ಕುಡುಗೋಲಿನಿಂದ ವ್ಯಕ್ತಿ ಕೊಲೆ !

Kannada News

01-09-2017

ಮೈಸೂರು: ಬೆಲೆ ಬಾಳುವ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನ ತಲೆಗೆ ಕುಡುಗೋಲಿನಿಂದ ಬಡಿದು ಕೊಲೆಗೈದಿರುವ ದಾರುಣ ಘಟನೆ ಮೈಸೂರಿನಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಮೈಸೂರಿನ ಹೊರವಲಯದ ಬೋಗಾದಿ ನಿವಾಸಿಯಾದ ಲೋಕೇಶ್ (47) ಎಂದು ಗುರುತಿಸಲಾಗಿದೆ. ಈತ ಬೋಗಾದಿ ರಿಂಗ್ ರಸ್ತೆಯಲ್ಲಿದ್ದ ತನ್ನ 9ಗುಂಟೆ ಜಮೀನಿನಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ತೆರವುಗೊಳಿಸುವ ಸಲುವಾಗಿ ಇಂದು ಆಳುಗಳನ್ನು ಕರೆದೊಯ್ದಿದ್ದ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಸ್ಥಳೀಯ ನಿವಾಸಿಗಳಾದ ಶಿವಮ್ಮ, ಶೋಭಾ ಮತ್ತು ಅವರ ಮನೆಯವರು ಲೋಕೇಶ್ ಜೊತೆ, ಇದು ನಮ್ಮ ಜಮೀನು, ನೀನು ಯಾಕೆ ಇಲ್ಲಿಗೆ ಬಂದಿದ್ದೀಯಾ? ಎಂದು ಪ್ರಶ್ನಿಸಿದ್ದಲ್ಲದೇ ಮಾತಿಗೆ ಮಾತು ಬೆಳೆಸಿ ಲೋಕೇಶ್ ತಲೆಗೆ ಕುಡುಗೋಲಿನಿಂದ ಬಡಿದಿದ್ದಾರೆ. ಪರಿಣಾಮ ತಕ್ಷಣವೇ ಲೋಕೇಶ್ ಪ್ರಜ್ಞೆ ತಪ್ಪಿ ಬಿದ್ದಿದ್ದು ಅಲ್ಲಿಯೇ ಸಾವನ್ನಪ್ಪಿದ್ದಾರೆಂದು ಹೇಳಲಾಗುತ್ತಿದೆ. ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಸರಸ್ವತಿಪುರಂ ಠಾಣೆ ಪೊಲೀಸರು, ಪ್ರಕರಣ ಸಂಬಂಧ ಶೋಭಾ ಮತ್ತು ಶಿವಮ್ಮರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ. ಇನ್ನೂ ಈ ದುರ್ಘಟನೆಗೆ ಕಾರಣವಾಗಿರುವ ಜಮೀನಿನ ವಿವಾದ ನ್ಯಾಯಾಲಯದಲ್ಲಿದ್ದು, ವಿಚಾರಣೆ ನಡೆಯುತ್ತಿತ್ತು. ಆದರೆ ಅಷ್ಟರಲ್ಲಿಯೇ ಲೋಕೇಶ್ ನ ಜೀವವನ್ನೇ ಬಲಿ ಪಡೆದಿದ್ದರಿಂದ, ಜಮೀನು ವಿವಾದ ಲೋಕೇಶ್ ಸಾವಿನಲ್ಲಿ ಅಂತ್ಯಗೊಂಡಿದೆ. ಈ ಸಂಬಂಧ ಮೈಸೂರಿನ ಸರಸ್ವತಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ