ಪಾರಿವಾಳ ಹಿಡಿಯಲೆಂದು ಬಂದು ಕಳ್ಳತನ !

Kannada News

01-09-2017

ಬೆಂಗಳೂರು: ಮನೆ ಮೇಲೆ ಪಾರಿವಾಳವಿದೆಯೆಂದು ಹಿಡಿಯಲು ಬಂದ ಕಳ್ಳ, ಮನೆಯವರು ಹೊರ ಹೋದ ನಂತರ ಮನೆ ಬೀಗ ಒಡೆದು ಒಳನುಗ್ಗಿ 1.50 ಲಕ್ಷ ರೂ. ಮೌಲ್ಯದ ವಜ್ರ ಹಾಗೂ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ಗಿರಿನಗರದಲ್ಲಿ ನಡೆದಿದೆ.

ಗಿರಿನಗರದ 2ನೆ ಬ್ಲಾಕ್, 20ನೆ ಮುಖ್ಯರಸ್ತೆ ನಿವಾಸಿ ಪಲ್ಲವಿ ಎಂಬುವರು, ನಿನ್ನೆ ಮಧ್ಯಾಹ್ನ ಮನೆಯಲ್ಲಿ ಒಬ್ಬರೇ ಇದ್ದರು. ಈ ವೇಳೆ ವ್ಯಕ್ತಿಯೊಬ್ಬ ಇವರ ಮನೆಗೆ ಬಂದು ಮನೆ ಮೇಲೆ ನನ್ನ ಪಾರಿವಾಳ ಇದೆ. ಅದನ್ನು ಹಿಡಿದುಕೊಳ್ಳುತ್ತೇನೆಂದು ಹೇಳಿ ನಂತರ ಕೆಲನಿಮಿಷದ ಬಳಿಕ ಹೋಗಿದ್ದಾನೆ.

ಪಲ್ಲವಿ ಅವರು ಕೆಲಸದ ನಿಮಿತ್ತ ಸಂಜೆ 6 ಗಂಟೆಗೆ ಮನೆಗೆ ಬೀಗ ಹಾಕಿ ಹೊರಗೆ ಹೋಗಿದ್ದಾಗ ಕಳ್ಳ ಇವರ ಮನೆಯ ಬೀಗ ಒಡೆದು ಒಳನುಗ್ಗಿ ಬೀರುವನ್ನು ಮೀಟಿ 1.50 ಲಕ್ಷ ರೂ. ಮೌಲ್ಯದ ಚಿನ್ನ, ವಜ್ರದ ಆಭರಣಗಳನ್ನು ಕದ್ದೊಯ್ದಿದ್ದಾನೆ. ರಾತ್ರಿ 10 ಗಂಟೆಗೆ ಪಲ್ಲವಿ ಮನೆಗೆ ಮರಳಿದಾಗ ಮನೆ ಬೀಗ ಒಡೆದಿರುವುದು ಗಮನಿಸಿ ಒಳಗೆ ಹೋಗಿ ನೋಡಿದ್ದಾರೆ. ಈ ವೇಳೆ ಬೀರು ತೆರೆದಿದ್ದು, ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿರುವುದು ಗಮನಿಸಿ ಆಭರಣ ಕಳ್ಳತನವಾಗಿರುವುದು ಗೊತ್ತಾಗಿದೆ. ತಕ್ಷಣ ಗಿರಿನಗರ ಪೊಲೀಸರಿಗೆ ತಿಳಿಸಿದ್ದಾರೆ.

 ಶ್ವಾನದಳ, ಬೆರಳಚ್ಚು ತಜ್ಞರೊಂದಿಗೆ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಪಾರಿವಾಳ ಹಿಡಿಯಲು ಬಂದಿದ್ದ ಯುವಕನ ಮೇಲೆ ಸಂಶಯವ್ಯಕ್ತಪಡಿಸಿ ಪಲ್ಲವಿ ಅವರು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ