ಲೋಕಾಯುಕ್ತ ನೇಮಕಾತಿ

Kannada News

18-03-2017 350

ಭ್ರಷ್ಟಾಚಾರದ ವಿರುದ್ದ ಜನಾಕ್ರೋಶ ಎಂದೆಂದಿಗೂ ಇದ್ದದ್ದೆ. ಭ್ರಷ್ಟರ ವಿರುದ್ದ ಮಾತನಾಡುವವರು, ಭ್ರಷ್ಟಾಚಾರದ ವಿರುದ್ದ ಕ್ರಮ ಕೈಗೊಳ್ಳುವವರು ಜನಸಾಮಾನ್ಯರ ದೃಷ್ಠಿಯಲ್ಲಿ ದೊಡ್ಡಮಟ್ಟದ ನಾಯಕರಾಗುತ್ತಾರೆ. ಇದಕ್ಕೆ ಪ್ರಮುಖ ಕಾರಣ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ದೊಡ್ಡ ಪಿಡುಗಾಗಿ ಪರಿಣಮಿಸಿದೆ. ಸರ್ಕಾರದ ಕೆಲಸ ದೇವರ ಕೆಲಸ ಎಂದು ಸರ್ಕಾರಿ ಕಛೇರಿಗಳಲ್ಲಿ ದೊಡ್ಡಕ್ಷರದಲ್ಲಿ ಫಲಕ ಆಳವಡಿಸಿರುತ್ತಾರೆ. ದೇವಾಲಯಗಳಲ್ಲಿ ದೇವರಿಗೆ ಕಾಣಿಕೆ ಪೂಜಾರಿಗಳ ತಟ್ಟೆಗೆ ದಕ್ಷಣಿ ಹಾಕುವ ರೀತಿಯಲ್ಲಿ ಸರ್ಕಾರದ ಕೆಲಸವಾಗಬೇಕಾದರೆ ಸಂಬಂಧ ಪಟ್ಟವರಿಗೆ ದಕ್ಷಿಣೆ ನೀಡಲೇ ಬೇಕೆಂಬ ಪರಿಪಾಠ ಬೆಳೆದು ಬಂದಿದೆ.
ಇನ್ನು ಭ್ರಷ್ಟಾಚಾರದ ಪರಿಣಾಮವಾಗಿ ಸರ್ಕಾರಿ ಸೇವೆಗೆ ಸೇರುವಾಗ ಇಲ್ಲವೇ ಸಾರ್ವಜನಿಕ ಸೇವಕರಾಗುವ ಮುನ್ನ ಏನೂ ಇಲ್ಲದವರು ಕೆಲವೇ ದಿನಗಳಲ್ಲಿ ಶ್ರೀಮಂತರಾಗುತ್ತಾರೆ. ಶಾಸಕರು, ಸಚಿವರು ಪ್ರತಿವರ್ಷ ಲೋಕಾಯುಕ್ತಕ್ಕೆ ತಮ್ಮ ಆಸ್ತಿ-ಪಾಸ್ತಿ ವಿವರ ಸಲ್ಲಿಸುತ್ತಾರೆ. ಅದನ್ನು ನೋಡಿದರೆ ಹೆಚ್ಚಳದ ಪ್ರಮಾಣ ಎಂತವರಲ್ಲೂ ಅಚ್ಚರಿ ಮೂಡಿಸದೇ ಇರದು. ಅಷ್ಟೇ ಅಲ್ಲ ಇಷ್ಟೊಂದು ಪ್ರಮಾಣದಲ್ಲಿ ಲಾಭ ಗಳಿಸಲು ಇವರು ಮಾಡುವ ವ್ಯವಹಾರಗಳಿಂದ ಸಾದ್ಯವೇ ಎಂಬ ಪ್ರಶ್ನೆ ಮೂಡಿಸುತ್ತದೆ.
ತಮ್ಮ ಕಣ್ಣ ಮುಂದೆಯೇ ಈ ರೀತಿ ಸಂಪತ್ತಿನ ವೈಭವೀಕರಣ ನಡೆಯುತ್ತಿದ್ದರೆ ಜನತೆ ಇದೆಲ್ಲಾ ಅಕ್ರಮ ಮೂಲದಿಂದ ಸಂಪಾದಿಸಿದ್ದು ಇದಕ್ಕೆಲ್ಲಾ ಬ್ರಷ್ಟಾಚಾರವೇ ರಹದಾರಿ ಎಂದು ಭಾವಿಸುತ್ತಾರೆ. ಹೀಗಾಗಿ ಯಾವುದೇ ವ್ಯಕ್ತಿ, ಸಂಘಸಂಸ್ಥೆ ಭ್ರಷ್ಟಾಚಾರದ ವಿರುದ್ದ ದ್ವನಿ ಎತ್ತಿದರೆ ಅದಕ್ಕೆ ದೊಡ್ಡ ರೀತಿಯ ಬೆಂಬಲ ಸಿಗುತ್ತದೆ. ಇದಕ್ಕೆ ಇತ್ತೀಚಿನ ಉದಾಹರಣೆ ಜನಲೋಕಪಾಲ್ ಮಸೂದೆಗೆ ಆಗ್ರಹಿಸಿ, ಗಾಂಧೀವಾದಿ ಅಣ್ಣಾ ಹಜಾರೆ ನೇತೃತ್ವದಲ್ಲಿ ನಡೆದ ಹೋರಾಟ. ಈ ಹೋರಾಟಕ್ಕೆ ಸಮಾಜದ ತಮ್ಮ ವರ್ಗದ ಜನತೆ ಸ್ವಯಂ ಪ್ರೇರಿತ ಬೆಂಬಲ ನೀಡುವ ಮೂಲಕ ಸರ್ಕಾರಗಳಿಗೆ ಎಚ್ಚರಿಕೆ ನೀಡಿದರು.
ಇಂತಹ ಆಂದೋಲನದ ನೇತೃತ್ವ ವಹಿಸಿದ್ದ  ಅಣ್ಣಾ ಹಜಾರೆ ಮತ್ತವರ ತಂಡ ಪದೇ ಪದೇ ಪ್ರಸ್ತಾಪ ಮಾಡುತ್ತಿರುವುದು ಕರ್ನಾಟಕ ಲೋಕಾಯುಕ್ತವನ್ನು 1986 ರಲ್ಲಿ ಬ್ರಷ್ಟಾಚಾರದ ನಿಗ್ರಹ ದಳ ಮತ್ತು ವಿಜಿಲೆನ್ಸ ಕಮಿಷನ್‍ಗೆ ಪರ್ಯಾಯವಾಗಿ ಅಸ್ತಿತ್ವಕ್ಕೆ ಬಂದ ಕರ್ನಾಟಕ ಲೋಕಾಯುಕ್ತ ರಾಷ್ಟ್ರಮಟ್ಟದ ಸುದ್ದಿ ಮಾಡಿದ್ದು 2000 ರ ನಂತರದಲ್ಲಿ ನಿವೃತ್ತ ನ್ಯಾಯಮೂರ್ತಿ ವೆಂಕಟಾಚಲ ಮತ್ತು ಸಂತೋಷ್ ಹೆಗಡೆ ಇವರ ಸಾರಥ್ಯವನ್ನು ವಹಿಸಿ ಬ್ರಷ್ಟಾಚಾರದ ವಿರುದ್ದ ಸಾರಿದ  ಸಮರ ಇಡೀ ದೇಶದ ಜನರಲ್ಲಿ, ಇದ್ದರೆ ಕರ್ನಾಟಕ ಲೋಕಾಯುಕ್ತ ಸಂಸ್ಥೆಯಂತಹ ಸಂಸ್ಥೆ ಇರಬೇಕು ಎಂದು ಹೇಳುವಂತಾಯಿತು.
ಇಂತಹ ಲೋಕಾಯುಕ್ತ ಸಂಸ್ಥೆಯ ಮುಖ್ಯಸ್ಥರಾಗುವವರ ಮೇಲೆ ಜನತೆ ಬಾರಿ ನಿರೀಕ್ಷೆ ಇಟ್ಟುಕೊಂಡರು. ಹೀಗಾಗಿ ನ್ಯಾಯಮೂರ್ತಿ ಸಂತೋಷ್ ಹೆಗಡೆ ಲೋಕಾಯುಕ್ತ ಹುದ್ದೆಯಿಂದ ನಿರ್ಗಮಿಸಿದ ನಂತರ ನೇಮಕಗೊಂಡ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಈ ಸಂಸ್ಥೆಯ ಘನತೆಗೆ ದಕ್ಕೆ ಬಾರದಂತೆ ಕೆಲಸ ಆರಂಭಿಸಿದರು. ಆದರೆ, ಅವರ ವಿರುದ್ದ ಸುಳ್ಳು ಪ್ರಮಾಣ ಪತ್ರ ನೀಡಿ ನಿವೇಶನ ಪಡೆದಿದ್ದಾರೆಂಬ ಆರೋಪ ಕೇಳಿಬಂದ ಕೂಡಲೆ ಯಾವುದೇ ಸ್ಪಷ್ಟನೆ ನೀಡದೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವ ಮೂಲಕ ಸಂಸ್ಥೆಯ ಘನತೆ ಮತ್ತಷ್ಟು ಹೆಚ್ಚುವಂತೆ ಮಾಡಿದರು.
ಕರ್ನಾಟಕದ ಹೈಕೋರ್ಟ್‍ನಲ್ಲಿ ನ್ಯಾಯಮೂತಿಗಳಾಗಿದ್ದ ಅನೇಕರು ನ್ಯಾಯಾಂಗ ಬಡಾವಣೆಯಲ್ಲಿ ನಿವೇಶನ ಖರೀದಿಸಿದ್ದಾರೆ, ನ್ಯಾಯಾಂಗ ಬಡಾವಣೆ ರಚನೆಯಾಗಿರುವುದು ನ್ಯಾಯಾಂಗ ವ್ಯವಸ್ಥೆಯಲ್ಲಿ ಕೆಲಸ ಮಾಡುವ ನೌಕರರಿಗೆ ಎಂದು ಅವರ ಬೈಲಾದಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಯಾವುದೇ ನ್ಯಾಯಮೂರ್ತಿಗಳು ಇಲ್ಲಿ ನಿವೇಶನ ಹೊಂದಬಾರದು ಎಂದು ಹೇಳುತ್ತಾರೆ, ಅದನ್ನು ಬಹುತೇಕರು ಉಲ್ಲಂಘಿಸಿದ್ದಾರೆ, ಇದು ಒಂದು ರೀತಿಯ ಉಲ್ಲಂಘನೆಯಾದರೆ, ಬೆಂಗಳೂರಿನಲ್ಲಿ ಒಬ್ಬರಿಗೆ ಒಂದೇ ನಿವೇಶನ ಎಂಬ ನಿಯಮವಿದೆ ಅಂದರೆ, ಸರ್ಕಾರದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಥವಾ ಗೃಹ ಮಂಡಳಿಯಿಂದ ನಿವೇಶನ ಇಲ್ಲವೇ ಮನೆ ಪಡೆದಿದ್ದರೆ, ಗೃಹ ನಿರ್ಮಾಣ ಸಹಕಾರ ಸಂಘಗಳ ಮೂಲಕ ರಿಯಾಯಿತಿ ದರದಲ್ಲಿ ನಿವೇಶನ ಖರೀದಿ ಸಾದ್ಯವಿಲ್ಲ ಇಂತಹ ಖರೀದಿಗೆ ಮುನ್ನ ತಮ್ಮ ಅಥವಾ ತಮ್ಮ ಕುಟುಂಬ ಸದಸ್ಯರ ಹೆಸರಲ್ಲಿ ಯಾವುದೇ ನಿವೇಶನ ಇಲ್ಲ ಎಂಬ ಪ್ರಮಾಣ ಪತ್ರ ಸಲ್ಲಿಸಬೇಕು. ಆದರೆ ಕೆಲವು ನ್ಯಾಯಮೂರ್ತಿಗಳು ನ್ಯಾಯಾಂಗ ಬಡಾವಣೆಗೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ನಿವೇಶನ ಪಡೆದಿದ್ದಾರೆ. ಇದಕ್ಕೂ ಮುನ್ನ ಸರ್ಕಾರ ಬಿಡಿಎ ಅಥವಾ ಗ್ರಹನಿರ್ಮಾಣ ಮಂಡಳಿಯಿಂದ ನ್ಯಾಯಮೂರ್ತಿಗಳಿಗೆ ನೀಡುವ ವಿವೇಚನಾ ಖೋಟಾದಡಿ ನಿವೇಶನ ಪಡೆದಿರುವ ಆರೋಪ ಕೂಡಾ ಎದುರಿಸುತ್ತಿದ್ದಾರೆ. ಇದೇ ಕಾರಣಕ್ಕೆ ಉಪಲೋಕಾಯುಕ್ತರಾಗಿ ನ್ಯಾಯಮೂರ್ತಿ ಚಂದ್ರಶೇಖರಯ್ಯ ನೇಮಕ ವಿವಾದಕ್ಕೆ ಕಾರಣವಾದರೆ, ಇದೆ ಆರೋಪ ಎದುರಿಸಿದ ನ್ಯಾಯಮೂರ್ತಿ ಬನ್ನೂರ್ ಮಠ್ ರಾಜ್ಯ ಲೋಕಾಯುಕ್ತರಾಗಿ ನೇಮಕಗೊಳ್ಳಲು ಸಾದ್ಯವೇ ಆಗಲಿಲ್ಲ. ಹೀಗಾಗಿ ರಾಜ್ಯ ಲೋಕಾಯುಕ್ತಕ್ಕೆ ಯಾರನ್ನು ನೇಮಕ ಮಾಡಬೇಕೆನ್ನುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿ ಕೆಲ ಕಾಲ ಈ ಹುದ್ದೆ ಖಾಲಿ ಇತ್ತು. ಆನಂತರ ಆಂಧ್ರ ಮೂಲದ ನ್ಯಾಯಮೂರ್ತಿ ವೈ. ಭಾಸ್ಕರ್ ರಾವ್ ಲೋಕಾಯುಕ್ತರಾಗಿ ನೇಮಕಗೊಂಡ ನಂತರ ನಡೆದ ವಿದ್ಯಮಾನಗಳು ಲೋಕಾಯುಕ್ತ ಇತಿಹಾಸದಲ್ಲಿ ಅತ್ಯಂತ ಕಪ್ಪು ಚರಿತ್ರೆಯಾಗಿ ಹೋಯಿತು.
ಇಂತಹ ಗೊಂದಲ ವಿವಾದಗಳಿಗೆ ಇತಿಶ್ರಿ ಹಾಡಲು ರಾಜ್ಯ ಸರ್ಕಾರ 1984ರ ಲೋಕಾಯುಕ್ತ ಕಾಯಿದೆಗೆ ತಿದ್ದುಪಡಿ ಮಾಡಿತು. ಲೋಕಾಯುಕ್ತರಾಗಿ ನೇಮಕಗೊಳ್ಳುವ ನಿವೃತ್ತ ನ್ಯಾಯಮೂರ್ತಿಗಳು, ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಧಿಕಾರ ಮಾಡುವುದಾದರೂ ರಾಜ್ಯದ ಹೈಕೋರ್ಟ್‍ನಲ್ಲಿ ನ್ಯಾಯಮೂರ್ತಿಗಳಾಗಿ 10 ವರ್ಷ ಸೇವೆ ಸಲ್ಲಿಸಿರ ಬೇಕೆಂಬ ಅಂಶವನ್ನು ಸೇರಿಸಲಾಯಿತು.
ರಾಜ್ಯ ಮಾನವ ಹಕ್ಕುಗಳ ಆಯೋಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ ನ್ಯಾಯಮೂರ್ತಿ ಎಸ್. ಆರ್. ನಾಯಕ್ ಅವರನ್ನು  ರಾಜ್ಯದ ಲೋಕಾಯುಕ್ತರನ್ನಾಗಿ ನೇಮುಸಲು ಸಿಎಂ ವಿಶೇಷ ಆಸಕ್ತಿ ವಹಿಸಿದರು. ಆದರೆ, ಮಾನವ ಹಕ್ಕುಗಳ ಆಯೋಗದ ಮುಖ್ಯಸ್ಥರಾದವರು ಆನಂತರ ಬೇರಾವುದೇ ಹುದ್ದೆ ಆಲಂಕರಿಸಬಾರದು ಎಂಬ ನಿಯಮವಿದೆ ಎಂದು ಹೇಳಿ ಇವರ ನೇಮಕಾತಿಗೆ ಒಪ್ಪಗೆ ಮುದ್ರೆ ಸಿಗಲಿಲ್ಲ. ಹೀಗಾಗಿ ಸುಮಾರು ದಿನಗಳಿಂದ ರಾಜ್ರ ಲೋಕಾಯುಕ್ತರ ಹುದ್ದೆ ಖಾಲಿ ಇದೆ.
ಖಾಲಿ ಇರುವ ಈ ಹುದ್ದೆ ಬರ್ತಿಮಾಡುವ ಸಂಬಂಧ ಹಲವು ಸುತ್ತಿನ ಕಸರತ್ತು ನಡೆಸಿದ ಸಿಎಂ ರಾಜ್ಯ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಗಳಾಗಿ ನಿವೃತ್ತರಾದ ನ್ಯಾಯಮೂರ್ತಿ ವಿಕ್ರಂಜಿತ್ ಸೇನ್ ಮತ್ತು ನ್ಯಾಯಮೂರ್ತಿ ಡಿ.ಎಚ್ ವಘೇಲಾ ಅವರ ಆಯ್ಕೆಗೆ ಒಲವು ವ್ಯಕ್ತವಾಯಿತಾದರೂ ಭಾಷೆಯ ಕಾರಣಕ್ಕಾಗಿ ಇವರ ಆಯ್ಕೆಗೆ ನಿರೀಕ್ಷಿತ ಬೆಂಬಲ ಸಿಗಲಿಲ್ಲ. ಹೀಗಾಗಿ ರಾಜ್ಯ ಹೈಕೋರ್ಟ್‍ನಲ್ಲಿ ನ್ಯಾಯಮೂರ್ತಿಗಳಾಗಿ 10 ವರ್ಷಕ್ಕೂ ಅಧಿಕ ಕಾ;ಲ ಕಾರ್ಯನಿರ್ವಹಿಸಿ ಸದ್ಯ ಸುಪ್ರೀಂ ಕೋರ್ಟ್‍ನಲ್ಲಿ ವಕೀಲರಾಗಿ ಕಾರ್ಯನಿರ್ವಹಿಸುತ್ತಿರುವ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಅವರನ್ನು ಈ ಹುದ್ದೆಗೆ ನೇಮಕ ಮಾಡಲು ಸಿಎಂ ಆಸಕ್ತಿ ವಹಿಸಿದರು. ಮುಖ್ಯಮಂತ್ರಿಗಳ ಈ ಪ್ರಸ್ತಾಪಕ್ಕೆ ಆಯ್ಕೆ ಸಮಿತಿ ಸದಸ್ಯರಾಗಿರುವ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಧಾನ ಮಂಡಲದ ಉಬಯ ಸದನಗಳ ಅಧ್ಯಕ್ಷರು ಹಾಗೂ ಪ್ರತಿ ಪಕ್ಷದ ನಾಯಕರಾದ ಜಗದೀಶ್ ಶೆಟ್ಟರ್ ಮತ್ತು ಈಶ್ವರಪ್ಪ ಒಪ್ಪಿಗೆಯ ಮುದ್ರೆ ಒತ್ತುತ್ತಿದ್ದಂತೆ ಲೋಕಾಯುಕ್ತ ನೇಮಕಾತಿ ಬಿಕ್ಕಟ್ಟು ಬಗೆಹರಿಯಿತು ಎಂಬು ಎಲ್ಲರೂ ಭಾವಿಸಿದರು.
ಈ ಮೂಲಕ ಯಜಮಾನನೇ ಇಲ್ಲದೆ ಜನರ ನರೀಕ್ಷೆಗೆ ತಕ್ಕಂತೆ ಕೆಲಸ ಮಾಡದೇ ನಿಷ್ಕ್ರಿಯವಾಗಿದೆ ಎಂದು ಆರೋಪಿಸುತ್ತಿರುವ ಲೋಕಾಯುಕ್ತ ಸಂಸ್ಥೆಗೆ ಸಾರಥಿ ಸಿಕ್ಕಂತಾಯಿತು ಎಂದು ಎಲ್ಲರು ಭಾವಿಸಿದರು. ಇನ್ನು ರಾಜ್ಯ ಹೈಕೋರ್ಟ್‍ನಲ್ಲಿ ನ್ಯಾಯಮೂರ್ತಿಗಳಾಗಿದ್ದ ಪಿ. ವಿಶ್ವನಾಥ ಶೆಟ್ಟಿ ಅವರು ನೀಡಿದ ತೀರ್ಪುಗಳು ನ್ಯಾಯಪರವಾದ ಧೋರಣೆ ಇಂದಿಗೂ ಜನ ಜನಿತ. ಒಬ್ಬ ನ್ಯಾಯಧೀಶರಾಗಿ ವಿಶ್ವನಾಥ ಶೆಟ್ಟಿ ಅವರು ನಡೆದುಕೊಂಡ ಕಾರ್ಯ ವೈಖರಿ ಬಗ್ಗೆ ಯಾರೊಬ್ಬರು ಅಪಸ್ವರ ಎತ್ತಲು ಸಾದ್ಯವಾಗಿಲ್ಲ, ಹೀಗಾಗಿ ಸರ್ಕಾರ ಉತ್ತಮ ಆಯ್ಕೆಯನ್ನೇ ಮಾಡಿದೆ ಎಂದು ಎಲ್ಲರೂ ಭಾವಿಸಿದರು.
ಇನ್ನು ಲೋಕಾಯುಕ್ತ ಸಂಸ್ಥೆ ಆರಂಭವಾದಾಗಿನಿಂದ ಹಿಡಿದು ಇತ್ತೀಚಿನ ನ್ಯಾಯಮೂರ್ತಿ ಶಿವರಾಜು ಪಾಟೀಲ್ ಅವರ ನೇಮಕಾತಿವರೆಗೆ ಎಲ್ಲಾ ಆಯ್ಕೆ ಸಮಿತಿಗಳೂ ನೆಪಮಾತ್ರಕ್ಕೆ ಸಭೆ ಸೇರುತ್ತಿದ್ದವು, ಮುಖ್ಯ ಮಂತ್ರಿಗಳ ಆಯ್ಕೆಯ ನ್ಯಾಯಮೂರ್ತಿಗಳ ಹೆಸರು ರಾಜ್ಯಪಾಲರಿಗೆ ಶಿಪಾರಸ್ಸಾಗುತ್ತಿತ್ತು. ಸಭೆಯಲ್ಲಿ ಪ್ರತಿಪಕ್ಷ ನಾಯಕರು ಸೇರಿದಂತೆ ಯಾರ ಅಪಸ್ವರಕ್ಕೂ ಅವಕಾಶ ಸಿಗುತ್ತಿರಲಿಲ್ಲ. ಇನ್ನು ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಗಳು ಇಂತಹ ಸಭೆಗೆ ಹಾಜರಾಗುತ್ತಿರಲಿಲ್ಲ. ಬದಲಿಗೆ ತಮ್ಮ ಆಯ್ಕೆಯ ಹೆಸರು ಇಲ್ಲವೇ ಅಭಿಪ್ರಾಯವನ್ನು ಪತ್ರ ಮುಖೇನ ತಲುಪಿಸುತ್ತಿದ್ದರು. ಕೆಲವು ಬಾರಿ ಸಭೆ ಆರಂಭಕ್ಕೂ ಮುನ್ನ ಮುಖ್ಯ ನ್ಯಾಯಮೂರ್ತಿಗಳು ತಮ್ಮ ಪತ್ರದಲ್ಲಿ ಎನು ಬರೆದಿದ್ದಾರೆಂದು ಸಭೆಯ ಗಮನಕ್ಕೆ ತರಲಾಗುತ್ತಿತ್ತು. ಮತ್ತೆ ಕೆಲವು ಬಾರಿ ಸಿಎಂ ಆ ಪತ್ರವನ್ನು ಗಮನಿಸಿ ಸುಮ್ಮನಾಗುತ್ತಿದ್ದರು. ಸಭೆಯಲಿ ್ಲ ಆ ಪತ್ರದ ಕುರಿತು ಯಾವುದೇ ಚರ್ಚೆ ನಡೆಯುತ್ತಿರಲಿಲ್ಲ. ಸಿಎಂ ಮಾಡಿದ ಸಲಹೆಗೆ ಸಭೆ ಸಮ್ಮತಿಯ ಮುದ್ರೆ ಒತ್ತುತಿತ್ತು.
ಆದರೆ ಮೊನ್ನೆ ನಡೆದ ಲೋಕಾಯುಕ್ತರ ಆಯ್ಕೆಯ ಉನ್ನತ ಸಭೆಗೆ ಹೈಕೋರ್ಟ್ ಮುಖ್ಯಮೂರ್ತಿ ಕೂಡಾ ಆಗಮಿಸಿದ್ದರು. ಸಭೆಯ ಆರಂಭದಲ್ಲೇ ಸಿಎಂ ಇಲ್ಲಿಯವರೆಗೆ ಈ ಹುದ್ದೆಗೆ ಪ್ರಬಲವಾಗಿ ಪ್ರತಿಪಾದನೆ ಮಾಡುತ್ತಿದ್ದ ನ್ಯಾಯಮೂರ್ತಿ ಎಸ್.ಆರ್. ನಾಯಕ್ ಅವರ ಹೆಸರನ್ನು ಪ್ರಸ್ತಾಪಿಸುವುದು ಬೇಡ ಸ್ವತಃ ನ್ಯಾಯಮೂರ್ತಿ ನಾಯಕ್ ಅವರೇ ತಮ್ಮ ಹೆಸರನ್ನು ಪರಿಗಣಿಸದಂತೆ ಮನವಿ ಮಾಡಿದ್ದಾರೆ. ಹೀಗಾಗಿ ಅವರ ಪ್ರಸ್ತಾಪ ಬೇಡ ಉಳಿದ ಬೇರೆ ಯಾವುದೇ ಹೆಸರುಗಳನ್ನು ಪ್ರಸ್ತಾಪಿಸಿ ಎಂದು ಹೇಳುವ ಮೂಲಕ ಸಭೆಗೆ ಮುಕ್ತ ಅವಕಾಶ ನೀಡಿದರು.
ಇಂತಹ ಬೆಳವಣಿಗೆ ನರೀಕ್ಷಿಸಿದ ಪ್ರತಿಪಕ್ಷ ನಾಯಕರು ಆಯ್ಕೆ ಕುರಿತಾಗಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳತ್ತ ನೋಡಿದರು. ಆಗ ನ್ಯಾಯಮೂರ್ತಿಗಳು ತಮ್ಮ ಆಯ್ಕೆಯಾಗಿ ನ್ಯಾಯಮೂರ್ತಿ ಡಿ.ಎಚ್. ವಘೇಲಾ, ವಿಕ್ರಂಜಿತ್‍ಸೇನ್ ಮತ್ತು ಪಿ.ವಿಶ್ವನಾಥ್ ಶೆಟ್ಟಿ ಅವರ ಹೆಸರುಗಳನ್ನು ಸಭೆಯ ಮುಂದಿಟ್ಟರು.
ಮೂರು ಹೆಸರುಗಳ ಬಗ್ಗೆ ಸಭೆ ಸುದೀರ್ಘ ಚರ್ಚೆ ನಡೆಸಿತ್ತು. ಮೂವರು ನ್ಯಾಯಮೂರ್ತಿಗಳು ತಮ್ಮ ಅಧಿಕಾರಾವಧಿಯಲ್ಲಿ ನಿಷ್ಠುರ ನ್ಯಾಯದಾನದ ಮೂಲಕ ಹೆಸರುಗಳಿಸಿದವರು ಅವರ ಕರ್ತವ್ಯದ ನಿರ್ವಹಣೆ ಬಗ್ಗೆ ಎಳ್ಳಷ್ಟು ಅಪಸ್ವರವಿಲ್ಲ ಎಂಬುದು ಎಲ್ಲರಿಗೂ ಗೊತ್ತಿದ್ದ ಸಂಗತಿ. ಅಂತಿಮವಾಗಿ ಸ್ಥಳೀಯರು ಕನ್ನಡ ಭಾಷೆ ಬಲ್ಲವರು ಜನರೊಂದಿಗೆ ವ್ಯವಹಾರ ಉತ್ತಮವಾಗಬಲ್ಲದು ಎಂದು ಹೇಳಿ ಎಲ್ಲರೂ ಸರ್ವಾನುಮತದಿಂದ ನ್ಯಾಯಮೂರ್ತಿ ವಿಶ್ವನಾಥ್‍ಶೆಟ್ಟಿ ಅವರ ಹೆಸರನ್ನು ಅನುಮೋದಿಸಿದರು. 
ಇದರಿಂದ ವಿವಾದ ಬಗೆಹರಿಯಿತು ಸರ್ಕಾರದ ಶಿಫಾರಸ್ಸಿಗೆ ರಾಜ್ಯಪಾಲರು ಅಂಕಿತ ಹಾಕಲಿದ್ದಾರೆಂದು ಎಲ್ಲರೂ ಭಾವಿಸಿದರು. ಆಗಲೇ ಧುತ್ತೆಂದು ಎದುರಾಗಿದ್ದು ನ್ಯಾಯಮೂರ್ತಿ ಪಿ.ವಿಶ್ವನಾಥ್‍ಶೆಟ್ಟಿ ಅವರು ಹುದ್ದೆಯಿಂದ ನಿವೃತ್ತರಾದ ನಂತರ ಸುಪ್ರೀಂಕೋರ್ಟ್‍ನಲ್ಲಿ ವಕೀಲಿವೃತ್ತಿ ನಡೆಸುತ್ತಿದ್ದಾರೆ ಹಿರಿಯ ವಕೀಲ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಾಲ್ ಬಳಿ ವಕೀಲಿ ವೃತ್ತಿ ಮಾಡುತ್ತಿರುವ ಇವರು ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿ ಆರೋಪ ಪ್ರಕರಣದಲ್ಲಿ ವಕಾಲತ್ತು ವಹಿಸಿದ್ದರು. ಮಾಜಿ ಸಚಿವ ಜನಾರ್ದನ ಅವರಿಗೂ ವಕೀಲರಾಗಿ ಕೆಲಸ ಮಾಡಿದ್ದರು, ಇಂತಹವರು ಲೋಕಾಯುಕ್ತರಾದರೆ ನ್ಯಾಯ ಹೇಗೆ ಎಂಬ ಪ್ರಶ್ನೆ ತೊರಲಾಯಿತು. 
ಆದರೆ ತಮ್ಮ ಹಿರಿಯ ವಕೀಲರಾದ ಕಪಿಲ್‍ಸಿಬಾಲ್ ಇವರ ಪರ ವಕಾಲತ್ತು ವಹಿಸಿದ್ದಾರೆ ವಕೀಲನಾಗಿ ಕರ್ತವ್ಯ ನಿರ್ವಹಿಸಿದ್ದೇವೆ ಅದಕ್ಕೂ ಲೋಕಾಯುಕ್ತ ಹುದ್ದೆ ಅಲಂಕರಿಸುವುದಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದಾಗ ಹಲವು ಮಂದಿ ಹಿರಿಯ ವಕೀಲರೂ ಕೂಡಾ ಇದನ್ನು ಬೆಂಬಲಿಸಿದರು ಹೀಗಾಗಿ ಈ ಆರೋಪಕ್ಕೆ ಮಾನ್ಯತೆ ಇಲ್ಲವಾಯಿತು.
ಇದಾದ ನಂತರ ನ್ಯಾಯಮೂರ್ತಿ ವಿಶ್ವನಾಥ್‍ಶೆಟ್ಟಿ ಎಂಬಲ್ಲಿ ಭೂಕರ್ಮಕಾಂಡದ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲ ಈ ಸಂಬಂಧ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ್, ಸಾಮಾಜಿಕ ಕಾರ್ಯಕರ್ತ ರವಿಕೃಷ್ಣಾ ರೆಡ್ಡಿ ರಾಜ್ಯಪಾಲರಿಗೆ ದಾಖಲೆಗಳೊಂದಿಗೆ ಮನವಿಯೊಂದನ್ನು ಸಲ್ಲಿಸಿದ್ದು ರಾಜ್ಯ ಸರ್ಕಾರದ ಪ್ರಸ್ತಾವನೆಗೆ ಅಂಕಿತ ಹಾಕದಂತೆ ಮನವಿ ಮಾಡಿದ್ದಾರೆ. 
ಎಸ್.ಆರ್. ಹಿರೇಮಠ್ ತಂಡ ರಾಜ್ಯಪಾಲರಿಗೆ ಸಲ್ಲಿಸಿರುವ ದಾಖಲೆಗಳಲ್ಲಿ ನ್ಯಾಯಮೂರ್ತಿ ಪಿ.ವಿಶ್ವನಾಥ್ ಶೆಟ್ಟಿ ಅವರು ಆರ್.ಟಿ.ನಗರದಲ್ಲಿ ಮನೆ ಹೊಂದಿದ್ದಾರೆ. ಬಿಡಿಎ ಮೂಲಕ ಖರೀದಿಸಿದ ನಿವೇಶನದಲ್ಲಿ ಮನೆಕಟ್ಟಿಸಿರುವ ಅವರು ಈ ಕುರಿತಾದ ಮಾಹಿತಿಯನ್ನು ಮರೆಮಾಚಿ ತಮಗೆ ಬೆಂಗಳೂರಿನಲ್ಲಿ ಯಾವುದೇ ನಿವೇಶನ ಇಲ್ಲ ಎಂದು ಹೇಳಿ ನ್ಯಾಯಾಂಗ ಬಡಾವಣೆಯಲ್ಲಿ ನ್ಯಾಯಾಂಗ ಸಿಬ್ಬಂದಿಗಳ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ 9600ಚದರ ಅಡಿ ವಿಸ್ತೀರ್ಣ ನಿವೇಶನ ಖರೀದಿಸಿದ್ದಾರೆ. 
ವೈದ್ಯ ಶಿಕ್ಷಣ ಪಡೆಯುತ್ತಿದ್ದ ತಮ್ಮ ಮಗನ ಹೆಸರಿನಲ್ಲಿ ವಿಜಯಾಬ್ಯಾಂಕ್ ಉದ್ಯೋಗಿಗಳ ಗೃಹ ನಿರ್ಮಾಣ ಸಹಕಾರ ಸಂಘದಿಂದ 4 ಸಾವಿರ ಚದರ ಅಡಿಯ ನಿವೇಶನ ಖರೀದಿ ಮಾಡಿದ್ದಾರೆ. 
ಕೃಷಿಕರಲ್ಲದವರು ರಾಜ್ಯದಲ್ಲಿ ಕೃಷಿ ಭೂಮಿ ಖರೀದಿ ಮಾಡುವಂತಿಲ್ಲ ಒಂದು ವೇಳೆ ಕೃಷಿ ಭೂಮಿ ಖರೀದಿ ಮಾಡಬೇಕಾದರೆ ಸಂಬಂಧಪಟ್ಟ ಪ್ರಾಧಿಕಾರಗಳಿಂದ ಅನುಮತಿ ಪಡೆಯಬೇಕು ಆದರೆ ಇಂತಹ ಯಾವುದೇ ನಿಯಮಗಳನ್ನು ಪಾಲಿಸದೆ ಬೆಂಗಳೂರು ಹೊರವಲಯದ ಯಲಹಂಕ ಸಮೀಪದ ಗಂಟಿಗಾನಹಳ್ಳಿಯಲ್ಲಿ  ಕೃಷ್ಣಪ್ಪ ಎಂಬುವರ ನೆರವಿನಲ್ಲಿ ಕೃಷಿ ಭೂಮಿಯನ್ನು ಖರೀದಿಸುವ ಮೂಲಕ ನ್ಯಾಯಮೂರ್ತಿಗಳಾಗಿದ್ದವರು ಅತ್ಯಂತ ಕನಿಷ್ಠ ತರವಾದ ನಿಯಮಗಳನ್ನೇ ಪಾಲಿಸಿಲ್ಲ ಎಂದು ತಮ್ಮ ದೂರುಪತ್ರದಲ್ಲಿ ವಿವರಿಸಿದ್ದಾರೆ.
ಇನ್ನು ಲೋಕಾಯುಕ್ತ ದಾಳಿಯಲ್ಲಿ ಸಿಕ್ಕಿಬಿದ್ದಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ತಮ್ಮ ವಿರುದ್ಧ ಲೋಕಾಯುಕ್ತ ನೀಡಿರುವ ವರದಿ ಪ್ರಶ್ನಿಸಿ ಸುಪ್ರೀಂಕೋರ್ಟ್‍ನಲ್ಲಿ ದಾವೆ ಹೂಡಿದ್ದಾರೆ. ಪಿ. ವಿಶ್ವನಾಥ್‍ಶೆಟ್ಟಿ ಅವರು ವಕೀಲರಾಗಿ ಸುಪ್ರೀಂಕೋರ್ಟ್‍ನಲ್ಲಿ ಲೋಕಾಯುಕ್ತದ ಕಾರ್ಯವೈಖರಿ ಮತ್ತು ಅವರ ವರದಿಯನ್ನು ಪ್ರಶ್ನಿಸಿದ್ದಾರೆ. ಇಂತವರು ಅಂತಹ ಸಂಸ್ಥೆಯ ಮುಖ್ಯಸ್ಥರಾಗುವುದು ಎಷ್ಟು ಸರಿ ಎಂದು ರಾಜ್ಯಪಾಲರಿಗೆ ಬರೆದಿರುವ ಪತ್ರದಲ್ಲಿ ನೈತಿಕತೆಯ ಬಗ್ಗೆ ಪ್ರಶ್ನೆಮಾಡಿದ್ದಾರೆ.
ಹೀಗಾಗಿ ಸರಾಗವಾಗಿ ಮುಗಿಯಿತು ಎಂಬ ಲೋಕಾಯುಕ್ತರ ನೇಮಕಾತಿ ಪ್ರಕ್ರಿಯೆ ಇದೀಗ ಮತ್ತೊಮ್ಮೆ ಪ್ರಹಸನದಂತಾಗಿದೆ. ಇದೀಗ ರಾಜ್ಯಪಾಲರು ಸರ್ಕಾರದ ಶಿಫಾರಸ್ಸಿಗೆ ಹಲವಾರು ಪ್ರಶ್ನೆ ಕೇಳಿದ್ದಾರೆ. ಲೋಕಾಯುಕ್ತ ಕಾಯಿದೆ ಹಾಗೂ ಲೋಕಾಯುಕ್ತರ ನೇಮಕಾತಿ ಕುರಿತು ವಿವಾದಗಳ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಲ್ಲಿ ರಾಜ್ಯಪಾಲರಿಗೆ ಸರ್ಕಾರದ ಶಿಫಾರಸ್ಸು ತಿರಸ್ಕರಿಸುವ ಅಧಿಕಾರವಿಲ್ಲ ಸರ್ಕಾರ ಮಾಡಿರುವ ಶಿಫಾರಸ್ಸಿನ ಬಗ್ಗೆ ಸಂದೇಹಗಳು ಅಥವಾ ದೂರುಗಳಿದ್ದರೆ ಅವುಗಳ ಬಗ್ಗೆ ಸರ್ಕಾರದಿಂದ ಮಾಹಿತಿ ಪಡೆದುಕೊಳ್ಳವುದಷ್ಟೇ. ಅದನ್ನು ಬಿಟ್ಟು ಸರ್ಕಾರ ಮಾಡಿದ ಶಿಪಾರಸ್ಸು ಒಪ್ಪಲು ಸಾದ್ಯವಿಲ್ಲ ಎಂದು ಕಡತ ಹಿಂತಿರುಗಿಸಲು ಸಾದ್ಯವಿಲ್ಲ, ಲೋಕಾಯುಕ್ತರ ನೇಮಕಾತಿ ವಿಚಾರದಲ್ಲಿ ಉನ್ನತ ಮಟ್ಟದ ಆಯ್ಕೆ ಸಮಿತಿಯದ್ದೇ ಪರಮಾಧಿಕಾರ, ಈ ವಿಷಯದಲ್ಲಿ ರಾಜ್ಯಪಾಲರ ಅಧಿಕಾರ ಸೀಮಿತ ವ್ಯಾಪ್ತಿಯನ್ನು ಮಾತ್ರ ಹೊಂದಿದೆ, ಅದನ್ನು ಮೀರಿ ಅವರು ವರ್ತಿಸುವಂತಿಲ್ಲ.
ಸರ್ಕಾರ ಮಾಡಿದ ಶಿಪಾರಸ್ಸಿನ ಬಗ್ಗೆ ರಾಜ್ಯಪಾಲರು ಸಂಶಯ ವ್ಯಕ್ತ ಪಡಿಸಿದರೆ ಇಲ್ಲವೇ ಪ್ರಶ್ನೆ ಕೇಳಿದರೆ ಸರ್ಕಾರ ಅವುಗಳಿಗೆ ಉತ್ತರ ನೀಡಿ ಕಡತ ಕಳುಹಿಸಿದರೆ ಅದನ್ನು ರಾಜ್ಯಪಾಲರು ಮಾನ್ಯ ಮಾಡಬೇಕು. ಇಲ್ಲವಾದರೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮುಖ್ಯಮಂತ್ರಿಗಳನ್ನು ರಾಜಭವನಕ್ಕೆ ಕರೆಯಿಸಿಕೊಂಡು ಮಾತುಕತೆ ನಡೆಸಬಹುದು. ಆದರೆ, ಶಿಪಾರಸ್ಸನ್ನು ತಿರಸ್ಕರಿಸಲು ಬರುವುದಿಲ್ಲ. ಆದರೆ, ಸರ್ಕಾರದ ಶಿಪಾರಸ್ಸಿಗೆ ಇಂತಹದೇ ಕಾಲ ಮಿತಿಯಲ್ಲಿ ಅಂಕಿತ ಹಾಕಬೇಕೆಂದಿಲ್ಲ. ಹೀಗಾಗಿ ರಾಜ್ಯಪಾಲರು ಕಡತವನ್ನು ಎಷ್ಟು ದಿನ ಬೇಕಾದರೂ ತಮ್ಮ ಬಳಿ ಇರಿಸಿಕೊಳ್ಳ ಬಹುದು. 
ಇದೀಗ ಸರ್ಕಾರ ರಾಜ್ಯಪಾಲರು ಎತ್ತಿರುವ ಪ್ರಶ್ನೆಗೆ ಉತ್ತರ ತಲುಪಿಸಲು ತೀರ್ಮಾನಿಸಿದೆ. ಮುಖ್ಯಮಂತ್ರಿಗಳು ತಮ್ಮ ನಿಲುವನ್ನು ಮತ್ತೆ ಪ್ರತಿಪಾದಿಸಿ ಸೂಕ್ತ ದಾಖಲೆಗಳೊಂದಿಗೆ ಕಡತ ಕಳುಹಿಸಿದರೆ, ರಾಜ್ಯಪಾಲರು ಅದಕ್ಕೆ ಮನ್ಯತೆ ನೀಡಬೇಕು ಇದು ನಿಯಮ. ಕಾರಣವಿಷ್ಟೇ ಇಂತಹ ಆಯ್ಕೆ ಮಾಡುವ ಸಮಿತಿಯಲ್ಲಿ ವಿಧಾನಮಂಡಲದ ಉಭಯ ಸದನಗಳ ಅದ್ಯಕ್ಷರು, ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಪ್ರತಿಪಕ್ಷದ ನಾಯಕರು ಇರುವ ಹಿನ್ನಲೆಯಲ್ಲಿ ಅದೊಂದು ರಿತಿಯಲ್ಲಿ ಸಾಂವಿಧಾನಿಕ ಸಮುತಿಯಾಗಿದೆ. ಹೀಗಾಗಿ ಇಂತಹ ಸಮಿತಿ ನಿರ್ಧಾರ ತಿರಸ್ಕರಿಸಲು ರಾಜ್ಯಪಾಲರಿಂದ ಸಾದ್ಯವಿಲ್ಲ. ಪ್ರಶ್ನೆಗಳು ಮಾತ್ರ ಕೇಳುವುದಷ್ಟೇ. ಹೀಗಾಗಿ ಲೋಕಾಯುಕ್ತರ ನೇಮಕಾತಿ ವಿಚಾರ ಇದೀಗ ಕುತೂಹಲದ ಘಟ್ಟಕ್ಕೆ ತಲುಪಿದ್ದು, ರಾಜ್ಯಪಾಲರ ನಡೆಯತ್ತ ಎಲ್ಲರ ಚಿತ್ತ ನೆಟ್ಟಿದೆ.

Links :




ಸಂಬಂಧಿತ ಟ್ಯಾಗ್ಗಳು

ಸಂಬಂಧಿತ ಟ್ಯಾಗ್ಗಳನ್ನು ಲಭ್ಯವಿಲ್ಲ



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ