ಹತ್ಯೆ ಖಂಡಿಸಿ ರಾಜ್ಯಾದಂತ ಪ್ರತಿಭಟನೆ!

Kannada News

06-09-2017

ಬಾಗಲಕೋಟೆ: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ರಾಜ್ಯಾದಂತ ಪ್ರತಿಭಟನೆಗಳು ನಡೆಯುತ್ತಿವೆ. ಪ್ರತಿಭಟನಾಕಾರರು, ಕೂಡಲೆ ಹಂತಕರನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.  

ಬಾಗಲಕೋಟೆಯಲ್ಲಿ ಆಮ್ ಆದ್ಮಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ನಗರದ ಬಸವೇಶ್ವರ ವೃತ್ತದಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಹತ್ಯೆಯನ್ನು, ತೀವ್ರವಾಗಿ ಖಂಡಿಸಿದ ಆಮ್ ಆದ್ಮಿ ಮುಖಂಡರು, ದುಷ್ಕರ್ಮಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದರು.

ಕೋಲಾರದಲ್ಲೂ, ಗೌರಿ ಲಂಕೇಶ್ ಹತ್ಯೆ ಖಂಡಿಸಿ, ವಿವಿಧ ಸಂಘಟನೆಗಳಿಂದ ಮೌನ ಪ್ರತಿಭಟನೆ ನಡೆಸಿದ್ದಾರೆ. ಕೋಲಾರ ನಗರದ ಗಾಂಧಿ ವನದಲ್ಲಿ ಮೌನ ಪ್ರತಿಭಟನೆಯೊಂದಿಗೆ, ನುಡಿ ನಮನದ ಮೂಲಕ ಗೌರಿ ಲಂಕೇಶ್ ಸಾವಿಗೆ ನಮನ ಸಲ್ಲಿಸಿ, ಕೂಡಲೇ ಆರೋಪಿಗಳ ಬಂಧನಕ್ಕೆ ಆಗ್ರಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ರೀತಿಯ ಕೃತ್ಯ ಮರುಕಳಿಸದಂತೆ ಎಚ್ಚರವಹಿಸಲು ಸರ್ಕಾರವನ್ನು ಒತ್ತಾಯಿಸಿದರು.

ಇನ್ನು ಮೈಸೂರಿನಲ್ಲಿ, ಖ್ಯಾತ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ, ಜಿಲ್ಲಾ ಪತ್ರಕರ್ತರ ಸಂಘದಿಂದ ಸಾಂಕೇತಿಕವಾಗಿ ಮೌನ ಪ್ರತಿಭಟನೆ ನಡೆಸಿದರು. ಮೈಸೂರಿನಲ್ಲಿ ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಮೌನ ಪ್ರತಿಭಟನೆ ಮಾಡಿದ ಪತ್ರಕರ್ತರು. ಜಿಲ್ಲಾಧಿಕಾರಿ ಕಚೇರಿ ಬಳಿ ಯಾವುದೇ ರೀತಿಯ ಘೋಷಣೆಗಳನ್ನು ಕೂಗದೇ ಮೌನ ಪ್ರತಿಭಟನೆ ಮಾಡಿದರು. ಹಿರಿಯ ಪತ್ರಕರ್ತರಾದ ಕೃಷ್ಣಪ್ರಸಾದ್, ರಾಜಶೇಖರ ಕೋಟಿ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ ಮಹೇಂದ್ರ ಮೊದಲಾದ ಪ್ರಮುಖರು ಸಾಂಕೇತಿಕ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ಹುಬ್ಬಳ್ಳಿಯಲ್ಲೂ ಹತ್ಯೆ ಖಂಡಿಸಿ, ವಿವಿಧ ಸಂಘಟನೆಗಳು, ನಗರದ ಕೋರ್ಟ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ರಾಜ್ಯದಲ್ಲಿ ಸೂಕ್ತ ರಕ್ಷಣೆ ನೀಡದ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಆಕ್ರೋಶ ವ್ಯಕ್ತಪಡಿಸಿದರು, ಹತ್ಯೆ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದರು. ಕರವೇ ಸೇರಿದಂತೆ ವಿವಿಧ ಜನಪರ ಸಂಘಟನೆಗಳು, ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಅಲ್ಲದೇ ಪ್ರತಿಭಟನಾಕಾರರು, ಎರಡು ನಿಮಿಷಗಳ ಕಾಲ ಮೌನಾಚರಣೆ ಮಾಡಿ, ಹತ್ಯೆಯಾದ ಹಿರಿಯ ಪತ್ರಕರ್ತೆ ಆತ್ಮಕ್ಕೆ ಶಾಂತಿ ಕೋರಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ