ರೌಡಿ ಮೇಲೆ ಗುಂಡು ಹಾರಿಸಿದ ಪೊಲೀಸರು !

Kannada News

26-08-2017 379

ಬೆಂಗಳೂರು: ಜೈಲಿನಿಂದ ಹದಿನೈದು ದಿನಗಳ ಹಿಂದಷ್ಟೇ ಬಿಡುಗಡೆಯಾಗಿ ಮತ್ತೆ ಸುಲಿಗೆಗಿಳಿದಿದ್ದ ಕುಖ್ಯಾತ ರೌಡಿ ಪ್ರೊಫೈಲ್ ಪಾಷ ಅಲಿಯಾಸ್ ಛೋಟಾ ನಾಗೇಶ್ ಮೇಲೆ ಹೆಚ್‍.ಎ.ಎಲ್ ಪೊಲೀಸರು ಗುಂಡು ಹಾರಿಸಿದ್ದಾರೆ.

ಗುಂಡೇಟಿನಿಂದ ಎಡಗಾಲಿಗೆ ಗಾಯಗೊಂಡಿರುವ ಛೋಟಾ ನಾಗೇಶ್ (23) ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿರುವ ಆತನನ್ನು ಗುಣಮುಖನಾದ ನಂತರ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಕೊಲೆಯತ್ನ, ಸುಲಿಗೆ, ಬೆದರಿಕೆ, ಮನೆಗಳ್ಳತನ ಸೇರಿದಂತೆ ಸುಮಾರು 24ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದ ರಾಮನಗರ ಮೂಲದ ಪ್ರೊಫೈಲ್ ಪಾಷ, ಮನೆಗಳ್ಳತನವೊಂದರಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ 15 ದಿನಗಳ ಹಿಂದಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದು ಮತ್ತೆ ಸುಲಿಗೆಗಿಳಿದು, ಜೀವನ್ ಭೀಮಾಮಾನಗರದಲ್ಲಿ ಬೈಕ್ ಒಂದನ್ನು ಕಳವು ಮಾಡಿದ್ದ.

ಕಳವು ಮಾಡಿದ ಬೈಕ್‍ನಲ್ಲಿ  ದಿನಗಳ ಹಿಂದೆ ರಾತ್ರಿ ಹೆಚ್‍.ಎ.ಎಲ್ ಮಾರುಕಟ್ಟೆ ಬಳಿ ಕಾರಿನಲ್ಲಿ ಹೋಗುತ್ತಿದ್ದ ಸಾಫ್ಟ್‍ ವೇರ್ ಎಂಜಿನಿಯರ್, ರಾಘವೇಂದ್ರ ಅವರ ಕಾರಿಗೆ ಡಿಕ್ಕಿ ಹೊಡೆದು, ಚಿನ್ನದ ಸರ ಕಸಿಯಲು ಯತ್ನಿಸಿದ್ದ. ಪೊಲೀಸ್ ಸಬ್‍ ಇನ್ಸ್ ಪೆಕ್ಟರ್ ಹುದ್ದೆಗೆ ತಯಾರಿ ನಡೆಸಿದ್ದ ರಾಘವೇಂದ್ರ ಪ್ರತಿರೋಧ ತೋರಿ, ನಾಗೇಶ್‍ ನನ್ನು ಬೆನ್ನಟ್ಟಿದ್ದು, ಆತನ ಬೈಕಿಗೆ ಡಿಕ್ಕಿ ಹೊಡೆದಿದ್ದು. ಈ ಅಪಘಾತದಲ್ಲಿ ರಾಘವೇಂದ್ರ ಅವರ ಸ್ವಿಫ್ಟ್ ಕಾರು ಹಾಗೂ ನಾಗೇಶನ ಬೈಕ್ ಸಂಪೂರ್ಣ ಜಖಂಗೊಂಡಿದ್ದವು.

ಆದರೂ, ಮಚ್ಚಿನಿಂದ ರಾಘವೇಂದ್ರ ಅವರ ಮೇಲೆ ಹಲ್ಲೆ ನಡೆಸಿ ಚಿನ್ನದ ಸರ ಕಸಿದಿದ್ದ ಛೋಟಾ ನಾಗೇಶ್, ಮುಂಜಾನೆ ಅಪಘಾತ ನಡೆದಿದೆ ಎಂದು ಗಾಯಗೊಂಡಿದ್ದ ದೇಹದ ಭಾಗಗಳನ್ನು ತೋರಿಸಿ ಡ್ರಾಪ್ ಕೇಳುವ ನೆಪದಲ್ಲಿ ಮತ್ತೆ ಇಬ್ಬರು ಯುವಕರ ಬೆಲೆ ಬಾಳುವ ವಸ್ತುಗಳನ್ನು ಸುಲಿಗೆ ಮಾಡಿದ್ದ.

ಹೆಚ್‍.ಎ.ಎಲ್ ನ ಇಸ್ಲಾಂಪುರ, ಲಾಲ್ ಬಹದ್ದೂರ್ ಶಾಸ್ತ್ರಿನಗರಗಳಲ್ಲಿ ಹಾವಳಿ ನಡೆಸುತ್ತಿದ್ದ, ಛೋಟಾ ನಾಗೇಶ್ ಬಂಧನಕ್ಕೆ ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ಪೊಲೀಸ್ ಇನ್ಸ್ ಪೆಕ್ಟರ್ ಸಾದೀಕ್ ಪಾಷ ನೇತೃತ್ವದ ತಂಡ, ನಿನ್ನೆ ಮಧ್ಯಾಹ್ನ ಛೋಟಾ ನಾಗೇಶ್, ಲಾಲ್ ಬಹದ್ದೂರ್ ಶಾಸ್ತ್ರಿನಗರದ ಬಿಇಎಂಎಲ್ ಕಲ್ಯಾಣಮಂಟಪದ ಬಳಿ ಅಡಗಿರುವ ಮಾಹಿತಿಯಾಧರಿಸಿ ಕಾರ್ಯಾಚರಣೆ ನಡೆಸಿದೆ.

ಪೊಲೀಸರನ್ನು ನೋಡಿದ ತಕ್ಷಣ ಓಡಲು ಯತ್ನಿಸಿದ ಛೋಟಾ ನಾಗೇಶ್ ನನ್ನು ಹಿಡಿಯಲು ಪೇದೆಗಳಾದ ಕಾಂತರಾಜು ಹಾಗೂ ರವಿಚಂದ್ರ ಮುಂದಾದಾಗ ಅವರ ಮೇಲೆ ಲಾಂಗ್ ನಿಂದ ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದ ಕಾಂತರಾಜ್ ಅವರ ಕೈಗೆ ಗಾಯವಾಗಿದೆ. ಕೂಡಲೇ ಇನ್ಸ್ ಪೆಕ್ಟರ್ ಸಾಧಿಕ್ ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಎಚ್ಚರಿಕೆ ನೀಡಿದರೂ ಲೆಕ್ಕಿಸದ ಛೋಟಾ ನಾಗೇಶ್, ಓಡುತ್ತಿದ್ದು, ಮತ್ತೊಂದು ಗುಂಡು ಹಾರಿಸಿದ್ದಾರೆ. ಅದು ಆತನ ಎಡಗಾಲಿಗೆ ತಗುಲಿ ಕುಸಿದು ಬಿದ್ದಿದ್ದಾನೆ. ಆತನನ್ನು ವಶಕ್ಕೆ ತೆಗೆದುಕೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವೈಟ್ ಫೀಲ್ಡ್ ಡಿಸಿಪಿ ಅಬ್ದುಲ್ ಅಹದ್ ತಿಳಿಸಿದ್ದಾರೆ.

ಛೋಟಾ ನಾಗೇಶ್, ಬಾರ್ಬೆಂಡಿಂಗ್ ಕೆಲಸ ಬಿಟ್ಟು ಕೊಲೆಯತ್ನ, ಸುಲಿಗೆ, ಗಲಭೆ, ಮನೆ ಕಳವು ಇನ್ನಿತರ 24ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಇಂದಿರಾನಗರ, ಮಾರತ್ ಹಳ್ಳಿ, ಕುಂಬಳಗೋಡು, ಜೀವನ್ ಭಿಮಾನಗರ ಸೇರಿದಂತೆ ಹಲವು ಠಾಣೆಗಳಲ್ಲಿ ನಾಗೇಶ್ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿ ಹೆಚ್‍.ಎ.ಎಲ್ ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿದ್ದಾನೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ