ಕರ್ನಾಟಕದ ಮೇಲೆ ಕಾಕ ದೃಷ್ಠಿ..!

Kannada News

18-03-2017 547

ಕರ್ನಾಟಕವನ್ನು ಭಾರತಾಂಬೆಯ ಹಿರಿಮಗಳು ಎಂದು ನಾಡಿನ ಕವಿಗಳು ಹಾಡಿಹೊಗಳಿದ್ದಾರೆ. ದಖನ್ ಪ್ರಸ್ಥಭೂಮಿಯನ್ನು ಒಳಗೊಂಡಿರುವ ಇಲ್ಲಿ, ಕಾಡುವ ಬರಗಾಲವನ್ನು ಹೊರತುಪಡಿಸಿದರೆ ಪ್ರಾಕೃತಿಕ ವಿಕೋಪಗಳ ಸಂಖ್ಯೆ ಕಡಿಮೆ. ಇಲ್ಲಿನ ಹವಾಗುಣ, ಭೂಮಿಯ ಪರಿಸ್ಥಿತಿ, ಕಾಡು, ನದಿ ಹಳ್ಳ, ಸಾಗರತೀರ ಸೇರಿದಂತೆ ಹಲವು ಪ್ರದೇಶಗಳು ಪ್ರವಾಸೋದ್ಯಮ, ಕೈಗಾರಿಕೋದ್ಯಮ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳಿಗೆ ಹೇಳಿಮಾಡಿಸಿದಂತಿದೆ. 
ಮೊದಲಿಂದಲೂ ಕರ್ನಾಟಕ ಶೈಕ್ಷಣಿಕ ರಾಜಧಾನಿ, ಕಲಾಸಕ್ತರ ನೆಲೆವೀಡು, ಸಾಹಿತ್ಯಾಸಕ್ತರ ಕರ್ಮಭೂಮಿ ಎಂದೇ ಖ್ಯಾತಿ ಪಡೆದಿತ್ತು. ಹೀಗಾಗಿ ದೇಶ ವಿದೇಶಗಳ ಆಸಕ್ತ ಜನತೆ ಸಹಜವಾಗಿ ಕರ್ನಾಟಕದತ್ತ ತಮ್ಮ ಗಮನ ಹರಿಸುತ್ತಿದ್ದಾರೆ. ಈ ರೀತಿಯ ಆಸಕ್ತರನ್ನು ಕನ್ನಡಿಗರು ಅತ್ಯಂತ ಪ್ರೀತಿ, ಹೃದಯ ವೈಶಾಲ್ಯದಿಂದ ಸ್ವಾಗತಿಸಿ ತಮ್ಮಲ್ಲಿರಿಸಿಕೊಳ್ಳುತ್ತಿದ್ದಾರೆ. 
ಕರ್ನಾಟಕದ ಜನರ ಈ ನಡವಳಿಕೆ, ಇಲ್ಲಿನ ಭೌಗೋಳಿಕ ಪರಿಸ್ಥಿತಿ, ಹವಾಗುಣದಿಂದಾಗಿ ಧಾರವಾಡ ವಿದ್ಯಾಕಾಶಿಯಾದರೆ, ಬೆಂಗಳೂರು ಏಷ್ಯಾದ ಸಿಲಿಕಾನ್ ಕಣಿವೆ, ಮೈಸೂರು ಸಾಂಸ್ಕøತಿಕ ರಾಜಧಾನಿ, ಮಂಗಳೂರು ವಾಣಿಜ್ಯ ರಾಜಧಾನಿ, ದಾವಣಗೆರೆ ಕಾಟನ್ ಸಿಟಿ ಎಂದೇ ಖ್ಯಾತಿಯನ್ನು ಪಡೆದವು. 
ಮಾಹಿತಿ ತಂತ್ರಜ್ಞಾನ ವಲಯದಲ್ಲಿನ ಪ್ರಗತಿ ಕರ್ನಾಟಕವನ್ನು ಜಾಗತಿಕ ಪುಟದಲ್ಲಿ ಗುರುತಿಸುವಂತೆ ಮಾಡಿತು. ಅದರಲ್ಲೂ ಬೆಂಗಳೂರು ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ವಲಯದಲ್ಲಿ ಮಾಡಿದ ಸಾಧನೆ ಎಲ್ಲರ ಗಮನ ಸೆಳೆಯಿತು. ಭಾರತಕ್ಕೆ ಭೇಟಿ ಮಾಡುವ ವಿದೇಶಿ ಗಣ್ಯರು ತಪ್ಪದೇ ಬೆಂಗಳೂರಿಗೆ ಭೇಟಿ ನೀಡಿ ಇಲ್ಲಿನ ಐಟಿ-ಬಿಟಿ ಅಭಿವೃದ್ಧಿಯ ಬಗ್ಗೆ ಮಾಹಿತಿ ಪಡೆಯುವುದು ಪರಿಪಾಠವಾಗಿ ಬಿಟ್ಟಿದೆ. ಬೆಂಗಳೂರಿನ ಈ ಸಾಧನೆ ಕರ್ನಾಟಕದ ಅಭಿವೃದ್ಧಿ ಸೂಚ್ಯಾಂಕವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಿತು. 
ಇದಕ್ಕೆ ಪೂರಕವೆಂಬಂತೆ ಎಲ್ಲಾ ಸರ್ಕಾರಗಳು ಬಂಡವಾಳ ಹೂಡಿಕೆದಾರರ ಸಮಾವೇಶದ ಮೂಲಕ ಕರ್ನಾಟಕವನ್ನು ಹೂಡಿಕೆದಾರ ಸ್ನೇಹಿ ರಾಜ್ಯವನ್ನಾಗಿ ಪರಿವರ್ತಿಸಿದವು. ಇದರಿಂದ ಕರ್ನಾಟಕದಲ್ಲಿ ಕೇವಲ ಐಟಿ-ಬಿಟಿ ಕ್ಷೇತ್ರ ಮಾತ್ರ ಬೆಳೆಯಲಿಲ್ಲ. ಆಟೋ ಮೊಬೈಲ್, ಸಿದ್ದ ಉಡುಪು ಸೇರಿದಂತೆ ಉತ್ಪಾದನಾ ವಲಯದ ಉದ್ದಿಮೆಗಳು ಹೆಚ್ಚಿನ ಪ್ರಮಾಣದಲ್ಲಿ ಸ್ಥಾಪನೆಯಾದವು.
ಜಗತ್ತಿನ ದೈತ್ಯ ಉಕ್ಕು ತಯಾರಿಕೆ ಸಂಸ್ಥೆ ಮಿತೈಲ್ ಕರ್ನಾಟಕದಲ್ಲಿ ಬಂಡವಾಳ ಹೂಡಿದ್ದಕ್ಕೆ ಆ್ಯಪಲ್ ಫೋನ್ ತಯಾರಿಕೆ ಘಟಕ ತಮ್ಮಲ್ಲಿ ಆರಂಭಿಸುವಂತೆ ಈ ಸಂಸ್ಥೆಯು ಮುಖ್ಯಸ್ಥರಿಗೆ ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರ ಮತ್ತು ತೆಲಂಗಾಣ ಸರ್ಕಾರಗಳು ಸಾಕಷ್ಟು ಮನವಿ ಮಾಡಿದರೂ ಆ ಸಂಸ್ಥೆಯ ಆಯ್ಕೆ ಬೆಂಗಳೂರೇ ಆಯಿತು.
ಪಶ್ಚಿಮ ಬಂಗಾಳದಿಂದ ಕಾಲ್ತೆಗೆದ ಟಾಟಾ ಸಂಸ್ಥೆ ಕರ್ನಾಟಕದ ಧಾರವಾಡ ಸಮೀಪ ನ್ಯಾನೋ ಕಾರು ತಯಾರಿಕ ಘಟಕ ಆರಂಭಿಸಲು ಮುಂದಾಯಿತಾದರೂ ರಾಜಕೀಯ ಕಾರಣಗಳಿಗಾಗಿ ಅದು ಆಂಧ್ರದ ಪಾಲಾಯಿತು. ಜಗತ್ತಿನ ಯಾವುದೇ ಪ್ರತಿಷ್ಠಿತ ಉದ್ದಿಮೆ ಭಾರತದಲ್ಲಿ ಬಂಡವಾಳ ಹೂಡಲು ಆಸಕ್ತಿ ವಹಿಸಿದರೆ, ಆ ಸಂಸ್ಥೆಯ ಮೊದಲ ಆಯ್ಕೆ ಕರ್ನಾಟಕವಾಗುತ್ತಿದೆ. ಇಲ್ಲಿ ಯಾವುದೇ ಸರ್ಕಾರವಿರಲಿ ಅದು ಯಾವುದೇ ಪರಿಣಾಮ ಬೀರುವುದಿಲ್ಲ ಅಷ್ಟರ ಮಟ್ಟಿಗೆ ಕರ್ನಾಟಕ ಮತ್ತು ಬೆಂಗಳೂರು ಎಲ್ಲರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ. ಇದರ ಪರಿಣಾಮ ಇದೀಗ ಕರ್ನಾಟಕಕ್ಕೆ ಮಾಹಿತಿ ತಂತ್ರಜಾÐನ ರಾಜಧಾನಿ, ಶೈಕ್ಷಣಿಕ ರಾಜಧಾನಿ, ಆರೋಗ್ಯ ರಾಜಧಾನಿ, ಆಟೋ ಮೊಬೈಲ್, ಗಾರ್ಮೆಂಟ್ಸ್ ರಾಜಧಾನಿ ಎಂದೆಲ್ಲಾ ಕರೆಯಲಾಗುತ್ತಿದೆ. ಐಟಿ ವಲಯದ ದಿಗ್ಗಜ ಸಂಸ್ಥೆಗಳು ಇನ್ಫೋಸಿಸ್, ವಿಪ್ರೊ, ಮೈಕ್ರೋಸಾಫ್ಟ್ ಮೊದಲಾದ ಸಂಸ್ಥೆಗಳು ಕರ್ನಾಟಕದಲ್ಲಿ ಬೇರೂರಿದೆ. ಜಗತ್ತಿನ ಎಲ್ಲಾ ಉದ್ಯಮಪತಿಗಳು, ವಿದ್ಯಾವಂತರು, ಶಾಂತಿಪ್ರಿಯ ಜನರು ತಮ್ಮ ಆಯ್ಕೆಯಾಗಿ ಕರ್ನಾಟಕವನ್ನು ನೋಡುತ್ತಿರುವ ಪರಿಣಾಮ ರಾಜಕೀಯವೂ ಸೇರಿ ಹಲವು ಕಾರಣಗಳಿಂದ ಕರ್ನಾಟಕವನ್ನು ಅಭಿವೃದ್ಧಿ ವಿರೋಧಿ ರಾಜ್ಯ, ಇಲ್ಲಿನ ಜನರು ಭಾಷಾ ಅಂಧಾಭಿಮಾನಿಗಳು, ದಂಗೆಕೋರ ಪ್ರವೃತ್ತಿಯವರು, ಸರ್ಕಾರ ಕೈಗಾರಿಕೆ ಮತ್ತು ಬಂಡವಾಳದಾರರ ವಿರೋಧಿ ಎಂತೆಲ್ಲಾ ಹಣೆಪಟ್ಟಿ ಕಟ್ಟಿ ರಾಜ್ಯಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ ನಡೆದಿದೆ.
ಅದರಲ್ಲೂ ನೆರೆಯ ಆಂಧ್ರ, ಮಹಾರಾಷ್ಟ್ರ ಇಲ್ಲಿನ ಉದ್ದಿಮೆಗಳತ್ತ ಕಣ್ಣಿಟ್ಟಿದ್ದು ಅವರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ನಡೆಸಿದರೆ ರಾಜಕೀಯ ಕಾರಣಕ್ಕಾಗಿ ಕೇಂದ್ರ ಸರ್ಕಾರವೂ ಕೂಡಾ ಇಲ್ಲಿ ಎಲ್ಲವೂ ಸರಿಯಿಲ್ಲ ಎಂಬ ವಾತಾವರಣ ನಿರ್ಮಿಸುವ ಪ್ರಯತ್ನ ನಡೆದಿದೆ.
ಇಂತಹ ಪ್ರಯತ್ನದ ಫಲವಾಗಿಯೇ ಟಾಟಾ ಸಂಸ್ಥೆಯು ನ್ಯಾನೊ ಕಾರು ತಯಾರಿಕೆ ಘಟಕ ಕರ್ನಾಟಕದ ಬದಲು ಆಂಧ್ರದತ್ತ ಮುಖ ಮಾಡಿದರೆ ಬಯೋಲಾ ಸಂಸ್ಥೆ ಧಾರವಾಡದ ಬಳಿಯ ತನ್ನ ಘಟಕವನ್ನು ವಿಶಾಖಪಟ್ಟಣಕ್ಕೆ ಸ್ಥಳಾಂತರಿಸಿತು. ಜೈವಿಕ ತಂತ್ರಜ್ಞಾನ ವಲಯದ ಹಲವು ಉದ್ದಿಮೆಗಳು ಮಹಾರಾಷ್ಟ್ರದ ಪುಣೆಗೆ ವರ್ಗಾವಣೆಯಾದರೆ, ಐಟಿ ವಲಯದ ಸಂಸ್ಥೆಗಳು ಹೈದ್ರಾಬಾದ್‍ಗೆ , ಆಟೊ ಮೊಬೈಲ್‍ನ ಹಲವು ಘಟಕಗಳು ತಮಿಳುನಾಡಿನ ಹೊಸೂರು, ಆಂಧ್ರದ ಹಿಂದೂಪುರದತ್ತ ಮುಖಮಾಡಿದೆ.
ಇಂತಹ ವಲಸೆಗೆ ಪ್ರಮುಖ ಕಾರಣ ಇಲ್ಲಿನ ಸರ್ಕಾರ ಅಭಿವೃದ್ಧಿ ಹಾಗು ಕೈಗಾರಿಕೆ ವಿರೋಧಿ, ಬಂಡವಾಳ ಹೂಡುವವರಿಗೆ ಅನುಕೂಲಕರ ವಾತಾವರಣ ಇಲ್ಲಿಲ್ಲ. ಜನತೆ ಕುಡ ಭಾಷೆ, ಪರಿಸರ, ನೀರಿನ ವಿಷಯದಲ್ಲಿ ಅತಿಯಾದ ಅಭಿಮಾನ ಹೊಂದಿದ್ದು, ಅತೀರೇಕದ ವರ್ತನೆ ತೋರುತ್ತಿದ್ದಾರೆಂದು ಅಸಭ್ಯವಾಗಿ ಹಣೆಪಟ್ಟಿ ಕಟ್ಟುವ ಪ್ರಯತ್ನ ನಡೆಸಲಾಗುತ್ತಿದೆ. ಇಷ್ಟಾದರೂ ಕರ್ನಾಟಕ ಹೂಡಿಕೆದಾರರ ಸ್ನೇಹ ರಾಜ್ಯವಾಗಿದೆ. ಶಾಂತಿ ಪ್ರಿಯರ ನೆಲೆವೀಡಾಗಿದೆ. ಅತ್ಯಂತ ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿರುವ ರಾಜ್ಯವಾಗಿ, ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ರಾಜ್ಯ ಮೂರನೇ ಸ್ಥಾನದಲ್ಲಿದೆ.
ಇಂತಹ ಹೆಗ್ಗಳಿಕೆಗೆ ಪಾತ್ರವಾಗಿರುವ ರಾಜ್ಯದಲ್ಲಿ ಬಂಡವಾಳ ಹುಡಿಕೆದಾರರನ್ನು ಆಹ್ವಾನಿಸುವ ದೃಷ್ಠಿಯಿಂದ ಇನ್ವೆಷ್ಟ್ ಕರ್ನಾಟಕ ಎಂಬ ವಿಶ್ವ ಹೂಡಿಕೆದಾರರ ಸಮ್ಮೇಳನ ಆಯೋಜಿಸಲಾಗಿತ್ತು. ಇದು ಜಗತ್ತಿನ ಎಲ್ಲಾ ಉದ್ಯಮಿಪತಿಗಳ ಗಮನ ಸೆಳೆದಿತ್ತು. ಈ ವೇಳೆ ನಗರದಲ್ಲಿ ಕ್ಷುಲ್ಲಕ ಕಾರಣವೆಂದರೆ ಈಶಾನ್ಯ ರಾಜ್ಯದ ವಿದ್ಯಾರ್ಥಿ ಯೊಬ್ಬನ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ದೊಡ್ಡದಾಗಿ ಬಿಂಬಿಸಲಾಯಿತು. ವಯಕ್ತಿಕ ಕಾರಣಕ್ಕೆ ಇಬ್ಬರ ನಡುವೆ ನಡೆದ ಈ ಗಲಾಟೆಗೆ ಜನಾಂಗಿಯ ದ್ವೇಶದ ಸ್ವರೂಪ ನೀಡಲಾಯಿತು. ಕರ್ನಾಟಕದಲ್ಲಿ ಅಹಿತಕರ ವಾತಾವರಣ ವಿದೆ, ಬೆಂಗಳೂರು ಸುರಕ್ಷಿತ ನಗರವಲ್ಲ, ಅನ್ಯ ಭಾಷೆಯ ಜನರಿಗೆ ಇಲ್ಲಿ ಭದ್ರತೆಯಿಲ್ಲ ಎಂದು ವ್ಯವಸ್ಥಿತವಾಗಿ ಬಿಂಬಿಸಲಾಯಿತು. ಜೊತೆಗೆ ಅಂದು ಗೃಹ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದ ಕೆ.ಜೆ. ಜಾರ್ಜ್ ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಯಿತು. 
ಬೆಂಗಳೂರು ಜನಾಂಗಿಯ ದ್ವೇಶದ ವಾತಾವರಣ ಇಲ್ಲಾ ಎಂಬುವುದನ್ನು ಸಾರಿ ಹೇಳಲು ಸರ್ಕಾರ ಅಂದು ಸಾಕಷ್ಟು ಬೆವರು ಹರಿಸಬೇಕಾಯಿತು. ಕೇಂದ್ರ ಗೃಹ ಸಚಿವ ಕಿರೇನ್‍ರಿಜಿಜಿ ಅವರನ್ನೇ ಬೆಂಗಳೂರಿಗೆ ಕರೆಯಿಸಿಕೊಳ್ಳಬೇಕಾಯಿತು.
ಇದು ಮುಗಿಯಿತು ಎನ್ನುತ್ತಿರುವಾಗಲೇ ಲೈಂಗಿಕ ಕಿರುಕುಳ ಪ್ರಕರಣವೊಂದನ್ನಿಟ್ಟುಕೊಂಡು ಬೆಂಗಳೂರಿನಲ್ಲಿ ಭದ್ರತೆ ಇಲ್ಲಾ ಎಂಂತೆ ಚಿತ್ರಿಸಲಾಯಿತು. ಇಂತಹ ಅಪಪ್ರಚಾರದ ಪ್ರಮುಖ ಉದ್ದೇಶ “ಇನ್ವೆಸ್ಟ್ ಕರ್ನಾಟಕ ಶೃಂಗ”. ಆದರೆ ಈ ಮಹಾಮೇಳ ಯಶಸ್ವಿಯಾಗಿ ದಾಖಲೆ ಪ್ರಮಾಣದ ಹೂಡಿಕೆ ಹರಿದು ಬಂತು.
ಇಂತಹ ಯಶಸ್ಸಿನಿಂದಾಗಿ ಸಹಜವಾಗಿ ಕರ್ನಾಟಕಕ್ಕೆ, ಅದರಲ್ಲೂ ಬೆಂಗಳೂರಿಗೆ ಉತ್ತಮ ನಗರ ಎಂಬ ಖ್ಯಾತಿ ಪಡೆಯುತ್ತಿದ್ದಂತೆ ಅನಿವಾರ್ಯವಾಗಿ ಪ್ರವಾಸಿ ಭಾರತ ಶೃಂಗವನ್ನು ಆಯೋಜಿಸುವ ಅವಕಾಶ ರಾಜ್ಯಕ್ಕೆ ಲಭಿಸಿತು. ಸರ್ಕಾರ ಇದರ ಸಿದ್ದತೆಗೆ ಸಾಕಷ್ಟು ಬೆವರು ಹರಿಸಿತು. ಅನೇಕ ಪ್ರತಿಷ್ಠಿತರು ಇದಕ್ಕೆ ಆಸಕ್ತಿ ವಹಿಸಿದರು. ಇದರಿಂದ ಸಮ್ಮೇಳನ ಉತ್ತಮ ಯಶಸ್ಸು ಪಡೆಯಲಿದೆ ಎಂದು ಭಾವಿಸಿದ ಕೆಲವು ಶಕ್ತಿಗಳು ಇದನ್ನು ಸಹಿಸದೆ ಮತ್ತೊಂದು ಸುತ್ತು ಅಪಪ್ರಚಾರಕ್ಕೆ ಮುಂದಾದರು. ಅವರಿಗೆ ಸಿಕ್ಕಿದು ಹೊಸವರ್ಷದ ಮುನ್ನಾದಿನ ನಡೆದ ಒಂದು ಘಟನೆ. ಅದನ್ನಿಟ್ಟುಕೊಂಡು ಬೆಂಗಳೂರು ಅಸುರಕ್ಷಿತ ಎಂದೇ ಬಿಂಬಿಸಲಾಯಿತು. ಬೆಂಗಳೂರಿನ ಕಮ್ಮನ ಹಳ್ಳಿಯಲ್ಲಿ ಒಂಟಿ ಮಹಿಳೆ ಮೇಲೆ ಅಡ್ಡದಾರಿಯ ಕೆಲವು ಯುವಕರು ನಡೆಸಿದ ಕುಕೃತ್ಯ ದೊಡ್ಡ ರೀತಿಯಲ್ಲಿ ಬಿಂಬಿಸಲಾಯಿತು. 
ಅದೇ ದಿನ ರಾಜಧಾನಿ ದಿಲ್ಲಿಯಲ್ಲಿ ನಡೆದ ಇಂತಹದೇ ಘಟನೆ ಅದನ್ನು ತಡೆಯಲು ಹೋದ ಪೊಲೀಸರ ಮೇಲಿನ ಹಲ್ಲೆ, ಗುಜರಾತ್‍ನಲ್ಲಿ ನಡೆದ ಅತಿರೇಕದ ವರ್ತನೆಗಳು, ಮುಂಬೈನ ಜುಹೂ ಬೀಚ್‍ನಲ್ಲಿಯ ಪಾತಕಿಗಳ ಕೃತ್ಯ ಗಮನ ಸೆಳೆಯೇ ಇಲ್ಲ. ಮಾಧ್ಯಮಗಳಲ್ಲಿ ಇವುಗಳು ಕೇವಲ ಒಂದು ಸುದ್ದಿಯಾಗಿ ವರದಿಯಾದವೇ ಹೊರತು ಬೆಂಗಳೂರಿನ ಘಟನೆಯಂತೆ ವೈಭವೀಕರಣಗೊಳ್ಳಲಿಲ್ಲ. ಈ ವೈಭವೀಕರಣದ ಹಿಂದಿನ ಸತ್ಯ ಪ್ರವಾಸಿ ಭಾರತೀಯ ದಿವಸ್ ಸಮ್ಮೇಳನ.
ಇಂತಹ ವ್ಯವಸ್ಥಿತ ಅಪಪ್ರಾಚಾರದ ಸಮಸ್ಯೆಯು ಆ ಸಮ್ಮೇಳನ ಯಶಸ್ವಿಯಾಗಿ ಅನಿವಾರ್ಯವಾಗಿ ಕೇಂದ್ರ ಸರ್ಕಾರ ಕೂಡ ರಾಜ್ಯದ ಪ್ರಯತ್ನವನ್ನು ಶ್ಲಾಘಸಿಬೇಕಾಯಿತು. ಅಭಿವೃದ್ಧಿಯಲ್ಲಿ ಕರ್ನಾಟಕ ಸಾಗುತ್ತಿರುವ ಹಾದಿ ಮಗ್ಗುಲು ಮುಳ್ಳಾದಂತೆ ಕಾಣುತ್ತಿದೆ. ಇಲ್ಲಿನ ಸರ್ಕಾರ ರೂಪಿಸುವ ಯೋಜನೆಗಳಿಗೆ ಹಲವು ನೆಪಗಳನ್ನಿಟ್ಟು ವಿರೋಧಿಸುವ, ಆ ಮೂಲಕ ಅಭದ್ರತೆ ಸೃಷ್ಠಿಸುವಂತ ಷಡ್ಯಂತ್ರ ನಡೆಯುತ್ತಿದೆ ಎಂಬ ಸಂದೇಹ ಎಲ್ಲರನ್ನೂ ಕಾಡುತ್ತಿದೆ. ಇಂತಹ ಷಡ್ಯಂತ್ರ ಈ ಸರ್ಕಾರದ ಅವಧಿಯಲ್ಲಿ ಮಾತ್ರ ಎಂದೇನು ಅಲ್ಲ. ಈ ಹಿಂದಿನ ಸರ್ಕಾರಗಳ ಅವಧಿಯಲ್ಲೂ ನಡೆದಿತ್ತು. ಅಭಿವೃದ್ಧಿ ಸೇರಿದಂತೆ ಹಲವು ವಿಷಯಗಳಲ್ಲಿ ಆರೋಗ್ಯಕರ ಪೈಪೋಟಿ ಕೈಬಿಟ್ಟು ಅನಾರೋಗ್ಯಕರ ರೀತಿಯಲ್ಲಿ ವ್ಯವಸ್ಥಿತ ಅಪಪ್ರಚಾರ ಹಾಗೂ ಯೋಜನೆಗಳನ್ನು ವಿರೋಧಿಸುವ ಯತ್ನ ನಡೆಯುತ್ತಿದೆ.
ಇದಕ್ಕೆ ಇನ್ನಷ್ಟು ಉದಾಹರಣೆ ನೀಡುವುದಾದರೆ ಬಯಲು ಸೀಮೆ ಜಿಲ್ಲೆಗಳ ಕುಡಿಯುವ ನೀರಿನ ಯೋಜನೆಯಾದ ಎತ್ತಿನಹೊಳೆ ಯೋಜನೆ. ಇದಕ್ಕೆ ಕರಾವಳಿ ಜನ ವಿರೋಧಿಸುವುದಕ್ಕೆ ಅವರದೇ ಆದ ಸಮರ್ಥನೆ ಇದೆ. ಆದರೆ ಯೋಜನೆಯಿಂದ ಪರಿಸರಕ್ಕೆ ಹಾನಿಯಾಗಲಿದೆ ಎಂದು ದೊಡ್ಡ ತಕರಾರು ತೆಗೆದಿರುವ ಶಕ್ತಿಗಳ ಬಗ್ಗೆ ಅನುಮಾನ ಮೂಡಲಿದೆ. ಈ ಶಕ್ತಿಗಳು ಹೊಗೆನಕಲ್ ಯೋಜನೆಯಿಂದ ಪರಿಸರ ಹಾನಿಯಾಗುತ್ತದೆಂದು ಯಾಕೆ ವಾದಿಸಿಲ್ಲ. ಬೆಂಗಳೂರಿನ ಉಕ್ಕಿನ ಸೇತುವೆ ವಿರುದ್ಧ ದೊಡ್ಡ ಧ್ವನಿಯೆತ್ತಿರುವ ಶಕ್ತಿಗಳು ಮುಂಬೈನ ಅತಿ ಉದ್ದದ ಮೇಲ್ಸೇತುವೆ ಬಗ್ಗೆ ಚಕಾರ ಎತ್ತಲಿಲ್ಲ. ಸಾರ್ವಜನಿಕ ಸೇವೆಗೆ ಬಳಕೆಯಾದ ಕೆಲವೇ ದಿನಗಳಲ್ಲಿ ಆ ಮೇಲ್ಸೇತುವೆ ಸ್ಥಿತಿ ಏನಾಯಿತು ಎಂದು ಎಲ್ಲರಿಗೂ ಗೊತ್ತಿದೆ. ನೂತನ ರಾಜ್ಯ ಆಂಧ್ರ ಪ್ರದೇಶದ ಉದ್ಧೇಶಿತ ರಾಜಧಾನಿ ಅಮರಾವತಿ ನಿರ್ಮಾಣದಲ್ಲಾಗುತ್ತಿರುವ ಪರಿಸರ ಅಸಮತೋಲನದ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂಬ ಪ್ರಶ್ನೆಗಳು ಜನಸಾಮಾನ್ಯರಲ್ಲಿ ಕಾಡುತ್ತಿದೆ.

ಇನ್ನು ಕರ್ನಾಟಕದಲ್ಲಿ ಅಭಿವೃದ್ಧಿ ಎಂದರೆ ಕೇವಲ ಬೆಂಗಳೂರು ಮಾತ್ರವೇ, ಯೋಜನೆಗಳೆಲ್ಲಾ ಬೆಂಗಳೂರಿಗೆ ಸೀಮಿತವೇ, ರಾಜ್ಯದಲ್ಲಿ ಬೇರೆ ಇನ್ನೊಂದು ನಗರಗಳೇ ಇಲ್ಲವೆ, ಸರ್ಕಾರಗಳಿಗೆ ಮೈಸೂರು, ಹುಬ್ಬಳ್ಳಿ, ದಾವಣಗೆರೆ, ಶಿವಮೊಗ್ಗ, ಹಾವೇರಿ, ಬೆಳಗಾವಿ, ಕಲಬುರ್ಗಿ, ಬೀದರ್, ವಿಜಯಪುರದಂತಹ ನಗರಗಳು ಕಾಣಿಸುತ್ತಿಲ್ಲವೆ ಎಂದು ಪ್ರಶ್ನಿಸಲಾಗುತ್ತಿದೆ. ಈ ಪ್ರಶ್ನೆಗಳಿಗೂ ಸಮರ್ಥನೆಯಿದೆ. ಹೀಗಾಗಿ ಸರ್ಕಾರ ಈ ನಗರಗಳ ಅಭಿವೃದ್ಧಿ ಯಾಕಾಗುತ್ತಿಲ್ಲ ಎಂಬುದನ್ನು ಅವಲೋಕಿಸಿದಾಗ ಕಾನೂನಿನ ಕೆಲವು ತೊಡಕುಗಳು ಕಾಣಿಸುತ್ತಿದೆ.
ಇಂತಹ ತೊಡಕಿನಲ್ಲಿ ಮಹತ್ವವಾದದ್ದು ನಗರ ಪರಿಮಿತಿ ಯೋಜನೆ. 80ರ ದಶಕದಲ್ಲಿನ ಸ್ಥಿತಿಗತಿ ಆಧರಿಸಿ ಈ ಯೋಜನೆ ರೂಪಿಸಲಾಗಿತ್ತು. ಇಲ್ಲಿಯವರೆಗೆ ಇದನ್ನು ಪರಿಷ್ಕರಣೆ ಮಾಡಿಲ್ಲ. ನಗರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ವಿದ್ಯುತ್ ವಿತರಣಾ ಸಂಸ್ಥೆಗಳು, ಜಲಮಂಡಳಿ, ಒಳಚರಂಡಿ ಮಂಡಳಿ, ಮಾಲಿನ್ಯ ನಿಯಂತ್ರಣ ಮಂಡಳಿ, ಅರಣ್ಯ ಇಲಾಖೆ ಸಹಕಾರ ಜಿಲ್ಲಾ ಪಂಚಾಯಿತಿಗಳಿಗೆ ಇದರಲ್ಲಿ ಅವಕಾಶ ನೀಡಲಾಗಿಲ್ಲ.
ಈಗ ಈ ಎಲ್ಲಾ ಸಂಸ್ಥೆಗಳಿಗೆ ಅವಕಾಶ ಕಲ್ಪಸಿ ನಗರ ಪರಿಮಿತಿ ಯೋಜನೆಯಲ್ಲಿ ಮಾರ್ಪಾಡು ಮಾಡುವ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯಿದೆ 1987ಕ್ಕೆ ತಿದ್ದುಪಡಿ ಮಾಡುವ ಪ್ರಸ್ತಾವನೆ ಮಂಡಿಸಲಾಗಿದೆ. ಈ ಕಾಯಿದೆ ಬೆಂಗಳೂರು ನಗರಕ್ಕೆ ಅನ್ವಯಿಸುವುದಿಲ್ಲ. ಬೆಂಗಳೂರು ನಗರಕ್ಕೆ ಪ್ರತ್ಯೇಕವಾದ ಪ್ರಾಧಿಕಾರ ಮತ್ತು ನಗರ ಸಮಿತಿ ಯೊಜನೆ ಇದೆ. ಬಿ.ಎಂ.ಆರ್.ಡಿ.ಎ ಇದರ ಉಸ್ತುವಾರಿಯನ್ನು ವಹಿಸಿದೆ.
ಹೀಗಾಗಿ ಬೆಂಗಳೂರು ನಗರವನ್ನು ಹೊರತು ಪಡಿಸಿ ರಾಜ್ಯದ ಇತರೆ ನಗರಗಳ ಅಭಿವೃದ್ಧಿಗೆ ಅನುಕೂಲ ಕಲ್ಪಿಸುವ ದೃಷ್ಠಯಿಂದ ನಗರ ಸಮಿತಿ ಯೋಜನೆಯಲ್ಲಿ ಮಾರ್ಪಾಡು ಮಾಡಿ ಕಾಯಿದೆಗೆ ತಿದ್ದುಪಡಿ ಪ್ರಸ್ತಾಪಿಸಲಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಬಗ್ಗೆ ವ್ಯಾಪಕ ಚೆರ್ಚೆ ನಡೆದು ತಿದ್ದುಪಡಿ ಮಸೂದೆ ಸಿದ್ದಗೊಂಡಿತ್ತು. ಅಂದು ನಗರಾಭಿವೃದ್ಧಿ ಸಚಿವರಾಗಿದ್ದ ಸುರೇಶ್ ಕುಮಾರ್ ಅವರ ಪ್ರಯತ್ನದ ಫಲವಾಗಿ ತಿದ್ದುಪಡಿ ಮಸೂದೆ ಸಿದ್ದಗೊಂಡಿತ್ತು.
ಪ್ರಸ್ತುತ ಸರ್ಕಾರ ಮತ್ತಷ್ಟು ಅಧ್ಯಯನ ನಡೆಸಿ ಅಂದಿನ ಸರ್ಕಾರ ರೂಪಿಸಿದ ತಿದ್ದುಪಡಿ ಪ್ರಸ್ತಾವನೆಗಳಿಗೆ ಸಮ್ಮತಿಸಿ ಕಾಯಿದೆಗೆ ತಿದ್ದುಪಡಿ ಮಾಡಲು ಮುಂದಾಗಿದೆ. ಇದಕ್ಕಾಗಿ ಮತ್ತೊಂದು ರೀತಿಯ ವಿರೋಧ ವ್ಯಕ್ತಪಡಿಸಲಾಗುತ್ತಿದೆ. 
ಸದ್ಯ ಇರುವ ಕಾಯಿದೆ ಬೆಂಗಳೂರಿಗೆ ಅನ್ವಯವಾಗುವುದಿಲ್ಲ, ತಿದ್ದುಪಡಿ ಕೂಡಾ ಬೆಂಗಳೂರಿಗೆ ಅನ್ವಯವಾಗುವುದಿಲ್ಲ ಎಂದಿದ್ದರೂ, ಈ ತಿದ್ದುಪಡಿ ಮೂಲಕ ಬೆಂಗಳೂರು ಚಿತ್ರಣ ಬದಲಾಗಲಿದೆ. ಬೆಂಗಳೂರು ಬರಿ ಕಾಂಕ್ರಿಟ್ ಕಾಡಾಗಲಿದೆ, ಇಲ್ಲಿನ ಹಸಿರು ವಲಯ ನಿರ್ನಾಮವಾಗಲಿದೆ, ಉಕ್ಕಿನ ಸೇತುವೆ ನಿರ್ಮಾಣಕ್ಕೆ ಪ್ರಭಲವಾಗಿ ಪ್ರತಿಪಾದಿಸುತ್ತಿರವ ಸಚಿವ ಕೆ.ಜೆ. ಜಾರ್ಜ್ ತಮ್ಮ ಉದ್ದೇಶ ಈಡೆರಿಸಿಕೊಳ್ಳಲು ಇಂತಹ ಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ.
ಉದ್ದೇಶಿತ ತಿದ್ದುಪಡಿ ಮಸುದೆಯಲ್ಲಿ ಬೆಂಗಳೂರು ಹೊರತುಪಡಿಸಿ ರಾಜ್ಯದ ಇತರ ನಗರಗಳಲ್ಲಿ ಬಡಾವಣೆಗಳನ್ನು ಅಭಿವೃದ್ಧಿ ಪಡಿಸುವ ವೇಳೆ ಆಟದ ಮೈದಾನ ಮತ್ತು ಉದ್ಯಾನಕ್ಕೆ ಮೀಸಲಿಡುವ ನಗರ ಪ್ರಮಾಣ ಒಟ್ಟು ಬಡಾವಣೆಯ ಶೆ. 15 ಕ್ಕೆ ಬದಲಾಗಿ ಶೇ. 10 ರಷ್ಟು ಬಿಡಲು ಅವಕಾಶ ಕಲ್ಪಿಸಲಾಗಿದೆ. ಅದೇ ರೀತಿ ಆಸ್ಪತ್ರೆ, ದೇವಾಲಯ, ಪ್ರಾರ್ಥನಾ ಮಂದಿರ, ಸಮುದಾಯ ಭವನದಂತಹ ಸಾರ್ವಜನಿಕ ಉಪಯೋಗದ ಕಟ್ಟಡಗಳಿಗೆ ಸದ್ಯ ಶೇ. 10 ರಷ್ಟು ಜಾಗ ಮೀಸಲಿಡಬೇಕಿದ್ದು ಇದನ್ನು ಶೇ. 5 ಕ್ಕೆ ಸೀಮಿತ ಗೊಳಿಸಿದೆ. ಇದು 2ನೇ ಹಂತದ ನಗರಗಳ ಅಭಿವೃದ್ಧಿ ಹಾಗೂ ಹೂಡಿಕೆ ಉತ್ತೇಜನ ದೃಷ್ಠಿಯಿಂದ ಕಗೈಕೊಂಡಿರುವ ಕ್ರಮ.
ಈ ತಿದ್ದುಪಡಿಯನ್ನು ಈಗ ಬೆಂಗಳೂರಿನ ಜೊತೆ ತಳಕು ಹಾಕಲಾಗುತ್ತಿದೆ. ಸದ್ಯ ಬೆಂಗಳೂರು ಸಾಕಷ್ಟು ಬೆಳೆದಿದೆ, ನಗರಕ್ಕೆ ಪ್ರತ್ಯೇಕವಾದ ಸಿಡಿಪಿ ಇದೆ. ಹೀಗಿರುವಲ್ಲಿ ನೂತನ ತಿದ್ದುಪಡಿ ಕಾಯಿದೆ ಇಲ್ಲಗೆ ಅಳವಡಿಸಲು ಸಾದ್ಯವೇ ಇಲ್ಲ ಎಂಬುದು ಸುಸ್ಪಷ್ಟವಾಗಿದ್ದರೂ ಈ ಕಾಯಿದೆ ಮೂಲಕ ಬೆಂಗಳೂರಿನ ಹಸಿರು ವಲಯವನ್ನು ರಿಯಲ್ ಎಸ್ಟೇಟ್ ಕುಳಗಳಿಗೆ ಒಪ್ಪಿಸುವ ಪ್ರಯತ್ನ ನಡೆದಿದೆ. ನಗರದ ಸುತ್ತಮುತ್ತ ಇರುವ ವನರಾಶಿ, ನಗರದಲ್ಲಿನ ಹಸಿರು ಉದ್ಯಾನವನಗಳು ಕಾಂಕ್ರೆಟ್ ಕಾಡಾಗಿ ಪರಿವರ್ತನೆಯಾಗಲಿದೆ. ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ ಮುಂದಾಗಿರುವ ಸರ್ಕಾರಕ್ಕೆ ಹಸಿರು ನ್ಯಾಯಮಂಡಳಿ ಹೊಡೆತ ನೀಡುವ ಸಾಧ್ಯತೆಯಿದೆ. ಕೋರ್ಟ್‍ನಿಂದ ಪಾರಾಗಲು ಇಂತಹ ಕಾಯಿದೆ ರೂಪಿಸಲಾಗುತ್ತಿದೆ. ಸಚಿವ ಕೆ.ಜೆ. ಜಾರ್ಜ್ ಅವರ ವಿಶೇಷ ಆಸಕ್ತಿಯ ಪರಿಣಾಮ ಈ ತಿದ್ದುಪಡಿ ಮಸೂದೆ ಸಿದ್ದಗೊಂಡಿದೆ ಎಂದು ಆರೋಪಿಸಲಾಗುತ್ತಿದೆ. 
ವಾಸ್ತವಾಗಿ ಈ ತಿದ್ದುಪಡಿ ಮಸೂದೆ ಕೆ.ಜೆ.ಜಾರ್ಜ್ ಮತ್ತು ಬೆಂಗಳೂರಿಗೆ ಯಾವುದೇ ಸಂಬಂಧವಿಲ್ಲ. ಆದರೆ ಇದೀಗ ಸಂಬಂಧವನ್ನು ತಳುಕು ಹಾಕಲಾಗುತ್ತಿದೆ. ಬೆಂಗಳೂರಿನಲ್ಲಿ ಅಭಿವೃದ್ಧಿಯ ಹೆಸರಲ್ಲಿ ನೂರಾರು ಮರಗಳ ಮಾರಣ ಹೋಮವಾಗಲಿದೆ. ಪರಿಸರದ ಮೇಲೆ ಭಾರಿ ದುಷ್ಪರಿಣಾಮ ಬೀರಲಿದೆ ಎಂಬ ಆರೋಪ ಮಾಡುತ್ತಾ ದೊಡ್ಡ ರೀತಿಯ ಪ್ರತಿಭಟನೆಗೆ ವೇದಿಕೆ ಸಿದ್ದಪಡಿಸಲಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಈಗಾಗಲೇ ಪರಿಸರವಾದಿಗಳು, ಹೋರಾಟ ಆರಂಭಿಸಿದ್ದಾರೆ, ಮತ್ತೊಂದೆಡೆ ಪರಿಸರವಾದಿಗಳ ಸೋಗಿನಲ್ಲಿ ಕೆಲ ಪಟ್ಟಭದ್ರರು ಪ್ರತಿಭಟನೆಯನ್ನು ತೀವ್ರ ಸ್ವರೂಪಕ್ಕೆ ಕೊಂಡೊಯ್ಯುತ್ತಿದ್ದಾರೆ. ವಾಸ್ತವವಾಗಿ ಅವರಿಗೆ ಬೆಂಗಳೂರು ಈಗ ಗಳಿಸಿರುವ ಡೈನಾಮಿಕ್ ಸಿಟಿ ಎಂಬ ಪ್ರಸಿದ್ಧಿಯನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಅವರಿಗೆ ಬೆಂಗಳೂರಿನಲ್ಲಿ ಯಾವುದೇ ಅಭಿವೃದ್ಧಿ ಯೋಜನೆಗಳು ಸುಲಭವಾಗಿ ಜಾರಿಯಾಗಲು ಸಾಧ್ಯವಿಲ್ಲ. ಇಲ್ಲಿ ಎಲ್ಲದಕ್ಕೂ ಪರಿಸರವಾದಿಗಳೆ ಅಡ್ಡಿಮಾಡುತ್ತಾರೆ. ಇವರ ಮೇಲೆ ಸರ್ಕಾರಕ್ಕೆ ಯಾವುದೇ ನಿಯಂತ್ರಣವಿಲ್ಲ. ಹೀಗಾಗಿ ಬಂಡವಾಳ ಹೂಡುವವರಿಗೆ ಭದ್ರತೆ ಇಲ್ಲದಂತಾಗಿದೆ ಜೊತೆಯಲ್ಲಿ ಹೂಡುವ ಬಂಡವಾಳ ನಷ್ಟವಾಗಲಿದೆ ಎಂಬ ಅನುಮಾನ ಬರುವ ರೀತಿಯಲ್ಲಿ ತಂತ್ರಗಾರಿಕೆ ರೂಪಿಸುತ್ತಿದ್ದಾರೆ. 
ಇಂತಹ ತಂತ್ರಗಾರಿಕೆಯನ್ನು ರೂಪಿಸಲು ವಿಶೇಷವಾದ ಸಮಯಕ್ಕೆ ಕಾದು ಕುಳಿತಿರುತ್ತಾರೆ. ಅವರಿಗೆ ಸದ್ಯ ಬೆಂಗಳೂರಿನಲ್ಲಿ ಆಯೋಜಿಸಿದ್ದ ಮೇಕಿಂಗ್ ಇನ್ ಕರ್ನಾಟಕ ಮತ್ತು ಅಂತರಾಷ್ಟ್ರೀಯ ವೈಮಾನಿಕ ಪ್ರದರ್ಶನಗಳು ಅನುಕೂಲಕರವಾಗಿ ಪರಿಣಮಿಸಿದೆ. ಇಂತಹ ಸಮಯದಲ್ಲಿ ಜಗತ್ತಿನ ನಾನಾ ಭಾಗಗಳಿಂದ ಉದ್ದಿಮೆದಾರರು, ಉದ್ಯಮಶೀಲರು ಮತ್ತು ಆಸಕ್ತರು ಬೆಂಗಳೂರಿಗೆ ಬರುತ್ತಾರೆ. ಈ ವೇಳೆ ಇಂತಹ ಪ್ರತಿಭಟನೆಗೆ ಮತ್ತು ವಿರೋಧಗಳ ಮೂಲಕ ಅವರಿಗೆ ಸ್ವಾಗತ ನೀಡಿದರೆ ಅವರಲ್ಲಿ ಕರ್ನಾಟಕ ಮತ್ತು ಬೆಂಗಳೂರಿನ ಬಗ್ಗೆ ಇರುವ ಅಭಿಪ್ರಾಯ ಬೇರಯಾಗಲಿದೆ ಈ ಮೂಲಕ ತಮ್ಮ ಉದ್ದೇಶ ಈಡೇರಿಸಿಕೊಳ್ಳಬಹುದು ಎನ್ನುವುದು ಈ ಪಟ್ಟಭದ್ರರ ಲೆಕ್ಕಾಚಾರ.
ಈ ಮೂಲಕ ಕರ್ನಾಟಕ ಮತ್ತು ಬೆಂಗಳೂರಿನ ಮೇಲೆ ಮತ್ತೊಂದು ಸುತ್ತಿನ ಪ್ರಹಾರ ಆರಂಭವಾಗಿದೆ. ಈ ಯೋಜನೆ ಜಾರಿಗೆ ಬಂದರೆ ಕರ್ನಾಟಕದ ಇತರೆ ನಗರಗಳು ಅಭಿವೃದ್ಧಿ ಹೊಂದಲಿದೆ. ಕರ್ನಾಟಕ ಜಗತ್ತಿನ ಭೂಪಟದಲ್ಲಿ ಮತ್ತಷ್ಟು ಪ್ರಾಬಲ್ಯ, ಪ್ರಾಮುಖ್ಯತೆ ಪಡೆಯಲಿದೆ ಎಂದು ಭಾವಿಸಿರುವ ಕೆಲವು ಪಟಭದ್ರ ಹಿತಾಸಕ್ತಿಗಳು ವ್ಯವಸ್ಥಿತ ಪಿತೂರಿಯ ಮೂಲಕ ಇಂತಹ ಅಪಪ್ರಚಾರ ಆರಂಭಿಸಿದೆ. ಇಂತಹ ಪಿತೂರಿಯಿಂದ ಕರ್ನಾಟಕ ಮತ್ತು ಬೆಂಗಳೂರನ್ನು ರಕ್ಷಿಸಿ ರಾಜ್ಯವನ್ನು ಅಭಿವೃದ್ಧಿ ಪಡಿಸುವತ್ತ ಕೊಂಡೊಯ್ಯುವುದು ನಿಜಕ್ಕೂ ಯಾವದೇ ಸರ್ಕಾರಕ್ಕಾದರೂ ದೊಡ್ಡ ಸವಾಲೇ ಸರಿ. 
 

Links :
ಸಂಬಂಧಿತ ಟ್ಯಾಗ್ಗಳು

ಸಂಬಂಧಿತ ಟ್ಯಾಗ್ಗಳನ್ನು ಲಭ್ಯವಿಲ್ಲಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ