ಆರ್‍ಬಿಐ ಕ್ರಮ ಪ್ರಶ್ನಿಸಿ ಹೈಕೋಟ್‍ಗೆ ಅರ್ಜಿ ಸಲ್ಲಿಸಿದ ಕ್ಯಾಂಪ್ಕೋ ಸಂಸ್ಥೆ

Kannada News

05-09-2017

ಬೆಂಗಳೂರು-ಕಳವು ಪ್ರಕರಣವೊಂದರಲ್ಲಿ ನ್ಯಾಯಾಲಯದ ವಶದಲ್ಲಿರುವ ಹಳೆಯ ನೋಟುಗಳನ್ನು ಹೊಸ ನೋಟುಗಳಿಗೆ ವಿನಿಮಯ ಮಾಡಿಕೊಡಲು ಭಾರತೀಯ ರಿಸರ್ವ್ ಬ್ಯಾಂಕ್‍ಗೆ (ಆರ್‍ಬಿಐ) ನಿರ್ದೇಶಿಸುವಂತೆ ಕೋರಿ ಕ್ಯಾಂಪ್ಕೋ ಸಂಸ್ಥೆ ಹೈಕೋರ್ಟ್ ಮೊರ ಹೋಗಿದೆ
ಕ್ಯಾಂಪ್ಕೋ ಸಂಸ್ಥೆಯು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಆರ್‍ಬಿಐ ಹಾಗೂ ಬೀರೂರು ಪೊಲೀಸರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.2015ರ ಏ.18ರಂದು ಶಿವಮೊಗ್ಗದ ಕ್ಯಾಂಪ್ಕೋ ಪ್ರಧಾನ ವ್ಯವಸ್ಥಾಪಕರು ತಮ್ಮ ಶಾಖೆಯಲ್ಲಿ 4,82,896 ರೂ. ಕಳುವಾಗಿರುವ ಸಂಬಂಧ ಬೀರೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ಸಂಬಂಧ ತನಿಖೆ ನಡೆಸಿದ್ದ ಪೊಲೀಸರು ಕ್ಯಾಂಪ್ಕೋನ ಮೂವರು ನೌಕರರನ್ನು ಬಂಧಿಸಿ 2,53,150 ರೂ. ವಶಕ್ಕೆ ಪಡೆದು ಅದನ್ನು ಅಧೀನ ನ್ಯಾಯಾಲಯಕ್ಕೆ ಒಪ್ಪಿಸಿದ್ದರು.
ಈ ಹಣವನ್ನು ಬಿಡುಗಡೆ ಮಾಡುವಂತೆ ಕೋರಿ ಕ್ಯಾಂಪ್ಕೋ ಸಲ್ಲಿಸಿದ್ದ ಅರ್ಜಿಯನ್ನು ಅಧೀನ ನ್ಯಾಯಾಲಯ ವಜಾಗೊಳಿಸಿತ್ತು. ಅಧೀನ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಕ್ಯಾಂಪ್ಕೋ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಅರ್ಜಿದಾರರ ಹಣ ಬಿಡುಗಡೆ ಮಾಡುವಂತೆ ಅಧೀನ ನ್ಯಾಯಾಲಯಕ್ಕೆ ಕಳೆದ ಮಾ.8ರಂದು ಆದೇಶಿಸಿತ್ತು.
ಪ್ರಕರಣದ ಸಂಬಂಧ ಪೊಲೀಸರು ತನಿಖೆ ಪೂರ್ಣಗೊಳಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ ನಂತರ 2017ರ ಮೇ 21ರಂದು ಅಧೀನ ನ್ಯಾಯಾಲಯ ಅರ್ಜಿದಾರರ ಹಣ ಬಿಡುಗಡೆ ಮಾಡಿತ್ತು. ಆದರೆ ಈ ವೇಳೆ ಹಳೆಯ ನೋಟುಗಳು ಅಮಾನ್ಯಗೊಂಡಿದ್ದವು. ಈ ಬಗ್ಗೆ ಜುಲೈ 18ರಂದು ಆರ್‍ಬಿಐಗೆ ಪತ್ರ ಬರೆದಿದ್ದ ಕ್ಯಾಂಪ್ಕೋ, ಹಳೇ ನೋಟುಗಳನ್ನು ಹೊಸದಾಗಿ ಬದಲಿಸಿಕೊಡುವಂತೆ ಮನವಿ ಮಾಡಿತ್ತು.
ಆದರೆ ಈ ಮನವಿಯನ್ನು ತಿರಸ್ಕರಿಸಿದ್ದ ಆರ್‍ಬಿಐ, ಹಳೆಯ ನೋಟುಗಳ ವಿನಿಮಯಕ್ಕೆ 2017ರ ಜೂ.30 ಕೊನೆಯ ದಿನವಾಗಿದೆ. ಈಗ ನೋಟುಗಳನ್ನು ಬದಲಿಸಲು ಸಾಧ್ಯವಿಲ್ಲ. ಒಂದೊಮ್ಮೆ ಕಳುವಾದ ನೋಟುಗಳ ಮೇಲಿನ ಸರಣಿ ಸಂಖ್ಯೆಗಳನ್ನು ಪೊಲೀಸರ ಮಹಜರಿನಲ್ಲಿ ಅಥವಾ ನ್ಯಾಯಾಲಯದ ಆದೇಶ ಪ್ರತಿಯಲ್ಲಿ ಉಲ್ಲೇಖಿಸಿದ್ದರೆ ಮಾತ್ರ ವಿನಿಮಯ ಮಾಡಲು ಸಾಧ್ಯವೆಂದು ತಿಳಿಸಿತ್ತು. ಆರ್‍ಬಿಐ ಕ್ರಮ ಪ್ರಶ್ನಿಸಿ ಇದೀಗ ಕ್ಯಾಂಪ್ಕೋ ಹೈಕೋಟ್‍ಗೆ ಅರ್ಜಿ ಸಲ್ಲಿಸಿದೆ.



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ