ಪಠ್ಯ ಪುಸ್ತಕ ಪರಿಷ್ಕರಣೆ

Kannada News

18-03-2017 2064

ಐಷಾರಾಮಿ ಮದುವೆಗಳಿಗೆ ಕಡಿವಾಣ, ಮೂಡನಂಬಿಕೆ ನಿಷೇಧ, ಟಿಪ್ಪು ಜಯಂತಿ ಮೊದಲಾದ ವಿವಾದಗಳು ರಾಜ್ಯದಲ್ಲಿ ತೀವ್ರ ರೀತಿಯ ವಾದ-ಪ್ರತಿವಾದಕ್ಕೆ ಕಾರಣವಾಗಿರುವ ಬೆನ್ನಲ್ಲೇ ಇದೀಗ ಪಠ್ಯ ಪುಸ್ತಕ ಪರಿಷ್ಕರಣೆ ದೊಡ್ಡ ವಿವಾದವಾಗಿ ಪರಿಣಮಿಸಿದೆ. ಪ್ರಾಥಮಿಕದಿಂದ ಪ್ರೌಡಶಿಕ್ಷಣದವರೆಗೆ ಪಠ್ಯ ಪುಸ್ತಕದಲ್ಲಿ ಅಮೂಲಾಗ್ರವಾಗಿ ಬದಲಾವಣೆ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರ ಬರುವ ಶೈಕ್ಷಣಿಕ ವರ್ಷದಿಂದ ನೂತನ ಪಠ್ಯ ಕ್ರಮವನ್ನು ಜಾರಿ ಗೊಳಿಸಲು ಮುಂದಾಗಿದೆ. 
ಸರ್ಕಾರದ ಈ ನಿರ್ಧಾರಕ್ಕೆ ಬಿಜೆಪಿ, ಎಬಿವಿಪಿ ಸೇರಿದಂತೆ ಸಂಘಪರಿವಾರದ ಅಂಗ ಸಂಘಟನೆಗಳು ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದು, ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಮತ್ತು ರಾಜ್ಯಪಾಲ ವಜೂಬಾಯಿವಾಲ ಅವರಿಗೆ ದೂರು ನೀಡಿವೆ. ರಾಜ್ಯ ಸರ್ಕಾರ ಸಮಗ್ರ ಚರ್ಚೆ, ಪರ- ವಿರೋಧದ ಅಭಿಪ್ರಾಯ ಆಲಿಸದೇ ಪಠ್ಯ ಕ್ರಮವನ್ನು ಬದಲಾವಣೆ ಮಾಡಲು ಹೊರಟಿದೆ, ಮುಂಜಾಗ್ರತೆಯಿಲ್ಲದೆ ಕೈಗೊಂಡಿರುವ ನಿರ್ಧಾರ ಮಕ್ಕಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ, ಅಲ್ಲದೇ ಪಠ್ಯ ಕ್ರಮ ಬದಲಾವಣೆ ಮಾಡುವ ಸಮಯದಲ್ಲಿ ಈ ಸಂಬಂಧ ಇರುವ ಎಲ್ಲಾ ಮಾರ್ಗ ಸೂಚಿಗಳನ್ನು ಗಾಳಿಗೆ ತೂರಲಾಗಿದೆ. ಪಠ್ಯ ಪುಸ್ತಕ ಬದಲಾವಣೆಗೆ ತಮಗೆ ತೋಚಿದಂದೆ ಮಾಡಲು ಯಾವುದೇ ಸರ್ಕಾರಕ್ಕೂ ಅವಕಾಶವಿಲ್ಲ. ಇದಕ್ಕೆ ಆದ ನಿಯಮಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸಿದೆ. ಅದರ ಆಧಾರದಲ್ಲಿಯೇ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಬೇಕು ಎನ್ನುವುದು ವಿರೋಧಿಸುತ್ತಿರುವವರ ವಾದವಾಗಿದೆ. ಹಾಗೆಯೇ ರಾಜ್ಯಸರ್ಕಾರ ಇದನ್ನು ಪಾಲಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಪಠ್ಯ ಪುಸ್ತಕ ಪರಿಷ್ಕರಣೆ ಇದೀಗ ದೊಡ್ಡ ವಿವಾದವಾಗಲು ಪ್ರಮುಖ ಕಾರಣ, ಇದಕ್ಕಾಗಿ ರಚಿಸಿದ ಹಿರಿಯ ಸಾಹಿತಿ, ಪ್ರಗತಿಪರ ಚಿಂತಕ ಡಾ|| ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿಯ ಶಿಪಾರಸ್ಸುಗಳು. 
ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ ಪಠ್ಯ ಪುಸ್ತಕದಲ್ಲಿ ಇತಿಹಾಸ ತಿರುಚಲಾಗಿದೆ ಕೆಲವೆಡೆ ವೈಭವೀಕರಣ ಮಾಡಲಾಗಿದೆ, ಮಕ್ಕಳಿಗೆ ನೈತಿಕ ಶಿಕ್ಷಣ, ಜೀವನಾನುಭವ, ದೇಶಭಕ್ತಿ ತಿಳಿಸುವ ಪಠ್ಯಕ್ರಮವಿಲ್ಲ. ಹೀಗಾಗಿ ಪಠ್ಯ ಪುಸ್ತಕವನ್ನು ಬದಲಾಯಿಸ ಬೇಕಾದ ಅಗತ್ಯವಿದೆ ಎಂದು ಹೇಳಿ 2005ರ ಶಿಕ್ಷಣ ನೀತಿಯ ಹೆಸರಲ್ಲಿ ರಾಜ್ಯ ಸರ್ಕಾರ ಪಾಥಮಿಕ ಮತ್ತು ಪ್ರೌಢಶಿಕ್ಷಣ ಪಠ್ಯ ಕ್ರಮವನ್ನು ಬದಲಾಯಿಸಿತು.
ಈ ಬದಲಾವಣೆಗೆ ಹಿರಿಯ ಶಿಕ್ಷಣ ತಜ್ಞ, ಸಂಘಪರಿವಾರದ ಬಗ್ಗೆ ಒಲವುಳ್ಳ ಕರಾವಳಿ ಭಾಗಕ್ಕೆ ಸೇರಿದ್ದ ಮುಡಂಬಡಿತಾಯ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ ಅವರ ಶಿಪಾರಸ್ಸುಗಳನ್ನು ಪಡೆದು ಪಠ್ಯ ಕ್ರಮದಲ್ಲಿ ವ್ಯಾಪಕ ಮಾರ್ಪಾಡು ಮಾಡಲಾಯಿತು. ಅಂದು ಶಿಕ್ಷಣ ಸಚಿವರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಈ ನಿರ್ಧಾರದ ವಿರುದ್ದ ವ್ಯಾಪಕವಾದ ಪ್ರತಿರೋಧ ವ್ಯಕ್ತವಾದರೂ ಸರ್ಕಾರ ಟೀಕೆಗಳಿಗೆ, ವಿರೋಧಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ದೇಶ ಭಕ್ತಿ ಮತ್ತು ನೈತಿಕ ಶಿಕ್ಷಣದ ಹೆಸರಲ್ಲಿ ಇಡೀ ಪಠ್ಯಕ್ರಮ ಕೇಸರೀಕರಣವಾಗಿದೆ, ಕರಾವಳಿ ಭಾಗದ ಲೇಖಕರ, ಕವಿಗಳ ಕೃತಿಗಳಿಗೆ ಪಠ್ಯಪುಸ್ತಕದಲ್ಲಿ ಹೆಚ್ಚಿನ ಆದ್ಯಯತೆ ನೀಡಲಾಗಿದೆ ಎಂದು ಮಾಜ ಶಿಕ್ಷಣ ಮಂತ್ರಿ ಹೆಚ್. ವಿಶ್ವನಾಥ್ ಸೇರಿದಂತೆ ಕೆಲ ಕಾಂಗ್ರೆಸ್ ನಾಯಕರು ಮತ್ತು ವಿಚಾರವಾದಿಗಳು ರಾಜ್ಯ ಸರ್ಕಾರದ ವಿರುದ್ದ ದೊಡ್ಡ ರೀತಿಯಲ್ಲಿ ಬಂಡಾಯ ಸಾರಿದ್ದರು.
ಆಗ ಪ್ರತಿಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ವಿಚಾರ ವಾದಿಗಳ ವಾದಕ್ಕೆ ಧ್ವನಿ ಗೂಡಿಸಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ಥಿತ್ವಕ್ಕೆ ಬಂದರೆ ಪಠ್ಯ ಕ್ರಮದಲ್ಲಿರುವ ಕೇಸರಿಕರಣದ ಅಂಶವನ್ನೆಲ್ಲಾ ತೆಗೆದು ಹಾಕಿ ಪುಸ್ತಕ ಪರಿಷ್ಕರಣೆ ಮಾಡಲಾಗುವುದು, ಎಳೆಯ ವಯಸ್ಸಿನಲ್ಲೇ ಬೇಧ-ಬಾವ ಬಿತ್ತುವ ಪಾಠ-ಪ್ರವಚನಗಳಿಗೆ ಅವಕಾಶ ನೀಡುವುದಿಲ್ಲ ಎಂದು ಘೋಷಿಸಿದ್ದರು.
ಅದರಂತೆ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪಠ್ಯ ಪುಸ್ತಕ ಪರಿಷ್ಕರಣೆಗೆ ನಿರ್ಧರಿಸಿದರು. 2012ರಲ್ಲಿ ಕೇಂದ್ರ ಸರ್ಕಾರ ರೂಪಿಸಿದ ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಬೇಕಿದೆ ಎಂದು ಹೇಳಿದ ಅವರು ಖ್ಯಾತ ವಿಚಾರವಾದಿ ಡಾ|| ಬರಗೂರು ರಾಮಚಂದ್ರಪ್ಪ ನೇತೃತ್ವದಲ್ಲಿ ಪಠ್ಯ ಪುಸ್ತಕ ಪರಿಷ್ಕರಣ ಸಮಿತಿ ರಚಿಸಿದರು.
ಸಮಿತಿಯ ಅಧ್ಯಕ್ಷರಾಗಿ ಬರಗೂರು ರಾಮಚಂದ್ರಪ್ಪ ಮೊದಲಿಗೆ ಕೈಗೊಂಡ ತೀರ್ಮಾನ ತಾವು ಸಮಿತಿಯ ಅಧ್ಯಕ್ಷರಾಗಿ ಇಲಾಖೆಯ ಯಾವುದೇ ಅಧಿಕಾರಿಗಳಿಗೆ ಮಾಹಿತಿ ನೀಡುವುದಿಲ್ಲ, ತಮ್ಮ ಕೆಲಸದ ಕುರಿತಂತೆ ಸಿಎಂ ಮತ್ತು ಶಿಕ್ಷಣ ಸಚಿವರ ಜೊತೆ ಮಾತ್ರ ಚರ್ಚೆ ನಡೆಸುತ್ತೇನೆ, ತಮ್ಮ ಅಧ್ಯಯನ ವರದಿಯನ್ನು ಕೂಡ ಇಲಾಖೆಯ ಅಧಿಕಾರಿಗಳಿಗೆ ನೀಡುವುದಿಲ್ಲ, ಸಿಎಂ ಮತ್ತು ಸಂಬಂಧಪಟ್ಟ ಸಚಿವರಿಗೆ ನೀಡುತ್ತೇನೆ ಎಂದು ಘೋಷಿಸಿದರು.
ಸ್ವತ: ಪ್ರಾಧ್ಯಪಕರಾಗಿ, ಕನ್ನಡ ಸಾಹಿತ್ಯ ಅಕಾಡಮಿ ಅಧ್ಯಕ್ಷರಾಗಿ, ಅಭಿವೃದ್ಧಿ ಪ್ರಾಧಿಕಾರ ಮತ್ತು ಗಡಿ ಅಭಿವೃದ್ಧಿ ಸಮಿತಿಯ ಮುಖ್ಯಸ್ಥರಾಗಿ ಅಧಿಕಾರ ಶಾಹಿ ಯಾವ ರೀತಿ ವರ್ತಿಸುತ್ತದೆ ಎಂಬುದನ್ನು ಚೆನ್ನಾಗಿ ಬಲ್ಲ ಅವರು ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯ ಮುಖ್ಯಸ್ಥರಾಗಿ ನೇಮಕಗೊಳ್ಳುತ್ತಿದ್ದಂತೆ ತಾವು ಸ್ವತಂತ್ರವಾಗಿ ಆಡಳಿತ ನಿರ್ವಹಣೆ ಮಾಡುತ್ತೇನೆ,  ಅಧಿಕಾರ ಶಾಹಿ ಹಸ್ತಕ್ಷೇಪ ಮಾಡಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇಲಾಖೆಯಿಂದ ತಮಗೆ ಬೇಕಾದ ಸಿಬ್ಬಂದಿಯನ್ನು ನಿಯೋಜಿಸಿಕೊಂಡ ಅವರು ಎಲ್ಲಾ ವಿಷಯಗಳ ಕುರಿತಂತೆ ತಜ್ಞರ ಅಭಿಪ್ರಾಯ ಆಲಿಸಿದರು. ಪ್ರಸಕ್ತ ಇದ್ದ ಪಠ್ಯದಲ್ಲಿನ ಒಳಿತು-ಕೆಡಕುಗಳನ್ನು ಅವಲೋಕಿಸಿ ಯಾವ ವುಷಯ ಭೋದಿಸಿದರೆ ಮಕ್ಕಳಿಗೆ ಸುಲಭವಾಗಿ ಅರ್ಥವಾಗಲಿದೆ ಹಾಗೂ ಅದು ಯಾವ ದೂರಗಾಮಿ ಪರಿಣಾಮ ಬೀರಲಿದೆ ಎಂದು ಅವಲೋಕಿಸಿದರು. ಪಠ್ಯ ರಚನೆಗೆ ಕೇವಲ ವಿಷಯ ತಜ್ಞರ ನೆರವನ್ನಷ್ಟೇ ಪಡೆಯಲಿಲ್ಲ, ಬದಲಿಗೆ ಸಮಾಜ ಶಾಸ್ತ್ರಜ್ಞರು, ಆರ್ಥಿಕ ತಜ್ಞರು ಮತ್ತು ಮನ:ಶಾಸ್ತ್ರಜ್ಞರ ನೆರವನ್ನೂ ಪಡೆದರು.
ಇದೇ ಅವಧಿಯಲ್ಲಿ ಮಾತೃಭಾಷೆಯಲ್ಲಿ ಶಿಕ್ಷಣ, ಇಂಗ್ಲೀಷ್ ಕಲಿಕೆ ಹಾಗು ಏಕರೂಪ ಶಿಕ್ಷಣಕ್ಕೆ ಕೇಳಿಬಂದ ಅಭಿಪ್ರಾಯಗಳನ್ನು ಪರಿಗಣಿಸಿದರು. ಸ್ಪರ್ಧೆ ಎದುರಿಸುವ ದೃಷ್ಠಿಯಿಂದ ರಾಜ್ಯ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ರಾಜ್ಯ ಪಠ್ಯ ಕ್ರಮದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಎನ್.ಸಿ.ಇ.ಆರ್.ಟಿ ಪಠ್ಯ ಕ್ರಮಗಳನ್ನು ಅಳವಡಿಸಲು ಮುಂದಾಯಿತು. ಇದರ ಬಗ್ಗೆ ಮಾಹಿತಿ ಪಡೆದ ಬರಗೂರು ರಾಜ್ಯ ಶಿಕ್ಷಣ ಮಾಧ್ಯಮದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಒಂಬತ್ತು ಮತ್ತು ಹತ್ತನೇ ತರಗತಿಗೆ ಬರುವ ವೇಳೆ ಕೇಂದ್ರ ಸರ್ಕಾರದ ಎನ್.ಸಿ.ಇ.ಆರ್.ಟಿ ಪಠ್ಯ ಕ್ರಮವನ್ನು ಅರ್ಥೈಸಿಕೊಳ್ಳುವ ರೀತಿಯ ಪಠ್ಯ ಕ್ರಮ ರಚನೆಗೆ ಮುಂದಾದರು. ಈ ಸಂಬಂಧ ಎನ್.ಸಿ.ಇ.ಆರ್.ಟಿ ಅಧಿಕಾರಿಗಳು ಹಾಗು ಅಲ್ಲಿನ ಪಠ್ಯ ಪುಸ್ತಕ ರಚನ ಸಮಿತಿಯ ಸದಸ್ಯರೊಂದಿಗೆ ಹಲವು ಸುತ್ತಿನ ಸಭೆಗಳನ್ನು ನಡೆಸಿ ಎಲ್ಲರಿಂದಲೂ ಮಾಹಿತಿಯನ್ನು ಸಂಗ್ರಹಿಸಿದರು. ಪ್ರಾಥಮಿಕ ಹಂತದಿಂದಲೇ ಎನ್.ಸಿ.ಇ.ಆರ್.ಟಿ ಪಠ್ಯ ಕ್ರಮಕ್ಕೆ ಸರಿಸಮಾನ ರೀತಿಯ ಪಠ್ಯ ಪುಸ್ತಕ ರಚನೆ ಪ್ರಕ್ರಿಯೆ ಆರಂಭಿಸಿದರು.
ಬರಗೂರು ಕೈಗೊಂಡ ಈ ನಿಲುವಿನ ಪರಿಣಾಮವಾಗಿ ಈ ಹಿಂದೆ ರಚಿತವಾಗಿದ್ದ ಮಡಿಂಬಡಿತ್ತಾಯ ನೇತೃತ್ವದ ಸಮಿತಿಯ ಬಹುತೇಕ ಶಿಪಾರಸ್ಸುಗಳು ಹಾಗು ಇದನ್ನು ಆಧರಿಸಿ ರಚನೆಯಾಗಿದ್ದ ಪಠ್ಯಕ್ರಮದಲ್ಲಿ ವ್ಯಾಪಕವಾದ ಮರ್ಪಾಡುಗಳಾದವು. ಇದು ಬಿಜೆಪಿ ಮತ್ತು ಸಂಘ ಪರಿವಾರ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. 2012ರಲ್ಲಿ ಕೇಂದ್ರ ಸರ್ಕಾರ ರೂಪಿಸಿದ ನಿಯಮ ಸರಿಯಿಲ್ಲ, ಇದರಲ್ಲಿ ದೇಶ ಭಕ್ತಿ ಸಾರುವ ಇತಿಹಾಸದ ವಾಸ್ತವತೆ ಅರಿಯುವ ಪಠ್ಯ ಕ್ರಮಕ್ಕೆ ಅವಕಾಶವಿಲ್ಲ, ಎಡಪಂಥೀಯ ವಿಚಾರ ಧಾರೆಯನ್ನು ದಾರಾಳವಾಗಿ ಬಳಸಲಾಗಿದೆ ಎಂದು ಆರೋಪಿಸಿದ ಪ್ರಸಕ್ತ ಮೋದಿ ನೇತೃತ್ವದ ಸರ್ಕಾರ ಇದೀಗ ನೀತಿಯಲ್ಲಿ ಅಮೂಲಾಗ್ರ ಬದಲಾವಣೆಗೆ ಮುಂದಾಗಿದೆ. ಇಂತಹ ಅವಧಿಯಲ್ಲಿ ಕೇಂದ್ರದ ನೀತಿ ಅನುಸರಿಸಿ ಪಠ್ಯಕ್ರಮ ರಚಿಸಬೇಕಾದ ರಾಜ್ಯ ಸರ್ಕಾರ 2012 ರಲ್ಲಿ ಯುಪಿಎ ಸರ್ಕಾರ ರಚಿಸಿದ್ದ ಮಾರ್ಗಸೂಚಿ ಆಧರಿಸಿ ಪಠ್ಯಕ್ರಮ ರಚಿಸುವುದು ಎಷ್ಟು ಸರಿ ಎಂದು ನಿಲುವು ತಳೆದಿದೆ.
ಪಠ್ಯ ಪುಸ್ತಕ ಪರಿಷ್ಕರಣೆ ಎನ್ನುವುದು ನಿರಂತರವಾದ ಪ್ರಕ್ರಿಯೆ. ಪ್ರತೀ 5 ವರ್ಷಕ್ಕೊಮ್ಮೆ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಲಾಗುತ್ತಿದೆ. ಈ ರೀತಿ ಪರಿಷ್ಕರಣೆಗೊಂಡ ಪುಸ್ತಕಗಳು ಕನಿಷ್ಟ 10 ವರ್ಷವಾದರೂ ಬರಲೇ ಬೇಕಾದ ಅನಿವಾರ್ಯ ಸ್ಥಿತಿಯಿದೆ. ಕಾರಣವಿಷ್ಟೆ ಪರಿಷ್ಕರಣೆಗೆ ನೇಮಿಸುವ ಸಮಿತಿಗಳು ತಮ್ಮ ವರದಿ ನೀಡಲು ಕನಿಷ್ಠ ಒಂದೂವರೆಯಿಂದ ಎರಡು ವರ್ಷದ ಅವಧಿ ತೆಗೆದುಕೊಳ್ಳುತ್ತಾರೆ. ಆನಂತರ ಪರಿಷ್ಕøತ ಪಠ್ಯ ಕ್ರಮ ಬೋಧಿಸಲು ಶಿಕ್ಷಕರಿಗೆ ತರಬೇತಿ ನೀಡಬೇಕಾಗುತ್ತದೆ. ಇದಾದ ಬಳಿಕ ಪುಸ್ತಕ ಮುದ್ರಣಕ್ಕೆ ಹೋಗಲಿದೆ. ಇದರಿಂದಾಗಿ ಪ್ರಕ್ರಿಯೆಗೆ ಕನಿಷ್ಠ ಮೂರು ವರ್ಷಗಳು ಬೇಕಾಗುತ್ತದೆ. ಆ ಬಳಿಕ ಬರುವ ಪಠ್ಯ ಪುಸ್ತಕ ಮತ್ತೆ ಬದಲಾವಣೆಗೆ ಸಮಯ ತಗಲುವುದರಿಂದ 10 ವರ್ಷಗಳ ಕಾಲ ಈ ಪಠ್ಯ ಪುಸ್ತಕ ಚಲಾವಣೆಯಲ್ಲಿರುತ್ತದೆ.
ಇಂತಹ ಸತ್ಯ ಅರಿತಿರುವ ಬಿಜೆಪಿ ಮತ್ತು ಸಂಘಪರಿವಾರದ ನಾಯಕರು ಇದೀಗ ಬರಗೂರು ಶಿಪಾರಸ್ಸು ಮಾಡಿರುವ ವರದಿ ಆಧರಿಸಿ ಪಠ್ಯಪುಸ್ತಕ ಹೊರಬಂದರೆ ಅನಿವಾರ್ಯವಾಗಿ 10 ವರ್ಷಗಳ ಕಾಲ ಅದನ್ನು ಪಾಲಿಸದೆ ಗತ್ಯಂತರವಿಲ್ಲ ಎಂದು ಈಗಾಗಲೇ ಬರಗೂರು ಸಮಿತಿ ಶಿಪಾರಸ್ಸಿಗೆ ವಿರೋಧ ವ್ಯಕ್ತಪಡಿಸುತ್ತಿದೆ. ಕೇಂದ್ರ ಸರ್ಕಾರವೇ ನೂತನ ಪಠ್ಯ ಕ್ರಮ ರಚಿಸುತ್ತಿದೆ. ಇಂತಹ ಸಮಯದಲ್ಲಿ ರಾಜ್ಯ ಸರ್ಕಾರ ಯಾಕೆ ರೂಪಿಸಬೇಕೆಂಬ ವಾದ ಮಂಡಿಸುತ್ತಿದೆ. 
ಇದು ಈಗ ವರದಿ ಸಲ್ಲಿಕೆಯಾದ ನಂತರದ ವಾದವಾದರೆ, ಬರಗೂರು ತಮ್ಮ ವರದಿ ಸಲ್ಲಿಸುವ ಮುನ್ನವೇ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ನೆರವು ಪಡೆದುಕೊಂಡು ರಾಜ್ಯದ ಅಧಿಕಾರಿಗಳ ಮೇಲೆ ಒತ್ತಡ ಹೇರಿತ್ತು. ಈ ಅಧಿಕಾರಿ ವಲಯ ಕೇಂದ್ರ ಸರ್ಕಾರದ ಸೂಚನೆ ಇದೆ ಎಂದು ಹೇಳಿ ಬರಗೂರು ಸಮಿತಿ ವರದಿ ಶಿಪಾರಸ್ಸು ಸದ್ಯಕ್ಕೆ ಜಾರಿಯಾಗಲು ಸಾಧ್ಯವಿಲ್ಲ ಎಂದು ಹೇಳಿ ಕೇಂದ್ರ ರೂಪಿಸಿರುವ ನಿಯಮದಂತೆ ಹೊಸ ಪಠ್ಯಕ್ರಮದ ಸಿದ್ದತೆ ಆರಂಭಿಸಿತು. ಅಲ್ಲದೇ ಮುಂದಿನ ಶೈಕ್ಷಣಿಕ ವರ್ಷದಿಂದಲೇ ತಮ್ಮ ಶಿಪಾರಸ್ಸು ಆಧರಿಸಿ ಪಠ್ಯ ಕ್ರಮ ಜಾರಿಗೆ ಬರುವಂತೆ ಬರಗೂರು ನಡೆಸುತ್ತಿದ್ದ ಪ್ರಯತ್ನಗಳಿಗೆ ಅಡ್ಡಿಯುಂಟು ಮಾಡಿತು.
ಬರಗೂರು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ರಾಯಚೂರಿಗೆ ತೆರಳಿದ ಸಮಯ ಬಳಸಿಕೊಂಡ ಅಧಿಕಾರಿಗಳು ಬರಗೂರು ಸಮಿತಿಗೆ ನಿಯೋಜನೆ ಮಾಡಿದ್ದ ಎಲ್ಲಾ ಸಿಬ್ಬಂದಿಯನ್ನು ವಾಪಸ್ ಪಡೆಯಿತು. ಬರಗೂರು ಶಿಪಾರಸ್ಸು ಆಧರಿಸಿ ಕರಡು ಸಿದ್ದಪಡಿಸುತ್ತಿದ್ದ ಸಿಬ್ಬಂದಿಗೆ ಆ ಕೆಲಸ ಕೈ ಬಿಡುವಂತೆ ತಾಕಿತ್ತು ಮಾಡಿ ಕೇಂದ್ರ ಸರ್ಕಾರ ರೂಪಿಸಿರುವ ನಿಯಮ ಆಧರಿಸಿ ಸಿದ್ದಗೊಂಡಿರುವ ಪಠ್ಯದ ಸಿದ್ದತೆಯಲ್ಲಿ ತೊಡಗುವಂತೆ ನಿರ್ದೇಶಿಸಿತು. ಸಮ್ಮೇಳನ ಮುಗಿಸಿ ರಾಯಚೂರಿನಿಂದ ಹಿಂತಿರುಗಿದ ಬರಗೂರು ತಮ್ಮ ಕಛೇರಿಯಲ್ಲಾದ ಬದಲಾವಣೆ ಕಂಡು ಬೆಚ್ಚಿ ಬಿದ್ದರು. ಸಿಬ್ಬಂದಿಯೇ ಇಲ್ಲದ ಸ್ಥಿತಿ ಕಂಡು ಆಕ್ರೋಶಗೊಂಡರು.
ಮತ್ತೊಂದೆಡೆ ಅಧಿಕಾರಿಗಳ ಸಲಹೆಗೆ ಮಣಿದ ಶಿಕ್ಷಣ ಮಂತ್ರಿ ತನ್ವೀರ್ ಸೇಠ್ ಬರುವ ಶೈಕ್ಷಣಿಕ ವರ್ಷದಿಂದ ಕೇಂದ್ರದ ಮಾರ್ಗಸೂಚಿ ಆಧರಿಸಿ ರಚಿತಗೊಂಡ ಪಠ್ಯ ಪುಸ್ತಕ ಬರಲಿದೆ ಆನಂತರ ಬರಗೂರು ಸಮಿತಿ ಶಿಫಾರಸ್ಸು ಜಾರಿಯ ಬಗ್ಗೆ ಚಿಂತನೆ ನಡೆಸಲಾಗುವುದು. ಬರಗೂರು ತಮ್ಮ ವರದಿಯನ್ನು ನೀಡಿಲ್ಲ ಹೀಗಾಗಿ ಮುಂದಿನ ಶೈಕ್ಷಣಿಕ ವರ್ಷದಿಂದ ಅವರ ಸಮಿತಿ ಶಿಫಾರಸ್ಸು ಆಧಿರಿಸಿದ ಪಠ್ಯ ಪುಸ್ತಕಗಳು ಬರಲು ಸಾಧ್ಯವಿಲ್ಲ ಎಂದರು.
ಅಧಿಕಾರಿಗಳ ತಾಳಕ್ಕೆ ತಕ್ಕಂತೆ ಶಿಕ್ಷಣ ಮಂತ್ರಿ ನೀಡಿದ ಹೇಳಿಕೆ ಬರಗೂರು ಅವರನ್ನೂ ಕೆರಳಿಸಿತು. ತಡಮಾಡದೆ ಅವರು ಸಿಎಂ ಜೊತೆ ಮಾತುಕತೆ ನಡೆಸಿ ಸಭೆಯೊಂದನ್ನು ನಿಗದಿಪಡಿಸುವಂತೆ ಮಾಡಿದರು. ಪರಿಷ್ಕರಣೆ ಸಂಬಂಧ ತಾವು ಕೈಗೊಂಡ ಎಷ್ಟು ಕ್ರಮಗಳ ಬಗ್ಗೆ ಸಿಎಂಗೆ ಮೊದಲೆ ಮಾಹಿತಿ ನೀಡಿದ ಅವರು ಸಿಎಂ ಕರೆದಿದ್ದ ಸಭೆಯಲ್ಲಿ ನಿಯಮಗಳನ್ನು ಆಧರಿಸಿಯೇ ಅಧಿಕಾರಿಗಳ ಬೆವರಿಳಿಸಿದರು. ಆ ಸಭೆಯಲ್ಲಿದ್ದ ಶಿಕ್ಷಣ ಮಂತ್ರಿಗೂ ಕೂಡಾ ವಾಸ್ತವಸ್ಥಿತಿ ಅರಿವಿಗೆ ಬಂದು ಅವರು ತಾವು ಮಾಡಿದ ತಪ್ಪು ಸರಿಪಡಿಸಿಕೊಳ್ಳಲು ಮುಂದಾದರು. ಅಷ್ಟೇ ಅಲ್ಲ ಬರಗೂರು ಅವರ ಬೆಂಬಲಕ್ಕೆ ಧಾವಿಸಿದರು. ಸಿಎಂ ಅವರಂತೂ ಅಧಿಕಾರಿಗಳ ಹುನ್ನಾರ ಬಲ್ಲವರಾಗಿದ್ದು ಅವರ ಯಾವ ಸಮಜಾಯಿಷಿಯನ್ನು ಕೇಳದೆ ಮುಂದಿನ ಶೈಕ್ಷಣಿಕ ವರ್ಷದಿಂದ ಬರಗೂರು ರಾಮಚಂದ್ರಪ್ಪ ಅವರ ಸಮಿತಿಯ ಶಿಫಾರಸ್ಸು ಆಧರಿಸಿ ಪಠ್ಯಪುಸ್ತಕ ಸಿದ್ದಪಡಿಸಬೇಕು, ಅಷ್ಟೇ ಅಲ್ಲ ಬರುವ ಶೈಕ್ಷಣಿಕ ವರ್ಷದಿಂದಲೇ  ಇವುಗಳು ಎಲ್ಲಾ ಇಲಾಖೆಗಳಿಗೆ ರವಾನೆಯಾಗಬೇಕೆಂದು ಆದೇಶಿಸಿದರು. ಜೊತೆಗೆ ಬರಗೂರು ಸಮಿತಿಗೆ ನೀಡಲಾಗಿದ್ದ ಎಲ್ಲಾ ಸಿಬ್ಬಂದಿ ಮತ್ತೆ ಕರ್ತವ್ಯಕ್ಕೆ ನಿಯೋಜನೆಯಾಗಬೇಕು, ಕರಡು ತಿದ್ದುವ ಕೆಲಸಕ್ಕೆÉ್ಕ ಮತ್ತಷ್ಟು ಸಿಬ್ಬಂದಿ ನಿಯೋಜಿಸುವಂತೆ ಆದೇಶಿದರು. ಆಗಲೇ ಬಹುತೇಕರಿಗೆ ಅರ್ಥವಾಗಿದ್ದು ಬರಗೂರು ಈ ಸಮಿತಿಯ ಅಧಿಕಾರ ಸ್ವೀಕರಿಸಿದಾಗ ತಾವು ಮುಖ್ಯಮಂತ್ರಿಗಳ ಜತೆ ಮಾತ್ರ ಮಾತನಾಡುತ್ತೇವೆ ಎಂದು ಹೇಳಿದ್ದು ಯಾಕೆಂದು.
ಯಾವಾಗ ಸಿಎಂ ಇಂತಹ ಕಟ್ಟು ನಿಟ್ಟಿನ ಆದೇಶ ನೀಡಿದರೋ ಅಧಿಕಾರಿಗಳು ಬೇರೆ ದಾರಿಯೇ ಇಲ್ಲದೇ ಬರಗೂರು ಸಮಿತಿಗೆ ಎಲ್ಲಾ ನೆರವು ನೀಡಿದರು. ಇದರಿಂದ ಉತ್ತೇಜಿತರಾದ ಬರಗೂರು ಇದೀಗ ಸರ್ಕಾರಕ್ಕೆ ತಮ್ಮ ವರದಿ ಸಲ್ಲಿಸಿದ್ದು ಇದರ ಆಧಾರದಲ್ಲಿ ಪಠ್ಯ ಪುಸ್ತಕ ಮುದ್ರಣದ ಕಾರ್ಯ ನಡೆದಿದೆ.
ಪ್ರಮುಖವಾಗಿ ಬರಗೂರು ತಮ್ಮ ಸಮಿತಿಯಲ್ಲಿ ಪುರಾಣ ಪುರುಷರ ಕತೆಗಳ ಬದಲಿಗೆ ಇತಿಹಾಸ ಪುರುಷರ ಜೀವನ ಸಾಧನೆಗಳನ್ನು ಬಿಂಬಿಸುವ ಪಾಠಗಳನ್ನು ಅಳವಡಿಸಿದ್ದಾರೆ. ಈ ಹಿಂದೆ 7ನೇ ತರಗತಿಯ ವಿದ್ಯಾರ್ಥಿಗಳು ಸತ್ಯವಾನ್ ಸಾವಿತ್ರಿಯ ಪಾಠ ಓದುತ್ತಿದ್ದರು ಈ ಪಾಠ ವಿದ್ಯಾರ್ಥಿಗಳಿಗೆ ಯಾವ ಸಂದೇಶ ನೀಡುತ್ತದೆ ಎಂದು ಪ್ರಶ್ನಿಸಿರುವ ಬರಗೂರು ಇದರ ಬದಲಿಗೆ ಮಹಿಳಾ ಶಿಕ್ಷಣಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟು ಬಾಲ್ಯವಿವಾಹ, ಮೂಢನಂಬಿಕೆಯ ವಿರುದ್ಧ ಹೋರಾಟ ನಡೆಸಿದ ಸಾವಿತ್ರಿ ಬಾಪುಲೆ ಅವರ ಜೀವನ ಸಾಧನೆಯ ವಿಷಯ ಸೇರ್ಪಡೆ ಮಾಡಿದ್ದಾರೆ.
ಮಡಿಂಬಡಿತ್ತಾಯ ಸಮಿತಿ ಶಿಫಾರಸ್ಸು ಆಧರಿಸಿ ರಚಿತಗೊಂಡಿದ್ದ ಪಠ್ಯ ಪುಸ್ತಕದಲ್ಲಿ ಕನ್ನಡದ ಆಸ್ತಿ ಎಂದೇ ಗೌರವಿಸಲ್ಪಡುವ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ರಚನೆಯ ಯಾವುದೇ ಗದ್ಯ, ಪದ್ಯ 1 ರಿಂದ 10ನೇ ತರಗತಿಯವರೆಗಿನ ಪಠ್ಯದಲ್ಲಿ ಸ್ಥಾನ ಪಡೆದಿರಲಿಲ್ಲ. ಇದನ್ನು ಮನಗಂಡ ಬರಗೂರು ಇದೀಗ ಮಾಸ್ತಿ ಅವರ ಬುದ್ಧನ ಬದುಕನ್ನು ಆಧರಿಸಿ ರಚಿಸಿರುವ ಯಶೋಧರ ನಾಟಕದ ಒಂದು ಭಾಗವನ್ನು ಪಠ್ಯದಲ್ಲಿ ಅಳವಡಿಸಿದ್ದಾರೆ, ಅಷ್ಟೇ ಅಲ್ಲ ನವ್ಯ ಸಾಹಿತ್ಯದ ಪ್ರವರ್ತಕ ಡಾ||ಎಂ.ಗೋಪಾಲಕೃಷ್ಣ ಅಡಿಗರ ಕಟ್ಟುವೆವು ನಾವು ಪದ್ಯವನ್ನು ಸೇರಿಸಿದ್ದಾರೆ. ಕಾಯಕವೇ ಕೈಲಾಸ ಎಂದು ಸಾರಿದ ಮಾನವತಾವಾದಿ ಬಸವಣ್ಣನ ಜೀವನ ಚರಿತ್ರೆ, ಬ್ರಿಟಿಷರ ವಿರುದ್ಧ ಹೋರಾಡಿ ವೀರಮರಣವನ್ನಪ್ಪಿದ ಕನ್ನಡಿಗ ಸಂಗೊಳ್ಳಿರಾಯಣ್ಣನನ್ನು ಪರಿಚಯಿಸುವ ವಿಷಯವನ್ನು ಪಠ್ಯದಲ್ಲಿ ಸೇರಿಸಿದ್ದಾರೆ.
ಎಂಟನೇ ತರಗತಿಯ ಇಂಗ್ಲೀಷ್ ಪಠ್ಯದಲ್ಲಿ ಸತ್ಯವಾನ್ ಸಾವಿತ್ರಿಯ ಕಥೆ ಇದೆ. ಇದರಿಂದ ಮಕ್ಕಳಿಗೆ ಯಾವ ಸಂದೇಶ ನೀಡಬಹುದು ಸತ್ಯಕ್ಕೆ ದೂರವಾದ ಇಂತಹ ಕತೆಯನ್ನು ನೈತಿಕತೆ ಹೆಸರಲ್ಲಿ ಬೋಧಿಸುವುದಕ್ಕಿಂತ ಸ್ವಾಭಿಮಾನ, ಸ್ತ್ರೀಶಿಕ್ಷಣ, ಪ್ರತಿಪಾದಿಸಿ ಬಾಲ್ಯವಿವಾಹ, ಮೌಢ್ಯವನ್ನು ಧಿಕ್ಕರಿಸಿದ ಜ್ಯೋತಿಬಾಫುಲೆ ಕುರಿತಾದ ವಿಷಯ ಸೂಕ್ತವಲ್ಲವೇ ಎನ್ನುವುದು ಬರಗೂರರ ಪ್ರತಿಪಾದನೆ.
ಪಠ್ಯ ಪುಸ್ತಕ ವಿಷಯ ಬಂದಾಗ ಕೃತಿಗಳು, ಲೇಖಕರ ಆಯ್ಕೆ ವಿಷಯದಲ್ಲಿ ತಾರತಮ್ಯವಿರಲಾರದು ಎಂದು ಪ್ರಿಪಾದಿಸಿರುವ ಸಮಿತಿ ಹೈದರಾಬಾದ್-ಕರ್ನಾಟಕ ಪ್ರದೇಶದ ಪ್ರಮುಖ ಸಾಹಿತಿಗಳಾದ ಶಾಂತರಸ, ಸಿಂಪಿ ಲಿಂಗಣ್ಣ, ಚನ್ನಣ್ಣವಾದಿಕಾರ, ಜಂಬಣ್ಣ ಅಮರ ಚಿಂತ ಅವರ ರಚನೆಗಳಿಗೆ ಪ್ರಾತಿನಿದ್ಯ ನೀಡಲಾಗಿದೆ. ಮುಂಬೈ-ಕರ್ನಾಟಕ, ಕರಾವಳಿ ಬಯಲುಸೀಮೆ, ಹಳೆ ಮೈಸೂರು ಪ್ರಾಂತ್ಯದ ಕೃತಿಕಾರರ ರಚನೆಗಳಿಗೆ ಅವಕಾಶ ನೀಡಲಾಗಿದೆ.
ಇನ್ನೂ ಇಂಗ್ಲೀಷ್, ಹಿಂದಿ, ತೆಲುಗು, ಮರಾಠಿ, ಉರ್ದು ಮೊದಲಾದ ಭಾಷಾ ಪಠ್ಯಗಳಲ್ಲಿ ಕನ್ನಡ ಸಾಹಿತಿಗಳ ಒಂದಾದರೂ ರಚನೆ ಇರಬೇಕು ಎಂದು ಪ್ರತಿಪಾದಿಸಿರುವ ಸಮಿತಿ ತಮಿಳು ಭಾಷೆಯ 10ನೇ ತರಗತಿ ಪಠ್ಯದಲ್ಲಿ ಆದಿಕವಿ ಪಂಪನ ಪರಿಚಯದ ಕೃತಿ ಇಟ್ಟಿದೆ. ಇಂಗ್ಲೀಷ್‍ನಲ್ಲಿ ವಿ.ಕೃ.ಗೋಕಾಕ್ ಅವರ ದಿ ಸಾಂಗ್ ಆಫ್ ಇಂಡಿಯಾ ಎಂಬ ಪದ್ಯ ಸೇರಿಸಲಾಗಿದೆ. ಭಾಷೆ-ಬಾಂಧವ್ಯ ಕುರಿತ ಪಾಠ ಮರಾಠಿ ಪಠ್ಯದಲ್ಲಿ ಸೇರಿದರೆ 7ನೇ ತರಗತಿ ಹಿಂದಿ ಪುಸ್ತಕದಲ್ಲಿ ಅಪ್ನಾ ಕರ್ನಾಟಕ ಪಾಠ ಸೇರಿಸಲಾಗಿದೆ. 8ನೇ ತರಗತಿಗೆ ಅಕ್ಕಮಹಾದೇವಿ ಪರಿಚಯದ ಕೃತಿ ಸೇರಿಸಲಾಗಿದೆ. ರಾಷ್ಟ್ರೀಯ ಭಾವೈಕ್ಯತೆಯ ಪಾಠ ಉರ್ದು ಪಠ್ಯ ಪುಸ್ತಕದಲ್ಲಿದ್ದರೆ ತುಳು ಪಠ್ಯದಲ್ಲಿ ನಾರಾಯಣಗುರು ಮತ್ತು ಹಣ್ಣು ಮಾರಿ ಶಾಲೆ ಕಟ್ಟಿಸಿದ ಹಾಜಬ್ಬನ ಕುರಿತಾದ ಪಠ್ಯ ಸೇರಿಸಲಾಗಿದೆ 8ನೇ ತರಗತಿಯ ಸಮಾಜ ವಿಜ್ಞಾನದಲ್ಲಿ ಮಾನವ ಹಕ್ಕುಗಳ ಕುರಿತ ಪಾಠವಿದೆ.
ಆರನೇ ತರಗತಿಯಲ್ಲಿ ಪಿ.ಶೇಷಾದ್ರಿ ಅವರ ಬೇರು ರಚನೆ ಬದಲಿಗೆ ದೊಡ್ಡ ಹುಲ್ಲೂರು ರುಕ್ಕೋಜಿ ಅವರ ಡಾ|| ರಾಜ್‍ಕುಮಾರ್ ಕುರಿತ ಗದ್ಯ ಸೇರ್ಪಡೆ ಮಾಡಲಾಗಿದೆ. ಈ ಇಬ್ಬರೂ ಕೃತಿಕಾರರು ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು ಒಂದೇ ಪ್ರಾಂತ್ಯಕ್ಕೆ ಸೇರಿದ್ದಾರೆದ್ದಾರೆಂಬುದು ವಿಶೇಷ.
ದೈಹಿಕ ಶಿಕ್ಷಣದಲ್ಲಿ ಯೋಗಾಸನ ಎಂಬ ಪದ ಕೈಬಿಡಲಾಗಿದೆ. ಇದರ ಸ್ಥಾನದಲ್ಲಿ ಯೋಗ ಎಂಬ ಪದ ಬಳಸಲಾಗಿದೆ ಯೋಗಾಸನ ಕೇವಲ ಆಸನಗಳಿಗೆ ಮಾತ್ರ ಸೀಮಿತವಾದ ಶಬ್ಧ ಆದರೆ ಯೋಗದಲ್ಲಿ ಆಸನಗಳ ಜತೆಗೆ ಪ್ರಾಣಯಾಮ, ಧ್ಯಾನ ಕ್ರಿಯೆ ಎಲ್ಲವೂ ಇರಲಿದೆ ಎಂಬ ಸ್ಪಷ್ಟತೆ ಇದೆ.
6ನೇ ತರಗತಿಯ ಕನ್ನಡ ಪಠ್ಯದಲ್ಲಿ ಕಡಲೆಕಾಯಿ ಪರಿಷೆ ಎಂಬ ಸಂಪಾದಿತ ಗದ್ಯವನ್ನು ಬದಿಗೊತ್ತಿ ಡಾ|| ಎಂ. ಸುಮಿತ್ರ ಅವರ ಕರಗ ಉತ್ಸವ ಎಂಬ ರಚನೆ ಸೇರಿಸಲಾಗಿದೆ. 7ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿರುವ ಬಹಮನಿ ಆದಿಲ್‍ಶಾಹಿಗಳ ಗದ್ಯದಲ್ಲಿ ಬದೀಲ್ ಶಾಹಿ, ಕುಸುಬ್ ಶಾಹಿ, ಇಮಾಮ್ ಶಾಹಿ ಮನೆತನಗಳನ್ನು ಸೇರಿಸಲಾಗಿದೆ. 
ಸಂಸ್ಕøತ ಭಾಷೆಯ 6ನೇ ತರಗತಿ ಪಠ್ಯದ ವರ್ಣಮಾಲೆ 6ರಲ್ಲಿದ್ದ ಕಮಲ ಚಿತ್ರವನ್ನು ಬದಲಾಯಿಸಿ ಆಸ್ಥಾನದಲ್ಲಿ ಕದಳಿ ಚಿತ್ರ ಹಾಕಲಾಗಿದೆ. 5ನೇ ತರಗತಿಯ ಕನ್ನಡ ಪಠ್ಯದಲ್ಲಿ ಆಧುನಿಕ ವಚನಕಾರ ಸಿದ್ದಯ್ಯ ಪುರಾಣಿಕ ಅವರ ರಚನೆಗಳ ಬದಲಿಗೆ ಆಯ್ದಕ್ಕಿ ಲಕ್ಕಮ್ಮ, ಬಸವಣ್ಣ, ಅಂಬಿಗರ ಚೌಡಯ್ಯ ಅವರ ವಚನಗಳನ್ನು ಸೇರಿಸಲಾಗಿದೆ. 9ನೇ ತರಗತಿ ಕನ್ನಡ ಪಠ್ಯದಿಂದ ಕಾರ್ಕಡ ರಾಮಚಂದ್ರ ಉಡುಪ ಅವರ ಭೂಮಿಗಿಳಿದ ಬೃಹಸ್ಪತಿ ರಚನೆಯನ್ನು ಕೈಬಿಟ್ಟು ಕೆ.ನೀಲಾ ಅವರ ರಂಜಾನ್ ಸುರಕುಂಬಾ ರಚನೆ ಸೇರಿಸಲಾಗಿದೆ. 9ನೇ ತರಗತಿ ಕನ್ನಡದಲ್ಲಿ ಡಾ|| ಸಿದ್ದಲಿಂಗಯ್ಯ ಅವರ ಮಹಾತ್ಮಗಾಂಧಿ ರಸ್ತೆಯ ಹಾಸ್ಪೆಲ್ ರಚನೆ ಕೈಬಿಟ್ಟು ಡಾ|| ದಸ್ತಗೀರ್ ವಲಿಬಾಯ್ ಅವರ ಉರುಸ್‍ಗಳಲ್ಲಿ ಭಾವೈಕೈತೆ ಎಂಬ ಕೃತಿ ಸೇರ್ಪಡೆ ಮಾಡಲಾಗಿದೆ.
ಇದು ಸಾಕಷ್ಟು ವಿರೋಧಕ್ಕೆ ಕಾರಣವಾಗಿದೆ ಮುಡಿಂಬಡಿತ್ತಾಯ ಅವರ ಪರಿಷ್ಕರಣೆಯಲ್ಲಿ ಕರಾವಳಿ ಭಾಗದ ಕೃತಿಕಾರರಿಗೆ ಹೆಚ್ಚಿನ ಆದ್ಯತೆ ಸಿಕ್ಕಿತ್ತು ಅದಕ್ಕೆ ಈಗ ಕತ್ತರಿ ಹಾಕಲಾಗಿದೆ. ಪಠ್ಯ ಪುಸ್ತಕ ಪರಿಕ್ಷರಣೆ ವಿಷಯದಲ್ಲಿ ರಾಜಕಾರಣ ಮಾಡುವುದು ಬೇಕಿರಲಿಲ್ಲ. ಸಾಹಿತಿ, ಲೇಖಕರನ್ನು ಪ್ರದೇಶ, ಜಾತಿ, ಲಿಂಗವಾರು ವಿಂಗಡಿಸುವುದು ಎಷ್ಟರ ಮಟ್ಟಿಗೆ ಸರಿ, ಪ್ರತಿಷ್ಟಿತರ ಹೆಸರಲ್ಲಿ ಮಕ್ಕಳ ಭವಿಷ್ಯದಲ್ಲಿ ಚೆಲ್ಲಾಟವಾಡುವ ಪ್ರಯತ್ನ ನಡೆದಿದೆ ಎಂದು ಬಿಜೆಪಿ ನಾಯಕರು ತೀವ್ರ ಅಪಸ್ವರ ತೆಗೆದಿದ್ದಾರೆ.
ಬರಗೂರು ಸರ್ಕಾರಕ್ಕೆ ಸಲ್ಲಿಸಿರುವ 135 ಪುಟಗಳ ವರದಿಯಲ್ಲಿ ಮೀಸಲು ಆಧಾರದಲ್ಲಿ ಅಧ್ಯಾಯಗಳನ್ನು ಹಂಚುವ ಪ್ರಯತ್ನ ನಡೆಸಿದ್ದಾರೆ. ಗುಣಮಟ್ಟದ ಪಠ್ಯಗಳ ಪ್ರಸ್ತಾಪವನ್ನು ವರದಿಯಲ್ಲಿ ಎಲ್ಲಿಯೂ ಮಾಡಿಲ್ಲ ಪ್ರಶಸ್ತಿ ವಿತರಣೆ, ಉದ್ಯೋಗದಲ್ಲಿ ಮೀಸಲು, ರಾಜಕೀಯ ಪಕ್ಷಗಳ ಟಿಕೆಟ್ ಹಂಚಿಕೆ ರೀತಿ ಲೇಖಕರ ಆಯ್ಕೆ ನಡೆದಿದೆ ಎಂದು ಆರೋಪಿಸುತ್ತಾರೆ.
ದೇಶಭಕ್ತಿ ವಿಚಾರದಲ್ಲೂ ಸಮಿತಿ ಚೌಕಾಶಿ ಮಾಡಿದೆ. ಖಾಯತ ಸಾಹಿತಿ ಕೆ.ಎಸ್. ನರಸಿಂಹ ಸ್ವಾಮಿ ಅವರ ಭಾರತಮಾತೆ ಎಂಬ ಕವನ 8ನೇ ತರಗತಿ ಕನ್ನಡದಲ್ಲಿತ್ತು. ಆದರೆ ದೇಶಭಕ್ತಿಯ ರಚನೆಗಳು ಹೆಚ್ಚಿವೆ ಎಂಬ ಕಾರಣಕ್ಕೆ ಇದನ್ನು ಕೈಬಿಡಲಾಗಿದೆ. ಮಾತೃ ಭೂಮಿ ಎಂಬ ಶಬ್ಧವನ್ನು ಉದ್ದೇಶಪೂರ್ವಕವಾಗಿ ಬಿಡಲಾಗಿದೆ ಎಂದು ಸಂಘಪರಿವಾರದ ನಾಯಕರು ಪ್ರಕ್ರಿಯೆ ಬಗ್ಗೆ ಅಪಸ್ವರ ತೆಗಿದಿದ್ದಾರೆ. 
ಪ್ರಾದೇಶಿಕ ಸಮತೋಲನದ ನೆಪವೊಡ್ಡುತ್ತಿರುವ ಕಾರಣ ಖ್ಯಾತ ಸಾಹಿತಿಗಳಾದ ಕೈಯ್ಯಾರ ಕಿಂಞಣ್ಣ ರೈ, ಜಿ.ಪಿ.ರಾಜರತ್ನಂ, ಪು.ತಿ.ನ, ಬಿ.ಎ. ಸನದಿ, ಡಾ|| ಡಿ.ವಿ. ಗುಂಡಪ್ಪ, ಲಕ್ಷ್ಮಿನಾರಾಯಣಭಟ್ ಅವರ ರಚನೆಗಳನ್ನು ಕೈಬಿಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಆದರೆ ಈ ಎಲ್ಲಾ ಆರೋಪಗಳನ್ನು ಬದಿಗಿಟ್ಟು ನೋಡಿದಾಗ ಇದೇ ಪರಿಷ್ಕರಣೆಯಲ್ಲಿ ಪ್ರಾದೇಶಿಕತೆಗೆ ಒತ್ತು ನೀಡುವ ಜೊತೆಗೆ ಕೇಂದ್ರದ ಎನ್.ಸಿ.ಇ.ಆರ್.ಟಿ ಮಾದರಿಯ ಪಠ್ಯಕ್ರಮ ರಚನೆಗೆ ಪ್ರಯತ್ನ ನಡೆಸಿರುವುದು ಸ್ಪಷ್ಟವಾಗಿದೆ. ರಾಷ್ತ್ರೀಯ ಶಿಕ್ಷಣ ನೀತಿಯ ಅಂಶಗಳನ್ನೇ ಆಳವಡಿಸಿರುವ ವರದಿಯಲ್ಲಿ ವಿದ್ಯಾರ್ಥಿಗಳ ಜ್ಞಾನ ಮಟ್ಟ ಮತ್ತು ಕೌಶಲ್ಯ ಹೆಚ್ಚಿಸುವ ಪ್ರಯತ್ನ ನಡೆದಿದೆ ಎಂಬುವುದನ್ನು ಎಲ್ಲಾ ವಿರೋಧಿಗಳು ಒಪ್ಪುತ್ತಾರೆ. ಅಷ್ಟಕ್ಕೂ ವಿದ್ಯಾರ್ಥಿಗಳಿಗೆ ಬೇಕಾಗಿರುವುದು ಕೇಸರೀಕರಣ, ಎಡ-ಬಲಕರಣವಲ್ಲ, ಗುಣಮಟ್ಟದ ಶಿಕ್ಷಣ, ತಮ್ಮ ಬಾಳು ಹಸನಾಗಿಸುವ ಶಿಕ್ಷಣ. ಇಷ್ಟಾದರೆ ಸಾಕಲ್ಲವೆ.

Links :




ಸಂಬಂಧಿತ ಟ್ಯಾಗ್ಗಳು

ಸಂಬಂಧಿತ ಟ್ಯಾಗ್ಗಳನ್ನು ಲಭ್ಯವಿಲ್ಲ



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ