ಬಿಬಿಎಂಪಿ ಸದಸ್ಯರು

Kannada News

18-03-2017 751

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅಧಿಕಾರ, ಕೆಲಸ ಮತ್ತು ಜವಾಬ್ದಾರಿಗಳ ವಿಕೇಂದ್ರೀಕರಣ ಅನಿವಾರ್ಯ ಈ ದೃಷ್ಠಿಯಿಂದ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಮನ್ನಣೆ ಇದೆ. ಈ ಸ್ಥಳೀಯ ಆಡಳಿತ ಪದ್ದತಿ ಇಂದು ನಿನ್ನೆಯದಲ್ಲ. ಇದಕ್ಕೆ ಸಹಸ್ರಾರು ವರ್ಷಗಳ ಇತಿಹಾಸ ಇದೆ. ಹರಪ್ಪಾ ಸಂಸ್ಕøತಿಯಿಂದ ಇವತ್ತಿನವರೆಗೆ ನಡೆದು ಬಂದ ಆಡಳಿತಾತ್ಮಕ ಬದಲಾವಣೆಗಳೊಂದಿಗೆ ಸ್ಥಳೀಯ ಆಡಳಿತ ಮುಂದುವರೆದಿದೆ.
ಸಂವಿಧಾನದ 74ನೇ ತಿದ್ದುಪಡಿ ಅನ್ವಯ ನಗರ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಸ್ಥಳೀಯ ಸಂಸ್ಥೆಗಳಿಗೆ ಆರ್ಥಿಕ ಸ್ವಾಯತ್ವತೆ ನೀಡುವ ದೃಷ್ಠಿಯಿಂದ ಈ ತಿದ್ದುಪಡಿ ಮೂಲಕ ವಿಶೇಷಾಧಿಕಾರ ಲಭಿಸಿದೆ. ಗಾಂಧೀಜಿ ಅವರ ಗ್ರಾಮ ಸ್ವರಾಜ್ಯದ ಪರಿಕಲ್ಪನೆ ಆಧರಿಸಿ ನಗರ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ.
ನಗರ ಪ್ರದೇಶಗಳಲ್ಲಿ ಕುಡಿಯುವ ನೀರು, ರಸ್ತೆ, ಒಳಚರಂಡಿ, ಆಸ್ಪತ್ರೆ, ಶಿಕ್ಷಣ, ಸಮಾಜ ಕಲ್ಯಾಣ ಸೇರಿದಂತೆ ಹತ್ತು ಹಲವಾರು ಯೋಜನೆ ರೂಪಿಸುವ ಹಾಗು ಈ ಯೋಜನೆಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಅನುಧಾನ ಪಡೆದುಕೊಳ್ಳುವ ಅವಕಾಶ ಸಂವಿಧಾನದ ತಿದ್ದುಪಡಿ ನೀಡಿದೆ. ಸಂವಿಧಾನದ ತಿದ್ದುಪಡಿ ಅನ್ವಯ ಸಿದ್ದಗೊಂಡಿರುವ ಮುನ್ಸಿಪಲ್ ಕಾಯಿದೆಯ ನಿಯಮಗಳಿಗೆ ಒಳಪಟ್ಟು ನಗರ ಸ್ಥಳೀಯ ಸಂಸ್ಥೆಗಳ ಆಡಳಿತ ನಿರ್ವಹಣೆ ಮಾಡಬೇಕಾಗುತ್ತದೆ. ಈ ಆಡಳಿತ ನಿರ್ವಹಣೆಯಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ಹಸ್ತಕ್ಷೇಪ ಮಾಡಲು ಅವಕಾಶವಿಲ್ಲ. ಈ ಸರ್ಕಾರಗಳು ನಗರ ಸ್ಥಳೀಯ ಸಂಸ್ಥೆಗಳಿಗೆ ಕೇವಲ ಸಲಹೆ ಮತ್ತು ಸೂಚನೆ ನೀಡುವುದಕ್ಕೆ ಮಾತ್ರ ಸೀಮಿತ.
ನಗರ ಸ್ಥಳೀಯ ಸಂಸ್ಥೆಗಳ ಪೈಕಿ ಮಹಾನಗರ ಪಾಲಿಕೆಗಳಿಗೆ ಇನ್ನೂ ಹೆಚ್ಚಿನ ಅಧಿಕಾರ. ಇಲ್ಲಿ ಮೇಯರ್‍ಗೆ ಪರಮಾಧಿಕಾರ. ರಾಜಕೀಯ ಪಕ್ಷವೊಂದರಿಂದ ಆಯ್ಕೆಯಾದ ವ್ಯಕ್ತಿ ಬಹುಮತದ ಸದಸ್ಯರ ಬೆಂಬಲದೊಂದಿಗೆ ಮೇಯರ್ ಹುದ್ದೆಗೇರಿದರೆ ಆತ ಪಕ್ಷಾತೀತ ವ್ಯಕ್ತಿ. ಆ ನಗರದ ಪ್ರಥಮ ಪ್ರಜೆ, ಮೇಯರ್ ಆದೇಶದೊಂದಿಗೆ ಆಯುಕ್ತರ ಅನುಮೋದನೆ ಮೂಲಕ ಮಹಾನಗರ ಪಾಲಿಕೆಯ ಆಡಳಿತದ ಎಲ್ಲಾ ನಿರ್ಧಾರಗಳು ಪಾಲನೆಯಾಗುತ್ತದೆ.
ದೈನಂದಿನ ಆಡಳಿತದಲ್ಲಿ ಮೇಯರ್‍ಗೆ ಸಹಕಾರಿಯಾಗಲು ಕೌನ್ಸಿಲ್ ಅಸ್ತಿತ್ವದಲ್ಲಿರುತ್ತದೆ. ಕೌನ್ಸಿಲ್‍ನಲ್ಲಿ ಇಂತಿಷ್ಟು ಕೌನ್ಸಲರುಗಳಿರುತ್ತಾರೆ. ಇವರಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರಿರುತ್ತಾರೆ. ಈ ಸದಸ್ಯರು ತಾವು ಪ್ರತಿನಿಧಿಸುವ ನಗರದ ಸುಗಮ ಆಡಳಿತಕ್ಕೆ ಸಲಹೆ ಸೂಚನೆಗಳನ್ನು ನೀಡುತ್ತಾರೆ. ತಮ್ಮನ್ನು ಆಯ್ಕೆಮಾಡಿದ ಜನರ ಆಶೋತ್ತರಗಳನ್ನು ಈಡೇರಿಸುವ ಗುರಿಯೊಂದಿಗೆ ಕೌನ್ಸಿಲ್ ಪ್ರವೇಶಿಸುವ ಇವರನ್ನು ಪುರಪಿತೃಗಳೆಂದು ಕರೆಯುತ್ತಾರೆ.
ಈ ಪುರಪಿತೃಗಳಿಗೆ ನೆರವು ನೀಡಲು ಸಾರ್ವಜನಿಕರ ಸಗಭಾಗಿತ್ವದ ವಾರ್ಡ್ ಸಮಿತಿಗಳಿರುತ್ತವೆ. ವಾರ್ಡ್ ಸಮಿತಿಗಳು ಕಾಲಕಾಲಕ್ಕೆ ಸಭೆ ಸೇರಿ ತಮ್ಮ ವಾರ್ಡ್‍ನ ಸಮಸ್ಯೆಗಳ ಬಗ್ಗೆ ತಮ್ಮ ವಾರ್ಡ್‍ನ ಸದಸ್ಯರ ಗಮನ ಸೆಳೆಯುತ್ತಾರೆ. ಈ ವಿಷಯ ಕೌನ್ಸಿಲ್ ಸಭೆಯಲ್ಲಿ ಪ್ರಸ್ತಾಪಿಸಲು ಆ ವಾರ್ಡ್‍ನ ಪಾಲಿಕೆ ಸದಸ್ಯರಿಗೆ ಅನುಕೂಲವಾಗುತ್ತದೆ. ಇನ್ನು ಪಾಲಿಕೆಗೆ ಆ ಪ್ರದೇಶ ವ್ಯಾಪ್ತಿಯ ಶಾಸಕ, ಸಂಸದರು ಕೂಡಾ ಸದಸ್ಯರೇ. ಪಾಲಿಕೆಯ ಮೇಯರ್, ಸ್ಥಾಯಿಸಮಿತಿ ಆಯ್ಕೆಯ ಚುನಾವಣೆಯಲ್ಲಿ ಇವರಿಗೆ ಮತದಾನದ ಹಕ್ಕಿದೆ. ಅದೇ ರೀತಿ ಪಾಲಿಕೆಯ ಮಾಸಿಕ ಮತ್ತು ವಿಶೇಷ ಸಭೆಗಳಲ್ಲೂ ಪಾಲ್ಗೊಳ್ಳುವ ಅಧಿಕಾರವನ್ನೂ ಹೊಂದಿರುತ್ತಾರೆ.
ಆದರೆ ಇವರ ಈ ಅಧಿಕಾರ ಕೇವಲ ಸಭೆಗೆ ಹಾಜರಾಗುವ ಮೂಲಕ ಮಾತ್ರ ಸೀಮಿತ. ಸಭೆಗೆ ಹಾಜರಾಗುವ ಇವರು ಸುಗಮ ಆಡಳಿತಕ್ಕೆ ನೆರವು ನೀಡುವ ದೃಷ್ಠಿಯಿಂದ ಸಲಹೆ ನೀಡಬಹುದೇ ಹೊರತು, ತವು ಶಾಸಕ ಇಲ್ಲವೇ ಸಂಸದ ಎಂದು ಹಕ್ಕು ಚಲಾಯಿಸುವುದು ಸಾದ್ಯವಿಲ್ಲ. ಇಲ್ಲೇನಿದ್ದರೂ ಮೇಯರ್, ಸ್ಥಾಯಿಸಮಿತಿ ಮತ್ತು ಸದಸ್ಯರದ್ದೇ ಪರಮಾಧಿಕಾರ. 
ಇದು ಸಂವಿಧಾನದ 74ನೇ ತಿದ್ದುಪಡಿ ನೀಡಿರುವ ವಿಶೇಷಾಧಿಕಾರ. ಈ ಮೂಲಕ  ಜನಸಾಮಾನ್ಯರಿಗೆ ಸ್ಥಳೀಯ ಮಟ್ಟದಲ್ಲಿಯೇ ಎಲ್ಲಾ ರೀತಿಯ ಮೂಲ ಸೌಲಭ್ಯಗಳು ಕಲ್ಪಿಸಬೇಕೆನ್ನುವುದು ಮಹತ್ವಾಕಾಂಕ್ಷೆ. ಶಾಸಕರು ಮತ್ತು ಸಂಸದರಿಗೆ ಶಾಸನ ಮಾಡುವ ಅಧಿಕಾರವಿದೆ. ಸ್ಥಳೀಯ ಮಟ್ಟದ ಸಮಸ್ಯೆ ಪರಿಹಾರಕ್ಕೆ ಇವರ ಅಗತ್ಯವಿಲ್ಲ ಎನ್ನುವುದು ಇದರ ಆಶಯ. ಸ್ಥಳೀಯ ಮಟ್ಟದ ಸಮಸ್ಯೆಗಳನ್ನು ಅಲ್ಲಿನ ಜನರ ಪ್ರತಿನಿಧಿಯಾದ ಪಾಲಿಕೆ ಸದಸ್ಯರು ಪರಿಹರಿಸಬೇಕೆನ್ನುವುದು ಈ ತಿದ್ದುಪಡಿಯ ಆಶಯ.
ರಾಜ್ಯದ ರಾಜಧಾನಿ ನಿವೃತ್ತರ ಸ್ವರ್ಗ ಎಂದೇ ಕರೆಯಿಸಿಕೊಳ್ಳುವ ಬೆಂಗಳೂರಿನಲ್ಲಿ ಸಂವಿಧಾನದ ಈ ಆಶಯದಂತೆ ಸ್ಥಳೀಯ ಆಡಳಿತ ನಡೆಯುತ್ತಿತ್ತು. 1882 ರಲ್ಲಿ ದಿವಾನ್ ರಂಗಾಚಾರ್ಯ ಮತ್ತು ಶೇಷಾದ್ರಿ ಅಯ್ಯರ್ ಹಾಕಿಕೊಟ್ಟ ಮಾರ್ಗದಲ್ಲಿ ಈ ನಗರದಲ್ಲಿನ ಸ್ಥಳೀಯ ಆಡಳಿತ ನಡೆಯುತ್ತಿತ್ತು. ಬೆಂಗಳೂರು ಮಹಾನಗರ ಪಾಲಿಕೆ  ಆರಂಭದಲ್ಲಿ ಸರ್ಕಾರದಿಂದ ನಾಮಕರಣಗೊಂಡ ಅಧಿಕಾರ ಮತ್ತು ಅಧಿಕಾರೇತರ ಸದಸ್ಯರ ಮೂಲಕ ಆಡಳಿತ ನಡೆಸುತ್ತಿತ್ತು. 74ನೇ ತಿದ್ದುಪಡಿ ಅನ್ವಯ ರೂಪಿತಗೊಂಡ ಕರ್ನಾಟಕ ಮುನ್ಸಿಪಲ್ ಕಾಯಿದೆ ನಂತರ ಚುನಾಯಿತ ಮಂಡಳಿ ಅಸ್ಥಿತ್ವಕ್ಕೆ ಬಂದಿತು. 
ಅಂತಹ ಮಹಾನಗರಕ್ಕೆ ವಿ.ಎಸ್. ಕೃಷ್ಣಯ್ಯರ್, ಜೆ. ಲಿಂಗಯ್ಯ, ಶೇಷಾದ್ರಿ ಸೇರಿಂತೆ ಹಲವಾರು ಪ್ರತಿಷ್ಟಿತರು ಮೇಯರ್‍ಗಳಾಗಿ ನಗರದ ಅಭಿವೃದ್ಧಿಗೆ ಅಪಾರವಾದ ಕೊಡುಗೆ ನೀಡಿದ್ದಾರೆ. ಬಿಜೆಪಿ ಹಿರಿಯ ನಾಯಕರಾದ ರಾಮಚಂದ್ರಗೌಡ ಸುರೇಶ್ ಕುಮಾರ್, ವಿ ಸೋಮಣ್ಣ, ಕಾಂಗ್ರೆಸ್‍ನ ರಾಮಲಿಂಗಾರೆಡ್ಡಿ, ಆರ್. ಕೃಷ್ಣಪ್ಪ, ರಾಮಚಂದ್ರಪ್ಪ, ಪಿ.ಆರ್. ರಮೇಶ್, ಕನ್ನಡ ಚಳುವಳಿ ನಾಯಕ ವಾಟಾಳ್ ನಾಗರಾಜು ಸೇರಿದಂತೆ ಹಲವಾರು ಮಂದಿ ಖ್ಯಾತ ನಾಮರು ಮಹಾನಗರ ಪಾಲಿಕೆಯ ಸದಸ್ಯರಾಗಿ ನಗರದ ಅಭಿವೃದ್ಧಿಗೆ ಉತ್ತಮ ಕೊಡುಗೆ ನೀಡಿದ್ದಾರೆ.
ಬೆಂಗಳೂರು ಮಹಾನಗರ ಪಾಲಿಕೆ 100 ವಾರ್ಡ್‍ಗಳಿಗೆ ವಿಸ್ತರಣೆ ಆಗುವವರೆಗೆ ಎಲ್ಲವೂ ಸರಿಯಾಗಿಯೇ ಇತ್ತು. ಮೇಯರ್ ಅವರಿಗೆ ನಗರದಲ್ಲಿ ವಿಶೇಷ ಸ್ಥಾನಮಾನ, ಗೌರವ, ಆದರಗಳು ಸಿಗುತ್ತಿದ್ದವು. ಪಾಲಿಕೆ ಸದಸ್ಯರಿಗೂ ಜನ ಮನ್ನಣೆ ಸಿಗುತ್ತಿತ್ತು. ವಾರ್ಡ್ ಮಟ್ಟದಲ್ಲಿ ಜನಪ್ರಿಯರಾಗಿದ್ದವರು ತಮ್ಮ ಸುತ್ತ-ಮುತ್ತಲಿನ ಸಮಸ್ಯೆಗಳಿಗೆ ಸ್ಪಂದಿಸುವ ವ್ಯಕ್ತಿಗಳು ಪಾಲಿಕೆ ಸದಸ್ಯರಾಗಿ ಆಯ್ಕೆಯಾಗುತ್ತಿದ್ದರು.
ಆದರೆ 100 ವಾರ್ಡ್‍ಗಳಿದ್ದ ಮಹಾನಗರ ಪಾಲಿಕೆ 198 ವಾರ್ಡ್‍ಗಳಿಗೆ ವಿಸ್ತರಣೆಗೊಂಡು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಾದ ನಂತರ ಈ ಚಿತ್ರಣವೇ ಬದಲಾಯಿತು. ಸಂವಿಧಾನ ಪಾಲಿಕೆಗೆ ಇನ್ನಷ್ಟು ಜವಾಬ್ದಾರಿ ಹಾಗು ಆರ್ಥಿಕ ಸಂಪನ್ಮೂಲ ಸಿಗುವಂತೆ ಮಾಡಿತು. ಪಾಲಿಕೆಯ ಸದಸ್ಯರುಗಳ ಅಧಿಕಾರ ವ್ಯಾಪ್ತಿ ಕೂಡ ವಿಸ್ತಾರವಯಿತು. ಹೀಗಾಗಿ ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯರಾಗುವುದು ಅತ್ಯಂತ ಪ್ರತಿಷ್ಠೆಯ ಸಂಗತಿಯಾಗಿ ಪರಿಣಮಿಸಿತು. ನಗರ-ನಗರಯೋಜನೆ, ಸಮಸ್ಯೆಗಳ ಬಗ್ಗೆ ಕಾಳಜಿಯುಳ್ಳ ವ್ಯಕ್ತಿಗಳ ಬದಲಾಗಿ ರಿಯೆಲ್ ಎಸ್ಟೇಟ್ ವಹಿವಾಟುದಾರರು, ಅಪರಾಧಿ ಚಟುವಟಿಕೆಯ ಹಿನ್ನಲೆಯುಳ್ಳವರು ಸುಲಭವಾಗಿ ಹಣ ಮಾಡಬೇಕೆಂಬ ವಿಶೇಷ ಆಸಕ್ತಿಯಳ್ಳ ಕೆಲವರು ಪಾಲಕೆಗೆ ಸದಸ್ಯರಾಗಿ ಆಯ್ಕೆಯಾಗಲು ಬಯಸಿದರು. ಇದರ ಪರಿಣಾಮವಾಗಿ ಬಿಬಿಎಂಪಿ ಚುನಾವಣೆಯ ಚಿತ್ರಣವೇ ಬದಲಾಯಿತು. ಪಾಲಿಕೆ ಸದಸ್ಯರಾಗುವವರಿಗೆ ಮಾಸಿಕ ಸಭೆಯಲ್ಲಿ ಪಾಲ್ಗೊಂಡರೆ ಸಿಗುವ ಗೌರವಧನ ಹೊರತು ಪಡಿಸಿದರೆ, ಬೇರೆ ಯಾವುದೇ ಆರ್ಥಿಕ ಸೌಲಭ್ಯ ಪಾಲಿಕೆಯಿಂದ ಸಿಗುವುದಿಲ್ಲ. ಆದರೂ ಪಾಲಿಕೆ ಸದಸ್ಯರಾಗಲು ಭರ್ಜರಿ ಪೈಪೋಟಿ ಆರಂಭವಾಯಿತು.
ಕಳೆದ ಚುನಾವಣೆಯಲ್ಲಿ 198 ವಾರ್ಡ್‍ಗಳಲ್ಲಿ ನಡೆದ ಚುನಾವಣೆ ವೆಚ್ಚ ಸರಿಸುಮಾರು ಒಂದುಸಾವಿರ ಕೋಟಿ ಎಂದು ಎ.ಡಿ.ಆರ್. ಸಂಸ್ಥೆಯ ಅದ್ಯಯನ ತಿಳಿಸುತ್ತದೆ. ಇದರರ್ಥ 198 ವಾರ್ಡ್‍ಗಳಲ್ಲಿ ಕಣಕ್ಕಿಳಿದ ಅಭ್ಯರ್ಥಿಗಳಿಂದ ಪ್ರತೀ ವಾರ್ಡ್‍ನಲ್ಲಿ ಕನಿಷ್ಟ 4 ರಿಂದ 5 ಕೋಟಿ ರೂಪಾಯಿ ಚುನಾವಣೆಗೆ ವೆಚ್ಚವಾಗಿದೆ. ಮಾಸಿಕ ಸಭೆಯಲ್ಲಿ ಪಾಲ್ಗೊಂಡರೆ ಸಿಗುವ ಗೌರವಧನ ಬಿಟ್ಟರೆ ಬೇರೆ ಯಾವುದೇ ಸೌಲಭ್ಯ ಸಿಗುವುದಿಲ್ಲ. ಆದರೆ ಪಾಲಿಕೆ ಸದಸ್ಯರಾಗಲು ಇಷ್ಟೊಂದು ಹಣ ಖರ್ಚು ಮಾಡಬೇಕೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುವುದು ಸಹಜ. 
ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ ಎಂದೇ ಪರಿಗಣಿಸಲ್ಪಟ್ಟಿರುವ ಈ ನಗರದಲ್ಲಿನ ರಿಯಲ್ ಎಸ್ಟೇಟ್ ವಹಿವಾಟು, ಐಟಿ-ಬಿಟಿ ಉದ್ಯಮದ ಪ್ರಗತಿ, ಹೆಲ್ತ್ ಸಿಟಿಯಾಗಿ ಪರಿವರ್ತನೆಯಾಗುತ್ತಿರುವ ನಗರಕ್ಕೆ ಹರಿದು ಬರುತ್ತಿರುವ ಅಪಾರ ಪ್ರಮಾಣದ ಅನುದಾನ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು ಈ ಜನರಲ್ಲಿ ವಿಶೇಷ ಆಸಕ್ತಿ ಮೂಡಿಸಿ, ಒಂದು ಬಾರಿ ಬಿಬಿಎಂಪಿ ಸದಸ್ಯರಾದರೆ ಸಾಕು ಎಂದು ಕೋಟಿ-ಕೋಟಿ ರೂಪಾಯಿ ಚುನಾವಣೆಗೆ ವೆಚ್ಚ ಮಾಡುತ್ತಿದ್ದಾರೆ.
ಇಷ್ಟೊಂದು ಹಣ ಖರ್ಚುಮಾಡಿ ಇವರು ಬಿಬಿಎಂಪಿ ಸದಸ್ಯರಾಗಿ ಮಾಡೊದೇನು ಎಂಬ ಪ್ರೆಶ್ನೆ ಎಲ್ಲರಲ್ಲೂ ಕಾಡುತ್ತೆ. ಅದಕ್ಕೆ ಪೂರಕವೆಂಬಂತೆ ಇವರ ಸಾಮಥ್ರ್ಯ ಬಿಂಬಿತವಾಗುವ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಇವರು ಮಾಡಿದ್ದೇನು, ಯಾವ ವಿಷಯದ ಬಗ್ಗೆ ಚರ್ಚೆ ನಡೆಸಿದರು ಎಂಬ ಬಗ್ಗೆ ಕಡತ ಪರಿಶೀಲಿಸಿದರೆ ದೊಡ್ಡ ನಿರಾಶೆ ಉಂಟಾಗುತ್ತದೆ.
ಮಹಾನಗರ ಪಾಲಿಕೆಯಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಲ್ಪಟ್ಟ ಆಡಳಿತ ವ್ಯವಸ್ಥೆ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿದೆಯಾ ಎಂದರೂ ಕೂಡ ದೊಡ್ಡ ನಿರಾಶೆಯೇ ನಮಗೆ ಎದುರಾಗುತ್ತದೆ.
ನಗರ ಮತ್ತು ಪಾಲಿಕೆ ಸದಸ್ಯರು ಪ್ರತಿನಿಧಿಸುವ ವಾರ್ಡ್‍ಗಳಲ್ಲಿನ ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆ, ಅದಕ್ಕೆ ಪರಿಹಾರ, ಸಿಲಿಕಾನ್ ಸಿಟಿಯ ಖ್ಯಾತಿಗೆ ಧಕ್ಕೆ ಬರದಂತೆ ನಗರದಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಯೋಜನೆಗಳು, ನಗರದ ಪ್ರತಿಷ್ಠೆ ಹಾಗೂ ಸೌಂದರ್ಯವನ್ನು ಹೆಚ್ಚಿಸುವಂತಹ ಯಾವ ಯೋಜನೆಯ ಬಗ್ಗೆ ಪಾಲಿಕೆಯ ಮಾಸಿಕ ಸಭೆಯಲ್ಲಿ ಚರ್ಚೆ ನಡೆದಿದೆ ಎಂದು ಪರಿಶೀಲಿಸಿದರೆ ಶೂನ್ಯ ಫಲಿತಾಂಶ. 
ಮಾಸಿಕ ಸಭೆಗಳಲ್ಲಿ ನಿರ್ಧಿಷ್ಟ ಪಡಿಸಿದ ಅಜೆಂಡಾದ ಬಗ್ಗೆ ಚರ್ಚೆಗೆ ಬದಲಾಗಿ ತಮಗೆ ಲಾಭದಾಯಕ ಎನ್ನಿಸುವ ವಿಷಯದ ಬಗ್ಗೆ ಸದಸ್ಯರು ಚರ್ಚೆ ನಡೆಸಿದರೆ, ಅನೇಕರು ಬಾಯಿಯೇ ಬಿಡುವುದಿಲ್ಲ. ಇನ್ನು ಹಲವಾರು ಸಭೆಗಳು ಗದ್ದಲದಲ್ಲಿಯೇ ಅಂತ್ಯವಾಗಿದೆ.
ಮಾಸಿಕ ಸಭೆಯಲ್ಲಿ ನಗರಯೋಜನೆ, ನಗರದ ಮೂಲ ಸೌಲಭ್ಯ, ಜನರ ಸಂಕಷ್ಟ ಪರಿಹಾರದ ಬಗ್ಗೆ ಚಕಾರ ಎತ್ತದಿದ್ದರೂ, ಇವರು ಯಾಕೆ ಆಯ್ಕೆಯಾಗುತ್ತಾರೆ? ಆಯ್ಕೆಯಾಗಲು ಕೋಟ್ಯಾಂತರ ರೂಪಾಯಿ ಹಣ ಯಾಕೆ ಖರ್ಚುಮಾಡುತ್ತಾರೆಂದು ಹುಡುಕಲು ಹೊರಟರೆ ಪಾಲಿಕೆಗೆ ಸಿಕ್ಕಿರುವ ವಿಶೇಷ ಸ್ಥಾನಮಾನ ಈ ಆಕರ್ಷಣೆಗೆ ಕಾರಣ. 
ಹಾಗೆಂದ ಮಾತ್ರಕ್ಕೆ ಬಿಬಿಎಂಪಿಗೆ ಆಯ್ಕೆಯಾಗುತ್ತಿರುವ ಎಲ್ಲಾ ಸದಸ್ಯರು ಇದೇ ಮನೋಭಾವ ಹೊಂದಿದ್ದಾರೆಂದು ಅರ್ಥವಲ್ಲ. ಕೆಲವೇ ಕೆಲವು ಮಂದಿ ನಗರದ ಬಗೆಗಿನ ಕಾಳಜಿಯಿಂದ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗುತ್ತಿದ್ದಾರೆ. ಆಯ್ಕೆಯಾಗಲು ಇವರೇನು ಕೋಟಿ-ಕೋಟಿ ರೂಪಾಯಿ ಖರ್ಚುಮಾಡುತ್ತಿಲ್ಲ. ಬೆಂಗಳೂರಿನ ಕೇಂದ್ರ ಭಾಗದಿಂದ ಆಯ್ಕೆಯಾಗುತ್ತಿರುವ ಕೆಲವೇ ಕೆಲವು ಮಂದಿ ಮತ್ತು ನಗರ ಹೊರವಲಯದಿಂದ ಆಯ್ಕೆಯಾಗುತ್ತಿರುವ ಒಬ್ಬಿಬ್ಬರು ಈ ಸಾಲಿಗೆ ಸೇರುತ್ತಾರೆ.
ಇವರಿಗೆ ಆಯಾಯ ವಾರ್ಡಿನ ಜನರಷ್ಟೇ ಅಲ್ಲ ನಗರದ ಇತರೇ ಪ್ರದೇಶದ ಜನರೂ ಕೂಡ ಗೌರವಿಸುತ್ತಿದ್ದಾರೆ. ತಮ್ಮ ವಾರ್ಡಿಗೂ ಇಂತಹ ಸದಸ್ಯರು ಬೇಕು ಎಂಬ ಭಾವನೆ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ನಗರ ಮತ್ತು ತಮ್ಮ ವಾರ್ಡಿನ ಬಗ್ಗೆ ಈ ಸದಸ್ಯರುಗಳಿಗೆ ಇರುವ ವಿಶೇಷ ಕಾಳಜಿ, ಅಭಿವೃದ್ಧಿ ಯೋಜನೆಗಳ ಬಗ್ಗೆ ಇರುವ ದೂರದೃಷ್ಠಿ ಪ್ರಮುಖ ಕಾರಣ. ಇನ್ನು ಪಾಲಿಕೆ ಸಭೆಯಲ್ಲೂ ಕೂಡಾ ಇವರು ತಮ್ಮ ಚಾತುರ್ಯ, ಬುದ್ದಿಮತ್ತೆ ಪ್ರದರ್ಶಿಸುವ ಮೂಲಕ ಅಧಿಕಾರಿ ವಲಯದಲ್ಲೂ ಗೌರವಕ್ಕೆ ಪಾತ್ರರಾಗುತ್ತಾರೆ.
ಬಿಬಿಎಂಪಿಯ ಚುನಾಯಿತ ಮಂಡಳಿಗೆ ಸಂವಿಧಾನ ತಿದ್ದುಪಡಿ ಅನ್ವಯ ರಚಿತಗೊಂಡಿರುವ ಕಾಯಿದೆ
•    ನಗರ ಯೋಜನೆ ಸಿದ್ದಪಡಿಸಿ ಅನುಷ್ಠಾನಕ್ಕೆ ತರುವುದು. 
•    ಭೂ ಬಳಕೆ ಮೇಲೆ ನಿಯಂತ್ರಣ ಮತ್ತು ಕಟ್ಟಡ ನಿರ್ಮಾಣ ಚಟುವಟಿಕೆಗಳ ಮೇಲೆ ನಿಯಂತ್ರಣ.
•    ರಸ್ತೆಗಳ ನಿರ್ಮಾಣ, ಅಭಿವೃದ್ಧಿ, ದುರಸ್ತಿ ಹಾಗೂ ಸೇತುವೆಗಳ ನಿರ್ಮಾಣ.
•    ಗೃಹ ಬಳಕೆ, ಕೈಗಾರಿಕೆ ಮತ್ತು ವಾಣಿಜ್ಯ ಉದ್ದೇಶಕ್ಕೆ ನೀರು ಪೂರೈಕೆ.
•    ಸಾರ್ವಜನಿಕ ಆರೋಗ್ಯ, ಸ್ವಚ್ಛತೆ, ಘನತ್ಯಾಜ್ಯ ನಿರ್ವಹಣೆ.
•    ನಗರ ಅರಣ್ಯೀಕರಣ, ಪರಿಸರ ಸಂರಕ್ಷಣೆ ಮತ್ತು ಪರಿಸರ ಅಸಮತೋಲನ ತಡೆಗಟ್ಟಲು ಕ್ರಮ.
•    ಆರ್ಥಿಕವಾಗಿ ಹಿಂದುಳಿದವರು, ಶೋಷಿತರು, ವಿಕಲಚೇತನರು ಸೇರಿದಂತೆ ಶೋಷಿತರ ಕಲ್ಯಾಣಕ್ಕೆ ಯೋಜನೆ.
•    ಕೊಳಚೆ ಪ್ರದೇಶಗಳ ಅಭಿವೃದ್ಧಿ ಹಾಗೂ ಮೂಲಸೌಲಭ್ಯದ ಮೂಲಕ ಮೇಲ್ದರ್ಜೆಗೇರಿಸುವುದು.
•    ಸಾರ್ವಜನಿಕ ಉದ್ಯಾನವನಗಳು, ಆಟದ ಮೈದಾನಗಳ ನಿರ್ಮಾಣ.
•    ಶೈಕ್ಷಣಿಕ ಮತ್ತು ಸಾಂಸ್ಕøತಿಕ ಚಟುವಟಿಕೆಗಳ ಅಭಿವೃದ್ಧಿ.
•    ಸ್ಮಶಾನಗಳು, ವಿದ್ಯುತ್ ಚಿತಾಗಾರಗಳ ನಿರ್ಮಾಣ ಮತ್ತು ಅಭಿವೃದ್ಧಿ.
•    ಪ್ರಾಣಿ ಹಿಂಸೆ ತಡೆಗಟ್ಟುವುದು, ಗೋಶಾಲೆಗಳ ನಿರ್ಮಾಣ.
•    ಜನನ-ಮರಣ ನೊಂದಣಿ.
•    ರಸ್ತೆ ದೀಪ, ಪಾದಚಾರಿ ಮಾರ್ಗ, ವಾಹನ ನಿಲುಗಡೆ, ಬಸ್ ನಿಲ್ದಾಣಗಳ ನಿರ್ಮಾಣ ಮತ್ತು ನಿರ್ವಹಣೆ.
•    ಕಸಾಯಿಖಾನೆಗಳ ನಿರ್ಮಾಣ ಮತ್ತು ನಿರ್ವಹಣಿ.
•    ಜಾಹೀರಾತು, ಆಸ್ತಿ ತೆರಿಗೆ ಮೂಲಕ ಸಂಪನ್ಮೂಲ ಕ್ರೋಢಿಕರಣಕ್ಕೆ ಅವಕಾಶ ಕಲ್ಪಿಸಿದೆ.

ಒಂದು ರಾಜ್ಯ ಸರ್ಕಾರ ಮಾಡುವ ಎಲ್ಲಾ ಕೆಲಸಗಳು ಬಿಬಿಎಂಪಿ ಕೈಗೊಳ್ಳಬಹುದು. ಈ ಕರ್ತವ್ಯಗಳ ನಿರ್ವಹಣೆ ಮತ್ತು ಅನುಷ್ಠಾನ ನೇರವಾಗಿ ಪಾಲಿಕೆ ಸದಸ್ಯರ ನೇತೃತ್ವದಲ್ಲಿ ನಡೆಯುತ್ತದೆ. ಈ ವಿಷಯದಲ್ಲಿ ಬೆಂಗಳೂರು ನಗರದ ಶಾಸಕ -ಸಂಸದರಿಗೆ ಯಾವುದೇ ಅಧಿಕಾರವಿಲ್ಲ, ಬಿಬಿಎಂಪಿ ಸದಸ್ಯರದ್ದೇ ಪರಮಾಧಿಕಾರ.
ಕಾಯಿದೆ ನೀಡಿರುವ ವಿಶೇಷಾಧಿಕಾರದ ಅನ್ವಯ ಯಾವ ಯಾವ ಯೋಜನೆಗೆ ಎಷ್ಟು ಹಣ ನಿಗಧಿ ಪಡಿಸಬೇಕು, ಯಾವ ಯಾವ ವಾರ್ಡ್‍ಗಳಿಗೆ ಎಷ್ಟು ಬಿಡುಗಡೆಯಾಗಬೇಕು, ಅದರ ಕಾಮಗಾರಿ ಯಾರಿಗೆ ನೀಡಬೇಕು, ನಿರ್ವಹಣೆ ಹೇಗಿರಬೇಕು ಎನ್ನುವುದೆಲ್ಲಾ ಪಾಲಿಕೆ ಸದಸ್ಯರದ್ದೇ.
ಈ ವಲಯವೇ ಅತ್ಯಂತ ಆಕರ್ಷಣೆ. ಹೀಗಾಗಿಯೇ ಅನೇಕರು ಕೋಟಿ-ಕೋಟಿ ರೂಪಾಯಿ ವೆಚ್ಚಮಾಡಿ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿ ಬರುತ್ತಿದ್ದಾರೆ.

ಮುಖ್ಯಮಂತ್ರಿಗಳ ನಗರೋತ್ಥಾನ, ಪ್ರಧಾನಿಗಳ ನಗರೋತ್ಥಾನ ಯೋಜನೆಯಡಿ ಕೋಟ್ಯಾಂತರ ರೂಪಾಯಿ ಅನುದಾನ ಬಿಬಿಎಂಪಿಗೆ ಹರಿದು ಬರುತ್ತಿದೆ. ಇದರ ಜತೆಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಖಾತರಿಯೊಂದಿಗೆ ಹುಡ್ಕೋ, ನಬಾರ್ಡ್ ಏಷ್ಯಾ ಅಭಿವೃದ್ಧಿ ಬ್ಯಾಂಕ್, ವಿಶ್ವಬ್ಯಾಂಕ್, ಸಾಗರೋತ್ತರ ಹಣಕಾಸು ಸಂಸ್ಥೆ ಸೇರಿದಂತೆ ನಿರ್ದಿಷ್ಟ ಹಣಕಾಸು ಸಂಸ್ಥೆಗಳಿಂದ ಸಾವಿರಾರು ಕೋಟಿ ರೂಪಾಯಿ ನೆರವು ಹರಿದು ಬರುತ್ತಿದೆ. ರಾಜ್ಯ ಸರ್ಕಾರ ಬಜೆಟ್‍ನಲ್ಲಿಯೂ ಸಾಕಷ್ಟು ಅನುದಾನ ಪ್ರಕಟಿಸುತ್ತಿದೆ. ಇನ್ನೂ ಆಸ್ತಿ ತೆರಿಗೆ, ಜಾಹೀರಾತು ತೆರಿಗೆ ರೂಪದಲ್ಲೂ ಪಾಲಿಕೆಗೆ ಆದಾಯ ಬರುತ್ತದೆ.
ಈ ಎಲ್ಲಾ ಸಂಪನ್ಮೂಲ ಬಳಕೆಯ ಒಂದೇ ಗುರಿ ಮೂಲಸೌಲಭ್ಯ. ಇದಕ್ಕಾಗಿ ರೂಪಿಸುವ ಯೋಜನೆಗಳು ಪಾಲಿಕೆ ಸದಸ್ಯರ ಮೂಗಿನಡಿ ಸಿದ್ದವಾಗುತ್ತವೆ. ಈ ಯೋಜನೆಯ ಕಾಮಗಾರಿ ಪಾಲಿಕೆ ಸದಸ್ಯರೆಲ್ಲಾ ತೀರ್ಮಾನಿಸಿದ ಸಂಸ್ಥೆ ಇಲ್ಲವೇ ವ್ಯಕ್ತಿಗೆ ಸಿಗುತ್ತದೆ. ದೊಡ್ಡ ಮೊತ್ತದ ಕಾಮಗಾರಿಗೆ ದೊಡ್ಡ-ದೊಡ್ಡ ಸಂಸ್ಥೆಗಳು ಬಿಡ್ ಮಾಡುತ್ತವೆ. ಈ ವೇಳೆ ಆ ಯೋಜನೆ ವ್ಯಾಪ್ತಿಯ ಪಾಲಿಕೆ ಸದಸ್ಯರನ್ನು ಅಂತಹ ಸಂಸ್ಥೆಗಳು ವಿಶೇಷವಾಗಿ ಗೌರವಿಸುತ್ತದೆ.
ಇನ್ನು ಸಣ್ಣ-ಪುಟ್ಟ ಕಾಮಗಾರಿಗಳ ಗುತ್ತಿಗೆ ವಿಷಯದಲ್ಲಿ ಪಾಲಿಕೆ ಸದಸ್ಯರ ಮಾತೇ ಅಂತಿಮ. ಈ ಕಾಮಗಾರಿ ಪಾಲಿಕೆ ಸದಸ್ಯರ ಹಿಂಬಾಲಕರು ಇಲ್ಲವೇ ಬೇನಾಮಿ ಹೆಸರಲ್ಲಿರುವ ಪಾಲಿಕೆ ಸದಸ್ಯರ ಒಡೆತನದ ಸಂಸ್ಥೆ ಇಲ್ಲವೇ ಅವರ ಕುಟುಂಬ ಸದಸ್ಯರೇ ಗುತ್ತಿಗೆದಾರರ ಹೆಸರಲ್ಲಿ ಕಾಮಗಾರಿ ಟೆಂಡರ್ ಪಡೆಯುತ್ತಾರೆ. ಆ ನಂತರ ಈ ಕಾಮಗಾರಿ ನಿರ್ದಿಷ್ಟ ಪಡಿಸಿದ ಕಮೀಷನ್ ಪಡೆದುಕೊಂಡು ಬೇರೊಬ್ಬ ಗುತ್ತಿಗೆದಾರರಿಗೆ ವರ್ಗಾವಣೆಯಾಗುತ್ತದೆ. ಕಾಮಗಾರಿ ಎನ್ನುವುದು ಪಾಲಿಕೆ ಸದಸ್ಯರ ಪೈಕಿ ಅನೇಕರಿಗೆ ಅತ್ಯಂತ ಆಕರ್ಷಣೀಯ ಸಂಗತಿ. ಪಾಲಿಕೆ ವತಿಯಿಂದ ಕೈಗೊಳ್ಳಲಿರುವ ಕಾಮಗಾರಿಗಳ ಗುಣಮಟ್ಟ ಪರಿಶೀಲನೆಗೆ ತಾಂತ್ರಿಕ ಸಮಿತಿ ಸೇರಿದಂತೆ ಹಲವಾರು ಸಮಿತಿಗಳು ಕಾರ್ಯ ನಿರ್ವಹಣೆ ಮಾಡುತ್ತಿವೆ. ಈ ಎಲ್ಲಾ ಸಮಿತಿಗಳ ಕಾರ್ಯವೈಖರಿ ಸೀಮಿತ ಕೆಲಸಗಳಿಗೆ ಮಾತ್ರ ಸೀಮಿತ. ಹೀಗಾಗಿ ಪಾಲಿಕೆ ಸದಸ್ಯರ ವಿಶೇಷ ಆಸಕ್ತಿಯ ಕಾಮಗಾರಿಗಳ ತಂಟೆಗೆ ಈ ಯಾವುದೇ ಸಮಿತಿ ಹೋಗುವುದಿಲ್ಲ.
ಇನ್ನು ಆಯಾ ವಾರ್ಡ್ ವ್ಯಾಪ್ತಿಯ ಕಸ ವಿಲೇವಾರಿ ಗುತ್ತಿಗೆ ಕೂಡ ಕೆಲವು ಸದಸ್ಯರಿಗೆ ಅತ್ಯಂತ ಆಸಕ್ತಿದಾಯಕವಾದ ಸಂಗತಿ. ಗುತ್ತಿಗೆದಾರರು ತಮ್ಮ ವಾರ್ಡ್ ವ್ಯಾಪ್ತಿಯ ಸದಸ್ಯರನ್ನು ವಿಶೇಷ ಗೌರವದಿಂದ ಕಾಣದೇ ಹೋದರೆ ಅವರಿಗೆ ಕಸ ವಿಲೇವಾರಿ ಸಾಧ್ಯಾನೇ ಇಲ್ಲ. ಇಂತಹ ಕಸವಿಲೇವಾರಿಯನ್ನು ಕೂಡಾ ಹಲವರು ಬೇನಾಮಿ ಹೆಸರಲ್ಲಿ ತಮ್ಮ ಕುಟುಂಬ ಸದಸ್ಯರ ಮೂಲಕ ನಿರ್ವಹಣೆ ಮಾಡುತ್ತಿರುವುದು ಗುಟ್ಟೇನಲ್ಲ.
ಜಾಹೀರಾತು ಫಲಕಗಳಂತೂ ಪಾಲಿಕೆಯಲ್ಲಿ ಹುಲ್ಲುಗಾವಲಿಟ್ಟಂತೆ ಬಹುತೇಕ ಹಾಲಿ ಮತ್ತು ಮಾಜಿ ಸದಸ್ಯರು ಈ ಜಾಹೀರಾತು ಫಲಕಗಳ ಒಡೆಯರಾಗಿದ್ದಾರೆ. ಬಹುತೇಕ ಜಾಹಿರಾತು ಫಲಕ ಅಕ್ರಮವಾದರೂ ಪಾಲಿಕೆ ಅಧಿಕಾರಿಗಳ ಸಹಕಾರದೊಂದಿಗೆ ಅವುಗಳಿಗೊಂದು ಕೋರ್ಟ್ ತಡೆಯಾಜ್ಞೆ ಫಲಕ ಅಂಟಿಸಿ ರಾಜಾರೋಷವಾಗಿ ವ್ಯವಹಾರ ನಡೆಸುತ್ತಿರುತ್ತಾರೆ. ಹೀಗಾಗಿ ಪಾಲಿಕೆ ಸದಸ್ಯರಾಗಲು ಹೆಚ್ಚಿನ ಪೈಪೋಟಿ ಉಂಟಾಗಿದೆ.
ಕೆಲವರು ಪಾಲಿಕೆ ಸದಸ್ಯರಾಗುವ ಮುನ್ನ ಹೊಂದಿದ್ದ ಆಸ್ತಿ ಪಾಲಿಕೆ ಸದಸ್ಯರಾಗಿ ನಿವೃತ್ತಿಯಾಗುವ ವೇಳೆಗೆ ಹೊಂದಿರುವ ಆಸ್ತಿಯ ಬಗ್ಗೆ ಪರಿಶೀಲನೆ ನಡೆಸಿದರೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯರಾಗುವುದು ಇಷ್ಟೊಂದು ಲಾಭದಾಯಕವೇ ಎಂದು ಜನಸಾಮಾನ್ಯರಿಗೆ ಅನಿಸುವುದುಂಟು.
ಬಿಬಿಎಂಪಿಯ ಎಲ್ಲಾ 198 ಸದಸ್ಯರು ಇಂತವರೆಂದು ಹೇಳಲು ಸಾಧ್ಯವಿಲ್ಲ. ಕೆಲವೇ ಕೆಲವು ಮಂದಿ ಇಂತಹವರನ್ನು ಹೊರತು ಪಡಿಸಿದರೆ ಉಳಿದವರು ನಮ್ಮ ನಗರ, ನಮ್ಮ ಪರಿಸರ ಎಂದು ವಿಶೇಷ ಕಾಳಜಿ ಹೊಂದಿದ್ದಾರೆ. ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿರುವುದಕ್ಕೆ ಏನಾದರೂ ಕೊಡುಗೆ ನಿಡಲೇಬೇಕೆಂದು ತಮ್ಮ ಪ್ರದೇಶದಲ್ಲಿ ಉತ್ತಮ ರಸ್ತೆ, ಪಾದಚಾರಿ ಮಾರ್ಗ, ಉದ್ಯಾನವನ, ಆಟದ ಮೈದಾನ, ಗ್ರಂಥಾಲಯ, ವ್ಯಾಯಾಮಶಾಲೆ ಕಸವಿಲೇವಾರಿಗೆ ವೈಜ್ಞಾನಿಕ ಕ್ರಮದ ಮೂಲಕ ಗಮನ ಸೆಳೆಯುತ್ತಾರೆ.
ಇಂತಹ ಪಾಲಿಕೆ ಸದಸ್ಯರಿಗೆ ನೆರವು ನೀಡುವುದು ವಾರ್ಡ್ ಸಮಿತಿಗಳ ನೂತನ ಕೆಎಂಸಿ ಕಾಯಿದೆ ಅನ್ವಯ ಪ್ರತಿವಾರ್ಡ್‍ನಲ್ಲೂ ಸಾರ್ವಜನಿಕರ ಸಹಭಾಗಿತ್ವದ ವಾರ್ಡ್ ಸಮಿತಿ ರಚನೆ ಕಡ್ಡಾಯ. ಈ ಸಮಿತಿಗಳು ಕಾಲದಿಂದ ಕಾಲಕ್ಕೆ ಸಭೆ ಸೇರಬೇಕು ತಮ್ಮ ವಾರ್ಡ್‍ನ ಸದಸ್ಯರ ನೇತೃತ್ವದಲ್ಲಿ ಸಭೆ ಸೇರುವ ಸಮಿತಿಗಳು ತಮ್ಮ ವಾರ್ಡ್‍ನಲ್ಲಿ ಆಗಬೇಕಿರುವ ಕಾಮಗಾರಿಗಳು, ನಡೆದಿರುವ ಕಾಮಗಾರಿಗಳ ಗುಣಮಟ್ಟ, ಕಸವಿಲೇವಾರಿ, ಕುರಿಯುವ ನೀರು ಮೊದಲಾದ ನಾಗರೀಕ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಅದಕ್ಕೆ ಪರಿಹಾರ ರೂಪಿಸಬೇಕು. ಇದರ ಆಧಾರದಲ್ಲಿ ಆ ವಾರ್ಡ್‍ನ ಪಾಲಿಕೆ ಸದಸ್ಯರು ವಿವಿಧ ಸ್ಥಾಯಿ ಸಮಿತಿಗಳು ಇಲ್ಲದೇ ಪಾಲಿಕೆಯ ಮಾಸಿಕ ಸಭೆಯಲ್ಲಿ ಈ ವಿಷಯದ ಬಗ್ಗೆ ಗಮನ ಸೆಳೆದು ಅವುಗಳ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು. ಆದರೆ ದೊಡ್ಡ ದುರಂತವೆಂದರೆ ಬಹುತೇಕ ವಾರ್ಡ್‍ಗಳಲ್ಲಿ ಅಂತಹ ಸಮಿತಿಗಳೇ ರಚನೆಯಾಗಿಲ್ಲ, ಕೆಲವು ಕಡೆ ರಚನೆಯಾಗಿದ್ದರೂ ಅಸ್ಥಿತ್ವದಲ್ಲೇ ಇಲ್ಲ. ಇನ್ನೂ ಕೆಲವು ಸಮಿತಿಗಳಲ್ಲಿ ಪಾಲಿಕೆ ಸದಸ್ಯರ ಹಿಂಬಾಲಕರೇ ಸದಸ್ಯರಾಗಿದ್ದು ಸಭೆ ನಡೆಸುವ ಗೋಜಿಗೆ ಹೋಗುವುದಿಲ್ಲ.
ಬೆಂಗಳೂರು ಡೈನಾಮಿಕ್ ಸಿಟಿ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ ಅದಕ್ಕೆ ಪೂರಕವೆಂಬಂತೆ ಇಲ್ಲಿ ಐಟಿಪಾರ್ಕ್, ಬಿಟಿ ಕಂಪೆನಿಗಳು, ನವೋದ್ಯಮ, ವ್ಯಾಪಾರೋದ್ಯಮ, ಮಾಲ್‍ಗಳು, ವಸತಿ ಸಂಕೀರ್ಣಗಳು, ಆಸ್ಪತ್ರೆಗಳು, ವಾಣಿಜ್ಯ ಸಂಕೀರ್ಣಗಳು ತಲೆ ಎತ್ತುತ್ತಿವೆ. ಇವುಗಳಿಗೆಲ್ಲಾ ಪಾಲಿಕೆಯ ನಿರಪೇಕ್ಷಣಾ ಪತ್ರ ಮತ್ತು ಪರವಾನಗಿ ಕಡ್ಡಾಯ. ಇಂತಹ ಪ್ರಮಾಣಪತ್ರ ನೀಡುವ ವೇಳೆ ಸ್ಥಳೀಯ ಪಾಲಿಕೆ ಸದಸ್ಯರ ಪಾತ್ರ ಅತ್ಯಂತ ನಿರ್ಣಾಯಕ. ಪಾಲಿಕೆ ಸದಸ್ಯರ ಹಸಿರು ನಿಶಾನೆಯಿಲ್ಲದೆ ಅಧಿಕಾರಿಗಳು ಯಾವುದೇ ನಿರಪೇಕ್ಷಣಾ ಪತ್ರ ಅಥವಾ ಪರವಾನಗಿ ನೀಡಲು ಸಾಧ್ಯವೇ ಇಲ್ಲ.
ಇನ್ನು ಬೆಂಗಳೂರು ಬದಲಾದಂತೆ ಇಲ್ಲಿನ ಜನರ ಆಯ್ಕೆಗಳೂ ಬದಲಾಗುತ್ತಿದೆ. ಇದಕ್ಕೆ ಪೂಕರವೆಂಬಂತೆ ಪಬ್‍ಗಳು, ವೀಡಿಯೋ ಗೇಮ್‍ಗಳು, ಹುಕ್ಕಾಬಾರ್‍ಗಳು, ಲೈವ್ ಬ್ಯಾಂಡ್‍ಗಳು ತಲೆ ಎತ್ತುತ್ತಿವೆ. ಸರ್ವೀಸ್ ಅಪಾರ್ಟ್‍ಮೆಂಟ್‍ಗಳು ಹೆಚ್ಚಾಗುತ್ತಿವೆ. ಈ ಎಲ್ಲವೂಗಳಿಗೂ ಸ್ಥಳೀಯ ವಾರ್ಡ್‍ನ ಸದಸ್ಯರ ಆಶೀರ್ವಾದವಿಲ್ಲದೇ ಹೋದರೆ ವಹಿವಾಟು ನಡೆಸಲು ಸಾಧ್ಯವೇ ಇಲ್ಲ. ಹೀಗಾಗಿ ಸಾರ್ವಜನಿಕರು ತಮ್ಮ ಈ ಎಲ್ಲಾ ಅಗತ್ಯಗಳಿಗೆ ತಮ್ಮ ಕ್ಷೇತ್ರದ ಶಾಸಕ ಸಂಸದರ ಬಾಗಿಲು ತಟ್ಟುವ ಬದಲಿಗೆ ಪಾಲಿಕೆ ಸದಸ್ಯರ ಮನೆ ಇಲ್ಲವೇ ಕಚೇರಿ ಮುಂದೆ ನಿಂತಿರುತ್ತಾರೆ. ಹೀಗಾಗಿ ಬೆಂಗಳೂರಿನಲ್ಲಿ ಶಾಸಕ, ಸಂಸದರಾಗುವುದಕ್ಕಿಂತ ಪಾಲಿಕೆ ಸದಸ್ಯರಾದರೆ ಅವರಿಗೆ ವಿಶೇಷ ಗೌರವ ಆದರಗಳು ಲಭಿಸುತ್ತದೆ.
ಕೆಲವು ಪಾಲಿಕೆ ಸದಸ್ಯರ ಇಂತಹ ವಿಶೇಷ ಆಸಕ್ತಿಯ ಪರಿಣಾಮವಾಗಿ ನಗರದಲ್ಲಿ ರೂಪಿಸಿದ ಹಲವು ಯೋಜನೆಗಳಿಗೆ ತೀವ್ರ ಹಿನ್ನಡೆ ಉಂಟಾಗಿತ್ತು. ಕಳೆದ 2000ದಲ್ಲಿಯೇ ನಗರ ಹೊರವಲಯದ ಕೆಲ ಪ್ರದೇಶಗಳಲ್ಲಿ ಇಂತಹವು ಅನುಭವಕ್ಕೆ ಬಂದಿತ್ತು. ಪಾಲಿಕೆಯ ಕಾರ್ಯವೈಖರಿ, ಸದಸ್ಯರ ಧೋರಣೆಯ ಬಗ್ಗೆ ತೀವ್ರ ರೀತಿಯ ಅಸಮಧಾನ ವ್ಯಕ್ತಪಡಿಸುತ್ತಿದ್ದರು. ಬೆಂಗಳೂರು ನಗರ ಹಾಗೂ ಇಲ್ಲಿನ ಅಭಿವೃದ್ಧಿಯ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಪಾಲಿಕೆ ಸದಸ್ಯರಿಂದ ತಮ್ಮ ನಿರೀಕ್ಷೆಯಂತೆ ಅಭಿವೃದ್ಧಿ ಸಾಧ್ಯವಿಲ್ಲವೆಂದು ಹೇಳಿ ವಿಶೇಷ ಕಾರ್ಯಪಡೆ ರಚಿಸಿದರು. ಬೆಂಗಳೂರು ಅಭಿವೃದ್ಧಿ ಕಾರ್ಯಪಡೆ ಬಿಎಟಿಎಫ್ ಹೆಸರಲ್ಲಿ ರಚಿತಗೊಂಡ ಈ ಸಂಸ್ಥೆಯ ಮುಖ್ಯರಸ್ಥರಾಗಿ ನಂದನ್ ನೀಲೇಕಣಿ ಅವರನ್ನು ನೇಮಿಸಲಾಯಿತು. ಇವರೊಂದಿಗೆ ದಿವಂಗತ ಎಚ್.ನರಸಿಂಹಯ್ಯ, ಸುರೇಶ್ ಹೆಬ್ಳೀಕರ್, ರಮೇಶ್ ರಾಮನಾಥನ್, ಕಲ್ಪನಾಕರ್, ನರೇಶ್ ವೆಂಕಟರಾಮನ್, ರವಿಚಂದರ್, ಅನುರಾಧ ಹೆಗಡೆ ಸದಸ್ಯರಾಗಿದ್ದರು. ಇನ್ಫೋಸಿಸ್ ನಾರಾಯಣ ಮೂರ್ತಿ, ಸುಧಾಮೂರ್ತಿ, ಬಯೋಕಾನ್‍ನ ಕಿರಣ್ ಮಜುಂದಾರ್ ಷಾ ಇದರ ಸಹಸದಸ್ಯರಾಗಿದ್ದರು.
ಪಾಲಿಕೆ ಸದಸ್ಯರನ್ನು ಹೊರಗಿಟ್ಟು ಇಂತಹ ಸಂಸ್ಥೆ ರಚಿಸುವ ಮೂಲಕ ಸರ್ಕಾರ ಚುನಾಯಿತ ವ್ಯವಸ್ಥೆಗೆ ಅಪಚಾರ ತರುತ್ತಿದೆ ಎಂಬ ವ್ಯಾಪಕ ಅಸಮಧಾನ ವ್ಯಕ್ತವಾಯಿತು. ಇದೊಂದು ಅಧಿಕಾರೇತರ ಸಂಸ್ಥೆಯಾಗಿದ್ದು ಪಾಲಿಕೆಯ ಆಡಳಿತ ನಿರ್ವಹಣೆಗೆ ಸಲಹೆ ನೀಡಲಿದೆ ಎಂದು ಅಂದಿನ ಸಿಎಂ ಎಸ್.ಎಂ.ಕೃಷ್ಣ ಹಲವು ಬಾರಿ ಹೇಳಿದರೂ ಯಾರೂ ಅದನ್ನು ಒಪ್ಪಲಿಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಚುನಾಯಿತ ಸದಸ್ಯರಿಗೆ ಮತ್ತು ಚುನಾಯಿತ ಮಂಡಳಿಗೆ ಪರಮಾಧಿಕಾರ ಇರಬೇಕು, ಇಂತಹ ಅಧಿಕಾರೇತರ ಸಂಸ್ಥೆಗಳ ಮೂಲಕ ಚುನಾಯಿತ ವ್ಯವಸ್ಥೆಗೆ ಧಕ್ಕೆ ತರಬಾರದೆಂಬ ಕೂಗು ಕೇಳಿಬಂತು. ಈ ವಸ್ತುಸ್ಥಿತಿಯನ್ನು ಅರಿತ ಎಸ್.ಎಂ.ಕೃಷ್ಣ ನಂತರ ತಮ್ಮ ಕನಸಿನ ಬಿಎಟಿಎಫ್‍ನಲ್ಲಿ ಪಾಲಿಕೆ ಸದಸ್ಯರು, ಮೇಯರ್ ಮತ್ತು ನಗರದ ಶಾಸಕರು, ಸಂಸದರ ಪಾಲ್ಗೊಳ್ಳುವಿಕೆಗೆ ಅವಕಾಶ ಕಲ್ಪಿಸಿದರು. 
ಈ ಕಾರ್ಯಪಡೆ ಬೆಂಗಳೂರಿಗೆ ನಿರ್ಮಲ ಬೆಂಗಳೂರು ಹೆಸರಲ್ಲಿ ಹಲವು ಶೌಚಾಲಯ, ಸ್ವಚ್ಚ ಬೆಂಗಳೂರು ಹೆಸರಲ್ಲಿ ಕಸವಿಲೇವಾರಿಗೆ ವೈಜ್ಞಾನಿಕ ಕ್ರಮ, ಆಸ್ತಿತೆರಿಗೆ ಪದ್ಧತಿ ಸರಳೀಕರಣಗೊಳಿಸಿ ಸ್ವಯಂ ಘೋಷಿತ ಆಸ್ತಿತೆರಿಗೆ ಪದ್ಧತಿ ಜಾರಿ, ಖಾಸಗಿ ಸಹಭಾಗಿತ್ವದಲ್ಲಿ ಬಸ್ ತಂಗುದಾಣಗಳ ನಿರ್ಮಾಣದಂತಹ ಹಲವು ಯೋಜನೆಗಳನ್ನು ರೂಪಿಸಿತು. ಶೌಚಾಲಯ ನಿರ್ಮಾಣ, ಪಾಲಿಕೆಯ ಶಾಲೆಗಳಲ್ಲಿ ಉತ್ತಮ ಶಿಕ್ಷಣ ನೀಡುವ ದೃಷ್ಠಿಯಿಂದ ಖಾಸಗಿ ವ್ಯಕ್ತಿಗಳು ಅಪಾರ ಪ್ರಮಾಣದ ದೇಣಿಗೆ ನೀಡುವ ಮೂಲಕ ಬಿಎಟಿಎಫ್ ಕಾರ್ಯ ವೈಖರಿ ಜನರ ಮೆಚ್ಚುಗೆಗೆ ಪಾತ್ರವಾಯಿತು. ಪಾಲಿಕೆ ಸದಸ್ಯರೂ ಕೂಡಾ ಇದರಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಇದು ತಮ್ಮ ವ್ಯವಸ್ಥೆಯ ಭಾಗವಾಗಿದೆ ಎಂದು ಪರಿಗಣಿಸುವ ಮೂಲಕ ಗೌರವಕ್ಕೆ ಪಾತ್ರರಾದರು. ಆದರೆ ರಾಜ್ಯದಲ್ಲಿ ಎಸ್.ಎಂ.ಕೃಷ್ಣ ಸರ್ಕಾರ ಪತನ ನಂತರ ಈ ಸಂಸ್ಥೆಯು ಅಂತ್ಯಗೊಂಡಿತು. 
ಆ ನಂತರದ ಸಮ್ಮಿಶ್ರ ಸರ್ಕಾರದಲ್ಲಿ ಇಂತಹ ಯಾವುದೇ ವ್ಯವಸ್ಥೆ ಬರಲಿಲ್ಲ. ಆದರೆ ಯಡಿಯೂರಪ್ಪ ನೇತೃತ್ವದ ಸರ್ಕಾರ ಅಸ್ಥಿತ್ವಕ್ಕೆ ಬಂದನಂತರ ತಾವೂ ಕೂಡಾ ಎಸ್.ಎಂ.ಕೃಷ್ಣ ಸರ್ಕಾರದ ಮಾದರಿಯಲ್ಲಿ ಮುನ್ನಡೆಯಬೇಕೆಂದು ಬಯಸಿ ಬೆಂಗಳೂರು ಮೂಲ ಸೌಲಭ್ಯ ಅಭಿವೃದ್ಧಿ ಕಾರ್ಯಪಡೆ ಅಬೈಡ್(ಂಃIಆಇ) ರಚಿಸಿದರು. ರಾಜ್ಯ ಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ನೇತೃತ್ವದಲ್ಲಿ ರಚನೆಗೊಂಡ ಈ ಕಾರ್ಯಪಡೆಗೆ ಆರ್.ಕೆ.ಮಿಶಾ,್ರ ಡಾ.ರವೀಂದ್ರ ಸೇರಿದಂತೆ ಹಲವಾರು ಸದಸ್ಯರಾಗಿದ್ದರು.
ಯಡಿಯೂರಪ್ಪ ನೇತೃತ್ವದಲ್ಲಿ ಎರಡು ಬಾರಿ ಅಬೈಡ್ ಸಭೆ ಸೇರಿತಾದರೂ ಮೇಯರ್ ಮತ್ತು ಒಂದಿಬ್ಬರು ಸದಸ್ಯರು ಹೊರತು ಪಡಿಸಿ ಬಿಬಿಎಂಪಿಯ ಯಾವುದೇ ಸದಸ್ಯರು ಪಾಲ್ಗೊಳ್ಳಲಿಲ್ಲ. ಈ ಸಮಿತಿ 2020ರ ನಗರ ಎಂಬ ಹೆಸರಲ್ಲಿ ನಗರಾಭಿವೃದ್ಧಿಗೆ ಕೈಗೊಳ್ಳಬೇಕಾದ ಯೋಜನೆಗಳ 160 ಪ್ರಚಾರ ವರದಿ ನೀಡಿದ್ದು ಬಿಟ್ಟರೆ ಬೇರೇನೂ ಮಾಡಲಿಲ್ಲ. ಬಿಎಟಿಎಫ್ ಬಗ್ಗೆ ಅಪಾರ ಮೆಚ್ಚುಗೆ ಹೊಂದಿದ್ದು ನಗರದ ಜನತೆ ಪಾಲಿಕೆಯ ಹಲವು ಸದಸ್ಯರು ಅಬೈಡ್ ಬಗ್ಗೆಯೂ ಅಂತಹುದೇ ನಿರೀಕ್ಷೆ ಹೊಂದಿದ್ದರು. ಆದರೆ ಇದು ರಾಜೀವ್ ಚಂದ್ರಶೇಖರ್ ಅವರ ಸ್ವಹಿತಾಸಕ್ತಿಯ ಯೋಜನೆಗಳ ಜಾರಿಗೆ ರಚಿತಗೊಂಡ ಸಂಸ್ಥೆ ಎಂದು ಮೊದಲ ಸಭೆಯಲ್ಲಿಯೇ ಸಾಬೀತಾಗಿ ಜನ ಮತ್ತು ಪಾಲಿಕೆ ಸದಸ್ಯರ ವಿಶ್ವಾಸ ಕಳೆದುಕೊಂಡಿತು. ಈ ಮೂಲಕ ರಾಜೀವ್ ಚಂದ್ರಶೇಖರ್, ನಗರದ ಅಭಿವೃದ್ಧಿಯ ಬಗ್ಗೆ ಕಾಳಜಿಯ ಮೂಲಕ ಅಂದಿನ ಸಿಎಂ ಯಡಿಯೂರಪ್ಪ ಸ್ಥಾಪಿಸಿದ್ದ ಸಂಸ್ಥೆಗೆ ಕಂಟಕಪ್ರಾಯರಾದರು. ಸಂಸ್ಥೆ ವರದಿ ಸಲ್ಲಿಸಿದ್ದು ಬಿಟ್ಟರೆ ಬೇರೆ ಯಾವುದೇ ಕೊಡುಗೆ ನೀಡದೆ ಜನರಲ್ಲಿ ನಿರಾಶೆ ಮೂಡಿಸಿತು.
ಇವರ ನಂತರ ಬಂದ ಸಿದ್ದರಾಮಯ್ಯ ಅಬೈಡ್ ಕಹಿನೆನಪಲ್ಲಿ ಇಂತಹ ಯಾವುದೇ ಸಂಸ್ಥೆ ಮಾಡುವುದು ಬೇಡ ಬಿಬಿಎಂಪಿ ಸದಸ್ಯರಿಗೆ ಪರಮಾಧಿಕಾರವಿರಲಿ ಚುನಾಯಿತ ಸಂಸ್ಥೆಗಳನ್ನು ಅಗೌರವಿಸುವುದು ಬೇಡ ಎಂದು ಹೇಳಿ ಅಂದು ಅಧಿಕಾರದಲ್ಲಿದ್ದ ಬಿಜೆಪಿ ನೇತೃತ್ವದ ಬಿಬಿಎಂಪಿಗೆ ಎಲ್ಲಾ ನೆರವು ನೀಡಿದರು. ಆದರೆ ಅಂದಿನ ಕೆಲವು ಸದಸ್ಯರ ದುರಾಡಳಿತ, ಯೋಚಿತವಲ್ಲದ ಆಡಳಿತ ನಿರ್ವಹಣೆಯ ಫಲವಾಗಿ ಪಾಲಿಕೆ ಆರ್ಥಿಕ ಅಶಿಸ್ತಿಗೆ ಸಿಲುಕಿದೆ. ದೈನಂದಿನ ವ್ಯವಹಾರ ನಿರ್ವಹಣೆಗೂ ಪಾಲಿಕೆ ಬಳಿ ಹಣವಿಲ್ಲದ ಸ್ಥಿತಿ ನಿರ್ಮಾಣವಾಯಿತು. ಅಂತಿಮವಾಗಿ ಪಾಲಿಕೆಯ ಸ್ಥಿರಾಸ್ತಿಗಳಾದ ಮೆಯೋಹಾಲ್, ಯುಟಿಲಿಟಿ ಟವರ್‍ಗಳಂತಹÀ ಕಟ್ಟಡಗಳನ್ನೂ ಒತ್ತೆ ಇಡುವ ಸ್ಥಿತಿಗೆ ತಲುಪಿತು. 
ಪಾಲಿಕೆ ಸದಸ್ಯರ ಇಂತಹ ಆಡಳಿತದಿಂದ ಅಸಮಧಾನಗೊಂಡ ಸಿಎಂ ತಾನೇ ಕೆಲವು ಸಭೆಗಳನ್ನು ಕರೆದು ವ್ಯವಸ್ಥೆಯನ್ನು ಸರಿದಾರಿಗೆ ತರುವ ಪ್ರಯತ್ನ ನಡೆಸಿದರು. ಕೆ.ಜೆ.ಜಾರ್ಜ್ ಅವರಿಗೆ ಈ ಕುರಿತಾದ ಜವಾಬ್ದಾರಿ ನೀಡಿದರು. ಆದರೆ ಅಂದಿನ ಪಾಲಿಕೆ ಸದಸ್ಯರು ಇವರ ಕನಸುಗಳಿಗೆ ಮತ್ತು ಆಡಳಿತಕ್ಕೆ ಸ್ಪಂದಿಲೇ ಇಲ್ಲ.
ಇದರಿಂದ ಅಸಮದಾನಗೊಂಡ ಸಿಎಂ, ಸಚಿವ ಕೆ.ಜೆ.ಜಾರ್ಜ್ ಅವರ ಸಲಹೆಯ ಮೇರೆಗೆ ನಗರದ ಎಲ್ಲಾ ಶಾಸಕರೊಂದಿಗೆ ಚರ್ಚೆ ನಡೆಸಿದರು. ಪಕ್ಷಾತೀತವಾಗಿ ಎಲ್ಲಾ ಶಾಸಕರೂ ಪಾಲಿಕೆಯ ಆಡಳಿತ ವೈಖರಿಗೆ ಅಸಮಧಾನ ವ್ಯಕ್ತಪಡಿಸಿದರು. ಪಾಲಿಕೆ ಸದಸ್ಯರ ಕಾರ್ಯವೈಖರಿಯಿಂದ ತಮಗೆ ಕ್ಷೇತ್ರದಲ್ಲಿ ತಲೆ ಎತ್ತಿ ಓಡಾಡದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಹಲವು ಮಂದಿ ಬಿಜೆಪಿ ಶಾಸಕರೇ ತಮ್ಮ ಪಕ್ಷದ ಸದಸ್ಯರ ವೈಖರಿಯ ಬಗ್ಗೆ ಸಿಎಂ ಬಳಿ ಅಳಲು ತೋಡಿಕೊಂಡರು.
ಪಾಲಿಕೆ ಬೃಹತ್ ಬೆಂಗಳೂರು ಪಾಲಿಕೆಯಾಗಿ ಮೇಲ್ದರ್ಜೆಗೇರಿದ ನಂತರ ಸದಸ್ಯರಾಗಿ ಬಂದ ಕೆಲವರ ವರ್ತನೆಯಿಂದಾಗಿ ನಗರಕ್ಕೆ ಕೆಟ್ಟ ಹೆಸರು ಬಂದಿದೆ. ಗಾರ್ಡನ್ ಸಿಟಿ ಎಂಬ ಹೆಗ್ಗಳಿಕೆ ಪಡೆದಿದ್ದ ನಗರ ಗಾರ್ಬೇಜು ಸಿಟಿ ಎಂಬ ಕುಖ್ಯಾತಿ ಪಡೆದಿದೆ. ಆಡಳಿತ ನಿರ್ವಹಣೆಯ ಎಲ್ಲಾ ಹಂತದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಸಿಎಂ ನೇತೃತ್ವದ ಸಭೆಯಲ್ಲಿ ತಮ್ಮ ನೋವು ತೆರೆದಿಟ್ಟರು. ಇದಕ್ಕೆ ಪರಿಹಾರ ರೂಢಿಸುವ ಜತೆಗೆ ನಗರದ ಅಭಿವೃದ್ಧಿಗೆ ಖಾಸಗಿ ಸಹಭಾಗಿತ್ವವೂ ಬೇಕು, ಸಲಹೆಯೂ ಬೇಕು ಎಂದು ಜಾರ್ಜ್ ಅವರ ಸಲಹೆಯಂತೆ ಈ ಹಿಂದಿನ ಬಿಎಟಿಎಫ್ ಮಾದರಿಯಲ್ಲಿ ವಿಷನ್ ಗ್ರೂಪ್ ರಚಿಸಿದರು.
ಇನ್ಫೋಸಿಸ್‍ನ ನಾರಾಯಣ ಮೂರ್ತಿ, ವಿಪ್ರೋ ಸಂಸ್ಥೆಯ ಅಜೀಂ ಪ್ರೇಮ್‍ಜಿ, ಬಯೋಕಾನ್‍ನ ಕಿರಣ್ ಮಜುಂದಾರ್, ಫ್ಲಿಪ್‍ಕಾರ್ಟ್‍ನ ಸಚಿವ ಬನ್ಸಾಲ್, ನಿವೃತ್ತ ಐ.ಎ.ಎಸ್. ಅಧಿಕಾರಿಗಳಾದ ಕೆ. ಜೈರಾಜು, ಬಿ.ಎಸ್.ಪಾಟೀಲ್, ನಗರ ಯೋಜನಾ ತಜ್ಞರಾದ ಸ್ವಾತಿ ರಾಮನಾಥನ್, ರಮೇಶ್ ರಾಮನಾಥನ್ ಕಲ್ಪನಾಕರ್, ಮೋಹನ್‍ದಾಸ್ ಪೈ, ಆರ್.ಕೆ.ಮಿಶ್ರಾ ಅವರನ್ನು ವಿಷನ್ ಗ್ರೂಪ್ ಒಳಗೊಂಡಿತ್ತು. ಬಿಎಟಿಎಫ್ ರೀತಿಯಲ್ಲೇ ಮೇಯರ್ ಹಾಗೂ ಪಾಲಿಕೆಯ ಕೆಲ ಸದಸ್ಯರು, ಬೆಂಗಳೂರಿನ ಸಚಿವರು, ಸಂಸದರಿಗೆ ಇದರಲ್ಲಿ ಅವಕಾಶ ನೀಡಲಾಯಿತು.
ಸಿಎಂ ಹಾಗೂ ಸಚಿವ ಕೆ.ಜೆ.ಜಾರ್ಜ್ ಅವರ ಆಸಕ್ತಿಯ ಪರಿಣಾಮವಾಗಿ ಈ ಎಲ್ಲಾ ಖ್ಯಾತ ನಾಮರು ತಮ್ಮ ಕೆಲಸದ ಒತ್ತಡದ ನಡುವೆಯೂ ಸಿಎಂ ನೇತೃತ್ವದಲ್ಲಿ ನಡೆದ ಹಲವು ಸಭೆಗಳಿಗೆ ಹಾಜರಾಗಿ ನಗರದ ಅಭಿವೃದ್ಧಿ ಯೋಜನೆಗಳಿಗೆ ಸಲಹೆ ನೀಡಿದರು. ಕಾಮಗಾರಿಗಳನ್ನು ಸೂಚಿಸಿದರು. ಸಂಪನ್ಮೂಲ ಕ್ರೂಢಿಕರಣಕ್ಕೆ ಸಲಹೆ ನೀಡಿದರು. ಮೂಲ ಸೌಲಭ್ಯ ಸೃಷ್ಟಿಯ ಹಲವು ಯೋಜನೆಗಳಿಗೆ ಆರ್ಥಿಕ ನೆರವು ಪ್ರಕಟಿಸಿದರು.
ಸದ್ಯ ಇರುವ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಪಾಲಿಕೆಯ ಆಡಳಿತ ಮಂಡಳಿ ಇವುಗಳ ಅನುಷ್ಠಾನಕ್ಕೆ ಮುಂದಾಗುತ್ತಿದ್ದಂತೆ ಚುನಾಯಿತ ಮಂಡಳಿಯನ್ನು ಧಿಕ್ಕರಿಸಲಾಗಿದೆ, ಪಾಲಿಕೆಯ ಆಡಳಿತಕ್ಕೆ ಕತ್ತರಿ ಹಾಕಲಾಗಿದೆ, ಪಾಲಿಕೆ ಅನುಮೋದನೆ ಇಲ್ಲದೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ವಿಷನ್ ಗ್ರೂಪ್ ಸೂಚಿಸಿದ ಕಾಮಗಾರಿಗೆ ರಾಜ್ಯ ಸರ್ಕಾರ ಹಣ ನೀಡಿದೆ, ಪಾಲಿಕೆಗೆ ಇವರಲ್ಲಿ ಯಾವುದೇ ಅಧಿಕಾರವಿಲ್ಲ ಎಂದು ಪ್ರತಿಭಟನೆ ಆರಂಭಿಸಿದ್ದಾರೆ.
ಇನ್ನು ಕೆಲವರು ವಾರ್ಡ್ ಸಮಿತಿ ರಚಿಸಿಲ್ಲ ನಾಗರೀಕರ ಕಲ್ಯಾಣ ಸಮಿತಿ ರಚಿಸುವುದು ಕೆಎಂಸಿ ಕಾಯಿದೆ ಅನ್ವಯ ಕಡ್ಡಾಯ ಅಂತಹ ಪ್ರಕ್ರಿಯೆ ಮೂಲಕ ಕಾನೂನು ಗೌರವಿಸಬೇಕಾದ ಸರ್ಕಾರ ಕಾನೂನು ಗಾಳಿಗೆ ತೂರಿ ವಿಷನ್ ಗ್ರೂಪ್ ರಚಿಸಲಾಗಿದೆ ಎಂದು ಪಾಲಿಕೆಯ ಕೆಲವು ಸದಸ್ಯರು ಬೇನಾಮಿ ಹೆಸರಲ್ಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಈ ಮೂಲಕ ವಿಷನ್ ಗ್ರೂಪ್‍ಗೆ ಕತ್ತರಿ ಹಾಕಲು ಹೊರಟಿದ್ದಾರೆ.
ಈ ಎಲ್ಲಾ ಬೆಳವಣಿಗೆ ಗಮನಿಸಿದರೆ ಜನರಲ್ಲಿ ಇಂತಹ ವ್ಯವಸ್ಥೆಗೆ ಕಡಿವಾಣ ಎಂದು ಎಂಬ ಪ್ರಶ್ನೆ ಏಳುತ್ತದೆ. ಪಾಲಿಕೆ ಸದಸ್ಯರ ಕೊರಳಿಗೆ ಗಂಟೆ ಕಟ್ಟುವರಾರು ಎನ್ನುತ್ತಿದ್ದಾರೆ. ಇದಕ್ಕೆ ಉತ್ತರವೂ ಅವರ ಬಳಿಯೇ ಇದೆ. ಚುನಾವಣೆ ಸಮಯದಲ್ಲಿ ಅಭ್ಯರ್ಥಿಗಳು ನೀಡುವ ಹಣ ಅಥವಾ ಇನ್ನಾವುದೇ ಆಮಿಷಕ್ಕೆ ಬಲಿಯಾಗಿ ಅರ್ಹರಲ್ಲದವರನ್ನು ಆಯ್ಕೆ ಮಾಡಿದರೆ ಉಂಟಾಗುವ ಪರಿಸ್ಥಿತಿಯೇ ಹೀಗೆ.
ಹೀಗಾಗಿ ಮತದಾರರು ಇಂತಹ ಆಮಿಷಗಳಿಗೆ ಬಲಿಯಾಗದೆ ಸರ್ಕಾರದ ಬಗ್ಗೆ ಯಾರಲ್ಲಿ ಕಾಳಜಿಯಿದೆ, ಯಾರು ನಮ್ಮ ವಾರ್ಡ್‍ನ ಸದಸ್ಯರಾಗಬೇಕು ಎಂದು ಯೋಚಿಸಿ ಮತದಾನ ಮಾಡಿದರೆ ಪಾಲಿಕೆ ಆಡಳಿತ ಸುಧಾರಿಸಲಿದೆ. ನಗರದ ಸೌಂದರ್ಯವೂ ಹೆಚ್ಚಲಿವೆ, ಪಾಲಿಕೆ ಸದಸ್ಯರು ಗೌರವಕ್ಕೂ ಪಾತ್ರರಾಗಲಿದ್ದಾರೆ.

Links :
ಸಂಬಂಧಿತ ಟ್ಯಾಗ್ಗಳು

ಸಂಬಂಧಿತ ಟ್ಯಾಗ್ಗಳನ್ನು ಲಭ್ಯವಿಲ್ಲಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇದರ ಬಗ್ಗೆ ಒಂದು ಗ್ರಂಥವನ್ನೇ ಬರೆಯಬಹುದು. ಹಿಂದೆ ಪಾಲಿಕೆ ಸದ್ಯಸರೇ ಬಹಳ ಪ್ರದೇಶದಲ್ಲಿ ಮುಂದೆ ಶಾಸಕರಾದ ನಿದರ್ಶನಗಳು ಇವೆ. ಮುಂದೆ ಸಚಿವರಾದ ನಿದರ್ಶನಗಳುೂ ಹಲವಾರು. ಆದರೆ ಈಗ ಸ್ಥಳೀಯ ಶಾಸಕರು ದಡ್ದರನ್ನ ಪಾಲಿಕೆ ಸದಸ್ಯತ್ವದ ಚುನಾವಣೆಗೆ ನಿಲ್ಲಲ್ಲು ಪ್ರೇರೇಪಿಸಿ ತಮ್ಮ ಪಕ್ಷ ದಲ್ಲೇ ಸೀಟು ಕೊಟ್ಟು ಸ್ಥಳೀಯ ಕೊಳಚೆ ಪ್ರದೇಶಗಳ ಜನರಿಗೆ ದುಡ್ದು ಕೊಟ್ಟು ವೋಟ್ ಹಾಕಿಸಿ ಗೆಲ್ಲುಸುತ್ತಾರೆ. ಅಂತಹ ಪಾಲಿಕೆ ಸದ್ಯಸರು ಹೆಚ್ಚು ಅಂದರೆ ೯ನೇ ತರಗತಿಗಿಂತ ಹೆಚ್ಚು ಒದಿರುವುದೇ ಇಲ್ಲ. ಅಂತಹ ಅನುಭವ ನಮ್ಮ ಕ್ಷೇತ್ರದಲ್ಲೇ ಆಗ್ತಾ ಇದೆ. ಈ ಕ್ಷೇತ್ರದಲ್ಲಿ ೩ ಬಡಾವಣೆಯಲ್ಲಿ ಇದೇ ರೀತಿ ೯ ನೇ ತರಗತಿಗಿಂತ ಕಡಿಮೆ ಓದಿರುವವರೇ. ಓದಿರುವವರು ಚುನಾವಣೆಯಲ್ಲಿ ಭಾಗವಹಿಸೋಲ್ಲ ಅಂಥ ಅಲ್ಲ. ಅವರಿಗೆ ಯೋಗ್ಯತೆನೇ ಇಲ್ಲ ಎನ್ನುವಂತ ಅವಮಾನ ಮಾಡಿ ಕಳುಹಿಸುತ್ತಾರೆ. ಓದಿರುವವರು ಬಂದರೆ ಅವರನ್ನು ಪ್ರಶ್ನಿಸುತ್ತಾರೆ ಎಂಬ ಭಯ ಒಂದು ಕಡೆಯಾದರೆ ಇನ್ನೊಂದು ಕಡೆ ಆ ವ್ಯಕ್ತಿ ಮುಂದೆ ಎಮ್.ಎಲ್.ಎ ಚುನಾವಣೆಯಲ್ಲಿ ಭಾಗವಹಿಸಿದರೆ, ಗೆದ್ದರೆ ತಮ್ಮ ಮನೆಯವರಿಗೆ ಟಿಕೆಟ್ ಕೊಡಿಸುವುದು ಹೇಗೆ? ಅವರ ವಂಶಪಾರಂಪರ್ಯ ರಾಜಕೀಯ ಬೆಳೆಯುವುದು ಹೇಗೆ? ಹಾಗೆ ಹಣ ಮಾಡುವುದು ಹೇಗೆ? ಓದಿರುವವರಿಗೆ ಟಿಕೆಟ್ ಕೊಟ್ಟರೆ ಹಣ ಮಾಡಲು ಸಾಧ್ಯವಿಲ್ಲ. ಹೆಡ್ಡನಾದರೆ ಎಲ್ಲಂದರಲ್ಲಿ ಸಹಿ ಮಾಡುತ್ತಾನೆ. ಕಡಿಮೆ ಓದಿರುವವರು ಯಾರು ಸಮಾಜ ಸೇವೆ ಮಾಡಿರುವವರು ಬಹಳ ಬಹಳ ಕಡಿಮೆ. ಅದಲ್ಲದೆ ಹೆಣ್ಣುಮಕ್ಕಳನ್ನು ನೋಡಿದರಂತೂ ಅವರಿಗೆ ಆಗೋ ದೇ ಇಲ್ಲ. ಏಕೆಂದರೆ ಅವರ ಮನೆಯ ಹೆಣ್ಣುಮಕ್ಕಳು ಶಾಲೆಗೆ ಹೋಗಿರುವುದೇ ಕಡಿಮೆ. ಹಾಗಾಗಿ ಬೇರೆ‌ ಹೆಣ್ಣು ಮಕ್ಕಳ ದೈರ್ಯವನ್ನು, ಮುಂದಾಳತ್ವ ವನ್ನು ಸಹಿಸುವುದಿಲ್ಲ. ಅವರೆ ಏಕೆ ಅಲ್ಲಿನ ಎಮ್.ಎಲ್.ಎ ನ್ನೂ ಇಷ್ಟ ಪಡೋಲ್ಲಾ. ಎಕೆಂದರೆ ಬೇರೆ ಹೆಣ್ಣುಮಕ್ಕಳು ಚುನಾವಣೆಗೆ‌‌ ನಿಂತರೆ, ತಮ್ಮ ಹೆಣ್ಣು ಮಕ್ಕಳ ಗತಿ ಏನು? ಬೇರೆ ಹೆಣ್ಣು ಮಕ್ಕಳಿಗೆ ನೀವೆಲ್ಲಾ ರಾಜಕೀಯಕ್ಕೆ ಯಾಕೆ ಬರುತ್ತೀರಿ ಮನೆಯಲ್ಲಿ ಆರಾಮವಾಗಿ ಅಡಿಗೆ ಮಾಡಿಕೊಂಡು ಗಂಡ ಮಕ್ಕಳನ್ನು ನೋಡಿಕೊಂಡಿರಿ, ಎಂದು ಹೇಳುತ್ತಾರೆ. ಇದೆಲ್ಲಾ ಪೂರ್ವ ನಿರ್ಧಾರಿತ ಯೋಚನೆಗಳು ಮತ್ತು ಸಿಧ್ದತೆಗಳು. ಇಷ್ಟೇ ಅಲ್ಲ ಅವರ ಕ್ಷೇತ್ರದಲ್ಲಿ ಅಲ್ಲಲ್ಲಿ ಅವರ ಜಾತಿಯವರದೇ ಆದ ಕೆಲವು ಗುಂಪುಗಳನ್ನು ತಯ್ಯಾರಿ ಮಾಡಿರುತ್ತಾರೆ. ಅಲ್ಲದೆ ಅವರ ಪಕ್ಷದಲ್ಲಿ ಸಣ್ಣ ಪುಟ್ಟ ಸ್ಥಾನವನ್ನು ಕೊಟ್ಟು ಮೂಗಿಗೆ ತುಪ್ಪ ಸವರಿರುತ್ತಾರೆ. ಇದರಿಂದ ಬೇರೆ ಯಾರು ಚುನಾವಣೆಗೆ ನಿಂತರೂ ಗೆಲ್ಲೋಲ್ಲಾ. ಗೆಲ್ಲಲ್ಲ ಅಂದ ಮೇಲೆ ಯಾರೂ ನಿಲ್ಲೋಲ್ಲ. ಇದೆಲ್ಲಾ ಒಂದು ಸಣ್ಣ ಕಾರಣಗಳು.
  • ಪಾರ್ವತಿ ಶ್ರೀರಾಮ
  • ಸಮಾಜ ಸೇವೆ