ನ್ಯೂಸ್ ಓದಿ, ತಿನ್ನಬೇಡಿ…!

Kannada News

26-08-2017 647

 

ಸಾಮಾನ್ಯವಾಗಿ ನಾವುಗಳು ಮನೆಯಿಂದ ಎಲ್ಲಾದರೂ ಹೊರಗೆ ಹೋದಾಗ, ಆ ಪ್ರದೇಶದಲ್ಲಿ ಮಾರಲ್ಪಡುವ ಆಹಾರ ಪದಾರ್ಥಗಳು ಮತ್ತು ಅವುಗಳನ್ನು ತಯಾರು ಮಾಡುವಾಗ ಬರುವ ಪರಿಮಳ ನಮ್ಮ ಮನಸ್ಸನ್ನು ಆಕರ್ಷಿಸುತ್ತದೆ. ಅದು ರಸ್ತೆಬದಿಯ ಅಂಗಡಿಯಾಗಿರಬಹುದು, ಫೂಟ್‌ ಪಾತ್‌ ಮೇಲಿನ ತಳ್ಳುವ ಗಾಡಿಯೇ ಆಗಿರಬಹುದು, ಅಲ್ಲಿ ಮಾರುತ್ತಿರುವ ತಿನಿಸುಗಳನ್ನು, ಒಂದು ಬಾರಿಯಾದರೂ ತಿಂದು, ರುಚಿ ನೋಡಿಬಿಡೋಣ ಎಂದು ಒತ್ತಾಯಿಸುವ, ನಾಲಗೆಯ ಬೇಡಿಕೆಯನ್ನು ತಳ್ಳಿಹಾಕುವುದು, ಎಂಥವರಿಗೇ ಆದರೂ ಕಷ್ಟವೇ…

ಇರಲಿ, ಅಂಥ ಯೋಚನೆ ಬರುವುದರಲ್ಲಿ ತಪ್ಪೇನಿಲ್ಲ…ಹಾಗೆ ಅನ್ನಿಸಿದಾಗ ತಿನ್ನುವುದೂ ಕೂಡ, ಪಾಪದ ಕೆಲಸವೇನೂ ಅಲ್ಲ. ಆದರೆ, ಒಂದು ಕ್ಷಣ ನಿಲ್ಲಿ…

ಘಮ್ಮೆನ್ನುತ್ತಿರುವ ಬಾಳೇಕಾಯಿ ಬಜ್ಜಿ, ಬಾಯಲ್ಲಿ ನೀರೂರಿಸುವ ಚುರುಮುರಿ, ಸ್ಯಾಂಡ್ ವಿಚ್, ಬಿಸಿ ಬಿಸಿ ಬೋಂಡ, ಜಿಲೇಬಿ, ಸಮೋಸಗಳನ್ನು ತಿನ್ನುವ ಮೊದಲು, ಆ ಪದಾರ್ಥಗಳನ್ನು ಯಾವುದರಲ್ಲಿ ಹಾಕಿ ನಿಮ್ಮ ಕೈಗೆ ಕೊಡುತ್ತಿದ್ದಾರೆ. ಸ್ಟೀಲ್ ಪ್ಲೇಟಿನಲ್ಲೋ, ಬಾಳೆ ಎಲೆಯಲ್ಲೋ, ಉತ್ತಮ ಗುಣಮಟ್ಟದ ಪೇಪರ್ ಪ್ಲೇಟಿನಲ್ಲೋ ಅಥವ ಬಹುತೇಕ ಕಡೆಗಳಲ್ಲಿ ಹಾಕಿ ಕೊಡುವ ಹಾಗೆ, ಹಳೆಯ ನ್ಯೂಸ್ ಪೇಪರ್ ಮೇಲೋ…? ಅನ್ನುವುದನ್ನು ಮೊದಲು ಗಮನಿಸಿ.

ಒಂದು ವೇಳೆ ಬೋಂಡವನ್ನೋ, ಬಜ್ಜಿಯನ್ನೋ. ಚುರುಮರಿಯನ್ನೋ ಅಥವ ತಿನ್ನುವ ಯಾವುದೇ ಪದಾರ್ಥವನ್ನು ನ್ಯೂಸ್‌ ಪೇಪರ್ ಮೇಲೇನಾದರೂ ಹಾಕಿಕೊಟ್ಟಿದ್ದರೆ, ಅದನ್ನು ತಿನ್ನಲೇಬೇಡಿ…ಏಕೆಂದರೆ, ಆ ತಿನಿಸುಗಳು ನಿಮ್ಮ ಬಾಯಿ ರುಚಿ ತಣಿಸಬಹುದು, ಆದರೆ ನಿಮ್ಮ ಆರೋಗ್ಯಕ್ಕೆ ತೀವ್ರತರವಾದ ಹಾನಿ ಉಂಟುಮಾಡುತ್ತವೆ.

ನ್ಯೂಸ್ ಪೇಪರ್ ನಲ್ಲಿರುವ ಇಂಕಿನಲ್ಲಿ, ಕ್ಯಾನ್ಸರ್‌ ಕಾರಕ ರಾಸಾಯನಿಕಗಳಿವೆ. ಈ ರೀತಿ ನ್ಯೂಸ್ ಪೇಪರ್ ನಲ್ಲಿ ಹಾಕಿಕೊಡುವ ಆಹಾರ ಸೇವಿಸುವ ಭಾರತೀಯರು, ತಮ್ಮ ದೇಹದೊಳಕ್ಕೆ slow poison ಅಂದರೆ, ನಿಧಾನ ವಿಷ ಸೇರಿಸಿಕೊಳ್ಳುತ್ತಿದ್ದಾರೆ. ಭಾರತ ಆಹಾರ ಸುರಕ್ಷತೆ ಮತ್ತು ನಿಯಮಾವಳಿಗಳ ಪ್ರಾಧಿಕಾರ ಅಂದರೆ, The Food Safety and Standards Authority of India (FSSAI) ಸಂಸ್ಥೆ, ಪ್ರಕಾರ ನ್ಯೂಸ್ ಪೇಪರುಗಳಲ್ಲಿ ಹಾಕಿಕೊಟ್ಟಿರುವ ಆಹಾರ ಪದಾರ್ಥಗಳನ್ನು ತಿನ್ನುವುದರಿಂದ, ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ.

ಒಂದುವೇಳೆ ಆಹಾರವನ್ನು ಸ್ವಚ್ಛ ಪರಿಸರದಲ್ಲಿ, ಶುದ್ಧ ವಸ್ತುಗಳನ್ನು ಬಳಸಿ ತಯಾರಿಸಿದ್ದರೂ ಕೂಡ, ಅವುಗಳನ್ನು ಪೇಪರ್‌ ನಲ್ಲಿ ಕಟ್ಟಿಕೊಡುವುದು ಮನುಷ್ಯರ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸುತ್ತದೆ.

ನ್ಯೂಸ್ ಪೇಪರ್ ಪ್ರಿಂಟ್ ಮಾಡಲು ಬಳಸುವ ಇಂಕಿನಲ್ಲಿ, ಅಪಾಯಕಾರಿ ರಾಸಾಯನಿಕಗಳು, ಬಣ್ಣಗಳು ಮತ್ತು pathogenic micro-organisms ಅಂದರೆ, ರೋಗಕಾರಕ ಸೂಕ್ಷ್ಮಾಣುಜೀವಿಗಳು ಕೂಡ ಇರುತ್ತವೆ. ಇವು ಮನುಷ್ಯರ ಆರೋಗ್ಯಕ್ಕೆ ಹಾನಿಕರ. ಅದರಲ್ಲೂ ಕೂಡ, ವಯಸ್ಸಾದವರು, ಮಕ್ಕಳು ಮತ್ತು ಈಗಾಗಲೇ ತಮ್ಮ ಪ್ರಮುಖ ಅಂಗಾಗಗಳ ಕಾರ್ಯನಿರ್ವಹಣೆಯಲ್ಲಿ ಸಮಸ್ಯೆ ಅನುಭವಿಸುತ್ತಿರುವವರು ಇದರಿಂದ ಹೆಚ್ಚು ಅಪಾಯ ಎದುರಿಸುತ್ತಾರೆ ಎಂದು, ಆಹಾರ ಸುರಕ್ಷತಾ ಪ್ರಾಧಿಕಾರ FSSAI ಹೇಳುತ್ತದೆ. ನ್ಯೂಸ್ ಪೇಪರ್, ರೀಸೈಕ್ಲಿಂಗ್ ಅಥವ ಮರುಬಳಕೆ ಮಾಡಿ ತಯಾರಿಸಿರುವ ಪೇಪರ್ ಪ್ಲೇಟ್‌ ಅಥವ ಕಾರ್ಡ್ ಬೋರ್ಡ್ ಪೊಟ್ಟಣಗಳಲ್ಲಿ ಥಾಲೇಟ್ (phthalate) ಎಂಬ ರಾಸಾಯನಿಕ ಇರುತ್ತದೆ. ದೇಹಕ್ಕೆ ವಿಷಕಾರಿಯಾಗಿರುವ ಇದು, ಜೀರ್ಣಕ್ರಿಯೆ ಮೇಲೆ ಪ್ರಭಾವ ಬೀರುತ್ತದೆ. ಇದಕ್ಕಿಂತಲೂ ಹೆಚ್ಚಾಗಿ, ಈ ಥಾಲೇಟ್ ರಾಸಾಯನಿಕದಿಂದ ಸ್ತನ ಕ್ಯಾನ್ಸರ್ ಮತ್ತು ಸ್ಥೂಲ ಕಾಯವೂ ಬರಬಹುದು. ಇದರ ಜೊತೆಗೆ, ಗರ್ಭಿಣಿಯರಲ್ಲಿ ಈ ಥಾಲೇಟ್ ಪ್ರಮಾಣ ಹೆಚ್ಚಾದರೆ, ಹುಟ್ಟುವ ಮಕ್ಕಳಲ್ಲೂ ಸಮಸ್ಯೆ ಕಂಡುಬರಬಹುದು.

ನ್ಯೂಸ್ ಪೇಪರ್ ನ ಇಂಕಿನಲ್ಲಿರುವ ಸೀಸ, ಮತ್ತು ಕ್ಯಾಡ್ಮಿಯಮ್ ರಾಸಾಯನಿಕಗಳು ಮಕ್ಕಳ ಆರೋಗ್ಯಕ್ಕೆ ತುಂಬಾ ಹಾನಿಕರ. ಈ ಬಗ್ಗೆ ಇತ್ತೀಚೆಗೆ ಒಂದು ಅಧ್ಯಯನ ವರದಿ ಕೂಡ ಹೊರಬಂದಿದೆ. ನಮ್ಮ ಬೆಂಗಳೂರು ಸೇರಿದಂತೆ, ದೇಶದ ಮಹಾನಗರಗಳಲ್ಲಿ ವಾಸಮಾಡುವ, ಹನ್ನೆರಡು ವರ್ಷಗಳಿಗಿಂತ ಕಡಿಮೆ ವಯಸ್ಸಿನ ಸಾವಿರಾರು ಮಕ್ಕಳಲ್ಲಿ ಸೀಸದ ಪ್ರಮಾಣ ಎಷ್ಟಿದೆ ಎಂದು ಪರೀಕ್ಷೆ ಮಾಡಲಾಗಿದೆ. ಈ ರೀತಿ ಪರೀಕ್ಷೆಗೊಳಗಾದ ಮಕ್ಕಳಲ್ಲಿ ಶೇಕಡ ಐವತ್ತಕ್ಕಿಂತಲೂ ಹೆಚ್ಚು ಮಕ್ಕಳಲ್ಲಿ ಸೀಸದ ಪ್ರಮಾಣ ಪ್ರತಿ ಡೆಸಿಲೀಟರ್‌ಗೆ 10 ಮೈಕ್ರೋಗ್ರಾಮ್‌ ಗಳಷ್ಟಿದ್ದು, ಮಕ್ಕಳ ಆರೋಗ್ಯಕ್ಕೆ ತೊಂದರೆಯಾಗುವ ಮಟ್ಟ ತಲುಪಿದೆ. ಮಕ್ಕಳಲ್ಲಿ ಸೀಸದ ಪ್ರಮಾಣ ಹೆಚ್ಚಾಗುವುದರಿಂದ IQ(ಐಕ್ಯು) ಅಂದರೆ, ಬುದ್ಧಿವಂತಿಕೆ ಮಟ್ಟವೂ ಕಡಿಮೆಯಾಗಬಹುದು. ಹೀಗಾಗಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು, ಈಗಾಗಲೇ ಈ ವಿಚಾರದ ಬಗ್ಗೆ ಎಚ್ಚೆತ್ತುಕೊಂಡಿವೆ.

ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ, ಯಾವುದೇ ಕಾರಣಕ್ಕೂ ಬೀದಿಬದಿ ವ್ಯಾಪಾರಿಗಳಾಗಲಿ, ಹೋಟೆಲ್ ಗಳಲ್ಲಾಗಲಿ ಆಹಾರ ಪದಾರ್ಥಗಳನ್ನು ನ್ಯೂಸ್ ಪೇಪರ್ ನಲ್ಲಿ ಹಾಕಿಕೊಡಬಾರದು, ಪಾರ್ಸಲ್ ಮಾಡಬಾರದು ಎಂದು ಅರೋಗ್ಯ ಇಲಾಖೆ ಆದೇಶ ನೀಡಿದೆ.

ಬೆಂಗಳೂರು, ಮೈಸೂರು, ಬೆಳಗಾವಿ, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಕಲಬುರ್ಗಿ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಈಗಾಗಾಲೇ ಈ ಆದೇಶ ಜಾರಿಯಲ್ಲಿದೆ. ಒಂದು ವೇಳೆ ಆರೋಗ್ಯ ಇಲಾಖೆ ಆದೇಶ ಮೀರಿದಲ್ಲಿ ಅಂಥವರಿಗೆ ದಂಡ ವಿಧಿಸಲಾಗುತ್ತದೆ.

ಆದರೆ ನಾವು, ಮದುವೆ ಮತ್ತಿತರ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಪ್ಲೇಟುಗಳು, ಪೇಪರ್ ಪ್ಲೇಟುಗಳು ಮತ್ತು ಅಲುಮಿನಿಯಮ್ ಪಾತ್ರೆಗಳನ್ನು ಬಳಸುತ್ತೇವೆ. ಇದೂ ಕೂಡ ಸರಿಯಾದ ಕ್ರಮವಲ್ಲ.

ಇವುಗಳ ಜೊತೆಗೆ ಹಣೆಗಿಡುವ ಬಿಂದಿಗಳು, ಕಾಮನ ಹಬ್ಬದ ದಿನ ಬಳಸುವ ಬಣ್ಣಗಳು, ಮನೆಗೆ ಬಳಸುವ ಪೇಂಟ್‌ ಗಳು, ಮಕ್ಕಳ ಆಟದ ಗೊಂಬೆಗಳು, ತಲೆಗೂದಲಿಗೆ ಹಾಕುವ ಬಣ್ಣಗಳಲ್ಲೂ ಅಪಾಯಕಾರಿ ಸೀಸ ಇರುತ್ತದೆ. ಬಣ್ಣ ಬಣ್ಣದ ಗೌರಿ ಮತ್ತು ಗಣೇಶನ ಮೂರ್ತಿಗಳಲ್ಲೂ ಸೀಸದ ಅಂಶ ಇದೆ. ಹೀಗಾಗಿ, ನ್ಯೂಸ್‌ ಪೇಪರ್ ನಲ್ಲಿ ಹಾಕಿಕೊಟ್ಟ ಸ್ಯಾಂಡ್‌ವಿಚ್, ಸಮೋಸ, ವಡಾ ಪಾವ್, ಬೋಂಡ, ಬಜ್ಜಿ ತಿನ್ನದೇ ಇರುವುದರ ಜೊತೆಗೆ, ಬೇರೆ ರೀತಿಯಲ್ಲಿ ದೇಹಕ್ಕೆ ಸೇರುವ ವಿಷದ ಬಗ್ಗೆ ಗಮನ ಇರಬೇಕು.

ಕೆಲವರು, ತಮ್ಮ ಮನೆಗಳಲ್ಲಿ ಮಾಡಿದ ಬೋಂಡ, ಬಜ್ಜಿ, ಕಜ್ಜಾಯ, ಚಿಪ್ಸ್ ಇತ್ಯಾದಿಗಳನ್ನು ನ್ಯೂಸ್ ಪೇಪರ್ ಮೇಲೆ ಹರಡಿ, ಎಣ್ಣೆ ಹೀರಿಕೊಳ್ಳಲು ಬಿಡುತ್ತಾರೆ. ಇದರಿಂದಾಗುವ ಪರಿಣಾಮಗಳು ಗೊತ್ತಿಲ್ಲದಿರುವುದರಿಂದ ಹೀಗೇನಾದರೂ ಮಾಡುತ್ತಿದ್ದರೆ, ಕೂಡಲೇ ಅಂಥ ಪದ್ಧತಿಯನ್ನು ನಿಲ್ಲಿಸಬೇಕು. ಎಣ್ಣೆ ಸೋರಿಕೊಳ್ಳಲು ಜಾಲರಿ ಬಳಸುವುದೇ ಸೂಕ್ತ.

ಒಟ್ಟಿನಲ್ಲಿ, ನ್ಯೂಸ್‌ ಪೇಪರ್‌ನಲ್ಲಿ ಅಥವ ವಾರ ಪತ್ರಿಕೆಗಳ ಹಾಳೆಗಳು, ಇತ್ಯಾದಿ ಮುದ್ರಿತ ಕಾಗದಗಳ ಮೇಲೆ ರೊಟ್ಟಿ, ಚಪಾತಿ ಇತ್ಯಾದಿ ಆಹಾರ ಕಟ್ಟಿ ಕೊಡುವುದರಿಂದ, ಬೋಂಡ, ಬಜ್ಜಿ, ಚುರುಮುರಿ ಹಾಕಿಸಿಕೊಂಡು ತಿನ್ನುವುದರಿಂದ, ನಮ್ಮ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮದ ಬಗ್ಗೆ ಎಲ್ಲೆಡೆ ಜಾಗೃತಿ ಮೂಡಬೇಕಾಗಿದೆ. ನಿಮ್ಮ ನೆಚ್ಚಿನ ಸ್ಪೆಷಲ್ ರಿಪೋರ್ಟರ್ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ನೀವೆಲ್ಲರೂ ಕೂಡ, ನಿಮ್ಮದೇ ಆದ ರೀತಿಯಲ್ಲಿ, ಈ ಬಗ್ಗೆ ಅರಿವು ಮೂಡಿಸಲು ಮುಂದಾಗುತ್ತೀರಿ ಅನ್ನುವುದು ಸ್ಪೆಷಲ್ ರಿಪೋರ್ಟರ್ ನಂಬಿಕೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ