ಶೀಘ್ರದಲ್ಲೇ 1500 ಸರ್ವೇಯರ್ ಗಳ ನೇಮಕ..?

Kannada News

24-08-2017

ಬೆಂಗಳೂರು: ರಾಜ್ಯಾದ್ಯಂತ 1500 ಸರ್ವೇಯರ್ ಗಳನ್ನು ಮುಂದಿನ ಎರಡು ತಿಂಗಳಲ್ಲಿ ನೇಮಕ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು, ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು ಈ ವಿಷಯ ತಿಳಿಸಿದರಲ್ಲದೆ, ಸರ್ವೇಯರುಗಳ ನೇಮಕಾತಿಯ ನಂತರ ಈಗಿರುವ ಕೊರತೆ ಬಗೆಹರಿಯಲಿದೆ ಎಂದು ಅಭಿಪ್ರಾಯ ಪಟ್ಟರು. ರಾಜ್ಯದ ಬಹುತೇಕ ಭಾಗಗಳಲ್ಲಿ ಭೂಮಿ ಅಳೆದುಕೊಡುವ ಕೆಲಸ ಸಮರ್ವಪಕವಾಗಿ ನಡೆಯುತ್ತಿಲ್ಲ ಎಂಬ ದೂರಿನ ಕುರಿತು ಪ್ರತಿಕ್ರಿಯಿಸಿದ ಅವರು, ದಾಖಲಾತಿಯ ಕೊರತೆ ಸೇರಿದಂತೆ ಕೆಲ ಕಾರಣಗಳಿಂದ ಭೂಮಿ ಅಳೆದುಕೊಡುವ, ಪೋಡಿ ಮಾಡಿಕೊಡುವ ಕಾರ್ಯ ವಿಳಂಬವಾಗುತ್ತಿರುವುದು ನಿಜ. ಆದರೆ ತ್ವರಿತಗತಿಯಲ್ಲಿ ಅದು ಪರಿಹಾರವಾಗಲಿದೆ ಎಂದು ಹೇಳಿದರು.

ಇದಕ್ಕೆ ಪೂರಕವಾಗಿ ಕೋಲಾರ ಜಿಲ್ಲೆಯ ಉದಾಹರಣೆಯೊಂದನ್ನು ವಿವರಿಸಿದ ಅವರು,ಅಲ್ಲಿನ ಪ್ರಕರಣವೊಂದರಲ್ಲಿ ಸಂಬಂಧಿಸಿದ ಭೂಮಿಯ ದಾಖಲಾತಿಯೇ ಕಳೆದು ಹೋಗಿತ್ತು. ಇಂತಹ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಬಳಿ ಹೋಗಿ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕಾಗುತ್ತದೆ. ಇದರಿಂದ ಸ್ವಲ್ಪ ವಿಳಂಬವಾಗುತ್ತದೆ ಎಂದರು.

ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಬಹುತೇಕ ಹುದ್ದೆಗಳನ್ನು ಭರ್ತಿ ಮಾಡಲಾಗಿದ್ದು, ಖಾಲಿಯಾಗುತ್ತಿರುವ ಹುದ್ದೆಗಳನ್ನು ಕೂಡಾ ತ್ವರಿತಗತಿಯಲ್ಲಿ ತುಂಬಲಾಗುತ್ತಿದೆ. ಇತ್ತೀಚೆಗೆ ಮೂರು ಸಾವಿರ ಗ್ರಾಮಲೆಕ್ಕಿಗರನ್ನು ನೇಮಕ ಮಾಡಲಾಗಿದೆ ಎಂದರು.

ರಾಜ್ಯದಲ್ಲಿ ಈ ಬಾರಿಯೂ ಸಮರ್ಪಕ ಪ್ರಮಾಣದ ಮಳೆ ಆಗಿಲ್ಲ. ಆದರೆ ನಿಯಮಾವಳಿಗಳ ಪ್ರಕಾರ ಬರಪೀಡಿತ ತಾಲ್ಲೂಕುಗಳನ್ನು ಘೋಷಿಸಲು ಸೆಪ್ಟೆಂಬರ್ ಅಂತ್ಯದವರೆಗೂ ಕಾಯಬೇಕಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ಸುದ್ದಿಗಾರರ ಪ್ರಶ್ನೆಗೆ ಅವರು ಉತ್ತರಿಸಿದರು. ಒಂದು ತಾಲ್ಲೂಕನ್ನು ಬರಪೀಡಿತ ಎಂದು ಯಾವಾಗ ಘೋಷಿಸಬಹುದು ಎಂಬ ಕುರಿತು ಕೇಂದ್ರ ಸರ್ಕಾರ ರೂಪಿಸಿರುವ ನಿಯಮಾವಳಿಗಳನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನ ಮಾಡಲಾಗುತ್ತದೆ ಎಂದರು. ತೆಂಗು ಹಾಗೂ ಅಡಿಕೆ ಬೆಳೆ ಹಾನಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಜಿಲ್ಲೆಗಳಿಂದ ವರದಿ ತರಿಸಿಕೊಳ್ಳಲಾಗಿದೆ. ಮುಂದಿನ ಸಂಪುಟ ಸಭೆಯಲ್ಲಿ ಚರ್ಚಿಸಿದ ನಂತರ ಕೇಂದ್ರ ಸರ್ಕಾರದಿಂದ ಎಷ್ಟು ಪ್ರಮಾಣದ ನೆರವು ಕೋರಬೇಕು ಎಂಬುದು ನಿರ್ಧಾರವಾಗುತ್ತದೆ ಎಂದು ವಿವರ ನೀಡಿದರು.

ಬಗರ್ ಹುಕುಂ ಭೂಮಿಯನ್ನು ರೈತರಿಗೆ ಒದಗಿಸಲು ಎರಡು ಅಂಶಗಳು ಪ್ರಮುಖ ಅಡ್ಡಿಯಾಗಿ ಪರಿಣಮಿಸಿವೆ. ಒಂದು ಗೋಮಾಳ ಭೂಮಿಯನ್ನು ಬಗರ್ ಹುಕುಂ ಭೂಮಿ ಎಂದು ಮಂಜೂರು ಮಾಡಲು, ಡೀಮ್ಡ್ ಅರಣ್ಯ ಭೂಮಿಯನ್ನು ಬಿಟ್ಟು ಕೊಡಲು ಒಪ್ಪಿಗೆ ಸಿಕ್ಕಿಲ್ಲ. ಈ ಅಡ್ಡಿಗಳು ನಿವಾರಣೆಯಾಗದಿದ್ದರೆ ಬಗರ್ ಹುಕುಂ ಭೂಮಿಯನ್ನು ಮಂಜೂರು ಮಾಡಲು ಸಾಧ್ಯವಿಲ್ಲ. ಗೋಮಾಳ ಭೂಮಿಯ ಪ್ರಮಾಣ ಎಷ್ಟಿರಬೇಕು ಎಂಬ ಕುರಿತು ಕಾನೂನಿಗೆ ತಿದ್ದುಪಡಿ ತರಲಾಗಿತ್ತು. ಆದರೂ ಸಮಸ್ಯೆ ಬಗೆ ಹರಿದಿಲ್ಲ ಎಂದು ವಿಷಾದಿಸಿದರು. ರಾಜ್ಯದಲ್ಲಿ ಸುಮಾರು ಎರಡೂವರೆ ಲಕ್ಷದಷ್ಟು ಬಗರ್ ಹುಕುಂ ಅರ್ಜಿಗಳು ಇತ್ಯರ್ಥವಾಗದೆ ಉಳಿದಿದ್ದು ಆದಷ್ಟು ಬೇಗ ಎದುರಾಗಿರುವ ಎರಡು ಅಡ್ಡಿಗಳನ್ನು ನಿವಾರಿಸಲು ಯತ್ನಿಸುವುದಾಗಿ ವಿವರಿಸಿದರು.

ಬಿಜೆಪಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ಕಾನೂನನ್ನು ಉಲ್ಲಂಘಿಸಿ ಹಲವರಿಗೆ ಭೂಮಂಜೂರಾತಿ ಮಾಡಿದ ದೂರಿನ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾವ ಕಾಲದಲ್ಲಿ ಅಂತ ಬೇಕಿಲ್ಲ. ಒಟ್ಟಾರೆಯಾಗಿ ಬೆಂಗಳೂರು ಜಿಲ್ಲೆಯ ಹದಿನೆಂಟು ಕಿ.ಮೀ ವ್ಯಾಪ್ತಿಯೊಳಗೆ ಮಂಜೂರು ಮಾಡಲು ಬರದಿದ್ದರೂ ಭೂ ಮಂಜೂರಾತಿ ಮಾಡಲಾಗಿದೆ ಎಂಬುದು ನಿಜ ಎಂದರು. ಈ ಸಂಬಂಧ ಸೂಕ್ತ ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಲಾಗಿದೆ. ಯಾರೆಷ್ಟೇ ಪ್ರಭಾವಿಗಳಾದರೂ ಕಾನೂನು ಉಲ್ಲಂಘಿಸಿ ಮಾಡಿದ ಭೂ ಮಂಜೂರಾತಿ ಕ್ರಮದ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುವುದು ನಿಶ್ಚಿತ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ