ರೌಡಿ ನದೀಮ್‍ ಅರೆಸ್ಟ್ !

Kannada News

29-08-2017 502

ಬೆಂಗಳೂರು: ದೇವರಜೀವನಹಳ್ಳಿ ಪೊಲೀಸ್ ಸಬ್‍ ಇನ್ಸ್ ಪೆಕ್ಟರ್(ಪಿಎಸ್ಐ) ನಯಾಜ್ ಅಹಮದ್ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ತಲೆ ಮರೆಸಿಕೊಂಡಿದ್ದ ರೌಡಿ ನದೀಮ್‍ ನನ್ನು ಪೊಲೀಸರು ಬಂಧಿಸಿದ್ದಾರೆ. ಶಾಂತಿನಗರದ ನಂಜಪ್ಪ ವೃತ್ತದ ಟಿವಿ ಕಚೇರಿಯೊಂದರ ಬಳಿ ಸೋಮವಾರ ಮಧ್ಯರಾತ್ರಿ ಬಂದು ಕತ್ತು ಕೊಯ್ದುಕೊಂಡು ಹೈಡ್ರಾಮಾ ನಡೆಸಿ ರಂಪಾಟ ನಡೆಸಿದ ಕೂಡಲೇ ಅತನನ್ನು ದೇವರಜೀವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಬ್ಲೇಡ್ ನಿಂದ ಕತ್ತು ಕೊಯ್ದುಕೊಂಡು ರಂಪಾಟ ಮಾಡುತ್ತಿದ್ದ ನದೀಮ್‍ ಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗಿದ್ದು, ಎಸ್‍ಐ ನಯಾಜ್ ಅಹಮದ್ ಮೇಲೆ ಹಲ್ಲೆ ನಡೆಸಿದ ಕೃತ್ಯದಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿರುವ ಇನ್ನೂ ಮೂವರಿಗಾಗಿ ತೀವ್ರ ಶೋಧ ನಡೆಸಿದ್ದಾರೆ.

ಖಾಸಗಿ ಸುದ್ದಿವಾಹಿನಿ ಕಚೇರಿಯ ಎದುರು ನಿನ್ನೆ ಮಧ್ಯರಾತ್ರಿ 2ರ ವೇಳೆ ತಾಯಿಯೊಂದಿಗೆ ಬಂದಿದ್ದ ನದೀಮ್ ನಯಾಜ್ ಅವರು ಮಫ್ತಿಯಲ್ಲಿದ್ದರಿಂದ ಎಸ್‍ಐ ಎಂದು ತಿಳಿಯದೇ ಹಲ್ಲೆ ನಡೆಸಿದ್ದೇನೆ, ಪೊಲೀಸರು ನನ್ನ ಮಾವ ಮತ್ತು ಅಣ್ಣ ನನ್ನು ಕರೆದೊಯ್ದಿದ್ದಾರೆ, ನನ್ನನ್ನು ಎನ್‍ ಕೌಂಟರ್ ಮಾಡಲಿದ್ದಾರೆ, ಪೊಲೀಸರಿಂದ ನನ್ನನ್ನು ರಕ್ಷಿಸಿ ಎಂದು ಬ್ಲೇಡ್‍ ನಿಂದ ಕತ್ತಿನ ಚರ್ಮವನ್ನು ಕೊಯ್ದುಕೊಂಡು ರಂಪಾಟ ಮಾಡಿದ್ದಾನೆ.

ರೌಡಿ ನದೀಮ್ ಇರುವ ಸ್ಥಳವನ್ನು ತಿಳಿದು ಸ್ಥಳಕ್ಕಾಗಮಿಸಿದ ದೇವರಜೀವನಹಳ್ಳಿ ಪೊಲೀಸ್ ಇನ್ಸ್ ಪೆಕ್ಟರ್ ಮುನಿಕೃಷ್ಣ ಮತ್ತವರ ಸಿಬ್ಬಂದಿ ನದೀಮ್‍ ನನ್ನು ಬಂಧಿಸಿ ಕರೆದೊಯ್ದರು. ನದೀಮ್ ಜೊತೆ ಕೃತ್ಯದಲ್ಲಿ ತೊಡಗಿದ್ದ ಇನ್ನೂ ಮೂವರು ಪೊಲೀಸರು ಬರುವುದನ್ನು ಅರಿತು ಅಲ್ಲಿಂದ ಪರಾರಿಯಾದರು. ಕತ್ತಲಲ್ಲಿ ಪರಾರಿಯಾದ ಮೂವರಿಗಾಗಿ ಬೆಳಿಗ್ಗೆವರೆಗೆ ಕಾರ್ಯಾಚರಣೆ ನಡೆಸಲಾಯಿತಾದರೂ ಪತ್ತೆಯಾಗಿಲ್ಲ ಅವರ ಸುಳಿವು ದೊರೆತಿದ್ದು ಶೀಘ್ರದಲ್ಲೇ ಬಂಧಿಸಲಿದ್ದೇವೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಕಳೆದ ಆಗಸ್ಟ್24 ರ ಸಂಜೆ ಉಮರ್ ಎಂಬ ರೌಡಿ ಶೀಟರ್‍ ಹತ್ಯೆಗೆ ಸ್ಕೆಚ್ ಹಾಕಿದ್ದ ರೌಡಿ ನದೀಮ್ ಗ್ಯಾಂಗನ್ನು, ಡಿಜೆ ಹಳ್ಳಿ ಠಾಣೆಯ ಎಸ್‍ಐ ನಯಾಜ್ ಅಹಮದ್ ತಡೆಯಲು ಕಾರ್ಯಾಚರಣೆಗಿಳಿದಿದ್ದರು. ಈ ವೇಳೆ ರೌಡಿಗಳು ಎಸ್‍ಐ ನಯಾಜ್ ಹಣೆಗೆ ಮಚ್ಚಿನಿಂದ ಹೊಡೆದು ಪರಾರಿಯಾಗಿದ್ದರು. ಎಸ್‍ಐ ನಯಾಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಇದೀಗ ಚೇತರಿಸಿಕೊಂಡಿದ್ದಾರೆ.

 ಸಂಬಂಧಿತ ಟ್ಯಾಗ್ಗಳು

ಬೆಂಗಳೂರು ರೌಡಿ ನದೀಮ್‍ ಅರೆಸ್ಟ್ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ