ಅಕ್ರಮ-ಸಕ್ರಮ

Kannada News

18-03-2017 388

ಅಕ್ರಮ- ಸಕ್ರಮ ಎಂಬ ಆರು ಅಕ್ಷರಗಳ ಪದ ಕಿವಿಗೆ ಬಿದ್ದೊಡನೆ ಬೆಂಗಳೂರು ನಗರದ ಅನೇಕ ನಿವಾಸಿಗಳು ಒಮ್ಮಿಂದೊಮ್ಮೆಲೆ ಎಚ್ಚರಗೊಳ್ಳುತ್ತಾರೆ. ಈ ಆರು ಅಕ್ಷರದ ಯೋಜನೆ ಇಂದಲ್ಲ ನಾಳೆ ಜಾರಿಯಾಗಲಿದೆ ಎಂದು ಕಳೆದೊಂದು ದಶಕದಿಂದ ನಗರದ ನಿವಾಸಿಗಳು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಈ ಯೋಜನೆ ಜಾರಿಯಾದರೆ ನಮ್ಮ ಮನೆ ನಿವೇಶನಗಳು ಬಿ ಖಾತೆ ವ್ಯಾಪ್ತಿಯಿಂದ ಹೊರ ಬಂದು, ಎ ಖಾತೆಯಾಗಲಿದೆ. ಇದರಿಂದ ತಮ್ಮ ನಿವೇಶನಗಳಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಸುಗಮವಾಗಿ ಸಾಲ ಸಿಗಲಿದೆ. ಆಸ್ತಿ ಮಾರಾಟ ಅತ್ಯಂತ ಸರಳವಾಗಲಿದೆ ತಮ್ಮ ಮನೆ ಅಥವಾ ನಿವೇಶನಕ್ಕೆ ನೀರು, ಒಳಚರಂಡಿ, ವಿದ್ಯುತ್ ಸಂಪರ್ಕ ಕಲ್ಪಿಸಿಕೊಳ್ಳಲು ಯಾವುದೇ ಆಡೆ-ತಡೆ ಇರುವುದಿಲ್ಲ. ವರ್ಷದಿಂದ ವರ್ಷಕ್ಕೆ ಪಾಲಿಕೆಗೆ ಕಂದಾಯ ಕೂಡಾ ಪಾವತಿಸಬಹುದು. 
ತಮ್ಮ ಮನೆ ಅಥವಾ ಅಥವಾ ನಿವೇಶನ ಅಕ್ರಮ ಎನ್ನುವ ಬೀತಿ ಇರುವುದಿಲ್ಲ. ಸರ್ಕಾರ ಇಲ್ಲವೇ ಬಿಬಿಎಂಪಿ ಸಮರ ಸಾರಿ ಅದನ್ನು ತೆರವುಗೊಳಿಸುವುದಿಲ್ಲ ಎಂಬ ನಿರೀಕ್ಷೆಯೊಂದಿಗೆ ನಗರದ ಜನತೆ ಅಕ್ರಮ-ಸಕ್ರಮ ಎಂಬ ಯೋಜನೆಗೆ ಕಾಯುತ್ತಿದ್ದಾರೆ. 90ರ ದಶಕದಲ್ಲಿ ಕೇವಲ ಒಂದು ಬಾರಿಗೆ ಎಂದು ಜಾರಿಯಾಗಿ ಯಾವುದೇ ರೀತಿಯ ಅಡ್ಡಿ ಆತಂಕಗಳಿಲ್ಲದೆ ಯಶಸ್ವಿಯಾಗಿ ಪೂರ್ಣಗೊಂಡ ಯೋಜನೆ ಮತ್ತೊಂದು ಅವಧಿಗೆ ಜಾರಿಗೆ ಬರಲಿದೆ ಎಂದು ಬೆಂಗಳೂರು ನಗರದ ಜನತೆ ಸರಿ ಸುಮಾರು ಎರಡು ದಶಕಗಳ ಕಾಲ ಕಾದು ಕುಳಿತಿದ್ದರು. ಈ ಬಗ್ಗೆ ಹಲವಾರು ಸುತ್ತಿನಲ್ಲಿ ಚರ್ಚೆ, ತಜ್ಞರ ಅಭಿಪ್ರಾಯ ಆಧರಿಸಿ 2013 ರಲ್ಲಿ ಯೋಜನೆ ರೂಪಿಸಲಾಯಿತು.
1994 ರಲ್ಲಿ ಅಧಿಕಾರಕ್ಕೆ ಬಂದ ಜನತಾದಳ ಸರ್ಕಾರ ಮೊಟ್ಟ ಮೊದಲ ಬಾರಿಗೆ ಈ ಯೋಜನೆ ರೂಪಿಸಿತ್ತು, ಮಾಜಿ ಪ್ರಧಾನಿ ದೇವೇಗೌಡರು ರಾಜ್ಯದ ಮುಖ್ಯಮಂತ್ರಿಯಾಗುತ್ತಿದ್ದಂತೆ ಕೈಗೊಂಡ ನಿರ್ಧಾರಗಳಲ್ಲಿ ಅಂದಿನ ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಡ್‍ಗಳ ಸಂಖ್ಯೆಯನ್ನು 100 ಕ್ಕೆ ವಿಸ್ತರಿಸಿ ನಗರದ ಪ್ರಮಾಣ ಹೆಚ್ಚಳ ಮಾಡಿದರು. ಈ 100 ವಾರ್ಡ್‍ಗಳ ವ್ಯಾಪ್ತಿಯಲ್ಲಿ ಕಂದಾಯ, ಗ್ರಾಮಠಾಣಾ, ಅರಣ್ಯ ಸೇರಿದಂತೆ ಭೂಮಿ ಪರಿವರ್ತನೆ ಮಾಡಿಕೊಳ್ಳದೆ ನಿರ್ಮಿಸಲಾಗಿದ್ದ ಕಟ್ಟಡಗಳು ಹಾಗು ನಗರ ಪರಿಮಿತಿ ಕಾಯಿದೆಯನ್ನು ಉಲ್ಲಂಘಿಸಿ ಹಸಿರು ವಲಯದಲ್ಲೂ ಸಾಕಷ್ಟು ಪ್ರಮಾಣದ ಕಟ್ಟಡಗಳು ನಿರ್ಮಾಣಗೊಂಡಿದ್ದವು.
ಈ ಪ್ರದೇಶಗಳು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರುವ ಮುನ್ನ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿದ್ದ ಪರಿಣಾಮ ಈ ಆಸ್ತಿಗಳಿಗೆ ಅಷ್ಟೊಂದು ಮಾನ್ಯತೆ ಇರಲಿಲ್ಲ. ಈ ಎಲ್ಲಾ ಪ್ರದೇಶ ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರುತ್ತಿದ್ದಂತೆ ಏಕಾಏಕಿ ಈ ಎಲ್ಲಾ ಆಸ್ತಿಗಳಿಗೆ ವಿಶೇಷ ಮಾನ್ಯತೆ ಮತ್ತು ಬೆಲೆ ಸಿಕ್ಕಿತು. ಹೊಸದಾಗಿ ಸೇರ್ಪಡೆಯಾದ ಪ್ರದೇಶಗಳಿಗೆ ನೀರು, ಒಳಚರಂಡಿ, ವಿದ್ಯುತ್‍ನಂತಹ ಮೂಲ ಸೌಲಭ್ಯ ಸೃಷ್ಠಿ ರಾಜ್ಯ ಸರ್ಕಾರ ಮತ್ತು ಮಹಾನಗರ ಪಾಲಿಕೆಗೆ ಸವಾಲಾಗಿ ಪರಿಣಮಿಸಿತು.
ಈ ಸವಾಲನ್ನು ಸ್ವೀಕರಿಸಿದ ಪಾಲಿಕೆ ಇಡೀ ಪ್ರದೇಶದ ಸಮೀಕ್ಷೆ ನಡೆಸಿದಾಗ ಹಲವಾರು ಆಸ್ತಿಗಳು ಅಕ್ರಮ ಎಂದು ಪತ್ತೆಯಾಯಿತು. ಹಸಿರುವಲಯದಲ್ಲಿ ನಿರ್ಮಾಣಗೊಂಡಿರುವ ಕಟ್ಟಡಗಳು ಭೂಮಿ ಪರಿವರ್ತನೆ ಮಾಡಿಕೊಳ್ಳದೆ,  ಕಂದಾಯ ಭೂಮಿಯಲ್ಲಿ ನಿರ್ಮಾಣಗೊಂಡಿರುವ ಕಟ್ಟಡಗಳು ನಕ್ಷೆ ಪಡೆಯದೆ ನಿಯಮ ಉಲ್ಲಂಘಿಸಿ ನಿರ್ಮಿಸಿರುವ ಕಟ್ಟಡಗಳಿಗೆ ಇಂತಹ ನಾಗರಿಕ ಸೌಲಭ್ಯ ಕಲ್ಪಿಸಲು ಸಾದ್ಯವಿಲ್ಲ ಎಂದು ಹೇಳಿ, ಇದಕ್ಕಿರುವ ಕಾನೂನು ತೊಡಕು ನಿವಾರಿಸಲು ಪಾಲಿಕೆ ಅಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿದರು. ಇದನ್ನು ಆದರಿಸಿ ಅಂದು ದೇವೇಗೌಡರ ಸಂಪುಟದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದ ಬಸವರಾಜ ರಾಯರೆಡ್ಡಿ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ರೋಷನ್ ಬೇಗ್ ಅಕ್ರಮ-ಸಕ್ರಮ ಕಾಯಿದೆ ರೂಪಿಸಿದರು. ಬೆಂಗಳೂರು ನಗರ ಪರಿಮಿತಿ ಕಾಯಿದೆಗೂ ತಿದ್ದುಪಡಿ ತಂದು ಹಸಿರು ವಲಯ ಮಿತಿ ಕಡಿಮೆ ಮಾಡಲಾಯಿತು. ಹಸಿರು ವಲಯ ಹಾಗು ಕಂದಾಯ ಭೂಮಿಯಲ್ಲಿ ಭೂಮಿ ಪರಿವರ್ತನೆ ಮಾಡಿಕೊಳ್ಳದೇ ನಿರ್ಮಾಣ ಮಾಡಿದ ಕಟ್ಟಡಗಳನ್ನು ಸಕ್ರಮಗೊಳಿಸಲು ತೀರ್ಮಾನಿಸಲಾಯಿತು. ಅದಕ್ಕಾಗಿ ನಿರ್ದಿಷ್ಟ ಶುಲ್ಕ ವಿಧಿಸಲಾಯಿತು. ಇದರಿಂದ ಪಾಲಿಕೆಗೂ ಸಾಕಷ್ಟು ಪ್ರಮಾಣದ ಹಣ ಬಂತು. ಅದೇ ರೀತಿ ಹಲವಾರು ಕಟ್ಟಡಗಳು ಬಿ ಖಾತೆ ವ್ಯಾಪ್ತಿಯಿಂದ ಎ ಖಾತೆಗೆ ವರ್ಗಾವಣೆಯಾಗಿ 100 ವಾರ್ಡ್‍ಗಳ ಬಹುತೇಕ ಪ್ರದೇಶ ಸಕ್ರಮ ಪ್ರದೇಶವಾಗಿ ಪರಿಣಮಿಸಿತು.
ಇದಾದ ನಂತರ ನಗರ ನಿರೀಕ್ಷೆಗೂ ಮೀರಿ ಬೆಳೆಯಿತು. ಮಾಹಿತಿ ತಂತ್ರಜ್ಞಾನದ ವಲಯದಲ್ಲಿನ ಪ್ರಗತಿಯಿಂದಾಗಿ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ದೊಡ್ಡ ರೀತಿಯಲ್ಲಿ ಬೆಳೆಯಿತು. ಅದರಂತೆ ಬೆಂಗಳೂರಿನ ವಿಸ್ತೀರ್ಣ ಕೂಡಾ ಬೆಳೆಯುತ್ತಾ ಸಾಗಿತು. ಫಲವತ್ತಾದ ಕೃಷಿ ಭೂಮಿ ಬೃಹತ್ ಕಟ್ಟಡಗಳ ಕಾಂಕ್ರಿಟ್ ಕಾಡಾಗಿ ಪರಿಣಮಿಸಿದರೆ ಹಸಿರು ವಲಯ ಬೃಹತ್ ವಸತಿ ಸಮುಚ್ಛಯಗಳ ವಲಯವಾಗಿ ಪರಿವರ್ತನೆಯಾಯಿತು. ಹಳೆಯ ನಗರ ಪರಿಮಿತಿ ಕಾಯಿದೆ ಅನ್ವಯ ಸದ್ಯ ನಗರ ಹೊರವಲಯದ ಈ ಎಲ್ಲವೂ ಅಕ್ರಮ ಕಟ್ಟಡಗಳೇ ಆದರೂ ಇವುಗಳಿಗೆ ವಿದ್ಯುತ್, ಒಳಚರಂಡಿ ಸಂಪರ್ಕ ಕಲ್ಪಿಸಲಾಗಿದೆ.
ಸದ್ಯ ಇಂತಹ ಕಟ್ಟಡಗಲಲ್ಲಿ ವಾಸಿಸುತ್ತಿರುವ ಜನತೆ ಸದಾ ಅಭದ್ರತೆಯಿಂದ ನರಳುತ್ತಿದ್ದಾರೆ, ತಮ್ಮ ಕಟ್ಟಡಗಳು ಅಕ್ರಮ ಎಂಬ ಬೀತಿ ಅವರ ನೆತ್ತಿ ಮೇಲೆ ತೂಗುತ್ತಿದೆ. ಹಸಿರುವಲಯ, ಅರಣ್ಯ ಪ್ರದೇಶ ಕಾಪಾಡುವ ದೃಷ್ಠಯಿಂದ ಹಸಿರು ನ್ಯಾಯಮಂಡಳಿ ಮತ್ತು ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಯಾವಾಗ ತಮ್ಮ ಪಾಲಿಗೆ ಮುಳುವಾಗಲಿದೆಯೇ ಎಂದು ಇಲ್ಲಿನ ಜನ ಆತಂಕದಲ್ಲಿದ್ದಾರೆ. ಇದರ ಪರಿಣಾಮ ಇಂತಹ ಕಟ್ಟಡಗಳ ಪರಭಾರೆ ಕೂಡಾ ಕಷ್ಟವಾಗಿ ಪರಿಣಮಿಸಿದೆ.
1994 ರಲ್ಲಿ ರೂಪಿಸಿದಂತೆ ಒಂದು ಬಾರಿಗೆ ಎಂಬ ಷರತ್ತು ವಿಧಿಸಿ ಅಕ್ರಮ-ಸಕ್ರಮ ಯೋಜನೆ ರೂಪಿಸುವಂತೆ 2002 ರಿಂದಲೂ ಜನತೆ ಒತ್ತಡ ಹೇರತೊಡಗಿದ್ದರು, ಸಹಜವಾಗಿ ಬೆಂಗಳೂರು ಮಹಾನಗರದ ಬಹುತೇಕ ಎಲ್ಲಾ ಶಾಸಕರು ಇಂತಹ ಯೋಜನೆಯ ಆಗತ್ಯವನ್ನು ಪ್ರತಿಪಾದಿಸುತ್ತಿದ್ದರು. ಅದರಲ್ಲೂ ನಗರ ಹೊರವಲಯದಲ್ಲಿ ಹೆಚ್ಚಿನ ಪ್ರಾಭಲ್ಯ ಹೊಂದಿರುವ ಜೆಡಿಎಸ್ ತಮ್ಮ ಪಕ್ಷದ ವರ್ಚಸ್ಸು ಹಾಗೂ ಸಂಘಟನೆ ಬಲಪಡಿಸುವ ದೃಷ್ಠಿಯಿಂದ ಅಕ್ರಮ-ಸಕ್ರಮವನ್ನು ಜಾರಿಗೊಳಿಸಬೇಕೆಂದು ಪ್ರಭಲವಾಗಿ ಪ್ರತಿಪಾದಿಸುತ್ತಿತ್ತು.
ಅಂದು ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಯೋಜನೆ ಜಾರಿಯ ಆಗ್ರಹ ತೀವೃ ಸ್ವರೂಪ ಪಡೆದುಕೊಂಡ ಪರಿಣಾಮ ಅಂದಿನ ಬೆಂಗಳೂರು ನಗರಾಭಿವೃದ್ಧಿ ಸಚಿವ ರಾಮಲಿಂಗರೆಡ್ಡಿ ನೇತೃತ್ವದಲ್ಲಿ ಸಂಪುಟ ಉಪ ಸಮಿತಿ ರಚಿಸಲಾಯಿತು. ಈ ಸಮಿತಿ ಹಲವು ಸ್ವಯಂ ಸೇವಾ ಸಂಘಟನೆಗಳ, ನಗರ ಯೋಜನಾ ತಜ್ಞರ, ಸಾರ್ವಜನಿಕರ ಅಹವಾಲು ಆಲಿಸಿ ಯೋಜನೆಯೊಂದನ್ನು ಸಿದ್ದ ಪಡಿಸಿತು.
ಆದರೆ ಕಾಯಿದೆ ಬಗ್ಗೆ ಜನರ ಬೇಡಿಕೆ ತೀವೃಗೊಂಡಿತು ಆಗ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅಕ್ರಮ-ಸಕ್ರಮ ಕಾಯಿದೆ ಎಲ್ಲಾ ರಾಜಕೀಯ ಪಕ್ಷಗಳ ಪ್ರಣಾಳಿಕೆಯಲ್ಲಿ ಪ್ರಮುಖ ಭರವಸೆಯಾಯಿತು. ಇದಾದ ನಂತರ ಅಸ್ತಿತ್ವಕ್ಕೆ ಬಂದ ಬಿಜೆಪಿ ಸರ್ಕಾರ ಇದರಲ್ಲಿ ಪ್ರಗತಿ ಸಾಧಿಸಿತು. ಹಲವು ಸುತ್ತಿನ ಪರಮಾರ್ಷೆ ಮೂಲಕ ತಿದ್ದುಪಡಿಯಲ್ಲಿ ಸಾಕಷ್ಟು ಮಾರ್ಪಾಡು ಮಾಡಿತು. ಬಳಿಕ ಸದನದಲ್ಲಿ ಇದನ್ನು ಅನುಮೊದಿಸಿ ರಾಜ್ಯಪಾಲರ ಅಂಕಿತಕ್ಕೆ ರವಾನಿಸಲಾಯಿತು.
ಆದರೆ, ಅಂದು ರಾಜ್ಯಪಾಲರಾಗಿದ್ದ ಹಂಸರಾಜ್ ಭಾರದ್ವಾಜ್ ಖ್ಯಾತ ನ್ಯಾಯವಾದಿ, ಸಂವಿಧಾನ ತಜ್ಞರು ಕೂಡಾ ಆಗಿದ್ದರು. ಹೀಗಾಗಿ ಅವರು ವಿಧಾನಮಂಡಲ ಅಂಗೀಕರಿಸಿದ ಕಾಯಿದೆ ಬಗ್ಗೆ ಪರಿಶೀಲಿಸಿ, ಬಿಜೆಪಿ ಸರ್ಕಾರದಿಂದ ಹಲವು ಸ್ಪಷ್ಟನೆ ಕೋರಿದರು. ಅಂದಿನ ಸರ್ಕಾರ ತಾನು ಮಾಡಿದ ತಿದ್ದುಪಡಿ ಬಗ್ಗೆ ಖಚಿತ ಮಾಹಿತಿ ನೀಡಲು ವಿಫಲವಾದ ಹಿನ್ನಲೆಯಲ್ಲಿ ರಾಜ್ಯ ಪಾಲರು ಕಾಯಿದೆಗೆ ಅಂಕಿತ ಹಾಕದೆ ಅದನ್ನು ವಾಪಾಸ್ ಕಳುಹಿಸಿದರು.
ರಾಜ್ಯಪಾಲರ ಈ ಕ್ರಮ ರಾಜಕೀಯವಾಗಿ ತೀವೃ ವಿವಾದವನ್ನೇ ಸೃಷ್ಠಿಸಿತು. ಅಕ್ರಮ-ಸಕ್ರಮ ಯೋಜನೆ ಬೆಂಗಳೂರು ಸೇರಿದಂತೆ ಹಲವು ನಗರ ಪ್ರದೇಶಗಳ ಜನರ ಬಹುದಿನದ ಕನಸು, ಇದು ಜಾರಿಯಾದರೆ ನಗರ ಪ್ರದೇಶಗಳಲ್ಲಿ  ಬಿಜೆಪಿ ಸರ್ಕಾರದ ಪರ ಒಳ್ಳೆಯ ಅಭಿಪ್ರಾಯ ಬರಲಿದೆ, ಇದು ಇಷ್ಟವಿಲ್ಲದ ಕಾಂಗ್ರೆಸ್ ರಾಜ್ಯಪಾಲರ ಮೂಲಕ ಕಾಯಿದೆ ಜಾರಿಯಾಗದಂತೆ ಪ್ರಯತ್ನ ಮಾಡುತ್ತಿದೆ, ರಾಜಭವನ ಕಾಂಗ್ರೆಸ್ ಭವನವಾಗಿದೆ ಎಂದು ಬಿಜೆಪಿ ಆರೋಪಿಸಿತು.
ಕರ್ನಾಟಕ ನಗರ ಮತ್ತು ಗ್ರಾಮೀಣ ಯೋಜನಾ ಕಾಯಿದೆಯನ್ನು ಸಮರ್ಪಕವಾಗಿ ಅನುಷ್ಟಾನಕ್ಕೆ ತಾರದ ಪರಿಣಾಮ ಕಂದಾಯ ಭೂಮಿಯಲ್ಲಿ ಹಲವು ಕಟ್ಟಡಗಳು ತಲೆ ಎತ್ತಿವೆ, ಕಟ್ಟಡ ನಿರ್ಮಾಣದ ಬೈಲಾಗಳನ್ನು ಉಲ್ಲಂಘಿಸಿ ಕಟ್ಟಡ ನಿರ್ಮಿಸಲಾಗಿದೆ. ಕೋರ್ಟ್ ಮುಂದೆ ಯಾರಾದರು ಇವುಗಳನ್ನು ಪ್ರಸ್ತಾಪಿಸಿದರೆ ಪರಿಸ್ಥಿತಿ ಕಠಿಣವಾಗಲಿದೆ. ಹೀಗಾಗಿ ನೆರೆಯ ಚನೈ ಮಾದರಿಯಲ್ಲಿ ನಗರ ಮತ್ತು ಪಟ್ಟಣ ಯೋಜನಾ ಕಾಯಿದೆಗೆ ತಿದ್ದುಪಡಿ ಮಾಡಿ ಕಟ್ಟಡಗಳನ್ನು ಸಕ್ರಮ ಮಾಡಬೇಕೆಂದು ಸಮಿತಿ ಸರ್ಕಾರಕ್ಕೆ ವರದಿ ನೀಡಿತು.
ಈ ವರದಿಯನ್ನಾಧರಿಸಿ ಅಂದಿನ ಕಾನೂನು ಸಚಿವ ಎಚ್. ಕೆ. ಪಾಟೀಲ್ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯಿದೆಗೆ ತಿದ್ದುಪಡಿ ರೂಪಿಸಿದರು. ಆದರೆ, ಈ ಕಾಯಿದೆಗೆ ಸದನ ಅನುಮೋದನೆ ನೀಡಲಿಲ್ಲ ಪರಿಣಾಮ ಸಾಧಕ-ಬಾದಕಗಳ ಅದ್ಯಯನಕ್ಕೆ ಜಂಟಿ ಸಲಹಾ ಸಮಿತಿಗೆ ವರ್ಗಾಯಿಸಲಾಯಿತು. ಈ ಸಮಿತಿ ಅದ್ಯಯನ ಆರಂಭಿಸುವ ಮುನ್ನವೇ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರ ಪತನಗೊಂಡು, ಜೆಡಿಎಸ್- ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂತು. ಈ ಅವಧಿಯಲ್ಲಿ ಮತ್ತೆ ಈ ಕಾಯಿದೆ ಜಾರಿಗೆ ಮರು ಜೀವ ಬಂತು. ಸರ್ಕಾರ ಬದಲಾದ ಪರಿಣಾಮ ಇಡೀ ಕಾಯಿದೆಯ ಸ್ವರೂಪವೇ ಬದಲಾಯಿತು. ಪರಿವರ್ತಿತ ಕಾಯಿದೆ ಬಗ್ಗೆ ಮತ್ತೆ ವಿಧಾನಮಂಡಲದಲ್ಲಿ ತೀವೃ ಸ್ವರೂಪದ ಚರ್ಚೆ ನಡೆದು ಮತ್ತೆ ಕಾಯಿದೆ ಜಂಟಿ ಸಲಹಾ ಸಮಿತಿಯ ಅದ್ಯಯನಕ್ಕೆ ವರ್ಗಾಯಿಸಲಾಯಿತು. ಇದರ ನಡುವೆಯೇ ಜೆಡಿಎಸ್- ಬಿಜೆಪಿ ಸಮ್ಮಿಶ್ರ ಸರ್ಕಾರ ಕೂಡಾ ಅಂತ್ಯಗೊಂಡು ಕಾಯಿದೆ ತಿದ್ದುಪಡಿ ಶೈತ್ಯಾಗಾರ ಸೇರಿತು.
ರಾಜ್ಯಪಾಲರ ನಡೆವಿರೋಧಿಸಿ ಬಿಜೆಪಿ ದೊಡ್ಡ ಪ್ರತಿಭಟನೆ ಆರಂಭಿಸಿತು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕೂಡಾ ಪ್ರತಿಭಟನೆ ಆರಂಭಿಸಿತು. ಆಗ ಸಂಧಾನಕ್ಕೆ ಮುಂದಾದ ರಾಜ್ಯಪಾಲರು ಅಂದಿನ 
ಕಾನೂನು ಸಚಿವ ಸುರೇಶ್‍ಕುಮಾರ್ ಸೇರಿದಂತೆ ಹಲವು ಬಿಜೆಪಿ ನಾಯಕರೊಂದಿಗೆ ಚರ್ಚೆ ನಡೆಸಿ ಕರ್ನಾಟಕ ರೂಪಿಸಿರುವ ಕಾಯಿದೆಯಲ್ಲಿನ ದೋಷಗಳನ್ನು ವಿವರಿಸಿದರು. ಕೇಂದ್ರದಲ್ಲಿ ಸ್ವತಃ ತಾವು ಕಾನೂನು ಸಚಿವರಾಗಿ ದೆಹಲಿಗೆ ಮಾತ್ರ ಸೀಮಿತಗೊಳಿಸಿದ್ದ ಯೋಜನೆಯನ್ನು ವಿವರಿಸಿದರು. ಅದರ ಆಧಾರದಲ್ಲಿ ಮುಂಬೈ ಮತ್ತು ಚೆನ್ನೈನಲ್ಲಿ ರೂಪಿಸಿದ್ದ ಯೋಜನೆಯ ಬಗ್ಗೆ ಮಾಹಿತಿ ನೀಡಿ ಅದೇ ಆಧಾರದಲ್ಲಿ ಕಾನೂನು ರಚಿಸುವಂತೆ ಸಲಹೆ ಮಾಡಿದರು. ಅದೇ ರೀತಿ ಕಾಂಗ್ರೆಸ್ ನಾಯಕರಿಗೂ ಈ ವಿಷಯದಲ್ಲಿ ರಾಜಕಾರಣ ಮರೆತು ಕೆಲಸ ಮಾಡುವಂತೆ ಸಲಹೆ ಮಾಡಿದರು. ಪರಿಣಾಮ ಅಂದು ಪ್ರತಿಪಕ್ಷದಲ್ಲಿದ್ದ ರಾಮಲಿಂಗಾರೆಡ್ಡಿ, ರೋಷನ್‍ಬೇಗ್,ವಿ.ಸೋಮಣ್ಣ, ಎಂ.ಕೃಷ್ಣಪ್ಪ, ಬಿಜೆಪಿ ನಾಯಕರಾದ ಆರ್.ಅಶೋಕ್, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಸುರೇಶ್‍ಕುಮಾರ್ ಅವರೊಂದಿಗೆ ಚರ್ಚೆ ನಡೆಸಿ ತಿದ್ದುಪಡಿ ಮಸೂದೆಯಲ್ಲಿ ಕೆಲ ಬದಲಾವಣೆ ಮಾಡಲು ಸಮ್ಮತಿಸಿ ಕಾಯಿದೆಯನ್ನು ವಾಪಸ್ ಪಡೆದರು. 
ಇದರ ಪರಿಣಾಮ ಎರಡು ರೀತಿಯ ತಿದ್ದುಪಡಿ ಪ್ರಸ್ತಾವನೆ ಬಂತು. ಮೊದಲಿಗೆ ಗ್ರಾಮೀಣ ಪ್ರದೇಶದಲ್ಲಿನ ಅಕ್ರಮ-ಸಕ್ರಮಕ್ಕೆ ಒಂದು ತಿದ್ದುಪಡಿ, ಪಟ್ಟಣ ಪ್ರದೇಶಗಳಿಗೆ ಮತ್ತೊಂದು, ಅದೇ ರೀತಿ ಬೆಂಗಳೂರು ಸೇರಿ ನಗರ ಪ್ರದೇಶಗಳಿಗೆ ಅನ್ವಯವಾಗುವಂತೆ ಮತ್ತೊಂದು ತಿದ್ದುಪಡಿ ಮಸೂದೆ ರೂಪಿಸಲಾಯಿತು. ಆದರೆ ಈಗ ಮತ್ತೊಂದು ಗೊಂದಲ ಉಂಟಾದ ಪರಿಣಾಮ ರಾಜ್ಯಪಾಲರು ಮತ್ತೆ ಕಾಯಿದೆಗೆ ಅಂಕಿತ ಹಾಕಲು ನಿರಾಕರಿಸಿದರು.
ಇದರಿಂದಾಗಿ ಅಕ್ರಮ-ಸಕ್ರಮದ ಪರ ವಿರೋಧ ಚರ್ಚೆ ತೀವ್ರ ಸ್ವರೂಪ ಪಡೆದುಕೊಂಡಿತು. ಆದರೆ ಅಂದಿನ ಸರ್ಕಾರದಲ್ಲಿ ಈ ಬಗ್ಗೆ ಸ್ಪಷ್ಟತೆ ರೂಪಿಸಲು ಯತ್ನಿಸುತ್ತಿರುವಾಗಲೇ ರಾಜಕೀಯ ತೀವ್ರ ಸ್ವರೂಪ ಪಡೆದುಕೊಂಡು. ಸರ್ಕಾರದ ಮೇಲೆ ಭಿನ್ನಮತೀಯ ಚಟುವಟಿಕೆ ಅಪ್ಪಳಿಸಿತು. ಹೀಗಾಗಿ ರಾಜ್ಯಪಾಲರು ಅಂಕಿತ ಹಾಕದೇ ತಿರಸ್ಕರಿಸಿದ್ದ ಮಸೂದೆ ಮತ್ತೆ ಮಂಡನೆ ಆಗಲಿಲ್ಲ. ಆ ಸಮಯದಲ್ಲೇ ಸರ್ಕಾರದ ಅವಧಿ ಕೂಡಾ ಪೂರ್ಣಗೊಂಡಿತು. ಇದಾದ ನಂತರ ಅಸ್ತಿತ್ವಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕಾಯಿದೆ ಬಗ್ಗೆ ವಿಶೇಷ ಆಸಕ್ತಿ ವಹಿಸಿತು. ರಾಜ್ಯಪಾಲರು ನೀಡಿದ ಸೂಚನೆ ಹಾಗೂ ತಜ್ಞರ ತಂಡ ನೆರೆಯ ತಮಿಳುನಾಡು ಹಾಗೂ ಮುಂಬೈಗೆ ತೆರಳಿ ಅಲ್ಲಿ ಜಾರಿಗೊಳಿಸಿರುವ ನೀತಿಯ ಬಗ್ಗೆ ಅಧ್ಯಯನ ನಡೆಸಿ ತಿದ್ದುಪಡಿಯಲ್ಲಿ ಸಮಗ್ರ ಮಾರ್ಪಾಡು ಮಾಡಿತು. ರಾಜ್ಯಪಾಲರ ಸಲಹೆಯಂತೆ ಈ ಕಾಯಿದೆ ಕೇವಲ ಒಂದು ಬಾರಿಗೆ ಎಂಬ ಅಂಶವನ್ನು ಅದರಲ್ಲಿ ಸ್ಪಷ್ಟವಾಗಿ ನಮೂದಿಸಿತು.
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ನಗರ ಪ್ರದೇಶಗಳಲ್ಲಿ ಭೂ ಪರಿವರ್ತನೆಯಾಗದ ಕಂದಾಯ ಭೂಮಿಯಲ್ಲಿ ಯಾವುದೇ ನಕ್ಷೆ ಮಂಜೂರಾತಿ ಪಡೆಯದೆ 600 ರಿಂದ 1000 ಚದರ ಅಡಿಯವರೆಗೆ ನಿರ್ಮಿಸಿರುವ ಕಟ್ಟಡಗಳನ್ನು ಸಕ್ರಮಗೊಳಿಸಲು ತಿದ್ದುಪಡಿ ಮಸೂದೆಯಲ್ಲಿ ಉಲ್ಲೇಖಿಸಲಾಯಿತು. ಅದೇ ರೀತಿ ವಾಣಿಜ್ಯ ಮತ್ತು ಗ್ರಹ ಕಟ್ಟಡಗಳಿಗೆ ಪ್ರತ್ಯೇಕ ನಿಯಮಾವಳಿಗಳನ್ನು ಉಲ್ಲೇಖಿಸಿ ಸದನದಲ್ಲಿ ಕಾಯಿದೆಯನ್ನು ಮಂಡಿಸಿ ಅನುಮೋದನೆ ಪಡೆದುಕೊಳ್ಳಲಾಯಿತು.
ಈ ರೀತಿ ಮಾಡಿದ ತಿದ್ದುಪಡಿಗೆ ರಾಜ್ಯಪಾಲರು ಕೂಡಾ ಅನುಮೋದನೆ ನೀಡಿದರು. ಇದಾದ ಬಳಿಕ ಸರ್ಕಾರ ನಿಯಮಾವಳಿ ರೂಪಿಸಿ ಅಕ್ಟೋಬರ್ 2013ಕ್ಕೆ ಮೊದಲು ನಿರ್ಮಿಸಿರುವ ಕಟ್ಟಡಗಳಿಗೆ ಮಾತ್ರ ಈ ಯೋಜನೆ ಅನ್ವಯವಾಗಲಿದೆ ಎಂದು ಹೇಳಿ, 2014ರ ಸೆಪ್ಟೆಂಬರ್‍ನಲ್ಲಿ ಅಧಿಸೂಚನೆ ಹೊರಡಿಸಿತು. ಈ ಅಧಿಸೂಚನೆಯ ಅನ್ವಯ ಶೇಕಡ 50ರಷ್ಟು ನಿಯಮ ಉಲ್ಲಂಘಿಸಿ ನಿರ್ಮಾಣಗೊಂಡಿರುವ ವಸತಿ ಕಟ್ಟಡಗಳು ಮತ್ತು ಶೇಕಡಾ 25ರಷ್ಟು ನಿಯಮ ಉಲ್ಲಂಘಿಸಿರುವ ವಾಣಿಜ್ಯ ಕಟ್ಟಡಗಳ ಸಕ್ರಮಕ್ಕೆ ಅವಕಾಶ ನೀಡಲಾಯಿತು. ಕಟ್ಟಡ ನಿರ್ಮಾಣ ಸಮಯದಲ್ಲಿ ಶೇ. 25ರಷ್ಟು ನಿಯಮ ಉಲ್ಲಂಘಿಸಿದರೆ ಆ ಪ್ರದೇಶದ ಸ್ಥಿರಾಸ್ತಿಯ ಮಾರ್ಗಸೂಚಿ ದರದ ಶೇ. 6, ಶೇ. 25 ಕ್ಕೂ ಮೇಲ್ಪಟ್ಟು ಮತ್ತು ಶೇ. 50 ರೊಳಗೆ ನಿಯಮ ಉಲ್ಲಂಘಿಸಿದ್ದರೆ ಮಾರ್ಗಸೂಚಿ ಮೌಲ್ಯದ ಶೇ. 8 ರಷ್ಟು ದರದ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ. ಇನ್ನು ವಸತಿ ರಹಿತ ಕಟ್ಟಡಗಳು ಶೇಕಡಾ ಶೇ. 12.5ರಷ್ಟು ನಿಯಮ ಉಲ್ಲಂಘಿಸಿದರೆ ಮಾರುಕಟ್ಟೆ ಮೌಲ್ಯದ ಶೇ. 20ರಷ್ಟು ಮತ್ತು ಶೇಕಡಾ 12.5ಕ್ಕಿಂತ ಮೇಲ್ಪಟ್ಟು ನಿಯಮ ಉಲ್ಲಂಘಿಸಿದರೆ ಮಾರುಕಟ್ಟೆ ಮೌಲ್ಯದ ಶೇಕಡಾ 35ರಷ್ಟು ಹಣವನ್ನು ದಂಡ ರೂಪದಲ್ಲಿ ಪಾವತಿಸಿ ಇಂತಹ ಕಟ್ಟಡಗಳನ್ನು ಸಕ್ರಮಗೊಳಿಸಲು ಅವಕಾಶ ಕಲ್ಪಿಸಲಾಯಿತು. ಇದು ಭೂ ಪರಿವರ್ತನೆ ಮಾಡದ ಕಂದಾಯ ಭೂಮಿಯಲ್ಲಿ ನಿರ್ಮಿಸಿದ ಕಟ್ಟಡಗಳಿಗೆ ಅನ್ವಯವಾಗಲಿಲ್ಲ. ಇದಕ್ಕಾಗಿಯೇ ಬೇರೆ ನಿಯಮಗಳನ್ನು ರೂಪಿಸಲಾಯಿತು 
ಕರ್ನಾಟಕ ನಗರ ಮತ್ತು ಪಟ್ಟಣ ಯೋಜನಾ ನಿಯಮ-2013ಅನ್ನು ಇದಕ್ಕಾಗಿ ಪ್ರತ್ಯೋಕವಾಗಿ ರೂಪಿಸಲಾಯಿತು 2013ರ ಅಕ್ಟೋಬರ್ 19ಕ್ಕೆ ಮೊದಲು ನಿರ್ಮಾಣಗೊಂಡಿರುವ ಕಟ್ಟಡಗಳ ಮಾಲೀಕರು ತಮ್ಮ ಕಟ್ಟಡವನ್ನು ಸಕ್ರಮಗೊಳಿಸಲು ಇದರಲ್ಲಿ ಅವಕಾಶ ಕಲ್ಪಿಸಲಾಗಿದೆ. ಆದರೆ ಸರ್ಕಾರಿ ಭೂಮಿ ಅತಿಕ್ರಮಿಸಿ ಕಟ್ಟಡ ನಿರ್ಮಿಸಿದವರು, ಹಸಿರು ವಲಯದಲ್ಲಿ ನಿರ್ಮಾಣಗೊಂಡಿರುವ ಕಟ್ಟಡಗಳಿಗೆ ಈ ಯೋಜನೆ ಅನ್ವಯಿಸುವುದಿಲ್ಲ ಎಂದು ನಿಯಮಗಳಲ್ಲಿ ಸ್ಪಷ್ಟಪಡಿಸಲಾಗಿದೆ. ಬೆಂಗಳೂರು ನಗರದ ಎಲ್ಲಾ 198 ವಾರ್ಡ್‍ಗಳಷ್ಟೆ ಅಲ್ಲಾ ಎಲ್ಲಾ ನಗರ ಪ್ರದೆಶಗಳಿಗೂ ಈ ಯೋಜನೆ ಅನ್ವಯವಾಗಲಿದೆ. ಅರ್ಹರು ನಿಗದಿತ ಅದೇ ನಮೂನೆಯಲ್ಲಿ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳಲ್ಲಿ ಅರ್ಜಿ ಸಲ್ಲಿಸುವಂತೆ ಸೂಚಿಸಿತು 
ಈ ರೀತಿ ಸಲ್ಲಿಕೆಯಾಗುವ ಅರ್ಜಿಗಳನ್ನು ಪರಿಶೀಲಿಸಲು ಹಿರಿಯ ಅಧಿಕಾರಿಗಳ ತಂಡವೊಂದನ್ನು ರಚಿಸಲಿದೆ. ಈ ಸಮಿತಿ ಅರ್ಜಿ ಪರಿಶೀಲನೆಯ ಜೊತೆಗೆ ಸ್ಥಳ ಪರಿಶೀಲನೆ ನಂತರ ದಂಡದ ಪ್ರಮಾಣ ನಿಗದಿ ಮಾಡುವ ಅವಕಾಶವನ್ನು ಕಲ್ಪಿಸಲಾಯಿತು. ಇನ್ನೇನು ಯೋಜನೆ ಜಾರಿಗೆ ಬಂತು ಎಂದು ಖುಷಿಯಾದ ಜನತೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಿಸಿದರು. ಆದರೆ ನಮ್ಮ ಬೆಂಗಳೂರು ಪ್ರತಿದಿನ ಸೇರಿದಂತೆ ಹಲವರು ಸರ್ಕಾರದ ಈ ಯೋಜನೆ ವಿರುದ್ಧ ಹೈಕೋರ್ಟ್ ಮೊರೆ ಹೋದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಅರ್ಜಿ ಸ್ವಿಕಾರ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿ ವಿಚಾರಣೆ ಪೂರ್ಣಗೊಳಿಸಿತು ಅಷ್ಟೇ ಅಲ್ಲ ತೀರ್ಪನ್ನು ಕಾಯ್ದಿರಿಸಿತ್ತು. 
ಈ ರೀತಿ ಕಾಯ್ದಿರಿಸಿದ್ದ ಪ್ರಕರಣದ ತೀರ್ಪು ಕಳೆದ ಡಿಸೆಂಬರ್‍ರಂದು ಹೊರಬಿದ್ದು ಸರ್ಕಾರಕ್ಕೆ ಯೋಜನೆ ಮುಂದುವರೆಸಲು ಹಸಿರುನಿಶಾನೆ ತೋರಿತು ಆದರೆ ಹಳೆಯ ನಿಯಮದಲ್ಲಿ ಯಾವುದೇ ಬದಲಾವಣೆ ಮಾಡಬಾರದು, ಶುಲ್ಕವನ್ನು ಪರಿಷ್ಕರಿಸಬಾರದು ಎಂಬ ಷರತ್ತು ವಿಧಿಸಿತು. ಈ ಷರತ್ತು ಒಡ್ಡಿದ ಸರ್ಕಾರ ಮತ್ತೆ ಅರ್ಜಿ ಸ್ವೀಕರಿಸುವ ಪ್ರಕ್ರಿಯೆಗೆ ಚಾಲನೆ ನೀಡಿತು.
ಆದರೆ ಯೋಜನೆ ಬಗ್ಗೆ ತಕರಾರು ತೆಗೆದಿರುವ ರಾಜ್ಯ ಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ನೇತೃತ್ವದ ನಮ್ಮ ಬೆಂಗಳೂರು ಪ್ರತಿಷ್ಠಾನ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‍ಗೆ ಎಫ್‍ಎಲ್‍ಪಿ ಸಲ್ಲಿಸಿದೆ. ಅಕ್ರಮ ಸಕ್ರಮ ಎಂಬ ಈ ಯೋಜನೆಗೆ ಸಂವಿಧಾನದಲ್ಲಿ ಯಾವುದೇ ಅವಕಾಶವಿಲ್ಲ. ಜನಸಾಮಾನ್ಯರಿಗೆ ನೆರವು ನೀಡುವ ದೃಷ್ಠಿಯಿಂದ ಈ ಯೋಜನೆ ರೂಪಿಸಲಾಗಿದೆ. 
ಎಂದು ಹೇಳಲಾಗುತ್ತಿದೆಯಾದರೂ, ಇದರಿಂದ ಉದ್ದೇಶಪೂರ್ವಕವಾಗಿ ನಿಯಮ ಉಲ್ಲಂಘಿಸಿರುವವರಿಗೆ ಅನುಕೂಲವಾಗಲಿದೆ ಎಂಬ ಮಾತು ಸಹ ಕೇಳಿಬರುತ್ತಿದೆ.
ಭೂಮಿ ಪರಿವರ್ತನೆ ಮಾಡಿಕೊಳ್ಳದೆ ಬೃಹತ್ ಅಪಾರ್ಟ್‍ಮೆಂಟ್ ನಿರ್ಮಿಸಿದವರು ಇದರಿಂದ ಲಾಭ ಪಡೆಯುತ್ತಾರೆ. ಸರ್ಕಾರದ ನೀತಿಯಿಂದಾಗಿ ನಿಯಮ ಇರುವುದೇ ಉಲ್ಲಂಘಿಸಲು ಎಂಬ ಸಂದೇಶ ರವಾನೆಯಾಗುತ್ತದೆ. ಬೆಂಗಳೂರು ನಗರಕ್ಕೆ ಹಸಿರು ಹೊದಿಕೆ ಇಲ್ಲವಾಗುತ್ತದೆ. ಇರುವ ಕೃಷಿಯೋಗ್ಯ ಕಂದಾಯ ಭೂಮಿ ಕಾಂಕ್ರಿಟ್ ಕಾಡಾಗಲಿದೆ. ಎಂದು ಆಪಾದಿಸಿದೆ. ಈ ಅರ್ಜಿ ವಿಚಾರಣೆಗೆ ಸ್ವೀಕರಿಸಿರುವ ಸುಪ್ರೀಂ ಕೋರ್ಟ್ ಯೋಜನೆಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಇದರಿಂದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗೆ ಮತ್ತೆ ಗ್ರಹಣ ಹಿಡಿದರೆ ಜನ ಮತ್ತೆ ಚಾತಕ ಪಕ್ಷಿಗಳಂತೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ. 
 

Links :
ಸಂಬಂಧಿತ ಟ್ಯಾಗ್ಗಳು

ಸಂಬಂಧಿತ ಟ್ಯಾಗ್ಗಳನ್ನು ಲಭ್ಯವಿಲ್ಲಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ