ಆತ್ಮಹತ್ಯೆ ತಡೆಗೆ: ಪೊಲೀಸರಿಗೆ ಹೆಚ್ಚಿನ ಹೊಣೆ !

Kannada News

01-09-2017 445

ಬೆಂಗಳೂರು: ರಾಜ್ಯದಲ್ಲಿ ಆತ್ಮಹತ್ಯೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕ(ಡಿಜಿಪಿ) ಆರ್.ಕೆ.ದತ್ತ ಅವರು, ಆತ್ಮಹತ್ಯೆಗೆ ಮುಂದಾಗುವಂತವರನ್ನು ಗುರುತಿಸಿ ಕೌನ್ಸಲಿಂಗ್ ಸೇರಿದಂತೆ ವಿವಿಧ ಕಾರ್ಯಾಗಾರಗಳ ಮೂಲಕ ಧೈರ್ಯ ತುಂಬುವ ಕೆಲಸ ಮಾಡುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ರಾಜ್ಯದಲ್ಲಿ ಇತ್ತೀಚೆಗೆ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಲೇ ಇದ್ದು, ಚಿಕ್ಕ ಪುಟ್ಟ ಕಾರಣಕ್ಕೂ ದುರ್ಬಲ ಮನಸ್ಸಿನ ವ್ಯಕ್ತಿಗಳು ಅತ್ಮಹತ್ಯೆಯ ದಾರಿ ಹಿಡಿಯುತ್ತಿದ್ದು, ಅಂತಹವರಿಗೆ ಕೌನ್ಸಲಿಂಗ್ ಸೇರಿದಂತೆ ವಿವಿಧ ಕಾರ್ಯಾಗಾರಗಳ ಮೂಲಕ ಆತ್ಮಹತ್ಯೆ ದಾರಿ ಹಿಡಿಯದಂತೆ ತಡೆಯಲು ಕ್ರಮ ಕೈಗೊಳ್ಳುವಂತೆ ಅವರು ಪೊಲೀಸ್ ಠಾಣೆಗಳಿಗೆ  ಸುತ್ತೋಲೆ ಹೊರಡಿಸಿದ್ದಾರೆ. ಆಯಾ ಠಾಣಾ ವ್ಯಾಪ್ತಿಯಲ್ಲಿ ನಡೆದ ಆತ್ಮಹತ್ಯಾ ಪ್ರಕರಣಗಳನ್ನು ಪರಿಶೀಲಿಸಿ ಅದಕ್ಕೆ ಕಾರಣವಾಗುವ ಅಂಶಗಳನ್ನು ಪರಿಗಣಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಪೊಲೀಸ್ ಮಹಾನೀರಿಕ್ಷಕರ ಕಚೇರಿಯಿಂದ ಪೊಲೀಸ್ ಠಾಣೆಗಳಿಗೆ ಸುತ್ತೋಲೆ ಕಳುಹಿಸಲಾಗಿದೆ.

ಠಾಣಾ ವ್ಯಾಪ್ತಿಯ ಶಾಲಾ-ಕಾಲೇಜುಗಳಿಗೆ ಭೇಟಿ ನೀಡುವುದು, ಕಡಿಮೆ ಅಂಕ ಪಡೆದ ಹಾಗೂ ಅನುತ್ತೀರ್ಣವಾದ ವಿದ್ಯಾರ್ಥಿಗಳನ್ನು ಗುರುತಿಸಿ ಕೌನ್ಸಲಿಂಗ್ ನೀಡುವುದು. ವೃದ್ಧಾಶ್ರಮದಲ್ಲಿರುವ ವ್ಯಕ್ತಿಗಳನ್ನು ಸಂಪರ್ಕಿಸಿ ಅವರ ಸಮಸ್ಯೆ ವಿಚಾರಿಸುವುದು. ಹಿರಿಯರ ಸಹಾಯವಾಣಿ ಕುರಿತು ತಿಳುವಳಿಕೆ ನೀಡುವುದು.

ರಾಜ್ಯಾದ್ಯಂತ ನಡೆಯುತ್ತಿರುವ ಜನಸ್ನೇಹಿ ಪೊಲೀಸ್, ಮನೆ-ಮನೆಗೆ ಪೊಲೀಸ್ ಕಾರ್ಯಕ್ರಮಗಳಲ್ಲಿ ಮಾನಸಿಕ ತೊಂದರೆ ಎದುರಿಸುತ್ತಿರುವ ವ್ಯಕ್ತಿಗಳ ಸಮಸ್ಯೆಗಳಿಗೆ ವಿಶೇಷ ಆದ್ಯತೆ ನೀಡುವುದು. ಪೊಲೀಸ್ ಸಹಾಯವಾಣಿ ಮಹಿಳೆ ಮತ್ತು ಮಕ್ಕಳ ಸಹಾಯವಾಣಿ ಕೇಂದ್ರದಲ್ಲಿ ಬರುವ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ ಕೌನ್ಸಲಿಂಗ್ ಕೊಡಿಸುವುದು. ಸಾಂಸಾರಿಕ ವಿಷಯಗಳಿಗೆ ಸಂಬಂಧಿಸಿದಂತೆ ಪತಿ-ಪತ್ನಿಯರಿಗೆ ವಿಶೇಷ ಕೌನ್ಸಲಿಂಗ್ ಕೊಡಿಸುವುದು. ಹೀಗೆ ಸಮಾಜಮುಖಿಯಾಗಿ ಜನರನ್ನು ಮಾನಸಿಕ ಖಿನ್ನತೆ ಹಾಗೂ ತೊಂದರೆಗಳಿಂದ ಹೊರತಂದು ಆತ್ಮಹತ್ಯೆಗೆ ಶರಣಾಗದಂತೆ ತಡೆಯುವ ಕಾರ್ಯವನ್ನು ಆಯಾ ಪ್ರದೇಶದ ಪೊಲೀಸರು ನಡೆಸಬೇಕಿದೆ.

ಇನ್ನು ಆತ್ಮಹತ್ಯೆ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಹೊರಡಿಸಿರುವ ಸುತ್ತೋಲೆಗೆ ಅನುಗುಣವಾಗಿ ಆಯಾ ಠಾಣೆಯ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮ, ಕಾರ್ಯಾಗಾರಗಳ ವಿವರವನ್ನು ಕೂಡಾ ಹಿರಿಯ ಅಧಿಕಾರಿಗಳಿಗೆ ಸಲ್ಲಿಸಬೇಕಿದೆ. ರಾಜ್ಯದಲ್ಲಿ ಆತ್ಮಹತ್ಯೆ ಪ್ರಮಾಣ ತಗ್ಗಿಸಲು ಪೊಲೀಸ್ ಇಲಾಖೆಗೆ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ. ರಾಜ್ಯದಲ್ಲಿ ಹಾಗೂ ನಗರದಲ್ಲಿ ಹೆಚ್ಚುತ್ತಲೇ ಇರುವ ಅಪರಾಧ ಪ್ರಕರಣಗಳನ್ನು ತಡೆಯುವಲ್ಲಿ ಹೈರಾಣಾಗುತ್ತಿರುವ ಪೊಲೀಸ್ ಇಲಾಖೆಗೆ ಇದೀಗ ಹೊಸ ಹೊಣೆಗಾರಿಕೆ ಹೆಗಲೇರಿದೆ.

 
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ