ಗೋಡೆ ಕೊರೆದು ಚಿನ್ನಾಭರಣ ಲೂಟಿ !

Kannada News

28-08-2017

ಮೈಸೂರು: ರಾಜ್ಯದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇತ್ತೀಚೆಗೆ ಕಳ್ಳತನದ ಪ್ರಕರಣಗಳು ಹೆಚ್ಚುತ್ತಿದ್ದು, ಜನತೆಯ ನಿದ್ದೆಗೆಡಿಸಿದೆ. ದಿನದಿಂದ ದಿನಕ್ಕೆ ಕಳ್ಳತನದ ಪ್ರಕರಣಗಳು ಹೆಚ್ಚುತ್ತಲೇ ಇದ್ದು ಜನತೆಗೆ ನೆಮ್ಮದಿಯ ಜೀವನ ಅಸಾಧ್ಯವಾಗಿದೆ. ಕಳೆದ ರಾತ್ರಿಯಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಕಳ್ಳರು ತಮ್ಮ ಕರಾಮತ್ತನ್ನು ತೋರಿಸಿದ್ದಾರೆ. ಜ್ಯುವೆಲ್ಲರಿ ಶಾಪ್ ವೊಂದರ ಗೋಡೆ ಕೊರೆದು ಒಳನುಗ್ಗಿರುವ ಕಳ್ಳರು ಲಕ್ಷಾಂತರ ರೂಪಾಯಿ ಬೆಲೆಬಾಳುವ ಚಿನ್ನಾಭರಣವನ್ನು ಹೊತ್ತೊಯ್ದಿದ್ದಾರೆ. ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ವರ್ಧಮಾನ್ ಜ್ಯುವೆಲ್ಲರಿ ಮಳಿಗೆಯ ಗೋಡೆ ಕೊರೆದು ಒಳನುಗ್ಗಿರುವ ಕಳ್ಳರು ಸುಮಾರು 15 ಲಕ್ಷಕ್ಕೂ ಅಧಿಕ ಬೆಲೆಬಾಳುವ ಚಿನ್ನ ಮತ್ತು ಬೆಳ್ಳಿಯ ಆಭರಣವನ್ನು ದೋಚಿದ್ದಾರೆ. ಅಂಗಡಿಯ ಮಾಲೀಕರು ಇಂದು ಬೆಳಿಗ್ಗೆ ಬಂದು ಬಾಗಿಲು ತೆರೆದಾಗ ಕಳ್ಳತನ ಕೃತ್ಯ, ಬೆಳಕಿಗೆ ಬಂದಿದೆ. ಕೂಡಲೇ ಸರಸ್ವತಿಪುರಂ ಠಾಣೆಯ ಪೊಲೀಸರಿಗೆ ಮಾಹಿತಿ ತಿಳಿಸಿದ್ದು, ಸ್ಥಳಕ್ಕೆ ಇನ್ಸ್ ಪೆಕ್ಟರ್ ನಾಗೇಗೌಡ, ಸಬ್ ಇನ್ಸ ಪೆಕ್ಟರ್ ಮೋಹನ್ ಹಾಗೂ ಸಿಬ್ಬಂದಿಗಳು, ಶ್ವಾನದಳ, ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಕಳ್ಳರ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ. ದಿನೇ ದಿನೇ ಕಳ್ಳತನ ಪ್ರಕರಣಗಳು ಹೆಚ್ಚುತ್ತಲೇ ಇದ್ದು ಪೊಲೀಸರು ಹೆಚ್ಚಿನ ನಿಗಾ ವಹಿಸಬೇಕಾದ ಅವಶ್ಯಕತೆ ಇದೆ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬಂದಿವೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ