ಅತ್ಯಾಚಾರಕ್ಕೊಳಗಾಗಿದ್ದ ಬಾಲಕಿ ಸಾವು !

Kannada News

26-08-2017

ಬೆಂಗಳೂರು: ತಲಘಟ್ಟಪುರದಲ್ಲಿ, ಕಳೆದ ಕೆಲ ದಿನಗಳ ಹಿಂದೆ ಮನೆ ಮಾಲೀಕನಿಂದಲೇ ಅತ್ಯಾಚಾರಕ್ಕೊಳಗಾಗಿದ್ದ 5 ವರ್ಷದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

ತಲಘಟ್ಟಪುರದ ಬಾಡಿಗೆ ಮನೆಯೊಂದರಲ್ಲಿ ಬೇರೆಯವರ ಪೋಷಣೆಯಲ್ಲಿದ್ದ, ರಚನಾ (5) ಎಂದು ಮೃತ ಬಾಲಕಿಯನ್ನು ಗುರುತಿಸಲಾಗಿದೆ. ಕೃತ್ಯವೆಸಗಿದ ಮನೆ ಮಾಲೀಕ ಮಲ್ಲಿಕಾರ್ಜುನ ಹಾಗೂ ಚಂದನಾಳನ್ನು ತಲಘಟ್ಟಪುರ ಪೊಲೀಸರು ಬಂಧಿಸಿ ತೀವ್ರ ವಿಚಾರಣೆ ನಡೆಸಿದ್ದಾರೆ. ಪತಿ ಅನಾರೋಗ್ಯದಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಉದ್ಯೋಗ ಅರಸಿ ನಗರಕ್ಕೆ ಬಂದಿದ್ದ ರಚನಾಳ ತಾಯಿ ಭಾಗ್ಯಮ್ಮ, ಮಗುವನ್ನು ಅನಾಥಾಶ್ರಮಕ್ಕೆ ಬಿಡಲು ಪ್ರಯತ್ನಿಸಿದ್ದರು. ಆದರೆ, ಆಕೆಗೆ ಪರಿಚಯವಾದ ಆರೋಪಿ, ಚಂದನಾ ಮಗುವನ್ನು ನೋಡಿಕೊಳ್ಳುವುದಾಗಿ ಹೇಳಿ, ತಾನಿದ್ದ ಬಾಡಿಗೆ ಮನೆಗೆ ಕರೆದುಕೊಂಡು ಹೋಗಿದ್ದಳು. ಅನಾರೋಗ್ಯದಿಂದ ಬಳಲುತ್ತಿದ್ದ ರಚನಾ, ಮನೆಯ ಎಲ್ಲೆಂದರಲ್ಲಿ ಮಲ, ಮೂತ್ರ ವಿಸರ್ಜನೆ ಮಾಡುತ್ತಿದ್ದು, ಇದರಿಂದ ಆಕ್ರೋಶಗೊಳ್ಳುತ್ತಿದ್ದ ಚಂದನಾ, ಮಗುವಿಗೆ ಮೇಣದಬತ್ತಿಯ ಹನಿಯನ್ನು ಹಾಕುವುದು, ಹೊಡೆಯುವುದು, ಇನ್ನಿತರ ಹಿಂಸೆ ಕೊಡುತ್ತಿದ್ದಳು.

ಚಂದನಾ ಜತೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದ ಮನೆ ಮಾಲೀಕ ಮಲ್ಲಿಕಾರ್ಜುನ, ಆಗಾಗ, ಬರುತ್ತಿದ್ದ. ಆಟವಾಡುತ್ತಿದ್ದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಅತ್ಯಾಚಾರ ವೆಸಗಿದ್ದು, ಅಸ್ವಸ್ಥಗೊಂಡ ಮಗುವನ್ನು ಸೇಂಟ್‍ ಜಾನ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ, ಮೃತಪಟ್ಟಿದೆ. ತಲಘಟ್ಟಪುರ ಪೊಲೀಸರು ಇಬ್ಬರನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ