ನೂತನ ಸಚಿವರಾಗಿ ರೇವಣ್ಣ,ತಿಮ್ಮಾಪುರ,ಗೀತಾ !

Kannada News

01-09-2017

ಬೆಂಗಳೂರು: ರಾಜ್ಯ ಸಚಿವ ಸಂಪುಟಕ್ಕೆ ಎಚ್.ಎಂ.ರೇವಣ್ಣ, ಆರ್.ಬಿ.ತಿಮ್ಮಾಪುರ ಹಾಗೂ ಗೀತಾ ಮಹದೇವ ಪ್ರಸಾದ್ (ಎಂ.ಸಿ.ಮೋಹನ್ ಕುಮಾರಿ) ಸೇರ್ಪಡೆಯಾದರು. ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಪೂರ್ಣ ಪ್ರಮಾಣದ ಸಂಪುಟ ಅಸ್ಥಿತ್ವಕ್ಕೆ ಬಂದಂತಾಗಿದೆ. ಮೋಡ ಮುಸುಕಿದ ವಾತಾವರಣದ ನಡುವೆ ಸಂಜೆ ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ವಜೂಭಾಯಿ ವಾಲಾ ಅವರು ನೂತನ ಸಚಿವರಿಗೆ ಗೌಪ್ಯತಾ ಪ್ರತಿಜ್ಞಾ ವಿಧಿ ಭೋಧಿಸಿದರು.

ಎಚ್.ಎಂ. ರೇವಣ್ಣ ಮತ್ತು ಆರ್.ಬಿ. ತಿಮ್ಮಾಪುರ ಸಂಪುಟ ದರ್ಜೆ ಮತ್ತು ಎಂ.ಸಿ. ಮೋಹನ್ ಕುಮಾರಿ ಸ್ವಾತಂತ್ರ್ಯ ಜವಾಬ್ದಾರಿಯ ರಾಜ್ಯ ಸಚಿವರಾಗಿ ನಿಯೋಜನೆಗೊಂಡರು.

ಮೊದಲಿಗೆ ರೇವಣ್ಣ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ, ಆರ್.ಬಿ. ತಿಮ್ಮಾಪುರ ಶ್ರದ್ಧಾಪೂರ್ವಕವಾಗಿ ಪದಗ್ರಹಣ ಮಾಡಿದರು. ಮೋಹನ್ ಕುಮಾರಿ ಅವರು ಮಲೈ ಮಹದೇಶ್ವರ ಸ್ವಾಮಿ ಹೆಸರನಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ನೂತನ ಸಚಿವರನ್ನು ರಾಜ್ಯಪಾಲರು ಪುಷ್ಪಗುಚ್ಚ ನೀಡಿ ಅಭಿನಂದಿಸಿದರು. ರೇವಣ್ಣ, ತಿಮ್ಮಾಪುರ ಮೇಲ್ಮನೆಯನ್ನು ಪ್ರತಿನಿಧಿಸುತ್ತಿದ್ದು, ಈ ಇಬ್ಬರೂ ಸದಸ್ಯರನ್ನು ಒಂದೇ ಬಾರಿಗೆ ಸಂಪುಟಕ್ಕೆ ಸೇರಿಸಿಕೊಂಡಿದ್ದು, ಮೇಲ್ಮನೆಯಲ್ಲಿ ಇವರಿಬ್ಬರಿಬ್ಬರಿಗೆ ಮಾತ್ರ ಪ್ರಾತಿನಿಧ್ಯವಿದೆ.

ರೇವಣ್ಣ ಹಿರಿಯರಾಗಿದ್ದು, ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರಾಗಿದ್ದು, ವಾಗ್ಮಿಯೂ ಸಹ ಆಗಿರುವುದರಿಂದ ರೇವಣ್ಣ ಮೇಲ್ಮನೆಯ ಸಭಾ ನಾಯಕರನ್ನಾಗಿ ನಿಯೋಜಿಸಲಾಗುತ್ತಿದೆ. ಗೃಹ ಸಚಿವರಾಗಿದ್ದ ಡಾ.ಜಿ.ಪರಮೇಶ್ವರ್ ಮೂರನೇ ಬಾರಿಗೆ ಕೆಪಿಸಿಸಿ ಅಧ್ಯಕ್ಷರಾಗಿ ನಿಯೋಜನೆಗೊಂಡ ನಂತರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮೇಲ್ಮನೆಯಲ್ಲಿ ಸಭಾ ನಾಯಕನ ಸ್ಥಾನವೂ ಸಹ ತೆರೆವುಗೊಂಡಿತ್ತು.

ರಾಸಲೀಲೆ ಪ್ರಕರಣದಲ್ಲಿ ಎಚ್.ವೈ. ಮೇಟಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕುರುಬ ಸಮುದಾಯವನ್ನು ಪ್ರತಿನಿಧಿಸುತ್ತಿದ್ದ ಮೇಟಿ ಸ್ಥಾನಕ್ಕೆ ರೇವಣ್ಣ ಅವರಿಗೆ ಪ್ರಾತಿನಿಧ್ಯೆ ಕೊಡಲಾಗಿದೆ.

ಪರಮೇಶ್ವರ್ ಜಾಗಕ್ಕೆ ಆರ್.ಬಿ. ತಿಮ್ಮಾಪುರ ಅವರಿಗೆ ಅವಕಾಶ ನೀಡಿದ್ದು, ತಮ್ಮ ಪತಿ ಎಚ್.ಎಸ್. ಮಹದೇವ ಪ್ರಸಾದ್ ಹೃದಯಾಘಾತದಿಂದ ನಿಧನರಾದ ನಂತರ ಅವರಿಂದ ತೆರವಾಗಿದ್ದ ಗುಂಡ್ಲುಪೇಟೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಗೀತಾ ಮಹದೇವ ಪ್ರಸಾದ್‍ಗೆ ಅತಿ ಕಡಿಮೆ ಅವಧಿಯಲ್ಲಿ ಸಚಿವ ಸ್ಥಾನ ದೊರೆತಿರುವುದು ಸಹ ವಿಶೇಷವಾಗಿದೆ.

ಹೀಗೆ ಖಾಲಿಯಾಗಿದ್ದ ಮೂರು ಸ್ಥಾನಗಳನ್ನು ಭರ್ತಿ ಮಾಡಲು ಸಿಎಂ ಸಿದ್ಧರಾಮಯ್ಯ ಇತ್ತೀಚೆಗೆ ಹೈಕಮಾಂಡ್‍ನಿಂದ ಒಪ್ಪಿಗೆ ಪಡೆದು ಬಂದಿದ್ದರಾದರೂ ಗೌರಿ-ಗಣೇಶ ಚತುರ್ಥಿಯ ನಂತರ ಅವನ್ನು ಭರ್ತಿ ಮಾಡಲು ತೀರ್ಮಾನಿಸಿದ್ದರು. ಈ ಮಧ್ಯೆ ಮೂರು ಮಂತ್ರಿ ಸ್ಥಾನಗಳಿಗಾಗಿ ರೇಸ್ ಆರಂಭವಾಗಿತ್ತಲ್ಲದೆ ದಲಿತರ ಕೋಟಾದಿಂದ ಮಳವಳ್ಳಿಯ ನರೇಂದ್ರ ಸ್ವಾಮಿ, ಶಿವಳ್ಳಿ, ಷಡಾಕ್ಷರಿ ಸೇರಿದಂತೆ ಹಲ ನಾಯಕರು ಪ್ರಬಲ ಪೈಪೋಟಿ ನಡೆಸಿದ್ದರು.

ಈ ಪೈಕಿ ಲಿಂಗಾಯತರ ಕೋಟಾದಲ್ಲಿ ಷಡಾಕ್ಷರಿ ಅವರು ಮಂತ್ರಿ ಮಂಡಲ ಸೇರುತ್ತಾರೆ ಎಂಬುದು ಬಹುತೇಕ ನಿಶ್ಚಿತವಾಗಿತ್ತಾದರೂ ಇದ್ದಕ್ಕಿದ್ದಂತೆ ಲಿಂಗಾಯತರ ಕೋಟಾದಲ್ಲಿ ಗೀತಾ ಮಹದೇವಪ್ರಸಾದ್ ಅವರನ್ನು ಮಂತ್ರಿ ಮಾಡಿದರೆ ಮಹಿಳೆಯರಿಗೂ ಆದ್ಯತೆ ನೀಡಿದಂತಾಗುತ್ತದೆ ಎಂಬ ಕಾರಣಕ್ಕಾಗಿ ಸಿಎಂ ಸಿದ್ಧರಾಮಯ್ಯ ತಮ್ಮ ನಿಲುವು ಬದಲಿಸಿದರೆಂದು ಮೂಲಗಳು ಹೇಳಿವೆ.

ಈ ನಡುವೆ ಪ್ರಮಾಣ ವಚನ ಸ್ವೀಕಾರ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಎಂ.ರೇವಣ್ಣ, ಗೀತಾ ಮಹದೇವಪ್ರಸಾದ್ ಹಾಗೂ ಆರ್ ಬಿ.ತಿಮ್ಮಾಪೂರ್ ಅವರು, ಸಿಎಂ ಸಿದ್ಧರಾಮಯ್ಯ ಹಾಗೂ ಸೋನಿಯಾಗಾಂಧಿ, ರಾಹುಲ್ ಗಾಂಧಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ತಮಗೆ ನೀಡಿದ ಹೊಣೆಗಾರಿಕೆಯನ್ನು ಉತ್ತಮವಾಗಿ ನಿರ್ವಹಿಸುವ ವಿಶ್ವಾಸ ವ್ಯಕ್ತಪಡಿಸಿದ ಅವರು,ಸರ್ಕಾರದ ವರ್ಚಸ್ಸು ಹೆಚ್ಚಿಸಲು ಪ್ರಾಮಾಣಿಕವಾಗಿ ದುಡಿಯುವುದಾಗಿ ಭರವಸೆ ನೀಡಿದರು. ಸಿಎಂ ಸಿದ್ಧರಾಮಯ್ಯ ಮಾತನಾಡಿ, ಸಂಪುಟ ವಿಸ್ತರಣೆಯಿಂದ ಸರ್ಕಾರದ ಬಲ ಹೆಚ್ಚಾಗಿದೆ. ಆ ಮೂಲಕ ರಾಜ್ಯದ ಅಭಿವೃದ್ಧಿಯ ಕಡೆ ಮತ್ತಷ್ಟು ಗಮನ ಹರಿಸಲು ಸಾಧ್ಯವಾಗಿದೆ ಎಂದು ಹೇಳಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ