ನಿಲ್ಲದ ಮಳೆ: ಜನರ ಪರದಾಟ !

Kannada News

04-09-2017

ಬೆಂಗಳೂರು: ನಗರದಲ್ಲಿ ಮಳೆ ನಿರಂತರವಾಗಿ ಸುರಿಯಲಾರಂಭಿಸಿದ್ದು, ಬಹುತೇಕ ಬಡಾವಣೆಗಳಲ್ಲಿನ ರಸ್ತೆಗಳಲ್ಲಿರುವ ನೀರು ನಿಂತಿದ್ದು, ಸಾರ್ವಜನಿಕರು ಪ್ರಯಾಸ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸತತ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯ ನೀರು ಸರಾಗವಾಗಿ ಹರಿಯದೆ, ರಸ್ತೆಯಲ್ಲೇ ನಿಂತಿರುವುದು ಇನ್ನಷ್ಟು ಸಮಸ್ಯೆಯನ್ನು ಸೃಷ್ಟಿಸಿದೆ.

ಹೆಚ್.ಎಸ್.ಆರ್. ಲೇಔಟ್, ಬಿಳೇಕನಹಳ್ಳಿ, ಕೋರಮಂಗಲ ಸೇರಿದಂತೆ, ಬಹುತೇಕ ಬಡಾವಣೆಗಳಲ್ಲಿ ಕಳೆದ ಎರಡು ದಿನಗಳ ಹಿಂದೆ ಸುರಿದಿದ್ದ ನೀರು ತೆರವುಗೊಳಿಸುವ ವೇಳೆಗೆ ಮತ್ತೆ ನಿನ್ನೆ ರಾತ್ರಿ ಧಾರಾಕಾರ ಮಳೆ ಬಂದಿದ್ದು, ಇನ್ನಷ್ಟು ಮಳೆನೀರು ಸಂಗ್ರಹವಾಗಿರುವುದು ನಿವಾಸಿಗಳು ಕಂಗೆಡುವಂತಾಗಿದೆ. ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದಲ್ಲಿರುವ ರಾಮ್ ಪುರ ಕೆರೆ ಕೋಡಿ ಒಡೆದು ಸಮೀಪದ ಮನೆಗಳಿಗೆ ನೀರು ನುಗ್ಗಿದ್ದು, ಅಲ್ಲಿನ ನಿವಾಸಿಗಳು ಇಡೀ ರಾತ್ರಿ ಮಳೆ ನೀರು ಹೊರಹಾಕಲು ಜಾಗರಣೆ ಮಾಡಿದ್ದಾರೆ.

ವಸಂತಪುರ ವಾರ್ಡ್‌ನ ಜನಾರ್ಧನ ಕೆರೆ (ಸತ್ಯವನ ಕುಂಟೆ) ಕೂಡ ಒಡೆದಿದ್ದು, ಮನೆಗಳಿಗೆ ನೀರು ನುಗ್ಗಿದೆ. ಮೇಯರ್ ಪದ್ಮಾವತಿಯವರು ಇಂದು ಮಧ್ಯಾಹ್ನ ಕೆರೆ ಸಮೀಪದ ಮನೆಗಳಿಗೆ ಭೇಟಿ ನೀಡಿ ಸಂತ್ರಸ್ತರನ್ನು ಸಮಾಧಾನಗೊಳಿಸಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಬಸವನಪುರ ವಾರ್ಡ್‌ನ ರಾಜಕಾಲುವೆ ತುಂಬಿ ನೀರು ಹೊರಬಂದಿದ್ದು, ಸುಮಾರು 50 ಮನೆಗಳಿಗೂ ಹೆಚ್ಚು ನೀರು ನುಗ್ಗಿದೆ. ಗಾಯಿತ್ರಿ ನಗರ ಬಡಾವಣೆಯಲ್ಲೂ ಧಾರಾಕಾರವಾಗಿ ಸುರಿದ ಮಳೆ 15ಕ್ಕೂ ಹೆಚ್ಚು ಮನೆಗಳಿಗೆ ಮಳೆನೀರು ನುಗ್ಗಿ ಜನರು ಪರಿತಪಿಸಿದ್ದಾರೆ.

ತ್ರಿವೇಣಿ ನಗರದ ಸ್ಕೂಲ್ ಮೈದಾನದಲ್ಲಿ ಮೂರು ಅಡಿಗೂ ಹೆಚ್ಚು ನೀರು ನಿಂತ ಪರಿಣಾಮವಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಒಂದು ದಿನದ ರಜೆ ಕೂಡ ಘೋಷಿಸಲಾಗಿದೆ. ದೊಡ್ಡನೆಕ್ಕುಂದಿ, ವಿಜಿನಾಪುರ, ಹೊರಮಾವು ವಾರ್ಡ್‌ಗಳಲ್ಲಿ ನಿನ್ನೆ ಮಧ್ಯರಾತ್ರಿಯಿಂದ ಬೆಳಗಿನ ಜಾವದವರೆಗೂ ಮಳೆ ಸುರಿದು ಮಳೆನೀರು ರಸ್ತೆಗಳಲ್ಲಿ ಮೂರು ಅಡಿಗೂ ಹೆಚ್ಚು ನೀರು ನಿಂತಿದ್ದು, ಬಿಬಿಎಂಪಿ ಸಿಬ್ಬಂದಿ ಕಾರ್ಯಾಚರಣೆ ಪಡೆ, ಅಗ್ನಿಶಾಮಕ ಸಿಬ್ಬಂದಿ, ನೀರನ್ನು ಹೊರಹಾಕುವ ಪ್ರಯತ್ನ ನಡೆಸಿದ್ದಾರೆ. ಯಲಹಂಕ ವಲಯದ ಚಿಕ್ಕಬೊಮ್ಮಸಂದ್ರದಲ್ಲಿ ಎರಡು ಮನೆಗಳಿಗೆ ನೀರು ನುಗ್ಗಿದ ಬಗ್ಗೆ ವರದಿಯಾಗಿದೆ. ಇಂದು ಬೆಳಿಗ್ಗೆ ಸ್ಥಳಕ್ಕೆ ತೆರಳಿದ ಬಿಬಿಎಂಪಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ನಗರದ ಹೃದಯ ಭಾಗದಲ್ಲಿರುವ ರಾಜಾಜಿನಗರ, ಬಸವೇಶ್ವರ ನಗರ ಅಲ್ಲದೇ, ನಾಗರಭಾವಿ, ಪಾಪರೆಡ್ಡಿ ಪಾಳ್ಯ, ನವರಂಗ್ ಚಿತ್ರಮಂದಿರ, ಶಂಕರ ಪುರ ಸೇರಿದಂತೆ, ಬಹುತೇಕ ಪ್ರದೇಶಗಳಲ್ಲಿ ರಾತ್ರಿ ಅತಿ ಹೆಚ್ಚು ಮಳೆ ಸುರಿದ ಪರಿಣಾಮವಾಗಿ ಮೋರಿಯಲ್ಲಿದ್ದ ಕಸ ರಸ್ತೆಗಳಲ್ಲಿ ತುಂಬಿದ್ದು, ಪೌರ ಕಾರ್ಮಿಕರು ಕಸ ತೆಗೆಯಲು ಹರಸಾಹಸ ಪಡುತ್ತಿದ್ದಾರೆ.


ಸಂಬಂಧಿತ ಟ್ಯಾಗ್ಗಳು

ಬೆಂಗಳೂರು ನಿಲ್ಲದ ಮಳೆ ಜನರ ಪರದಾಟ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ