ಎಪಿಎಂಸಿ ಫಲಿತಾಂಶ ಬಿಸಿಬಿಸಿ

Kannada News

18-03-2017 326

ರಾಜ್ಯ ವಿದಾನಸಭೆ ಚುನಾವಣೆಗೆ ಇನ್ನು ಒಂದೂವರೆ ವರ್ಷ ಬಾಕಿಯಿದೆ, ಈಗಾಗಲೇ ಎಲ್ಲಾ ಪಕ್ಷಗಳಲ್ಲೂ ಚುನಾವಣೆ ಕಾವು ತೀವ್ರಗೊಂಡಿದೆ. ಈಗಾಗಲೆ ರಣತಂತ್ರದ ಬಗ್ಗೆ ಚಿಂತನ-ಮಂಥನಗಳು ಆರಂಭಗೊಂಡಿವೆ. ಯಾವ ಕ್ಷೇತ್ರದಲ್ಲಿ ಯಾವ ಪಕ್ಷದ ಪರ ಒಲವಿದೆ, ಅಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಗೆಲುವಿಗೆ ಏನು ಮಾಡಬೇಕು ಎಂಬ ಚರ್ಚೆಗಳು ನಡೆದಿರುವ ಬೆನ್ನಲ್ಲೇ ನಡೆದ ಕೃಷಿ ಮಾರುಕಟ್ಟೆ ಸಮಿತಿ ಚುನಾವಣೆಗಳು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್‍ಗಳಿಗೆ ಒಂದು ರೀತಿ ಪೂರ್ವಾಭ್ಯಾಸದ ಪಂದ್ಯದಂತೆ ಇತ್ತು.
ಇನ್ನು ಒಂದೂವರೆ ವರ್ಷದಲ್ಲಿ ಎದುರಾಗಲಿರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಗೆಲುವು ಸುಲಭ ಎಂದು ಮೂರು ಪಕ್ಷಗಳು ಪ್ರಭಲವಾಗಿ ಪ್ರತಿಪಾದಿಸುತ್ತಿರುವ, ಅದರಲ್ಲೂ ಕೇಂದ್ರದಲ್ಲಿ ತಮ್ಮ ಪಕ್ಷದ ಸರ್ಕಾರವಿದೆ, ದೇಶಾದ್ಯಂತ ಇನ್ನು ಪ್ರಧಾನಿ ಮೋದಿ ಪರವಾದ ಆಲೆ ಎದ್ದು ಕಾಣುತ್ತಿದೆ ಹೀಗಾಗಿ 224 ಕ್ಷೇತ್ರಗಳ ಪೈಕಿ 150 ರಲ್ಲಿ ತಮ್ಮ ಗೆಲುವು ಖಚಿತ ಎಂದು ಪ್ರತಿಪಾದಿಸುತ್ತಿರುವ ಬಿಜೆಪಿ ಇದಕ್ಕಾಗಿ ಮಿಷನ್-150 ಎಂಬ ಘೋಷ ವಾಕ್ಯವನ್ನು ಸಿದ್ದ ಪಡಿಸಿದೆ. ರಾಜ್ಯದ ಕಾಂಗ್ರೆಸ್ ಆಡಳಿತದ ವಿರುದ್ದ ಜನಾಭಿಪ್ರಾಯ ವ್ಯಕ್ತಗಾಗುತ್ತಿದೆ, ಬರಗಾಲ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ಎಡವಿದೆ, ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿದೆ, ಹಲವು ಸಚಿವರ ವಿರುದ್ದ ಭ್ರಷ್ಟಾಚಾರ ಆರೋಪಗಳು ಕೇಳಿ ಬಂದಿದ್ದು ಜನತೆ ಸರ್ಕಾರದ ವಿರುದ್ದ ಬೇಸರಗೊಂಡಿದ್ದಾರೆ, ಇನ್ನೂ ಕಾಂಗ್ರೆಸ್ ನಾಯಕರಲ್ಲಿ ಮೂಲ ಕಾಂಗ್ರೆಸಿಗ ಮತ್ತು ವಲಸಿಗ ಎಂಬ ಎರಡು ಸ್ಪಷ್ಟ ಗುಂಪುಗಳಾಗಿವೆ ಇದು ಕಾರ್ಯಕರ್ತರಲ್ಲಿ ಬೇಸರ ಹುಟ್ಟಿಸಿದೆ. ಹೀಗಾಗಿ ತಮಗೆ ಅನೂಕೂಲಕರವಾದ ವಾತಾವರಣವಿದೆ. ಇನ್ನು ಜೆಡಿಎಸ್ ಸಂಘಟನೆಯಿಲ್ಲದೆ ಸೊರಗಿದೆ, ಬಿನ್ನಮತದಿಂದ ತತ್ತರಿಸಿ ಹೋಗಿದೆ, ಈ ಪಕ್ಷ ಕೇವಲ ಒಂದೆರಡು ಜಿಲ್ಲೆಗೆ ಮಾತ್ರ ಸೀಮಿತ ಹೀಗಾಗಿ ಬಿಜೆಪಿ ಅಧಿಕಾರ ಹಿಡಿಯುವುದು ಖಚಿತ ಎಂದು ಬಿಜೆಪಿ ನಾಯಕರು ಅತೀವ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.
ಬಿಜೆಪಿ ನಾಯಕರು ತೋರಿಸುತ್ತಿರುವ ಅತಿಯಾದ ಆತ್ಮವಿಶ್ವಾಸವನ್ನಾಗಲಿ, ಚುನಾವಣೆಯ ಅಬ್ಬರದ ರಣತಂತ್ರವಾಗಲಿ ಕಾಂಗ್ರೆಸ್ ಪಾಳಯದಲ್ಲಿ ಕಾಣುತ್ತಿಲ್ಲ. ವಿಭಾಗವಾರು ಕಾರ್ಯಕರ್ತರ ಸಮಾವೇಶಗಳ ಮೂಲಕ ಚುನಾವಣೆಗೆ ಕಾರ್ಯಕರ್ತರನ್ನು ಹುರಿದುಂಬಿಸುವ ಪ್ರಯತ್ನ ಮಾಡಲಾಗುತ್ತಿದೆ. ಜೊತೆಗೆ ಹಾಲಿ ಶಾಸಕರಾಗಿರುವವರ ಪೈಕಿ ಎಷ್ಟು ಮಂದಿ ಮರು ಆಯ್ಕೆಯಾಗಲು ಸಾದ್ಯ, ಎಲ್ಲಿ ಪಕ್ಷ ಹಿನ್ನಡೆ ಅನುಭವಿಸಲಿದೆ ಎಂಬ ಬಗ್ಗೆ ಗುಪ್ತದಳದಿಂದ ವರದಿ ತರಿಸಿಕೊಂಡು ಅಲ್ಲಿ ಪಕ್ಷದ ಸ್ಥಿತಿ ಉತ್ತಮ ಪಡಿಸುವ ಪ್ರಯತ್ನ ನಡೆಯುತ್ತಿದೆ. ಇನ್ನು ಸರ್ಕಾರ ರೂಪಿಸಿರುವ ಹಲವಾರು ಜನಪರ ಯೋಜನೆಗಳು ಸರ್ಕಾರದ ಶೋಷಿತರು, ದಲಿತರು ಮತ್ತು ಹಿಂದುಳಿದವರ ಪರವಾದ ನಿಲುವು ಕಾಂಗ್ರೆಸ್‍ಗೆ ವರದಾನವಾಗಲಿದೆ. ಮೂರುವರೆ ವರ್ಷದ ಆಡಳಿತಾವಧಿಯಲ್ಲಿ ಸರ್ಕಾರದ ವಿರುದ್ದ ಯಾವುದೇ ಗಂಭೀರ ಸ್ವರೂಪದ ಭ್ರಷ್ಟಾಚಾರದ ಆರೋಪ ಕೇಳಿ ಬರಲಿಲ್ಲ. ಭ್ರಷ್ಟಾಚಾರ ಆರೋಪಕ್ಕೆ ಸಿಲುಕಿ ಯಾವುದೇ ಮಂತ್ರಿ ತಮ್ಮ ಸ್ಥಾನಕ್ಕೆ ರಾಜನಾಮೆ ನೀಡಿಲ್ಲ, ಜೈಲು ಪಾಲಾಗಿಲ್ಲ. ಇದು ಕಾಂಗ್ರೆಸ್ ಪಕ್ಷ ಮತ್ತೆ ಗೆಲುವು ಸಾಧಿಸಲು ಸಹಕಾರಿ ಎಂಬ ವಾದ ಕೇಳಿ ಬಂದಿದೆ. ಅಲ್ಲದೇ ಬಿಜೆಪಿಯಲ್ಲಿರುವ ಭಿನ್ನಮತದ ದಳ್ಳುರಿ ಕಾಂಗ್ರೆಸ್‍ನಲ್ಲಂತೂ ಇಲ್ಲವೇ ಇಲ್ಲ ಎಂದು ನಾಯಕರು ಪ್ರಭಲವಾಗಿ ಪ್ರತಿಪಾದಿಸುತ್ತಿದ್ದಾರೆ.
ಜೆಡಿಎಸ್ ಕೂಡಾ ತನ್ನದೇ ಶೈಲಿಯಲ್ಲಿ ರಾಜಕಾರಣ ಆರಂಭಿಸಿದೆ. ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನ ಮಾಡುವ ಭರವಸೆಯೊಂದಿಗೆ ರಣತಂತ್ರ ಹೆಣೆಯುತ್ತಿರುವ ನಾಯಕರು ಕಾವೇರಿ ಮತ್ತು ಮಹಾದಾಯಿ ವಿಚಾರದಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಗೆ ಇರುವ ಮಿತಿಗಳನ್ನು ಪ್ರಭಲವಾಗಿ ಜನರ ಮುಂದಿಡುತ್ತಿದ್ದು ವಿಶಿಷ್ಟ ರೀತಿಯ ರಾಜಕಾರಣ ಆರಂಭಿಸಿದ್ದಾರೆ. ಪ್ರಾದೇಶಿಕ ತತ್ವ ಪ್ರಭಲವಾಗಿ ಪ್ರತಿಪಾದಿಸುತ್ತಿದ್ದು ಜನ ಈ ಬಾರಿ ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸ ಹೊಂದಿದ್ದಾರೆ.
ಹೀಗಾಗಿ ಈ ಮೂರು ಪಕ್ಷಗಳ ನಾಯಕರು ಮೊನ್ನೆ ನಡೆದ ಕೃಷಿ ಮಾರುಕಟ್ಟೆ ಸಮಿತಿ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸಿದರು. ಅದರಲ್ಲೂ ರಾಜಕೀಯವಾಗಿ ಸಾಕಷ್ಟು ಅರಿಯದ ಸಹಾಕಾರ ಚಳುವಳಿಯಲ್ಲಿ ತೊಡಗಿರುವ ರೈತರು ಈ ಚುನಾವಣೆಯಲ್ಲಿ ಮತದಾರರಾಗಿದ್ದು, ರಾಜ್ಯದ ಮಣ್ಣಿನ ಮಕ್ಕಳ ನಿಲುವು ಯಾವ ಪಕ್ಷದ ಪರವಿದೆ ಎಂದು ತಿಳಿದುಕೊಳ್ಳಲು ಈ ಚುನಾವಣೆಯನ್ನು ಮೂರು ಪಕ್ಷಗಳು ಸತತವಾಗಿ ಪರಿಗಣಿಸಿ ಭರ್ಜರಿ ಕಾರ್ಯತಂತ್ರವನ್ನು ರೂಪಿಸಿದರು. ಒಂದೊಂದು ಜಿಲ್ಲೆಗೂ ಸಂಬಂಧಿಸಿದಂತೆ ಒಂದೊಂದು ರೀತಿಯ ರಣತಂತ್ರದ ಮೂಲಕ ಚುನಾವಣೆ ಎದುರಿಸಲು ಸಿದ್ದತೆ ನಡೆಸಿದರು.
ಎಪಿಎಂಸಿ ಚುನಾವಣೆಯ ಮತದಾನಕ್ಕೂ ಮುನ್ನವೇ ಈ ಚುನಾವಣೆಯ ಫಲಿತಾಂಶ ಮುಂಬರುವ ವಿಧಾನಸಭಾ ಚುನಾವಣೆ ಫಲಿತಾಂಶದ ದಿಕ್ಸೂಚಿ ಎಂದು ಸ್ವತ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ಲೇಷಿಸಿದರೆ, ಈ ಚುನಾವಣೆ ಫಲಿತಾಂಶ ಬಿಜೆಪಿಗಿರುವ ಜನ ಬೆಂಬಲವನ್ನು ತೋರಿಸಲಿದೆ ಎಂದು ಯಡ್ಯೂರಪ್ಪ ಹೇಳಿದರು. ಇನ್ನು ಕುಮಾರಸ್ವಾಮಿ ಅವರಂತೂ ಈ ಚುನಾವಣೆಯಲ್ಲಿ ಜೆಡಿಎಸ್ ಅತ್ಯಧಿಕ ಸ್ಥಾನ ಗಳಿಸುವ ಮೂಲಕ ರೈತರು ತಮ್ಮ ಪಕ್ಷದ ಪರವಾಗಿದ್ದಾರೆಂಬುವುದನ್ನು ತೋರಿಸಲಿದ್ದಾರೆಂದು ವಿಶ್ಲೇಷಿಸಿದರು.
ಈಗ ಚುನಾವಣೆ ಮುಗಿದು ಫಲಿತಾಂಶವೂ ಹೊರಬಿದ್ದಿದೆ. ಗೆದ್ದವರು ಸಂಭ್ರಮಾಚರಣೆಯಲ್ಲಿ ತೊಡಗಿದ್ದರೆ, ಮತ್ತೆ ಕೆಲವರು ಅಧ್ಯಕ್ಷ ಸ್ಥಾನ ಗಿಟ್ಟಿಸುವ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ. ಇನ್ನು ಸರ್ಕಾರ ಯಾವ ವರ್ಗಕ್ಕೆ ಮೀಸಲಾತಿ ನಿಗಧಿ ಪಡಿಸಬೇಕು ಹಾಗೂ ಅಧಿಕಾರ ಗದ್ದುಗೆ ಹಿಡಿಯಲು ಪೂರಕವಾಗುವಂತೆ ಯಾರನ್ನು ನಾಮ ನಿರ್ದೇಶನ ಮಾಡಬೇಕು, ಇದರಲ್ಲಿ ಶಾಸಕರ ಶಿಪಾರಸ್ಸಿಗೆ ಎಷ್ಟು, ಸಂಸದರಿಗೆ ಎಷ್ಟು ನೀಡಬೇಕು, ಸೋತವರಿಗೆ ಯಾವ ಸ್ಥಾನ ನೀಡಬೇಕು ಎಂಬ ಚರ್ಚೆಯಲ್ಲಿ ಕಾಂಗ್ರೆಸ್ ಮತ್ತು ಸರ್ಕಾರದ ಪ್ರತಿನಿಧಿಗಳು ನಿರತರಾಗಿದ್ದಾರೆ.
ಇನ್ನು ಬಿಜೆಪಿ ಮತ್ತು ಜೆಡಿಎಸ್ ಪಾಳಯದಲ್ಲಿ ಸೋಲು-ಗೆಲುವಿನ ಕುರಿತು ಲೆಕ್ಕಾಚಾರಗಳು, ಗೆಲುವಿಗೆ ಕಾರಣವಾದ ಅಂಶಗಳ ವಿಶ್ಲೇಷಣೆಗೆ ಸೋಲಿಗೆ ಕಾರಣಗಳು ಎನು ಎಂಬ ಹುಟುಕಾಟದಲ್ಲಿ ತೊಡಗಿದೆ.
ಲೋಕಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಖಾರ್ಜುನ ಖರ್ಗೆ ಅವರ ತವರು ಜಿಲ್ಲೆ ಕಲಬುರಗಿಯಲ್ಲಿನ ಎರಡು ಎಪಿಎಂಸಿಗಳು  ಕಾಂಗ್ರೆಸ್‍ನ ಪಾಲಾಗಿದೆ. ಇಲ್ಲಿನ ಚಿತ್ತಾಪುರ ಮತ್ತು ಚಿಂಚೋಳಿ ಎಪಿಎಂಸಿಯ ತಲಾ 13 ಕ್ಷೇತ್ರಗಳ ಪೈಕಿ ಚಿತ್ತಾಪುರದಲ್ಲಿ 10 ಚಿಂಚೋಳಿಯಲ್ಲಿ 8 ಮಂದಿ ಕಾಂಗ್ರೆಸ್ ಬೆಂಬಲಿತರು ಆಯ್ಕೆಯಾಗಿದ್ದು ಬಿಜೆಪಿ ತೀವೃ ಮುಖಭಂಗ ಅನುಭವಿಸಿದೆ. ಇಲ್ಲಿನ 26 ಸ್ಥಾನಗಳ ಪೈಕಿ ಕಾಂಗ್ರೆಸ್ 17, ಬಿಜೆಪಿ 9 ಸ್ಥಾನ ಗಳಿಸಿವೆ. 
ವಿಜಯಾಪುರ ಒಂದು ರೀತಿಯಲ್ಲಿ ಬಿಜೆಪಿ ಪ್ರಾಭಲ್ಯವಿರುವ ಜಿಲ್ಲೆ. ರಮೇಶ್ ಜಿಗಜಿಣಗಿ ಕೇಂದ್ರ ಮಂತ್ರಿಯಾಗಿದ್ದರೆ, ಬಿಜೆಪಿಯ ಹಲವು ಘಟಾನುಘಟಿ ನಾಯಕರು ಇರುವುದು ಈ ಜಿಲ್ಲೆಯಲ್ಲೆ. ಇಲ್ಲಿನ ಒಟ್ಟು ನಾಲ್ಕು ಎಪಿಎಂಸಿಗಳು ಕಾಂಗ್ರೆಸ್ ಪಾಲಾಗಿದೆ. ನಾಲ್ಕು ಎಪಿಎಂಸಿ ಗಳಲ್ಲಿ ಕೇವಲ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾದರೆ, ಬಿಜೆಪಿಯ ಸಾಧನೆ  ಅತ್ಯಂತ ಕಳಪೆಯಾಗಿದ್ದು ಕಮಲದ ನಾಯಕರುಗಳಿಗೆ ಅಸ್ಥಿತ್ವದ ಪ್ರಶ್ನೆ ಡದುರಾಗಿದೆ. ಸ್ಪಷ್ಟ ಬಹುಮತ ದೊಂದಿಗೆ ನಾಲ್ಕು ಎಪಿಎಂಸಿಗಳಲ್ಲಿ ಕಾಂಗ್ರೆಸ್ ಅಧಿಕಾರ ಚುಕ್ಕಾಣಿ ಹಿಡಿದಿದೆ. ಇಲ್ಲಿನ ಒಟ್ಟು 56 ಸ್ಥಾನಗಳ ಪೈಕಿ ಕಾಂಗ್ರೆಸ್ 34, ಬಿಜೆಪಿ 14, ಜೆಡಿಎಸ್ 5 ರಲ್ಲಿ ಗೆಲುವು ಸಾಧಿಸಿದೆ. 
ಯಾದಗಿರಿಯ 3 ಎಪಿಎಂಸಿಗಳಿಗೆ ನಡೆದ ಚುನಾವಣೆಯಲ್ಲಿ ಸುರಪುರ ಎಪಿಎಂಸಿ ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್‍ಗೆ ಒಲಿದಿದೆ. ಶಹಪುರದಲ್ಲಿ 10 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದು ಎಲ್ಲರೂ ಕಾಂಗ್ರೆಸ್ ಬೆಂಬಲಿಗರು. ಈ ಆಯ್ಕೆ ವಿಚಾರವಾಗಿ ಕೋರ್ಟ್ ಮೆಟ್ಟಿಲೇರಿದೆ. ಉಳಿದಿರುವ ಮತ್ತೊಂದು ಕ್ಷೇತ್ರದಲ್ಲಿ ಬಿಜೆಪಿ ಬಹುಮತ ಗಳಿಸಿದರೂ ಸರ್ಕಾರ ಮಾಡುವ ನಾಮ ರ್ನಿದೇಶನ ಲೆಕ್ಕಾಚಾರವನ್ನೇ ತಲೆಕೆಳಗೆ ಮಾಡಲಿದೆ. ಆದರೂ ಇಲ್ಲಿನ ಮೂರರಲ್ಲಿ 2 ಕಾಂಗ್ರೆಸ್ ಪಾಲಾಗಿದೆ. ಒಂದು ಬಿಜೆಪಿ ತನ್ನ ಬುಟ್ಟಿಗೆ ಹಾಕಿಕೊಂಡಿದೆ. ಇಲ್ಲಿನ 42 ಸ್ಥಾನಗಳಲ್ಲಿ ಕಾಂಗ್ರೆಸ್ 11, ಬಿಜೆಪಿ 16 ಮತ್ತು ಜೆಡಿಎಸ್ 3 ಸ್ಥಾನ ಗಳಿಸಿದೆ.
ರಾಯಚೂರಿನಲ್ಲಿ ಕಾಂಗ್ರೆಸ್ ಪ್ರಾಭಲ್ಯ ಸಾಧಿಸಿದೆ. ಜೆಡಿಎಸ್ ಕೂಡ ಗಣನೀಯ ಮತಗಳನ್ನು ಗಳಿಸಿದೆ. ಲಿಂಗಸಗೂರು ಎಪಿಎಂಸಿ ತೆನೆ ಹೊತ್ತ ಮಹಿಳೆಯ ಪಾಲಾಗಿದೆ. ಆದರೆ, ಇಲ್ಲಿಯ ನಾಮ ನಿರ್ದೇಶನ ಲೆಕ್ಕಾಚಾರದಲ್ಲಿ ಏರು-ಪೇರಾಗುವ ಸಾದ್ಯತೆ ಇದೆ. ಮಾನ್ವಿ ಎಪಿಎಂಸಿಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಗದ್ದುಗೆ ಹಿಡಿದರೆ, ಬಿಜೆಪಿ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಸಿದೆ. ಹೀಗಾಗಿ ಜಿಲ್ಲೆಯ ಎರಡೂ ಎಪಿಎಂಸಿ ಕಾಂಗ್ರೆಸ್ ಪಾಲಾಗಿದೆ. ರಾಯಚೂರಿನ ಒಟ್ಟು 23 ಸ್ಥಾನಗಳಲ್ಲಿ ಕಾಂಗ್ರೆಸ್ 13, ಬಿಜೆಪಿ 4, ಜೆಡಿಎಸ್ 6 ಸ್ಥಾನ ಗಳಿಸಿದೆ.
ಇನ್ನು ಬಾಗಲಕೋಟೆ ಮತ್ತೊಮ್ಮೆ ಬಿಜೆಪಿಯ ಭದ್ರಕೋಟೆ ಎಂದು ಸಾಭೀತಾಗಿದೆ. ಹಿರಿಯ ನಾಯಕ ಎಚ್.ವೈ. ಮೇಟಿ ವಿರುದ್ದ ಕೇಳಿ ಬಂದ ರಾಸಲೀಲೆ ಆರೋಪ, ಮಾಜಿ ಸವಿವ ಎಸ್. ಆರ್. ಪಾಟೀಲ್ ಅವರಿಗೆ ಸಿಗದ ಪ್ರಾತಿನಿದ್ಯ, ಶಾಸಕ ವಿಜಯಾನಂದ ಕಾಶಪ್ಪನವರ್ ವಿರುದ್ದವಾದ ಅಭಿಪ್ರಾಯ, ಜಿಲ್ಲಾ ಪಂಚಾಯ್ತಿಯಲ್ಲಿನ ಇವರ ಹಸ್ತಕ್ಷೇಪದ ಬಗೆಗಿನ ದೂರುಗಳು ಬಾಗಲಕೋಟೆಯಲ್ಲಿ ಕಾಂಗ್ರೆಸ್ ಹಿನ್ನಡೆ ಅನುಭವಿಸುವಂತಾಗಿದೆ. ಜಿಲ್ಲೆಯ ಆರು ಎಪಿಎಂಸಿಗಳಿಗೆ ನಡೆದ ಚುನಾವಣೆಯಲ್ಲಿ ಬಾದಾಮಿ, ಬೀಳಗಿ, ಮೂದೋಳ ಮತ್ತು ಜಮಖಂಡಿಯಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದರೆ, ಹುನಗುಂದ ಮತ್ತು ಬಾಗಲಕೋಟೆ ಮಾತ್ರ ಕೈವಶವಾಗಿವೆ. ಜಿಲ್ಲಾ ಕಾಂಗ್ರೆಸ್‍ನಲ್ಲಿಯ ಆಂತರಿಕ ಕಲಹ ಶಾಸಕ ಬಿ.ಬಿ ಚಿಮ್ಮನಕಟ್ಟಿ ಅವರ ನಾಯಕತ್ವ ಕಡೆಗಣಿಸಿರುವುದು ಇಲ್ಲಿ ಹಿನ್ನಡೆಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಬಾಗಲಕೋಟೆಯ ಒಟ್ಟು 78 ಸ್ಥಾನಗಳ ಪೈಕಿ ಬಿಜೆಪಿ ಬೆಂಬಲಿತರು 49 ಸ್ಥಾನ ಗಳಿಸಿದರೆ, ಕಾಂಗ್ರೆಸ್ 28 ಸ್ಥಾನ ಗಳಿಸಿದೆ. ಈ ಜಿಲ್ಲೆಯಲ್ಲಿ ಯಾವುದೇ ರೀತಿಯ ಪ್ರಭಾವ ಹೊಂದಿಲ್ಲ ಎನ್ನುವುದು ಮತ್ತೊಮ್ಮೆ ಈ ಚುನಾವಣೆ ಫಲಿತಾಂಶ ಸಾಬೀತು ಪಡಿಸಿದೆ.
ಇನ್ನು ಅತಿಹೆಚ್ಚು ಎಪಿಎಂಪಿಗಳನ್ನು ಹೊಂದಿರುವ ಬೆಳಗಾವಿಯಲ್ಲಿ ಕಾಂಗ್ರೆಸ್‍ಗೆ ಹಿನ್ನಡೆಯಾಗಿದೆ. ಜಿಲ್ಲಾ ಕಾಂಗ್ರೆಸ್‍ನಲ್ಲಿರುವ ಆಂತರಿಕ ಕಲಹ ನಾಯಕರ ನಡುವಿನ ಮುಸುಕಿನ ಗುದ್ದಾಟ ಚುನಾವಣೆ ಫಲಿತಾಂಶದ ಮೇಲೆ ನೇರ ಪರಿಣಾಮ ಬೀರಿದೆ. ಸಚಿವ ರಮೇಶ್‍ಜಾರಕಿಹೋಳಿ, ಸಂಸದ ಪ್ರಕಾಶ್ ಹುಕ್ಕೇರಿ ಮತ್ತು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ಒಂದು ಬಣದಲ್ಲಿ ಗುರುತಿಸಿಕೊಂಡರೆ ಮಾಜಿ ಸಚಿವ ಸತೀಶ್ ಜಾರಕಿಹೋಳಿ ಶಾಸಕರಾದ ಫೀರೋಜ್‍ಶೇಠ್, ಪಿ.ಎಂ. ಅಶೋಕ್ ಮತ್ತೊಂದು ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಬಣ ರಾಜಕಾರಣ ಚುನಾವಣೆ ಮೇಲೆ ಗಂಭೀರ ಪರಿಣಾಮ ಬೀರಿದೆ. ಇಲ್ಲಿನ 10ಕ್ಷೇತ್ರಗಳ 140 ಸ್ಥಾನಗಳ ಪೈಕಿ ಬಿಜೆಪಿ ಬೆಂಬಲಿತರು, 62 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ ಕಾಂಗ್ರೆಸ್ 40ರಲ್ಲಿ ಜೆಡಿಎಸ್ 4 ಮತ್ತು ಎಂಇಎಸ್ ಹಾಗೂ ಪಕ್ಷೇತರರು 34 ಸ್ಥಾನಗಳಿಸಿದ್ದಾರೆ. ಈ ಮೂಲಕ 10 ಎಪಿಎಂಸಿಗಳಲ್ಲಿ ಬಿಜೆಪಿ ಐದು ಎಪಿಎಂಸಿಗಳಲ್ಲಿ ಅಧಿಕಾರ ಹಿಡಿದರೆ ಕಾಂಗ್ರೆಸ್ ನಾಲ್ಕರಲ್ಲಿ ಮತ್ತು ಒಂದರಲ್ಲಿ ಎಂಇಎಸ್ ಅಧಿಕಾರ ಹಿಡಿದಿದೆ.
ಆದರೆ ಗಣಿಧಣಿಗಳ ಅಬ್ಬರದಿಂದ ನಲುಗಿ ಹೋಗಿದ್ದ ಕಾಂಗ್ರೆಸ್ ಬಳ್ಳಾರಿಯಲ್ಲಿ ಮತ್ತೆ ಚಿಗುರಿದೆ. ಸಂತೋಷ್‍ಲಾಡ್ ಸಂಪುಟ ಸೇರಿದ ನಂತರ ಜಿಲ್ಲಾ ಕಾಂಗ್ರೆಸ್‍ನಲ್ಲಿ ಉಂಟಾಗಿದ್ದ ಗೊಂದಲ ಇತ್ಯರ್ಥವಾಗಿದೆ. ಜನಾರ್ದನ್‍ರೆಡ್ಡಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದರೂ ಜಿಲ್ಲೆಯಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸಲು ಸಾಧ್ಯವಾಗಿಲ್ಲ ಕಾಂಗ್ರೆಸ್‍ನ ಒಗ್ಗಟ್ಟಿನ ಫಲವಾಗಿ ಐದು ಎಪಿಎಂಪಿಗಳು ಕಾಂಗ್ರೆಸ್‍ಗೆ ಒಲಿಯಲಿದೆ. ಹಗರಿಬೊಮ್ಮನಹಳ್ಳಿ ಹೊಸಪೇಟೆಯಲ್ಲಿ ಕಾಂಗ್ರೆಸ್,ಬಿಜೆಪಿ ಸಮಬಲ ಸಾಧಿಸಿದ್ದರೂ ನಾಮಕರಣ ಸದಸ್ಯದ ನೆರವಿನಿಂದ ಎರಡೂ ಎಪಿಎಂಸಿಗಳು ಕೈವಶವಾಗಲಿದೆ. 
 5 ಎಪಿಎಂಪಿಗಳ 66ಸ್ಥಾನಗಳ ಪೈಕಿ ಕಾಂಗ್ರೆಸ್ 37 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ ಬಿಜೆಪಿ 26 ಮತ್ತು 3ಸ್ಥಾನ ಇತರರ ಪಾಲಾಗಿದೆ. ಆದರೆ ಬಳ್ಳಾರಿಗೆ ಹೊಂದಿಕೊಂಡ ಕೊಪ್ಪಳದಲ್ಲಿ ಬಿಜೆಪಿ ಸೋಲಿನ ಕಹಿ ನೆನಪಿನಿಂದ ಸೆಟೆದು ನಿಂತಿದೆ. ಯಥಾಪ್ರಕಾರ ಕಾಂಗ್ರೆಸ್ ಕಾಂಗ್ರೆಸ್‍ನಲ್ಲಿಯ ಗೊಂದಲ ಪ್ರಮುಖವಾಗಿದೆ. ಆದರೂ ಇಲ್ಲಿ ಕಾಂಗ್ರೆಸ್ ಮಾತ್ರ ಬಿಜೆಪಿ ಸಮಬಲ ಸಾಧಿಸಿದೆ. ಕೊಪ್ಪಳ,ಯಲ್ಬುರ್ಗಾನಲ್ಲಿ ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರ ಹಿಡಿದರೆ, ಕುಷ್ಟಗಿ,ಕಾರಟಗಿ ಬಿಜೆಪಿ ಸ್ಪಷ್ಟ ಬಹುಮತಗಳಿಸಿದೆ. ಗಂಗಾವತಿಯಲ್ಲಿ ಬಿಜೆಪಿ ಹೆಚ್ಚಿನ ಸಂಖ್ಯೆಯ ಸ್ಥಾನಗಳಿಸಿದ್ದರೂ ನಾಮಕರಣ ಸದಸ್ಯರು ನಿರ್ಣಾಯಕವಾಗಲಿದ್ದಾರೆ ಇಲ್ಲಿನ ಐದು ಎಪಿಎಂಪಿಗಳ 65 ಸ್ಥಾನಗಳ ಪೈಕಿ 31ರಲ್ಲಿ ಬಿಜೆಪಿ 34ರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ.
ಇನ್ನು ನೆರೆಯ ದಾವಣಗೆರೆಯಲ್ಲಿ ಕಾಂಗ್ರೆಸ್‍ನ ಒಗ್ಗಟ್ಟು ಮತ್ತು ಬಿಜೆಪಿಯಲ್ಲಿನ ಭಿನ್ನಮತ ಪ್ರಮುಖ ಪಾತ್ರವಹಿಸಿದೆ. ಬಿಜೆಪಿಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ್ ಮತ್ತು ಮಾಜಿ ಸಚಿವ ರವೀಂದ್ರನಾಥ್ ಬಣ ಎಂದು ಸ್ಪಷ್ಟ ಇಬ್ಭಾಗವಾಗಿದ್ದು ಕಮಲ ನಾಯಕರು ತೀವ್ರ ಹಿನ್ನಡೆ ಅನುಭವಿಸಿದ್ದಾರೆ. ಪ್ರತಿಯಾಗಿ ಕಾಂಗ್ರೆಸ್‍ನಲ್ಲಿ ಒಗ್ಗಟ್ಟು ಆ ಪಕ್ಷಕ್ಕೆ ಹೆಚ್ಚಿನ ಬಲ ತಂದುಕೊಟ್ಟಿದೆ. ಇಲ್ಲಿನ ಆರು ಎಪಿಎಂಸಿಗಳ ಪೈಕಿ ಚನ್ನಗಿರಿ ಮಾತ್ರ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿದಿದೆ. ದಾವಣಗೆರೆ, ಜಗಳೂರು, ಹರಪ್ಪನಹಳ್ಳಿ, ಹರಿಹರ ಮತ್ತು ಹೊನ್ನಾಳಿಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಇಲ್ಲಿನ ಒಟ್ಟು 80 ಸ್ಥಾನಗಳ ಪೈಕಿ ಕಾಂಗ್ರೆಸ್ ಬೆಂಬಲಿತರು 44ರಲ್ಲಿ ಬಿಜೆಪಿ ಬೆಂಬಲಿತರು 30ರಲ್ಲಿ ಮತ್ತು ಜೆಡಿಎಸ್ ಬೆಂಬಲಿತರು 5ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಇನ್ನು ಚಿತ್ರದುರ್ಗದಲ್ಲಂತೂ ಭಿನ್ನಮತದ ಹೊಡೆತಕ್ಕೆ ಸಿಲುಕಿ ಬಿಜೆಪಿ ತತ್ತರಿಸಿ ಹೋಗಿದೆ. ಜೆಡಿಎಸ್ ನೆಲೆಯೂರಲು ನಡೆಸಿರುವ ಪ್ರಯತ್ನ ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲ. ಸಚಿವ ಎಚ್.ಆಂಜನೇಯ ಮತ್ತು ಸಂಸದ ಚಂದ್ರಪ್ಪ ಜೋಡಿ ಕಾಂಗ್ರೆಸ್ ಕಾರ್ಯಕರ್ತರನ್ನು ಒಟ್ಟಾಗಿ ಹಿಡಿದಿಡುವಲ್ಲಿ ಯಶಸ್ವಿಯಾಗಿದ್ದು ಇಲ್ಲಿನ ಎರಡು ಎಪಿಎಂಸಿಗಳು ಕೈವಶವಾಗಿದೆ. 26ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 18 ಬಿಜೆಪಿ 5 ಮತ್ತು ಮೂರರಲ್ಲಿ ಜೆಡಿಎಸ್ ಬೆಂಬಲಿತರು ಗೆಲವು ಸಾಧಿಸಿದ್ದಾರೆ.
ಧಾರವಾಡದಲ್ಲಿ ಬಿಜೆಪಿಯಲ್ಲಿನ ಒಡಕು ಸಾಕಷ್ಟು ಪರಿಣಾಮ ಬೀರಿದೆ. ಈ ಹಿಂದೆ ಇಲ್ಲಿನ ಎಲ್ಲಾ ಎಪಿಎಂಪಿಗಳಲ್ಲೂ ಬಿಜೆಪಿ ಪ್ರಾಬಲ್ಯ ಸಾಧಿಸಿತ್ತು. ಆದರೆ ಈ ಬಾರಿ ಚಿತ್ರಣ ಬದಲಾಗಿದೆ. ಧಾರವಾಡದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಗಳಿಸಿದರೆ ಹುಬ್ಬಳ್ಳಿ ಎಪಿಎಂಸಿಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಅಣ್ಣಿಗೇರಿ,ಕಲಘಟಗಿ ಮತ್ತು ಕುಂದಗೋಳಗಳಲ್ಲಿ ಬಿಜೆಪಿ ಬೆಂಬಲಿತರು ಅಧಿಕಾರ ಹಿಡಿಯುವ ಸಾಧ್ಯತೆಯಿದೆ. ಇಲ್ಲಿ 5 ಎಪಿಎಂಸಿಗಳ 67ಸ್ಥಾನಗಳ ಪೈಕಿ 33ರಲ್ಲಿ ಬಿಜೆಪಿ 22ರಲ್ಲಿ ಕಾಂಗ್ರೆಸ್ 5ರಲ್ಲಿ ಜೆಡಿಎಸ್ ಮತ್ತು 6ರಲ್ಲಿ ಪಕ್ಷೇತರರು ಗೆಲುವು ಸಾಧಿಸಿದ್ದಾರೆ.
ಹಾವೇರಿಯಲ್ಲಿ ಕೈ-ಕಮಲ ಸಮಬಲ ಸಾಧಿಸಿದೆ. ಇಲ್ಲಿನ ಕಾಂಗ್ರೆಸ್‍ನಲ್ಲಿ ಸ್ವಲ್ಪ ಮಟ್ಟಿನ ಗೊಂದಲ ಇದೆ. ಅದೇ ರೀತಿ ಬಿಜೆಪಿಯಲ್ಲೂ ಗೊಂದಲವಿದೆ. ಹೀಗಾಗಿ ರೈತಬಾಂಧವರು ಸಮಬಲದ ತೀರ್ಪು ನೀಡಿದ್ದಾರೆ. ಏಳು ಎಪಿಎಂಸಿಗಳಲ್ಲಿ ತಲಾ ಮೂರರಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಿಚ್ಚಳ ಬಹುಮತಗಳಿಸಿದ್ದು ಒಂದರಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಒಟ್ಟಾರೆ 93 ಸ್ಥಾನಗಳ ಪೈಕಿ 53ರಲ್ಲಿ ಬಿಜೆಪಿ 37ರಲ್ಲಿ ಕಾಂಗ್ರೆಸ್ ನಾಲ್ಕು ಕ್ಷೇತ್ರಗಳಲ್ಲಿ ಪಕ್ಷೇತರರು ಗೆಲುವು ಸಾಧಿಸಿದ್ದಾರೆ. 
ಉತ್ತರ ಕನ್ನಡದಲ್ಲೂ ಬಿಜೆಪಿ ಅತಂತ್ರ ಸ್ಥಿತಿ ತಲುಪಿದೆ. ನಾಯಕತ್ವದಲ್ಲಿನ ಭಿನ್ನಮತ ಕಾರ್ಯಕರ್ತರನ್ನು ದಿಕ್ಕೆಡಿಸಿದೆ. ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಸಂಸದ ಅನಂತಕುಮಾರ್ ಹೆಗಡೆ ನಡುವಿನ ಬಿಕ್ಕಟ್ಟು ತೀವ್ರ ಸ್ವರೂಪ ಪಡೆದು ಕೊಂಡಿದೆ. ಕಾಗೇರಿ, ಮಾಜಿ ಸಿಎಂ ಯಡಿಯೂರಪ್ಪ ವಿರೋಧಿ ದಣದಲ್ಲಿ ಗುರುತಿಸಿಕೊಂಡಿದ್ದಾರೆ. ಪರಿಣಾಮ ಬಿಜೆಪಿ ಗೊಂದಲದ ಮನೆಯಾಗಿದೆ.ಇಲ್ಲಿ ಜೆಡಿಎಸ್ ಕೂಡಾ ಸ್ವಲ್ಪ ಪ್ರಾಬಲ್ಯ ಸಾಧಿಸುವ ಯತ್ನ ನಡೆಸಿದೆ. ಕುಮಟಾದಲ್ಲಿ ಪಕ್ಷೇತರರ ನೆರವಿನಿಂದ ಜೆಡಿಎಸ್ ಅಧಿಕಾರ ಹಿಡಿಯುವ ಸಾಧ್ಯತೆಯಿದೆ. ಇಲ್ಲಿನ ಆರು ಎಪಿಎಂಸಿಗಳ ಪೈಕಿ ಕಾರವಾರ, ಹೊನ್ನಾವರ, ಹಳಿಯಾಳ, ಯಲ್ಲಾಪುರ, ಮತ್ತು ಸಿದ್ದಾಪುರ ಎಪಿಎಂಸಿಗಳು ಕಾಂಗ್ರೆಸ್ ಪಾಲಾಗಿವೆ. ಇಲ್ಲಿನ 82 ಸ್ಥಾನಗಳಲ್ಲಿ ಕಾಂಗ್ರೆಸ್ 43ರಲ್ಲಿ ಬಿಜೆಪಿ 27ಮತ್ತು ಜೆಡಿಎಸ್ 8ರಲ್ಲಿ ಗೆಲುವು ಸಾಧಿಸಿದ್ದು ಆ ಸ್ಥಾನ ಪಕ್ಷೇತರರ ಪಾಲಾಗಿವೆ.
ಶಿವಮೊಗ್ಗ ಜಿಲ್ಲೆಯಲ್ಲಂತೂ ರಾಯಣ್ಣ ಬ್ರಿಗೇಡ್ ಬಿಜೆಪಿಯಲ್ಲಿ ಭಾರೀ ಪರಿಣಾಮ ಬೀರಿದೆ. ಇಲ್ಲಿನ ಫಲಿತಾಂಶ ಜೆಡಿಎಸ್, ಬಿಜೆಪಿ ಕಾಂಗ್ರೆಸ್ ಮೂರು ಪಕ್ಷಗಳಿಗೂ ಗೆಲುವು ತಮ್ಮದೆಂದು ಹೇಳಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಶಿವಮೊಗ್ಗ ಶಿಕಾರಿಪುರ ಎಪಿಎಂಸಿ ಬಿಜೆಪಿ ಪಾಲಾದರೆ ಸೊರಬ ಭದ್ರಾವತಿ ಜೆಡಿಎಸ್ ಪಾಲಾಗಿದೆ. ತೀರ್ಥಹಳ್ಳಿ ಮತ್ತು ಹೊಸ ನಗರ ಕಾಂಗ್ರೆಸ್ ಪಾಲಾಗಿದ್ದು, ಸಾಗರದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.
ಇನ್ನು ಕರಾವಳಿಯ ದಕ್ಷಿಣಕನ್ನಡ ಮತ್ತು ಉಡುಪಿಯಲ್ಲಿ ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ದಕ್ಷಿಣ ಕನ್ನಡದ 3 ಎಪಿಎಂಸಿಗಳಲ್ಲಿ ಪೈಕಿ ಕಾಂಗ್ರೆಸ್ 2ರಲ್ಲಿ ಮತ್ತು ಬಿಜೆಪಿ ಒಂದರಲ್ಲಿ ಗೆಲುವು ಸಾಧಿಸಿದೆ. ಇಲ್ಲಿನ 41 ಸ್ಥಾನಗಳ ಪೈಕಿ 22ರಲ್ಲಿ ಕಾಂಗ್ರೆಸ್ 19ರಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತಗಳಿಸಿದೆ. ಉಡುಪಿಯ ಮೂರು ಎಪಿಎಂಸಿಗಳ ಪೈಕಿ ಉಡುಪಿ ಮತ್ತು ಕಾರ್ಕಳ ಎಂದಿನಂತೆ ಬಿಜೆಪಿ ಪಾಲಾಗಿದೆ ಕುಂದಾಪುರ ಕಾಂಗ್ರೆಸ್ ಬೆಂಬಲಿತರು ಜಯಗಳಿಸಿದ್ದಾರೆ. ಕೊಡಗಿನಲ್ಲಿ ಮಾತ್ರ ಕಾಂಗ್ರೆಸ್ ತೀವ್ರ ಹಿನ್ನಡೆ ಅನುವಿಸಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್‍ಗೆ ನಾಯಕತ್ವವೇ ಇಲ್ಲದಿರುವುದು ಇದರಿಂದ ಮತ್ತೊಮ್ಮೆ ಸ್ಪಷ್ಟವಾಗಿದೆ. ಮಾಜಿ ಸಚಿವ ಎಂ.ಎಂ. ನಾಣಯ್ಯ ಅವರ ನಿಧನಾನಂತರ ಅವರ ಸ್ಥಾನ ತುಂಬುವ ಸಾಮಥ್ರ್ಯವಿರುವ ಯಾವ ನಾಯಕರು ಕಾಂಗ್ರೆಸ್‍ನಲ್ಲಿ ಹೊರಹೊಮ್ಮಿಲ್ಲ. ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ಟಿ.ಜಾನ್, ಹಿರಿಯ ನಾಯಕರಾದ ಮೆಟ್ಟೂ ಚಂಗಪ್ಪ, ಸುಮಾ ವಸಂತ, ಟಿ.ಪಿ. ರಮೇಶ್, ಕಾರ್ಯಕರ್ತರನ್ನು ಒಗ್ಗೂಡಿಸುವಲ್ಲಿ ವಿಫಲರಾಗಿದ್ದಾರೆ. ಇದರ ಪರಿಣಾಮ ಇಲ್ಲಿನ ಮೂರು ಎಪಿಎಂಸಿಗಳು ಬಿಜೆಪಿ ಪಾಲಾಗಿದೆ. ಒಟ್ಟಾರೆ 37 ಸ್ಥಾನಗಳ ಪೈಕಿ 30ರಲ್ಲಿ ಬಿಜೆಪಿ 5ರಲ್ಲಿ ಜೆಡಿಎಸ್ ಗೆಲುವು ಸಾಧಿಸಿದರೆ ಕೇವಲ 2 ಸ್ಥಾನ ಮಾತ್ರ ಕಾಂಗ್ರೆಸ್ ಪಾಲಾಗಿದೆ. 
ಇನ್ನು ಹಳೆ ಮೈಸೂರು ಪ್ರಾಂತ್ಯಕ್ಕೆ ಎಂದರೆ ಇಲ್ಲಿ ಬಿಜೆಪಿಯ ಸಾಧನೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲಾ, ಇಲ್ಲೇನಿದ್ದರೂ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆಯೂ ಸ್ಪರ್ಧೆ ಹಾಸನ ಜೆಡಿಎಸ್‍ನ ಭದ್ರಕೋಟೆ ಎನ್ನುವುದನ್ನೂ ಈ ಚುನಾವಣೆ ಮತ್ತೊಮ್ಮೆ ಸಾಬೀತು ಪಡಿಸಿದೆ. ಇಲ್ಲಿನ 12 ಎಪಿಎಂಸಿಗಳೂ ಜೆಡಿಎಸ್ ಪಾಲಾಗಿದೆ. 52 ಸ್ಥಾನಗಳ ಪೈಕಿ 42ರಲ್ಲಿ ಜೆಡಿಎಸ್ 8ರಲ್ಲಿ ಕಾಂಗ್ರೆಸ್ ಮತ್ತು ಕೇವಲ ಒಂದರಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ ಮಂಡ್ಯದಲ್ಲಿ ಬಿಜೆಪಿಯಿದ್ದು ಶೂನ್ಯ ಸಂಪಾದನೆ ಇಲ್ಲಿನ 5ಎಪಿಎಂಸಿಗಳು ಜೆಡಿಎಸ್‍ನ ಪಾಲಾಗಿದೆ. ಕಾಂಗ್ರೆಸ್‍ನಲ್ಲಿಯ ಒಡಕು ದೊಡ್ಡ ಪರಿಣಾಮ ಬೀರಿದರೆ ಜೆಡಿಎಸ್‍ನಲ್ಲಿರುವ ಭಿನ್ನಮತ ಮತದಾರರ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. 
ಕೋಲಾರ ತುಮಕೂರಿನಲ್ಲಿ ಜೆಡಿಎಸ್ ಕಾಂಗ್ರೆಸ್ ಸಮಬಲ ಸಾಧಿಸಿದೆ. ತುಮಕೂರಿನ 7ಎಪಿಎಂಸಿಗಳ ಪೈಕಿ ಕುಣಿಗಲ್‍ನಲ್ಲಿ ಮಾತ್ರ ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ಹಿರಿಯ ನಾಯಕ ವೈ.ಕೆ. ರಾಮಯ್ಯ ಅವರ ಪುತ್ರ ಕೃಷ್ಣಕುಮಾರ್ ನಡೆಸುತ್ತಿರುವ ಪ್ರಯತ್ನದ ಫಲವಾಗಿ ಇಲ್ಲಿ ಬಿಜೆಪಿಯ ಗದ್ದುಗೆ ಹಿಡಿದರೆ, ಗುಬ್ಬಿ, ತುರುವೇಕೆರೆ, ಮತ್ತು ತಿಪಟೂರಿನಲ್ಲಿ ಜೆಡಿಎಸ್ ಅಧಿಕಾರ ಹಿಡಿದಿದೆ. ಶಿರಾ, ಪಾವಗಡ, ಮತ್ತು ಮಧುಗಿರಿ ಕಾಂಗ್ರೆಸ್ ಪಾಲಾಗಿದೆ. ಕೋಲಾರದ 5 ಎಪಿಎಂಪಿಗಳಲ್ಲಿ ಮುಳಬಾಗಿಲು, ಬಂಗಾರಪೇಟೆ, ಶ್ರೀನಿವಾಸಪುರ ಕಾಂಗ್ರೆಸ್‍ಗೆ ಒಲಿದಿದೆ. ಮಾಲೂರು ಮತ್ತು ಕೋಲಾರ ಜೆಡಿಎಸ್ ಪಾಲಾಗಿದೆ. ಚಿಕ್ಕ ಬಳ್ಳಾಪುರದಲ್ಲಿ ಮಾತ್ರ ಕಾಂಗ್ರೆಸ್ ದಿಗ್ವಿಜಯ ಸಾಧಿಸಿದೆ. ಇಲ್ಲಿನ 5 ಎಪಿಎಂಸಿಗಳು ಕಾಂಗ್ರೆಸ್ ಪಾಲಾಗಿದ್ದು ಜೆಡಿಎಸ್ ತೀವ್ರ ಹಿನ್ನಡೆ ಅನುಭವಿಸಿದೆ. ಒಟ್ಟು 53 ಸ್ಥಾನಗಳ ಪೈಕಿ 40ರಲ್ಲಿ ಕಾಂಗ್ರೆಸ್, 3ಜೆಡಿಎಸ್, ಮತ್ತು 4ರಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ, ಬೆಂಗಳೂರು ಗ್ರಾಮಾಂತರವೊಂದರಲ್ಲಿ ಎಪಿಎಂಸಿ 10ವರ್ಷಗಳ ನಂತರ ಕಾಂಗ್ರೆಸ್ ಪಾಲಾಗಿದೆ. 13 ಸ್ಥಾನಗಳ ಪೈಕಿ ತಲಾ 6ರಲ್ಲಿ ಕಾಂಗ್ರೆಸ್ ಜೆಡಿಎಸ್ ಗೆಲುವು ಸಾಧಿಸಿದ್ದು ಒಂದು ಸ್ಥಾನ ಬಿಜೆಪಿ ಪಾಲಾಗಿದೆ. ಇನ್ನು ಗಡಿಜಿಲ್ಲೆ ಬೀದರ್‍ನಲ್ಲಿ ಕಾಂಗ್ರೆಸ್, ಬಿಜೆಪಿ ಸಮಬಲ ಸಾಧಿಸಿದೆ. ಜೆಡಿಎಸ್ ಇಲ್ಲಿ ನಿರೀಕ್ಷಿತ  ಪೈಪೋಟಿ ನೀಡಿಲ್ಲ. ಜೆಡಿಎಸ್‍ಗೆ ಇಲ್ಲಿ ಉತ್ತಮ ನಲೆ ಇದ್ದರೂ ನಾಯಕರು ಮತಗಳಿಸುವಲ್ಲಿ ವಿಫಲರಾಗಿದ್ದಾರೆ.
ಒಟ್ಟಾರೆ121 ಎಪಿಎಂಸಿ ಪೈಕಿ 62ರಲ್ಲಿ ಕಾಂಗ್ರೆಸ್ 35ರಲ್ಲಿ ಬಿಜೆಪಿ, 14ರಲ್ಲಿ ಜೆಡಿಎಸ್ ಅಧಿಕಾರ ಹಿಡಿಯಲಿದ್ದು, ಒಂದರಲ್ಲಿ ಎಂಇಎಸ್ ಹಾಗೂ 9ರಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. 121 ಎಪಿಎಂಸಿಗಳ 1604 ಸ್ಥಾನಗಳ ಪೈಕಿ 680ಸ್ಥಾನ ಕಾಂಗ್ರೆಸ್, 593 ಬಿಜೆಪಿ ಮತ್ತು 182 ಸ್ಥಾನದಲ್ಲಿ ಜೆಡಿಎಸ್ ಬೆಂಬಲಿತರು ಆಯ್ಕೆಯಾಗಿದ್ದಾರೆ. 

Links :
ಸಂಬಂಧಿತ ಟ್ಯಾಗ್ಗಳು

ಸಂಬಂಧಿತ ಟ್ಯಾಗ್ಗಳನ್ನು ಲಭ್ಯವಿಲ್ಲಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ