ಡೈರಿ ರಾಜಕಾರಣಿಗಳ ವೈರಿ

Kannada News

18-03-2017

ವಿಧಾನ ಪರಿಷತ್ತಿನ ಕಾಂಗ್ರೆಸ್ ಸದಸ್ಯ ಹಾಗು ಮುಖ್ಯ ಮಂತ್ರಿಗಳ ಸಂಸದೀಯ ಗೋವಿಂದರಾಜು, ಬಿಜೆಪಿ ರಾಜ್ಯ ಖಜಾಂಚಿ, ವಿಧಾನ ಪರಿಷತ್ ಸದಸ್ಯ ಹಾಗು ಮಾಜಿ ಸಿಎಂ ಯಡಿಯೂರಪ್ಪ ಆಪ್ತ ಲೆಹರ್ ಸಿಂಗ್ ಸಿಸೋಡಿಯಾ ಅವರ ಡೈರಿ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಕೋಲಾಹಲವನ್ನಷ್ಟೇ ಅಲ್ಲಾ ದೇಶದ ರಾಜಕಾರಣದಲ್ಲೇ ಹೊಸ ಸಂಚಲನ ಸೃಷ್ಠಿಸಿದೆ. ಇದರ ನಡುವೆ ತೂರಿ ಬಂದ ಅನಂತ್ ಕುಮಾರ್, ಯಡಿಯೂರಪ್ಪ ನಡುವಿನ ಸಂಭಾಷಣೆ ಸೀಡಿ ದೃಷ್ಯಾವಳಿ ಕೂಡ ಈ ಕೋಲಾಹಲಕ್ಕೆ ಮತ್ತಷ್ಟು ತುಪ್ಪ ಸುರಿದಿದೆ.

ರಾಜ್ಯದ ರಾಜಕೀಯ ನಾಯಕರು ಹೋದಲ್ಲಿ ಬಂದಲ್ಲಿ ಡೈರಿ ಹಾಗೂ ಸೀಡಿಗಳ ಬಗ್ಗೆ ಪ್ರಸ್ತಾಪಿಸುತ್ತಾರೆ. ಇಬ್ಬರು ಇನ್ನೊಬ್ಬರ ವಿರುದ್ದ ಆರೋಪ ಮಾಡುತ್ತಿದ್ದಾರೆ. ಭ್ರಷ್ಟಾಚಾರದ ಆರೋಪದ ಹಣೆ ಪಟ್ಟಿ ಕಟ್ಟುತ್ತಿದ್ದಾರೆ. ಅಷ್ಟೇ ಅಲ್ಲ, ಬೀದಿ-ಬೀದಿಗಳಲ್ಲಿ ಈ ಸಂಬಂಧ ಪ್ರತಿಭಟನೆಯನ್ನೂ ಕೂಡ ಮಾಡುತ್ತಿದ್ದಾರೆ. ಸಾಮಾನ್ಯ ಜನರ ಬಾಯಲ್ಲಿ ಚರ್ಚೆಯ ವಸ್ತುವಾಗಿ ಪರಿಣಮಿಸಿದೆ.

ಜನಸಾಮಾನ್ಯರು ಕುಂತಲ್ಲಿ ನಿಂತಲ್ಲಿ ಡೈರಿ ಹಾಗು ಡೈರಿಯಲ್ಲಿ ಉಲ್ಲೇಖಿಸಿರುವ ವಿಷಯದ ಕುರಿತಾಗಿಯೇ ಚರ್ಚೆ ಮಾಡುತ್ತಿದ್ದಾರೆ. ಎಲ್ಲಾ ಪಕ್ಷಗಳು ಅಷ್ಟೇ, ಎಲ್ಲಾ ರಾಜಕಾರಣಿಗಳು ಅಷ್ಟೇ ಅಧಿಕಾರಕ್ಕೆ ಬರುವ ವರೆಗೆ ಮಾತ್ರ ನ್ಯಾಯ ನೀತಿಯ ಮಾತನಾಡುತ್ತಾರೆ, ಅಧಿಕಾರಕ್ಕೆ ಬಂದ ನಂತರ ಎಲ್ಲರೂ ಮಾಡುವುದು ಇದೇ ಅಲ್ಲವೇ, ನಮಗೆ ಬುದ್ದಿ ಇಲ್ಲ ಇಂತವರನ್ನೂ ಆಯ್ಕೆ ಮಾಡಿದ್ದೇವೆ ಎಂಬ ಸಿಡುಕುತನವನ್ನು ಪ್ರದರ್ಶಿಸುತ್ತಿದ್ದಾರೆ. ಯಾರೂ ಕೂಡ ಡೈರಿಗಳ ಅಸಲಿಯತ್ತ, ಅದರ ಹಿಂದಿನ ಹಕೀಕತ್ತು, ಸೀಡಿಗಳ ಹಿಂದಿನ ಹುನ್ನಾರ, ಅದರಿಂದ ಪಡೆಯುವಂತ ರಾಜಕೀಯ ಲಾಭದ ಲೆಕ್ಕಾಚಾರದ ಬಗ್ಗೆ ಮಾತನಾಡುವುದಿಲ್ಲ.

ಹಾಗೆ ನೋಡಿದರೆ ಲೈಂಗಿಕ ಹಗರಣಗಳ ಸೀಡಿ ಬಹಿರಂಗದಿಂದ ಕೆಲವರು ಅಧಿಕಾರ ಕಳೆದುಕೊಂಡು ಜೈಲು ಪಾಲಾದರೆ, ಬ್ರಷ್ಟಾಚಾರ ಸ್ವಜನ ಪಕ್ಷಪಾತದ ಸೀಡಿಗಳು, ಡೈರಿಗಳಿಂದ ಅಧಿಕಾರ ಕಳೆದುಕೊಂಡವರು, ಈ ಬಗ್ಗೆ ಶಿಕ್ಷೆ ಅನುಭವಿಸಿದವರ ಸಂಖ್ಯೆ ತೀರಾ ವಿರಳ.

ರಾಜ್ಯದ ರಾಜಕಾರಣದಲ್ಲಿ ಸೀಡಿ ಸಂಚಲನ ಸೃಷ್ಠಿಸಿದ್ದು ಎಸ್.ಎಂ.ಕೃಷ್ಣಾ ಸರ್ಕಾರದ ಅವಧಿಯಲ್ಲಿ ಅಂದು ಕೆಪಿಸಿಸಿ ಅದ್ಯಕ್ಷರಾಗಿದ್ದ ವಿ.ಎಸ್. ಕೌಜಲಗಿ ಯಾವುದೋ ಕೆಲಸ ಮಾಡಿಕೊಡಲು 10 ಸಾವಿರ ರೂಪಾಯಿ ಲಂಚ ಪಡೆಯುತ್ತಿರುವ ವಿಡಿಯೋ ಬಹಿರಂಗವಾಗಿತ್ತು. ಇದರ ಬೆನ್ನಲ್ಲೇ ಕೌಜಲಗಿ ಅವರ ಕಾಮ ಪುರಾಣದ ವಿಡಿಯೋ ಬಹಿರಂಗವಾಗಲಿದೆ ಎಂದು ಹೇಳಲಾಗಿತ್ತು. ಇದರಿಂದ ಬೆಚ್ಚಿದ ವಿ.ಎಸ್. ಕೌಜಲಗಿ ತಕ್ಷಣವೇ ಕೆಪಿಸಿಸಿ ಅದ್ಯಕ್ಷ ಸ್ಥಾನ ತೊರೆದಿದ್ದರು. ಅಂದಿನ ಸರ್ಕಾರ ಈ ಬಗ್ಗೆ ತನಿಖೆಗೆ ಆದೇಶಿಸಿತ್ತು ಈ ತನಿಖಾ ವರದಿ ಬರುವಷ್ಟರಲ್ಲಿ ವಿ.ಎಸ್. ಕೌಜಲಗಿ ಅವರು ದಿವಂಗತರಾದರು.

ಇದಕ್ಕಿಂತ ಸ್ವಲ್ಪ ಹಿಂದೆ ಹೋಗಿ ನೋಡುವುದಾದರೆ ತೆಹಲ್ಕಾ ಟೇಪ್ ಪ್ರಕರಣ ದೊಡ್ಡ ಕೋಲಾಹಲವನ್ನೇ ಸೃಷ್ಠಿಸಿತ್ತು. ರಕ್ಷಣಾ ಸಾಮಾಗ್ರಿ ಖರೀದಿ ಹೆಸರಲ್ಲಿ ನಡೆದ ಕಟುಕು ಕಾರ್ಯಾಚರಣೆಯಲ್ಲಿ ಅಂದು ಆಡಳಿತರೂಢ ಬಿಜೆಪಿ ಅದ್ಯಕ್ಷ ಬಂಗಾರು ಲಕ್ಷ್ಮಣ್ ಹಣದೊಂದಿಗೆ ವಿಡಿಯೋದಲ್ಲಿ ಸೆರೆಯಾದರೆ, ಅಂದಿನ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡೀಸ್ ವಿಲಾಸದಲ್ಲಿ ಸಮತಾ ಪಕ್ಷದ ರಾಷ್ಟ್ರೀಯ ಅದ್ಯಕ್ಷೆ ಜಯಾ ಜೇಟ್ಲಿ ವ್ಯವಹಾರ ಕುದುರಿಸುವ ದೃಶ್ಯಾವಳಿ ಸಂಚಲವನ್ನೇ ಸೃಷ್ಠಿಸಿತು. ಇದರಿಂದ ಬಂಗಾರು ಲಕ್ಷ್ಮಣ್ ಅಧಿಕಾರ ಕಳೆದುಕೊಂಡರೆ, ಜಯಾ ಜೇಟ್ಲಿ ಸಕ್ರಿಯ ರಾಜಕಾರಣದಿಂದಲೇ ದೂರವಾದರು. ಹಲವು ಅಧಿಕಾರಿಗಳಿಗೆ ಜೈಲು ಶಿಕ್ಷೆಯಾಗಿ ಬಿಡುಗಡೆಯಾದರು.

ಈ ಬೆಳವಣೆಗೆಯ ನಂತರ ರಾಷ್ಟ್ರ ಮತ್ತು ರಾಜ್ಯ ರಾಜಕಾರಣದಲ್ಲಿ ಹಲವು ಸಿ.ಡಿ ಪ್ರಕರಣಗಳು, ಡೈರಿ ಪುರಾಣಗಳು, ಡೈರಿ ಕರ್ಮಕಾಂಡಗಳು ಬೆಳಕಿಗೆ ಬಂದವು. ಆದರೆ ಈ ಯಾವುವೂ ಅಷ್ಟೊಂದು ತೀವೃ ಸ್ವರೂಪ ಪಡೆದುಕೊಳ್ಳಲಿಲ್ಲ. ಇದಕ್ಕೆ ಪ್ರಮುಖ ಕಾರಣ ಈ ಡೈರಿ ಮತ್ತು ಸೀಡಿಗಳ ಹಿಂದಿನ ರಾಜಕೀಯ ಕರಾಮತ್ತು. ತಮ್ಮ ಎದುರಾಳಿಗಳನ್ನು ಬಗ್ಗು ಬಡಿಯಲು ಇಂತಹ ತಂತ್ರಜ್ಞಾನದ ಮೊರೆ ಹೋದ ಪರಿಣಾಮ ಬಹಿರಂಗಗೊಳ್ಳುತ್ತಿರುವ ಸೀಡಿ ಹಾಗು ಡೈರಿಗಳ ಸಾಚಾತನದ ಬಗ್ಗೆ ಜನರಲ್ಲಿ ವಿಶ್ವಾಸ ಕಡಿಮೆಯಾಗುತ್ತಿದೆ. ಇವುಗಳು ಹೊರ ಬಂದ ಸಮಯದಲ್ಲಿ ಅವುಗಳ ಕುರಿತು ಕೆಲಕಾಲ ಚರ್ಚೆ ನಡೆಯುತ್ತದೆ. ಆನಂತರ ಅವುಗಳನ್ನು ಮರತೇ ಹೋಗುತ್ತಾರೆ. ಹೀಗಾಗಿ ಲೈಂಗಿಕ ಕರ್ಮಕಾಂಡದ ಸಿ.ಡಿಗಳನ್ನು ಬಿಟ್ಟರೆ ಉಳಿದವುಗಳು ಅಷ್ಟೊಂದು ತೀವ್ರವಾಗಿ ಪರಿಗಣಿಸುತ್ತಿಲ್ಲ.

ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿಧಾನ ಪರಿಷತ್ ಸದಸ್ಯರಾಗಿದ್ದ ಬಿಜೆಪಿ ಮುಖಂಡ ಜನಾರ್ಧನರೆಡ್ಡಿ ಮಾಡಿದ ಗಣಿಕಪ್ಪ ವಿಚಾರ ರಾಜ್ಯ ರಾಜಕಾರಣದಲ್ಲಷ್ಟೇ ಅಲ್ಲಾ ರಾಷ್ಟ್ರ ರಾಜಕಾರಣದಲ್ಲೂ ಕೋಲಾಹಲವನ್ನೇ ಸೃಷ್ಠಿಸಿತು. ಅಂದು ಸಿಎಂ ಆಗಿದ್ದ ಕುಮಾರಸ್ವಾಮಿ ಗಣಿ ಉದ್ಯಮಿಗಳಿಂದ ನೂರಾರು ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ, ಅಂದಿನ ಅರಣ್ಯ ಸಚಿವ ಚೆನ್ನಿಗಪ್ಪ ಸೇರಿದಂತೆ ಹಲವರು ಇದರಲ್ಲಿ ಪಾಲು ಪಡೆದಿದ್ದಾರೆ, ಈ ಬಗ್ಗೆ ತಮ್ಮಲ್ಲಿ ಹಲವಾರು ದಾಖಲೆಗಳಿವೆ, ಹಣ ಪಡೆಯುತ್ತಿರುವ ಮತ್ತು ಹಣಕ್ಕಾಗಿ ಬೇಡಿಕೆ ಮಂಡಿಸಿರುವ ಸೀಡಿಗಳಿವೆ, ಹಣ ನೀಡಿರುವ ಬಗ್ಗೆ ಗಣಿ ಉದ್ಯಮಿಗಳು ಮತ್ತು ಡೈರಿಯಲ್ಲಿ ನಮೂಧಿಸಿರುವ ದಾಖಲೆಗಳಿವೆ ಎಂದು ಜನಾರ್ಧನರೆಡ್ಡ್ಡಿ ಆರೋಪಿಸುವ ಮೂಲಕ ರಾಜ್ಯ ರಾಜಕಾರಣದಲ್ಲಿ ಕೋಲಾಹಲವೇ ಸೃಷ್ಠಿಯಾಯಿತು.

ಸದ್ಯ ವಿಧಾನ ಪರಿಷತ್ತಿನ ಸದಸ್ಯ ಗೋವಿಂದರಾಜು ಡೈರಿ ಪ್ರಕರಣದಂತೆ ಅಂದು ಜನಾರ್ಧನರೆಡ್ಡಿ ಸೀಡಿ ಪ್ರಕರಣ ವಿವಾದವನ್ನೇ ಹುಟ್ಟುಹಾಕಿತು. ಅಂದಿನ ಮುಖ್ಯ ಮಂತ್ರಿ ವಿರುದ್ದ ಆಡಳಿತ ಪಕ್ಷದ ಸದಸ್ಯರೇ ಮಾಡಿದ ಆರೋಪ ಕೋಲಾಹಲವನ್ನೇ ಸೃಷ್ಠಿಸಿತು. ಸಿಬಿಐ ತನಿಖೆಗೆ ಆಗ್ರಹಿಸಿ ಜನಾರ್ಧನರೆಡ್ಡಿ ಈ ಬಗ್ಗೆ ಬಳ್ಳಾರಿಯಲ್ಲಿ ದಾಖಲೆ ಬಿಡುಗಡೆಗೊಳಿಸುವುದಾಗಿ ಪ್ರಕಟಿಸಿದ್ದರು.

ಜನಾರ್ಧನರೆಡ್ಡಿ ತೋರಿಸಲಿರುವ ಸೀಡಿ ರಹಸ್ಯ ರಾಜ್ಯ ರಾಜಕಾರಣದಲ್ಲೇ ಕೋಲಹಲವನ್ನೇ ಸೃಷ್ಠಿಸಲಿವೆ ಎಂದು ಭಾವಿಸಿದ ಸ್ಥಳೀಯ ಮತ್ತು ರಾಷ್ಟ್ರೀಯ ಮಾದ್ಯಮಗಳ ಪ್ರತಿನಿಧಿಗಳ ದಂಡೆ ಬಳ್ಳಾರಿಗೆ ಲಗ್ಗೆಹಾಕಿತ್ತು. ಆದರೆ ಅಂದು ಅಲಿ ನಡೆದಿದ್ದೇ ಬೇರೆ. ಹಗರಣದ ಯಾವುದೇ ಸೀಡಿ ಬಹಿರಂಗ ಪಡಿಸದ ಜನಾರ್ಧನ ರೆಡ್ಡಿ ಇಬ್ಬರು ಗಣಿ ಉದ್ಯಮಿಗಳು ತಮ್ಮ ವಹಿವಾಟಿನ ಕುರಿತು ಚರ್ಚೆ ಹಾಗೂ ಸುಗಮ ವಹಿವಾಟಿಗೆ ತಾವು ನೀಡಬೇಕಾದ ಲಂಚದ ಕುರಿತು ಖಾಸಗಿಯಾಗಿ ಮಾತನಾಡುತ್ತಿದ್ದ ಸಿ.ಡಿ ನೀಡಿದರು. ಇದರಿಂದ ಬೇಸರಗೊಂಡ ಮಾದ್ಯಮ ಪ್ರತಿನಿದಿಗಳು ಕುಮಾರಸ್ವಾಮಿ ವಿರುದ್ದದ ಆರೋಪಗಳ ಬಗ್ಗೆ ಪ್ರಶ್ನಿಸಿದಾಗ ತಾವು ಮಾಡಿರುವ ಆರೋಪದ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಲಿ, ತನಿಖಾ ಸಂಸ್ಥೆಗೆ ಎಲ್ಲಾ ದಾಖಲೆ ನೀಡುವುದಾಗಿ ತಿಳಿಸಿದರು.

ಇದರಿಂದ ಮಾದ್ಯಮ ಪ್ರತಿನಿದಿಗಳು ಬಂದ ದಾರಿಗೆ ಸುಂಕವಿಲ್ಲದಂತೆ ಬಳ್ಳಾರಿಯಿಂದ ವಾಪಾಸಾಗುತ್ತಿದ್ದಂತೆ ಮಾದ್ಯಮ ಕಛೇರಿಗಳಿಗೆ ಅಂದಿನ ಅರಣ್ಯ ಮಂತ್ರಿ ಚೆನ್ನಿಗಪ್ಪ ಅವರನ್ನು ಹೋಲುವ ವ್ಯಕ್ತಿಯೊಬ್ಬರು ನೋಟುಗಳ ಕಂತೆಯನ್ನು ಟೀಪಾಯಿ ಮೇಲಿಟ್ಟು ಕುಳಿತು ಮಾತನಾಡುತ್ತಿರುವ ಕೆಲವೇ ಸೆಕೆಂಡುಗಳ ದೃಶ್ಯಾವಳಿಯನ್ನೊಳಗೊಂಡ ಸೀಡಿ ತಲುಪಿಸಲಾಗಿತ್ತು. ಇದು ಸಾಕಷ್ಟು ಕೋಲಾಹಲ ಸೃಷ್ಠಿಸಿತ್ತು.

ಈ ವೇಳೆ ಬೆಳಗಾವಿಯಲ್ಲಿ ವಿಧಾನ ಮಂಡಲದ ಅಧಿವೇಶನ ನಡೆಯುತ್ತಿದ್ದು, ಅಂದು ಪ್ರತಿಪಕ್ಷದ ನಾಯಕರಾಗಿದ್ದ ಧರ್ಮಸಿಂಗ್, ಕೆಪಿಸಿಸಿ ಅದ್ಯಕ್ಷರಾಗಿದ್ದ ಮಲ್ಲಿಕಾರ್ಜುನ ಖರ್ಗೆ ನೀಟಿನ ಕಂತೆಗಳನ್ನು ನೋಡಿಕೊಂಡು ಕುಳಿತಿರುವ ಫೋಟೊಗಳು ಹಲವು ಶಾಸಕರ ಕೊಠಡಿ ಮತ್ತು ಮಾದ್ಯಮ ಪ್ರತಿನಿದಿಗಳಿಗೆ ರವಾನೆಯಾಗಿದ್ದವು. ತಂತ್ರಜ್ಞಾನ ಬಳಸಿ ಈ ಫೋಟೊಗಳನ್ನು ಸಿದ್ದಪಡಿಸಲಾಗಿದೆ ಎಂದು ಮೇಲ್ನೋಟಕ್ಕೆ ಕಾಣುತ್ತಿತ್ತು.

ವಿಧಾನ ಸಭೆಯಲ್ಲಿ ಪ್ರತಿಪಕ್ಷಗಳು ಜನಾರ್ಧನರೆಡ್ಡಿ ಸೀಡಿ ಬಗ್ಗೆ ಪ್ರಸ್ತಾಪಿಸುತ್ತಿದ್ದಾಗ ಜೆಡಿಎಸ್‍ನ ಶಾಸಕ ವೆಂಕಟೇಶ್ ಈ ಫೋಟೊ ಪ್ರದರ್ಶಿಸಿ ಸದನದಲ್ಲಿ ಕೋಲಾಹಲ ಸೃಷ್ಠಿಸಿದರು. ಫೋಟೊ ಕಂಡ ಮಲ್ಲಿಕಾರ್ಜುನ ಖರ್ಗೆ ಸದನದಲ್ಲಿ ರುದ್ರತಾಂಡವ ಪ್ರದರ್ಶಿಸಿ ಸಮಗ್ರ ಚರ್ಚೆಗೆ ಆಗ್ರಹಿಸಿದರು. ಇದರಿಂದ ಬೆಚ್ಚಿದ ಜೆಡಿಎಸ್ ಶಾಸಕ ವೆಂಕಟೇಶ್ ಈ ಫೋಟೊಗಳಿಗೂ ತಮಗೂ ಸಂಬಂಧವಿಲ್ಲ, ತಮ್ಮ ಕೊಠಡಿಗೆ ಯಾರೋ ತಂದು ಎಸೆದಿದ್ದಾರೆ ಎಂದು ಹೇಳಿ ನುಣಚಿಕೊಳ್ಳುವ ಮೂಲಕ ವಿಷಯ ತನ್ನ ಗಾಂಭೀರ್ಯ ಕಳೆದುಕೊಂಡಿತು. ಮತ್ತೊಂದೆಡೆ 150 ಕೋಟಿ ಗಣಿಕಪ್ಪ ಹಗರಣದ ಆರೋಪ ಸವಕಲಾಗ ತೊಡಗಿತು. ಒತ್ತಡಕ್ಕೆ ಮಣಿದ ಜನಾರ್ಧನರೆಡ್ಡಿ ತಮ್ಮ ಆರೋಪದ ಬಗ್ಗೆ ಸಿಬಿಐ ತನಿಖೆಗೆ ಆಗ್ರಹಿಸಿ ಕೋರ್ಟ್ ಮೊರೆ ಹೊಕ್ಕರು. ಕೋರ್ಟ್ ಆದೇಶದಂತೆ ಈ ಬಗ್ಗೆ ಸಿಬಿಐ ತನಿಖೆ ನಡೆಯಿತಾದರೂ ಸೂಕ್ತ ಸಾಕ್ಷಾಧಾರ ಲಭ್ಯವಾಗದೇ ಪ್ರಕರಣ ಸ್ಥಗಿತಗೊಂಡಿತು.

ಹೀಗೆ ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಸೃಷ್ಠಿಸಿದ್ದ ಗಣಿ ಲಂಚ ಸೀಡಿ ಪ್ರಕರಣ ಇತಿಹಾಸ ಸೇರಿದರೆ, ಇದೀಗ ವಿಧಾನ ಪರಿಷತ್ ಸದಸ್ಯ ಎಂ. ಗೋವಿಂದರಾಜು ಅವರ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದಾಗ ಸಿಕ್ಕಿದ ಡೈರಿ, ಅದರಲ್ಲಿ ಕಾಂಗ್ರೆಸ್ ನಾಯಕರಿಗೆ ಸಹಾಯವಾಗಿದೆ ಎನ್ನಲಾದ ಹಣದ ವಿವಾದ ಕುರಿತಾದ ಉಲ್ಲೇಖ ರಾಜ್ಯ ರಾಜಕಾರಣದಲ್ಲಿ ಕೋಲಾಹಲವನ್ನೇ ಸೃಷ್ಠಿಸಿದೆ.

ಮೊದಲಿಗೆ ಬಿಜೆಪಿ ಅದ್ಯಕ್ಷ ಯಡ್ಯೂರಪ್ಪ ಡೈರಿಯ ಬಗ್ಗೆ ಉಲ್ಲೇಖಿಸಿ, ಸಿಎಂ ತಮ್ಮ ಕುರ್ಚಿ ಉಳಿಸಿಕೊಳ್ಳಲು ಹೈಕಮಾಂಡ್‍ಗೆ ಸಾವಿರಾರು ಕೋಟಿ ರೂಪಾಯಿ ಲಂಚ ನೀಡಿದ್ದಾರೆ, ಇದು ಡೈರಿಯಲ್ಲಿ ಉಲ್ಲೇಖವಾಗಿದೆ ಎಂದು ಆಪಾದಿಸಿದರು. ಆದರೆ ಸಿಎಂ ಇಂತಹ ಯಾವುದೇ ಡೈರಿ ಇಲ್ಲಾ ಎಂದು ಸ್ಪಷ್ಟ ಪಡಿಸಿದರು. ಆದರೆ ಈ ಸ್ಪಷ್ಟನೆ ತಳ್ಳಿ ಹಾಕಿ ಯಡ್ಯೂರಪ್ಪ ಆಧಾಯ ತೆರಿಗೆ ದಾಳಿ ಸಮಯದಲ್ಲಿ ಈ ಡೈರಿ ಸಿಕ್ಕಿದೆ ಎನ್ನುವ ಮೂಲಕ ಆರೋಪ ತೀವೃಗೊಳಿಸಿದರು.

ಈ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ಆರೋಪ-ಪ್ರತ್ಯಾರೋಪಗಳ ಸುರಿಮಳೆ ನಡೆಯುತ್ತಿರುವಾಗಲೇ ಬಿಜೆಪಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಯಡಿಯೂರಪ್ಪ ಮತ್ತು ಅನಂತಕುಮಾರ್ ಖಾಸಗಿಯಾಗಿ ಮಾತನಾಡುತ್ತ ತಾವು ಹೈಕಮಾಂಡ್‍ಗೆ ಹಣ ನೀಡಿಲ್ಲವೆ ಅದನ್ನು ಡೈರಿಯಲ್ಲಿ ಯಾರಾದರೂ ಬರೆದಿಡುತ್ತಾರಾ ಎಂದು ಉಲ್ಲೇಖಿಸಿದ್ದ ಸಂಗತಿ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿ ಸೀಡಿ ರೂಪದಲ್ಲಿ ಹೊರಬರುವ ಮೂಲಕ ಮತ್ತೊಂದು ವಿವಾದ ಸೃಷ್ಠಿಸಿತು.

ಇದು ಚರ್ಚೆಯಲ್ಲಿರುವಾಗಲೇ ಗೋವಿಂರಾಜು ಅವರ ಡೈರಿಯಲ್ಲಿದ್ದ ವಿವಾದಗಳು ಎಂಬ ಕೆಲವು ಪುಟಗಳು ಬಹಿರಂಗಗೊಳ್ಳುವ ಮೂಲಕ ಕೋಲಾಹಲವನ್ನೇ ಸೃಷ್ಠಿಸಿತು. ಕಳೆದ ಲೋಕಸಭಾ ಚುನಾವಣೆ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆ ಹಾಗು ಬಿಬಿಎಂಪಿ ಚುನಾವಣೆಯ ಬಗ್ಗೆ ಉಲ್ಲೇಖವಿರುವ ಈ ಡೈರಿಯ ಪುಟಗಳಲ್ಲಿ ಕಾಂಗ್ರೆಸ್ ನಾಯಕರು, ರಾಜ್ಯದ ಮಂತ್ರಿಗಳ ಹೆಸರಿನ ಜೊತೆ ಹೊಂದಾಣಿಕೆಯಾಗುವ ಇನಿಷಿಯಲ್‍ಗಳು ಹಾಗು ಅದರ ಮುಂದೆ ಕೋಟಿ ರೂಪಾಯಿ ಹೆಸರಲ್ಲಿ ಅಂಕೆ ಸಂಖ್ಯೆಗಳು ನಮೂದಾಗಿರುವ ಮಾಹಿತಿ ಬಹಿರಂಗಗೊಂಡಿದ್ದು ಕೋಲಾಹಲವನ್ನೇ ಸೃಷ್ಠಿಸಿದೆ. ಈ ಬಗ್ಗೆ ಕಾಂಗ್ರೆಸ್ ನಾಯಕರನ್ನ ಗುರಿಯಾಗಿಸಿಕೊಂಡ ಬಿಜೆಪಿ ನಾಯಕರು ದೂರದ ಉತ್ತರ ಪ್ರದೇಶದ ಚುನಾವಣೆ ಪ್ರಚಾರದಲ್ಲೂ ಪ್ರಸ್ತಾಪಿಸುವ ಮೂಲಕ ವಿಷಯಕ್ಕೆ ತೀವೃ ಸ್ವರೂಪ ನೀಡಿದ್ದಾರೆ.

ಡೈರಿ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಬೀದಿ ಕಾಳಗ ನಡೆಯುತ್ತಿದೆ. ಯಾರೋ ಡೈರಿಯಲ್ಲಿ ಕಾಗದದಲ್ಲಿ ಏನೋ ಗೀಚಿದ ಮಾತ್ರಕ್ಕೆ ಅದು ನಿಜವೇ..? ಅದನ್ನು ಸಾಕ್ಷಿ ಎಂದು ಪರಿಗಣಿಸಲು ಸಾಧ್ಯವೇ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಬಿಜೆಪಿ ನಾಯಕರು ಇದನ್ನು ಒಪ್ಪುತ್ತಿಲ್ಲ. ಡೈರಿಯಲ್ಲಿ ವಿಧಾನ ಪರಿಷತ್ ಸದಸ್ಯ ಅಷ್ಟೇ ಅಲ್ಲ ಮುಖ್ಯಮಂತ್ರಿ ಸಂಸದೀಯ ಕಾರ್ಯದರ್ಶಿ ತಮ್ಮ ಡೈರಿಯಲ್ಲಿ ಯಾರಿಂದ ಎಷ್ಟು ಹಣ ಸ್ವೀಕರಿಸಲಾಗಿದೆ ಮತ್ತು ಎಷ್ಟು ಯಾರಿಗೆ ಸಂದಾಯ ಮಾಡಿದ್ದೇವೆಂಬ ವಿವರ ಬರೆದಿದ್ದಾರೆ. ಹೀಗಾಗಿ ಇದನ್ನ ನಂಬಲೇಬೇಕು. ಸಿದ್ದರಾಮಯ್ಯ ಹೈಕಮಾಂಡ್‍ಗೆ ಹಣ ಕಳಿಸಿರುವುದನ್ನು ಒಪ್ಪಲೇ ಬೇಕು. ಅಷ್ಟೇ ಅಲ್ಲ ಇಷ್ಟೊಂದು ಹಣದ ಮೂಲ ಯಾವುದು ಎಂದು ಸ್ಪಷ್ಟಿಪಡಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಹೀಗಾಗಿ ಇಡೀ ಪ್ರಕರಣ ರಾಜಕೀಯ ಸ್ವರೂಪವಷ್ಟೇ ಅಲ್ಲ ಕಾನೂನು ಮತ್ತು ಅಪರಾಧಿತನಿಯಮಗಳ ವ್ಯಾಪ್ತಿಯ ಕುರಿತು ಚರ್ಚೆಗೆ ಗ್ರಸವಾಗಿದೆ. ಒಂದೆಡೆ ಡೈರಿಯಲ್ಲಿ ನಮೂದಿಸಿರುವ ವಿಷಯ ಇಟ್ಟುಕೊಂಡು ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆಯ ಮೂಲಕ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷವನ್ನೂ ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ. ಬಿಜೆಪಿಯ ಒಡೆತಕ್ಕೆ ಪ್ರತಿ ಒಡೆತ ನೀಡಲಾಗದೇ ಕಾಂಗ್ರೆಸ್ ತತ್ತರಿಸಿದೆ. ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಅವರ ವಿರುದ್ಧ ಯಾರಾದಾರೂ ಒಂದು ಸಣ್ಣ ಆರೋಪ ಕೇಳಿ ಬಂದರೆ ಸಾಕು ಇಡೀ ಪಕ್ಷ ಅವರ ಬೆಂಬಲಕ್ಕೆ ನಿಲ್ಲುತ್ತಿತ್ತು. ಸರ್ಕಾರದ 7-8 ಜನ ಮಂತ್ರಿಗಳು ಒಟ್ಟಾಗಿ ಪತ್ರಿಕಾಗೋಷ್ಠಿ ನಡೆಸಿ ತಮ್ಮ ನಾಯಕನನ್ನು ಸಮರ್ಥಿಸುತ್ತಿದ್ದರು. ಆದರೆ ಇಲ್ಲಿ ಡೈರಿ ವಿಷಯವಾಗಿ ಬಿಜೆಪಿ ನಾಯಕರು ಸಿಎಂ ವಿರುದ್ಧ ಸರಣಿ ರಣ ಕಹಳೆ ಮೊಳಗಿಸಿದರೆ, ಸರ್ಕಾರದ ಯಾವೊಬ್ಬ ಸಚಿವರು ಸಂಘಟಿತರಾಗಿ ತಮ್ಮ ನಾಯಕನ ಬೆಂಬಲಕ್ಕೆ ನಿಂತಿಲ್ಲ. ಕೆಲವು ಮಂತ್ರಿಗಳು ಈ ಸಂಬಂಧ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ತಮಗನಿಸಿದನ್ನು ಉತ್ತರ ರೂಪದಲ್ಲಿ ನೀಡಿದ್ದಾರೇನೋ ಹೊರತು ಬಲವಾದ ಸಮರ್ಥನೆ ಮಾಡಿಲ್ಲ. ಇನ್ನು ಪಕ್ಷದ ವತಿಯಿಂದಲೂ ಅಂತಹ ಬೆಂಬಲ ಸಿಕ್ಕಿಲ್ಲ. ಡೈರಿಯ ಬಗ್ಗೆ ನಿರಂತರವಾಗಿ ಆರೋಪ ಮಾಡುತ್ತಾ ಬಿಜೆಪಿ ನಾಯಕರು ರಾಜ್ಯಾದ್ಯಂತ ಸಂಚಾರಿಸುತ್ತಿದ್ದ ವೇಳೆ ಪಕ್ಷದ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಸದಾ ಸಿಎಂ ವಿಧಾನ ಪರಿಷತ್ ಸದಸ್ಯರೊಂದಿಗೆ ಸೇರಿ ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿಯ ಲೆಹರ್‍ಸಿಂಗ್ ಅವರಿಗೆ ಸೇರಿದ್ದು ಎನ್ನಲಾದ ಡೈರಿ ಮತ್ತು ಅವರು ಪಕ್ಷದ ಹಿರಿಯ ನಾಯಕ ಅಡ್ವಾಣಿಯವರಿಗೆ ಬರೆದಿದ್ದ ಪತ್ರವನ್ನು ಬಿಡುಗಡೆಗೊಳಿಸಿದರು.

ಈ ವಿದ್ಯಾಮಾನ ಗಮನಿಸಿದಾಗ ಕಾಂಗ್ರೆಸ್‍ನಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ . ಸಿಎಂ ಬೆಂಬಲಕ್ಕೆ ಸದಾ ನಿಲ್ಲುತ್ತಿದ್ದ ಸಚಿವರ ಹೆಸರಿನ ಇನ್ಶಿಯಲ್‍ಗಳು ಡೈರಿಯಲ್ಲಿ ನಮೂದಾಗಿದೆ ಎಂಬ ವರದಿ ಅವರ ಬಾಯಿ ಕಟ್ಟಿ ಹಾಕಿದ್ದರೆ ಉಳಿದವರು ಇದಕ್ಕೂ ತಮಗೂ ಸಂಬಂಧವಿಲ್ಲವೆಂಬಂತೆ ಇದ್ದಾರೆ. ಹಲವು ಮಂದಿ ಶಾಸಕರುಗಳಂತೂ ಈ ಡೈರಿಯ ಉಸಾಬರಿ ತಮಗೆಂದು ಸುಮ್ಮನಿದ್ದರೆ. ಹೈಕಮಾಂಡ್‍ನ ಘಟಾನುಘಟಿ ನಾಯಕರು ಕೂಡ ಚಕಾರ ಎತ್ತುತ್ತಿಲ್ಲ.

 

ಇನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಗುಂಡೂರಾವ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಪುಟಗಳನ್ನು ಬಿಡುಗಡೆಗೊಳಿಸಿ ಇದು ಬಿಜೆಪಿ ನಾಯಕ ಲೆಹರ್‍ಸಿಂಗ್ ಅವರಿಗೆ ಸೇರಿದ್ದು ಅವರ ವಿಲಾಸದ ಮೇಲೆ 2013ರಲ್ಲಿ ಐಟಿ ದಾಳಿ ನಡೆದಿದ್ದು ಆಗ ಈ ಡೈರಿ ಸಿಕ್ಕಿದ್ದು ಇದರಲ್ಲಿ ಅವರು ಬಿಜೆಪಿ ನಾಯಕರಿಗೆ ನೀಡಿದ ಹಣದ ವಿವರ ನಮೂದಿಸಿದ್ದಾರೆ ಎಂದು ಆರೋಪಿಸಿ ಇಲ್ಲದ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಈ ಸಂಬಂಧ ಅದರ ವಿವರದಲ್ಲಿ ಎಫ್‍ಐಆರ್ ದಾಖಲಾಗಿದೆ. ಇನ್ನು ರಾಜಕೀಯ ಆರೋಪ- ಪ್ರತ್ಯಾರೋಪ, ಹೋರಾಟ-ಪ್ರತಿಹೋರಾಟ ಏನೇ ಇರಲಿ ಇಂತಹ ಡೈರಿಗಳು, ಟಿಪ್ಪಣಿಗಳು ಎಷ್ಟರ ಮಟ್ಟಿಗೆ ನಂಬಲರ್ಹ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚಿಸಲಾಗುತ್ತಿದೆ.

ಸಹರಾ- ಬಿರ್ಲಾ ಸಂಸ್ಥೆಯ ಡೈರಿ ಇದೇ ರೀತಿಯಲ್ಲಿ ರಾಷ್ಟೀಯ ಮಟ್ಟದ ಸುದ್ದಿ ಮಾಡಿತ್ತು. ಈ ಸಂಸ್ಥೆಯ ಮೇಲೆ ನಡೆದ ಐಟಿ ದಾಳಿ ವೇಳೆ ಏಕ್ಸೆಲ್ ಶೀಟ್ ರೂಪದಲ್ಲಿದ್ದ ಡೈರಿಯೊಂದು ಪತ್ತೆಯಾಗಿತ್ತು ಅದರಲ್ಲಿ ಗುಜರಾತ್ ಸಿಎಂ, ದೆಹಲಿ ಸಿಎಂ ಸೇರಿದಂತೆ ಹಲವರಿಗೆ ದೊಡ್ಡ ಮಟ್ಟದ ಕಪ್ಪ ಸಂದಾಯ ಮಾಡಿರುವುದನ್ನು ಉಲ್ಲೇಖಿಸಿತ್ತು. ಇದನ್ನು ಪ್ರಮುಖವಾಗಿ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಡೈರಿಯಲ್ಲಿ ಉಲ್ಲೇಖಿಸಿದ ದಿನಾಂಕದಂದು ಗುಜರಾತ್ ಸಿಎಂ ಆಗ ನರೇಂದ್ರ ಮೋದಿ ಕಾರ್ಯ ನಿರ್ವಹಿಸುತ್ತಿದ್ದರು. ದೆಹಲಿ ಸಿಎಂ ಆಗಿ ಶೀಳಾ ದೀಕ್ಷಿತ್ ಇದ್ದರು. ಹೀಗಾಗಿ ಇದೊಂದು ಗಂಭೀರ ಪ್ರಕರಣ ಈ ಬಗ್ಗೆ ಕೋರ್ಟ್ ಉಸ್ತುವಾರಿಯಲ್ಲಿ ತನಿಖೆಗೆ ಆದೇಶಿಸಬೇಕೆಂದು ಕೋರಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.

ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಆಮ್ ಆದ್ಮಿ ಮುಖಂಡ ಕೇಜ್ರಿವಾಲ್ ರಾಜಕೀಯದ ಆಸ್ತ್ರವಾಗಿ ಬಳಸಿಕೊಂಡು ಪ್ರಧಾನಿ ವಿರುದ್ಧ ವಾಗ್ಧಾಳಿ ನಡೆಸಿದ್ದರು. ಆಗೆಲ್ಲಾ ಬಿಜೆಪಿ ಈ ಆರೋಪವನ್ನ ನಿರಾಕರಿಸುತ್ತಿತ್ತು. ಈ ಕುರಿತ ಆರೋಪ-ಪ್ರತ್ಯಾರೋಪವನ್ನ ತೀವ್ರ ಸ್ವರೂಪ ಪಡೆದ ನಡುವೆ ಈ ಸಮಯದಲ್ಲಿ ಪ್ರಶಾಂತ್ ಭೂಷಣ್ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್ ಇಂತಹ ಡೈರಿಯಲ್ಲಿನ ಅಂಶಗಳನ್ನು ಸಾಕ್ಷಿಯೆಂದು ಪರಿಗಣಿಸಲು ಸಾಧ್ಯವಿಲ್ಲ. ಡೈರಿಯಲ್ಲಿ ಉಲ್ಲೇಖಿಸಲಾಗಿರುವ ಇನ್ಶಿಯಾಲ್‍ಗಳು ಅಸ್ಪಷ್ಟ. ಎಕ್ಸೆಲ್ ಹಾಳೆಗಳನ್ನು ಪ್ರಮುಖ ಆಧಾರಗಳೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿ ತನಿಖೆ ಕೋರಿದ್ದ ಮನವಿಯ ಅರ್ಜಿಯನ್ನು ತಿರಸ್ಕಾರಿಸಲಾಯಿತು. ಬಿಜೆಪಿ ಕೋರ್ಟ್ ಆದೇಶವನ್ನು ದಿಗ್ವಿಜಯವೆಂದೆ ಭಾವಿಸಿದರು. ಪ್ರಧಾನಿ ವಿರುದ್ಧ ಕಪ್ಪದ ಆರೋಪ ಮಾಡಿದ ರಾಹುಲ್ ಗಾಂಧಿ, ಕೇಜ್ರಿವಾಲ್ ಸೇರಿದಂತೆ ಹಲವು ನಾಯಕರಿಗೆ ತಕ್ಕ ಉತ್ತರ ನೀಡಿದೆ ಎಂದು ತಿರುಗೇಟು ನೀಡಿದ್ದರು. ಪ್ರಧಾನಿ ಮೋದಿ ಸಹ ಸಂಸತ್ತಿನಲ್ಲಿ ಪ್ರಸ್ತಾಪಿಸಿ ತಮ್ಮ ವಿರುದ್ಧದ ಆರೋಪಕ್ಕೆ ತಮ್ಮದೇ ಶೈಲಿಯ ಉತ್ತರ ನೀಡಿದ್ದರು. ಈ ಮೂಲಕ ಡೈರಿಯಲ್ಲಿನ ಉಲ್ಲೇಖ ಸಾಕ್ಷಿಯಾಗುವುದಿಲ್ಲ ಎಂದು ಪ್ರಭಲವಾಗಿ ಪ್ರತಿಪಾದಿಸಿದರು.

ಆದರೆ, ಇದೀಗ ರಾಜ್ಯದಲ್ಲಿ ಬಿಜೆಪಿ ನಾಯಕರ ವರಸೆ ಬೇರೆ ಆಗಿದೆ. ಡೈರಿಯಲ್ಲಿ ನಮೂದಾಗಿರುವ ವಿಷಯ ಸಧ್ಯ ವಿಧಾನ ಪರಿಷತ್ ಸದಸ್ಯ ಗೊಂವಿಂದರಾಜು ಕಪ್ಪದ ಎಲ್ಲ ವವರ ಬರೆದಿಟ್ಟಿದ್ದಾರೆ. ಹೀಗಾಗಿ ಸಿಎಂ ಮತ್ತು ಆರೋಪಿ ಸ್ಥಾನದಲ್ಲಿ ಮಂತ್ರಿ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಡೀ ಕರ್ಮಕಾಂಡದ ಬಗ್ಗೆ ಉನ್ನತ ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಯಥಾ ಪ್ರಕಾರ ಕಾಂಗ್ರೆಸ್ ನಾಯಕರು ಡೈರಿ ಸುಳ್ಳು ಎನ್ನುತ್ತಿದ್ದಾರೆ. ಜೊತೆಗೆ ಸಹರಾ- ಬಿರ್ಲಾ ಡೈರಿಯ ವಿಷಯವಾಗಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಪ್ರಸ್ತಾಪಿಸಿ ಇದು ಸಾಕ್ಷಿಯೇ ಅಲ್ಲ ಎನ್ನುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಸಹರಾ- ಬಿರ್ಲಾ ಡೈರಿಯೇ ಬೇರೆ, ಗೋವಿಂದರಾಜು ಡೈರಿಯೇ ಬೇರೆ ಎಂಬ ವಾದ ಮಂಡಿಸುತ್ತಿದ್ದಾರೆ.

ಆರೋಪ-ಪ್ರತ್ಯರೋಪ ಏನೇ ಇರಲಿ ಗೋವಿಂದರಾಜು ನಿವಾಸದ ಮೇಲೆ ಐಟಿ ದಾಳಿ ಒಂದೂವರೆ ವರ್ಷವಾಗಿದೆ. ಆಗ ಪ್ರಸ್ತಾಪವಾಗದ ಡೈರಿ ಈಗ ಯಾಕೆ ಪ್ರಸ್ತಾಪವಾಗುತ್ತಿದೆ. ಡೈರಿಯಲ್ಲಿ ಉಲ್ಲೇಖಿಸಿರುವ ಅಂಶ ಅನುಮಾನಗಳಿಗೆ ಕಾರಣವಾಗಿದೆ ಎಂದಾದರೇ ಅದನ್ನು ಆಧಾರವಾಗಿ ಇಟ್ಟುಕೊಂಡು ಐಟಿ ಆಧಿಕಾರಿಗಳು ತನಿಖೆ ನಡೆಸಬಹುದಿತ್ತಲ್ಲವೇ..? ಅಥವಾ ಸಭೆಗೆ ಯಾವುದಾದರೂ ಸಂಸ್ಥೆಯ ನೇರವನ್ನು ಪಡೆಯಬಹುದಿತ್ತಲ್ಲವೇ ಎನ್ನುವ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಪ್ರಸ್ತಾಪಿಸಲ್ಟಡುತ್ತವೆ. ಗೋವಿಂದರಾಜು ಅವರ ನಿವಾಸದ ಮೇಲೆ ಐಟಿ ದಾಳಿ ನಡೆದು ಇಷ್ಟು ಅವಧಿ ಪೂಣ್ಗೊಂಡರು ಯಾಕೆ ಇಲ್ಲಯವರೆಗೆ ಪ್ರಕರಣ ಇತ್ಯಾರ್ಥಗೊಳಿಸಿಲ್ಲ. ಇಷ್ಟೊಂದು ವಿಳಂಬಗತಿಯ ಧೋರಣೆಗೆ ಕಾರಣಗಳೇನು..? ಐಟಿ ದಾಳಿ ಸಮಯದಲ್ಲಿ ಒಳ ಪಡಿಸಿಕೊಳ್ಳಲಾದ ವಸ್ತುಗಳ ಬಗ್ಗೆ ಮಹಾಜರು ಮಾಡಿ ಅದರ ಮಾಲೀಕರು ಸೇರಿ ಇತರೆ ಇಲ್ಲಿರುವ ಸ್ಥಳೀಯರ ಸಾಕ್ಷಿಯ ಸಹಿ ಪಡೆದು ಪ್ರಕ್ರಿಯೆ ನಡೆಸಬೇಕು. ತಾನು ಒಳಪಡಿಸಿಕೊಂಡ ಎಲ್ಲ ವಸ್ತುಗಳ ವಿವರವನ್ನು ಅವರ ಮಾಲೀಕರಿಗೆ ನೀಡಬೇಕು.

ಈ ರೀತಿ ಮಹಾಜರು ಮಾಡಿದ ಐಟಿ ಅಧಿಕಾರಿಗಳು ಡೈರಿ ಬಗ್ಗೆ ಉಲ್ಲೇಖಿಸಿದ್ದಾರೇಯೇ..? ಈ ಮಾಹಿತಿಯನ್ನು ಗೋವಿಂದರಾಜು ಅವರಿಗೆ ನೀಡಲಾಗಿದೆಯಾ..? ಎಂಬ ಪ್ರಶ್ನೆಗೆ ಉತ್ತರ ನೀಡಿಲ್ಲ. ಇನ್ನು ಇಂತಹ ಆರೋಪ ಕೇಳಿ ಬಂದಗಾ ಸಿಎಂ ರಾಜ್ಯ ಸರ್ಕಾರದ ಮುಖ್ಯ ಕಾರ್ಯಾದರ್ಶಿಯವರ ಮೂಲಕ ಐಟಿ ಅಧಿಕಾರಿಗಳಿ ಪತ್ರ ಬರೆಯಿಸಿ ದಾಳಿಯ ಸಮಯದಲ್ಲಿ ಒಳ ಪಡಿಸಿಕೊಂಡ ವಸ್ತುಗಳ ಬಗ್ಗೆ ವಿವರ ನೀಡುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಈ ದಾಳಿಯ ಸಂಬಂಧ ತನಿಖೆ ಮತ್ತು ವಿಚಾರಣೆ ಇನ್ನು ಬಾಕಿಯಿದೆ. ಪ್ರಕರಣ ಇತ್ಯಾರ್ಥಗೊಳ್ಳುವರೆಗೆ ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ. ಅದಾಯ ತೆರಿಗೆ ಖಾಯಿದೆಯಲ್ಲಿ ಇದಕ್ಕೆ  ಅವಕಾಶವಿಲ್ಲ ಇಂತಹ ಮಾಹಿತಿ ನೀಡುವುದು ಕಾನೂನು ಬಾಹಿರ ಎಂದು ಪತ್ರ ರವಾನಿಸಿತ್ತು.

ಐಟಿ ಅಧಿಕಾರಿಗಳು ಸರ್ಕಾರದ ಮುಖ್ಯಸ್ಥರಿಗೆ ಇಂತಹ ಪತ್ರ ರವಾನಿಸಿ ಸ್ಪಷ್ಟ ಪಡಿಸಿರುವಾಗ ಡೈರಿ ಮಾಹಿತಿ ಯಾರು ನೀಡಿದರು ಇದರ ಮೂಲ ಎಲ್ಲಿ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಹೀಗಾಗಿ ಉದ್ದೇಶ ಪೂರ್ವಕವಾಗಿಯೇ ಈ ಡೈರಿ ಬಹಿರಂಗ ಪಡಿಡಸಲಾಗಿದೆಯಾ, ರಾಜಕೀಯ ಕಾರಣಕ್ಕಾಗಿ  ಕೇಂದ್ರ ಸರ್ಕಾರ ಐಟಿ ಇಲಾಖೆಯನ್ನೂ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆಯಾ..? ಎನ್ನುವ ಉತ್ತರ ಸಿಗದ ಪ್ರಶ್ನೆಗಳು ಎಲ್ಲೆಡೆ ಉದ್ಭವಿಸುತ್ತಿವೆ. ಇನ್ನು ಈ ವಿಷಯವನ್ನು ಬದಿಗಿಟ್ಟು ನೋಡುವುದಾದರೆ ಇಂತಹ ಆರೋಪ ಹಾಗೂ ಮಾಹಿತಿ ಆಧರಿಸಿ ತನಿಖೆ ನಡೆಸಲು ಅವಕಾಶವಿದೆ. ಈ ಸಂಬಂಧ ಸೂಕ್ತ ಪ್ರಾಧಿಕಾರಗಳ ಅನುಮತಿ ಪಡೆದು ತನಿಖೆ ನಡೆಸಬಹುದಾಗಿದೆ. ಇಂತಹ ತನಿಖೆ ಏನಾದರೂ ಗೋವಿಂದರಾಜು ಡೈರಿಯ ಬಗ್ಗೆ ನಡೆದರೆ ಈ ಹಿಂದೆ ಗಣಿ ಹಗರಣದಲ್ಲಿ ದೊಡ್ಡ ಸುದ್ದಿ ಮಾಡಿರುವ ಡೈರಿ ಹಾಗೂ ಜನಾರ್ಧನ ರೆಡ್ಡಿಯ ಬಂಟ ಖಾರದಪುಟಿ ಮಹೇಶ ಡೈರಿಯ ಬಗ್ಗೆ ತನಿಖೆ ನಡೆಯಲಿದೆಯಾ..? ಎಂಬ ಪ್ರಶ್ನೆ ಮೂಡುತ್ತದೆ.

ಅದರಲ್ಲೂ ಖಾರದಪುಡಿ ಮಹೇಶ ಡೈರಿಯಲ್ಲಿ ಹಲವು ಮಂದಿ ಹಿರಿಯ ಅಧಿಕಾರಿಗಳು, ಪ್ರಭಾವಿ ರಾಜಕಾರಣಿಗಳು, ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗಳು ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ವಂತಿಗೆ ಸಂದಾಯದ ಅನುಮಾನವಿರುವ ಉಲ್ಲೇಖವಿದೆ. ಹೀಗಾಗಿ ಈ ಬಗ್ಗೆ ತನಿಖೆ ನಡೆದರೇ ಮಾಹಿತಿಯೂ ಬಹಿರಂಗವಾಗಲೆದೆ, ಅನುಮಾನಗಳು ದೂರಾಗಲಿವೆ. ಇದು ತನಿಖೆ ವಿಷಯವಾದರೇ ಇದಕ್ಕಿಂತಲೂ ಮುಖ್ಯವಾದ ಸಂಗತಿ ನೈತಿಕತೆಯ ವಿಷಯ. ಈ ಹಿಂದೆ ಹವಾಲಾ ಡೈರಿಯಲ್ಲಿ ಬಿಜೆಪಿ ಹಿರಿಯ ನಾಯಕ ಅಡ್ವಾಣಿ ಅವರ ಹೆಸರನ್ನು ಉಲ್ಲೇಖಿಸುವ ಎಲ್.ಕೆ.ಎ ಎಂಬ ಇನ್ಶಿಯಲ್ ಇರುವ ಮಾಹಿತಿ ಬಹಿರಂಗಗೊಂಡಿತ್ತು. ಇದು ಬೆಳಕಿಗೆ ಬರುವಂತೆ ಅಡ್ವಾಣಿ ಸಂಸತ್ ಸದಸ್ಯತ್ಕ್ಕೆ ರಾಜೀನಾಮೆ ನೀಡುವ ಮೂಲಕ ನೈತಿಕತೆಯನ್ನು ಪ್ರಶಂಸಿದ್ದರು. ಆ ನಂತರ ಹಲವು ಮಂದಿ ರಾಜಕಾರಣಿಗಳು ಇವರ ಹಾದಿ ತುಳಿದಿದ್ದರು. ನಂತರದಲ್ಲಿ ಹವಾಲಾ ಡೈರಿಯ ಬಗ್ಗೆ ಸಮಗ್ರ ತನಿಖೆ ನಡೆದು ಅಡ್ವಾಣಿ ಅವರ ಪಾತ್ರ ಸಬೀತಾದ ನಂತರವಷ್ಟೇ ಅವರು ಸಮಧಾನದ ನಿಟ್ಟುಸಿರು ಬಿಟ್ಟು ಮತ್ತೆ ಚುನಾವಣೆಗೆ ಸ್ಪರ್ಧಿಸಿದರು. ಆದರೆ ಇಂತಹ ನೈತಿಕತೆ ಈಗೆಲ್ಲಿ ಎನ್ನುವುದೇ ಈಗಿನ ಪ್ರಶ್ನೆ.

 

Links :ಸಂಬಂಧಿತ ಟ್ಯಾಗ್ಗಳು

ಸಂಬಂಧಿತ ಟ್ಯಾಗ್ಗಳನ್ನು ಲಭ್ಯವಿಲ್ಲಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ