ತಂದೆ-ತಾಯಿ ಚಿಕಿತ್ಸೆಗಾಗಿ ಕಳ್ಳತನ !

Kannada News

30-08-2017

ಬೆಂಗಳೂರು: ತಂದೆ-ತಾಯಿಯ ಕ್ಯಾನ್ಸರ್ ಚಿಕಿತ್ಸೆಗೆ ಹಣ ಹೊಂದಿಸಲು ರಾತ್ರಿ ಪಾಳಯದ ಸೆಕ್ಯೂರಿಟಿ ಕೆಲಸಕ್ಕೆ ಸೇರಿ, ಕಾವಲು ಕಾಯುತ್ತಾ ಕಂಪನಿಗಳಿಗೆ ನುಗ್ಗಿ ಲ್ಯಾಪ್‍ಟಾಪ್ ಇನ್ನಿತರ ಬೆಲೆ ಬಾಳುವ ಎಲೆಕ್ಟ್ರಾನಿಕ್ ವಸ್ತುಗಳನ್ನು ಕಳವು ಮಾಡುತ್ತಿದ್ದ ತ್ರಿಪುರ ಹಾಗೂ ಅಸ್ಸಾಂ ಮೂಲದ ಇಬ್ಬರು ಕುಖ್ಯಾತ ಕಳ್ಳರನ್ನು ಬಂಧಿಸುವಲ್ಲಿ ಜೆಪಿನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೇಗೂರಿನ ಪರೇಸ್ ಕುಮಾರ್ ಸಿನ್ಹ ಅಲಿಯಾಸ್ ಬಿಜು (38), ಎಲೆಕ್ಟ್ರಾನಿಕ್ ಸಿಟಿಯ ಬಿಜಯ್ ದಾಸ್ ಅಲಿಯಾಸ್ ಬಿಜಯ್ (34) ಬಂಧಿತ ಅಂತರರಾಜ್ಯ ಕಳ್ಳರಾಗಿದ್ದು ಇವರಿಂದ 25 ಲಕ್ಷ ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರಲ್ಲಿ ಬಿಜು ತ್ರಿಪುರಾದನಾದರೆ, ಬಿಜಯ್ ದಾಸ್ ಒರಿಸ್ಸಾದವನು. ಆರೋಪಿ ಪರೇಸ್ ಕುಮಾರ್ ತಂದೆ-ತಾಯಿಗೆ ಕ್ಯಾನ್ಸರ್ ಇದ್ದು, ಅದರ ಚಿಕಿತ್ಸೆಯ ವೆಚ್ಚ ಭರಿಸಲು ಬಿಜಯ್ ದಾಸ್ ನೊಂದಿಗೆ ಸೇರಿ ಕಳ್ಳತನಕ್ಕಿಳಿದಿರುವುದು ತನಿಖೆಯಲ್ಲಿ ಕಂಡು ಬಂದಿದೆ ಎಂದು ಡಿಸಿಪಿ ಡಾ. ಎಸ್.ಡಿಶರಣಪ್ಪ ತಿಳಿಸಿದರು.

ಅಸ್ಸಾಂ, ತ್ರಿಪುರ ಮೂಲದ ಇಬ್ಬರು ಅಂತರರಾಜ್ಯ ಕಳ್ಳರ ಬಂಧನದಿಂದ ಕಳೆದ ಜು. 15ರ ರಾತ್ರಿ ಜೆಪಿನಗರದ 3ನೇ ಹಂತದ ಕಂಪನಿಯೊಂದರಲ್ಲಿ ನಡೆದಿದ್ದ 21 ಲ್ಯಾಪ್‍ಟಾಪ್‍ಗಳು, 15 ಟ್ಯಾಬ್, 2 ಮೊಬೈಲ್ ಕಳವು ಪ್ರಕರಣ ಪತ್ತೆಯಾಗಿದೆ. ಆರೋಪಿಗಳಿಬ್ಬರು ಸೆಕ್ಯೂರಿಟ್ ಏಜೆನ್ಸಿಯವರಿಗೆ ಮೊಬೈಲ್ ಸಂಖ್ಯೆ ಮಾತ್ರ ನೀಡಿ ರಾತ್ರಿಪಾಳಯದಲ್ಲಿ ಕೆಲಸ ಮಾಡುವುದಾಗಿ ಸೇರಿಕೊಳ್ಳುತ್ತಿದ್ದರು. ಸಾಫ್ಟ್ ವೇರ್ ಕಂಪನಿಗಳ ಕಚೇರಿಗಳಿರುವ ಕಟ್ಟಡಗಳಲ್ಲಿ ಕಾವಲುಗಾರರಾಗಿ ಕೆಲಸ ಮಾಡುತ್ತ ಅಲ್ಲಿನ ಮಾಹಿತಿಗಳನ್ನೆಲ್ಲ ತಿಳಿದುಕೊಂಡು 3-4 ದಿನಗಳಲ್ಲೇ ಕಳವು ಮಾಡುತ್ತಿದ್ದರು. ಬಂಧಿತರಿಂದ 25 ಲಕ್ಷ ಮೌಲ್ಯದ 24 ಲ್ಯಾಪ್ಟಾಪ್, 12 ಟ್ಯಾಬ್, 10 ಮಾನಿಟರ್, 2 ಮೊಬೈಲ್, 1 ಪ್ರೊಜೆಕ್ಟರ್ ವಶಪಡಿಸಿಕೊಳ್ಳಲಾಗಿದೆ ಎಂದರು.

ರಿಲೇ 2 ಇಂಡಿಯಾ ಕಂಪನಿಯಲ್ಲಿ ನಡೆದಿದ್ದ ಕಳ್ಳತನದ ಪತ್ತೆಗೆ ಜಯನಗರ ಎಸಿಪಿ ಶ್ರೀನಿವಾಸ್, ಜೆಪಿನಗರ ಇನ್ಸ್ ಪೆಕ್ಟರ್ ಹಿತೇಂದ್ರ ಅವರ ನೇತೃತ್ವದಲ್ಲಿ ರಚಿಸಿದ್ದ ವಿಶೇಷ ಪೊಲೀಸ್ ತಂಡ ಸ್ಥಳದಲ್ಲಿನ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಅದರಲ್ಲಿ ಇಬ್ಬರು ಕೃತ್ಯ ನಡೆಸಿರುವುದು ಪತ್ತೆಯಾಯಿತು. ಅದರಲ್ಲಿ ಒಬ್ಬ ಹೆಲ್ಮೆಟ್ ಹಾಕಿಕೊಂಡಿದ್ದರೆ, ಮತ್ತೊಬ್ಬ ಸೆಕ್ಯುರಿಟಿ ಸಮವಸ್ತ್ರವನ್ನು ಧರಿಸಿದ್ದ. ಈ ಸುಳಿವನ್ನಾಧರಿಸಿ ಕಾರ್ಯಾಚರಣೆ ನಡೆಸಿದಾಗ ಕಟ್ಟಡದಲ್ಲಿ ಕಾವಲಿಗಿದ್ದ ಸೆಕ್ಯುರಿಟ್ ಗಾರ್ಡ್ ಒಬ್ಬ ಏಜೆನ್ಸಿಗೆ ಯಾವುದೇ ಗುರುತಿನ ಪತ್ರ ನೀಡದೆ ಮೊಬೈಲ್ ಸಂಖ್ಯೆಯನ್ನು ಮಾತ್ರ ನೀಡಿ ಕೆಲಸಕ್ಕೆ ಸೇರಿರುವುದು ಪತ್ತೆಯಾಯಿತು. ಆತನ ಮೊಬೈಲ್ ನಂಬರ್ ಆಧರಿಸಿ ತನಿಖೆ ಕೈಗೊಂಡಾಗ 2 ದಿನಗಳ ಹಿಂದಷ್ಟೇ ರಿಲೇ 2 ಇಂಡಿಯಾ ಕಂಪನಿಯಿದ್ದ ಕಟ್ಟಡಕ್ಕೆ ರಾತ್ರಿ ಪಾಳಯದ ಸೆಕ್ಯೂರಿಟಿಯಾಗಿ ಪರೇಸ್ ಕುಮಾರ್ ಸಿನ್ಹಾ ಸೇರಿಕೊಂಡಿರುವುದು ಪತ್ತೆಯಾಯಿತು. ಕಾರ್ಯಾಚರಣೆ ತೀವ್ರಗೊಳಿಸಿದ ತಂಡವು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ