ನಗರದಲ್ಲಿ ವರುಣನ ಆರ್ಭಟ

Kannada News

24-08-2017

ಬೆಂಗಳೂರು: ಗೌರಿ ಗಣೇಶ ಹಬ್ಬದ ಮುನ್ನಾ ದಿನ, ನಗರದಲ್ಲಿ ವರುಣ ಆರ್ಭಟಿಸಿದ್ದು ರಾತ್ರಿಯಿಡಿ ಸುರಿದ ಮಳೆಗೆ ತಗ್ಗು ಪ್ರದೇಶಗಳು ತುಂಬಿ ಅನಾಹುತ ಸೃಷ್ಟಿಸಿದ್ದು ಜನ ತತ್ತರಿಸಿದ್ದಾರೆ. ಕೆ.ಆರ್.ಪುರಂ, ಮಾರತ್ ಹಳ್ಳಿ, ಮೆಜೆಸ್ಟಿಕ್, ರಾಜಾಜಿನಗರ, ಮಲ್ಲೇಶ್ವರಂ, ವಿಜಯನಗರ, ಚಂದ್ರಾಲೇಔಟ್, ಶಾಂತಿ ನಗರ, ಯಶವಂತಪುರ, ಜಾಲಹಳ್ಳಿ, ವಿಜಯನಗರ, ಕಾರ್ಪೋರೇಷನ್, ಯಲಹಂಕ, ಹೆಬ್ಬಾಳ ಸೇರಿದಂತೆ ನಗರದ ಬಹುತೇಕ ಕಡೆಗಲ್ಲಿ ಜೋರು ಮಳೆಯಾಗಿದೆ.

ಬುಧವಾರ ರಾತ್ರಿ ಒಟ್ಟು 82 ಮಿ.ಮೀ ನಷ್ಟು ಮಳೆ ನಗರದಲ್ಲಿ ದಾಖಲಾಗಿದೆ. ಇದರಿಂದಾಗಿ ನಗರದ ಬಹುತೇಕ ಕಡೆ ಟ್ರಾಫಿಕ್ ಸಮಸ್ಯೆ ಸಹ ಉಂಟಾಗಿತ್ತು. ಬಹುತೇಕ ತಗ್ಗು ಪ್ರದೇಶಗಳು ಜಲಾವೃತವಾಗಿ, ಸ್ಥಳೀಯರು ನಾನಾ ಅವಸ್ಥೆ ಪಡಬೇಕಾಯಿತು. ಚಂದ್ರಲೇಔಟ್ ರಾಜಾಕಾಲುವೆ ಪಕ್ಕದ ಹತ್ತಾರು ಮನೆಗಳಿಗೆ ಮಳೆ ನೀರು ನುಗ್ಗಿ ಜನ ನೀರನ್ನ ಹೊರಗೆ ಹಾಕುವುದರಲ್ಲೇ ರಾತ್ರಿ ಕಳೆದಿದ್ದಾರೆ.

ಎಚ್‍ಎಸ್‍ಆರ್ ಲೇಔಟ್ ಹಾಗೂ ಶಾಂತಿ ನಗರದಲ್ಲಿ ಮೊಣಕಾಲುದ್ದ ನೀರು ಹರಿಯುತ್ತಿತ್ತು. ಮಾರತ್ ಹಳ್ಳಿ ಸುತ್ತಮುತ್ತ 60ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿತ್ತು. ಪ್ರತಿ ಬಾರಿ ಮಳೆ ಬಂದಾಗಲೂ ಇದೆ ಫಜೀತಿ, ಯಾವ ಜನಪ್ರತಿನಿಧಿಯಾಗಲಿ ಅಧಿಕಾರಿಗಳಾಗಲೀ ನಮ್ಮ ಕಷ್ಟ ಕೇಳೋಕೆ ಬರಲ್ಲ. ಮಕ್ಕಳ ಜೊತೆ ಈ ಕೊಳಚೆ ನೀರಿನಲ್ಲೇ ಬದುಕುವಂತಾಗಿದೆ ಎಂದು ಇಲ್ಲಿನ ಜನ ಅಳಲು ತೋಡಿಕೊಂಡಿದ್ದಾರೆ.

ಇನ್ನೊಂದೆಡೆ ಕೆ.ಆರ್ ಮಾರ್ಕೆಟ್ ನಲ್ಲಿ ಹಬ್ಬದ ವ್ಯಾಪಾರ ಜೋರಾಗಿದೆ. ಬೆಳ್ಳಂಬೆಳಗ್ಗೆ ಹೂವು ಹಣ್ಣು ಖರೀದಿಸಲು ಸಾವಿರು ಜನ ಕೆ.ಆರ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು,  ಕೆಸರಿನಲ್ಲೇ ವ್ಯಾಪಾರ ನಡೆಯಿತು. ಹೂ-ಹಣ್ಣುಗಳ ಬೆಲೆ ಗಗನಕ್ಕೇರಿ ಜನ ಸಾಮಾನ್ಯರು ಪರದಾಡುವಂತಾಗಿತ್ತು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ