ವಂಶಪಾರಂಪರ್ಯ ರಾಜಕಾರಣ

Kannada News

18-03-2017 1232

ದೇಶದ ರಾಜಕಾರಣದಲ್ಲಿ ಇದೀಗ ವಂಶಪಾರಂಪರ್ಯ ರಾಜಕಾರಣ ಎಂಬ ಆರೋಪ ಸವಕಲು ನಾಣ್ಯವಾಗಿದೆ. ಯಾರಾದರು ಈ ಬಗ್ಗೆ ಮಾತನಾಡಿದರೆ ಅದನ್ನು ಕ್ಲೀಷೆ ಎನ್ನಲಾಗುತ್ತಿದೆ. 80 ದಶಕದಲ್ಲಿ ವಂಶಪಾರಂಪರ್ಯ ರಾಜಕಾರಣದ ವಿರುದ್ದ ಹೋರಾಟದ ಹೆಸರಲ್ಲಿ ಬಿಜೆಪಿಯು ಸೇರಿ ಎಲ್ಲಾ ಪಕ್ಷಗಳು ಕಾಂಗ್ರೆಸ್ ವಿರುದ್ಧ ರಣಕಹಳೆ ಮೊಳಗಿಸುತ್ತಿದ್ದವು. ಕಾಂಗ್ರೆಸ್‍ನಲ್ಲಿ ನೆಹರು ಅವರ ನಂತರ ಇಂದಿರಾ ಬಳಿಕ ಸಂಜಯ್, ರಾಜೀವ್, ಸೋನಿಯಾ ಎಂಬ ಆರೋಪಗಳು ವ್ಯಾಪಕವಾಗಿದ್ದವು. ಕಾಂಗ್ರೆಸ್ ಪಕ್ಷ ಮತ್ತು ಅವರ ನಾಯಕತ್ವದ ಬಗ್ಗೆ ಮಾಡುತ್ತಿದ್ದ ಆರೋಪದಲ್ಲಿ ವಂಶ ಪಾರಂಪರ್ಯ ರಾಜಕಾರಣ ಆರೋಪಕ್ಕೆ ಅಗ್ರಸ್ಥಾನ.
ಇಂತಹ ಆರೋಪದಲ್ಲಿ ಪ್ರಮುಖರಾಗಿದ್ದವರು ವಾಜಪೇಯಿ, ಅಡ್ವಾಣಿ ಮೊದಲಿಗರಾದರೆ, ಲೋಹಿಯಾ ಮತ್ತು ಜೆಪಿ ವಿಚಾರಧಾರೆಯಿಂದ ಪ್ರಭಾವಿತರಾದ ಮುಲಾಯಂ, ಲಾಲೂ, ದೇವಿಲಾಲ್, ಜಾರ್ಜ್ ಫನಾಂಡೀಸ್, ಬಿಜು ಪಟ್ನಾಯಕ್, ಹೆಗಡೆ, ದೇವೇಗೌಡ ಆದಿಯಾಗಿ ಎಲ್ಲಾ ನಾಯಕರು ಕಾಂಗ್ರೆಸ್ ವಿರುದ್ದ ಇದನ್ನು ಪ್ರಮುಖ ಅಸ್ರವಾಗಿಸಿಕೊಂಡಿದ್ದರು. 
ಆದರೆ ಈಗ ಕಾಲ ಬದಲಾಗಿದೆ. ರಾಜಕಾರಣಗಳ ಚಿಂತನಾಧಾರೆ ಪಕ್ಷಗಳ ಸಿದ್ದಾಂತ ಕೂಡ ಬದಲಾಗಿದೆ. ನಾಯಕತ್ವದ ಧೋರಣೆ ಕೂಡಾ ಬದಲಾಗಿದ್ದು ಯಾರಾದರು ವಂಶ ಪಾರಂಪರ್ಯ ರಾಜಕಾರಣ ಎಂದು ಪ್ರಸ್ತಾಪಿಸಿದರೆ ಅವರ ಪಕ್ಷದಲ್ಲಿನ ನಾಯಕರೇ ಅವರನ್ನು ವಿಶೇಷ ಎಂಬ ವ್ಯಕ್ತಿಯಂತೆ ನೋಡುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸದ್ಯ ವಂಶಪಾರಂಪರ್ಯ ರಾಜಕಾರಣ ಎಂಬ ಆರೋಪಕ್ಕೆ ಯಾವುದೇ ಅರ್ಥವೇ ಇಲ್ಲವೇನೋ ಎಂಬ ಸ್ಥಿತಿ ನಿರ್ಮಾಣಗೊಂಡಿದೆ. 
ದೇಶದ ರಾಜಕಾರಣ ಗಮನಿಸಿದಾಗ ಕಾಂಗ್ರೆಸ್‍ನಲ್ಲಿ ಸೋನಿಯಾ ಅವರ ನಂತರದಲ್ಲಿ ರಾಹುಲ್ ಪಕ್ಷದ ಉನ್ನತ ಹುದ್ದೆಯಲ್ಲಿದ್ದಾರೆ. ಇದೀಗ ಪ್ರಿಯಾಂಕ ಅವರನ್ನೂ ಸಕ್ರಿಯ ರಾಜಕಾರಣಕ್ಕೆ ಕರೆತರುವ ಕುರಿತಂತೆ ಚರ್ಚೆಗಳು ನಡೆದಿದೆ.
ಬಿಜೆಪಿಯಲ್ಲಿ ವಾಜಪೇಯಿ, ಅಡ್ವಾಣಿ ಯುಗಾಂತ್ಯವಾಗಿದೆ. ಅಂದಿನ ಮುಂಚೂಣಿ ನಾಯಕರಾಗಿದ್ದ ಕಲ್ಯಾಣ್ ಸಿಂಗ್, ರಾಜನಾಥ್ ಸಿಂಗ್, ಯಶವಂತ್ ಸಿನ್ಹಾ, ವಸುಂದರರಾಜೆ ಮೊದಲಾದ ನಾಯಕರ ಮಕ್ಕಳು ಇದೀಗ ಪ್ರಭಾವಿ ನಾಯಕರಾಗಿದ್ದಾರೆ. 
ದೇವಿಲಾಲ್ ಅವರ ರಾಷ್ಟ್ರೀಯ ಲೋಕದಳದಲ್ಲಿ ದೇವಿಲಾಲ್ ಪುತ್ರ ಓಂಪ್ರಕಾಶ್ ಚೌಟಾಲ, ಅವರ ಪುತ್ರ ಅಜಯ್ ಚೌಟಾಲ ಅವರುಗಳು ಮುಂಚೂಣಿಯಲ್ಲಿದ್ದಾರೆ. ಲಾಲೂ ಪ್ರಸಾದ್ ಯಾದವ್ ಅವರ ಪಕ್ಷದಲ್ಲಿ ಅವರ ಪತ್ನಿ ಹಾಗೂ ಮಕ್ಕಳದ್ದೇ ಸಾಮ್ರಾಜ್ಯ. ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ಅವರ ಪಕ್ಷ ಸಮಾಜವಾದಿಯಂತೂ ಸಂಪೂರ್ಣ ಒಂದು ಕುಟುಂಬದ ಒಡೆತನದ ಪಕ್ಷವೇ ಆಗಿ ಪರಿಣಮಿಸಿದೆ. ಇಲ್ಲಿ ಮುಲಾಯಂ ತಮ್ಮ ಮಗ ಸೊಸೆ, ಸಹೋದರ ಸಂಬಂಧಿಗಳೇ ಮುಂಚೂಣಿ ನಾಯಕರು. 
ಒಡಿಶಾದ ಜನತಾದಳ, ಬಿಜು ಜನತಾದಳವಾಗಿದ್ದು, ಬಿಜು ಪಟ್ನಾಯಕ್ ನಂತರ ಅವರ ಪುತ್ರ ನವೀನ್ ಪಟ್ನಾಯಕ್ ಪಕ್ಷದ ಪ್ರಶ್ನಾತೀತ ನಾಯಕರಾಗಿದ್ದಾರೆ. ಆಂಧ್ರದ ತೆಲುಗುದೇಶಂ, ತಮಿಳುನಾಡಿನ ಡಿಎಂಕೆ, ಮಹಾರಾಷ್ಟ್ರದ ಎನ್‍ಸಿಪಿ ಹೀಗೆ ಯಾವುದೇ ಪಕ್ಷ ನೋಡಿದರೂ ಎಲ್ಲಾ ಪಕ್ಷಗಳಲ್ಲೂ ಅಪ್ಪ-ಮಕ್ಕಳು, ಪತ್ನಿ, ಮಕ್ಕಳು, ಮಗಳು, ಸೊಸೆ, ಸೋದರ, ಅಳಿಯ ಹೀಗೆ ಕುಟುಂಬ ರಾಜಕಾರಣವೇ ಪ್ರಧಾನವಾಗಿದೆ.
ಕರ್ನಾಟಕದಲ್ಲೂ ಕೂಡಾ ಯಾವುದೇ ಪಕ್ಷ ವಂಶಪಾರಂಪರ್ಯ ಅಥವಾ ಕುಟುಂಬ ರಾಜಕಾರಣದಿಂದ ಹೊರತಾಗಿಲ್ಲ. ಕಾಂಗ್ರೆಸ್ ನಾಯಕರೂ ಕೂಡಾ ತಮ್ಮ ಮಕ್ಕಳನ್ನು ರಾಜಕಾರಣಕ್ಕೆ ಕರೆತಂದಿದ್ದರೆ, ಬಿಜೆಪಿ ನಾಯಕರೂ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಇನ್ನು ಜೆಡಿಎಸ್ ಬಗ್ಗೆಯಂತೂ ಹೇಳುವುದೇ ಬೇಡ.
ಸದ್ಯ ರಾಜ್ಯ ರಾಜಕಾರಣದಲ್ಲಿ ಕುಟುಂಬ ರಾಜಕಾರಣದ ಅಬ್ಬರವಂತೂ ಹೇಳತೀರದಾಗಿ ಅಣ್ಣ ಒಂದು ಪಕ್ಷದಲ್ಲಿದ್ದರೆ, ತಮ್ಮ ಮತ್ತೊಂದು ಪಕ್ಷದಲ್ಲಿ, ಮಗ ಒಂದು ಪಕ್ಷದಲ್ಲಿ ನಾಯಕರಾಗಿದ್ದರೆ ತಂದೆ ಮತ್ತೊಂದು ಪಕ್ಷದಲ್ಲಿ ನಾಯಕರಾಗಿದ್ದಾರೆ. ಇನ್ನು ರಾಜ್ಯದ ಬಹುತೇಕ ಎಲ್ಲಾ ಮಾಜಿ ಮಂತ್ರಿಗಳ ಮಕ್ಕಳೂ ಸಕ್ರಿಯ ರಾಜಕಾರಣಿಗಳಾಗಿದ್ದಾರೆ. 
ದಿವಂಗತ ನಿಜಲಿಂಗಪ್ಪ ಅವರ ಅಳಿಯ ರಾಜಶೇಖರನ್ ಕರ್ನಾಟಕದಲ್ಲಿ ಹಿರಿಯ ನಾಯಕರಾಗಿದ್ದಾರೆ. ವೀರೇಂದ್ರ ಪಾಟೀಲ್ ಅವರ ಪುತ್ರ ಕೈಲಾಸನಾಥ ಪಾಟೀಲ್ ಕಲಬುರಗಿಯ ಚಿಂಚೋಳಿ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗುವುದು, ಕ್ಷೇತ್ರ ಪುನರ್ ವಿಂಗಡನೆಗೂ ನಂತರ ಪರಿಸ್ಥಿತಿ ಬದಲಾಗಿದೆ. ಹೀಗಾಗಿ ಮಾಜಿ ಶಾಸಕರಾಗಿರುವ ಅವರು ಹಾಲಿ ಶಾಸಕರಾಗಲು ಎಡೆಬಿಡದೆ ಪ್ರಯತ್ನಿಸುತ್ತಿದ್ದಾರೆ
ಮಾಜಿ ಸಿಎಂ ಹಾಗೂ ಪ್ರಧಾನಿ ದೇವೇಗೌಡರ ಪುತ್ರ ಹೆಚ್.ಡಿ. ರೇವಣ್ಣ, ಹೆಚ್.ಡಿ. ಕುಮಾರಸ್ವಾಮಿ ರಾಜ್ಯದ ಪ್ರಬಲನಾಯಕರಾಗಿದ್ದಾರೆ. ಮಾಜಿ ಸಿಎಂ ಒಬ್ಬರ ಪುತ್ರ ಕೂಡ ಮುಖ್ಯ ಮಂತ್ರಿಯಾಗುವ ಮೂಲಕ ರಾಜ್ಯದ ರಾಜಕೀಯ ಚರಿತ್ರೆಯ ಪುಟಗಳಲ್ಲಿ ಕುಮಾರಸ್ವಾಮಿ ಹೊಸ ದಾಖಲೆಯನ್ನೇ ಸೃಷ್ಠಿಸಿದ್ದಾರೆ.

ದೇವೇಗೌಡರ ಕುಟುಂಬದಲ್ಲಿ ಎಚ್‍ಡಿ ರೇವಣ್ಣ ಮಾಜಿ ಮಂತ್ರಿಯಾದರೆ ಇವರ ಪತ್ನಿ ಭವಾನಿ ರೇವಣ್ಣ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದಾರೆ. ಪುತ್ರ ಪ್ರಜ್ವಲ್ ರೇವಣ್ಣ ಮುಂದಿನ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ. ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಒಂದು ಅವಧಿಗೆ ಶಾಸಕರಾಗಿ ಆಯ್ಕೆಯಾಗಿದ್ದವರು ಇದೀಗ ಸಕ್ರಿಯ ರಾಜಕಾರಣದಿಂದ ದೂರವಿದ್ದಾರೆ.
ಮಾಜಿ ಸಿಎಂ ಗುಂಡೂರಾವ್ ಅವರ ಪುತ್ರ ದಿನೇಶ್‍ಗುಂಡೂರಾವ್ ರಾಜ್ಯ ಕಾಂಗ್ರೆಸ್‍ನ ಕಾರ್ಯಾಧ್ಯಕ್ಷರಾಗಿ ತಮ್ಮದೇ ಛಾಪು ಹೊಂದಿದ್ದಾರೆ. ಇನ್ನು ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಅವರ ಪುತ್ರಿ ಮಮತಾ ನಿಚ್ಚಾನಿ ಒಮ್ಮೆ ರಾಮನಗರ  ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದರೂ ನಂತರದಲ್ಲಿ ಅವರು ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದಾರೆ. ಹೀಗಾಗಿ ಇವರ ಕುಟುಂಬದವರಾರು ರಾಜಕಾರಣದಲ್ಲಿ ಸದ್ಯ ಸಕ್ರಿಯವಾಗಿಲ್ಲ. 
ಮಾಜಿ ಸಿಎಂ ಜೆ.ಎಚ್.ಪಟೇಲ್ ಅವರ ಪುತ್ರಿ ಮಹಿಮಾ ಪಟೇಲ್ ಒಮ್ಮೆ ಶಾಸಕರಾಗಿ ಆಯ್ಕೆಯಾದರೂ ಮತ್ತು ಮರು ಆಯ್ಕೆಗೆ ನಡೆಸಿದ ಪ್ರಯತ್ನ ಈಡೇರಲಿಲ್ಲ ಜೆಡಿಎಸ್, ಕಾಂಗ್ರೆಸ್‍ನಲ್ಲಿ ರಾಜಕಾರಣ ಮಾಡಿ ಹೊಸ ಪಕ್ಷ ಕಟ್ಟಿ ವಿಫಲರಾದ ಅವರು ಇದೀಗ ಸಂಯುಕ್ತ ಜನತಾದಳದಲ್ಲಿ ಗುರುತಿಸಿಕೊಂಡಿದ್ದಾರೆ. ಜೆ.ಎಚ್.ಪಟೇಲ್ ರಾಜ್ಯದ ಸಿಎಂ ಆಗಿದ್ದ ವೇಳೇಯೇ ಬೆಂಗಳೂರು ಮಹಾನಗರ ಪಾಲಿಕೆಗೆ ಸ್ಪರ್ಧಿಸಲು ಯತ್ನಿಸಿ ತಮ್ಮ ತಂದೆಯ ಕೆಂಗಣ್ಣಿಗೆ ಗುರಿಯಾಗಿದ್ದ ತ್ರಿಶೂಲ್ ಪಾಣಿ ಪಟೇಲ್ ನಂತರದಲ್ಲಿ ಲೋಕಶಕ್ತಿ ಸಂಯುಕ್ತ ಜನತಾದಳ ಸೇರಿ ಹಲವು ಪಕ್ಷಗಳಲ್ಲಿ ತಮ್ಮ ರಾಜಕೀಯ ಭವಿಷ್ಯ ಕಂಡುಕೊಳ್ಳುವ ಪ್ರಯತ್ನ ನಡೆಸಿದರೂ ಅದು ಸಾಧ್ಯವಾಗದೇ ಇದೀಗ ಮತ್ತೆ ಪ್ರಬಲ ನೆಲೆಗಾಗಿ ಹುಡುಕಾಟದಲ್ಲಿ ತೊಡಗಿದ್ದಾರೆ. 
ದೇವೇಗೌಡರ ಕುಟುಂಬದಂತೆ ರಾಜ್ಯ ರಾಜಕಾರಣದಲ್ಲಿ ಯಶಸ್ಸು ಕಂಡ ಮತ್ತೊಂದು ಕುಟುಂಬ ಬಂಗಾರಪ್ಪ ಅವರ ಕುಟುಂಬ ಇವರ ಹಿರಿಯ ಪುತ್ರ ಕುಮಾರ್‍ಬಂಗಾರಪ್ಪ ಎರಡುಬಾರಿ ಶಾಸಕರಾಗಿ ಮಂತ್ರಿಯೂ ಆಗಿದ್ದರು. ತಮ್ಮ ತಂದೆ ನಡೆಸಿದ ಎಲ್ಲಾ ರಾಜಕೀಯ ಪ್ರಯೋಗಗಳಲ್ಲಿ ಪಾಲುದಾರರಾಗಿದ್ದರು. ಆದರೆ ಕೌಟುಂಬಿಕ ಕಲಹದ ಪರಿಣಾಮವಾಗಿ ಕೊನೆಯ ಹಂತದಲ್ಲಿ ಅವರು ನಡೆಸಿದ ಪ್ರಯೋಗವಾದ ಸಮಾಜವಾದಿ ಪಕ್ಷ ಮತ್ತು ಜಾತ್ಯಾತೀತ ಜನತಾದಳ ಸೇರ್ಪಡೆಯಿಂದ ಕುಮಾರಬಂಗಾರಪ್ಪ ದೂರ ಉಳಿದರು. ಅಷ್ಟೇ ಅಲ್ಲ ತಮ್ಮ ತಂದೆಯವರ ಕರ್ಮಭೂಮಿ ಸೊರಬದಿಂದ ವಿಧಾನಸಭೆಗೆ ಆಯ್ಕೆಯಾಗುವ ಪ್ರಯತ್ನ ನಡೆಸಿ ವಿಫಲರಾದರು.
ಹಿರಿಯ ಪುತ್ರನಿಂದ ತೆರವಾದ ಈ ಸ್ಥಾನವನ್ನು ಬಂಗಾರಪ್ಪ ಅವರ ಕಿರಿಯಪುತ್ರ ಮಧು ಬಂಗಾರಪ್ಪ ತುಂಬಿದರು. ಸೊರಬದಿಂದ ಶಾಸಕರಾಗಿ ಆಯ್ಕೆಯಾಗಿರುವ ಇವರು ತಮ್ಮ ಅಣ್ಣನಿಗೆ ಎದುರಾಳಿ. ಇನ್ನು ಬಂಗಾರಪ್ಪ ಅವರ ಪುತ್ರಿ ನಟ ಶಿವರಾಜ್‍ಕುಮಾರ್ ಪತ್ನಿ ಶ್ರೀಮತಿ ಗೀತಾ ಶಿವರಾಜ್‍ಕುಮಾರ್ ಕೂಡಾ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಲು ಪ್ರಯತ್ನ ನಡೆಸಿದ್ದಾರೆ.
ಮಾಜಿ ಸಿಎಂ ಎಸ್.ಆರ್. ಬೊಮ್ಮಾಯಿ ಅವರ ಪುತ್ರ ಬಸವರಾಜು ಬೊಮ್ಮಾಯಿ ಸಂಯುಕ್ತ ಜನತಾದಳದ ಮೂಲಕ ರಾಜಕೀಯ ಪ್ರವೇಶಿಸಿ ವಿಧಾನ ಪರಿಷತ್‍ಗೆ ಆಯ್ಕೆಯಾದರು. ಅಖಿಲಭಾರತ ಪ್ರಗತಿಪರ ಜನತಾದಳದೊಂದಿಗೆ ಗುರುತಿಸಿಕೊಂಡ ಅವರು ನಂತರದಲ್ಲಿ ಬಿಜೆಪಿ ಸೇರ್ಪಡೆಯಾಗಿ ಶಾಸಕರಾಗಿ ಮಂತ್ರಿಯೂ ಆದರು ಎಸ್.ಆರ್. ಬೊಮ್ಮಾಯಿ ಅವರ ಮತ್ತೊಬ್ಬ ಪುತ್ರ ಕೂಡಾ ರಾಜಕೀಯ ಪ್ರವೇಶಿಸಲು ಬಯಸಿದರೂ ನಂತರ ತಮ್ಮ ನಿಲುವು ಬದಲಿಸಿ ಉದ್ಯಮಿಯಾಗಿದ್ದಾರೆ. ಈಗ ಈ ಕುಟುಂಬದಿಂದ ಬಸವರಾಜ ಬೊಮ್ಮಾಯಿ ಮಾತ್ರ ಸಕ್ರಿಯ ರಾಜಕಾರಣಿ.
ಮಾಜಿ ಸಿಎಂ ಧರ್ಮಸಿಂಗ್ ಅವರ ಇಬ್ಬರ ಪುತ್ರರ ಪೈಕಿ ಅಜಯ್‍ಸಿಂಗ್ ತಮ್ಮ ತಂದೆ ಪ್ರತಿನಿಧಿಸುತ್ತಿದ್ದ ಕಲಬುರಗಿಯ ಜೇವರ್ಗಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮತ್ತೊಬ್ಬ ಪುತ್ರ ವಿಜಯ್‍ಸಿಂಗ್ ಬೀದರ್‍ನಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದಾರೆ. ಹೀಗಾಗಿ ಇಬ್ಬರೂ ಪುತ್ರರೂ ಸಕ್ರಿಯ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದಾರೆ. 
ಮಾಜಿ ಸಿಎಂ ವೀರಪ್ಪ ಮೋಯ್ಲಿ ಅವರ ಪುತ್ರ ಹರ್ಷ ಮೋಯ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಸಕ್ರಿಯ ರಾಜಕಾರಣ ಪ್ರವೇಶಿಸಿದರು. ಕಳೆದ ಚುನಾವಣೆಯಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದಿಂದ ಆಯ್ಕೆ ಬಯಸಿ ಕಣಕ್ಕಿಳಿಯಲು ಪ್ರಯತ್ನಿಸಿದರೂ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಲು ಸಾಧ್ಯವಾಗದೇ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಅಂದಿನಿಂದಲೂ ಸಕ್ರಿಯರಾಗಿರುವ ಇವರು ಉದ್ಯಮದ ಜೊತೆಗೆ ರಾಜಕಾರಣವನ್ನು ಗಂಭೀರವಾಗಿ ಸ್ವೀಕರಿಸಿದ್ದಾರೆ.
ಮಾಜಿ ಸಿಎಂ ಯಡಿಯೂರಪ್ಪ ಅವರ ಪುತ್ರ ಬಿ.ವೈ.ರಾಘವೇಂದ್ರ ಜಿಲ್ಲಾ ಪಂಚಾಯ್ತಿ ಮೂಲಕ ರಾಜಕಾರಣ ಆರಂಭಿಸಿ ಸಂಸದರಾಗಿ ಆಯ್ಕೆಯಾಗಿದ್ದರು. ನಂತರ ವಿಧಾನಸಭಾ ಸದಸ್ಯರಾಗಿಯೂ ಆಯ್ಕೆಯಾಗಿರುವ ಇವರು ತಮ್ಮ ತಂದೆಯ ನೆರಳಿನಲ್ಲೇ ಸಾಗಿದ್ದಾರೆ. ಇವರನ್ನು ಹೊರತುಪಡಿಸಿ ಇವರ ಕುಟುಂಬದಿಂದ ಬೇರೆ ಯಾರೂ ರಾಜಕಾರಣದಲ್ಲಿ ಸಕ್ರಿಯರಾಗಿಲ್ಲ.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಸೋದರ ಪ್ರದೀಪ್ ಶೆಟ್ಟರ್ ಒಮ್ಮೆ ವಿಧಾನ ಪರಿಷತ್ತಿಗೆ ಸ್ಪರ್ಧಿಸಿ ಸೋಲು ಕಂಡು ಇದೀಗ ಮತ್ತೆ ಆಯ್ಕೆಯಾಗುವ ಮೂಲಕ ಸಕ್ರಿಯರಾಗಿರುವುದು ಬಿಟ್ಟರೆ ಬೇರೆ ಯಾರೂ ಸಕ್ರಿಯರಾಗಿಲ್ಲ. ಮಾಜಿ ಸಿಎಂ ಸದಾನಂದಗೌಡ ಅವರ ಕುಟುಂಬದಲ್ಲೂ ಕೂಡಾ ಅವರನ್ನು ಬಿಟ್ಟರೆ ಬೇರೆಯಾರೂ ಸಕ್ರಿಯ ರಾಜಕಾರಣದಲ್ಲಿಲ್ಲ.  
ಇದು ಮಾಜಿ ಸಿಎಂ ಮತ್ತವರ ಕುಟುಂಬ ಸದಸ್ಯರ ರಾಜಕಾರಣ ಚರಿತ್ರೆಯಾದರೆ, ಇನ್ನು ಹಲವು ಪ್ರಮುಖ ನಾಯಕರ ಮಕ್ಕಳು, ಕುಟುಂಬ ಸದಸ್ಯರೂ ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ. 
ಅವರಲ್ಲಿ ಮಾಜಿ ರಾಜ್ಯಪಾಲ ಎನ್. ರಾಚಯ್ಯ ಅವರ ಪುತ್ರ ಎ. ಆರ್. ಕೃಷ್ಣಮೂರ್ತಿ, ಅವರ ಅಳಿಯ ಬಿ.ಬಿ ನಿಂಗಯ್ಯ, ಮಾಜಿ ಮಂತ್ರಿ ಬಸವಲಿಂಪ್ಪ ಅವರ ಪುತ್ರ ಪ್ರಸನ್ನಕುಮಾರ್, ಹಿರಿಯ ನಾಯಕ ಟಿ. ಎನ್. ನರಸಿಂಹಮೂರ್ತಿ ಅವರ ಪುತ್ರ ಎನ್. ಮಂಜುನಾಥ್ ಅಳಿಯ ಸಿ. ರಮೇಶ್. ಹಿರಿಯ ನಾಯಕ ಆರ್. ಜಾಲಪ್ಪ ಅವರ ಪುತ್ರ ನರಸಿಂಹ ಸ್ವಾಮಿ, ಬೈರೇಗೌಡ ಅವರ ಪುತ್ರ ಕೃಷ್ಣಬೈರೇಗೌಡ, ಎಸ್. ಆರ್. ಕಾಶಪ್ಪನವರ್ ಪುತ್ರ ವಿಜಯಾನಂದ ಕಾಶಪ್ಪನವರ್, ಉಮೇಶ್ ಕತ್ತಿ ಹಾಗು ಅವರ ಸಹೋದರ ರಮೇಶ್ ಕತ್ತಿ, ಶಿವಾನಂದ ಕೌಜಲಗಿ ಅವರ ಪುತ್ರ ಮಹಾಂತೇಶ್ ಕೌಜಲಗಿ, ಅಜೀಜ್ ಸೇಠ್ ಅವರ ಪುತ್ರ ತನ್ವೀರ್ ಸೇಠ್, ಮನೋರಮಾ ಮದ್ವರಾಜ್ ಅವರ ಪುತ್ರ ಪ್ರಮೋದ್ ಮದ್ವರಾಜ್, ಯು.ಟಿ. ಫರೀದ್ ಅವರ ಪುತ್ರ ಯು.ಟಿ. ಖಾದರ್ ಅವರುಗಳು ತಮ್ಮ ತಂದೆಯವರ ಉತ್ತರಾಧಿಕಾರಿಗಳಂತೆ ಗೋಚರಿಸುತ್ತಿದ್ದಾರೆ.
ಇನ್ನು ತಂದೆ ಮಕ್ಕಳಾದ ಶಾಮನೂರು ಶಿವಶಂಕರಪ್ಪ - ಎಸ್.ಎಸ್. ಮಲ್ಲಿಕಾರ್ಜುನ, ಲೇಔಟ್ ಕೃಷ್ಣಪ್ಪ- ಪ್ರಿಯಕೃಷ್ಣ, ಚನ್ನಿಗಪ್ಪ-ಬಿಸಿ ಗೌರಿಶಂಕರ್, ಪ್ರಕಾಶ್ ಹುಕ್ಕೇರಿ-ಗಣೇಶ್ ಹುಕ್ಕೇರಿ, ಸಿ.ಎಂ. ಉದಾಸಿ- ಶಿವಕುಮಾರ ಉದಾಸಿ, ಮಲ್ಲಿಕಾರ್ಜುನ ಖರ್ಗೆ-ಪ್ರಿಯಾಂಕ ಖರ್ಗೆ, ಆರ್.ವಿ ದೇಶಪಾಂಡೆ-ಪ್ರಶಾಂತ್ ದೇಶಪಾಂಡೆ, ಮಾರ್ಗರೇಟ್ ಆಳ್ವ-ನಿವೇದಿತ ಆಳ್ವ ಗಮನ ಸೆಳೆದರೆ, ಸಹೋದರರಾದ ರಮೇಶ್ ಜಾರಕಿಹೊಳಿ, ಸತೀಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಅನಿಲ್ ಲಾಡ್, ಸಂತೋಷ್ ಲಾಡ್, ಜನಾರ್ಧನರೆಡ್ಡಿ, ಕರುಣಾಕರರೆಡ್ಡಿ, ಸೋಮಶೇಖರ್‍ರೆಡ್ಡಿ, ಶ್ರೀರಾಮುಲು, ಜೆ. ಶಾಂತ, ಫಕೀರಪ್ಪ, ಸುರೇಶ್‍ಬಾಬು ತಮ್ಮದೇ ಶೈಲಿಯಿಂದ ಗಮನಸೆಳೆಯುತ್ತಿದ್ದಾರೆ. 
ಇದರ ನಡುವೆ ಇದೀಗ ಮುಂಬರುವ ವಿಧಾನಸಭಾ ಚುನಾವಣೆಗೆ ಮತ್ತಷ್ಟು ಮಂದಿ ಸೇರ್ಪಡೆಯಾಗಲು ಸಿದ್ದತೆ ಆರಂಭಿಸಿದ್ದಾರೆ. ಹಲವು ಮಂದಿ ಪ್ರಭಾವಿ ರಾಜಕಾರಣಿಗಳು ತಮ್ಮ ಪುತ್ರ, ಪುತ್ರಿ, ಅಳಿಯ ಅಥವಾ ಸಹೋದರನನ್ನು ಚುನಾವಣಾ ರಾಜಕಾರಣದಲ್ಲಿ ಪ್ರಯತ್ನ ಆರಂಭಿಸಿದ್ದಾರೆ. ಈ ಮೂಲಕ ಮುಂದಿನ ವಿಧಾನಸಭಾ ಚುನಾವಣೆ ಕೌಟುಂಬಿಕ ರಾಜಕಾರಣಕ್ಕೆ ಸ್ಪಷ್ಟ ಭೂಮಿಕೆಯಾಗುವ ಲಕ್ಷಣ ಗೋಚರಿಸುತ್ತದೆ. 
ಅದರಲ್ಲೂ ಪ್ರಮುಖವಾಗಿ ಆಡಳಿತರೂಡ ಕಾಂಗ್ರೆಸ್ಸನ ಘಟಾನುಘಟಿ ನಾಯಕರು ತಮ್ಮ ಮಕ್ಕಳಿಗೆ ರಾಜಕೀಯ ವಾರಸುದಾರಿಕೆ ಹಸ್ತಾಂತರಿಸಲು ಈ ಚುನಾವಣೆಯನ್ನು ವೇದಿಕೆಯಾಗಿ ಬಳಸಿಕೊಳ್ಳಲು ಸಿದ್ದತೆ ನಡೆಸಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಅವರಿಗೆಲ್ಲಾ ಸ್ಪರ್ಧಿಸಲು ಟಿಕೆಟ್ ನೀಡುತ್ತದೆಯೋ ಇಲ್ಲವೋ ಅದು ಬೇರೆ ಪ್ರಶ್ನೆ. ಆದರೆ ಪ್ರಭಾವಿ ನಾಯಕರು ತಮ್ಮ ವಾರಸುದಾರರನ್ನು ಪರಿಚಯಿಸಲು ಗಂಭೀರ ಪ್ರಯತ್ನ ನಡೆಸಿದ್ದಾರೆ. 
ದಿವಂಗತ ರಾಕೇಶ್ ಅವರನ್ನು ಸಿದ್ದರಾಮಯ್ಯ ಅವರ ರಾಜಕೀಯ ಉತ್ತರಾಧಿಕಾರಿ ಎಂದೇ ಬಿಂಬಿಸಲಾಗುತ್ತಿತ್ತು. ಸಿಎಂ ಅವರ ಕ್ಷೇತ್ರದಲ್ಲಿ ರಾಕೇಶ್ ಪ್ರಭಾವ ಅಚ್ಚೊತ್ತಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ಪರವಾಗಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದಾರೆ. ಕ್ಷೇತ್ರದಲ್ಲಿ ರಾಕೇಶ್ ತಮ್ಮ ತಂದೆಯ ಪರವಾಗಿ ಪ್ರಚಾರ, ರಾಜಕೀಯ ತಂತ್ರಗಾರಿಕೆ ಹೆಣೆಯುವ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಹೀಗಾಗಿ ರಾಕೇಶ್ ಅವರನ್ನು ಸಿದ್ದರಾಮಯ್ಯ ಅವರ ಉತ್ತರಾಧಿಕಾರಿ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ವಿಧಿಯಾಟ ಬೇರೆಯೇ ಆಗಿತ್ತು. ಈಗ ರಾಕೇಶ್ ಕೇವಲ ನೆನಪು ಮಾತ್ರ. 
ರಾಕೇಶ್ ಇರುವವರೆಗೂ ರಾಜಕೀಯದತ್ತ  ಸುಳಿಯದೇ ಇದ್ದ ಸಿದ್ದರಾಮಯ್ಯ ಅವರ ಮತ್ತೊಬ್ಬ ಪುತ್ರ ಡಾ. ಯತೀಂದ್ರ ಇದೀಗ ರಾಕೇಶ್ ಸ್ಥಾನ ತುಂಬುವ ಪ್ರಯತ್ನ ನಡೆಸಿದ್ದಾರೆ. ತಮ್ಮ ತಂದೆಯ ಕ್ಷೇತ್ರದಲ್ಲಿ ಬಿರುಸಿನ ಪ್ರವಾಸ ಕೈಗೊಳ್ಳುವ ಮೂಲಕ ಜನ ಸಂಪರ್ಕ ಸಾಧಿಸಲು ಯತ್ನಿಸುತ್ತಿದ್ದಾರೆ. ಹೀಗಾಗಿ ಮುಂದಿ ಚುನಾವಣೆಯಲ್ಲಿ ಸಿಎಂ ತಮ್ಮ ಕ್ಷೇತ್ರ ವರುಣಾದಿಂದ ಪುತ್ರ ಡಾ. ಯತೀಂದ್ರ ಅವರನ್ನು ಕಣಕ್ಕಿಳಿಸಿ ತಾವು ಪಕ್ಕದ ಚಾಮುಂಡೇಶ್ವರಿಯಿಂದ ಕಣಕ್ಕಿಳಿಯುವ ಚಿಂತನೆ ನಡೆಸಿದ್ದಾರೆ.
ಮೈಸೂರು ಜಿಲ್ಲೆ ಇಂತಹ ಪ್ರಯತ್ನಗಳಿಂದಾಗಿ ಗಮನ ಸೆಳೆಯುತ್ತಿದೆ. ಸದ್ಯ ನಡೆಯುತ್ತಿರುವ ಉಪಚುನಾವಣೆಯಲ್ಲೇ ತಮ್ಮ ಪುತ್ರ ಸುನೀಲ್‍ಬೋಸ್ ಅವರನ್ನು ನಂಜನಗೂಡು ಕ್ಷೇತ್ರದಿಂದ ಕಣಕ್ಕಿಳಿಸುವ ತಯಾರಿ ನಡೆಸಿದ್ದ ಎಚ್.ಸಿ. ಮಹಾದೇವಪ್ಪ ಮುಂದಿನ ಚುನಾವಣೆಯಲ್ಲಿ ಸುನೀಲ್ ಬೋಸ್‍ಗೆ ಯಾವುದಾದರೊಂದು ಕ್ಷೇತ್ರದಿಂದ ಕಣಕ್ಕಿಳಿಸುವುದು ನಿಶ್ಚಿತ ಎಂಬಂತಿದೆ.
ಇನ್ನು ಮಾಜಿ ಸಂಸದ ಎಚ್. ವಿಶ್ವನಾಥ್ ಇಲ್ಲಿಯವರೆಗೆ ತಾವು ಪ್ರತಿನಿಧಿಸುತ್ತಿದ್ದ ಕೆ.ಆರ್. ನಗರ ವಿಧಾನಸಭಾ ಕ್ಷೇತ್ರದಿಂದ ತಮ್ಮ ಪುತ್ರ ಹಾಗೂ ಜಿಲ್ಲಾ ಪಂಚಾಯ್ತಿ ಸದಸ್ಯ ಅಮಿತ್ ದೇವರಟ್ಟಿ ಅವರನ್ನು ಕಣಕ್ಕಿಳಿಸುವ ಸಿದ್ದತೆ ನಡೆಸಿದ್ದಾರೆ. 
ತುಮಕೂರಿನ ಸಿರಾ ವಿಧಾನಸಭಾ ಕ್ಷೇತ್ರ ಪ್ರತಿನಿಧಿಸುತಿರುವ ಸಚಿವ ಟಿ.ಬಿ. ಜಯಚಂದ್ರ ತಮ್ಮ ಪುತ್ರ ಸಂತೋಷ್ ಪರವಾಗಿ ಪ್ರಬಲ ಬ್ಯಾಟಿಂಗ್ ಆರಂಭಿಸಿದ್ದಾರೆ. ಸಂತೋಷ್ ಯುವ ಕಾಂಗ್ರೆಸ್‍ನಲ್ಲಿ ಸಕ್ರಿಯರಾಗಿದ್ದಾರೆ.
ಸಂತೋಷ್ ಅವರಿಗೆ ತಾವು ಪ್ರತಿನಿಧಿಸುತ್ತಿರುವ ಸಿರಾ ಕ್ಷೇತ್ರ ಬಿಟ್ಟುಕೊಟ್ಟು ತಾವು ನೆರೆಯ ಚಿಕ್ಕನಾಯಕನ ಹಳ್ಳಿಯಿಂದ ಸ್ಪರ್ಧಿಸುವ ಚಿಂತನೆ ಹೊಂದಿರುವ ಜಯಚಂದ್ರ ಅದು ಸಾಧ್ಯವಾಗದೆ ಹೋದರೆ ಚಿಕ್ಕನಾಯಕನ ಹಳ್ಳಿಯಿಂದ ಸಂತೋಷ್ ಅವರನ್ನೇ ಕಣಕ್ಕಿಳಿಸುವ ಸಿದ್ದತೆಯಲ್ಲಿದ್ದಾರೆ. ಇದೇ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಮತ್ತೊಬ್ಬ ಪ್ರಭಾವಿ ಶಾಸಕ ಕೆ.ಎನ್.ರಾಜಣ್ಣ ತಮ್ಮ ಪುತ್ರ ರಾಜೇಂದ್ರ ಅವರಿಗೆ ಚಿಕ್ಕನಾಯಕನ ಹಳ್ಳಿಯಿಂದ ಸ್ಪರ್ಧಿಸುವ ಅವಕಾಶ ಗಿಟ್ಟಿಸುವ ಪ್ರಯತ್ನದಲ್ಲಿದ್ದಾರೆ. ಇದು ಸಾಧ್ಯವಾಗದೇ ಹೋದರೆ ರಾಜೇಂದ್ರ ಅವರಿಗೆ ತಾವು ಪ್ರತಿನಿಧಿಸುತ್ತಿರುವ ಮಧುಗಿರಿ ಕ್ಷೇತ್ರ ಬಿಟ್ಟು ರಾಜಣ್ಣ ತುಮಕೂರು ಗ್ರಾಮಾಂತರದಿಂದ ಸ್ಪರ್ಧಿಸುವ ಕುರಿತು ಸಿದ್ಧತೆ ಆರಂಭಿಸಿದ್ದಾರೆ.
ಪಶುಸಂಗೋಪನಾ ಸಚಿವ ಎ.ಮಂಜು ಹಾಸನದಲ್ಲಿ ಜೆಡಿಎಸ್ ಪ್ರಭಾವ ತಗ್ಗಿಸುವ ದೃಷ್ಟಿಯಿಂದ ವಿಶೇಷ ಕಾರ್ಯತಂತ್ರ ನಡೆಸಿದ್ದು ತಮ್ಮ ಪುತ್ರಿ ಮಂಥರಗೌಡ ಅವರನ್ನು ಚುನಾವಣಾ ರಾಜಕಾರಣಕ್ಕೆ ಪರಿಚಯಿಸುವ ಸಿದ್ಧತೆಯಲ್ಲಿದ್ದಾರೆ. ತಮ್ಮ ಪುತ್ರಿ ಮಂಥರಗೌಡ ಅವರಿಗೆ ಬೇಲೂರ ಇಲ್ಲವೆ ಅರಸಿಕೆರೆಯಿಂದ ಸ್ಪರ್ಧಿಸುವಂತೆ ಸಿದ್ಧತೆ ನಡೆಸಿದ್ದಾರೆ. ಇಲ್ಲವಾದರೆ ಮಂಥರಗೌರನನ್ನು ತಾವು ಪ್ರತಿನಿಧಿಸುತ್ತಿರುವ ಅರಕಲಗೂಡು ಕ್ಷೇತ್ರದಿಂದ ಕಣಕ್ಕಿಳಿಸಿ ತಾವು ಬೇಲೂರು ಇಲ್ಲವೇ ಅರಸಿಕೆರೆಯಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮುಂಬರುವ ವಿಧಾನಸಭಾ ಚುನಾವಣೆಯು ಹಾಸನ ಜಿಲ್ಲೆಯ ವಾರಸುದಾರಿಕೆ ಅಖಾಡವಾಗಿ ಗಮನ ಸೆಳೆಯುವ ಸಾಧ್ಯತೆಯಿದೆ. 
ಬೆಂಗಳೂರಿನಲ್ಲೂ ಕೂಡಾ ಇಂತಹ ಪ್ರಯತ್ನ ನಡೆದಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಮ್ಮ ಪುತ್ರಿ ಸೌಮ್ಯ ಅವರನ್ನು ತಾವು ಪ್ರತಿನಿಧಿಸುತ್ತಿರುವ ಬಿಬಿಎಂ ಲೇ ಔಟ್ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಿ ತಾವು ಬೊಮ್ಮನಹಳ್ಳಿ ಅಥವಾ ಜಯನಗರ ಕ್ಷೇತ್ರದಿಂದ ಸ್ಪರ್ಧಿಸುವ ಸಿದ್ಧತೆ ನಡೆಸಿದ್ದಾರೆ. ಈ ಎರಡು ಕ್ಷೇತ್ರಗಳು ಕ್ಷೇತ್ರ ಪುನರ್ ವಿಂಗಡೆಗೂ ಮುನ್ನ ಈ ಹಿಂದೆ ರಾಮಲಿಂಗಾರೆಡ್ಡಿ ಪ್ರತಿನಿಧಿಸುತ್ತಿದ್ದ ಜಯನಗರ ಕ್ಷೇತ್ರದ ಭಾಗವಾಗಿದ್ದವು ಎಂಬುದು ಗಮನಾರ್ಹ ಈ ಲೆಕ್ಕಾಚಾರದಲ್ಲಿ ರಾಮಲಿಂಗಾರೆಡ್ಡಿ ತಮ್ಮ ಪುತ್ರಿಯನ್ನು ರಾಜಕೀಯಕ್ಕೆ ತರುವ ಸಿದ್ಧತೆ ನಡೆಸಿದ್ದಾರೆ.
ಈಗಾಗಲೇ ಕೋಲಾರದ ಕೆ.ಜಿ.ಎಫ್ ಕ್ಷೇತ್ರದಿಂದ ತಮ್ಮ ಪುತ್ರಿ ರೂಪಾ ಶಶಿಧರ್ ಅವರನ್ನು ಕಣಕ್ಕಿಳಿಸುವ ಪ್ರಯತ್ನ ನಡೆಸಿರುವ ಹಿರಿಯ ನಾಯಕ ಕೆ.ಎಚ್ ಮುನಿಯಪ್ಪ ಈ ಬಾರಿಯೂ ತಮ್ಮ ಪ್ರಯತ್ನ ಮುಂದುವರೆಸಿದ್ದಾರೆ. ಹಿರಿಯ ನಾಯಕಿ ಶ್ರೀಮತಿ ಮೋಟಮ್ಮ ಇಲ್ಲಿಯವರೆಗೆ ತಾವು ಪ್ರತಿನಿಧಿಸುತ್ತಿದ್ದ ಚಿಕ್ಕಮಗಳೂರಿನ ಮೂಡಿಗೆರೆ ಕ್ಷೇತ್ರದಿಂದ ತಮ್ಮ ಪುತ್ರಿ ನಯನಾ ಅವರಿಗೆ ಟಿಕೆಟ್ ಕೊಡಿಸುವ ಪ್ರಯತ್ನದಲ್ಲಿದ್ದಾರೆ. ರಾಜ್ಯಸಭಾ ಸದಸ್ಯ ರೆಹಮಾನ್ ಖಾನ್ ತಮ್ಮ ಪುತ್ರ ಮನ್ಸೂರ್ ಅಲಿ ಅವರನ್ನು ಬೆಂಗಳೂರಿನ ಜಯನಗರ ಕ್ಷೇತ್ರದಿಂದ ಕಣಕ್ಕಿಳಿಸಲು ಸಿದ್ಧತೆ ಆರಂಭಿಸಿದ್ದಾರೆ. ಸಚಿವ ರಮೇಶ್ ಜಾರಕಿಹೊಳಿ ತಮ್ಮ ಸೋದರ ಲಖನ್ ಜಾರಕಿಹೊಳಿ  ಅವರನ್ನು ಯಮಕನಮರಡಿ ಇಲ್ಲವೇ ಬೆಳಗಾವಿ ಗ್ರಾಮೀಣದಿಂದ ಕಣಕ್ಕಿಳಿಸಲು ಸಿದ್ಧತೆ ನಡೆಸಿದ್ದಾರೆ. ಮಾಜಿ ಸಂಸದ ಐ.ಜಿ.ಸನದಿ ತಮ್ಮ ಪುತ್ರ ರಾಕೇಶ್ ಸನದಿ ಅವರನ್ನು ಹಾವೇರಿ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸುವ ತಯಾರಿಯಲ್ಲಿದ್ದಾರೆ. ಆಡಳಿತರೂಢಾ ಕಾಂಗ್ರೆಸ್‍ನಲ್ಲಿಯ ಇಂತಹ ಪ್ರಯತ್ನಗಳು ಎಲ್ಲರ ಗಮನ ಸೆಳೆಯುತ್ತಿದ್ದು ಜೆಡಿಎಸ್ ಮತ್ತು ಬಿಜೆಪಿಯಲ್ಲೂ ಕೂಡಾ ಕೆಲವರು ಈ ಪ್ರಯತ್ನದಲ್ಲಿದ್ದಾರೆ. ಒಂದು ಕಾಲದಲ್ಲಿ ನೆಹರೂ ಅವರ ವಂಶಪಾರಂಪರ್ಯ ರಾಜಕಾರಣ ವಿರೋಧಿಸಿದ ಜನತಾಪಕ್ಷ ರಾಷ್ಟ್ರರಾಜಕಾರಣದಲ್ಲಿ ಪ್ರಭಾವಿಯಾವಿ ಹೊರಹೊಮ್ಮಿತ್ತು. ಅಂದು ಈ ಹೋರಾಟದಲ್ಲಿರುವವರೇ ಇಂದು ತಮ್ಮ ನಿಲುವು ಬದಲಾಯಿಸಿ ನೆಹರೂ ಯಾವ ವಾರಸುದಾರಿಕೆ ರಾಜಕಾರಣ ಮಾಡಿದರೋ ಅದನ್ನೇ ಮುಂದುವರೆಸಲು ಯತ್ನಿಸುತ್ತಿರುವುದು ಪರಿಸ್ಥಿತಿಯ ವ್ಯಂಗ್ಯ.

Links :
ಸಂಬಂಧಿತ ಟ್ಯಾಗ್ಗಳು

ಸಂಬಂಧಿತ ಟ್ಯಾಗ್ಗಳನ್ನು ಲಭ್ಯವಿಲ್ಲಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ವಂಶಪಾರಂಪರೆಯ ರಾಜಕೀಯ ಈಗಿರುವ ರಾಜಕಾರಣಿಗಳಿಗೆ ಬಿಟ್ಟರೆ ಬೇರೆ ಯಾರಿಗೂ ಬೇಡ. ಈ ಪದ್ದತಿಯನ್ನು ಇವರೇ ಹುಟ್ಟು ಹಾಕಿದ್ದಾರೆ. ಆದ್ದರಿಂದ ಬೇರೆಯವರು ರಾಜಕೀಯಕ್ಕೆ ‌ಬರುವುದಕ್ಕೆ‌ ಆಸಕ್ತಿ ತೋರಿ ಸುತ್ತಿಲ್ಲ. ಸಮಾಜ ಸೇವೆಗೂ ಬರುತ್ತಿಲ್ಲ. ಪಾಪ ಕೆಲ ಕಾರ್ಯ ಕರ್ತರು ತಮ್ಮ ಜೀವನ ನಡೆಸಲು ರಾಜಕಾರಣಿಗಳ ಹಿಂದೆ‌‌ ಮುಂದೆ ಸುತ್ತುತಾರೆ. ಯಾವಾಗಲೂ ರಾಜಕೀಯು ಹೇಗಿರಬೇಕೆಂದರೆ ನಿಂತ‌ ನೀರಾಗಿರಬಾರದು. ಕೊಳೆತು ನಾರುತ್ತೆ. ಹರಿವ ನೀರಾಗಿರ ಬೇಕು. ಹೊಸ ನೀರು ಸೇರಬೇಕು. ಹಾಗೆ ರಾಜಕೀಯ ವ್ಯಕ್ತಿ ಗಳು ಪ್ರತಿ ಎಲಕ್ಷನಲ್ಲೂ ಹೊಸಬರು ಸೇರ್ಪಡೆ ಆಗಬೇಕು. ಈ ನಿಟ್ಟಿನಲ್ಲಿ ಎಲ್ಲರು ಯೋಚನೆ ಮಾಡಿದರೆ ದೇಶಕ್ಕೆ ಒಳ್ಳೆಯದ ಆಗುವುದರಲ್ಲಿ ಸಂಶಯವೇ ಇಲ್ಲ.
  • ಪಾರ್ವತಿ ಶ್ರೀರಾಮ
  • ಸಮಾಜ ಸೇವೆ