ಸ್ನೇಹಿತೆಯ ಒಡವೆಯನ್ನು ದೋಚಲು ಯತ್ನಿಸಿದ್ದ ಮಹಿಳೆ

Kannada News

05-09-2017

ಬೆಂಗಳೂರು - ಚಿನ್ನಾಭರಣಗಳನ್ನು ಬ್ಯಾಂಕ್ ಲಾಕರ್‍ನಲ್ಲಿ ಇಡಲು ಸ್ನೇಹಿತೆ ಜತೆ ಹೋಗಿ ಗೆಳೆಯನ ಮೂಲಕ ಮಾರ್ಗಮಧ್ಯೆಯೇ ಅವುಗಳನ್ನು ಕಳವು ಮಾಡಿಸಿ, ಸಂಚಾರ ಪೊಲೀಸರ ಮೇಲೆ ಕಳ್ಳತನ ಹೊರಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಚಾಲಾಕಿ ಮಹಿಳೆಯೊಬ್ಬಳನ್ನು ಮಲ್ಲೇಶ್ವರಂ ಪೊಲೀಸರು ಬಂಧಿಸಿದ್ದಾರೆ.
ಕೆಆರ್‍ಪುರಂನ ಸಿಗೇಹಳ್ಳಿಯ ಕೌಶಲ್ಯ(35)ಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದ್ದ ಆಭರಣಗಳನ್ನು ಕಳವು ಮಾಡಿದ್ದ ಆಕೆಯ ಗೆಳೆಯ ಮಹಾಲಕ್ಷ್ಮಿ ಲೇಔಟ್‍ನ ಕಾರು ಚಾಲಕ ಸುದರ್ಶನ್‍ಗಾಗಿ ತೀವ್ರ ಶೋಧ ನಡೆಸಲಾಗಿದೆ. ಕೌಶಲ್ಯಳಿಂದ 7ಲಕ್ಷ 38 ಸಾವಿರ ಮೌಲ್ಯದ 257 ಗ್ರಾಂ ಚಿನ್ನಾಭರಣ,383 ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೌಶಲ್ಯಳಿಗೆ ವಿವಾಹವಾಗಿದ್ದು ಆಕೆಗೆ ಸುದರ್ಶನ್ ಹೇಗೆ ಪರಿಚಯವಾಗಿದ್ದ ಎನ್ನುವುದರ ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಚೇತನ್ ಸಿಂಗ್ ರಾತೋರ್ ತಿಳಿಸಿದ್ದಾರೆ.
`ದುಬೈನಲ್ಲಿ ಮನೆಗೆಲಸ ಮಾಡುತ್ತಿದ್ದ ಕೌಶಲ್ಯ, 6 ತಿಂಗಳ ಹಿಂದೆ ನಗರಕ್ಕೆ ಬಂದು ಸಿಗೇಹಳ್ಳಿಯಲ್ಲಿ ನೆಲೆಸಿದ್ದಳು.ಮನೆಕೆಲಸ ಮಾಡಲು ಮನೆ ಮನೆಗೆ ಹೋಗುತ್ತಿದ್ದ ಆಕೆಗೆ  ಕೆ.ಆರ್.ಪುರದ ಆರ್‍ಕೆಎಂ ಲೇಔಟ್ ನಿವಾಸಿ ರೇಣುಕಾ ಶ್ರೀಧರ್ ಎಂಬುವರ ಪರಿಚಯವಾಗಿತ್ತು. ಈ ಸ್ನೇಹದಿಂದಾಗಿ ಆಗಾಗ್ಗೆ ಅವರ ಮನೆಗೆ ಹೋಗಿ ಬರುತ್ತಿದ್ದ ಕೌಶಲ್ಯ, ಅವರ ಮನೆಯಲ್ಲಿ ಹೆಚ್ಚಿನ ಹಣ ಒಡವೆ ಹೆಚ್ಚಿರುವುದನ್ನು ಗಮನಿಸಿ ಈ ಕೃತ್ಯವೆಸಗಿದ್ದಳು ಎಂದು ಹೇಳಿದ್ದಾರೆ.
ಕಳೆದ ಸೆ.1ರಂದು ಬೆಳಿಗ್ಗೆ `ರೇಣುಕಾ ತಮ್ಮಲ್ಲಿದ್ದ ಚಿನ್ನಾಭರಣಗಳನ್ನು ಲಾಕರ್‍ನಲ್ಲಿಡಲು ಮಲ್ಲೇಶ್ವರದ ಸಿಂಡಿಕೇಟ್ ಬ್ಯಾಂಕ್‍ಗೆ ಹೊರಟಿದ್ದರು. ಲಕ್ಷಾಂತರ ಮೌಲ್ಯದ ಆಭರಣ ಇಟ್ಟುಕೊಂಡು ಒಬ್ಬರೇ ಹೋಗುವುದು ಬೇಡವೆಂದು ಕೌಶಲ್ಯಳನ್ನೂ ಜತೆಗೆ ಕರೆದಿದ್ದರು. ಆಕೆ ಕೂಡಲೇ ಮನೆಯ ಹತ್ತಿರ ಬಂದಿದ್ದಳು.'
ಸ್ಕೂಟರ್‍ನಲ್ಲಿ ಹೊರಟು 10 ಗಂಟೆಗೆ ಮಲ್ಲೇಶ್ವರಕ್ಕೆ ಬಂದ ಅವರಿಬ್ಬರೂ, ತಿಂಡಿ ತಿನ್ನಲು ಸಿ.ಟಿ.ಆರ್ ಹೋಟೆಲ್‍ಗೆ ತೆರಳಿದ್ದರು. ಈ ವೇಳೆ ಶೌಚಾಲಯಕ್ಕೆ ಹೋಗಿ ಗೆಳೆಯ ಸುದರ್ಶನ್‍ಗೆ ಕರೆ ಮಾಡಿದ್ದ ಕೌಶಲ್ಯ `ಗೆಳತಿಯ ಸ್ಕೂಟರ್‍ನಲ್ಲಿ ಆಭರಣಗಳಿವೆ. ತಕ್ಷಣ ಮಲ್ಲೇಶ್ವರಕ್ಕೆ ಬಾ. ಅವುಗಳನ್ನು ಹೇಗಾದರೂ ಮಾಡಿ ಕಳವು ಮಾಡಬೇಕು' ಎಂದಿದ್ದಳು. ಹಾಗೆ ಹೇಳಿದ 20 ನಿಮಿಷಗಳಲ್ಲೇ ಆತ ಮಲ್ಲೇಶ್ವರಕ್ಕೆ ಬಂದಿದ್ದಾನೆ.
ತಿಂಡಿ ತಿಂದು ಹೋಟೆಲ್‍ನಿಂದ ಹೊರ ಬಂದ ಬಳಿಕ, `ಮಲ್ಲೇಶ್ವರ 8ನೇ ಅಡ್ಡರಸ್ತೆಯಲ್ಲಿ ಸ್ವಲ್ಪ ಕೆಲಸವಿದೆ. ಅದನ್ನು ಮುಗಿಸಿಕೊಂಡು ಬ್ಯಾಂಕ್‍ಗೆ ಹೋಗೋಣ' ಎಂದು ರೇಣುಕಾ ಅವರನ್ನು ನಂಬಿಸಿದ್ದಳು. ಅಲ್ಲಿಂದ ತಾನೇ ಸ್ಕೂಟರ್ ಓಡಿಸಿಕೊಂಡು ಬಂದ ಆಕೆ, ಫೋಟೊ ಸ್ಟುಡಿಯೊವೊಂದರ ಬಳಿ ವಾಹನ ನಿಲ್ಲಿಸಿ ಕೀಯನ್ನು ಸ್ಕೂಟರ್‍ನಲ್ಲೇ ಬಿಟ್ಟಳು.
ಪರಿಚಿತರನ್ನು ಮಾತನಾಡಿಸಿಕೊಂಡು ಬರೋಣ ಬನ್ನಿ' ಎಂದು ಗೆಳತಿಯನ್ನು ಅಲ್ಲಿಂದ ಕರೆದುಕೊಂಡು ಹೋದ ಕೌಶಲ್ಯ, ಅವರಿಗೆ ತಿಳಿಯದಂತೆ ಗೆಳೆಯನಿಗೆ ಕರೆ ಮಾಡಿದ್ದಳು. `ಸ್ಕೂಟರನ್ನು ಸ್ಟುಡಿಯೊ ಬಳಿ ನಿಲ್ಲಿಸಿದ್ದೇನೆ. ಅದರ ನೋಂದಣಿ ಸಂಖ್ಯೆ ಕೆಎ 53 ಇಜಿ 5495. ಕೀಯನ್ನು ಅದರಲ್ಲೇ ಬಿಟ್ಟಿದ್ದೇನೆ. ಡಿಕ್ಕಿಯಲ್ಲಿರುವ ಒಡವೆಗಳನ್ನು ತೆಗೆದುಕೊಂಡು ಹೋಗು' ಎಂದಿದ್ದಳು.
ಕೂಡಲೇ ಅಲ್ಲಿಗೆ ಬಂದ ಸುದರ್ಶನ್ , ಒಡವೆ ಮಾತ್ರವಲ್ಲದೆ ಸ್ಕೂಟರನ್ನೇ ತೆಗೆದುಕೊಂಡು ಪರಾರಿಯಾಗಿದ್ದ. ಸ್ವಲ್ಪ ಸಮಯದ ನಂತರ ಸ್ಥಳಕ್ಕೆ ಬಂದ ರೇಣುಕಾ, ಸ್ಕೂಟರ್ ಇಲ್ಲದನ್ನು ಆತಂಕಗೊಂಡಾಗ ಕೌಶಲ್ಯ, `ಇದು ನೋ ಪಾರ್ಕಿಂಗ್ ಏರಿಯಾ. ಮಲ್ಲೇಶ್ವರ ಸಂಚಾರ ಪೊಲೀಸರು ವಾಹನ ತೆಗೆದುಕೊಂಡು ಹೋಗಿರಬಹುದು' ಎಂದಿದ್ದಳು.
ಅದನ್ನು ನಂಬಿದ ರೇಣುಕಾ, ಆಕೆ ಜತೆ ಠಾಣೆಗೆ ಹೋಗಿ ವಿಚಾರಿಸಿ ಟೋಯಿಂಗ ವಾಹನಗಳನ್ನು ನಿಲ್ಲಿಸುವ ಸ್ಥಳಕ್ಕೆ ಬಂದು ನೋಡಿದಾಗ  ಸ್ಕೂಟರ್ ಅಲ್ಲಿರಲಿಲ್ಲ. ನಂತರ ಸದಾಶಿವನಗರ ಸಂಚಾರ ಠಾಣೆಗೆ ಹೋಗಿ ವಿಚಾರಿಸಿದರೂ ಪ್ರಯೋಜನವಾಗಿರಲಿಲ್ಲ. ಕೊನೆಗೆ ಮಲ್ಲೇಶ್ವರ ಠಾಣೆ (ಕಾನೂನು ಸುವ್ಯವಸ್ಥೆ) ಮೆಟ್ಟಿಲೇರಿದ ರೇಣುಕಾ, ಸ್ಕೂಟರ್ ಹಾಗೂ 280 ಗ್ರಾಂ ಚಿನ್ನಾಭರಣ ಕಳವಾಗಿರುವುದಾಗಿ ದೂರು ಕೊಟ್ಟಿದ್ದರು.
ಆಭರಣಗಳ ಜೊತೆ ಸ್ಕೂಟರ್ ಕದ್ದೊಯ್ದಿದ್ದ ಸುದರ್ಶನ್ ಅದನ್ನು ಮಲ್ಲೇಶ್ವರ 11ನೇ ಅಡ್ಡರಸ್ತೆಯ ನೋ ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಿ ಚಿನ್ನಾಭರಣ ತೆಗೆದುಕೊಂಡು ಪರಾರಿಯಾಗಿದ್ದ. ಸಂಜೆ ವೇಳೆಗೆ ಸಂಚಾರ ಪೊಲೀಸರು ಆ ವಾಹನವನ್ನು ಟೋಯಿಂಗ್ ಮಾಡಿಕೊಂಡು ಹೋಗಿದ್ದರು. ರಾತ್ರಿಯಾದರೂ ವಾಹನದ ಮಾಲೀಕರು ಸಂಪರ್ಕಿಸದಿದ್ದಾಗ, ಅದರ ನೋಂದಣಿ ಸಂಖ್ಯೆ ಆಧರಿಸಿ ವಿಳಾಸ ಪತ್ತೆ ಹಚ್ಚಿದಾಗ ಅದು ರೇಣುಕಾ ಅವರಿಗೆ ಸೇರಿದ್ದಾಗಿತ್ತು.
ಸ್ಕೂಟರ್ ತೆಗೆದುಕೊಂಡು ಹೋಗುವಂತೆ ರೇಣುಕಾ ವರಿಗೆ ತಿಳಿಸಲಾಗಿದ್ದು ಆಕೆ ಬಂದು ಸ್ಕೂಟರ್ ತೆಗೆದುಕೊಂಡು ಅನುಮಾನದ ಮೇಲೆ ಡಿಕ್ಕಿ ತೆಗೆದು ನೋಡಿದಾಗ ಅದರಲ್ಲಿ ಚಿನ್ನಾಭರಣಗಳಿರಲಿಲ್ಲ ರೇಣುಕಾ ಜೊತೆಗೆ ಬಂದಿದ್ದ ಆರೋಪಿ ಕೌಶಲ್ಯ ಚಿನ್ನಾಭರಣಗಳನ್ನು ಟೋಯಿಂಗ್ ಮಾಡಿದ ಸಂಚಾರ ಪೊಲೀಸರೇ ತೆಗೆದುಕೊಂಡಿರಬಹುದು ಎಂದಿದ್ದಳು ಕೂಡಲೇ ರೇಣುಕಾ ಅವರು ಮಲ್ಲೇಶ್ವರಂ ಪೊಲೀಸರಿಗೆ ವಿಷಯ ತಿಳಿಸಿದರು.
ಹೆಚ್ಚಿನ ತನಿಖೆ ಕೈಗೊಂಡ ಪೊಲೀಸರು ಸ್ಕೂಟರ್ ನಿಲ್ಲಿಸಿದ್ದ ಸ್ಥಳದಲ್ಲಿ ಹಾಕಲಾಗಿದ್ದ ಸಿಸಿ ಟಿವಿ ಕ್ಯಾಮಾರಾದಲ್ಲಿ ಸೆರೆಯಾಗಿದ್ದ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆರೋಪಿ ಸ್ಕೂಟರ್ ತೆಗೆದುಕೊಂಡು ಹೋದ ದೃಶ್ಯ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.ಅದರಲ್ಲಿ ಕೀ ಬಿಟ್ಟು ಹೋಗಿರುವುದು ಕಂಡುಬಂತು  ಕೌಶಲ್ಯ ಸ್ಕೂಟರ್‍ನಲ್ಲೇ ಏಕೆ ಕೀ ಬಿಟ್ಟು ಹೋದಳು ಎಂಬ ಪ್ರಶ್ನೆ ಕಾಡಲಾರಂಭಿಸಿತು. ಅನುಮಾನದ ಮೇಲೆ ಆಕೆಯನ್ನು ವಿಚಾರಣೆ ನಡೆಸಿದಾಗ ತೊದಲಿಕೆಯ ಉತ್ತರ ನೀಡಲಾರಂಭಿಸಿದಳು
ಆಕೆಯ ಮೊಬೈಲ್ ಪಡೆದು ಮೊಬೈಲ್ ಕರೆ ವಿವರ (ಸಿಡಿಆರ್) ಪರಿಶೀಲಿಸಿದಾಗ, ಕಳ್ಳತನ ನಡೆದ ದಿನ ಒಂದೇ ಸಂಖ್ಯೆಗೆ ಹಲವು ಸಲ ಕರೆ ಮಾಡಿದ್ದಳು. ಅದರ ಬಗ್ಗೆ ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡಳು. ಕದ್ದ ಒಡವೆಗಳನ್ನು ರಾತ್ರಿಯೇ ಗೆಳೆಯನಿಂದ ಪಡೆದುಕೊಂಡಿದ್ದ ಆಕೆ, ಅವುಗಳನ್ನು ತನ್ನ ಮನೆಯಲ್ಲೇ ಇಟ್ಟುಕೊಂಡಿರುವುದು ಪತ್ತೆಯಾಗಿದ್ದು ಆರೋಪಿಯನ್ನು ಮಲ್ಲೇಶ್ವರಂ ಇನ್ಸ್ಪೆಕ್ಟರ್ ಪ್ರಸಾದ್ ಮತ್ತವರ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ