ಮಕ್ಕಳನ್ನು ಕೊಂದು: ತಾನೂ ಆತ್ಮಹತ್ಯೆ !

Kannada News

01-09-2017

ಬೆಂಗಳೂರು: ಹಲಸೂರಿನ ಮರ್ಫಿಟೌನ್‍ ನಲ್ಲಿ ಕಳೆದ ರಾತ್ರಿ ಸಾಲಬಾಧೆಯಿಂದ ನೊಂದ ಮಹಿಳೆಯೊಬ್ಬರು 10 ತಿಂಗಳ ಕಂದಮ್ಮ ಸೇರಿ, ಇಬ್ಬರು ಮಕ್ಕಳಿಗೆ ನೇಣು ಬಿಗಿದು ಕೊಲೆಮಾಡಿ, ತಾನೂ ನೇಣಿಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.

ಮರ್ಫಿಟೌನ್‍ ನ ನಾಲಾ ರಸ್ತೆಯ ಸತ್ಯನಾರಾಯಣ ದೇವಾಲಯದ ಬಳಿ ವಾಸಿಸುತ್ತಿದ್ದ ರೇಣುಕಾ(34) ತನ್ನ 10 ತಿಂಗಳ ಮಗು ಪಾವನಿ ಹಾಗೂ 6ವರ್ಷದ ನಿಶ್ಚಿತಾಳಿಗೆ ನೇಣು ಬಿಗಿದು ತಾನೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿನ್ಮಯ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿದ್ದ ರೇಣುಕಾ ಅವರು ಸಾಫ್ಟ್‍ ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಹೇಮಂತ್‍ಕುಮಾರ್ ಅವರನ್ನು ವಿವಾಹವಾಗಿದ್ದರು. ಪತಿಗೆ ಸರಿಯಾದ ಕೆಲಸ ಇರದಿದ್ದರಿಂದ ಸುಮಾರು 35 ಲಕ್ಷದವರೆಗೆ ಸಾಲ ಮಾಡಿದ್ದು, ಸಾಲ ಮರುಪಾವತಿ ಮಾಡಲು ಸಾಧ್ಯವಾಗಿರಲಿಲ್ಲ. ಸಾಲದ ಸುಳಿಗೆ ಸಿಲುಕಿದ್ದ ದಂಪತಿಗೆ ಸಾಲಕೊಟ್ಟವರು ವಾಪಾಸ್ ನೀಡುವಂತೆ ಪೀಡಿಸುತ್ತಿದ್ದರು. ಇದರಿಂದ ಬೇಸತ್ತ ರೇಣುಕಾ ಅವರು, ಪತಿ ರಾತ್ರಿ ಪಾಳಯದಲ್ಲಿ ಕೆಲಸಕ್ಕೆ ಹೋಗಿದ್ದಾಗ ಫ್ಯಾನ್‍ಗೆ ಮಕ್ಕಳನ್ನು ನೇಣು ಹಾಕಿ ತಾನು ಅದೇ ಫ್ಯಾನ್‍ಗೆ ನೇಣು ಬಿಗಿದುಕೊಂಡಿದ್ದಾರೆ.

ಕೆಲಸ ಮುಗಿಸಿಕೊಂಡು ಪತಿ ಬೆಳಿಗ್ಗೆ ಬಂದು ನೋಡಿದಾಗ ಬಾಗಿಲಿಗೆ ಚಿಲಕ ಹಾಕಿದ್ದು ಎಷ್ಟು ಬಾರಿ ಬಡಿದರೂ ಬಾಗಿಲು ತೆಗೆಯದಿದ್ದರಿಂದ ಆತಂಕಗೊಂಡು ಬಾಗಿಲು ಒಡೆದು ನೋಡಿದಾಗ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ. ದಂಪತಿ ನಡುವೆ ಯಾವುದೇ ಭಿನ್ನಾಭಿಪ್ರಾಯವಿರಲಿಲ್ಲ. ಬಹಳ ಅನ್ಯೋನ್ಯವಾಗಿದ್ದರು. ಬೆಳಗ್ಗೆ ಕೆಲಸಕ್ಕೆ ಹೋಗಿ ಸಂಜೆ ಬರುತ್ತಿದ್ದರು. ಆದರೆ ರೇಣುಕಾ ಅವರು ಯಾಕೆ ಹೀಗೆ ಮಾಡಿಕೊಂಡರು ಎಂಬುದೇ ತಿಳಿಯುತ್ತಿಲ್ಲ ಎಂದು ನೆರೆಹೊರೆಯ ನಿವಾಸಿಗಳು ಹೇಳಿಕೊಂಡು ಕಣ್ಣೀರಿಡುತ್ತಿದ್ದುದು ಕಂಡುಬಂತು.

ಮುದ್ದಾದ ಮಕ್ಕಳು, ತಾಯಿ ಸಾವನ್ನಪ್ಪಿರುವುದನ್ನು ನೋಡಲು ಬಂದ ನಾಗರಿಕರ ಕಣ್ಣಾಲಿಗಳು ಅವರಿಗರಿವಿಲ್ಲದಂತೆ ಒದ್ದೆಯಾಗಿದ್ದವು. ಘಟನಾ ಸುದ್ದಿ ತಿಳಿದ ಹಲಸೂರು ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು. ನೆರೆಹೊರೆಯವರಿಂದ ಹಾಗೂ ಕುಟುಂಬಸ್ಥರಿಂದ ಘಟನೆ ಸಂಬಂಧ ಮಾಹಿತಿ ಪಡೆದು ತನಿಖೆ ಮುಂದುವರೆಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ