗಿಹಾಕುವುದು ಖಚಿತ.

 

 

 
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ