ಮನೆ ಮನೆಗೂ ಹಿಂದಿ !

Kannada News

04-09-2017

ಮೆಟ್ರೋದಲ್ಲಿ ಹಿಂದಿ ಭಾಷೆಯ ವಿರುದ್ಧ ಹೋರಾಟ ನಡೆದು ಹಿಂದಿ ಅಲ್ಲಿಂದ ಎತ್ತಂಗಡಿಯಾದ ಹಿನ್ನೆಲೆಯಲ್ಲಿ ಕರ್ನಾಟಕದಾದ್ಯಂತ ಹಿಂದಿ ಹೇರಿಕೆಯ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದು ಮತ್ತು ಆ ವಿಚಾರದಲ್ಲಿ ಬಹಳಷ್ಟು ಚರ್ಚೆ ನಡೆದಿದ್ದು ಮತ್ತು ಅಭಿಪ್ರಾಯ ವ್ಯಕ್ತವಾಗಿದ್ದನ್ನು ಜನ ಇನ್ನೂ ಮರೆತಿಲ್ಲ, ಆದರೂ ಅಷ್ಟರಲ್ಲೇ ಕನ್ನಡಿಗರ ಮನೆಯೊಳಗೇ ಹಿಂದಿ ಹೇರಿಕೆ ಮಾಡುವ ಒಂದು ಯೋಜನೆಯ ಕುರುಹುಗಳು ಬಹಿರಂಗವಾಗಿವೆ. ಕನ್ನಡಿಗರು ಮನೆಯಲ್ಲೇ ಒಟ್ಟಾಗಿ ಕೂತು ಟಿವಿ ನೋಡುವಾಗ ಕನ್ನಡ ಕಾರ್ಯಕ್ರಮದೊಳಗೇ ಹಿಂದಿ ತುರುಕಿ ಆ ಮೂಲಕ ಕನ್ನಡಿಗರಿಗೆ ಹಿಂದಿಯನ್ನು ರೂಢಿಮಾಡುವ ಹುನ್ನಾರ ಗೋಚರಿಸುತ್ತಿದೆ. ಸ್ಟಾರ್ ಸಮೂಹ ಹಿಂದಿಯಲ್ಲಿ ಬಹಳದೊಡ್ಡ ರೀತಿಯಲ್ಲಿ ವೀಕ್ಷಕರನ್ನು ಸೆಳೆದಿರುವ ಟಿವಿ ಚಾನೆಲ್. ಆದರೆ ಈ ಹಿಂದಿ ಚಾನಲ್ ಗಳಿಗೆ ಕನ್ನಡ ಸೇರಿ ಬೇರೆ ದಕ್ಷಿಣ ಭಾರತೀಯ ಭಾಷಿಕರ ಮನೆಗಳಲ್ಲಿ ಮನ್ನಣೆ ಸಿಗುತ್ತಿಲ್ಲ. ಈ ಸ್ಟಾರ್ ಮತ್ತು ಕಲರ್ಸ್ ನಡೆಸುವ ಕನ್ನಡ ಚಾನೆಲ್ ಗಳಿಂದ ಬರುವ ಆದಾಯವೂ ಅಷ್ಟಕ್ಕಷ್ಟೆ. ಕನ್ನಡಿಗರನ್ನು ಹಿಂದಿ ಭಾಷೆಗೆ ಪರಿಚಯಿಸಿಬಿಟ್ಟರೆ ಕರ್ನಾಟಕದಲ್ಲೂ ಹಿಂದಿ ಚಾನಲ್ ಗಳ ಕರಾಮತ್ತು ನಡೆಯುತ್ತದೆ ಎಂಬ ಲೆಕ್ಕಾಚಾರದೊಂದಿಗೆ ಒಂದಷ್ಟು ಹಿಂದಿಯನ್ನು ಕನ್ನಡ ಕಾರ್ಯಕ್ರಮಗಳಲ್ಲಿ ತುರುಕಲು ಈ ಚಾನಲ್ ಗಳ ಬಾಸ್ ಗಳಿಗೆ ಹೇಳಲಾಗಿದೆ. ಅದರ ಫಲವೆಂಬಂತೆ ಮೊದಲು ಸ್ಟಾರ್ ಸುವರ್ಣ ಚಾನಲ್ ನಲ್ಲಿ ಪ್ರಸಾರವಾಗುವ ಡಾನ್ಸ್ ಡಾನ್ಸ್ ಜೂನಿಯರ್ಸ್ ನಲ್ಲಿ ಸಲ್ಮಾನ್ ಮಾಸ್ಟರ್ ಎಂಬ ವ್ಯಕ್ತಿಯನ್ನು ಜಡ್ಜ್ ಆಗಿ ತಂದು ಕೂರಿಸಲಾಗಿದೆ. ಕನ್ನಡ ಬಾರದ ಮತ್ತು ಇಂಗ್ಲಿಷನ್ನೂ ಅರ್ಧಂಬರ್ಧ ಮಾತನಾಡುವ ಈ ಸಲ್ಮಾನ್, ಕಾರ್ಯಕ್ರಮದಲ್ಲಿ ನಿರರ್ಗಳವಾಗಿ ಹಿಂದಿ ಮಾತಾಡಿ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿರುವುದು ಮುಂದಿನ ದಿನಗಳ ವಿದ್ಯಮಾನಗಳಿಗೆ ದಿಕ್ಸೂಚಿಯಾಗಿದೆ ಎಂದು ಹೇಳಲಾಗುತ್ತಿದೆ. ಅಪ್ಪಟ ಕನ್ನಡಿಗರು ಇದರ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿದರೂ ಅವರ ಮಾತನ್ನು ಕಿವಿಗೆ ಹಾಕಿಕೊಳ್ಳುವವರ ಸಂಖ್ಯೆ ಕಡಿಮೆ ಇರುವುದು ಸ್ಪಷ್ಟವಾಗಿದೆ ಎಂದು ಹೇಳಲಾಗುತ್ತಿದೆ.


ಸಂಬಂಧಿತ ಟ್ಯಾಗ್ಗಳು

ಮನೆ ಮನೆಗೂ ಹಿಂದಿ ಹಿಂದಿ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ