ಕೂಡಲಸಂಗಮದಲ್ಲಿ ಅಂತಾರಾಷ್ಟ್ರೀಯ ಮ್ಯೂಜಿಯಂ !

02-09-2017
ಬೆಂಗಳೂರು: ಕೂಡಲಸಂಗಮ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ವಸ್ತು ಸಂಗ್ರಹಾಲಯ ಸ್ಥಾಪಿಸಲು ಸರ್ಕಾರ ತೀರ್ಮಾನಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕೂಡಲ ಸಂಗಮ ಅಭಿವೃದ್ಧಿ ಮಂಡಳಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ವಸ್ತು ಸಂಗ್ರಹಾಲಯ ಸ್ಥಾಪನೆಗೆ ಸಲಹೆ, ಸೂಚನೆ ಪಡೆಯಲು ತಜ್ಞರ ಸಮಿತಿ ರಚಿಸಲು ಸಭೆ ತೀರ್ಮಾನಿಸಿದೆ. ಕಾಮಗಾರಿಯನ್ನು ಶೀಘ್ರವಾಗಿ ಕೈಗೆತ್ತಿಕೊಂಡು ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬಸವಣ್ಣ ಮತ್ತಿತರ ಶರಣರು ಪ್ರತಿಪಾದಿಸಿದ ವಿಚಾರ ಧಾರೆಗಳನ್ನು ಪ್ರವಾಸಿಗರಿಗೆ ಮನಮುಟ್ಟುವಂತೆ ವಿವರಿಸುವುದು, ಸಂಗ್ರಹಾಲಯದ ಉದ್ದೇಶವಾಗಬೇಕು ಎಂದು ಹೇಳಿದರು.
ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು, ಸಮ ಸಮಾಜದ ನಿರ್ಮಾಣ ಕುರಿತು ಬಸವಣ್ಣನವರು ಹೇಳಿದ್ದರು. ಇದೂ ಸೇರಿದಂತೆ ಅವರ ಎಲ್ಲ ವಿಚಾರ ಧಾರೆ ವಿಶ್ವದ ಗಮನ ಸೆಳೆಯುವ ವ್ಯವಸ್ಥೆ, ಸಂಗ್ರಹಾಲಯದಲ್ಲಿರಬೇಕು ಎಂದು ತಿಳಿಸಿದರು. ವಸ್ತು ಸಂಗ್ರಹಾಲಯ ಅಭಿವೃದ್ಧಿಗೆ 84 ಕೋಟಿ ರೂ. ಬಿಡುಗಡೆ ಮಾಡಲು ಸಿಎಂ ಒಪ್ಪಿಗೆ ಸೂಚಿಸಿದರು. ಅಕ್ಷರ ಧಾಮದ ಮಾದರಿಯಲ್ಲಿ ನಿರ್ಮಾಣವಾಗುವ ವಸ್ತು ಸಂಗ್ರಹಾಲಯದಲ್ಲಿ ಅಧ್ಯಯನ ಕೇಂದ್ರ, ಬಸವಣ್ಣರ ಸಂದೇಶಗಳು, ಹಂಪಿ ಮಾದರಿಯ ಸಾಲುಗಂಬಗಳು, ಶರಣ ಗ್ರಾಮ ಹೀಗೆ ಪ್ರತಿಯೊಂದು ಇರಲಿದೆ ಎಂದು ತಿಳಿಸಿದರು. ಕೂಡಲ ಸಂಗಮದ ಅಭಿವೃದ್ದಿಗೆ ಸುಮಾರು 140 ಕೋಟಿ ಹಣ ಖರ್ಚು ಮಾಡಲಾಗುತ್ತಿದೆ ಎಂದರು. ಸಚಿವರಾದ ಎಂ.ಬಿ.ಪಾಟೀಲ್, ಶಾಸಕರಾದ ಶಿವಾನಂದ ಪಾಟೀಲ್, ಎಸ್.ಆರ್. ಪಾಟೀಲ್ ಮತ್ತಿತರರು ಸಭೆಯಲ್ಲಿ ಭಾಗಿಯಾಗಿದ್ದರು.
ಒಂದು ಕಮೆಂಟನ್ನು ಹಾಕಿ