ದ್ವಿತೀಯ ಪಿಯುಸಿ: 2018 ಕೊನೇ ಅವಕಾಶ..?

Kannada News

28-08-2017

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಫೇಲಾಗಿರುವ ವಿದ್ಯಾರ್ಥಿಗಳಿಗೆ ಉತ್ತೀರ್ಣರಾಗಲು 2018ರ ಪೂರಕ ಪರೀಕ್ಷೆಯೇ ಕೊನೇ ಅವಕಾಶವಾಗಿದೆ. ಒಂದು ವೇಳೆ ಆ ಪರೀಕ್ಷೆಯಲ್ಲೂ ಫೇಲಾದರೆ ಹಳೇ ಪಠ್ಯಕ್ರಮದಲ್ಲಿ ಪರೀಕ್ಷೆ ಬರೆಯಲು ಇನ್ನು ಮುಂದೆ ಅವಕಾಸ ಸಿಗುವುದಿಲ್ಲ. ಹಳೇ ಪಠ್ಯಕ್ರಮದಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ 2018ರ ಪೂರಕ ಪರೀಕ್ಷೆವರೆಗೆ ಮಾತ್ರ ಹಳೇ ಪಠ್ಯಕ್ರಮ ಅನುಸಾರ ಪರೀಕ್ಷೆ ಬರೆಯುವ ಅವಕಾಶವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಕಲ್ಪಿಸಿದೆ. ಈ ಸಂಬಂಧ ಸುತ್ತೋಲೆ ಕೂಡ ಹೊರಡಿಸಿದೆ.

ಪಿಸಿಎಂಬಿ ಹೊರತುಪಡಿಸಿ ಕಲಾ, ವಾಣಿಜ್ಯ, ಭಾಷೆ ಹಾಗೂ ಗೃಹ ವಿಜ್ಞಾನ, ಕಂಪ್ಯೂಟರ್ ಸೈನ್ಸ್, ಸಂಖ್ಯಾಶಾಸ್ತ್ರ ಹಾಗೂ ಎಲೆಕ್ಟ್ರಾನಿಕ್ಸ್ ವಿಷಯಗಳಲ್ಲಿ ಹಳೇ ಪಠ್ಯಕ್ರಮದಲ್ಲಿ, 2018ರ ಮಾರ್ಚ್‍ನಲ್ಲಿ ನಡೆಯುವ ವಾರ್ಷಿಕ ಪರೀಕ್ಷೆ ಹಾಗೂ ಇದರಲ್ಲಿ ಅನುತ್ತೀರ್ಣರಾದರೆ ಅದೇ ವರ್ಷ ನಡೆಯುವ ಪೂರಕ ಪರೀಕ್ಷೆಯನ್ನು ಬರೆಯಬಹುದು. ಆದರೆ, ಪೂರಕ ಪರೀಕ್ಷೆಯೇ ಕೊನೆಯ ಅವಕಾಶವಾಗಲಿದ್ದು, ಹಳೇ ಪಠ್ಯಕ್ರಮದಲ್ಲಿ ಪರೀಕ್ಷೆ ಬರೆಯುವ ಅವಕಾಶವನ್ನು ಯಾವುದೇ ಕಾರಣಕ್ಕೂ ಮತ್ತೆ ವಿಸ್ತರಿಸಲಾಗುವುದಿಲ್ಲ ಎಂದು ಶಿಕ್ಷಣ ಇಲಾಖೆ ಸುತ್ತೋಲೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ.

ವಿಜ್ಞಾನ ವಿಭಾಗದಲ್ಲಿ ಈ ಹಿಂದೆ ಇದ್ದ 90+10(ಪ್ರಾಯೋಗಿಕ ಪರೀಕ್ಷೆ ಅಂಕ) ವ್ಯವಸ್ಥೆಯನ್ನು ಬದಲಾವಣೆ ಮಾಡಿ 3 ವರ್ಷದ ಹಿಂದೆ 70+30 ಅಂಕಗಳ ಪಠ್ಯಕ್ರಮನ್ನು ಜಾರಿಗೆ ತರಲಾಗಿದೆ. ಹಳೇ ಪಠ್ಯಕ್ರಮದಲ್ಲಿ ಪರೀಕ್ಷೆ ತೆಗೆದುಕೊಂಡು ಅನುತ್ತೀರ್ಣರಾಗಿದ್ದ ವಿದ್ಯಾರ್ಥಿಗಳು 2018ನೇ ವಾರ್ಷಿಕ ಪರೀಕ್ಷೆಯಿಂದ ನೂತನ ಪಠ್ಯಕ್ರಮದಲ್ಲಿಯೇ ಪರೀಕ್ಷೆ ಬರೆಯಬೇಕಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಳೇ ಪಠ್ಯಕ್ರಮದಲ್ಲಿ ಅನುತ್ತೀರ್ಣಗೊಂಡಿರುವವರಿಗೆ 70 ಅಂಕಗಳಿಗೆ ಪರೀಕ್ಷೆ ನಡೆಸಲಾಗುವುದು. ಭೌತಶಾಸ್ತ್ರ, ರಸಾಯನ ಶಾಸ್ತ್ರ ಹಾಗೂ ಜೀವಶಾಸ್ತ್ರ ವಿಭಾಗದ ಪ್ರಾಯೋಗಿಕ 10 ಅಂಕಗಳನ್ನು ಪರಿಗಣಿಸಿ, ಒಟ್ಟು 80 ಅಂಕಗಳನ್ನು 100 ಅಂಕಗಳಿಗೆ ಸರಾಸರಿ ಮಾಡಿ ಅಂತಿಮ ಫಲಿತಾಂಶ ನೀಡಲಾಗುವುದು ಎಂದು ಇಲಾಖೆ ತಿಳಿಸಿದೆ.

ಅರ್ಜಿ ಸಲ್ಲಿಕೆ: 2018ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಭಾಗವಹಿಸಲು ಇಚ್ಛಿಸುವ ಖಾಸಗಿ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಆಗಸ್ಟ್ 20ರಿಂದ ಅವಕಾಶ ಕಲ್ಪಿಸಲಾಗಿದೆ. 2001ರ ಮಾ.31ಕ್ಕೆ ಮೊದಲು ಜನಿಸಿದವರು, ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಖಾಸಗಿ ಅಭ್ಯರ್ಥಿಗಳಾಗಿ ಪರೀಕ್ಷೆ ಬರೆಯಲು ಅರ್ಹರಾಗಿರುತ್ತಾರೆ. ಪರೀಕ್ಷೆ ತಗೆದುಕೊಳ್ಳುವ ಅಭ್ಯರ್ಥಿಗಳು ಸರ್ಕಾರಿ ಪಿಯು ಕಾಲೇಜುಗಳಲ್ಲಿ ಅಗತ್ಯ ದಾಖಲೆಗಳೊಂದಿಗೆ ಇಲಾಖೆಯ ಒಎಂಆರ್ ಶೀಟ್ ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು. ದಂಡವಿಲ್ಲದೆ ಅಕ್ಟೋಬರ್ 3ರವರೆಗೆ ಹಾಗೂ ದಂಡ ಸಹಿತ ಅ.16ರೊಳಗೆ ಅರ್ಜಿ ಸಲ್ಲಿಸಬಹುದು. ಎಸ್‍ಸಿ, ಎಸ್‍ಟಿ ವರ್ಗದವರು 1,392 ರೂ. ಹಾಗೂ ಇತರೆ ವರ್ಗದ ಅಭ್ಯರ್ಥಿಗಳಿಗೆ 1,694 ರೂ. ಶುಲ್ಕ ನಿಗದಿಪಡಿಸಲಾಗಿದೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ