ಬಸ್-ಲಾರಿ ನಡುವೆ ಅಪಘಾತ ಇಬ್ಬರ ಸಾವು !

Kannada News

31-08-2017

ಬೆಂಗಳೂರು: ನಗರದ ಹೊರವಲಯದ ನೆಲಮಂಗಲದ ಬಳಿಯ ನೈಸ್ ರಸ್ತೆಯಲ್ಲಿ ತಡರಾತ್ರಿ ಮುಂದಿನ ಲಾರಿಗೆ ಪಕ್ಕದಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದು, ಮಹಿಳೆ ಸೇರಿ ಇಬ್ಬರು ಸ್ಥಳದಲ್ಲೇ ಮೃತಪಟ್ಟು ನಾಲ್ವರು ಗಾಯಗೊಂಡಿದ್ದಾರೆ.

ಮೃತರನ್ನು ಹೈದರಾಬಾದ್ ಮೂಲದ ಬಸ್ ಕ್ಲೀನರ್ ಶೇಖರ್ (24) ಅನಿತಾ (26) ಎಂದು ಗುರ್ತಿಸಲಾಗಿದೆ. ಗಾಯಗೊಂಡಿರುವವರನ್ನು ನೆಲಮಂಗಲದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಮಿಳುನಾಡಿನಿಂದ ಮಹಾರಾಷ್ಟ್ರಕ್ಕೆ ವೇಗವಾಗಿ ಹೋಗುತ್ತಿದ್ದ ಖಾಸಗಿ ಬಸ್ ಮಾರ್ಗ ಮಧ್ಯೆ ರಾತ್ರಿ 12ರ ವೇಳೆ ಮಾದನಾಯ್ಕನಹಳ್ಳಿಯ ನೈಸ್ ರಸ್ತೆಯ, ಗಂಗೊಂಡನಹಳ್ಳಿ ಕೆರೆಯ ಬಳಿ ಮುಂದೆ ಹೋಗುತ್ತಿದ್ದ ಲಾರಿ ಟೈರ್ ಸ್ಫೋಟಗೊಂಡು ಅಡ್ಡಾದಿಡ್ಡಿಯಾಗಿ ಚಲಿಸಿದೆ. ಅದನ್ನು ತಪ್ಪಿಸಲು ಹೋದ ಚಾಲಕ ಪಕ್ಕದಿಂದ ಡಿಕ್ಕಿ ಹೊಡೆದು ಮುಂದಿನ ಬಾಗಿಲ ಬಳಿಯಿದ್ದ ಕ್ಲೀನರ್ ಶೇಖರ್ ಹಾಗೂ ಅದರ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಅನಿತಾ ಅವರು ಸ್ಥಳದಲ್ಲೇ ಮೃತಪಟ್ಟು ಇತರ ನಾಲ್ವರು ಗಾಯಗೊಂಡಿದ್ದಾರೆ.

ಅನಿತಾ ಅವರು ತಮಿಳುನಾಡಿನಿಂದ ಮಹಾರಾಷ್ಟ್ರದ ಇಟಾ ಪಟ್ಟಣಕ್ಕೆ ಹೋಗುತ್ತಿದ್ದರು ಎಂದು ತಿಳಿದು ಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ನೆಲಮಂಗಲ ಸಂಚಾರ ಪೊಲೀಸು ಲಾರಿ ಚಾಲಕನನ್ನು ವಶಕ್ಕೆ ತೆಗೆದುಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಗ್ರಾಮಾಂತರ ಎಸ್‍.ಪಿ ಅಮಿತ್‍ಸಿಂಗ್ ತಿಳಿಸಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ