ಪತ್ನಿಗೆ ಮಚ್ಚಿನಿಂದ ಹಲ್ಲೆ: ತಾನೂ ಆತ್ಮಹತ್ಯೆ !  

Kannada News

31-08-2017

ಬೆಂಗಳೂರು: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ದೂರವಿದ್ದ ಪತ್ನಿಗೆ ಬುಧವಾರ ಮಧ್ಯಾಹ್ನ ಮಚ್ಚಿನಿಂದ ಹೊಡೆದು ಮಾರಾಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ ಪತಿ ನಾಗರಾಜ್ ನೊಂದು, ಪೊಲೀಸರಿಗೆ ಹೆದರಿ ರಾತ್ರಿ ನೇಣಿಗೆ ಶರಣಾಗಿರುವ ಘಟನೆ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಶ್ರೀನಿವಾಸಪುರದ ತಾಯಿಯ ಮನೆಯಲ್ಲಿ ವಾಸಿಸುತ್ತಿದ್ದ ಪತ್ನಿ ದೇವಿ (28)ಗೆ ಮಚ್ಚಿನಿಂದ ಕತ್ತಿಗೆ ಹೊಡೆದು ಪರಾರಿಯಾಗಿದ್ದ ಟ್ರಾಕ್ಟರ್ ಚಾಲಕ ನಾಗರಾಜ್ (32) ಯಲಹಂಕದ ಶ್ರೀನಿವಾಸಪುರದ ಕೋಗಿಲು ಲೇಔಟ್‍ ನ ಮನೆಯ ಸಮೀಪದ ಖಾಲಿ ಜಾಗದಲ್ಲಿದ್ದ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಶರಣಾಗಿದ್ದಾನೆ. ಪತಿಯಿಂದ  ಮಚ್ಚಿನೇಟು ತಿಂದು ಅಪೂರ್ವ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪತ್ನಿ  ಸ್ಥಿತಿ ಚಿಂತಾಜನಕವಾಗಿದೆ. ಕೋಗಿಲು ಲೇಔಟ್‍ ನ ನಾಗರಾಜ್ 10 ವರ್ಷಗಳ ಹಿಂದೆ ದೇವಿಯನ್ನು ವಿವಾಹವಾಗಿದ್ದರು. ಇತ್ತೀಚೆಗೆ ದೇವಿ ಬೇರೊಬ್ಬನೊಂದಿಗೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದಾಳೆ ಎಂದು ನಾಗರಾಜ್ ಶಂಕಿಸಿದ್ದು, ಇದರಿಂದಾಗಿ ಇಬ್ಬರ ನಡುವೆ ವೈಮನಸ್ಸು ಉಂಟಾಗಿದ್ದು, ಜಗಳ ನಡೆಯುತ್ತಿತ್ತು.

ಜಗಳದಿಂದ ಬೇಸತ್ತ ದೇವಿ, ನಾಗರಾಜ್ ನನ್ನು ತೊರೆದು ತಾಯಿ ಕಸ್ತೂರಿಯ ಶ್ರೀನಿವಾಸಪುರದ ಮನೆಯಲ್ಲಿ ವಾಸಿಸುತ್ತಿದ್ದಳು. ನಿನ್ನೆ ಮಧ್ಯಾಹ್ನ 2ರ ವೇಳೆ ದೇವಿ ಹತ್ತಿರದ ಅಂಗಡಿಯಲ್ಲಿ ಮೊಬೈಲ್ ಗೆ ಕರೆನ್ಸಿ ಹಾಕಿಸಿಕೊಂಡು ಬರಲು ನಡೆದು ಹೋಗುತ್ತಿದ್ದಾಗ ಬೈಕ್‍ ನಲ್ಲಿ ಬಂದ ನಾಗರಾಜ ಮಚ್ಚಿನಿಂದ ಕುತ್ತಿಗೆಗೆ ಬಲವಾಗಿ ಹೊಡೆದು ಪರಾರಿಯಾಗಿದ್ದ. ರಕ್ತದ ಮಡುವಿನಲ್ಲಿ ಬಿದ್ದಿದ್ದ ದೇವಿಯನ್ನು ಕೂಡಲೇ ಅಪೂರ್ವ ಆಸ್ಪತ್ರೆಗೆ ದಾಖಲಿಸಿ ಪ್ರಕರಣ ದಾಖಲಿಸಿದ್ದ ಯಲಹಂಕ ಪೊಲೀಸ್ ಇನ್ಸ್‍ ಪೆಕ್ಟರ್ ಮಂಜೇಶ್ ಗೌಡ, ನಾಗರಾಜ್‍ ಗಾಗಿ ಕಾರ್ಯಾಚರಣೆ ನಡೆಸಿದ್ದರು.

ಪರಾರಿಯಾಗಿದ್ದ ನಾಗರಾಜ್ ನಿನ್ನೆ ಮಧ್ಯರಾತ್ರಿ ಕೋಗಿಲು ಲೇಔಟ್‍ ನ ಮನೆಯ ಸಮೀಪದ ಖಾಲಿ ಜಾಗದಲ್ಲಿದ್ದ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಆತನ ಮೃತದೇಹ ಬೆಳಿಗ್ಗೆ ಪತ್ತೆಯಾಗಿದೆ. ನಾಗರಾಜ್ 5 ವರ್ಷಗಳ ಹಿಂದೆ ಸರ ಅಪಹರಣ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದು, ಅದರಿಂದ ಖುಲಾಸೆಯಾದ ನಂತರ ಟ್ರಾಕ್ಟರ್ ಚಾಲಕನಾಗಿ ಉತ್ತಮ ಜೀವನ ನಡೆಸುತ್ತಿದ್ದ ಎಂದು ಡಿಸಿಪಿ ಎಸ್ ಗಿರೀಶ್ ತಿಳಿಸಿದ್ದಾರೆ.



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ