ಪ್ರೇಮಿಗಳ ದುರಂತ ಅಂತ್ಯ !

Kannada News

31-08-2017

ಬೆಂಗಳೂರು: ಇದು ಯುವ ಪ್ರೇಮಿಗಳು ದುರಂತ ಅಂತ್ಯ ಕಂಡ ದಾರುಣ ಘಟನೆ. ನಗರದ ಮಾಗಡಿ ರಸ್ತೆಯ ಕೆಪಿ ಅಗ್ರಹಾರದಲ್ಲಿ ಪ್ರೀತಿಸುತ್ತಿದ್ದ ಯುವತಿ ನೇಣಿಗೆ ಶರಣಾಗಿರುವುದನ್ನು ಕಂಡ ಪ್ರಿಯಕರ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡು ಇಹಲೋಕ ತ್ಯಜಿಸಿದ್ದಾನೆ.

ಕೆಪಿ ಅಗ್ರಹಾರದ ಕಾರ್ಪೊರೇಷನ್ ವಸತಿ ಗೃಹದಲ್ಲಿ ವಾಸಿಸುತ್ತಿದ್ದ ಧಾಮಿನಿ (19) ಬುಧವಾರ  ಸಂಜೆ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಹೊರಗೆ ತಂದು ಮಲಗಿಸಿದ್ದ  ಈಕೆಯ ಮೃತದೇಹವನ್ನು ನೋಡಿದ ಪ್ರಿಯಕರ ಮಲ್ಲೇಶ್ (25) ಬಿನ್ನಿಮಿಲ್‍ನ ಬಾಳೆಕಾಯಿ ಮಂಡಿ ಬಳಿ ತೆರಳಿ ಅಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಬಿಕಾಂ ಓದುತ್ತಿದ್ದ ಧಾಮಿನಿ ಕಾರ್ಪೊರೇಷನ್ ವಸತಿಗೃಹದ ಬಳಿಯೇ ವಾಸಿಸುತ್ತಿದ್ದ ಹಾರ್ಡ್‍ವೇರ್ ಅಂಗಡಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಮಲ್ಲೇಶ್‍ ನನ್ನು ಪ್ರೀತಿಸುತ್ತಿದ್ದಳು ಎಂದು ತಿಳಿದುಬಂದಿದ್ದು, ಮಧ್ಯಾಹ್ನ ತಂದೆ-ತಾಯಿ ಎಲ್ಲರೂ ಕೆಲಸಕ್ಕೆ ಹೋಗಿ ಒಂಟಿಯಾಗಿದ್ದಾಗ ಫ್ಯಾನ್‍ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

ಸಂಜೆ ಧಾಮಿನಿ ತಂದೆ ಬಿಬಿಎಂಪಿಯಲ್ಲಿ ಲಾರಿ ಚಾಲಕನಾಗಿದ್ದ ಚಿಕ್ಕಸ್ವಾಮಿ ಅವರು ಬಂದು ನೋಡಿದಾಗ ಮಗಳು ಆತ್ಮಹತ್ಯೆಗೆ ಶರಣಾಗಿದ್ದಳು. ಮೃತದೇಹವನ್ನು ಇಳಿಸಿ ಹೊರತಂದು ಮಲಗಿಸಿದ್ದನ್ನು ಕಂಡ ಮಲ್ಲೇಶ್ ನೊಂದು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೆಪಿ ಅಗ್ರಹಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

ಬೆಂಗಳೂರು ಪ್ರೇಮಿಗಳ ದುರಂತ ಅಂತ್ಯ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ