ಕೊನೆಗೂ ಸಿಗಲಿಲ್ಲ ಕೊಲೆಯಾದವನ ರುಂಡ..?

Kannada News

01-09-2017

ಹಾಸನ: ಹಾಸನ ಜಿಲ್ಲೆಯಲ್ಲಿ ಯುವಕನೊಬ್ಬನ ರುಂಡ-ಮುಂಡವನ್ನ ಬೇರ್ಪಡಿಸಿ ಭೀಕರವಾಗಿ ಕೊಲೆ ಮಾಡಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇಡೀ ಜಿಲ್ಲೆ ಬೆಚ್ಚಿ ಬೀಳುವ ರೀತಿ ಬರ್ಬರವಾಗಿ ಕೊಲೆ ಮಾಡಿದ ಆರೋಪಿ ಕೂಡ ಸಾವನ್ನಪ್ಪಿದ್ದಾನೆ. ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಪೊಲೀಸರು ಬೆನ್ನಟ್ಟಿದ್ದಾಗ ಆರೋಪಿ ಅನಿಲ್(30) ತಪ್ಪಿಸಿಕೊಳ್ಳೋ ಭರದಲ್ಲಿ ಲಾರಿಗೆ ಸಿಕ್ಕಿ ಸಾವನ್ನಪ್ಪಿದ್ದಾನೆ. ಆಗಸ್ಟ್ 28ರಂದು ಚನ್ನರಾಯಪಟ್ಟಣ ತಾಲೂಕಿನ ಎ.ಕಾಳೇನಹಳ್ಳಿ ಗ್ರಾಮದಲ್ಲಿ ನವೀನ್ ಎಂಬಾತನನ್ನ ಭೀಕರವಾಗಿ ಕೊಲೆ ಮಾಡಲಾಗಿತ್ತು. ನವೀನ್ ರುಂಡ-ಮುಂಡವನ್ನ ಬೇರ್ಪಡಿಸಿದ ಆರೋಪಿ, ಕೊಲೆ ಮಾಡಿದ ಬಳಿಕ ನವೀನ್ ರುಂಡವನ್ನ ಹೊತ್ತೊಯ್ದಿದ್ದನು. ಕೊನೆಗೂ ನವೀನ್ ರುಂಡ ಸಿಗದಿದ್ದಾಗ ಬರೀ ಮುಂಡವನ್ನ ಅಂತ್ಯ ಸಂಸ್ಕಾರ ಮಾಡಲಾಗಿತ್ತು. ಕೊಲೆಯಾದ ನವೀನ್, ಜೆಡಿಎಸ್ ಕಾರ್ಯಕರ್ತನಾಗಿದ್ದು ಜೆಡಿಎಸ್ ನಾಯಕ ಸೂರಜ್ ರೇವಣ್ಣ ಜೊತೆ ಒಡನಾಟ ಇಟ್ಟುಕೊಂಡಿದ್ದ. ಹಾಗಾಗೀ ಮೊದಲಿಗೆ ಇದು ರಾಜಕೀಯ ದ್ವೇಷದ ಕೊಲೆಯೇ ಅನ್ನೋ ಅನುಮಾನ ಹುಟ್ಟುಹಾಕಿತು. ತನಿಖೆಯನ್ನು ಕೈಗೊಂಡ ಪೊಲೀಸರು, ಕೊಲೆ ಆರೋಪಿಗಳಿಗಾಗಿ ತೀವ್ರ ಶೋಧ ಕೈಗೊಂಡಿದ್ದರು. ನಿನ್ನೆ ಆರೋಪಿ ಚನ್ನರಾಯಪಟ್ಟಣಕ್ಕೆ ಬಂದಿರೋ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ, ಪೊಲೀಸರು ಆರೋಪಿ ಬೆನ್ನು ಬಿದ್ದಿದ್ದರು. ಅನಿಲ್ ಕೂಡ ಎ.ಕಾಳೇನಹಳ್ಳಿ ಗ್ರಾಮದವನಾಗಿದ್ದು, ನಿನ್ನೆ ಪೊಲೀಸರಿಂದ ತಪ್ಪಿಸಿಕೊಳ್ಳೋ ಭರದಲ್ಲಿ ಸಾವನ್ನಪ್ಪಿದ್ದಾನೆ. ಸಾವನ್ನಪ್ಪಿದ್ದ ಆರೋಪಿ ಅನಿಲ್ ಗೆ ಅದೇ ಗ್ರಾಮದ ಯುವತಿ ಜೊತೆ ಮದುವೆ ನಿಶ್ಚಯವಾಗಿತ್ತು. ಆದರೆ ಆ ಯುವತಿ ಜೊತೆ ನವೀನ್ ತುಂಬಾ ಸಲುಗೆಯಿಂದ ಇದ್ದು, ಇದನ್ನ ಸಹಿಸದ ಅನಿಲ್-ನವೀನ್ ನಡುವೆ ಆ ಯುವತಿಯ ವಿಚಾರವಾಗಿಯೇ ಮನಸ್ತಾಪ ಶುರುವಾಗಿತ್ತು. ಹೀಗೆ ಇಬ್ಬರ ನಡುವೆ ಶುರುವಾದ ಮನಸ್ತಾಪ ನವೀನ್ ನನ್ನು ಬರ್ಬರವಾಗಿ ಕೊಲ್ಲೋ ಮಟ್ಟಕ್ಕೆ ಹೋಗಿತ್ತು. ಇದೀಗ ನವೀನ್ ಕೊಲೆ ಮಾಡಿದ ಆರೋಪಿ ಅನಿಲ್ ಕೂಡ ಸಾವನ್ನಪ್ಪಿದ್ದು ಇಡೀ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಬಿದ್ದಂತಾಗಿದೆ. ಆದರೆ ಮೊದಲು ಕೊಲೆಯಾದ ನವೀನ್ ರುಂಡ ಎಲ್ಲಿ ಹೋಯ್ತು ಅನ್ನೋ ಪ್ರಶ್ನೆ ಮಾತ್ರ ಕೊನೆಗೂ ಹಾಗೇ ಉಳಿದುಕೊಂಡಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ