ಸಾಲ ಕೊಟ್ಟ ಮ್ಯಾನೇಜರ್ ನನ್ನೇ ಮುಗಿಸಿದರು

Kannada News

30-08-2017 412

ಬೆಂಗಳೂರು: ಸುಧಾ ಕೋ-ಆಪರೇಟಿವ್ ಬ್ಯಾಂಕ್ ಮ್ಯಾನೇಜರ್ ಮುನಿಯಪ್ಪ ಅವರಿಗೆ ವಿಷ ಕುಡಿಸಲು ಯತ್ನಿಸಿ, ನಂತರ ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದ ಮೂವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.

ಸುಂಕದಕಟ್ಟೆಯ ಲಕ್ಷ್ಮಣನಗರದ ಪ್ರದೀಪ್ ಅಲಿಯಾಸ್ ಬುಲ್ಲಿ (25), ಶ್ರೀಗಂಧ ನಗರದ ಮಹೇಶ್ ಕುಮಾರ್ ಅಲಿಯಾಸ್ ಅಪ್ಪಿ (24) ಮತ್ತು ಸಂಜೀವಿನಿ ನಗರದ ಅಭಿಲಾಷ್ ಗೌಡ ಅಲಿಯಾಸ್ ಆದಿ (21) ಬಂಧಿತ ಆರೋಪಿಗಳಾಗಿದ್ದು, ಕೃತ್ಯದಲ್ಲಿ ಭಾಗಿಯಾಗಿದ್ದ ಸುಂಕದಕಟ್ಟೆಯ ಶ್ರೀನಿವಾಸನಗರದ ತಿಲಕ್(36)ಈಗಾಗಲೇ ನ್ಯಾಯಾಲಯಕ್ಕೆ ಶರಣಾಗಿದ್ದು ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿದೆ ಎಂದು ಡಿಸಿಪಿ ಅನುಚೇತ್ ತಿಳಿಸಿದ್ದಾರೆ.

ರಿಯಲ್ ಎಸ್ಟೇಟ್ ವ್ಯವಹಾರದ ಸಲುವಾಗಿ ಆರೋಪಿ ತಿಲಕ್, ಪರಿಚಯವಿದ್ದ ಮ್ಯಾನೇಜರ್ ಮುನಿಯಪ್ಪ ಅವರ ಮುಖಾಂತರ 1 ಕೋಟಿ 5 ಲಕ್ಷ ರೂ. ಸಾಲ ಪಡೆದಿದ್ದರು. ಸರಿಯಾಗಿ ಸಾಲ ಬಡ್ಡಿ ನೀಡದಿದ್ದರಿಂದ ಮುನಿಯಪ್ಪ ಅವರು, ಸಾಲ ಹಾಗೂ ಸಾಲದ ಬಡ್ಡಿಯನ್ನು ತೀರಿಸುವಂತೆ ತಿಲಕ್‍ ಗೆ ಆಗಾಗ ಒತ್ತಾಯಿಸುತ್ತಿದ್ದರು. ಆದರೂ ತಿಲಕ್ ಹಣ ಪಾವತಿಸಿದ್ದರಿಂದ 15 ದಿನಗಳ ಹಿಂದೆ ಇಬ್ಬರ ನಡುವೆ ಜಗಳ ಉಂಟಾಗಿತ್ತು.

1 ಕೋಟಿ 5 ಲಕ್ಷ ರೂ. ಸಾಲದ ಬಡ್ಡಿ ಬೃಹದಾಕಾರವಾಗಿ ಬೆಳೆದಿದ್ದು, ನಿನಗೆ ಸಾಲ ಕೊಡಿಸಿದ ಹಣದಲ್ಲಿ ಪ್ರತಿ ತಿಂಗಳು ಸುಮಾರು 22 ಲಕ್ಷ ಬಡ್ಡಿ ಕೊಡಬೇಕಾಗುತ್ತಿದೆ ಅದು ನನ್ನಿಂದ ಸಾಧ್ಯವಾಗುತ್ತಿಲ್ಲದಿರುವುದರಿಂದ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮುನಿಯಪ್ಪ ಹೇಳುತ್ತಿರುವುದನ್ನು ತಿಲಕ್ ಸೂಕ್ಷ್ಮವಾಗಿ ಪರಿಗಣಿಸಿ ಮುನಿಯಪ್ಪ ಅವರನ್ನು ಆತ್ಮಹತ್ಯೆ ರೀತಿ ಕೊಲೆ ಮಾಡಲು ಸಂಚು ರೂಪಿಸಿದ್ದನು.

ಅದರಂತೆ ಜಿಗಣಿಯ ಫರ್ಟಿಲೈಜರ್ಸ್ ಅಂಗಡಿಯಲ್ಲಿ ವಿಷದ ಬಾಟಲಿ ಖರೀದಿಸಿ ತನ್ನ ಕಾರಿನಲ್ಲಿಟ್ಟುಕೊಂಡು ಕಳೆದ ಆಗಸ್ಟ್ 14 ರಂದು ಫಾರಂ ಹೌಸ್‍ ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಮಹೇಶ್, ಸುಂಕದಕಟ್ಟೆಯಲ್ಲಿ ತನ್ನ ಮನೆ ಬಳಿ ವಾಸಿಸುತ್ತಿದ್ದ ಮತ್ತೊಬ್ಬ ಆರೋಪಿ ಅಭಿಲಾಶ್ ನನ್ನು ಕರೆಸಿಕೊಂಡು, ಪ್ರಮುಖ ಆರೋಪಿ ಪ್ರದೀಪ್ ಜೊತೆ ಸೇರಿ, ಮರುದಿನ ತಿಲಕ್ ಅವರ ಬ್ಯಾಟರಾಯನ ದೊಡ್ಡಿಯಲ್ಲಿರುವ  ಗೆಸ್ಟ್ ಹೌಸ್‍ ಗೆ ಹಣ ಕೊಡುವುದಾಗಿ ಮುನಿಯಪ್ಪ ಅವರನ್ನು ಕರೆದೊಯ್ದಿದ್ದಾರೆ.

ಅಲ್ಲಿ ಮುನಿಯಪ್ಪ ಅವರಿಗೆ ವಿಷ ಕುಡಿಸಿ ಕೊಲೆ ಮಾಡಲು ಯತ್ನಿಸಿದ್ದು, ಮುನಿಯಪ್ಪ ಅವರು ವಿಷ ಕುಡಿಯಲು ಪ್ರತಿರೋಧ ತೋರಿದಾಗ ಕುತ್ತಿಗೆ ಬಿಗಿದು ಕೊಲೆ ಮಾಡಿ, ಅವರು ಬಂದಿದ್ದ ಅಲ್ಟೋ ಕಾರಿನಲ್ಲಿ ಮೃತದೇಹವನ್ನು ಹಾಕಿಕೊಂಡು ಮಾಳಗಾಳದ ಅಂಡರ್ ಪಾಸ್ ಬಳಿ ಕಾರಿನಲ್ಲಿ ಮೃತದೇಹ ಮಲಗಿಸಿದಂತೆ ಮಾಡಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವಂತೆ ಸನ್ನವೇಶ ಸೃಷ್ಠಿಸಿ ಬಿಟ್ಟುಹೋಗಿದ್ದರು.

ಈ ಸಂಬಂಧ ಮುನಿಯಪ್ಪ ಅವರ ಪತ್ನಿ ಮಮತಾ ಅವರು ನೀಡಿರುವ ದೂರು ದಾಖಲಿಸಿದ ಕಾಮಾಕ್ಷಿಪಾಳ್ಯ ಪೊಲೀಸರು ಅಲ್ಟೋಕಾರು ಸಂಚರಿಸಿದ ರಸ್ತೆಗಳ ಟೋಲ್ ಬಳಿಯ ಸಿಸಿ ಟಿವಿ ದೃಶ್ಯಾವಳಿಪರಿಶೀಲಿಸಿ ಅದರ ಹಿಂದೆ ಬರುತ್ತಿದ್ದ ಇನ್ನೋವ ಕಾರನ್ನು ಪರಿಶೀಲಿಸಿ ಅದು ಸಂಚರಿಸಿದ ಮಡಿಕೇರಿ. ಗೋವಾ, ಮಂಗಳೂರು, ತಮಿಳುನಾಡಿನಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಪೊಲೀಸರು ಬೆನ್ನತ್ತಿದ್ದದ್ದನ್ನು ತಿಳಿದು ತಿಲಕ್ ಕಳೆದ ಆಗಸ್ಟ್ 21ರಂದು ನ್ಯಾಯಾಲಯಕ್ಕೆ ಶರಣಾಗಿದ್ದು, ಅವರನ್ನು ವಶಕ್ಕೆ ತೆಗೆದುಕೊಂಡು ಉಳಿದವರನ್ನು ಬಂಧಿಸಲಾಯಿತು ಎಂದು ಅವರು ತಿಳಿಸಿದ್ದಾರೆ. ಮುನಿಯಪ್ಪ ಅವರ ಕಾರಿನಲ್ಲಿ  ದೊರೆತ ಶರ್ಟ್ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.




ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ