ಬಿಜೆಪಿಯಿಂದ ಮಂಗಳೂರು ಚಲೋ !

Kannada News

30-08-2017

ಬೆಂಗಳೂರು: ಅರಣ್ಯ ಸಚಿವ ರಮಾನಾಥ ರೈ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಹಮ್ಮಿಕೊಂಡಿರುವ ಮಂಗಳೂರು ಚಲೋಗೆ ಸೆಪ್ಟೆಂಬರ್ 5ರಂದು ಚಾಲನೆ ದೊರೆಯಲಿದೆ. ರಾಜ್ಯ ಸರ್ಕಾರದ ಭ್ರಷ್ಟಾಚಾರ ಹಾಗೂ ಆರ್.ಎಸ್.ಎಸ್ ಕಾರ್ಯಕರ್ತರ ಹತ್ಯೆ ಪ್ರಕರಣದಲ್ಲಿ ರಮಾನಾಥ ರೈ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಬಿಜೆಪಿ ಮಂಗಳೂರು ಚಲೋ ಜೊತೆಗೆ, ಐದು ಪ್ರಮುಖ ನಗರಗಳಿಂದ ರಥಯಾತ್ರೆ ಹಮ್ಮಿಕೊಂಡಿದೆ. ಸೆ.5 ರಂದು ಏಕಕಾಲದಲ್ಲಿ ಬೆಂಗಳೂರು, ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ-ಧಾರವಾಡ ಹಾಗೂ ಚಿಕ್ಕಮಗಳೂರಿನಿಂದ ರಥಯಾತ್ರೆ ನಡೆಯಲಿದೆ. ಬಿಜೆಪಿ ಯುವಮೋರ್ಚಾ ಸಾರಥ್ಯದಲ್ಲಿ ನಡೆಯಲಿರುವ ರಥಯಾತ್ರೆಗೆ ಈಗಾಗಲೇ ಭರದ ಸಿದ್ಧತೆ ನಡೆಯುತ್ತಿದ್ದು, ಸೆ.7 ರಂದು ಮಂಗಳೂರಿನಲ್ಲಿ ಬೃಹತ್ ಕಾರ್ಯಕರ್ತರ ಸಮಾವೇಶ ನಡೆಯಲಿದೆ.

ಬೆಂಗಳೂರಿನಲ್ಲಿ ರಥಯಾತ್ರೆಗೆ ಮಾಜಿ ಉಪಮುಖ್ಯಮಂತ್ರಿ ಹಾಗೂ ಮುಖಂಡ ಆರ್.ಅಶೋಕ್, ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ, ಶಿವಮೊಗ್ಗದಲ್ಲಿ ಕೆ.ಎಸ್.ಈಶ್ವರಪ್ಪ, ಚಿಕ್ಕಮಗಳೂರಿನಲ್ಲಿ ಶಾಸಕ ಸಿ.ಟಿ.ರವಿ ಹಾಗೂ ಹುಬ್ಬಳ್ಳಿ-ಧಾರವಾಡದಲ್ಲಿ ಜಗದೀಶ್ ಶೆಟ್ಟರ್ ಚಾಲನೆ ನೀಡಲಿದ್ದಾರೆ. ರಥಯಾತ್ರೆ ಜೊತೆಗೆ ಬೈಕ್ ರ್ಯಾಲಿಯನ್ನೂ ಹಮ್ಮಿಕೊಳ್ಳಲಾಗಿದೆ. ಒಂದೊಂದು ರಥಯಾತ್ರೆಗೆ ಸುಮಾರು 2 ಸಾವಿರ ದ್ವಿಚಕ್ರ ವಾಹನಗಳು ಸಾಥ್ ನೀಡಲಿವೆ ಎಂದು ಹೇಳಲಾಗುತ್ತಿದೆ.

ಬೆಂಗಳೂರಿನಲ್ಲಿ ಆರಂಭವಾಗಲಿರುವ ರಥಯಾತ್ರೆಯು ಫ್ರೀಡಂ ಪಾರ್ಕ್‍ನಿಂದ ನೆಲಮಂಗಲ, ಕುಣಿಗಲ್, ಅರಸೀಕೆರೆ, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಉಪ್ಪಿನಂಗಡಿ, ಮಾಣಿ, ಕಲ್ಲಡ್ಕ, ಬಂಟ್ವಾಳದಿಂದ ಮಂಗಳೂರು ತಲುಪಲಿದೆ.

ಮೈಸೂರಿನಿಂದ ಹೊರಡಲಿರುವ ಯಾತ್ರೆ ಇಲವಾಲ,ಹುಣಸೂರು, ಪಿರಿಯಾಪಟ್ಟಣ, ಕುಶಾಲನಗರ,ಮಡಿಕೇರಿ, ಸುಳ್ಯ, ಪುತ್ತೂರು, ಮಾಣಿ, ಕಲ್ಲಡ್ಕ ಹಾಗೂ ಬಂಟ್ವಾಳದಿಂದ ಮಂಗಳೂರಿಗೆ ಆಗಮಿಸಲಿದೆ.  ಚಿಕ್ಕಮಗಳೂರಿನಿಂದ ಹೊರಡಲಿರುವ ಯಾತ್ರೆಯು ತರೀಕೆರೆ, ಬೀರೂರು, ಕಡೂರು, ಸಖರಾಯಪಟ್ಟಣ, ಚಿಕ್ಕಮಗಳೂರು, ಆಲೂರು, ಮೂಡಿಗೆರೆ, ಕೊಟ್ಟಿಗೆಹಾರ, ಉಜಿರಿ, ಶೃಂಗೇರಿ, ಕೊಪ್ಪ, ಬಾಳೆಹೊನ್ನೂರು ಮೂಲಕ ಮಂಗಳೂರು ತಲುಪಲಿದೆ.

ಶಿವಮೊಗ್ಗದಿಂದ ರಥಯಾತ್ರೆಯು ಗಾಜನೂರು, ತೀರ್ಥಹಳ್ಳಿ, ಆಗುಂಬೆ, ಹೆಬ್ರಿ, ಕಾರ್ಕಳ, ಮಾಣಿ, ಸುಳ್ಯದಿಂದ ನೇರವಾಗಿ ಮಂಗಳೂರಿಗೆ ಆಗಮಿಸುವುದು. ಹುಬ್ಬಳ್ಳಿ-ಧಾರವಾಡದಿಂದ ಹೊರಡಲಿರುವ ಯಾತ್ರೆ ಕಲಘಟಗಿ, ಯಲ್ಲಾಪುರ, ಅಂಕೋಲ, ಕುಮುಟ, ಹೊನ್ನಾವರ, ಭಟ್ಕಳ, ಕುಂದಾಪುರ, ಉಡುಪಿಯಿಂದ ಮಂಗಳೂರು ತಲುಪುವುದು.

ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಕೊಲೆ ಪ್ರಕರಣದಲ್ಲಿ ರಮಾನಾಥ ರೈ ಕುಮ್ಮಕ್ಕಿನಿಂದಲೇ ನಡೆದಿದೆ ಎಂಬುದು ಬಿಜೆಪಿ ಆರೋಪವಾಗಿತ್ತು. ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಟ್ಟುಕೊಂಡು ಕೆಲವು ಮೂಲಭೂತ ಸಂಘಟನೆಗಳು ಹಲ್ಲೆ ನಡೆಸುತ್ತಿದ್ದು, ತಕ್ಷಣವೇ ಈ ಸಂಘಟನೆಗಳನ್ನು ನಿಷೇಧ ಮಾಡುವುದು ಹಾಗೂ ರೈ ರಾಜೀನಾಮೆ ಕೊಡಬೇಕೆಂಬುದು ಬಿಜೆಪಿ ಒತ್ತಾಯವಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ