ಮೇ ತಿಂಗಳಿನಲ್ಲಿ ಬೆಂಗಳೂರು ಆರೋಗ್ಯ ಉತ್ಸವ

Kannada News

21-03-2017 466

ಒಬ್ಬ ವ್ಯಕ್ತಿಗೆ ಊಟ, ಬಟ್ಟೆ, ಸೂರಿನೊಂದಿಗೆ, ಇವೆಲ್ಲಕ್ಕಿಂತ ಮುಖ್ಯವಾಗಿ ಇನ್ನೊಂದು ಅತ್ಯಾವಶ್ಯಕ, ಅದೇ ಆರೋಗ್ಯ. ಆರೋಗ್ಯವಿದ್ದರೆ ಏನನ್ನು ಬೇಕಾದರೂ ಸಂಪಾದನೆ ಮಾಡಬಹುದು, ಇಲ್ಲ ಎಷ್ಟೇ ಸಾಧಿಸಬಹುದು, ಆರೋಗ್ಯವಿಲ್ಲದಾತನಿಗೆ ಬುದ್ದಿ ಇದ್ದರೂ ಪ್ರಯೋಜನವಿಲ್ಲ, ದೇಹವೆಂಬ ಯಂತ್ರದಲ್ಲಿ ವ್ಯಕ್ತಿ ಎಂಬ ಶಕ್ತಿ ಇದ್ದರೂ ಆ ಯಂತ್ರ ಕುಲಗೆಟ್ಟಾಗ ವ್ಯಕ್ತಿ ದುರ್ಬಲನಾಗಿಬಿಡುತ್ತಾನೆ, ಏನನ್ನೂ ಮಾಡಲಾಗದೆ ಅಸಹಾಯಕನಾಗಿಬಿಡುತ್ತಾನೆ. ಆಯುಷ್ಯ, ಆರೋಗ್ಯಗಳನ್ನು ಪ್ರತಿ ಪ್ರಾರ್ಥನೆಯಲ್ಲೂ ಕೇಳಿಕೊಳ್ಳುವ ಮನುಷ್ಯ ಆರೋಗ್ಯಕ್ಕೆ ಕೊಟ್ಟಿರುವ ಮಹತ್ವವನ್ನು ಸ್ಪಷ್ಟ ಪಡಿಸಿಯಾಗಿಬಿಟ್ಟಿದೆ. ಅನಾದಿಕಾಲದಿಂದಲೂ ಆರೋಗ್ಯ ಕಾಪಾಡುವುದಕ್ಕಾಗಿ ಮಾನವ ಅನೇಕ ವಿಧಾನಗಳನ್ನು ಕಂಡುಹಿಡಿದರೂ, ಬೇರೆ ಬೇರೆ ವಿಧಾನಗಳಿಗೆ ಮೊರೆ ಹೋದರೂ, ಹಾಗೇ ದೇವಋಷಿಮುನಿಗಳಲ್ಲಿ ಬೇಡಿಕೊಂಡರೂ ಮನಷ್ಯನಾದವನ ಆರೋಗ್ಯ ತಪ್ಪುವುದನ್ನು ಯಾರಿಗೂ ತಡೆಯಲಾಗಿಲ್ಲ. ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಹೇಳಿದಂತೆ ಜನ್ಮ ಮೃತ್ಯು ಜರಾ ವ್ಯಾಧಿ ಇವುಗಳಿಂದ ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ. ಹೀಗಿರುವಾಗ ಆರೋಗ್ಯವನ್ನು ಆದಷ್ಟು ಪ್ರಯತ್ನದೊಂದಿಗೆ ಕಾಪಾಡಿಕೊಳ್ಳುವುದೇ ಮನುಷ್ಯನಿಗಿರುವ ದೊಡ್ಡ ಸವಾಲು. ಒಂದು ರೀತಿಯಲ್ಲಿ ಎಲ್ಲರೂ ಆರೋಗ್ಯಾಸಕ್ತರೇ.  ಅದಕ್ಕಾಗಿಯೇ ಬಡವನೂ ಕೂಡ ಒಂದಷ್ಟು ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳಲು ಹೆಣಗಾಡುತ್ತಾನೆ. ಆದರೆ ಈಗಿನ ಕಾಲದಲ್ಲಿ ಹೊಸ ಹೊಸ ಕಾಯಿಲೆಗಳು ಬರುತ್ತಿರುವಂತಹ ಸಂದರ್ಭದಲ್ಲಿ ವೈದ್ಯಲೋಕ ವಿಪರೀತವಾಗಿ ಅಭಿವೃದ್ಧಿ ಹೊಂದುತ್ತಿದ್ದರೂ ಆರೋಗ್ಯವನ್ನು ಕಾಪಾಡಿಕೊಳ್ಳುವುದು ದುಸ್ಥರವಾಗಿಬಿಟ್ಟಿದೆ. ಇಂತಹ ಸಂದರ್ಭದಲ್ಲಿ ಆಯುಷ್ಯವಿದ್ದರೂ ಆರೋಗ್ಯವಿಲ್ಲದೆ ಜನ ಬಳಲುವಂತಾಗಿಬಿಟ್ಟಿದೆ. ಇದಕ್ಕೆ ಪ್ರಮುಖ ಕಾರಣ ದುಬಾರಿಯಾಗುತ್ತಿರುವ  ಔಷಧಿ ಮತ್ತು ಚಿಕಿತ್ಸಾ ವಿಧಾನಗಳು. ಆದರೂ ಅನೇಕ ಪರ್ಯಾಯ ಮಾರ್ಗಗಳಿವೆ. ಉತ್ತಮ ಚಿಕಿತ್ಸೆಯನ್ನು ಕೊಡುವ ಉತ್ತಮ ಆಸ್ಪತ್ರೆಗಳೂ ಇವೆ. ಜನಪರವಾಗಿ ಚಿಂತನೆ ಮಾಡುವ ವೈದ್ಯರೂ ಇದ್ದಾರೆ. ಆಸ್ಪತ್ರೆ ಖರ್ಚನ್ನು ನಿಭಾಯಿಸುವ ವಿಮಾ ಕಂಪನಿಗಳೂ ಇವೆ. ಆದರೂ ಸಾಮಾನ್ಯ ಜನರಲ್ಲಿ ವೈದ್ಯಲೋಕದ ಬಗ್ಗೆ ಅನುಮಾನಿದೆ, ಆತಂಕವಿದೆ. ಕಾರಣ ಇಷ್ಟೆ, ಜನರಿಗೆ ಸರಿಯಾದ ಮಾಹಿತಿ ಇಲ್ಲ. ಈ ಕಾರಣದಿಂದ ಸಾಮಾನ್ಯ ಜನ ವೈದ್ಯಲೋಕವನ್ನೇ  ಭಯದಿಂದ ನೋಡುವಂತಾಗಿಬಿಟ್ಟಿದೆ. ಮಾಹಿತಿಯ ಕೊರತೆ ಮಾತ್ರವಲ್ಲದೆ ತಪ್ಪು ಮಾಹಿತಿಗಳೂ ಈ ಆತಂಕಗಳಿಗೆ ಇನ್ನೂ ದೊಡ್ಡ ಕಾರಣಗಳಾಗಿಬಿಟ್ಟಿದೆ. ಇಂತಹ ಸಂದರ್ಭದಲ್ಲಿ ವೈದ್ಯಲೋಕವನ್ನು ಆರೋಗ್ಯಾಸಕ್ತ ಸಾಮಾನ್ಯ ಜನರಿಗೆ ಪರಿಚಯಿಸಿಕೊಡುವ ಪ್ರಯತ್ನ ಮಾಡುತ್ತಿರುವ ಸಂಸ್ಥೆ ಟಿ.ವಿ.ಹೌಸ್ ನೆಟ್ ವರ್ಕ್ .

ಖ್ಯಾತ ಮಾಧ್ಯಮ ವ್ಯಕ್ತಿ ದೀಪಕ್ ತಿಮ್ಮಯ ಅವರ ನೇತೃತ್ವದಲ್ಲಿ ಟಿ.ವಿ ಹೌಸ್ ನೆಟ್ ವರ್ಕ್ ಬೃಹತ್ ಆಗಿರುವ ಬೆಂಗಳೂರು ಆರೋಗ್ಯ ಉತ್ಸವವನ್ನು ಆಯೋಜಿಸುತ್ತಿದೆ. ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲ್ಪಡುತ್ತಿರುವ ಈ ಬೆಂಗಳೂರು ಆರೋಗ್ಯ ಉತ್ಸವಕ್ಕೆ ಸರ್ಕಾರದ ಮತ್ತೊಂದು ಇಲಾಖೆಯಾಗಿರುವ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಸಹಭಾಗಿತ್ವವನ್ನು ನೀಡಿದೆ. ಕರ್ನಾಟಕದ ಪ್ರಖ್ಯಾತ ದಿನಪತ್ರಿಕೆಗಳಾಗಿರುವ ಡೆಕನ್ ಹೆರಲ್ಡ್ ಮತ್ತು ಪ್ರಜಾವಾಣಿ ಕೂಡ ಸಹಭಾಗಿತ್ವದೊಂದಿಗೆ ಈ ಉತ್ಸವಕ್ಕೆ ಬೆಂಬಲ ನೀಡಿವೆ. ಕರ್ನಾಟಕದ ಪ್ರಖ್ಯಾತ ಎಫ್ ಎಂ ರೇಡಿಯೋ ಚಾನೆಲ್ ರೆಡ್ ಎಫ್ ಎಂ ರೇಡಿಯೋ ಪಾರ್ಟ್ನರ್ ಆಗಿ ಜೊತೆ ಸೇರಿದೆ. ಮೈಕ್ರೋ ಲ್ಯಾಬ್ಸ್, ಮಣಿಪಾಲ್ ಆಸ್ಪತ್ರೆ, ಆರ್.ವಿ.ಡೆಂಟಲ್ ಕಾಲೇಜ್, ಮೆಡ್ ಇನ್ ಆಲ್ ಜಾಲತಾಣ, ತಾಮರ ಆಸ್ಪತ್ರೆ ಮುಂತಾದ ಸಂಸ್ಥೆಗಳು ಈಗಾಗಲೇ ಸಂಪೂರ್ಣ ಬೆಂಬಲವನ್ನು ಘೋಷಿಸಿದೆ. ಈಗಲೇ ಸಾರ್ವಜನಿಕ ವಲಯದಲ್ಲಿ ಸಂಚಲನವನ್ನುಂಟು ಮಾಡಿರುವ ಬೆಂಗಳೂರು ಆರೋಗ್ಯ ಉತ್ಸವ ಭಾರತದಲ್ಲೇ ಪ್ರಥಮ ಬಾರಿಗೆ ಆರೋಗ್ಯ ಕ್ಷೇತ್ರದ ಎಲ್ಲಾ ಪಾಲುದಾರರನ್ನು ಒಂದೇ ಸೂರಿನಡಿ ತಂದು ಪರಿಚಯಿಸುವ ಮತ್ತು ಧನಾತ್ಮಕವಾಗಿ ಜೊತೆಗೂಡಿಸುವ ಪ್ರಯತ್ನ ಮಾಡುತ್ತಿದೆ, ಈ ಪ್ರಯತ್ನದ ಮೂಲಕ ಭಾರತದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಹೊಸದೊಂದು ಅಧ್ಯಾಯವೇ ಆರಂಭವಾಗುವಂತಿದೆ.

ಈ ಆರೋಗ್ಯ ಉತ್ಸವದಲ್ಲಿ ಅನೇಕ ಚಟುವಟಿಕೆಗಳನ್ನು ಏರ್ಪಡಿಸಲಾಗಿದೆ. ತಜ್ಞರಿಂದ ಭಾಷಣಗಳು, ಉಚಿತ ವೈದ್ಯಕೀಯ ತಪಾಸಣೆ, ಆಸ್ಪತ್ರೆಗಳ ಪ್ರದರ್ಶನ ಮತ್ತು ಪರಿಚಯ, ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಪ್ರಸ್ತುತಿ, ಕೆಲವು ಆರೋಗ್ಯ ಉತ್ಪನ್ನಗಳ ಉಚಿತ ವಿತರಣೆ, ಆರೋಗ್ಯ ಸಂಬಂಧಿ ಮನರಂಜನೆ, ಆರೋಗ್ಯ ಕ್ಷೇತ್ರದ ವ್ಯಾಪಾರ ವಹಿವಾಟು, ಸಮ್ಮಿಲಿತ ಆರೋಗ್ಯ ಕಾರ್ಯಕ್ರಮಗಳ ಪರಿಚಯ, ಆರೋಗ್ಯ ಆಟೋಟಗಳು, ತಜ್ಞರ ಮಾತುಕತೆಗಳು, ಚರ್ಚಾಸ್ಪರ್ಧೆಗಳು, ಬೀದಿ ನಾಟಕಗಳು, ಮಕ್ಕಳಿಗೆ ಪ್ರಬಂಧ ಸ್ಪರ್ಧೆಗಳು, ಆರೋಗ್ಯ ರಸಪ್ರಶ್ನೆ ಸ್ಪರ್ಧೆ, ಆರೋಗ್ಯ ಸಾಕ್ಷ್ಯಚಿತ್ರ ಪ್ರದರ್ಶನ, ವಿದೇಶಿ ವೈದ್ಯ ತಜ್ಞರಿಂದ ಭಾಷಣ, ಗೋಷ್ಠಿಗಳು, ಆರೋಗ್ಯಕಾರಿ ಖಾದ್ಯಗಳ ಮಾರಾಟ, ಆರೋಗ್ಯ ಸಂಬಂಧಿ ಸಿನಿಮಾ ಪ್ರದರ್ಶನ, ಮುಂಜಾನೆಯ ಸೌಖ್ಯ ಅವಧಿಗಳು, ಮಾನಸಿಕ ಆಪ್ತ ಸಮಾಲೋಚನೆ, ಸೌಂದರ್ಯ ಮತ್ತು ಸೌಖ್ಯ ತಜ್ಞರಿಂದ ಕಿವಿಮಾತು, ಫಿಟ್ ನೆಸ್ ಕಾರ್ಯಕ್ರಮಗಳು ವಹಿವಾಟು ಪೂರಕ ಅವಧಿಗಳು, ಹೊಸ ತಂತ್ರಜ್ಞಾನದ ಪ್ರದರ್ಶನ, ಆರೋಗ್ಯ ಮತ್ತು ವೈದ್ಯಕೀಯ ವಸ್ತುಪ್ರದರ್ಶನ, ಆರೋಗ್ಯ ಸಾಹಿತ್ಯದ ವಿತರಣೆ, ಶುಶ್ರೂಷೆ, ಮನರಂಜನೆ, ಮಾಧ್ಯಮ ಮುಖಾಮುಖಿ, ವಿಚಾರ ವಿನಿಮಯ ಮುಂತಾದವುಗಳು.

ಇಷ್ಟು ದೊಡ್ಡ ಬೆಂಗಳೂರು ಆರೋಗ್ಯ ಉತ್ಸವ ಆಯೋಜಿಸಲ್ಪಡುತ್ತಿರುವುದು ಬೆಂಗಳೂರು ಅರಮನೆ ಮೈದಾನದ ತ್ರಿಪುರವಾಸಿನಿ ಪ್ರದರ್ಶನ ಪ್ರದೇಶದಲ್ಲಿ. ಸುಮಾರು 2 ಲಕ್ಷ ಚದರಡಿಗಿಂತಲೂ ಅಧಿಕ ಜಾಗದಲ್ಲಿ ಸುಸಜ್ಜಿತವಾದ ತಾತ್ಕಾಲಿಕ ಹವಾನಿಯಂತ್ರಿತ ಸೌಕರ್ಯದೊಳಗೆ ಏರ್ಪಡುವ ಈ ಉತ್ಸವ ಒಂದು ಅತ್ಯದ್ಭುತವಾದಂತಹ ಅನುಭವವಾಗಿ ಕಂಡುಬರುವಲ್ಲಿ ಸಂಶಯವಿಲ್ಲ. ಕನ್ನಡ ಮತ್ತು ಇಂಗ್ಲೀಷ್ ಭಾಷೆ ಈ ಉತ್ಸವದ ವ್ಯಾವಹಾರಿಕ ಭಾಷೆಗಳಾಗಿದ್ದು ದೇಶ ವಿದೇಶಗಳಿಂದ ತಜ್ಞರು ಈ ಉತ್ಸವದಲ್ಲಿ ಪಾಲ್ಗೊಳ್ಳಲು ಬರುತ್ತಿದ್ದಾರೆ. ಮಣಿಪಾಲ್ ಆಸ್ಪತ್ರೆಗಳ ಸಮೂಹದ ಅಧ್ಯಕ್ಷರಾಗಿರುವ ಡಾ.ಎಚ್.ಸುದರ್ಶನ್ ಬಲ್ಲಾಳ್ ಅವರು ಈ ಉತ್ಸವದ ಮಾರ್ಗದರ್ಶಕ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಹಾಗೆಯೇ ಉತ್ಸವದ ಸ್ವಾಗತ ಸಮಿತಿಯ ಮುಖ್ಯಸ್ಥರಾಗಿ ಪ್ರಖ್ಯಾತ ಸ್ತ್ರೀರೋಗ ತಜ್ಞೆ ಡಾ.ಶಾಂತಲ ಅನಿಲ್ ರವರು ನೇಮಿಸಲ್ಪಟ್ಟಿದ್ದಾರೆ.

ದೀಪಕ್ ತಿಮ್ಮಯ ಅವರು ಈ ಉತ್ಸವದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಉತ್ಸವದ ಪ್ರವೇಶ ಅಂದರೆ ವಸ್ತು ಪ್ರದರ್ಶನ ಮತ್ತು ಗೋಷ್ಠಿಗಳ ಸಭಾಂಗಣಗಳನ್ನು ಹೊರತುಪಡಿಸಿ ಬೇರೆಲ್ಲಾ ಭಾಗಗಳಿಗೆ ಪ್ರವೇಶವನ್ನು ಉಚಿತವಾಗಿ ಏರ್ಪಡಿಸಲಾಗಿದೆ. ಸುಮಾರು 2 ಲಕ್ಷಕ್ಕಿಂತ ಅಧಿಕ ಜನರು ಭೇಟಿ ಕೊಡಬಹುದಾದ ಈ ಬೃಹತ್ ಬೆಂಗಳೂರು ಆರೋಗ್ಯ ಉತ್ಸವ ಖಂಡಿತವಾಗಿ ಬೆಂಗಳೂರನ್ನು ಭಾರತದ ಆರೋಗ್ಯ ರಾಜಧಾನಿಯನ್ನಾಗಿಸುವಲ್ಲಿ ಸಫಲವಾಗುತ್ತದೆಂಬ ವಿಶ್ವಾಸ ಆಯೋಜಕರಲ್ಲಿದೆ. ಶಾಲಾ ವಿದ್ಯಾರ್ಥಿಗಳು ಮತ್ತು ವಿದೇಶಿ ಪ್ರತಿನಿಧಿಗಳು ಭೇಟಿ ಕೊಡುವ ಈ ಆರೋಗ್ಯ ಉತ್ಸವದಲ್ಲಿ ಔಷಧ ಕಂಪನಿಗಳು, ದೊಡ್ಡ ಆಸ್ಪತ್ರೆಗಳು, ವೈದ್ಯಕೀಯ ಉಪಕರಣ ತಯಾರಕರು, ಸಾಮಾನ್ಯ ಔಷಧಿ ಉತ್ಪಾದಕರು, ವೈದ್ಯಕೀಯ ಶಿಕ್ಷಣ ಸಂಸ್ಥೆಗಳು, ಸೌಂದರ್ಯ ಮತ್ತು ಸೌಖ್ಯ ಉತ್ಪನ್ನ ಮತ್ತು ಸೇವಾ ಸಂಸ್ಥೆಗಳು, ಆರೋಗ್ಯ ಉತ್ಪನ್ನಗಳು, ದೇಹದಾರ್ಢ್ಯ ನಿಭಾಯಿಸುವ ಉತ್ಪನ್ನಗಳು, ಆರೋಗ್ಯ ವ್ಯವಸ್ಥೆಗಳು, ಸೌಖ್ಯ ತಜ್ಞರು ಮತ್ತು ಸಂಸ್ಥೆಗಳು, ಆಧ್ಯಾತ್ಮಿಕ ಸಂಸ್ಥೆಗಳು, ಆರೋಗ್ಯಯುತ ಆಹಾರ ಸಂಸ್ಥೆಗಳು, ಆರೋಗ್ಯ ಪ್ರವಾಸೋದ್ಯಮ ಸಂಘಟನೆಗಳು ಭಾಗವಹಿಸಲಿವೆ. ಹಾಗೇ ಈ ಬೆಂಗಳೂರು ಆರೋಗ್ಯ ಉತ್ಸವದಲ್ಲಿ ನಡೆಯುವ ಗೋಷ್ಠಿಗಳ ಪೈಕಿ ಪ್ರಮುಖವಾದ ವಿಷಯಗಳು ಭವಿಷ್ಯದ ವೈದ್ಯಕೀಯ, ಹೊಸ ಆವಿಷ್ಕಾರಗಳು ಮತ್ತು ಅನ್ವೇಷಣೆಗಳು, ಸಾಮಾನ್ಯ ಜನರಿಗೆ ಆರೋಗ್ಯ, ಆರೋಗ್ಯಕರ ಜೀವನಶೈಲಿ, ಆರೋಗ್ಯ ಕ್ಷೇತ್ರದಲ್ಲಿ ವೃತ್ತಿಪರತೆ, ಆರೋಗ್ಯ ಕ್ಷೇತ್ರ ಎದುರಿಸುತ್ತಿರುವ ಸವಾಲುಗಳು, ಆರೋಗ್ಯ ಕ್ಷೇತ್ರ ಮತ್ತು ಮಾಧ್ಯಮ ಮುಂತಾದವುಗಳು. ಈ ಬೆಂಗಳೂರು ಆರೋಗ್ಯ ಉತ್ಸವ ಪ್ರತಿಯೊಬ್ಬ ಆರೋಗ್ಯಾಸಕ್ತನಿಗೂ ಒಂದು ಅನನ್ಯವಾಗಿರುವ  ಅನುಭವವಾಗುವುದು ಖಚಿತ. ಭೇಟಿ ಕೊಡುವ ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಂಡು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಬಗ್ಗೆ ಸುಭದ್ರತಾ ಭಾವವನ್ನು ಹೊಂದುವುದು ಖಂಡಿತ. ಬೆಂಗಳೂರು ಆರೋಗ್ಯ ಉತ್ಸವ ಒಂದು ಅಭೂತಪೂರ್ವ ಕಾರ್ಯಕ್ರಮ. ಆರೋಗ್ಯಾಸಕ್ತರೆಲ್ಲಾ ತಪ್ಪದೇ ಭಾಗವಹಿಸಬಹುದಾದ ಒಂದು ಅದ್ವಿತೀಯ ಉತ್ಸವ. ಭಾರತಕ್ಕೆ ಬೆಂಗಳೂರಿನ ಕೊಡುಗೆಯಾಗಬಹುದಾದ ಈ ಆರೋಗ್ಯ ಉತ್ಸವದಲ್ಲಿ ಭಾಗವಹಿಸಲು ಮೇ 4 ರಿಂದ 7 ರವರೆಗೆ ಬಿಡುವು ಮಾಡಿಕೊಳ್ಳಿ. ಬೆಂಗಳೂರು ಆರೋಗ್ಯ ಉತ್ಸವದಲ್ಲಿ ಒಳ್ಳೆಯ ಆರೋಗ್ಯವನ್ನು ನಾವೆಲ್ಲರೂ ಕೂಡಿ ಆಚರಿಸೋಣ.

Links :
ಸಂಬಂಧಿತ ಟ್ಯಾಗ್ಗಳು

ಸಂಬಂಧಿತ ಟ್ಯಾಗ್ಗಳನ್ನು ಲಭ್ಯವಿಲ್ಲಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Nice
  • RUDRAMUNI
  • Teacher